ಜಾತಿ ತಾರತಮ್ಯ ತಡೆಯುವಲ್ಲಿ ಸರ್ಕಾರ ವಿಫಲ-ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಬೆಂಗಳೂರು: ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರವ ಸರ್ಕಾರಗಳು ದಲಿತರ ಮೇಲಿನ ದೌರ್ಜನ್ಯ, ಜಾತಿ ತಾರತಮ್ಯವನ್ನು ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿದೆ. ಪ್ರತಿದಿನವೂ ಒಂದಲ್ಲ ಒಂದು ಪ್ರದೇಶದಲ್ಲಿ ದಲಿತರ ಮೇಲೆ ಹಲ್ಲೆ ದಾಳಿಗಳು ನಡೆಯುತ್ತಿಲೇ ಇವೆ. ಇದರಿಂದ ನೆಮ್ಮದಿಯ ಬದುಕು ಹಾಳಾಗುತ್ತಿವೆ ಎಂದು ದಲಿತ ಹಕ್ಕುಗಳ ಸಮಿತಿ-ಕರ್ನಾಟಕ(ಡಿಹೆಚ್‌ಎಸ್‌) ರಾಜ್ಯ ಸಂಚಾಲಕ ಗೋಪಾಲಕೃಷ್ಣ ಅರಳಹಳ್ಳಿ ಆರೋಪಿಸಿದರು.

ದೇಶದಲ್ಲಿ ಮತ್ತು ಕರ್ನಾಟಕದಲ್ಲಿ ದಲಿತರ ಮೇಲೆ ನಿರಂತರವಾಗಿ ಹೆಚ್ಚುತ್ತಿರುವ ದೌರ್ಜನ್ಯಗಳನ್ನು ವಿರೋಧಿಸಿ ದಲಿತರು, ಕೃಷಿ ಕೂಲಿಕಾರರು, ಆದಿವಾಸಿಗಳು ದೇಶವ್ಯಾಪಿ ಪ್ರತಿಭಟನೆಯ ಕರೆಯ ಭಾಗವಾಗಿ ಬೆಂಗಳೂರು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು ಧರಣಿಯಲ್ಲಿ ಉದ್ದೇಶಿಸಿ ಗೋಪಾಲಕೃಷ್ಣ ಅರಳಹಳ್ಳಿ ಮಾತನಾಡಿ, ಇತ್ತೀಚಿಗೆ ಕೋಲಾರ, ಹಾವೇರಿ, ಚಾಮರಾಜನಗರ, ಮಂಡ್ಯ ಸೇರಿದಂತೆ ಹಲವು ಕಡೆಗಳಲ್ಲಿ ದಲಿತರನ್ನು ಹೀನಾಯವಾಗಿ ನಡೆದುಕೊಳ್ಳಲಾಗುತ್ತಿದೆ. ಅಲ್ಲದೆ, ಹಲ್ಲೆ, ದೌರ್ಜನ್ಯ, ಬಹಿಷ್ಕಾರದಂತಹ ಪ್ರಕರಣಗಳು ಜರುಗುತ್ತಿವೆ. ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನಲ್ಲಿ ಅಂತರ್‌ಜಾತಿ ವಿವಾಹಿತ ದಂಪತಿಗಳನ್ನು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ದಿನದಂದು ಊರೊಳಗೆ ಬರದಂತೆ ತಡೆದು ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ನಡೆದಿದೆ.

ಇದನ್ನು ಓದಿ: ಕೊಪ್ಪಳದಲ್ಲಿ ನಿಲ್ಲದ ‘ದಲಿತರ ಮೇಲೆ ದೌರ್ಜನ್ಯ’ : ಮಹಿಳೆಯ ಮೇಲೆ ಚಪ್ಪಲಿಯಿಂದ ಹಲ್ಲೆ

