ಜಾತಿಗಣತಿ ಮತ್ತು ಅಭಿವೃದ್ಧಿಯ ಸಾರ್ವತ್ರೀಕರಣ

ಪ್ರೊ. ಟಿ.ಆರ್. ಚಂದ್ರಶೇಖರ

ಬ್ರಾಹ್ಮಣ ವರ್ಣದ ಮತ್ತು ಅತ್ಯಂತ ಉನ್ನತ ಜಾತಿಗಳಿಗೆ ತಮ್ಮ ಆರ್ಥಿಕ, ಸಾಮಾಜಿಕ, ರಾಜಕೀಯ ಪ್ರಾಬಲ್ಯ, ಸಂಪತ್ತಿನ ಕೇಂದ್ರೀಕರಣ ಎಲ್ಲಿ ಜಾತಿಗಣತಿಯಿಂದ ಬಹಿರಂಗವಾಗುತ್ತದೊ ಎನ್ನುವ ಭಯವಿದೆ. ಅದಕ್ಕಾಗಿ ಇವರು ಜಾತಿಗಣತಿಯನ್ನು ತಿರಸ್ಕರಿಸುತ್ತಿದ್ದಾರೆ. ಇದು ಎಲ್ಲಿ ಇವರ ಸಾಂಸ್ಕೃತಿಕ ಆಧಾರವಾದ ಸಂಸ್ಥೆಯು ಪ್ರಚುರಪಡಿಸುತ್ತಿರುವ ‘ಅಖಂಡತೆ’ ಸಿದ್ಧಾಂತಕ್ಕೆ ಪೆಟ್ಟು ಬೀಳುತ್ತದೋ ಎನ್ನುವ ಭಯವಿದೆ. ಸನಾತನ-ಸಾಂಸ್ಥಿಕ ಅಸಮಾನತೆಯನ್ನು ಹಾಗೂ ಪ್ರಸ್ತುತ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಲು ನಮಗೆ ಈಗ ಗೊತ್ತಿರುವ ಒಂದು ಪರಿಹಾರ ಜಾತಿಗಣತಿ ಮತ್ತು ಅದರ ಆಧಾರದ ಮೇಲೆ ಅಭಿವೃದ್ಧಿಯ ಫಲಗಳ ಹಂಚಿಕೆ. ಜನರು ಅನುಭವಿಸುತ್ತಿರುವ ದುಸ್ಥಿತಿಗನುಗುಣವಾಗಿ ಅಭಿವೃದ್ಧಿಯ ಫಲಗಳನ್ನು ಹಂಚುವುದು ಎಂದರೆ ಅತ್ಯಂತ ಉನ್ನತ ಮತ್ತು ಉನ್ನತ ಜಾತಿಗಳಲ್ಲಿ ಕ್ರೋಡೀಕ್ಥಗೊಂಡಿರುವ ವರಮಾನದಲ್ಲಿನ-ಸಂಪತ್ತಿನ ಒಂದು ಭಾಗವನ್ನು ವರ್ಗಾಯಿಸಬೇಕಾಗುತ್ತದೆ (ಪ್ರತ್ಯಕ್ಷ ತೆರಿಗೆ ಮೂಲಕ). ಇಂತಹ ತ್ಯಾಗಕ್ಕೆ ದ್ವಿಜ ಜಾತಿಗಳು ಸಿದ್ಧವಿಲ್ಲ ಮತ್ತು ಅವರ ಮೇಲೆ ತೆರಿಗೆಗಳನ್ನು ವಿಧಿಸಲು ಸರ್ಕಾರಗಳು ಸಿದ್ಧವಿಲ್ಲ.

ಭಾರತದಲ್ಲಿ ಜನಗಣತಿಗೆ ನೂರು ವರ್ಷಕ್ಕೂ ಮೀರಿದ ಚರಿತ್ರೆಯಿದೆ. ಜನಗಣತಿಯ ಭಾಗವಾಗಿ ಜಾತಿಗಣತಿ ಕೊನೆಯದಾಗಿ 1931ರಲ್ಲಿ ನಡೆಯಿತು. ಸ್ವಾತಂತ್ರ್ಯಾನಂತರ ಜನಗಣತಿಯಲ್ಲಿ ಒಟ್ಟು ಜನಸಂಖ್ಯೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗಣನೆ ನಡೆಯುತ್ತಿದೆ. ಜಾತಿಗಣತಿಯು ಇದುವರೆವಿಗೂ ನಡೆದಿಲ್ಲ. ಕಳೆದ 30-40 ವರ್ಷಗಳಿಂದ ಜಾತಿಗಣತಿಯನ್ನು ಇತರೆ ಹಿಂದುಳಿದ ವರ್ಗಗಳು (ಒಬಿಸಿ) ಒತ್ತಾಯಿಸುತ್ತಿವೆ. ಆದರೆ ಸರ್ಕಾರಗಳು ಇದನ್ನು ಒಂದೋ ತಿರಸ್ಕರಿಸುತ್ತಿವೆ(ಬಿಜೆಪಿ), ಇಲ್ಲವೇ ತೀರ್ಮಾನ ತೆಗೆದುಕೊಳ್ಳದೆ ಮುಂದೆ ಹಾಕುತ್ತಿವೆ. ಸಾಮಾನ್ಯವಾಗಿ ಜಾತಿಗಣತಿಯಿಂದ ಜಾತೀಯತೆಯು ಊರ್ಜಿತಗೊಳ್ಳುತ್ತದೆ ಎಂಬ ಕಾರಣದಿಂದ ಬಿಜೆಪಿ ಮತ್ತು ಅದರ ಅಡಿಪಾಯವಾಗಿರುವ ಉನ್ನತ ಜಾತಿ-ವರ್ಗಗಳು ಜಾತಿಗಣತಿಯನ್ನು ವಿರೋಧಿಸುತ್ತಿವೆ. ಜಾತೀಯತೆಯನ್ನು ಊರ್ಜಿತಗೊಳಿಸುವುದು ಜಾತಿಗಣತಿಯಲ್ಲ: ಅದು ಚಾತುರ್ವರ್ಣ ಪ್ರಣಾಳಿಕೆ.

