ಭವಿಷ್ಯದೊಂದಿಗೆ ಮುಖಾಮುಖಿ (Tryst with Destiny) – ನೆಹರೂ ಅವರ ಅಗಸ್ಟ್ 14, 1947ರ ಮಧ್ಯರಾತ್ರಿಯ ಪ್ರಸಿದ್ಧ ಭಾಷಣ

1947 ಆಗಸ್ಟ್‌ 14 ಮಧ್ಯರಾತ್ರಿ ಭಾರತದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್‌ ನೆಹರೂ ಅವರು ಸಂಸತ್ತಿನಲ್ಲಿ ಭಾರತ ಸಂವಿಧಾನ ರಚನಾ ಸಭೆಯನ್ನು ಉದ್ದೇಶಿಸಿ ಮಾಡಿದ ಭಾಷಣ ಖ್ಯಾತಿಯನ್ನು ಪಡೆದಿತ್ತು. ಆ ಭಾಷಣ ಸ್ವತಂತ್ರ ಭಾರತದ ದಿಕ್ಕುದೆಸೆಗಳನ್ನು ವಿವರಿಸಿದ ಭಾಷಣವಾಗಿತ್ತು. ಅದು  ‘Tryst with Destiny – ಭವಿಷ್ಯದೊಂದಿಗೆ ಮುಖಾಮುಖಿ’ ಎಂದೇ ಹೆಸರಾಗಿದೆ. ಭಾರತದ ಸ್ವಾತಂತ್ರ್ಯದ ಮೌಲ್ಯಗಳನ್ನೂ ಕನಸುಗಳನ್ನೂ, ಅವುಗಳನ್ನು ಸಮರ್ಥವಾಗಿ ಬಿಂಬಿಸಿದ ಮೊದಲ ಪ್ರದಾನಿ ನೆಹರೂ ಅವರನ್ನೂ ಇಂದಿನ ಆಳರಸರು ಮರೆಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ನೆನಪು ಮಾಡಿಕೊಳ್ಳಲೇಬೇಕಾದ ಮಾತುಗಳು

ಹಳ ವರ್ಷಗಳ ಹಿಂದೆ ಭವಿಷ್ಯದೊಂದಿಗೆ ನಮ್ಮ ಮುಖಾಮುಖಿ ನಡೆದಿತ್ತು. ಆಗ ಕೈಗೊಂಡ ಪ್ರತಿಜ್ಞೆಯನ್ನು ಈಡೇರಿಸುವ, ಸಂಪೂರ್ಣವಾಗಿ ಅಲ್ಲದಿದ್ದರೂ, ಗಣನೀಯವಾಗಿ ಈಡೇರಿಸುವ ಸಮಯ ಈಗ ಬಂದಿದೆ. ಮಧ್ಯರಾತ್ರಿಯ ಗಂಟೆ ಬಾರಿಸುವ ಈ ಜಾವದಲ್ಲಿ  ಜಗವೆಲ್ಲ ಮಲಗಿರುವಾಗ ಭಾರತ ಎಚ್ಚೆತ್ತು ಜೀವನ ಮತ್ತು ಸ್ವಾತಂತ್ರ್ಯದತ್ತ ಸಾಗುತ್ತದೆ. ಒಂದು ಕ್ಷಣ ಬಂದಿದೆ, ಅದು ಚರಿತ್ರೆಯಲ್ಲಿ ಬಹಳ ಅಪರೂಪದ ಕ್ಷಣ, ನಾವು ಹಳೆಯದರಿಂದ ಹೊಸದಕ್ಕೆ ಕಾಲಿಡುವ, ಬಹುಕಾಲದಿಂದ ದಮನಿಸಲ್ಪಟ್ಟ ದೇಶವೊಂದು ದನಿ ಪಡೆದುಕೊಳ್ಳುವ ಕ್ಷಣ. ಈ ಘನಗಂಭೀರ ಕ್ಷಣದಲ್ಲಿ ನಾವು ಭಾರತ ಮತ್ತು ಅದರ ಜನತೆಯ ಸೇವೆಗೆ ಹಾಗೂ ಇನ್ನೂ ವಿಶಾಲವಾದ ಮಾನವತೆಯ ಒಳಿತಿಗಾಗಿ ಮುಡಿಪಾಗಿಡುವ ಪ್ರತಿಜ್ಞೆಗೈಯುವುದು ಅತ್ಯಂತ ಸೂಕ್ತ.