ಅದೇ ರೀತಿ ಹಲವು ವರ್ಷಗಳ ಹೋರಾಟದ ಫಲವಾಗಿ ಜಾರಿಗೆ ಬಂದಿರುವ ಎಸ್ಸಿಪಿ/ಟಿಎಸ್ಪಿ ಉಪಯೋಜನೆಯೂ ದಲಿತ ಸಮುದಾಯದ ಏಳಿಗೆಗಾಗಿ ಕಾರ್ಯನಿರ್ವಹಿಸುತ್ತಿಲ್ಲ. ಬದಲಾಗಿ ಬಿಡುಗಡೆಯಾದ ಹಣ ಸಮರ್ಪಕವಾಗಿ ಬಳಕೆಯಾಗದೇ ಅನಾವಶ್ಯಕ ಖರ್ಚುಗಳನ್ನು ಮಾಡಲಾಗುತ್ತಿದೆ. ಟೆಂಡರ್‌ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮಗಳು ಜರುಗಿದ್ದು ಅವುಗಳೆಲ್ಲವನ್ನೂ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ಈ ಯೋಜನೆಯನ್ನು ಮರುಸ್ಥಾಪಿಸಿ, ಆದ್ಯತೆಯ ಪ್ರಶ್ನೆಗಳಾದ ಶಿಕ್ಷಣ, ಉದ್ಯೋಗ ಹಾಗೂ ವಸತಿ ಯೋಜನೆಗಳಿಗಾಗಿ ಕ್ರಮಗಳನ್ನು ಅನುಸರಿಸಬೇಕೆಂದು ಆಗ್ರಹಿಸಿದರು.

ಬಿಜೆಪಿ ಪಕ್ಷವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅತಿ ಹೆಚ್ಚಿನ ದೌರ್ಜನ್ಯಗಳು ನಡೆಯುತ್ತಿದೆ. 2011ರಲ್ಲಿ 33719 ಪ್ರಕರಣಗಳು ದಾಖಲಾಗಿದ್ದವು. ಆದರೆ 2020ರ ಆ ಸಂಖ್ಯೆ ಅಧಿಕಗೊಂಡು 50291ಕ್ಕೆ ಏರಿಕೆಯಾಗಿರುವುದು ಅಘಾತಕಾರಿ ಅಂಶ ಎಂದು ತಿಳಿಸಿದ ಗೋಪಾಲಕೃಷ್ಣ ಅರಳಹಳ್ಳಿ ಅವರು, ದಲಿತ ಮಹಿಳೆಯರು, ಯುವತಿಯರ ಮೇಲೆ ಅತ್ಯಾಚಾರ-ಕೊಲೆಯಂತಹ ಪ್ರಕರಣಗಳು ಹೆಚ್ಚಳವಾಗುತ್ತಿವೆ ಎಂದು ಹೇಳಿದರು.

ಇದನ್ನು ಓದಿ: ಗದಗದಲ್ಲಿ ದಲಿತ ಕುಟುಂಬಗಳಿಗೆ ಬಹಿಷ್ಕಾರ; ದೇವಸ್ಥಾನ ಪ್ರವೇಶವಿಲ್ಲ, ಹೋಟೆಲು ಕಿರಾಣಿಗೂ ಹೋಗುವಂತಿಲ್ಲ

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ(ಎಐಎಡಬ್ಲ್ಯೂಯು) ರಾಜ್ಯಾಧ್ಯಕ್ಷ ಎಂ. ಪುಟ್ಟಮಾಧು ಮಾತನಾಡಿ, ಇಂದು ದೇಶದ ಎಲ್ಲಾ ಕಡೆಗಳಲ್ಲಿ ಏಕಕಾಲಕ್ಕೆ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಹೆಚ್ಚುತ್ತಿರುವ ದೌರ್ಜನ್ಯ ಹಾಗೂ ಹಿಂಸಾತ್ಮಕ ಪ್ರಕರಣಗಳನ್ನು ತಡೆಯುವಲ್ಲಿ ಸರ್ಕಾರಗಳು ವಿಫಲವಾಗಿದ್ದು, ಸೂಕ್ತ ಕ್ರಮಗಳನ್ನು ಅನುಸರಿಸಬೇಕೆಂದು ಆಗ್ರಹಿಸಲಾಗುತ್ತಿದೆ. ಇಂದು ದೇಶದಲ್ಲಿ ಕೃಷಿರಂಗದಲ್ಲಿ ಕೂಲಿಕಾರರಾಗಿ ದುಡಿಮೆ ಮಾಡುವವರಲ್ಲಿ ದಲಿತರೇ ಹೆಚ್ಚಾಗಿದ್ದು ಅವರಲ್ಲಿ ಬಹುತೇಕರಿಗೆ ಒಂದಿಂಚೂ ಭೂಮಿ ಇಲ್ಲದೆ, ದುಡಿಮೆ ಮಾಡಿ ಜೀವನ ನಡೆಸುತ್ತಿದ್ದಾರೆ. ಒಂದೆಡೆ ಕೇಂದ್ರದ ಬಿಜೆಪಿ ಸರ್ಕಾರ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಾಗಿ ಮೀಸಲಿಟ್ಟ ಹಣವನ್ನು ವರ್ಷದಿಂದ ವರ್ಷಕ್ಕೆ ಕಡಿತ ಮಾಡುತ್ತಾ ಬಂದಿದೆ. ಈ ವರ್ಷದ ಬಜೆಟ್‌ನಲ್ಲಿ  ಸುಮಾರು 29 ಸಾವಿರ ಕೋಟಿಯಷ್ಟು ಮೊತ್ತವನ್ನು ಕಡಿತ ಮಾಡಿದೆ. ಇದರಿಂದ ಕೂಲಿ ದರ ಕಡಿತದೊಂದಿಗೆ ಉದ್ಯೋಗದ ವಂಚನೆಯೂ ಆಗುತ್ತಿದೆ. ಕೃಷಿ ಕೂಲಿಕಾರರ ಬದುಕು ಹೀನಾಯ ಸ್ಥಿತಿಗೆ ತಲುಪಿದೆ ಎಂದು ಆರೋಪಿಸಿದರು.