ಜಾತಿಗಣತಿಯನ್ನು ನಡೆಸುವುದು ಸುಲಭದ ಕಾರ್ಯವಲ್ಲ. ಈಗಾಗಲೆ ಒಕ್ಕೂಟ ಸರ್ಕಾರವು 2011ರಲ್ಲಿ ನಡೆಸಿದ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ(ಎಸ್‌ಈಸಿಸಿ) ಅನೇಕ ತಾಂತ್ರಿಕ ಮತ್ತು ಸಾಂಖ್ಯಿಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಸಾಮಾಜಿಕ-ಆರ್ಥಿಕ ಗಣತಿ 2011 ಮೂರು ಬೇರೆ ಬೇರೆ ಇಲಾಖೆಗಳಿಂದ ನಡೆಯಿತು. ಆದರಿಂದ ಅನೇಕ ಸಮಸ್ಯೆಗಳು ಉದ್ಭವವಾದವು.

ಜಾತಿಗಣತಿ ಬಗ್ಗೆ ಚರ್ಚೆ ಮಾಡುವಾಗ ನಾವು ಗಮನಿಸಬೇಕಾದ ಸಂಗತಿಯೆಂದರೆ ನಮ್ಮದು ಅಖಂಡ ಸಮಾಜವಲ್ಲ, ಇದು ಅಸಮಾನತೆಯ, ಶ್ರೇಣೀಕರಣದ ಮತ್ತು ಪುರುಷ ಪ್ರಧಾನ ಸಮಾಜ ಎಂಬುದಾಗಿದೆ. ನಮ್ಮಲ್ಲಿ ಸಾವಿರಾರು ಜಾತಿಗಳಿವೆ. ಅವುಗಳ ಸಾಮಾಜಿಕ-ಆರ್ಥಿಕ-ರಾಜಕೀಯ ಸ್ಥಾನಮಾನ ಸಮಾನವಾಗಿಲ್ಲ. ನಮ್ಮದು ಎಲ್ಲರನ್ನು ಒಳಗೊಳ್ಳುವ ಸಮಾಜವಲ್ಲ. ಸ್ವಾತಂತ್ರ್ಯಾಯನಂತರ ಸರ್ಕಾರದ ಸಕಾರಾತ್ಮಕ ತಾರತಮ್ಯ ನೀತಿಗಳಿಂದಾಗಿ ಮತ್ತು ನಮ್ಮ ಸಂವಿಧಾನಾತ್ಮಕ ಮೀಸಲಾತಿ ಅವಕಾಶಗಳಿಂದಾಗಿ, ಪ. ಜಾ,(ಪರಿಶಿಷ್ಠ ಜಾತಿ) ಪ. ಪಂ. (ಪರಿಶಿಷ್ಠ ಪಂಗಡ) ಮತ್ತು ಇತರೆ ಹಿಂದುಳಿದ ವರ್ಗಗಳು(ಒಬಿಸಿ) ಸಾಕಷ್ಟು ಅನುಕೂಲ ಪಡೆದುಕೊಂಡಿವೆ. ಆದರೆ ಅಸಮಾನತೆ-ಶ್ರೇಣೀಕರಣ ಮುಂದುವರಿದಿದೆ. ಅನೇಕ ಅಧ್ಯಯನಗಳು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಿರುವಂತೆ ಅತ್ಯಂತ ಉನ್ನತ ಜಾತಿ(ಬ್ರಾಹ್ಮಣರು) ಮತ್ತು ಉನ್ನತ ಜಾತಿಗಳು(ಲಿಂಗಾಯತರು, ಒಕ್ಕಲಿಗರು, ಕಮ್ಮಾಗಳು, ಮರಾಠರು, ಜಾಟರು – ಇತ್ಯಾದಿ)ಗಳ ಪ್ರಾಬಲ್ಯವು ಮುಂದುವರಿದಿದೆ ಮತ್ತು ಏರಿಕೆಯಾಗುತ್ತಿದೆ. ಅಭಿವೃದ್ಧಿಯ ಫಲಗಳು ಸಮಾಜದ ಎಲ್ಲ ವರ್ಗಗಳಿಗೂ ಸಮಾನವಾಗಿ ದೊರೆಯುತ್ತಿಲ್ಲ. ಸಮಾನವಾಗಿರಲಿ, ಕೆಲವು ಸಮುದಾಯಗಳಿಗೆ ಕನಿಷ್ಠ ಮಟ್ಟದಲ್ಲಿಯೂ ದೊರೆಯುತ್ತಿಲ್ಲ. ನಮ್ಮ ದೇಶದಲ್ಲಿ 2013ರ ನಂತರ ವಿಶೇಷವಾಗಿ ಅತ್ಯಂತ ಉನ್ನತ ಜಾತಿಯ ಮತ್ತು ಇತರೆ ಉನ್ನತ ಜಾತಿಗಳ ಪ್ರಾಬಲ್ಯ್ಯ, ಅಧಿಕಾರ, ಅಹಂಕಾರ ಹದ್ದುಮೀರಿ ಬೆಳೆಯುತ್ತಿದೆ.

