ಜಾತಿ ಗೋಡೆಗಳ ದಾಟುತ್ತಾ

ಡಾ.ಕೆ.ಷರೀಫಾ

ನಾನು ಚಿಕ್ಕವಳಿದ್ದಾಗ ಮನೆಯಲ್ಲಿ ಬಡತನವಿತ್ತು, ಆದರೆ ಹೃದಯ ಶ್ರೀಮಂತಿಕೆಗೆ ಯಾವುದೇ ಬಡತನವಿರಲಿಲ್ಲ. ಆಗ ನಮಗೆ ಜಾತಿ, ಧರ್ಮಗಳು ಅಡ್ಡ ಬರಲೇಯಿಲ್ಲ. ಎಷ್ಟೊಂದು ಸೌಹಾರ್ದ ಮತ್ತು ಶಾಂತಿಯ ದಿನಗಳಾಗಿದ್ದವು. ಅಲ್ಲಿ ಧಾರ್ಮಿಕತೆ ಇತ್ತು. ಆದರೆ ಧಾರ್ಮಿಕ ಮೂಲಭೂತವಾದಿತನ ಇರಲಿಲ್ಲ.

ನಮ್ಮ ನಾಡಿನ ಜನರು ಇಲ್ಲಿಯವರೆಗೆ ಸ್ನೇಹ, ಸೌಹಾರ್ದದಿಂದ ಬದುಕಿದ್ದಾರೆ. ಸರ್ವಧರ್ಮ ಸಹಿಷ್ಣುತೆ, ಮಾನವೀಯತೆ, ಸಹಜೀವಿಗಳ ಬಗ್ಗೆ ಅನುಕಂಪ ಹೊಂದಿದಾತನೇ ನಿಜದ ಮಾನವನಾಗಿದ್ದಾನೆ. ಯಾವ ಧರ್ಮವೂ ಪರಸ್ಪರ ದ್ವೇಷವನ್ನೆಂದಿಗೂ ಬೋಧಿಸುವುದಿಲ್ಲ. ಇದಕ್ಕಿಂತ ಸತ್ಯವು ಬೇರೊಂದಿಲ್ಲ. ಜನರ ಮನಸ್ಸುಗಳ ಮಧ್ಯೆ ದ್ವೇಷದ ವಿಷಬೀಜ ಬಿತ್ತುವ ಕೆಲಸ ಕರ್ನಾಟಕದಲ್ಲಿ ಇತ್ತೀಚೆಗೆ ಆರಂಭವಾಗಿದೆ. ನಮ್ಮದು ಬಹುತ್ವದ ನಾಡು, ಇಲ್ಲಿ ಬಹುಸಂಸ್ಕೃತಿ, ಬಹುಧರ್ಮಗಳು ಚಲಾವಣೆಯಲ್ಲಿವೆ. ಕರ್ನಾಟಕದ ಆರೂವರೆ ಕೋಟಿ ಕನ್ನಡಿಗರನ್ನು ಧರ್ಮದ, ಜಾತಿಯ ಆಧಾರದಲ್ಲಿ ಒಡೆಯುವ ವ್ಯಾಪಾರಿ ಕೋಮುವಾದಿ ಶಕ್ತಿಗಳ ಹುನ್ನಾರದ ವಿರುದ್ಧ ನಾವು ಇಂದು ಧ್ವನಿ ಎತ್ತದೇ ಹೋದರೆ ನಾವು ಕನ್ನಡಿಗರು ನಮ್ಮ ನೆಲದಲ್ಲಿಯೇ ನಾವು ಅನಾಥರಾಗುವ ಕಾಲ ದೂರವಿಲ್ಲ.

ಇಂದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಬೀದಿ ಪುಂಡ, ಪೋಕರಿಗಳದೇ ಕಾನೂನು ನಡೆಯುತ್ತಿರುವುದು ಶೋಚನೀಯ. ಸರ್ಕಾರ ತನ್ನ ಹೊಣೆಗಾರಿಕೆಯಿಂದ ಜಾರಿಕೊಳ್ಳುವಂತಿಲ್ಲ. ಇಲ್ಲಿ ಬುಧ್ಧಿಜೀವಿಗಳು, ಸಾಹಿತಿಗಳು, ಕಲಾವಿದರು ಸರ್ಕಾರದ ತಪ್ಪು ನಡೆಯನ್ನು ವಿಮರ್ಶಿಸಬೇಕಾಗುತ್ತದೆ. ಈಗ ನಾವು ಸೌಹಾರ್ದ ಕರ್ನಾಟಕಕ್ಕಾಗಿ ಧ್ವನಿ ಎತ್ತದೇ ಹೋದರೆ, ಮುಂಬರುವ ಜನಸಮುದಾಯ ನಮ್ಮನ್ನೆಂದೂ ಕ್ಷಮಿಸದು. ಅನ್ಯಾಯವನ್ನು ಸಹಿಸುವುದೂ ಸಹ ನಮ್ಮನ್ನು ಪಾಪದ ಪಾಲುದಾರರನ್ನಾಗಿ ಮಾಡುತ್ತದೆ.

