ಜಾತಿ ಕೇಸರಿಯನ್ನು ದೂರತಳ್ಳಿ ಪ್ರಜಾಪ್ರಭುತ್ವದ ಆತ್ಮವನ್ನು ನೆಲೆಗೊಳಿಸಬೇಕಿದೆ

ಸುಗತ ಶ್ರೀನಿವಾಸರಾಜು

ರಾಜಕೀಯದಲ್ಲಿ ಜಾತೀಯ ಮಠಗಳ ಪ್ರಭಾವವನ್ನು ಕೊನೆಗೊಳಿಸಿ ಅವುಗಳ ಉದಾತ್ತ ಮನೋಭಾವದ ಮಾರ್ಗಗಳಿಗೆ ಹಿಂದಿರುಗಿಸುವ ಕಾಲ ಈಗ ಕರ್ನಾಟಕದ ರಾಜಕೀಯ ಪಕ್ಷಗಳಿಗೆ ಮತ್ತು ರಾಜಕಾರಣಿಗಳಿಗೆ ಕೂಡಿಬಂದಿದೆ.

ಬಿಕ್ಕಟ್ಟನ್ನು ಎಂದಿಗೂ ವ್ಯರ್ಥಗೊಳಿಸಬಾರದು ಎನ್ನುವುದು ಸಾಂಪ್ರದಾಯಿಕ ವಿವೇಕ. ಅದನ್ನು ಸುಧಾರಣೆಗೆ ದೊರೆತ ಅವಕಾಶವೆಂದು ಕಾಣಬೇಕು. ಕರ್ನಾಟಕದ ಅತ್ಯಂತ ದೊಡ್ಡ ಮಠದ ಸ್ವಾಮಿಗಳಲ್ಲೊಬ್ಬರು ಕಿರುವಯಸ್ಸಿನ ಹೆಣ್ಣು ಮಕ್ಕಳೊಂದಿಗಿನ ಲೈಂಗಿಕ ಅತ್ಯಾಚಾರದ ಆರೋಪದ ಮೇಲೆ ಬಂಧನಕ್ಕೆ ಒಳಗಾದ ನಂತರ, ರಾಜ್ಯದಲ್ಲಿನ ಜಾತೀಯ ಮಠಗಳ ಕತ್ತಲೆ ಜಗತ್ತು ಮತ್ತು ಅವುಗಳು ಹೊಂದಿದ್ದ ಅಗಾಧವಾದ ಅಧಿಪತ್ಯದತ್ತ ಈಗ ಗಮನ ಹರಿದಿದೆ. ಪ್ರಾಯಶಃ ಸಮತೋಲನವನ್ನು ಮರುಸ್ಥಾಪಿಸುವ ಸಮಯ ಈಗ ಒದಗಿಬಂದಿದೆ.

ಪೀಡಿತ ಹುಡುಗಿಯರು ದೂರು ಸಲ್ಲಿಸಿ ಸಾರ್ವಜನಿಕ ಆಕ್ರೋಶ ಆ ಕೂಡಲೇ ಹೊರಬಿದ್ದಾಗ, ಸಾಮಾನ್ಯವಾಗಿ ಟ್ವಿಟರ್ ಮುಂತಾದ ತಮ್ಮ ಸಾಮಾಜಿಕ ಮಾಧ್ಯಮಗಳ ದಾಳಿಕೋರರ ಮೂಲಕ ತಕ್ಷಣದಲ್ಲೇ ಪ್ರತಿಕ್ರಿಯಿಸುತ್ತಿದ್ದ ಪ್ರಮುಖ ರಾಜಕಾರಣಿಗಳು ಮೌನಕ್ಕೆ ಶರಣಾಗಿದ್ದಾರೆ. ನೈತಿಕ ತಳಮಳ ಅನ್ನುವುದು ರಾಜಕಾರಣಿಗಳಲ್ಲಿ ಸುಲಭವಾಗಿ ಸಿಗುವಂಥಾದ್ದಲ್ಲ, ಆದರೆ ಈ ಪ್ರಕರಣದಲ್ಲಿ, ಕರ್ನಾಟಕದ ರಾಜಕಾರಣಿಗಳಿಗೆ ಅದೊಂದು ರೀತಿಯ ಮೌನಸೂತ್ರವಾಗಿದೆ. ಅವರು ತಮ್ಮ ಪದಗಳನ್ನು ವಿವೇಚನೆಯಿಂದ ಬಳಸುತ್ತಾರೆ ಮಾತ್ರವಲ್ಲ ನಿರ್ಭಾವುಕರಾಗಿ ಓಟುಗಳನ್ನು ಲೆಕ್ಕಹಾಕುತ್ತಿರುತ್ತಾರೆ. ಜಾತೀಯ ಮಠಗಳು ತಮ್ಮ ಪ್ರಭಾವ ವಲಯಗಳಲ್ಲಿ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗೆ ಅನುಕೂಲಕರವಾದ ಅಥವಾ ಮಾರಕವಾದ ಬೆಂಬಲದ ವಾತಾವರಣ ಸೃಷ್ಟಿಸುತ್ತಾರೆಂಬ ಸಂಗತಿ ಎಲ್ಲರಿಗೂ ತಿಳಿದದ್ದೇ. ಇನ್ನು ಕೆಲವೇ ತಿಂಗಳಲ್ಲಿ ವಿಧಾನ ಸಭಾ ಚುನಾವಣೆ ಬೇರೆ ಇದೆ.