ಈ ಎಲ್ಲ ಕಾರಣಗಳಿಂದ ಜಾತಿಗಣತಿಯ ಬಗ್ಗೆ ಜನರು ಒತ್ತಾಯ ಮಾಡುತ್ತಿದ್ದಾರೆ. ಒಬಿಸಿಗಳಿಗೆ ಶೇ. 27 ರಷ್ಟು, ಪ.ಜಾ.ಗೆ ಶೇ. 15 ರಷ್ಟು ಮತ್ತು ಪ. ಪಂ.ಗಳಿಗೆ ಶೇ. 3 ರಷ್ಟು ಮೀಸಲಾತಿಯಿದೆ. ಈಡಬ್ಲುಎಸ್.ಗಳಿಗೆ ಶೇ. 10 ಮೀಸಲಾತಿಯಿದೆ. ಆದರೆ ಇದನ್ನು ಸಮರ್ಪಕವಾಗಿ ಸರ್ಕಾರಗಳು ಅನುಷ್ಠಾಗೊಳಿಸುತ್ತಿಲ್ಲ. ಉದಾ: ಪ.ಜಾ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗದಲ್ಲಿನ ಅಭ್ಯರ್ಥಿಗಳ ಜೊತೆ ಜೊತೆಗೆ ಉನ್ನತ ಅಂಕ ಪಡೆದು ಶೈಕ್ಷಣಿಕ ಪ್ರವೇಶ ಅಥವಾ ಉದ್ಯೋಗ ಪಡೆದುಕೊಂಡರೆ ಅವರನ್ನು ‘ಸಾಮಾನ್ಯ’ ವರ್ಗದಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳದೆ ಮೀಸಲಾತಿ ವರ್ಗದಲ್ಲಿ ಸೇರಿಸಲಾಗುತ್ತದೆ. ಒಂದು ವೇಳೆ ಅವರನ್ನು ಸಾಮಾನ್ಯ ವರ್ಗದಲ್ಲಿ ಸೇರಿಸಿದ್ದರೆ ಮೀಸಲಾತಿ ವಲಯದಲ್ಲಿ ಸ್ಥಾನಗಳು ಹೆಚ್ಚುವರಿಯಾಗುತ್ತಿದ್ದವು. ಇಂತಹ ಅನೇಕ ಸಮಸ್ಯೆಗಳನ್ನು ಉಂಟು ಮಾಡಿ ಮೀಸಲಾತಿ ತತ್ವಕ್ಕೆ ಅನ್ಯಾಯ ಮಾಡಲಾಗುತ್ತಿದೆ. ವರ್ಟಿಕಲ್ ಮೀಸಲಾತಿ ವಿಧಾನದಲ್ಲಿ ನ್ಯಾಯ ದೊರಕುತ್ತಿದ್ದರೂ ಹಾರಿಜಾಂಟಲ್ ಮೀಸಲಾತಿಯಲ್ಲಿ ಪ. ಜಾ. ಮತ್ತು ಪ. ಪಂ. ಹಾಗೂ ಒಬಿಸಿ ವರ್ಗಗಳು ಅನೇಕ ರೀತಿಯ ಅನ್ಯಾಯ ಎದುರಿಸುತ್ತಿವೆ.

ಸರ್ಕಾರಗಳು ಇಂದು ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ತುಂಬುತ್ತಿಲ್ಲ. ಇದರಿಂದಾಗಿ ಸಂವಿಧಾನಾತ್ಮಕ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಸರ್ಕಾರಗಳು ಇಂದು ಗುತ್ತಿಗೆ-ಹೊರಗುತ್ತಿಗೆ ವಿಧಾನಗಳಲ್ಲಿ ನೇಮಕ ಮಾಡಿಕೊಳ್ಳುತ್ತಿವೆ. ಕರ್ನಾಟಕದಲ್ಲಿ ಖಾಲಿಯಿರುವ ಸರ್ಕಾರಿ ಹುದ್ದೆಗಳ ವಿವರ ಇಲ್ಲಿದೆ.

ಕೋಷ್ಟಕ 1. ಕರ್ನಾಟಕ ಸರ್ಕಾರದಲ್ಲಿ ಖಾಲಿ ಹುದ್ದೆಗಳು (08.03.2021ರಲ್ಲಿದ್ದಂತೆ)

 

ವಲಯ ಮಂಜೂರಾದ ಹುದ್ದೆ ಖಾಲಿ ಹುದ್ದೆಗಳು ಭರ್ತಿಯಾದ ಹುದ್ದೆ ವೇತನ(ಕೋಟಿ ರೂ.ಗಳಲ್ಲಿ)
ರಾಜ್ಯ 374290 138867(ಶೇ.37.10) 235423 18284.47
ಜಿಲ್ಲಾ 394685 114035(ಶೇ.28.89) 280650 20341.57
ಒಟ್ಟು 768975 252902(ಶೇ.32.88) 516073 38626.04

ಮೂಲ: ಕರ್ನಾಟಕ ಸರ್ಕಾರ-2021. ಬಜೆಟ್ ಸಂಪುಟಗಳು. 2021-22. ಅನುಬಂಧ-‘ಬಿ’