ಎಸ್‌.ಸಿ./ಎಸ್‌.ಟಿ. ಸರ್ಕಾರಿ ನೌಕರರ ಸಮನ್ವಯ ಸಮಿತಿ ರಾಜ್ಯ ಅಧ್ಯಕ್ಷ ಟಿ. ಶಿವಶಂಕರ್‌ ಮಾತನಾಡಿ, ಜಾತಿ ದೌರ್ಜನ್ಯ ಪ್ರಕರಣಗಳು ದೇಶದಲ್ಲಿ ಹೆಚ್ಚಳವಾಗುತ್ತಿದೆ. ಒಂದೆಡೆ ಲಕ್ಷಾಂತರ ಪ್ರಮಾಣದಲ್ಲಿ ಸರ್ಕಾರಿ ಹುದ್ದೆಗಳು ಖಾಲಿ ಉಳಿದಿವೆ. ಸರ್ಕಾರವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸುತ್ತಿಲ್ಲ. ಮತ್ತೊಂದೆಡೆ ಲಕ್ಷಾಂತರ ವಿದ್ಯಾವಂತ ಯುವಜನತೆ ಉದ್ಯೋಗಕ್ಕಾಗಿ ಅಲೆದಾಡುವ ಧಾರುಣ ಸ್ಥಿತಿ ಎದುರಾಗಿದೆ. ಸರ್ಕಾರದ ಮಟ್ಟದಲ್ಲಿ ದಲಿತ ಸಮುದಾಯದ ನೌಕರರಲ್ಲಿ ಜಾತಿ ತಾರತಮ್ಯದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ನೌಕರರು ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಇಂಥವುಗಳು ಜರುಗದಂತೆ ತಡೆಯುವ ನಿಟ್ಟಿನಲ್ಲಿ ಕಾಯ್ದೆಗಳನ್ನು ಬಲಪಡಿಸಬೇಕು ಮತ್ತು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಗಳು ಜರುಗಿಸಬೇಕೆಂದು ಆಗ್ರಹಿಸಿದರು.