ಪ್ರಮುಖ ರಾಜಕಾರಣಿಗಳಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಂದು ಅಪವಾದ. ಅವರು ಮಾತನಾಡಿದರು ಆದರೆ ಅವರು ಸ್ವಾಮಿಗಳ ನಿಷ್ಕಳಂಕತೆ ಹಾಗೂ ವ್ಯಕ್ತಿತ್ವವನ್ನು ಕುರುಡಾಗಿ ಸಮರ್ಥಿಸಿದರು. ತನಿಖೆ ಇನ್ನೂ ಆರಂಭವೇ ಆಗಿರಲಿಲ್ಲ. ಬಿಜೆಪಿ ಸಂಸದೀಯ ಸಮಿತಿಯ ಸದಸ್ಯರಾದ ಅವರು ಯಾವುದೇ ಮುಜುಗರವಿಲ್ಲದೇ ತಮ್ಮ ಜಾತಿಯ ಸ್ವಾಮಿಯನ್ನು ಸಮರ್ಥಿಸುವುದು ತನ್ನ ಕರ್ತವ್ಯ ಎನ್ನುವಂತೆ ಭಾವಿಸಿದರು. ದೇಶದ ಕಾನೂನಾಗಲೀ ಅಥವಾ ಸಾಂವಿಧಾನಿಕ ಪ್ರಜ್ಞೆಯಾಗಲೀ ಅವರನ್ನು ನಿರ್ಬಂಧಿಸಲಿಲ್ಲ.

ಕರ್ನಾಟಕದ ಚುನಾವಣಾ ಯಶಸ್ಸಿಗಾಗಿ ಜಾತಿ ಅಸ್ಮಿತೆಯ ರಾಜಕೀಯವನ್ನು ಮಿತಿಮೀರಿ ಬಳಸಲಾಗುತ್ತಿದೆ ಮತ್ತು ಅದು ಪ್ರಜಾಪ್ರಭುತ್ವವನ್ನು ಬಹಳ ಮಟ್ಟಿಗೆ ಕಟ್ಟಿಹಾಕಿದೆ. ಭಾರತದ ಉಳಿದೆಡೆಗಳಲ್ಲಿ ಮಂಡಲ್ ಕ್ರಾಂತಿಯು ರಾಜಕೀಯದಾಟವನ್ನು ಬದಲಾಯಿಸುವ ಮುಂಚೆಯೇ, ದೇವರಾಜ್ ಅರಸುರವರು 1970 ರಲ್ಲೇ ಕರ್ನಾಟಕದ ಎರಡು ಪ್ರಬಲ ಕೋಮುಗಳಾದ ಒಕ್ಕಲಿಗರು ಮತ್ತು ಲಿಂಗಾಯತರನ್ನು ಕಟ್ಟಿಹಾಕಲು ಹಿಂದುಳಿದ ಜಾತಿಗಳನ್ನು ಅಣಿನೆರೆಸಿದರು. ಅರಸರು ಮಾಡಿದ್ದು ಶುದ್ಧ ರಾಜಕೀಯ ತಂತ್ರವಾದರೆ, ಬಿ ಎಸ್ ಯಡಿಯೂರಪ್ಪನವರು ಹೊಸ ಸಹಸ್ರಮಾನದಿಂದಲೇ ಜಾತಿ ದಂಧೆಗೆ ಸಮಗ್ರವಾದ ಹೊಸ ಆಯಾಮವನ್ನೇ ನೀಡಿದರು. ಹಿಂದುಳಿದ ವರ್ಗದ ಜಾತಿಗಳ ಮತವನ್ನು ವಶಪಡಿಸಿಕೊಳ್ಳಲು ನೇರವಾಗಿ ಜಾತಿ ಕೇಸರೀಕರಣವನ್ನು ಬಳಸಿದರು. ಅವರು ಯಾವುದೇ ಹಿಂಜರಿಕೆಯಿಲ್ಲದೆ ರಾಜಕಾರಣಿಗಳು ಹಾಗೂ ರಾಜಕೀಯ ಪಕ್ಷಗಳನ್ನು ಬಳಸಿಕೊಳ್ಳಲು ಎಲ್ಲಾ ಜಾತೀಯ ಮಠಗಳಿಗೆ ಅಧಿಕಾರ ನೀಡಿದರು.