ಮೀಸಲಾತಿ ಹೇಗೆ ಅಪ್ರಸ್ತುತವಾಗುತ್ತದೆ ಎಂಬುದನ್ನು ಮೇಲಿನ ಕೋಷ್ಟಕ ಸಾಕ್ಷಿಯಾಗಿದೆ. ಇಲ್ಲಿ ಖಾಲಿಯಿರುವ ಹುದ್ದೆಗಳು 2.53 ಲಕ್ಷ. ಇವುಗಳನ್ನು ತುಂಬಿದರೆ 20830(ಶೇ.15) ಪ. ಜಾ. ಮತ್ತು 4166(ಶೇ3) ಪ. ಪಂ. ಯುವಕ-ಯುವತಿಯರಿಗೆ ಉದ್ಯೋಗಗಳು ದೊರೆಯುತ್ತವೆ. ಲಕ್ಷಾಂತರ ಹುದ್ದೆಗಳನ್ನು ಖಾಲಿಯಿಟ್ಟುಕೊಂಡು ಪ.ಜಾ ಮತ್ತು ಪ.ಪಂ. ಸಮುದಾಯಗಳಿಗೆ ಅನ್ಯಾಯ ಮಾಡಲಾಗಿದೆ. ಇದು ಒಂದು ರಾಜ್ಯದ ಸ್ಥಿತಿ. ದೇಶದ 28 ರಾಜ್ಯಗಳನ್ನು ಹಾಗೂ ಒಕ್ಕೂಟ ಸರ್ಕಾರದಲ್ಲಿನ ಹುದ್ದೆಗಳನ್ನು ಲೆಕ್ಕ ಹಿಡಿದರೆ ಲಕ್ಷಾಂತರ ದಲಿತರಿಗೆ ಮತ್ತು ಆದಿವಾಸಿಗಳಿಗೆ ಹಾಗೂ ಒಬಿಸಿಗಳಿಗೆ ಜೀವನಾಧಾರ ಒದಗಿಸಬಹುದು. ಸರ್ಕಾರಗಳು ಇದಕ್ಕೆ ಸಿದ್ಧವಿಲ್ಲ. ಇದಕ್ಕೆ ಪ್ರತಿಯಾಗಿ ಸರ್ಕಾರಗಳು ಗುತ್ತಿಗೆ ಮೇಲೆ ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಿವೆ. ಇಲ್ಲಿ ಮೀಸಲಾತಿಯನ್ನು ಅನುಸರಿಸುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಜಾತಿಗಣತಿಯ ಅಗತ್ಯವನ್ನು ಪರಿಶೀಲಿಸಬೇಕಾಗಿದೆ. ಭಾರತವು ಸಾವಿರಾರು ಶ್ರೇಣೀಕೃತ ಜಾತಿಗಳಿಂದ ಕೂಡಿದ ಸಮಾಜ. ಅಧಿಕಾರ, ಅಂತಸ್ತು, ಭಾಷೆ, ಸ್ಪರ್ಶ-ಅಸ್ಪೃಶ್ಯ, ಪವಿತ್ರ-ಅಪವಿತ್ರ, ಪ್ರದೇಶ ಮುಂತಾದ ಶ್ರೇಣಿಗಳಿಗೆ ಅನುಗುಣವಾಗಿ ಅವುಗಳನ್ನು ಜೋಡಿಸಲಾಗಿದೆ. ಈ ಶ್ರೇಣಿ ವ್ಯವಸ್ಥೆಯಲ್ಲಿ ಬ್ರಾಹ್ಮಣರು ಅತ್ಯಂತ ಉನ್ನತ ಸ್ಥಾನದಲ್ಲಿ, ಕ್ಷತ್ರಿಯರು ನಂತರ ಮತ್ತು ತದನಂತರ ವೈಶ್ಯರು ಇದ್ದಾರೆ. ಶೂದ್ರರು ಹಾಗೂ ದಲಿತರು ಮತ್ತು ಆದಿವಾಸಿಗಳು ಸದರಿ ಶ್ರೇಣಿಯ ತಳಭಾಗದಲ್ಲಿದ್ದಾರೆ. ದ್ವಿಜ ಜಾತಿಗಳು ಮತ್ತು ದಲಿತರು ಹಾಗೂ ಆದಿವಾಸಿಗಳ ನಡುವೆ ಸಾವಿರಾರು ಹಿಂದುಳಿದ ಜಾತಿಗಳಿವೆ. ಈ ಶ್ರೇಣಿಕರಣದಲ್ಲಿ ಬಡತನವು ಮೇಲಿನಿಂದ ಕೆಳಗೆ ಆರೋಹಣ ಕ್ರಮಲ್ಲಿದ್ದರೆ ಸಿರಿವಂತಿಕೆಯು ಕೆಳಗಿನಿಂದ ಮೇಲೆ ಅವರೋಹಣ ಕ್ರಮದಲ್ಲಿದೆ.