ನಾವಿಂದು ದ್ವೇಷದ ಮಾತುಗಳನ್ನು ಬಿಟ್ಟು ಮನಸ್ಸುಗಳನ್ನು ಬೆಸೆಯುವ ಸೌಹಾರ್ದದ ಕುರಿತು ಮಾತಾಡಬೇಕಾಗಿದೆ. ಜನಸಮುದಾಯದ ಒಗ್ಗಟ್ಟಿನ ಮತ್ತು ಸಹಬಾಳ್ವೆಯ ಅವಶ್ಯಕತೆ ಇವತ್ತಿನ ತುರ್ತು ಅಗತ್ಯವಾಗಿದೆ. ದಿನೇ ದಿನೇ ಹಿಂದು ಮುಸ್ಲಿಂ, ಹಿಂದು ಮುಸ್ಲಿಂ, ಎನ್ನುತ್ತ ಹೊಸ ಹೊಸ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದ್ದರೆ ದೇಶ ಕಟ್ಟುವುದು ಯಾವಾಗ? ಎಲ್ಲಾ ಧರ್ಮದವರಿರುವ ಶಾಂತಿಯ ತೋಟ ಕರ್ನಾಟಕವಾಗಿದೆ. ಅದು ಹೀಗಾಗುವುದರ ಮೂಲಕವೇ ಪ್ರಗತಿ ಕಾಣಬೇಕಾಗಿದೆ.  ಧರ್ಮಕ್ಕೂ ಧಾರ್ಮಿಕ ಮೂಲಭೂತವಾದಕ್ಕೂ ವ್ಯತ್ಯಾಸವಿದೆ. ಈ ದೇಶವು ಬಹುಧರ್ಮಗಳ, ಬಹುಸಂಸ್ಕೃತಿಗಳ ಮತ್ತು ಬಹುಭಾಷಿಕರ ನಾಡಾಗಿದೆ. ಇದನ್ನು ನಾವು ಅಲ್ಲಗಳೆಯಲಾಗದು. ಕೂಡಿ ಬದುಕಿದ ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ ಕೋಮುವಾದವು ಇತ್ತೀಚಿನ ಕೋಮುವಾದಿ ಪಕ್ಷದ ರಾಜಕೀಯ ಹುನ್ನಾರದ ಬೆಳವಣಿಗೆಯಾಗಿದೆ.

ನಾನು ಚಿಕ್ಕವಳಿದ್ದಾಗ ಮನೆಯಲ್ಲಿ ಬಡತನವಿತ್ತು, ಆದರೆ ಹೃದಯ ಶ್ರೀಮಂತಿಕೆಗೆ ಯಾವುದೇ ಬಡತನವಿರಲಿಲ್ಲ. ನಮ್ಮ ಪಕ್ಕದ ಮನೆಯ ಲಿಂಗಾಯತ ಕೋಮಿನ ಮಹಾದೇವಿ ನನ್ನ ಜೀವದ ಗೆಳತಿ. ನಮ್ಮ ಮನೆಯಲ್ಲಿ ಎಲ್ಲರೂ ಉರ್ದು ಮೀಡಿಯಂನಿಂದ ಕಲಿತರೆ, ಅಣ್ಣ ಮಾತ್ರ ಕನ್ನಡ ಮೀಡಿಯಂನಲ್ಲಿ ಓದುತ್ತಿದ್ದ. ಗೆಳತಿ ಮಹಾದೇವಿಯೂ ಕನ್ನಡ ಮೀಡಿಯಂನಲ್ಲಿ ಓದುತ್ತಿದ್ದುದರಿಂದ ನಾನೂ ಅವಳೊಂದಿಗೆ ಕನ್ನಡದಲ್ಲಿಯೇ ಓದುವೆನೆಂದು ಹಟ ಹಿಡಿದುದಕ್ಕೆ ನನಗೆ ಕನ್ನಡ ಮಾಧ್ಯಮದಲ್ಲಿಯೇ ಸೇರಿಸಿದರು. ಮನೆಯ ಮುಂದಿನ ನಲ್ಲಿಯಿಂದ ನಾನು, ಮಹಾದೇವಿ ನೀರು ಹಿಡಿಯುತ್ತಿದ್ದೆವು. ನಾನು ಅವಳ ಕೊಡ ಮುಟ್ಟಿದರೆ ಸಾಕು ಸಿಡುಕುವ ಅವಳು, “ನೀವು ಖಂಡ ತಿಂತಿರಿ ಮುಟ್ಟಬ್ಯಾಡ” ಎಂದು ತುಂಬಿದ ಕೊಡದ ನೀರು ಚರಂಡಿಗೆ ಸುರಿದು ಮತ್ತೇ ಕೊಡ ತುಂಬಿಕೊಳ್ಳುತ್ತಿದ್ದಳು. ಶಹಾಬಜಾರದ ನಾಕಾ ಸರ್ಕಾರಿ ಶಾಲೆಯಲ್ಲಿ ನಾವಿಬ್ಬರೂ ಓದುತ್ತಿದ್ದೆವು. ಊಟದ ಗಂಟೆ ಹೊಡೆದರೆ ಸಾಕು ಅವಳು ನನ್ನ ಊಟದ ಡಬ್ಬಿ ಖಾಲಿ ಮಾಡಿದರೆ, ನಾನು ಅವಳ ಊಟದ ಡಬ್ಬಿ ಖಾಲಿ ಮಾಡುತ್ತಿದ್ದೆ. ನಮ್ಮ ಗೆಳೆತನ ಹೇಗಿತ್ತೆಂದರೆ, ಅವಳು ಎರಡನೆಯ ತರಗತಿಯಾದರೆ, ನಾನು ಒಂದನೇ ತರಗತಿ. ಅವಳು ನನ್ನನ್ನು ಬಿಟ್ಟಿರಲಾರದೇ. ನನ್ನದೇ ಕ್ಲಾಸಿನಲ್ಲಿ ಬಂದು ಕುಳಿತುಕೊಳ್ಳುತ್ತಿದ್ದಳು. ಶಿಕ್ಷಕರು ಹೇಳಿ ಹೇಳಿ ಸಾಕಾಗಿ ಕೊನೆಗೆ ಅವಳನ್ನೇ ಎರಡನೇ ತರಗತಿಯಿಂದ ಒಂದನೇ ತರಗತಿಗೆ ಶಿಪ್ಟ್ ಮಾಡಿದರು. ಇದು ನಮ್ಮ ಗೆಳೆತನದ ಮಾದರಿಯಾಗಿತ್ತು.