ಲಿಂಗಾಯತರು ಅದಾಗಲೇ ಸಂಘಟಿತರಾಗಿದ್ದರು. ಅವರ ಮಠಗಳು ಶತಮಾನಗಳಿಂದಲೇ ಕ್ರಿಯಾಶೀಲವಾಗಿದ್ದವು ಮತ್ತು ಸ್ವಾಯತ್ತವಾಗಿದ್ದವು ಹಾಗೂ ಮೇಲ್ಜಾತಿಯ ಹಿಂದೂಗಳಿಂದ ಮತ್ತು ವೈದಿಕ ಸಂಪ್ರದಾಯಗಳಿಂದ ದೂರವಿದ್ದವು. ಒಕ್ಕಲಿಗರು ಇಪ್ಪತ್ತನೇ ಶತಮಾನದ ಕೊನೆ ಭಾಗದಲ್ಲಿ ಲಿಂಗಾಯತರನ್ನು ಅನುಕರಿಸಿದರು. ಆದರೆ ಯಡಿಯೂರಪ್ಪನವರು ತನಗೆ ಹಾಗೂ ಬಿಜೆಪಿಗೆ ವಿಶಾಲ ನೆಲೆ ಸ್ಥಾಪಿಸಿಕೊಳ್ಳುವ ಸಲುವಾಗಿ ಹಿಂದುಳಿದವರಿಗೆ ಹಾಗೂ ದಮನಿತರಿಗೆ ತಮ್ಮನ್ನು ತಾವು ತ್ವರಿತವಾಗಿ ಸಂಘಟಿಸಿಕೊಳ್ಳಲು ಜಾತಿ ಮಠಗಳ ಮೂಲಕ ಪ್ರೋತ್ಸಾಹ ಧನ ಒದಗಿಸಿದರು.

ಒಬ್ಬ ಮುಖ್ಯಮಂತ್ರಿಯಾಗಿ, ಯಡಿಯೂರಪ್ಪನವರು ಈ ಜಾತಿ ಮಠಗಳಿಗೆ ಯಾವುದೇ ಲಂಗುಲಾಗಮಿಲ್ಲದೇ ಅನುದಾನ ಮತ್ತು ಹಣವನ್ನು ನೀಡಿದ್ದಾರೆ. ಅಧಿಕಾರದ ಕೈಸಾಲೆಗಳಲ್ಲಿ ತಿರುಗಾಡಲು ನಿರ್ಬಂಧವಿಲ್ಲದ ಅವಕಾಶ ನೀಡಲಾಯಿತು, ಮತ್ತು ಅದು ಕರ್ನಾಟಕದ ಪ್ರಜಾಪ್ರಭುತ್ವದ ಬುನಾದಿಯನ್ನು ಹಾಗೂ ರಾಜಕೀಯ ಪರಂಪರೆಯನ್ನು ದುರ್ಬಲಗೊಳಿಸಿತು. ತಮ್ಮ ಪಕ್ಷದ ಅಧಿಕೃತ ಕಾರ್ಯಸೂಚಿಯಾಗಿರುವ ಧಾರ್ಮಿಕ ಕೇಸರಿಯ ಬದಲು ಜಾತಿ ಕೇಸರಿಯನ್ನು ಉತ್ತೇಜಿಸಲು ಮುಂದಾದರು ಯಡಿಯೂರಪ್ಪ. ಹಾಗೆ ಮಾಡುವುದರ ಮೂಲಕ, ಯಡಿಯೂರಪ್ಪನವರು ದೇವರಾಜ ಅರಸರ ಪ್ರಯೋಗವನ್ನು ತಲೆ ಕೆಳಗಾಗಿಸುವುರೊಂದಿಗೆ ತಾನೊಬ್ಬ ಹಿಂದುತ್ವ ಮುಸುಕಿನ ಮಂಡಲ್ ರಾಜಕಾರಣಿಯಾಗಿ ಹೊರಹೊಮ್ಮಿದರು.

ಬಹಳ ಕಡಿಮೆ ಸಮಯದಲ್ಲಿ, ಜಾತೀಯ ಮಠಗಳು ಪರ್ಯಾಯ ರಾಜಕೀಯ ಕೇಂದ್ರಗಳಾಗಿ ಕಾರ್ಯಾಚರಣೆ ಮಾಡಲು ಆರಂಭಿಸಿದವು. ಅವುಗಳ ಆಧ್ಯಾತ್ಮಿಕ ಸತ್ವ ಮಾಯವಾಗಿದ್ದು ಎದ್ದುಕಾಣುತ್ತಿತ್ತು, ಚುನಾವಣೆಯಲ್ಲಿ ಇಂಥವರಿಗೇ ಟಿಕೆಟ್ ಕೊಡಬೇಕು ಎನ್ನುವುದರಿಂದ ಪ್ರಾರಂಭವಾಗಿ ತಮ್ಮ ಇಂತಹ ನಾಯಕರಿಗೇ ಮುಖ್ಯಮಂತ್ರಿ ಪಟ್ಟ ಮೀಸಲಿಡಬೇಕು ಎನ್ನುವಷ್ಟರ ಮಟ್ಟಿಗೆ ಅವರ ಬೇಡಿಕೆ ಪಟ್ಟಿ ಇದ್ದು, ಅವರ ಭಾಷೆಯೇ ಅಪಾಯಕಾರಿಯಾಗಿ ಬದಲಾಗಿದೆ.

ಈ ವರ್ಷದ ಮೇ ತಿಂಗಳಲ್ಲಿ ಮಾಜಿ ಬಿಜೆಪಿ ಸಚಿವರೊಬ್ಬರು ಗಾಣಿಗರ ಸಮುದಾಯದ ಸ್ವಾಮಿಯಾಗಿ ನೇಮಕವಾಗಿರುವ ಸಂಗತಿಯು ಕರ್ನಾಟಕ ಜಾತೀಯ ಮಠಗಳು ಮತ್ತು ರಾಜಕೀಯ ಪಕ್ಷಗಳ ನಡುವಿನ ಶಕ್ತಿಯ ತಡೆರಹಿತ ನಂಟಿಗೆ ಸುಸ್ಪಷ್ಟವಾದ ನಿದರ್ಶನವಾಗಿದೆ. ಒಬ್ಬ ರಾಜಕಾರಣಿಯಾಗಿ, ತನ್ನ ಸಮುದಾಯಕ್ಕೊಬ್ಬ ಸ್ವಾಮಿಯ ಅಗತ್ಯವಿದೆ ಎಂಬ ಆಲೋಚನೆಯನ್ನು ಹುಟ್ಟುಹಾಕಿ ಅದಕ್ಕೆ ಅಗತ್ಯವಾದ ಸಂಪನ್ಮೂಲಗಳನ್ನು ಅವರೇ ಒದಗಿಸಿದರು. ಢಾಂಭಿಕ ಪ್ರದರ್ಶನದ ಆ ‘ಸನ್ಯಾಸತ್ವ ಸ್ವೀಕಾರ ಪಟ್ಟಾಭಿಶೇಕ’ ಸಮಾರಂಭದಲ್ಲಿ ನಿಸ್ಸಂದೇಹವಾಗಿ ಯಡಿಯೂರಪ್ಪನವರು ಉಪಸ್ಥಿತರಿದ್ದರು.

ಇತ್ತೀಚಿನ ವರ್ಷಗಳಲ್ಲಿ, ರಾಜಕೀಯ ಧುರೀಣರು ರಾಜ್ಯಕ್ಕೆ ಭೇಟಿಕೊಟ್ಟಾಗ ಅವರನ್ನು ಸ್ಥಳೀಯ ಮುಖಂಡರುಗಳು ಈ ಜಾತೀಯ ಮಠಗಳಿಗೆ ಕರೆದುಕೊಂಡು ಹೋಗುವುದು ಮತ್ತು ಸ್ವಾಮಿಯ ಕಾಲುಗಳಿಗೆ ಬಿದ್ದು ನಮಸ್ಕರಿಸುವ ಫೋಟೋಗಳನ್ನು ತೆಗೆಸುವುದು ನಿಯಮವಾಗಿದೆ. ಪ್ರಜಾಪ್ರಭುತ್ವದಲ್ಲಿ ‘ಚರ್ಚ್ ಮತ್ತು ಪ್ರಭುತ್ವ’ದ ನಡುವೆ ಪ್ರತ್ಯೇಕವಾಗುವ ಆದರ್ಶಪ್ರಾಯವಾದ ಪ್ರಕ್ರಿಯೆಯನ್ನು ಕರ್ನಾಟಕದಲ್ಲಿ ಸಂಪೂರ್ಣವಾಗಿ ಬೇರೆ ರೀತಿಯಲ್ಲಿ ನಾಶಮಾಡಲಾಗಿದೆ. ಈ ಪ್ರಯೋಗದಲ್ಲಿ, ಗಂಭೀರ ಆರೋಪದಡಿ ಬಂಧಿಸಲ್ಪಟ್ಟಿರುವ ಮುರುಘಾ ಮಠದ ಸ್ವಾಮಿಯು ಯಡಿಯೂರಪ್ಪನವರ ಜತೆ ಒಂದು ರೀತಿಯ ಆತ್ಮೀಯ ಸಂಬಂಧ ಹೊಂದಿದ್ದಾರೆ.

ಕರ್ನಾಟಕದಲ್ಲಿ ಮಠದ ಕಲ್ಪನೆಯು ಮೂಲತಃ ಬ್ರಾಹ್ಮಣರು ಮತ್ತು ಲಿಂಗಾಯತರೊಂದಿಗೆ ತಳುಕು ಹಾಕಿಕೊಂಡಿದೆ. ತಮ್ಮ ಭೌಗೋಳಿಕ ಪ್ರದೇಶ ಹಾಗೂ ಚಾರಿತ್ರಿಕ ಪ್ರಭಾವವನ್ನು ಅವಲಂಬಿಸಿ, ಹಿಂದುಳಿದವರನ್ನೂ ಒಳಗೊಂಡಂತೆ, ಇತರ ಸಮುದಾಯಗಳು ಆಧ್ಯಾತ್ಮಿಕ ಮಾರ್ಗದರ್ಶನಕ್ಕಾಗಿ ಈ ಎರಡರಲ್ಲಿ ಒಂದು ವ್ಯವಸ್ಥೆಯನ್ನು ಅನುಸರಿಸಿದರು. ಅಂತೂ ಹೇಗೋ ದಮನಿತರು ಇದರಿಂದ ಹೊರಗಿದ್ದಾರೆ.

ಆದರೆ 2000 ದ ಆರಂಭದಲ್ಲಿ, ರಾಜ್ಯವು ಒಂದು ಅಪರೂಪದ ಸಾಮಾಜಿಕ ವಿದ್ಯಮಾನಕ್ಕೆ ಸಾಕ್ಷಿಯಾಯಿತು; ಹಿಂದುಳಿದವರು ಮತ್ತು ದಮನಿತರ ಸ್ವಾಯುತ್ತ ಮಠಗಳ ಸೃಷ್ಟಿಗೆ ಮುರುಘ ರಾಜೇಂದ್ರ ಮಠದ ಶಿವಮೂರ್ತಿ ಶರಣರು ಸಹಾಯ ಮಾಡಿದರು. ಈ ಸಮುದಾಯದ (ಕ್ಷೌರಿಕರು, ಅಗಸರು, ಚಮ್ಮಾರರು, ಅಲೆಮಾರಿಗಳು ಇತ್ಯಾದಿ) ಆಯ್ದ ವ್ಯಕ್ತಿಗಳಿಗೆ ಸನ್ಯಾಸತ್ವವನ್ನು ಅವರು ವಿಧಿವತ್ತಾಗಿ ಬೋಧಿಸಿದರು. ಅವರಿಗೆ ಲಿಂಗಾಯತ ಪರಂಪರೆಯಡಿಯಲ್ಲಿ ಶಾಸ್ತ್ರೋಕ್ತವಾಗಿ ಧಾರ್ಮಿಕ ಪಾತ್ರವನ್ನು ವಹಿಸಿದ್ದು ಮಾತ್ರವಲ್ಲ, ಸಾಹಸೋದ್ಯಮದ ಬಂಡವಳಿಗರಂತೆ, ತಮ್ಮ ಮಠದ ಕಾಪಿಟ್ಟಿರುವ ಶ್ರೀಮಂತ ಭೂಮಿ ಬ್ಯಾಂಕಿನಿಂದ ಕೆಲವು ಎಕರೆ ಜಮೀನುಗಳನ್ನು ಅವರಿಗೆ ಕೊಟ್ಟರು ಕೂಡ. ಈ ಹೊಸ ಮಠಗಳು ಮತ್ತು ಸ್ವಾಮಿಗಳು ತಮ್ಮ ಸುತ್ತ ವಿವಿಧ ಕಕ್ಷೆಗಳಲ್ಲಿ ಸುತ್ತುತ್ತಿರುತ್ತಾರೆ ಮತ್ತು ಅದರ ಲಾಭದಿಂದ ರಾಜಕೀಯ ವಲಯದಲ್ಲಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಬಹುದು ಎಂದು ಪ್ರಾಯಶಃ ಅವರು ಆಲೋಚಿಸಿದ್ದರು.

ಆರಂಭದಲ್ಲಿ ಈ ಪ್ರಯೋಗವನ್ನು ಹಿಂದುಳಿದವರ ಮತ್ತು ದಮನಿತರ ಸ್ವಲ್ಪಮಟ್ಟಿನ ಸಬಲೀಕರಣ ಎಂದು ಕಾಣಲಾಗಿತ್ತು. ದೂರದೃಷ್ಟಿಯಿಲ್ಲದ ಕೆಲವು ‘ಪ್ರಗತಿಪರರು’ ಅದನ್ನು ವರ್ಣ ಶ್ರೇಣಿಯ ತಳದಲ್ಲಿರುವ ಜನರನ್ನು ಮೇಲ್ಜಾತಿಯ ವೈದಿಕ ಪರಂಪರೆಯತ್ತ ಸೆಳಯುವ ಸಂಘ ಪರಿವಾರದ ರಾಜಕೀಯಕ್ಕೆ ಪ್ರತಿಪ್ರಹಾರ ಎಂದೆಣಿಸಿದ್ದರು. ಆದರೆ, ಇದಕ್ಕೆ ಪರ್ಯಾಯ ಬೆಳವಣಿಗೆ ಎಂಬಂತೆ ಉಪ್ಪು ಮಾಡುವವರು, ಅಕ್ಕಸಾಲಿಗರು, ನೇಕಾರರು, ಮತ್ತು ಅರಣ್ಯ ವಾಸಿಗಳು ಮುಂತಾದ ಕೆಲವು ಇತರ ಹಿಂದುಳಿದ ಸಮುದಾಯಗಳನ್ನು ವೈದಿಕರ ತೆಕ್ಕೆಗೆ ಕೊಂಡೊಯ್ಯುವ ಯತ್ನಗಳಾಗುತ್ತಿದ್ದವು. ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿಯುವಿಕೆಯನ್ನು ಸರಿಪಡಿಸಬೇಕು ಎಂದು ಸಂವಿಧಾನ ಹೇಳುತ್ತದೆ, ಆದರೆ ಕರ್ನಾಟಕದಲ್ಲಿ, ಆಧ್ಯಾತ್ಮಿಕ ಹಿಂದುಳಿಯುವಿಕೆಯೂ ಕೂಡ ಜಾಣತನದಿಂದ ಒಂದು ನಿರ್ಣಾಯಕ ಅಂಶವಾಗಿ ಬೆಳೆದಿತ್ತು. ಇದು ಜಾತಿ ವಿಭಜನೆಯನ್ನು ಹರಿತಗೊಳಿಸಿದ್ದು ಮಾತ್ರವಲ್ಲ ಜಾತಿಯನ್ನು ಸಾಂಸ್ಥೀಕರಣಗೊಳಿಸಿ ಪ್ರಜಾಪ್ರಭುತ್ವವನ್ನೇ ಸರಿಯಾಗಿ ಕೆಲಸ ಮಾಡದಂತೆ ನೋಡಿಕೊಂಡಿದೆ ಕೂಡ.

ಈಗ ಸಮಯ ಬಂದಿದೆ; ಕರ್ನಾಟಕದ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಈ ಅಸಮತೋಲನವನ್ನು ಸರಿಪಡಿಸುವ ಮತ್ತು ಜಾತಿ ಮಠಗಳನ್ನು ಅವುಗಳ ಎಂದಿನ ಆಧ್ಯಾತ್ಮಿಕ ಉದ್ದೇಶಗಳು ಹಾಗೂ ಸಾಮಾಜಿಕ ಸೇವೆಗಳಿಗೆ ಸೀಮಿತಗೊಳಿಸಬೇಕು. ಮತದಾರ ಜನರ ಮನಸ್ಸಿನಲ್ಲಿ ಸಂದೇಹ ಹಾಗೂ ಕೋಪ ಎದ್ದಿರುವ ಈ ಸಮಯದಲ್ಲಿ, ಈ ಕಾರ್ಯ ಬಹುಮಟ್ಟಿಗೆ ಸುಲಭವಾಗುತ್ತದೆ. ಮುರುಘಾಮಠದ ಸ್ವಾಮಿಯ ಬಂಧನ ಮತ್ತು ಅವರ ಆರೋಪಿತ ಅಪರಾಧಗಳು ಒಳಸರಿಯುತ್ತಿರುವಾಗ, ಹಿಂದುಳಿದ ಜಾತಿಯ ಸ್ವಾಮಿಯೊಬ್ಬ ನೇಣುಹಾಕಿಕೊಂಡು ಸತ್ತಿದ್ದಾರೆ. ಆ ಸ್ವಾಮಿಯ ಆರೋಪಿತ ಆಧ್ಯಾತ್ಮಿಕವಲ್ಲದ ಆಸಕ್ತಿಗಳ ಕುರಿತು ಕೆಲವು ಮಹಿಳೆಯರು ಒಂದು ಧ್ವನಿಮುದ್ರಿತ ಸುರುಳಿಯಲ್ಲಿ ಬಯಲು ಮಾಡಿದಾಗ ಘಟನೆ ನಡೆದಿದೆ. ಇತ್ತೀಚಿನ ವರ್ಷಗಳಲ್ಲಿ, ಕರ್ನಾಟಕ ಉಚ್ಛ ನ್ಯಾಯಾಲಯದ ಹಲವಾರು ನ್ಯಾಯಾಧೀಶರುಗಳು ಮತ್ತೊಬ್ಬ ಕಾವಿ ಪಡೆ ಸ್ವಾಮಿಯ ವಿರುದ್ಧದ ಅತ್ಯಾಚಾರದ ಆರೋಪಗಳ ವಿಚಾರಣೆ ಮಾಡುವುದರಿಂದ ಹಿಂದೆ ಸರಿದಿದ್ದಾರೆ. ಅವರ ಹಿತಾಸಕ್ತಿಯ ನಿಗೂಢ ಸಂಘರ್ಷ ಏನಿರಬಹುದು? ಜಾತಿ ಮತ್ತು ಧಾರ್ಮಿಕ ಕೇಸರಿ ಒಂದಾಗುವ ರಾಜಕೀಯ ಯೋಜನೆ ಕೈಗೂಡುವ ಮುಂಚೆ, ಪ್ರಜಾಪ್ರಭುತ್ವದ ಆತ್ಮವನ್ನು ತ್ವರಿತವಾಗಿ ಕೂರಿಸುವ ಅಗತ್ಯವಿದೆ.

 

ಕೃಪೆ : ಇಂಡಿಯನ್ ಎಕ್ಸ್ ಪ್ರೆಸ್  

ಅನುವಾದ : ಟಿ.ಸುರೇಂದ್ರ ರಾವ್ 

Donate Janashakthi Media

Leave a Reply

Your email address will not be published. Required fields are marked *