ಸಂವಿಧಾನಾತ್ಮಕ ಹಕ್ಕುಗಳನ್ನು ಪಡೆದಿರುವ ಪ. ಜಾ. ಮತ್ತು ಪ. ಪಂ.ಗಳೇ ಅಭಿವೃದ್ಧಿಯ ಫಲಗಳಿಂದ ವಂಚಿತರಾಗಿತ್ತಿದ್ದರೆ ಕೆಲವು ಒಬಿಸಿ ಜಾತಿಗಳ ಸ್ಥಿತಿಯು ಅತ್ಯಂತ ಹೀನಾಯ ಸ್ಥಿತಿಯಲ್ಲಿದೆ. ಈ ವರ್ಗವು ದೇಶದ ಜನಸಂಖ್ಯೆಯ ಶೇ. 60 ರಿಂದ ಶೇ. 70 ರಷ್ಟಾಗುತ್ತದೆ. ಅಂದರೆ ಕಳೆದ 71 ವರ್ಷಗಳಿಂದ ವಂಚಿತ ಸಮುದಾಯಗಳಿಗೆ ಸಂವಿಧಾನದತ್ತ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ದೊರಕಿಸಿಕೊಡುವುದು ನಮಗೆ ಸಾಧ್ಯವಾಗಿಲ್ಲ. ಈ ವರ್ಗಗಳು ಇಂದು ಜಾತಿಗಣತಿ ಬಗ್ಗೆ ಚಳುವಳಿ ನಡೆಸುತ್ತಿವೆ. ದ್ವಿಜ ವರ್ಣಗಳು ಮತ್ತು ಅವರ ಸಂಕೋಲೆಯಲ್ಲಿರುವ ಒಕ್ಕೂಟ ಸರ್ಕಾರವು ಇದಕ್ಕೆ ಸಿದ್ಧವಿಲ್ಲ. ಸಮಾಜದಲ್ಲಿ ಯಾವ ಯಾವ ಜಾತಿಗಳು ಕಳೆದ 70 ವರ್ಷಗಳ ಅಭಿವೃದ್ಧಿ ಪರ್ವದಲ್ಲಿನ ಬೆಳವಣಿಗೆಯಲ್ಲಿ ಯಾವ ಯಾವ ಸ್ಥಾನದಲ್ಲಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಜಾತಿಗಣತಿಯ ಒಂದು ಉದ್ದೇಶವಾಗಿದೆ. ದ್ವಿಜ ಜಾತಿಗಳು ಮತ್ತು ಒಕ್ಕೂಟ ಸರ್ಕಾರ ಒಕ್ಕೊರಲಿನಿಂದ ಜಾತಿಗಣತಿಯು ಜಾತಿ ವ್ಯವಸ್ಥೆಯನ್ನು ಊರ್ಜಿತಗೊಳಿಸುತ್ತದೆ ಎಂಬ ಕಾರಣದ ಮೇಲೆ ತಾತ್ವಿಕವಾಗಿ ಜನಗಣತಿಯನ್ನು ವಿರೋಧಿಸುತ್ತಿವೆ. ಇದೊಂದು ಭ್ರಮಾತ್ಮಕ ನಿಲುವು. ಜಾತಿ ಎಂಬುದು ಒಂದು ವಸ್ತುಸ್ಥಿತಿ. ಜಾತಿಗನುಗುಣವಾಗಿ ಅಭಿವೃದ್ಧಿ ಫಲಗಳು ಹರಿಯುತ್ತಿರುವುದು ಮತ್ತೊಂದು ವಸ್ಥುಸ್ಥಿತಿ. ನಮಗೆ ಕಳೆದ 75 ವರ್ಷಗಳಲ್ಲಿ ಅಭಿವೃದ್ಧಿಯನ್ನು ಸಾರ್ವತ್ರೀಕರಣ ಮಾಡುವುದು (ಯೂನಿವರ್ಸಲೈಸ್) ಸಾಧ್ಯವಾಗಿಲ್ಲ.  ಕರ್ನಾಟಕದ ವಿವಿಧ ಸಮುದಾಯಗಳ ಬಡತನದ ಪ್ರಮಾಣವನ್ನು ಪರಿಶೀಲಿಸಿದರೆ ‘ಅಭಿವೃದ್ಧಿಯು ಜಾತಿಗನುಗುಣವಾಗಿ ಹರಿಯುತ್ತಿರುವುದು’ ತಿಳಿಯುತ್ತದೆ.

ಕೋಷ್ಟಕ 2. ಸಾಮಾಜಿಕ ಗುಂಪುವಾರು ಬಹುಮುಖಿ ಬಡತನ ಸ್ಯೂಚ್ಯಂಕ 2012

 

ಸಾಮಾಜಿಕ ಗುಂಪುಗಳು ತಲಾ ಎಣಿಕೆ ಬಡತನದ ತೀವ್ರತೆ ಬಹುಮುಖಿ ಬಡತನ ಸೂಚ್ಯಂಕ ಬಡತನಕ್ಕೆ ಕಾಣಿಕೆ ಪ್ರಮಾಣ
ಪರಿಶಿಷ್ಟ ಜಾತಿ 32.9 0.444 14.6 30.5
ಪರಿಶಿಷ್ಟ ಪಂಗಡ 34.7 0.447 15.5 16.3
ಒಬಿಸಿ 18.7 0.425 8.0 43.7
ಇತರರು 13.5 0.414 5.6 9.2
ಒಟ್ಟು 22.4 0.433 9.7 100.00

ಕರ್ನಾಟಕ ಸರ್ಕಾರ 2018. ಕರ್ನಾಟಕ ಮಾನವ ಅಭಿವೃದ್ಧಿ ವರದಿ 2015. ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಬೆಂಗಳೂರು. ಪುಟ: 51.

ರಾಜ್ಯದಲ್ಲಿನ ಪ.ಜಾ. ಮತ್ತು ಪ.ಪಂ. ಸಮುದಾಯಗಳಲ್ಲಿ ಬಹುಮುಖಿ ಬಡತನ ಎದುರಿಸುತ್ತಿರುವವರ ಪ್ರಮಾಣ ಶೇ. 30 ಕ್ಕಿಂತ ಅಧಿಕವಿದ್ದರೆ ಉನ್ನತ ಜಾತಿಗಳಲ್ಲಿ ಇದು ಶೇ.13.5 ರಷ್ಟಿದೆ ಮತ್ತು ಒಬಿಸಿಗಳಲ್ಲಿ ಇದು ಶೇ. 18.7 ರಷ್ಟಿದೆ.