ಇದನ್ನು ಓದಿ: ದಲಿತ ಯುವಕನ ಸಾವಿಗೆ ನ್ಯಾಯ : ಕೋಲಾರ ಚಲೋ ಮೂಲಕ ಆಗ್ರಹ

ದಲಿತ ಸಂಘರ್ಷ ಸಮಿತಿ (ಭೀಮಾವಾದ) ರಾಜ್ಯ ಅಧ್ಯಕ್ಷ ಆರ್‌. ಮೋಹನ್‌ ರಾಜ್‌ ಮಾತನಾಡಿ, ಜಾತಿ ತಾರತಮ್ಯ ಮತ್ತು ದೌರ್ಜನ್ಯದಂತಹ ಪ್ರಕರಣಗಳಲ್ಲಿಯೂ ತಾರತಮ್ಯ ಮಾಡಲಾಗುತ್ತಿದೆ. ರಾಯಚೂರಿನಲ್ಲಿ ನ್ಯಾಯಾಧೀಶರೊಬ್ಬರು ಡಾ. ಅಂಬೇಡ್ಕರ್‌ ಭಾವಚಿತ್ರಕ್ಕೆ ಅವಮಾನ ಮಾಡಿ ಅಸ್ಪೃಶ್ಯತೆ ಆಚರಿಸಿದ್ದರೂ ಯಾವುದೇ ಕಾನೂನು ಕ್ರಮ ಜರುಗಿಸಲಿಲ್ಲ. ಕೋಲಾರದಲ್ಲಿ 2022ರ ಸೆಪ್ಟಂಬರ್‌ ತಿಂಗಳಿನಲ್ಲಿ ದಲಿತ ಬಾಲಕ ಚೇತನ ಎಂಬ ಹುಡುಗ ದೇವರ ಗುಜ್ಜರ್‌ ಕೋಲು ಮುಟ್ಟಿದ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಕೋಲಾರದಲ್ಲಿಯೇ ದೇವರ ಜಾತ್ರೆ ತೇರಿನ ಮೆರವಣಿಗೆ ತಮ್ಮ ಕೇರಿಯ ಓಣಿಗೂ ಬರಲಿ ಎಂದು ದಲಿತರು ಆಗ್ರಹಿಸಿದ್ದಕ್ಕಾಗಿ ಸರ್ವಣೀಯರು ದಲಿತರ ಕೇರಿಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಹಾವೇರಿಯಲ್ಲಿ ದಲಿತ ಕುಟುಂಬ ದೇವರ ದರ್ಶನ ಪಡೆದರು ಎಂಬ ವಿಚಾರವಾಗಿ ಸವರ್ಣೀಯರು ಹಲ್ಲೆ ಮಾಡಿರುವ ಘಟನೆ ನಡೆದಿದೆ. ಇಂತಹ ದಾಳಿ ದೌರ್ಜನ್ಯಗಳು ಪ್ರತಿದಿನ ಜರುಗುತ್ತಿದ್ದರೂ, ಆರೋಪಿಗಳ ಮೇಲೆ ಸೂಕ್ತ ಕ್ರಮಜರುಗಿಸದೇ ಅವರ ರಕ್ಷಣೆಗೆ ಸರ್ಕಾರವೇ ನಿಂತಂತೆ ಕಾಣುತ್ತಿದ್ದು, ಇದಕ್ಕೆ ಬಿಜೆಪಿ ಸರ್ಕಾರದ ಕುಮ್ಮಕ್ಕೆ ಕಾರಣವೆಂದು ಹೇಳಿದರು.

ಕರ್ನಾಟಕ ರಾಜ್ಯ ಕೃಷಿಕೂಲಿಕಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ ಮಾತನಾಡಿ, ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳು ಹೋರಾಟದ ಫಲದಿಂದ ಕೇಂದ್ರದ ಬಿಜೆಪಿ ಸರ್ಕಾರ ಹಿಂದಕ್ಕೆ ಪಡೆದಿದ್ದರೂ ಸಹ ಕಾಯ್ದೆಯಲ್ಲಿ ಅಡಕವಾಗಿರುವ ಕೆಲವು ಅಂಶಗಳು ಬೇರೆ ಬೇರೆ ಮಾದರಿಯಲ್ಲಿ ಜಾರಿಯಾಗುತ್ತಿದೆ. ಇದರಿಂದ ರೈತರು ಕೂಲಿಕಾರರು ರಕ್ಷಣೆ ಇಲ್ಲವಾಗುತ್ತಿದೆ. ರಾಜ್ಯದ ಬಿಜೆಪಿ ಸರ್ಕಾರ ಭೂ ಸುಧಾರಣೆ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ, ಇತ್ಯಾದಿ ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿದ್ದು ಇದು ಮುಂದಿನ ದಿನಗಳಲ್ಲಿ ಮಾರಕ ಪರಿಣಾಮ ಬೀರಲಿದೆ ಎಂದರು.