ನನ್ನಮ್ಮ ಮತ್ತು ನನ್ನ ಗೆಳತಿ ಮಹಾದೇವಿಯ ಅಮ್ಮನೂ ಗೆಳತಿಯರಾಗಿದ್ದರು. ಅವರಿಬ್ಬರೂ ಮನೆಯ ಮುಂದಿನ ಕಟ್ಟೆಗೆ ಕೂತು ಬದುಕಿನ ಕಷ್ಟಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ನಮ್ಮ ಮನೆಯ ಎದುರಿಗಿದ್ದ ಶ್ಯಾಣಮತ್ತಿ (ಶರಣಮ್ಮ) ಯಾವುದೇ ಹಬ್ಬ ಬಂದರೂ ತಾನು ಮಾಡಿದ ಸಿಹಿಯಾದ ಹೊಳಿಗೆ ತಟ್ಟೆ ತುಂಬ ಕಳಿಸುತ್ತಿದ್ದಳು. ರಂಜಾನ ಹಬ್ಬದ ಶ್ಯಾವಿಗೆ ಪಾಯಸ ಅಮ್ಮ ಅವರ ಮನೆಗೆ ಕಳಿಸುತ್ತಿದ್ದಳು. ಮೊಹರಂ ಹಬ್ಬಕ್ಕೆ ಆಶುರಖಾನೆಯಲ್ಲಿ ಅಲೈದೇವ್ರು ಕೂಡಿಸುತ್ತಿದ್ದರೆ, ಅಣ್ಣಪ್ಪ ಮಾಸ್ತರನ ಹೆಂಡತಿ ಬಸ್ಸಮ್ಮ ಅಲೈದೇವ್ರಿಗೆ ಸಕ್ಕರೆ ಓದಿಕೆ ಮಾಡಿಸುತ್ತಿದ್ದಳು. ಊದಿನ ಕಡ್ಡಿ, ಲೋಬಾನ ಉರಿಸಿದ ಬೂದಿಯನ್ನು ಹಣೆಗೆ ಹಚ್ಚಿಕೊಳ್ಳುತ್ತಿದ್ದಳು. ಸಂಜೆ  ಹೊಲದಿಂದ ಹಿಂತಿರುಗಿದ ಪುರುಷರೆಲ್ಲ ಸೇರಿ ಅಲೈದೇವರ ಹವಾಲಾದ ಸುತ್ತ ಕುಣಿಯುತ್ತ, ಹಸನ್ ಹುಸೇನರ ಧೂಲಾ ಹಾಡುತ್ತಿದ್ದರು. ಅಲ್ಲಿ ನಮಗೆ ಜಾತಿ ಎಂದಿಗೂ ಅಡ್ಡ ಬರುತ್ತಿರಲಿಲ್ಲ. ಗುಲಬರ್ಗಾದ ಶರಣಬಸವೇಶ್ವರ ಜಾತ್ರೆಗೆ ನಾನು ಚಿಕ್ಕವಳಿದ್ದಾಗ ಅಪ್ಪ ಹೆಗಲ ಮೇಲೆ ಕೂಡಿಸಿಕೊಂಡು ಹೋಗುತ್ತಿದ್ದರು. ಜಾತ್ರೆಯ ಜನಜಂಗುಳಿಯಲ್ಲಿ ನಾನು ಕಳೆದು ಹೋಗಬಾರದೆಂದು ಅಪ್ಪ ಹಾಗೆ ಮಾಡುತ್ತಿದ್ದರು. ಖಾರಿಕ, ಬಾಳಿ ಹಣ್ಣನ್ನು ನಿಧಾನಕ್ಕೆ ಬರುತ್ತಿರುವ ರಥಕ್ಕೆ ಎಸೆದು ಧನ್ಯರಾಗುತ್ತಿದ್ದೆವು. ತೇರಿಗೆ ಎಸೆದ ಹಣ್ಣುಗಳನ್ನು ಕ್ಯಾಚ್ ಹಿಡಿದು ತಿನ್ನುತ್ತಿದ್ದೆವು. ಆಗ ನಮಗದು ಹಿಂದು ದೇವರೆಂದು ಅನಿಸಲೇ ಇಲ್ಲ.

ಓಣಿಯಲ್ಲಿ ಗಂಡ ಹೆಂಡತಿ ಜಗಳವಾದರೆ ತಮ್ಮ ಮಕ್ಕಳನ್ನು ಕಳಿಸಿ ಅಮ್ಮನನ್ನು ಕರೆಸಿಕೊಂಡು ಜಗಳದ ನ್ಯಾಯ ಪಂಚಾಯ್ತಿ ಮಾಡಿ ಬರುತ್ತಿದ್ದಳು ಅಮ್ಮ. ಇಂತಹ ಪಂಚಾಯ್ತಿಗೆ ಹಿಂದು ಕುಟುಂಬಗಳೇ ಹೆಚ್ಚಾಗಿ ಕರೆಯುತ್ತಿದ್ದುದನ್ನು ನಾನು ಗಮನಿಸಿದ್ದೆ. ಓಣಿಯ ಹೆಂಗಸರ ಹೆರಿಗೆ ಸಮಯದಲ್ಲಿ ಸಹಕರಿಸುವುದರ ಮೂಲಕ, ಇಡೀ ಓಣಿಗೆ ನನ್ನಮ್ಮ “ಅಮ್ಮ”ನಾಗಿದ್ದಳು. ಮಕ್ಕಳಿಗೆ ಎಲ್ಲಿ ಹೋಗಿದ್ರಿ? ಅಂತ ಕೇಳಿದರೆ “ಅಮ್ಮಾನ ಮನೆಗೆ” ಎಂದು ಹೇಳುತ್ತಿದ್ದರು. ನಮ್ಮಮ್ಮ ನಮಗಷ್ಟೆ ಅಮ್ಮನಾಗಿರದೇ ಇಡೀ ಓಣಿಗೆ ಅಮ್ಮನಾಗಿದ್ದಳು.

ಅಪ್ಪನಿಗೆ ಆರೋಗ್ಯ ಇಲಾಖೆಯಲ್ಲಿ ಸರ್ಕಾರಿ ಕೆಲಸವಿತ್ತು. ಹಾರ್ಮೊನಿಯಂ ಬಾರಿಸುವುದು, ಹಾಡುವುದು ಅವರ ಹವ್ಯಾಸವಾಗಿತ್ತು. ಗೊಗ್ಗರು ಧ್ವನಿಯಲ್ಲಿ ಚುಟ್ಟಾ ಎಳೆಯುತ್ತ ಹಾಡುತ್ತಿದ್ದ ಅಪ್ಪನ ಜೀವದ ಗೆಳೆಯ ಬಸ್ಸಯ್ಯ ಸ್ವಾಮಿ. ಇಬ್ಬರೂ ಸೇರಿ ಗಂಟೆಗಟ್ಟಲೇ ಅನುಭಾವದ ಪದಗಳನ್ನು, ವಚನಗಳನ್ನು ಹಾಡುತ್ತಿದ್ದರು. ಇಬ್ಬರೂ ಸೇರಿ ಒಂದೇ ತಟ್ಟೆಯಲ್ಲಿ ಉಣ್ಣುತ್ತಿದ್ದರು. ಅಮ್ಮ ಬಿಸಿರೊಟ್ಟಿ, ಚಟ್ನಿ ಪಲ್ಯಗಳನ್ನು ಮಾಡಿ ಬಡಿಸುತ್ತಿದ್ದಳು. ಸ್ವಾಮಿಗೆ ತಾನು ಜಂಗಮನೆಂಬ ತನ್ನ ಹುಟ್ಟಿನ ಅಹಂಕಾರ ಎಂದೂ ಕಾಡಲಿಲ್ಲ. ನಮ್ಮ ಮನೆಗೆ ಹಿಂದು ಮುಸ್ಲೀಮರೆಲ್ಲ ಬರುತ್ತಿದ್ದರು. ನಮ್ಮ ಮನೆಯೊಂದು ಸೌಹಾರ್ದ ಕೇಂದ್ರವೇ ಆಗಿತ್ತು.

ಅಪ್ಪ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಕೆಲವು ಜ್ವರ, ಶೀತ, ಭೇದಿಯ ಗುಳಿಗೆಗಳನ್ನು ತಂದಿಡುತ್ತಿದ್ದರು. ಅಮ್ಮ ಮನೆಯಲ್ಲಿ ಮೂರು ಬಗೆಯ ಡಬ್ಬಿಗಳನ್ನಿಟ್ಟಿದ್ದಳು. ಅನಕ್ಷರಸ್ತೆಯಾದ ಅವಳಿಗೆ ಓದು ಬರಹ ಬರುತ್ತಿದ್ದಿಲ್ಲ. ಅಪ್ಪನಾದರೂ ಏಳನೆ ತರಗತಿಯವರೆಗೆ ಓದಿದ್ದರು. ಅದಕ್ಕೆ ಡಬ್ಬಗಳನ್ನು ಗುರುತು ಮಾಡಿ, ಜ್ವರ, ಶೀತ, ಭೇದಿಗೆ ಮೂರು ಬಗೆಯ ಮಾತ್ರೆಗಳನ್ನಿಟ್ಟು ಓಣಿಯಲ್ಲಿ ಯಾರಿಗೆ ಈ ಮೂರು ಕಾಯಿಲೆಯಾದರೂ ಅವರು ಆಸ್ಪತ್ರೆಗೆ ಹೋಗುತ್ತಿರಲಿಲ್ಲ. ಮೊದಲು ಅಮ್ಮನ ಬಳಿ ಬಂದು ಗುಳಿಗೆ ಪಡೆದು ಆರಾಮಾಗುತ್ತಿದ್ದರು. ಎರಡು ದಿನ ನೋಡಿ ಆಗಲೂ ಆರಾಮಾಗದಿದ್ದರೆ ಮಾತ್ರ ಆಸ್ಪತ್ರೆಗೆ ಹೋಗುತ್ತಿದ್ದರು.

ಆಗ ನಮಗೆ ಜಾತಿ, ಧರ್ಮಗಳು ಅಡ್ಡ ಬರಲೇಯಿಲ್ಲ. ಎಷ್ಟೊಂದು ಸೌಹಾರ್ದ ಮತ್ತು ಶಾಂತಿಯ ದಿನಗಳಾಗಿದ್ದವು. ಅಲ್ಲಿ ಧಾರ್ಮಿಕತೆ ಇತ್ತು. ಆದರೆ ಧಾರ್ಮಿಕ ಮೂಲಭೂತವಾದಿತನ ಇರಲಿಲ್ಲ. “ಮನುಜ ಕುಲಂ ತಾನೊಂದೇ ವಲಂ” ಎಂದು ಹೇಳಿದ ಪಂಪ. ಮನಷ್ಯರೆಲ್ಲ ಒಂದೇ ಜಾತಿ ಎಂದು ಹೇಳಿದ. ನಂತರ ಬಂದ ಬಸವಣ್ಣ “ದಯೆಯಿಲ್ಲದ ಧರ್ಮ ಯಾವುದಯ್ಯಾ” ಎಂದರು. ಕಾರ್ಲ್‌ಮಾರ್ಕ್ಸ್‌ “ಧರ್ಮವು ಒಂದು ಮಾದಕ ಅಫೀಮು” ಎಂದು ಕರೆದನು. ಇವನಾರವ ಇವನಾರವ ಎಂದೆನದೇ, ಇವ ನಮ್ಮವ ಇವ ನಮ್ಮವ ಎಂದೆಣಿಸಲು ಹೇಳಿದ ಅಣ್ಣ ಬಸವಣ್ಣ. ಧರ್ಮದ ಅಮಲು ನೆತ್ತಿಗೇರಿದಾಗ ಮನುಷ್ಯ ಧರ್ಮಾಂಧನಾಗುತ್ತಾನೆ. ಇಡೀ ಜನರ ಶಾಂತಿಯನ್ನು ಕದಡುವ ವಿಷದ ಬೀಜವಾಗುತ್ತಾನೆ. ಸಮಾಜಘಾತುಕ ಶಕ್ತಿಯಾಗಿ ಬೆಳೆಯುತ್ತಾನೆ. ಇವನು ಸಮಾಜಕ್ಕೆ ಕಂಟಕಪ್ರಾಯವಾಗುತ್ತಾನೆ. ಸಕಲರನ್ನು ಪ್ರೀತಿಸುವುದೇ ಧರ್ಮ. ಧರ್ಮವು ಮೂಲಭೂತವಾದವಾಗದಂತೆ ಮನುಜರನ್ನು ಕೂಡಿಸುವ, ಸಮಾನತೆ ಮತ್ತು ಸಹಿಷ್ಣುತೆಯ ಸಂಕೇತವಾಗಬೇಕಾದ ತುರ್ತಿದೆ.

ಒಂದು ಭಾಷೆ, ಒಂದು ಪಕ್ಷ, ಒಂದು ಜಾತಿ, ಒಂದು ಧರ್ಮ, ಒಂದು ಬಣ್ಣ, ಒಂದು ಧ್ವಜ, ಒಂದು ದೇವರು, ಹೀಗೆ ಹಲವಾರು ಒಂದುಗಳು ನಮ್ಮ ಬಹುತ್ವದ ನೆಲೆಗಳನ್ನು ಮತ್ತು ಸೌಹಾರ್ದದ ಕೊಂಡಿಗಳನ್ನು ಒಂದೊಂದಾಗಿ ಕಳಚುತ್ತಿರುವ ಕೋಮುವಾದಿ ನಡೆಗಳು ಅತ್ಯಂತ ಅಪಾಯಕಾರಿ ಮಟ್ಟ ತಲುಪುತ್ತಿವೆ. ಖ್ಯಾತ ಉದ್ಯಮಿಯೊಬ್ಬರಾದ ಬಯೋಕಾನ್ ಸಂಸ್ಥಾಪಕಿ ಕಿರಣ್ ಮುಜುಂದಾರರವರು ಕರ್ನಾಟಕದ ಭಯಂಕರ ಮೌನವನ್ನು ಮುರಿದು ಮಾತಾಡಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಪ್ರಸ್ತುತ ಪರಿಸ್ಥಿತಿಯನ್ನು ನೋಡಿದ ಅವರು ಸರ್ಕಾರಕ್ಕೆ “ಧರ್ಮಾಧಾರಿತ ವಿಭಜನೆಯ ಮೂಲಕ ಕರ್ನಾಟಕ ಅಪಾಯದ ಕಡೆಗೆ ಸಾಗುತ್ತಿದೆ.” ಎಂದು ಎಚ್ಚರಿಕೆ ನೀಡಿದ್ದಾರೆ. “ಒಂದು ವೇಳೆ ಐಟಿಬಿಟಿ ಕ್ಷೇತ್ರಗಳಲ್ಲಿ ಕೋಮುವಾದ ಬೆಳೆದರೆ, ಅದು ನಮ್ಮ ಜಾಗತಿಕ ನಾಯಕತ್ವವವನ್ನು ನಾಶ ಮಾಡಲಿದೆ. ತಕ್ಷಣ ಆರ್ಥಿಕ ಕ್ಷೇತ್ರದ ಧರ್ಮ ವಿಭಜನೆಯನ್ನು ತಡೆಯಿರಿ” ಎಂದೂ ಕೂಡ ಅವರು ಒತ್ತಾಯಿಸಿದ್ದಾರೆ.

ಈಗಾಗಲೇ ದೇಶದಲ್ಲಿ ಲಾಕ್ ಡೌನ್, ನೋಟು ನಿಷೇಧ, ಕರೋನಾ ಕಾರಣಗಳಿಂದಾಗಿ ಉದ್ಯೋಗ, ಉದ್ಯೋಗಿಗಳು ನೆಲಕಚ್ಚಿದ್ದಾರೆ. ಕರೋನಾ ದಾಳಿಯಿಂದ ತತ್ತರಿಸಿರುವ ಸಮಾಜ ಸ್ವಲ್ಪ ಸ್ವಲ್ಪವಾಗಿಯೇ ಮೇಲೇಳುತ್ತಿರುವ ಸಂದರ್ಭದಲ್ಲಿ ಒಂದೊಂದೇ ತಡೆಗಳನ್ನು ಒಡ್ಡುತ್ತಿರುವ ಈ ಕಾಲದಲ್ಲಿ ಗೋಹತ್ಯಾ ನಿಷೇಧ ಕಾಯ್ದೆ, ಮತಾಂತರ ಕಾಯ್ದೆ, ಲವ್ ಜಿಹಾದ್, ಹಿಜಾಬ್,  ಹಲಾಲಕಟ್, ಜಟ್ಕಾಕಟ್, ಜಾತ್ರೆಗಳಲ್ಲಿ ಮುಸ್ಲೀಮರ ವ್ಯಾಪಾರ ನಿಷೇಧದಂತಹ ಕೃತ್ಯಗಳಿಂದ ಆರ್ಥಿಕ ಸ್ಥಿತಿ ಇನ್ನೂ ನೆಲಕಚ್ಚುವುದರಿಂದ ಇಂತಹ ಕ್ಷುಲ್ಲಕ ವಿಷಯಗಳನ್ನು ನಿಲ್ಲಿಸಬೇಕಿದೆ. ನೆಲಕಚ್ಚಿರುವ ಉದ್ಯಮಗಳು ನಿಧಾನವಾಗಿ ಮೇಲೇಳುತ್ತಿರುವ ಸಂದರ್ಭದಲ್ಲಿ ಸರ್ಕಾರದ ನೇತೃತ್ವದಲ್ಲಿಯೇ ಜನರು ಮತ್ತು ಸರ್ಕಾರದ ಮಧ್ಯೆ ಬಿರುಕು ಉಂಟಾಗುತ್ತಿದೆ ರಾಜ್ಯದ ಪ್ರಗತಿಯ ಸಂಕೇತವೇನೂ ಅಲ್ಲ. ಹಿಜಾಬ್‌ನ ಕಾರಣ, ಸಮವಸ್ತ್ರವನ್ನು ಮುಂದೆ ಮಾಡಿ ರಾಜ್ಯ ಸರ್ಕಾರದ ಶಾಲೆಗಳಲ್ಲಿ ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನಿರ್ಭಂಧವೊಡ್ಡಿತು. ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳನ್ನು ಬಳಸಿಕೊಂಡು ಈ ಪುಂಡರು ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡಿತು. ಇದು ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹಿನ್ನಡೆ ಮಾಡಿತು. ಮುಸ್ಲೀಮರು ಕಾನೂನನ್ನು ಮುರಿಯುತ್ತಿದ್ದಾರೆ. ಹೈಕೋರ್ಟ್ ಆದೇಶವನ್ನು ಉಲ್ಲಂಘಿಸುತ್ತಿದ್ದಾರೆ. ಎನ್ನುವ ಇವರಿಗೆ ಅವರಿಗೆ ಅದು ಅನ್ಯಾಯವೆನಿಸಿದರೆ ಸುಪ್ರೀಂ ಕೋರ್ಟಿಗೆ ಹೋಗಲು ಅವಕಾಶವಿದೆ. ಒಂದು ವೇಳೆ ಸುಪ್ರೀಂ ಕೋರ್ಟಿನ ಆದೇಶವಾದರೆ ಅದನ್ನು ಭಾರತದಲ್ಲಿರುವ ಪ್ರತಿಯೊಬ್ಬರೂ ಪಾಲಿಸಲೇಬೇಕಾಗುತ್ತದೆ. ಅಯ್ಯಪ್ಪಸ್ವಾಮಿ ದೇವಸ್ಥಾನ ಪ್ರವೇಶವನ್ನು ಮಹಿಳೆಯರಿಗೆ ತಡೆಯುವಂತಿಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿದರೂ ಸಹ ಇದೇ ಸಂಘ ಪರಿವಾರದವರು ಅಲ್ಲಿ ಮಹಿಳೆಗೆ ಪ್ರವೇಶವನ್ನು ತಡೆದು ದೇಶದ ಅತ್ಯುನ್ನತ ಸುಪ್ರೀಂ ಕೋರ್ಟಿನ ಆದೇಶವನ್ನು ಉಲ್ಲಂಘನೆ ಮಾಡಿತು. ಹಾಗಾದಲ್ಲಿ ದೇಶದ ಕಾನೂನಿನ ಮುಂದೆ ಎಲ್ಲರೂ ಸಮಾನರಲ್ಲವೇ?

ಕಳೆದ ಕೆಲವು ತಿಂಗಳುಗಳಿಂದ ಕರ್ನಾಟಕ ತನ್ನ ಸಾಧನೆಗಳಿಂದ ಹೆಸರು ಮಾಡಲಿಲ್ಲ. ಬದಲಾಗಿ ಹಲವಾರು ಆತಂಕ, ಅಶಾಂತಿಯನ್ನು ಉಂಟು ಮಾಡಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಧಾರ್ಮಿಕ ವಿಭಜನೆಯ ಕಾರಣಕ್ಕೆ ಕುಖ್ಯಾತವಾಯಿತು. ಸಮವಸ್ತ್ರದ ಕಾರಣಕ್ಕೆ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಬಹಿಷ್ಕಾರ ಹಾಕುವ ಮೂಲಕ ಜಾಗತಿಕವಾಗಿ ಕರ್ನಾಟಕ ಕುಖ್ಯಾತವಾಯಿತು. ಸುಸಂಸ್ಕೃತ ನಡೆ ನುಡಿ, ಸಮೃದ್ಧಿಗಾಗಿ ಹೆಸರಾದ ಕರ್ನಾಟಕ ಇಂದು ಇಂತಹ ಪುಂಡ, ಪೋಕರಿಗಳ ಕೈಗೆ  ಕಾರ್ಯಭಾರ ಕೊಟ್ಟು ಸರ್ಕಾರ ಕಣ್ಣು ಮುಚ್ಚಿಕೊಂಡಿರುವ ಮೌನವು ಮಹಾ ಅಪರಾಧವಾಗಿದೆ. ಇದು ಭಾರತದ ಕರ್ನಾಟಕವಾಗಿದೆಯೇ ಹೊರತು ಇರಾನ್, ಇರಾಕ್, ಅಫ್ಘಾನಿಸ್ಥಾನದ ಭಾಗವಲ್ಲ.

ಯಾವ ವಿಚಾರಣೆಯೂ ಇಲ್ಲದೇ ನೇರವಾಗಿ ಒಂದು ಕೋಮಿನವರನ್ನು ಅಪರಾಧದ ಹೊಣೆಗಾರರನ್ನಾಗಿ ಮಾಡುವುದು ಜವಾಬ್ದಾರಿ ಸ್ಥಾನದಲ್ಲಿರುವ ರಾಜ್ಯ ಮಂತ್ರಿಗಳ ಕೆಲಸವಾಗಬಾರದು. ರಾಜ್ಯದ ಜವಾಬ್ದಾರಿ ಹೊತ್ತ ರಾಜಕಾರಣಿಗಳೇ ತನ್ನ ರಾಜಕೀಯ ಲಾಭಕ್ಕಾಗಿ ಬೆಂಕಿ ಹಚ್ಚುವ ಕೆಲಸ ಮಾಡುವುದು ಮಹಾಪಾಪದ ಕೆಲಸ. ಅದು ಯಾವ ಧರ್ಮದ ರಾಜಕಾರಣಿಯಾದರೂ ಸಹ ಅವರು ಜನತೆಯ ಮುಂದೆ ಅಪರಾಧಿಗಳಾಗುತ್ತಾರೆ.  ಗುರು ಗೋವಿಂದಭಟ್ಟರು ಮತ್ತು ಶಿಶುವಿನಾಳ ಷರೀಫರ ಸಂಬಂಧವನ್ನು ನಾವಿಲ್ಲಿ ನೆನೆಯಬೇಕಿದೆ. ಬದುಕಿನಲ್ಲಿ, ಅಧ್ಯಾತ್ಮದಲ್ಲಿ ಮತ್ತು ಸತ್ತ ನಂತರವೂ ಅವರ ಸಮಾಧಿಗಳು ಅಕ್ಕ ಪಕ್ಕದಲ್ಲಿವೆ. ಬಿಸ್ಮಿಲ್ಲಾ ಖಾನರ ಶಹನಾಯಿಯಿಲ್ಲದೆ ಕಾಶೀ ವಿಶ್ವನಾಥ ದೇವರ ಪೂಜೆಯೇ ನಡೆಯುತ್ತಿರಲಿಲ್ಲ. ಅಮೇರಿಕದಲ್ಲಿ ಅವರಿಗೆ ಎಲ್ಲ ಸವಲತ್ತುಗಳನ್ನು ನೀಡುತ್ತೇವೆ. ನೀವು ಇಲ್ಲಿಯೇ ಇರಿ. ಎಂದಾಗ “ನೀವು ಎಲ್ಲವನ್ನೂ ಕೊಡುತ್ತಿರಿ. ಆದರೆ ನನ್ನ ಕಾಶೀ ವಿಶ್ವನಾಥನನ್ನು ಇಲ್ಲಿಗೆ ತರಬಲ್ಲಿರಾ?” ಎಂದು ನಿರಾಕರಿಸುತ್ತಾರೆ. ಇಂತಹ ಸೌಹಾರ್ದದ ಸಮಾಜ ನಮ್ಮದು. ಅದನ್ನು ರಾಜಕೀಯ ಕಾರಣಕ್ಕಾಗಿ ಒಡೆಯುವುದು ತರವಲ್ಲ. ಒಬ್ಬ ರಾಜಕಾರಣಿ ತನ್ನ ರಾಜಧರ್ಮವನ್ನು ಪಾಲಿಸಬೇಕು. ತನ್ನ ಜನರನ್ನು ತಾಯಿಯಂತೆ ನಿಂತು ರಕ್ಷಿಸಬೇಕಾಗುತ್ತದೆ. ಭಾರತ ಸ್ವಾತಂತ್ರದ ನಂತರ ದೇಶ ಇಬ್ಬಾಗವಾದಾಗ ಮುಸ್ಲೀಮರ ಪರವಾಗಿ ನಿಂತುಕೊಂಡ ನೆಹರೂರವರು, ಗಾಂಧೀಜಿಯವರು, ಮುಸ್ಲೀಮರನ್ನು ಕೊಲ್ಲುವುದಕ್ಕೆ ಮೊದಲು ನಮ್ಮನ್ನು ಕೊಲ್ಲಿರಿ ಎಂದು ಮುಂದೆ ನಿಂತು ಭಾರತದಲ್ಲಿಯೇ ಉಳಿಯಲು ಇಚ್ಚಿಸಿದ ಮುಸಲ್ಮಾನರನ್ನು ರಕ್ಷಿಸಿದರು. ಇಂತಹ ನಾಯಕತ್ವದ ಅವಶ್ಯಕತೆ ನಮಗೆ ಬೇಕಿದೆ.

ಕೆಲ ದಿನಗಳ ಹಿಂದೆಯೇ ಜಾತ್ರೆಗಳಲ್ಲಿ ಮುಸಲ್ಮಾನರಿಗೆ ವ್ಯಾಪಾರವನ್ನು ನಿರ್ಭಂಧಿಸಿದ್ದರು. ಈಗ “ಹಲಾಲ್ ಕಟ್ ಮಾಂಸವನ್ನು ಮುಸಲ್ಮಾನರಿಂದ ಹಿಂದುಗಳು ಖರೀದಿಸಬಾರದು. ಹಿಂದೂಗಳ ಅಂಗಡಿಯಲ್ಲಿಯೇ ಮಾಂಸ ಖರೀದಿ, ವ್ಯಾಪಾರ ಮಾಡಬೇಕು” ಎಂದು ಈ ಬೀದಿ ಪುಂಡರು ಫರ್ಮಾನು ಹೊರಡಿಸಿದ್ದರು. ಹಾಗಾದರೆ ರಾಜ್ಯದಲ್ಲಿ ಸರ್ಕಾರಗಳು ಯಾಕೆ ಬೇಕು? ಹೀಗೆ ಒಂದರ ಹಿಂದೆ ಒಂದರಂತೆ ನಿಷೇಧಗಳು, ಫರ್ಮಾನುಗಳನ್ನು ಪುಂಡರು ಹೊರಡಿಸುತ್ತಾ ಒಂದು ಸಮುದಾಯದವನ್ನು ಪೀಡಿಸುವ  ನಿರ್ಭಂಧಗಳು ಜಾರಿಯಾಗಿ, ಧರ್ಮಾಧಾರಿತ ನೆಲೆಯಲ್ಲಿ ಜನರನ್ನು ಒಡೆಯುತ್ತಾ ಹೋದರೆ, ನಮ್ಮ ಆರ್ಥಿಕತೆ ಬಸವಳಿದು ಹೋಗುತ್ತದೆ. ರಾಜ್ಯದ ಪ್ರಗತಿಗೆ ಹಿನ್ನೆಡೆಯಾಗುತ್ತದೆ.

ಕರ್ನಾಟಕದಲ್ಲಿ ಹಿಜಾಬ್ ಎಂದು ಕೂಗಾಡಿತು. ಸಾಮಾನ್ಯ ಜನ ಇದರ ರಾಜಕಾರಣವನ್ನು ಹೀಗಳೆಯಿತು. ಹಲಾಲ್ ಕಟ್ ಜಟ್ಕಾ ಕಟ್ ಎಂದು ಶುರು ಮಾಡಿತು. ಅದಕ್ಕೆ ಜನರೇ ಸರಿಯಾಗಿ ಉತ್ತರಿಸಿದ್ದಾರೆ. ಕರ್ನಾಟಕದ ಗೃಹ ಮಂತ್ರಿಯೇ ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ಹಿಂದು ಮುಸ್ಲಿಂ ಮಾಡಿದ್ದಕ್ಕೆ ಜನ ಕ್ಯಾಕರಿಸಿ ಉಗಿದಿದ್ದಾರೆ. ದೇವಸ್ಥಾನಗಳ ಬಳಿ ಮುಸ್ಲೀಮರು ವ್ಯಾಪಾರ ಮಾಡದಂತೆ ಕೋಮುವಾದಿಗಳು ನಿರ್ಬಂಧಿಸಿದರು. ಆದರೆ ಬಡೇಸಾಬರ ಒಡೆದು ಹಾಕಿದ 5 ಕ್ವಿಂಟಾಲ್ ಕಲ್ಲಂಗಡಿಗೆ ಬದಲಾಗಿ ಜನರೇ ಮುಂದೆ ಬಂದು ಹಿಂದುಗಳೇ ಅವರ ಕೈ ಹಿಡಿದು ಹಣ ಸಹಾಯ ಮಾಡಿ ಬೆಂಬಲಿಸಿ ಬದುಕಿಗೆ ಆಸರೆಯಾದರು. ಹಿಂದು ಮುಸ್ಲಿಮರೆಲ್ಲರೂ ಸೇರಿ ಬೆನ್ನೆಲುಬಾದರು. ಕೋಮುವಾದಿ ಸಂಘಟನೆಗಳು ಮುಸ್ಲೀಮರ ಅಂಗಡಿಗಳಲ್ಲಿ ವ್ಯಾಪಾರ ಮಾಡಬೇಡಿ ಎಂದರು. ಆದರೆ ಜನರು ಈ ಬೂಟಾಟಿಕೆಯ ಮಾತುಗಳನ್ನು ಮೆಟ್ಟಿ ನಿಂತರು. ಇದೇ ನಮ್ಮ ಸೌಹಾರ್ದ ಸಂಸ್ಕೃತಿಯಾಗಿದೆ. ಅದಕ್ಕೇ ಕೂಡಿ ಬಾಳಿದ ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ ಹಿಂದು ಮುಸ್ಲಿಂ ಸಂಸ್ಕೃತಿಗೆ ಕೇವಲ ಕೆಲವೇ ವರ್ಷಗಳ ಇತಿಹಾಸವಿದೆ.

ಸರ್ಕಾರದ ನೇತೃತ್ವದಲ್ಲಿಯೇ ಜನರಮಧ್ಯೆ ಬಿರುಕುಗಳು ತಲೆದೋರುತ್ತಾ ಹೋದರೆ ರಾಜ್ಯದಲ್ಲಿ ಅರಾಜಕತೆ ತಲೆದೋರುತ್ತದೆ. ಇಂತಹ ರಾಜ್ಯದ ಆರ್ಥಿಕತೆ ಕುಸಿಯುತ್ತದೆ. ರಾಜ್ಯ ಸರ್ಕಾರದ ಇಂತಹ ಅರಾಜಕ ನಡೆಗಳಿಂದಾಗಿ ರಾಜ್ಯದ ಅಭಿವೃದ್ದಿ ಕುಂಠಿತವಾಗುತ್ತದೆ. ಬೀದಿ ಗೂಂಡಾಗಳದೇ ರಾಜ್ಯವಾದಾಗ ಜನರಲ್ಲಿ ಆತಂಕ, ಭಯ, ಅಭದ್ರತೆ ತಲೆದೊರುವುದು ಸಹಜ. ಜನರು ಅಭದ್ರತೆ, ಅತಂಕದಲ್ಲಿದ್ದರೆ ರಾಜ್ಯದ ಪ್ರಗತಿಯಾಗುವುದಿಲ್ಲ. ಆದ್ದರಿಂದ ಜನರಿಗೆ ನೆಮ್ಮದಿಯ ನೆಲೆಗಳನ್ನು ನೀಡುತ್ತಾ, ಉದ್ಯೋಗಗಳನ್ನು ಸೃಷ್ಟಿಸುತ್ತಾ, ಆರ್ಥಿಕವಾಗಿ ಸುಭದ್ರಗೊಳ್ಳುತ್ತಾ, ಸಮಾಜದಲ್ಲಿ ಸೌಹಾರ್ದತೆ ಕಾಪಾಡುವುದು ಇಂದಿನ ಅಗತ್ಯವಾಗಿದೆ. ಕೋಮುವಾದವು ಇತ್ತೀಚಿನ ಬೆಳವಣಿಗೆಯಾಗಿದೆ. ಆದರೆ ಕೂಡಿ ಬಾಳಿದ ಸೌಹಾರ್ದ ಸಂಸ್ಕೃತಿಗೆ  ಸಾವಿರಾರು ವರ್ಷಗಳ ಇತಿಹಾಸವಿದೆ.

Donate Janashakthi Media

Leave a Reply

Your email address will not be published. Required fields are marked *