ಇಲ್ಲಿ ನೀಡಿರುವ ಸೂಚಿಗಳೆಲ್ಲವೂ ‘ಅಖಂಡ’ ಸೂಚಿಗಳು. ಅವುಗಳನ್ನು ಬಿಡಿಸಿ ಒಳರಚನೆಯನ್ನು ನೋಡಿದರೆ ನಮಗೆ ಇನ್ನೂ ಹೆಚ್ಚಿನ ದುಸ್ಥಿತಿಯ ನೆಲೆಗಳು ಕಂಡುಬರುತ್ತವೆ. ಉದಾ. 1941ರಲ್ಲಿ ರಾಜ್ಯದಲ್ಲಿನ ಬ್ರಾಹ್ಮಣರಲ್ಲಿನ ಸಾಕ್ಷರತಾ ಪ್ರಮಾಣ ಶೇ. 87.1 ರಷ್ಟಿದ್ದರೆ ಪ. ಜಾ. ಮತ್ತು ಪ. ಪಂ.ಗಳಲ್ಲಿನ ಸಾಕ್ಷರತೆಯು ಶೇ. 2 ಕ್ಕಿಂತ ಅಧಿಕವಿರಲಿಲ್ಲ(ವಿವರಗಳಿಗೆ ನೋಡಿ: ಜೇಮ್ಸ್ ಮೇನರ್. 1977. ಪೊಲಿಟಿಕಲ್ ಚೇಂಚ್ ಇನ್ ಅನ್ ಇಂಡಿಯನ್ ಸ್ಟೇಟ್. 1917-1955. ಪು.32).

ಬ್ರಾಹ್ಮಣ ವರ್ಣದ ಮತ್ತು ಅತ್ಯಂತ ಉನ್ನತ ಜಾತಿಗಳಿಗೆ ತಮ್ಮ ಆರ್ಥಿಕ, ಸಾಮಾಜಿಕ, ರಾಜಕೀಯ ಪ್ರಾಬಲ್ಯ, ಸಂಪತ್ತಿನ ಕೇಂದ್ರೀಕರಣ ಎಲ್ಲಿ ಜಾತಿಗಣತಿಯಿಂದ ಬಹಿರಂಗವಾಗುತ್ತದೊ ಎನ್ನುವ ಭಯವಿದೆ. ಅದಕ್ಕಾಗಿ ಇವರು ಜಾತಿಗಣತಿಯನ್ನು ತಿರಸ್ಕರಿಸುತ್ತಿದ್ದಾರೆ. ಇದು ಎಲ್ಲಿ ಇವರ ಸಾಂಸ್ಕೃತಿಕ ಆಧಾರವಾದ ಸಂಸ್ಥೆಯು ಪ್ರಚುರಪಡಿಸುತ್ತಿರುವ ‘ಅಖಂಡತೆ’ ಸಿದ್ಧಾಂತಕ್ಕೆ ಪೆಟ್ಟು ಬೀಳುತ್ತದೋ ಎನ್ನುವ ಭಯವಿದೆ. ಸನಾತನ-ಸಾಂಸ್ಥಿಕ  ಅಸಮಾನತೆಯನ್ನು ಹಾಗೂ ಪ್ರಸ್ತುತ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಲು ನಮಗೆ ಈಗ ಗೊತ್ತಿರುವ ಒಂದು ಪರಿಹಾರ ಜಾತಿಗಣತಿ ಮತ್ತು ಅದರ ಆಧಾರದ ಮೇಲೆ ಅಭಿವೃದ್ಧಿಯ ಫಲಗಳ ಹಂಚಿಕೆ. ಜನರು ಅನುಭವಿಸುತ್ತಿರುವ ದುಸ್ಥಿತಿಗನುಗುಣವಾಗಿ ಅಭಿವೃದ್ಧಿಯ ಫಲಗಳನ್ನು ಹಂಚುವುದು ಎಂದರೆ ಅತ್ಯಂತ ಉನ್ನತ ಮತ್ತು ಉನ್ನತ ಜಾತಿಗಳಲ್ಲಿ ಕ್ರೋಡೀಕ್ಥಗೊಂಡಿರುವ ವರಮಾನದಲ್ಲಿನ-ಸಂಪತ್ತಿನ ಒಂದು ಭಾಗವನ್ನು ವರ್ಗಾಯಿಸಬೇಕಾಗುತ್ತದೆ (ಪ್ರತ್ಯಕ್ಷ ತೆರಿಗೆ ಮೂಲಕ). ಇಂತಹ ತ್ಯಾಗಕ್ಕೆ ದ್ವಿಜ ಜಾತಿಗಳು ಸಿದ್ಧವಿಲ್ಲ ಮತ್ತು ಅವರ ಮೇಲೆ ತೆರಿಗೆಗಳನ್ನು ವಿಧಿಸಲು ಸರ್ಕಾರಗಳು ಸಿದ್ಧವಿಲ್ಲ.