ಇದನ್ನು ಓದಿ: ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶ: ಒಳ ಮೀಸಲಾತಿ ಜಾರಿ ಸೇರಿ 15 ನಿರ್ಣಯ

ದಲಿತರ ಭೂಮಿ ಕಬಳಿಕೆ ತಡೆಯುವ ನಿಟ್ಟಿನಲ್ಲಿ 1978ರಲ್ಲಿ ಪಿಟಿಸಿಎಲ್‌ ಕಾಯ್ದೆಯನ್ನು ಜಾರಿಗೆ ತರಲಾಯಿತು. ಇದರಡಿ ಭೂಮಿ ಮಂಜೂರಾತಿಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯದವರು ಅರ್ಜಿ ಸಲ್ಲಿಸಿದರೆ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಸರ್ಕಾರವು ಎಸ್ಸಿ/ಎಸ್ಟಿ ಕಲ್ಯಾಣ ಸಮಿತಿ ಅಡಿ ಮರುಮಂಜೂರಾತಿ ಕೋರಿ ಅರ್ಜಿ ಸಲ್ಲಿಸಲು ಕಾಲ ಮಿತಿ ಅನ್ವಯಿಸದಂತೆ ಕಾಯಿದೆಯನ್ನು ತಿದ್ದುಪಡಿಗೊಳಿಸಬೇಕು. ದಲಿತ ವಿರೋಧಿ ನೀತಿಯನ್ನು ಆಳುವ ಸರ್ಕಾರಗಳು ಅನುಸರಿಸುತ್ತಿವೆ. ಲಕ್ಷಾಂತರ ದಲಿತರು-ಬಡವರು ಬಗರ್‌ ಹುಕ್ಕುಂ ಉಳುಮೆ ಮಾಡುತ್ತಿದ್ದಾರೆ ಇವರಿಗೆ ಉಳುಮೆ ಚೀಟಿ ನೀಡದ ಸರ್ಕಾರ ವಂಚನೆ ಮಾಡುತ್ತಿದೆ ಎಂದು ತಿಳಿಸಿದರು.

ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ರಾಜ್ಯ ಮುಖಂಡರಾದ ನಿರ್ಮಲ ಮಾತನಾಡಿ, ಜಾತಿ ವ್ಯವಸ್ಥೆಗೆ ಒಳಪಟ್ಟ ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಆರೋಪಕ್ಕೆ ಒಳಗಾದವರೂ ಅಮಾಯಕರಾದರೆ ಆರೋಪಿಗಳಾದ ಬಲಾಢ್ಯರ ರಕ್ಷಣೆಯಾಗುತ್ತದೆ. ಸಾಕ್ಷ್ಯಗಳನ್ನು ನಾಶಮಾಡಲಾಗುತ್ತದೆ. ಪ್ರಕರಣಗಳನ್ನು ವ್ಯವಸ್ಥಿತ ರೀತಿಯಲ್ಲಿ ಮುಚ್ಚಲಾಗುತ್ತದೆ. ಆದರೆ, ಬಲಾಢ್ಯರ ಮೇಲಿನ ದಾಳಿ ನಡೆದರೆ ತನಿಖೆಯೂ ಪೂರ್ಣಗೊಳ್ಳದೆಯೇ ಅಮಾಕರದ ಜೀವಕ್ಕೆ ಹಾನಿ ಮಾಡಲಾಗುತ್ತದೆ ಎಂದು ಹೇಳಿದರು.

ಇದನ್ನು ಓದಿ: ದಲಿತರ ಮೇಲಿನ ದೌರ್ಜನ್ಯ ವಿರೋಧಿ ರಾಷ್ಟ್ರೀಯ ಸಮಾವೇಶಕ್ಕೆ ರಾಜ್ಯದಿಂದ ಹಲವು ಮಂದಿ ಭಾಗಿ