ಚರಿತ್ರೆಯ ಅರುಣೋದಯದಿಂದಲೇ ಭಾರತ ತನ್ನ ಅನಂತ ಅನ್ವೇಷಣೆಯನ್ನು ಆರಂಭಿಸಿದೆ. ಜಾಡು ಸಿಗದ ಶತಮಾನಗಳು, ಅದರ ಪರಿಶ್ರಮಗಳಿಂದ, ಯಶೋಗಾಥೆಗಳು ಮತ್ತು ವಿಫಲತೆಗಳಿಂದ ತುಂಬಿವೆ. ಒಳಿತಾಗಲಿ ಕೆಡುಕಾಗಲಿ ಭಾರತ ಎಂದೂ ಅನ್ವೇ಼ಷಣೆಯ ಹಾದಿಯಲ್ಲಿ ಮುಗ್ಗರಿಸಲಿಲ್ಲ ಅಥವಾ ತನಗೆ ಶಕ್ತಿದುಂಬಿದ ಅದರ್ಶಗಳನ್ನು ಮರೆಯಲಿಲ್ಲ. ನಾವು ಇಂದು ದುರದೃಷ್ಟದ ಒಂದು ಅವಧಿಯನ್ನು ಕೊನೆಗೊಳಿಸುತ್ತಿದ್ದೇವೆ, ಮತ್ತು ಭಾರತ ಮತ್ತೊಮ್ಮೆ ತನ್ನನ್ನು ತಾನು ಕಂಡುಕೊಳ್ಳುತ್ತಿದೆ.  ನಾವಿಂದು ಸಂಭ್ರಮ ಪಡುತ್ತಿರುವ ಸಾಧನೆ ಒಂದು ಹೆಜ್ಜೆಯಷ್ಟೇ, ನಮಗಾಗಿ ಕಾದಿರುವ ಹೆಚ್ಚಿನ ಗೆಲುವುಗಳಿಗೆ ಮತ್ತು ಸಾಧನೆಗಳಿಗೆ ಒಂದು ಅವಕಾಶ ತೆರೆದುಕೊಳ್ಳುತ್ತಿದೆ. ನಾವು ಈ ಅವಕಾಶವನ್ನು ಗ್ರಹಿಸಿಕೊಳ್ಳುವಷ್ಟು ಮತ್ತು ಭವಿಷ್ಯದ ಸವಾಲನ್ನು ಸ್ವೀಕರಿಸುವಷ್ಟು ಧೈರ್ಯಶಾಲಿಗಳೂ, ವಿವೇಕವಂತರೂ ಆಗಿದ್ದೇವೆಯೇ?

ಸ್ವಾತಂತ್ರ್ಯ ಮತ್ತು ಅಧಿಕಾರಗಳು ಹೊಣೆಗಾರಿಕೆಯನ್ನು ತರುತ್ತವೆ. ಈ ಹೊಣೆ ಈ ಸಂವಿಧಾನ ಸಭೆಯ ಮೇಲೆ, ಭಾರತದ ಸಾರ್ವಭೌಮ ಜನತೆಯನ್ನು ಪ್ರತಿನಿಧಿಸುವ ಈ ಸಾರ್ವಭೌಮ ಸಂಸ್ಥೆಯ ಮೇಲಿದೆ. ಸ್ವಾತಂತ್ರ್ಯದ ಜನನದ ಮುನ್ನ ನಾವು ಎಲ್ಲ ಪ್ರಸವ ವೇದನೆಗಳನ್ನು ಸಹಿಸಿದ್ದೇವೆ. ನಮ್ಮ ಹೃದಯಗಳು ಈ ನೋವುಗಳ ನೆನಪುಗಳಿಂದ ಭಾರವಾಗಿವೆ. ಕೆಲವೊಂದು ವೇದನೆಗಳು ನಮ್ಮನ್ನು ಇನ್ನೂ ಕಾಡುತ್ತಲಿವೆ. ಅದೇನೇ ಇರಲಿ, ಗತಕಾಲ ಮುಗಿದಿದೆ. ಭವಿಷ್ಯ ನಮ್ಮನ್ನೀಗ ಕೈಬೀಸಿ ಕರೆಯುತ್ತಿದೆ.

ಆ ಭವಿಷ್ಯ ಸುಲಭದ್ದಲ್ಲ ಅಥವಾ ವಿಶ್ರಾಂತಿ ಪಡೆಯುವಂತದ್ದಲ್ಲ, ಬದಲಿಗೆ ಅವಿರತ ಶ್ರಮದ, ಮತ್ತು ಆ ಮೂಲಕ ಈ ಹಿಂದೆ ನಾವು ಆಗಾಗ ಕೈಗೊಂಡ ಮತ್ತು  ಇಂದು ಕೈಗೊಳ್ಳಲಿರುವ ಪ್ರತಿಜ್ಞೆಗಳ  ಈಡೇರಿಕೆಯನ್ನು ನಮಗೆ ಸಾಧ್ಯವಾಗಿಸಬೇಕಾದ್ದು. ಭಾರತದ ಸೇವೆಯೆಂದರೆ  ನರಳುತ್ತಿರುವ ಕೋಟ್ಯಂತರ ಜನರ ಸೇವೆ. ಅದರರ್ಥ ಬಡತನ, ಮೌಢ್ಯ ಮತ್ತು ಅನಾರೋಗ್ಯ ಮತ್ತು ಅವಕಾಶಗಳ ಅಸಮಾನತೆಯನ್ನು ಕೊನೆಗಾಣಿಸುವುದು. ಪ್ರತಿಯೊಬ್ಬರ ಪ್ರತಿಯೊಂದು ಕಣ್ಣೀರನ್ನು ಒರೆಸುವುದು ನಮ್ಮ  ಕಾಲದ  ಸರ್ವಶ್ರೇಷ್ಠ ಪುರುಷನ ಮಹದಾಸೆಯಾಗಿತ್ತು. ಇದು ನಮ್ಮ ಸಾಮರ್ಥ್ಯಕ್ಕೆ ಮೀರಿದ್ದಿರಬಹುದು. ಆದರೆ ಎಲ್ಲಿಯವರೆಗೆ ಕಣ್ಣೀರು ಮತ್ತು ಸಂಕಷ್ಟಗಳು ಇರುವವೋ, ಅಲ್ಲಿಯವರೆಗೆ ನಮ್ಮ ಕೆಲಸ ಮುಗಿಯುವುದಿಲ್ಲ.

ಆದ್ದರಿಂದ ನಾವು ನಮ್ಮ ಕನಸುಗಳನ್ನು ಸಾಕಾರಗೊಳಿಸಲು ಶ್ರಮಿಸಬೇಕಿದೆ, ಕೆಲಸ ಮಾಡಬೇಕಿದೆ. ಕಷ್ಟಪಟ್ಟು ಕೆಲಸ ಮಾಡಬೇಕಿದೆ. ಇವು ಭಾರತದ ಕನಸುಗಳು, ಅಷ್ಟೇ ಅಲ್ಲ, ಇಡೀ ವಿಶ್ವದ ಕನಸುಗಳು. ಏಕೆಂದರೆ ಇಂದು ದೇಶಗಳು ಮತ್ತು ಜನಗಳು ಎಷ್ಟೊಂದು ನಿಕಟವಾಗಿ ಹೆಣೆದುಕೊಂಡಿವೆಯೆಂದರೆ, ಅವರಲ್ಲಿ ಯಾರೊಬ್ಬರೂ ತಾವು ಪ್ರತ್ಯೇಕವಾಗಿ ಬದುಕಬಹುದೆಂದು ಊಹಿಸಲೂ ಸಾಧ್ಯವಿಲ್ಲ. ಶಾಂತಿ ಅವಿಭಾಜ್ಯ ಎನ್ನುತ್ತಾರೆ; ಹಾಗೆಯೇ ಸ್ವಾತಂತ್ರ್ಯ ಕೂಡ ಮತ್ತು ಇಂದು ಸಂಪತ್ತು ಕೂಡ, ಮತ್ತು ಇನ್ನು ಮುಂದೆ ಪ್ರತ್ಯೇಕವಾದ ತುಣುಕುಗಳಾಗಿ ಛಿದ್ರಗೊಳಿಸಲಾಗದ ಈ ಅಖಂಡ ಜಗತ್ತಿನಲ್ಲಿ ವಿಪತ್ತುಗಳು ಕೂಡ. ಅವಿಭಾಜ್ಯವೇ.

 ಭಾರತದ ಜನತೆಗೆ, ಅವರ  ಪ್ರತಿನಿಧಿಗಳಾದ ನಾವು, ಈ ಮಹಾ ಸಾಹಸದಲ್ಲಿ ವಿಶ್ವಾಸ ಮತ್ತು ನಂಬಿಕೆಯೊಂದಿಗೆ ನಮ್ಮೊಂದಿಗೆ ಕೈಜೋಡಿಸಬೇಕು ಎಂದು ವಿನಂತಿ ಮಾಡಿಕೊಳ್ಳುತ್ತೇವೆ. ಇದು ಚಿಲ್ಲರೆ ಮತ್ತು ವಿನಾಶಕಾರಿ ಟೀಕೆಗಳಿಗೆ ಕಾಲವಲ್ಲ, ದುರುದ್ದೇಶದ ಮತ್ತು ಇತರರನ್ನು ದೂಷಿಸುವ ಕಾಲವೂ ಅಲ್ಲ. ನಾವು ಸ್ವತಂತ್ರ ಭಾರತದ, ಉದಾತ್ತವಾದ, ಅದರ ಎಲ್ಲ ಮಕ್ಕಳು ವಾಸಿಸಬಹುದಾದ ಒಂದು ಸೌಧವನ್ನು ನಿರ್ಮಿಸಬೇಕಿದೆ.

 

ಗೊತ್ತು ಪಡಿಸಿದ ದಿನ ಬಂದಿದೆ-ಭವಿಷ್ಯ ಗೊತ್ತುಪಡಿಸಿದ ದಿನ. ಭಾರತ ದೀರ್ಘಕಾಲದ ಜಡನಿದ್ರೆ ಮತ್ತು ಹೋರಾಟಗಳ ನಂತರ ಮತ್ತೆ ಎದ್ದು ನಿಂತಿದೆ, ಜಾಗೃತಗೊಂಡಿದೆ, ಚೈತನ್ಯ ತುಂಬಿಕೊಂಡಿದೆ, ಮುಕ್ತವಾಗಿದೆ, ಸ್ವತಂತ್ರವಾಗಿದೆ. ಗತಕಾಲ ಈಗಲೂ ನಮಗೆ ಸ್ವಲ್ಪ ಮಟ್ಟಿಗೆ ಅಂಟಿಕೊಂಡಿದೆ. ನಾವು ಆಗಾಗ ಕೈಗೊಂಡ ಪ್ರತಿಜ್ಞೆಗಳನ್ನು ಪೂರೈಸಲು ಬಹಳಷ್ಟು ಕೆಲಸ ಮಾಡಬೇಕಿದೆ. ಆದರೂ ನಿರ್ಣಾಯಕ ತಿರುವನ್ನು ದಾಟಿದ್ದೇವೆ. ನಮಗೆ ಚರಿತ್ರೆ ಹೊಸದಾಗಿ ಆರಂಭವಾಗಿದೆ, ನಾವು ಬದುಕು ನಡೆಸುವ, ಕ್ರಿಯೆಗಿಳಿಯುವ ಮತ್ತು ಇತರರು ಆ ಬಗ್ಗೆ ಬರೆಯಲಿರುವ ಚರಿತ್ರೆ.

ಇದೊಂದು ಭಾರತದಲ್ಲಿ ಇರುವ ನಮಗೆ, ಮತ್ತು ಎಲ್ಲ ಏಷಿಯಾ ಮತ್ತು ಪ್ರಪಂಚಕ್ಕೆ ಒಂದು ಭವಿಷ್ಯಗರ್ಭಿತ ಕ್ಷಣ. ಹೊಸದೊಂದು ತಾರೆ ಉದಯಿಸುತ್ತಿದೆ, ಪೂರ್ವದಲ್ಲಿ ಸ್ವಾತಂತ್ರ್ಯ ಹೊಸದೊಂದು ತಾರೆ, ಹೊಸದೊಂದು ನಿರೀಕ್ಷೆ ಅಸ್ತಿತ್ವಕ್ಕೆ ಬಂದಿದೆ. ದೀರ್ಘಕಾಲದ ಕನಸೊಂದು ನನಸಾಗಿದೆ. ಆ ತಾರೆ ಎಂದೂ ಅಸ್ತಮಿಸದಿರಲಿ ಮತ್ತು ಆ ನಿರೀಕ್ಷೆ ಎಂದೂ ಹುಸಿಯಾಗದಿರಲಿ!

ಮೋಡಗಳು ನಮ್ಮನ್ನು ಆವರಿಸಿವೆ, ಬಹಳಷ್ಟು ನಮ್ಮ ಜನತೆ ಶೋಕಗ್ರಸ್ತರಾಗಿದ್ದಾರೆ ಮತ್ತು ಸಂಕಷ್ಟಗಳು ನಮ್ಮನ್ನು ಸುತ್ತುವರೆದಿವೆ. ಆದರೂ ನಾವು ಆ ಸ್ವಾತಂತ್ರ್ಯದಲ್ಲಿ ಸಂಭ್ರಮ ಪಡುತ್ತೇವೆ. ಆದರೆ ಸ್ವಾತಂತ್ರ್ಯವು ಜವಾಬ್ದಾರಿಗಳನ್ನು ಮತ್ತು ಹೊರೆಗಳನ್ನು ತರುತ್ತವೆ, ನಾವು ಒಂದು ಸ್ವತಂತ್ರ ಮತ್ತು ಶಿಸ್ತಿನ ಜನತೆಯಾಗಿ ಅವನ್ನು ಎದುರಿಸಲೇ ಬೇಕಾಗಿದೆ.

ಈ ದಿನ ನಮ್ಮ ಮೊದಲ ಯೋಚನೆಗಳು ಈ ಸ್ವಾತಂತ್ರ್ಯದ ಶಿಲ್ಪಿಯ, ನಮ್ಮ ರಾಷ್ಟ್ರಪಿತನ ಕಡೆಗೆ ಹೋಗುತ್ತವೆ. ಅವರು ಭಾರತದ ಹಳೆಯ ಚೈತನ್ಯವನ್ನು ಮೈಗೂಡಿಸಿಕೊಂಡವರು, ಸ್ವಾತಂತ್ರ್ಯದ ದೀವಟಿಗೆಯನ್ನು ಎತ್ತಿ ಹಿಡಿದು ನಮ್ಮನ್ನು ಆವರಿಸಿದ್ದ ಕತ್ತಲಲ್ಲಿ ಬೆಳಕು ತೋರಿದವರು. ನಾವು ಹಲವು ಸಂದರ್ಭಗಳಲ್ಲಿ ಅವರಿಗೆ ತಕ್ಕ ಅನುವರ್ತಿಗಳಾಗಲಿಲ್ಲ, ಅವರ  ಸಂದೇಶಗಳಿಂದ ದೂರ ಸರಿದಿದ್ದೇವೆ. ಆದರೆ ನಾವು ಮಾತ್ರವಲ್ಲ, ಮುಂಬರುವ  ಪೀಳಿಗೆಗಳೂ ಈ ಸಂದೇಶವನ್ನು ನೆನಪಿಟ್ಟುಕೊಳ್ಳುತ್ತಾರೆ, ಭಾರತದ ಈ ಮಹಾನ್ ಪುತ್ರನ ಭವ್ಯ ನಂಬಿಕೆ ಮತ್ತು ಶಕ್ತಿ ಮತ್ತು ಧೈರ್ಯ ಮತ್ತು ವಿನಯ ಅವರ ಹೃದಯದಲ್ಲಿ ಅಚ್ಚಾಗಿರುತ್ತವೆ. ಆ ಸ್ವಾತಂತ್ರ್ಯ   ದೀವಟಿಗೆಯನ್ನು, ಗಾಳಿ ಎಷ್ಟೇ ಜೋರಾಗಿ ಬೀಸಿದರೂ,  ಎಂತಹ ಪ್ರಚಂಡ ಬಿರುಗಾಳಿ ಬಂದರೂ ನಾವು ಎಂದೂ ಆರಲು ಬಿಡಲಾರೆವು.

ತದನಂತರದ ನಮ್ಮ ಯೋಚನೆಗಳು ಯಾವ ಹೊಗಳಿಕೆ ಅಥವಾ ಪುರಸ್ಕಾರವಿಲ್ಲದೇ ಸಾವು ಬರುವ ಪರ್ಯಂತವೂ ಭಾರತದ ಸೇವೆ ಮಾಡಿದ ಅನಾಮಧೇಯ ಸ್ವಯಂಸೇವಕರಿಗೆ ಮತ್ತು ಸ್ವಾತಂತ್ರ್ಯ  ಯೋಧರಿಗೆ ಸಲ್ಲಬೇಕು.

ರಾಜಕೀಯ ಸೀಮೆಗಳಿಂದಾಗಿ ನಮ್ಮಿಂದ ಸಂಪರ್ಕ ಕಡಿದು ಹೋದ ಮತ್ತು ಬಂದಿರುವ ನಮ್ಮ ಸ್ವಾತಂತ್ರ್ಯವನ್ನು ಸದ್ಯಕ್ಕೆ ಹಂಚಿಕೊಳ್ಳಲಾರದ ನಮ್ಮ ಸಹೋದರ ಸಹೋದರಿಯರ ಬಗ್ಗೆಯೂ ನಾವು ಯೋಚಿಸುತ್ತೇವೆ. ಅವರು ನಮ್ಮವರು ಮತ್ತು ಏನೇ ಆದರೂ ನಮ್ಮವರೇ ಆಗಿರುತ್ತಾರೆ ಮತ್ತು ನಾವು ಅವರ ಅದೃಷ್ಟ, ದುರದೃಷ್ಟಗಳನ್ನು ಸಮಾನವಾಗಿ ಹಂಚಿಕೊಳ್ಳುತ್ತೇವೆ.

ಭವಿಷ್ಯ ನಮ್ಮನ್ನು ಕೈಬೀಸಿ ಕರೆಯುತ್ತಿದೆ. ನಾವು ಎತ್ತ ಹೋಗೋಣ ಮತ್ತು ನಮ್ಮ ಪ್ರಯತ್ನಗಳು ಏನಿರಬೇಕು? ಸ್ವಾತಂತ್ರ್ಯ  ಮತ್ತು ಅವಕಾಶಗಳನ್ನು ಭಾರತದ ಶ್ರೀಸಾಮಾನ್ಯರಿಗೆ, ರೈತರಿಗೆ ಮತ್ತು ಕಾರ್ಮಿಕರಿಗೆ ತರುವುದು; ಬಡತನ, ಮೌಢ್ಯ ಮತ್ತು ಅನಾರೋಗ್ಯದ ವಿರುದ್ಧ ಹೋರಾಟ ನಡೆಸುವುದು ಮತ್ತು ಅವನ್ನು ಕೊನೆಗೊಳಿಸುವುದು; ಒಂದು ಸಮೃದ್ಧ, ಪ್ರಜಾಸತ್ತಾತ್ಮಕ ಮತ್ತು ಪ್ರಗತಿಪರ ರಾಷ್ಟ್ರದ ನಿರ್ಮಾಣ; ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಂಸ್ಥೆಗಳ ನಿರ್ಮಾಣದ ಮುಖಾಂತರ ಪ್ರತಿಯೊಬ್ಬ ಮಹಿಳೆ ಮತ್ತು ಪುರುಷನಿಗೆ ನ್ಯಾಯ ಮತ್ತು ತುಂಬು ಜೀವನ ಲಭ್ಯವಾಗುವಂತೆ ಮಾಡುವುದು.

ನಮ್ಮ ಮುಂದೆ ಕಠಿಣ ಕೆಲಸವಿದೆ. ನಮ್ಮ ಪ್ರತಿಜ್ಞೆಗಳನ್ನು ಈಡೇರಿಸುವ ವರೆಗೆ, ಭಾರತದ ಎಲ್ಲ ಜನತೆಯನ್ನು ಭವಿಷ್ಯ ಅವರು ಏನಾಗಬೇಕೆಂದು ಬಯಸಿದೆಯೋ ಹಾಗೆ ಮಾಡುವ ವರೆಗೆ ನಮ್ಮಲ್ಲಿ ಯಾರೊಬ್ಬರಿಗೂ ವಿಶ್ರಾಂತಿ  ಇರುವುದಿಲ್ಲ. ನಾವು ಒಂದು ದಿಟ್ಟ ಹೆಜ್ಜೆಯನ್ನಿಡುವ ಹೊಸ್ತಿಲಲ್ಲಿ ನಿಂತಿರುವ ಒಂದು ಮಹಾನ್ ರಾಷ್ಟ್ರದ  ನಾಗರಿಕರು. ನಾವೆಲ್ಲರೂ, ಯಾವುದೇ ಮತಧರ್ಮಗಳಿಗೆ ಸೇರಿದ್ದರೂ ಸಮಾನ ಹಕ್ಕುಗಳು, ಸವಲತ್ತುಗಳು ಮತ್ತು ಬಾಧ್ಯತೆಗಳುಳ್ಳ ಭಾರತದ ಮಕ್ಕಳು. ನಾವು ಮತೀಯತೆಯನ್ನಾಗಲೀ, ಸಂಕುಚಿತ ಮನೋಭಾವವನ್ನಾಗಲೀ ಪ್ರೋತ್ಸಾಹಿಸುವುದಿಲ್ಲ, ಏಕೆಂದರೆ, ಯಾವ ರಾಷ್ಟ್ರದ ಜನತೆ ವಿಚಾರ ಮತ್ತು ಕ್ರಿಯೆಯಲ್ಲಿ ಸಂಕುಚಿತತೆಯನ್ನು ಹೊಂದಿರುತ್ತಾರೋ ಆ ರಾಷ್ಟ್ರ ಮಹಾನ್ ಎನಿಸಲಾರದು.

ನಾವು ಪ್ರಪಂಚದ ರಾಷ್ಟ್ರಗಳಿಗೆ ಮತ್ತು ಜನಗಳಿಗೆ ಶುಭಾಶಯಗಳನ್ನು ಕಳಿಸುತ್ತೇವೆ, ಮತ್ತು ಶಾಂತಿ, ಸ್ವಾತಂತ್ರ್ಯ  ಹಾಗೂ ಪ್ರಜಾಪ್ರಭುತ್ವವನ್ನು ಮುಂದಕ್ಕೊಯ್ಯುವುದರಲ್ಲಿ ಸಹಕರಿಸುವ ಪ್ರತಿಜ್ಞೆ ಕೈಗೊಳ್ಳುತ್ತೇವೆ.

ಮತ್ತು ಭಾರತಕ್ಕೆ, ನಮ್ಮ ಬಹು ನೆಚ್ಚಿನ, ಪ್ರಾಚೀನ, ಚಿರಂತನ, ಚಿರನೂತನ ತಾಯ್ನಾಡಿಗೆ ನಮ್ಮ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇವೆ ಮತ್ತು ಅದರ ಸೇವೆಯಲ್ಲಿ ಮತ್ತೊಮ್ಮೆ ತೊಡಗಲು ಬದ್ಧರಾಗುತ್ತೇವೆ.

ಜೈಹಿಂದ್

Donate Janashakthi Media

Leave a Reply

Your email address will not be published. Required fields are marked *