ಈಗಾಗಲೆ ಸಂಶೋಧನೆಗಳು ತೋರಿಸುತ್ತಿರುವಂತೆ ಸ್ವಾತಂತ್ರ್ಯೋತ್ತರ ಕಾಲಾವಧಿಯಲ್ಲಿ ಬ್ರಾಹ್ಮಣರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಪ್ರಾಬಲ್ಯವು ಉಲ್ಬಣಗೊಳ್ಳುತ್ತಾ ನಡೆದಿದೆ ಎಂಬುದು ದೃಢಪಡುತ್ತಿದೆ. ಒಂದು ಅಧ್ಯಯನವು ತೋರಿಸುತ್ತಿರುವಂತೆ ಬ್ರಾಹ್ಮಣರ ಮಾನವ ಬಂಡವಾಳದ ಪ್ರಮಾಣ ಪ. ಜಾ. ಸಮುದಾಯಗಳ ಮಾನವ ಬಂಡವಾಳದ ಪ್ರಮಾಣಕ್ಕಿಂತ ಎರಡು-ಮೂರು ಪಟ್ಟು ಅಧಿಕವಾಗಿದೆ. ಉದಾ. ಶಾಲಾ ವರ್ಷಗಳನ್ನು ತೆಗೆದುಕೊಂಡರೆ ಬ್ರಾಹ್ಮಣರಲ್ಲಿ ಇದು 9.5 ವರ್ಷಗಳಿದ್ದರೆ ಪ. ಜಾ. ಮತ್ತು ಪ. ಪಂ. ಗಳಲ್ಲಿ ಇದು 4.7 ವರ್ಷಗಳು. ಬ್ರಾಹ್ಮಣರ ಸಾಕ್ಷರತಾ ಪ್ರಮಾಣ ಶೇ. 87 ರಷ್ಟಿದ್ದರೆ ದಲಿತರರಲ್ಲಿ ಇದು ಶೇ. 53 ಮತ್ತು 12 ಶಾಲಾ ವರ್ಷಗಳನ್ನು ಪೂರೈಸಿದ ಮಕ್ಕಳ ಪ್ರಮಾಣ ಬ್ರಾಹ್ಮಣ ವರ್ಗದಲ್ಲಿ ಶೇ. 41 ರಷ್ಟಿದ್ದರೆ ಪ. ಜಾ ಮತ್ತು ಪ. ಪಂ ದಲ್ಲಿ ಅಂತಹ ಮಕ್ಕಳ ಪ್ರಮಾಣ ಶೇ. 13(ವಿವರಗಳಿಗೆ ನೋಡಿ: ದಿ ಪ್ರಿಂಟ್. ಅಶ್ವಿನಿ ದೇಶಪಾಂಡೆ ಮತ್ತು ರಾಜೇಶ್ ರಾಮಚಂದ್ರನ್. 10 ಅಕ್ಟೋಬರ್ 2021). ಜಾತಿಗಣತಿಯಿಂದ ಮಂಡಲ್ ವರದಿಯಲ್ಲಿ ಅಂದಾಜು ಮಾಡಿರುವ ಒಬಿಸಿ ಜನಸಂಖ್ಯೆಯು ಶೇ. 52 ಕ್ಕಿಂತ ಅಧಿಕವಾಗಬಹುದು. ಆಗ ಅವರಿಗೆ ನೀಡಿರುವ ಶೇ. 27 ಮೀಸಲಾತಿಯನ್ನು ಹೆಚ್ಚಿಸಬೇಕಾಗಬಹುದು. ಆದರೆ ಸರ್ವೋಚ್ಛ ನ್ಯಾಯಾಲಯವು ಮೀಸಲಾತಿಗೆ ಶೇ. 50 ರ ಮಿತಿಯನ್ನು ವಿಧಿಸಿದೆ. ಆದರೆ ಬ್ರಾಹ್ಮಣ ವರ್ಗಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಂವಿಧಾನದ ಮೀಸಲಾತಿ ತತ್ವಕ್ಕೆ ವಿರೋಧವಾಗಿ ಅವರು ಕೇಳದಿದ್ದರೂ, ಚಳುವಳಿಗಳನ್ನು ಮಾಡದಿದ್ದರೂ ಈಡಬ್ಲುಎಸ್‌ಗೆ ಶೇ. 10 ರಷ್ಟು ಮೀಸಲಾತಿ ಸರ್ಕಾರ ನೀಡಿದೆ. ಇದು ಈಗಿರುವ ಮೀಸಲಾತಿ ಪ್ರಮಾಣವನ್ನು ಸೇರಿಸಿದರೆ ಮೀಸಲಾತಿ ಮಿತಿ ಶೇ. 50 ಮೀರುತ್ತದೆ. ಆದರೆ ಇದರ ಬಗ್ಗೆ ಸರ್ಕಾರವು ಯೋಚನೆ ಮಾಡಿಲ್ಲ ಮತ್ತು ನ್ಯಾಯಾಲಯಗಳು ಪ್ರಶ್ನೆ ಮಾಡಿಲ್ಲ.

ಜಾತಿಗಣತಿಯು ಏಕೆ ಮುಖ್ಯ ಎಂಬುದನ್ನು ಜನಗಣತಿಯ ಮಹತ್ವದ ಆಧಾರದ ಮೇಲೆ ತಿಳಿದುಕೊಳ್ಳಬಹುದು. ಜನಗಣತಿ ವರದಿಗಳಲ್ಲಿನ ಮಾಹಿತಿಯು ಅನೇಕ ಅಭಿವೃದ್ಧಿ ಯೋಜನೆಗಳಿಗೆ ಆಧಾರವಾಗಿದೆ. ಜನಗಣತಿ ವರದಿಗಳು ಡೇಟಾ ಕಣಜಗಳಾಗಿವೆ. ಇಡೀ ಜಗತ್ತಿನಲ್ಲಿ ನಮ್ಮ ಜನಗಣತಿ ವರದಿಗಳಿಗೆ ಮಾನ್ಯತೆಯಿದೆ. ಇದೇ ರೀತಿಯಲ್ಲಿ ಜಾತಿಗಣತಿ ನಡೆಸಿದರೆ ಅಲ್ಲಿ ದೊರೆಯುವ ಮಾಹಿತಿಯಿಂದ ನಮ್ಮ ಅನೇಕ ಅಭಿವೃದ್ಧಿ ಯೋಜನೆಗಳನ್ನು ಮರುರೂಪಿಸಬಹುದು, ಹೊಸ ಯೋಜನೆಗಳನ್ನು ಕಟ್ಟಬಹುದು. ಆದರೆ ಡೇಟಾ ಬಗ್ಗೆ ಇಂದಿನ ಆಳುವ ವರ್ಗಕ್ಕೆ ವಿಶ್ವಾಸವಿಲ್ಲ ಎಂಬುದು ಬೇರೆ. ಆದ್ದರಿಂದ ಜಾತಿಗಣತಿಯ ನಿರ್ವಹಣೆಯನ್ನು ಸರ್ಕಾರದ ಬೇರೆ ಬೇರೆ ಇಲಾಖೆಗಳಿಗೆ ವಹಿಸದೆ(2011ರ ಸಾಮಾಜಿಕ-ಶೈಕ್ಷಣಿಕ ಗಣತಿಯನ್ನು ಮೂರು ಇಲಾಖೆಗಳಿಗೆ ವಹಿಸಲಾಗಿತ್ತು) ಜನಗಣತಿ ನಡೆಸುವ ಒಕ್ಕೂಟ ಸರ್ಕಾರದ ಗೃಹ ಸಚಿವಾಲಯದಡಿಯಲ್ಲಿರುವ ರಿಜಿಸ್ಟ್ರಾರ್ ಜನರಲ್ ಆಂಡ್ ಸೆನ್ಸಸ್ ಕಮೀಷನರ್ ಅವರಿಗೆ ವಹಿಸಿಕೊಡಬೇಕು.

ಜಾತಿಗಣತಿಯಲ್ಲಿನ ಒಂದು ಅಪಾಯ

ಜಾತಿಗಣತಿ ಬಗ್ಗೆ ಪ್ರತಾಪ್ ಭಾನು ಮೆಹತಾ ಮುಂತಾದ ತಜ್ಞರು ವ್ಯಕ್ತಪಡಿಸುತ್ತಿರುವಂತೆ ಒಂದು ಅಪಾಯವಿದೆ. ಅಭಿವೃದ್ಧಿಯನ್ನು ಜಾತಿವಾರು ಹಂಚಲು ಸಾಧ್ಯವಿಲ್ಲ. ಜಾತಿಗಣತಿಯು ಇಂತಹ ಬೇಡಿಕೆಗೆ ಅನುವು ಮಾಡಿಕೊಡಬಹುದು ಎಂಬ ಆತಂಕವನ್ನು ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಇದರಲ್ಲಿ ಸತ್ಯಾಂಶವಿದೆ. ಪ್ರತಿ ಜಾತಿಯೂ ಅಭಿವೃದ್ದಿಯಲ್ಲಿ ತನ್ನ ಜನಸಂಖ್ಯೆಗೆ ಅನುಗುಣವಾಗಿ ಪಾಲು ಕೇಳುವುದು ತಪ್ಪಲ್ಲ. ಆದರೆ ಇದನ್ನು ಅನುಷ್ಠಾನಗೊಳಿಸುವುದು ಕಷ್ಟಸಾಧ್ಯ. ಆದರೆ ಇದಕ್ಕೆ ಪರಿಹಾರ ಜಾತಿಗಣತಿಯನ್ನು ತಿರಸ್ಕರಿಸುವುದಲ್ಲ. ಪ್ರತಿಯಾಗಿ ಅಭಿವೃದ್ಧಿಯನ್ನು ಸಾರ್ವತ್ರೀಕರಿಸಲು (ಯೂನಿವರ್ಸಲೈಸೇಷನ್ ಆಫ್ ಡೆವಲಪ್‌ಮೆಂಟ್) ತೀವ್ರ ಪ್ರಯತ್ನ ನಡೆಸಬೇಕು. ಕಳೆದ 70 ವರ್ಷಗಳಲ್ಲಿ ನಮಗೆ ಇದು ಸಾಧ್ಯವಾಗಿಲ್ಲ. ಉಳ್ಳವರ ಹಿತಾಸಕ್ತಿಗಳನ್ನು ಪೂರೈಸುವ ಪ್ರಯತ್ನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆಯೇ ವಿನಾ ಉಳಿದವರಿಗೆ ಅದು ಹೆಚ್ಚು ದೊರೆಯುವಂತೆ ಮಾಡುವುದು ನಮಗೆ ಸಾಧ್ಯವಾಗಿಲ್ಲ. ಸಾಮಾಜಿಕ ನ್ಯಾಯವನ್ನು ಸಾಧಿಸಿಕೊಳ್ಳಲು ಜಾತಿಗಣತಿ ಆ ಮೂಲಕ ಸಮಾನತಾ ಕಾರ್ಯಸೂಚಿ ಒಂದು ಮಾರ್ಗ. ಇದಕ್ಕೆ ಪರ್ಯಾಯವೆಂದರೆ ಅಭಿವೃದ್ಧಿಯನ್ನು ಸಾರ್ವತ್ರೀಕರಣಗೊಳಿಸುವುದು.

Donate Janashakthi Media

Leave a Reply

Your email address will not be published. Required fields are marked *