ಪ್ರತಿಭಟನೆಯ ಭಾಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ತಕ್ಷಣ ಕ್ರಮವಹಿಸಬೇಕು, ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಇತ್ಯರ್ಥಪಡಿಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಬಲಪಡಿಸಬೇಕು. ಸಾರ್ವಜನಿಕ ವಲಯದ ಸಂಸ್ಥೆಗಳ ಖಾಸಗೀಕರಣ ನಿಲ್ಲಿಸಬೇಕು. ಎಲ್ಲಾ ಗುತ್ತಿಗೆ ಮತ್ತು ಹಂಗಾಮಿ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಎಸ್ಸಿಪಿ-ಟಿಎಸ್ಪಿ ಉಪಯೋಜನೆಯನ್ನು ಮರುಸ್ಥಾಪಿಸಿ; ಶಿಕ್ಷಣ, ಉದ್ಯೋಗ ಮತ್ತು ವಸತಿ ಯೋಜನೆಗಳನ್ನು ಜಾರಿಗೆ ತರಬೇಕು. ಹೊಸ ಶಿಕ್ಷಣ ನೀತಿ(ಎನ್‌ಇಪಿ) ರದ್ದುಗೊಳಿಸಬೇಕು. ಭೂಮಿತಿ ಕಾಯ್ದೆ ಜಾರಿಗೊಳಿಸಿ, ಭೂರಹಿತರಿಗೆ ಭೂಮಿಯನ್ನು ವಿತರಿಸಬೇಕು. ಆದಿವಾಸಿ ಜನಸಮೂಹಗಳ ಹಕ್ಕುಗಳಿಗೆ ಸಂಪೂರ್ಣ ರಕ್ಷಣೆ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೂ ಅನ್ವಯಿಸಿ ಜಾರಿಗೆ ತರಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಗಿದೆ.

ಸರ್ಕಾರದ ಪರವಾಗಿ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶ್‌ ಭಾಗವಹಿಸಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಇಲಾಖೆಯನ್ನು ಭೇಟಿ ಮಾಡಬಹುದು. ಸಮಸ್ಯೆಗಳ ಪರಿಹಾರದ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು. ಮುಂಬರುವ ದಿನದಲ್ಲಿ ಕೂಡಲೇ ಎಲ್ಲಾ ಸಂಘಟನೆಗಳು ಒಳಗೊಂಡ ಸಭೆಯೊಂದನ್ನು ನಿಗದಿಪಡಿಸಲಾಗುವುದು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿ ರಾಜ್ಯ ಮುಖಂಡರಾದ ಎನ್‌. ನಾಗರಾಜ್‌, ಎನ್‌. ರಾಜಣ್ಣ, ಹೆಚ್‌.ಜಿ. ನಾಗಣ್ಣ, ಕೃಷ್ಣ(ಮಂಡ್ಯ), ಮಂಗಳ, ಕವಿತಾ, ಕೃಷಿ ಕೂಲಿಕಾರರ ಸಂಘಟನೆಯ ನಿತ್ಯಾನಂದಸ್ವಾಮಿ, ಜಿ.ಎನ್‌.ನಾಗರಾಜ್‌, ಹನುಮೇಗೌಡ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಮುಖಂಡರಾದ ಎಸ್‌.ವೈ.ಗುರುಶಾಂತ್‌, ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ(ಎಐಎಆರ್‌ಎಲ್‌ಎ) ಮುಖಂಡರಾದ ನಾಗರಾಜ ಪೂಜಾರ್‌, ನಿರ್ಮಲ, ಎಐಎಸ್‌ಎ ರಾಜ್ಯ ಅಧ್ಯಕ್ಷ ಸಾಯಿ ಬಾಲಾಜಿ, ಮತ್ತಿತರರು ಭಾಗವಹಿಸಿದ್ದರು.

ಇದನ್ನು ಓದಿ: ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ ಏಕೆ?

ದಲಿತ ಹಕ್ಕುಗಳ ಸಮಿತಿ-ಕರ್ನಾಟಕ(ಡಿಎಸ್‌ಎಂಎಂ), ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ(ಎಐಎಡಬ್ಲ್ಯೂಯು), ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ(ಎಐಡಿಆರ್‌ಎಂ), ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ(ಎಐಎಆರ್‌ಎಲ್‌ಎ), ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ), ದಲಿತ ಸಂಘರ್ಷ ಸಮಿತಿ(ಭೀಮಾವಾದ), ಎಸ್‌.ಸಿ./ಎಸ್‌.ಟಿ. ಸರ್ಕಾರಿ ನೌಕರರ ಸಮನ್ವಯ ಸಮಿತಿ, ಹಾಗೂ ಕರ್ನಾಟಕ ಆದಿವಾಸಿ ಹಕ್ಕುಗಳು ಸಮನ್ವಯ ಸಮಿತಿ ಸಂಘಟನೆಯ ಮುಖಂಡರು ಕಾರ್ಯಕರ್ತರು ಧರಣಿಯಲ್ಲಿ ಭಾಗವಹಿಸಿದ್ದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *