ಜರ್ಮನಿ: ಬಲಪಂಥಕ್ಕೆ ಹಿನ್ನಡೆ ನಡು-ಎಡಪಂಥೀಯ ಸರಕಾರದತ್ತ

ಜರ್ಮನಿಯ ಪಾರ್ಲಿಮೆಂಟರಿ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ನಾಲ್ಕು ಅವಧಿಗಳಿಂದ (16 ವರ್ಷಗಳಿಂದ) ಇದ್ದ ಮೆರ್ಕೆಲ್ ಸರಕಾರ ಕೊನೆಯಾಗುವ ಲಕ್ಷಣಗಳಿವೆ. ನಡು-ಬಲಪಂಥಿಯ ಮತ್ತು ಉಗ್ರ ಬಲಪಂಥೀಯ ಪಕ್ಷಗಳಿಗೆ ಹಿನ್ನಡೆಯಾಗಿದೆ. ನಡು-ಎಡಪಂಥೀಯ ಪಕ್ಷಗಳು ಮುನ್ನಡೆ ಸಾಧಿಸಿವೆ. ಪ್ರಮುಖ ನಡು-ಎಡಪಂಥೀಯ ಪಕ್ಷವಾದ ಸೋಶಿಯಲ್ ಡೆಮೊಕ್ರಾಟಿಕ್ ಪಕ್ಷ (ಎಸ್.ಡಿ.ಪಿ) ಕಳೆದ ಎರಡು ದಶಕಗಳಲ್ಲೇ ಅತ್ಯಂತ ಹೆಚ್ಚು ಮತ ಗಳಿಸಿ ಅತಿ ದೊಡ್ಡ ಪಕ್ಷವಾಗಿ ಹೊಮ್ಮಿದೆ. ಇನ್ನೊಂದು ನಡು-ಎಡಪಂಥೀಯ ಪಕ್ಷವಾದ ಗ್ರೀನ್ ಪಕ್ಷ ಅದರ ಚರಿತ್ರೆಯಲ್ಲೇ ಅತ್ಯಂತ ಹೆಚ್ಚು ಮತಪಾಲು ಪಡೆದು ಮೂರನೇಯ ಸ್ಥಾನ ಗಳಿಸಿದೆ. ಪ್ರಮುಖ ನಡು-ಬಲಪಂಥೀಯ ಪಕ್ಷವಾದ ಕ್ರಿಶ್ಚಿಯನ್ ಡೆಮೊಕ್ರಾಟಿಕ್ ಪಕ್ಷ (ಸಿ.ಡಿ.ಯು/ಸಿ.ಎಸ್.ಯು) ಶೇ.9 ರಷ್ಟು ಮತಗಳಿಕೆ ಕಳೆದುಕೊಂಡು 70 ವರ್ಷಗಳಲ್ಲೇ ಅತ್ಯಂತ ಕಡಿಮೆ ಮತಗಳಿಸಿದೆ.  ಇನ್ನೊಂದು ನಡು-ಬಲಪಂಥೀಯ ಪಕ್ಷವಾದ ಫ್ರೀ ಡೆಮೊಕ್ರಾಟಿಕ್ ಪಕ್ಷ(ಎಫ್.ಡಿ.ಪಿ) ಸಣ್ಣ ಮುನ್ನಡೆ ಸಾಧಿಸಿದೆ. ಅದೇ ರೀತಿ ಉಗ್ರ ಬಲಪಂಥೀಯ ಪಕ್ಷ “ಜರ್ಮನಿಗೆ ಬದಲಿ” (ಎ.ಎಫ್.ಡಿ). ಮತ್ತು ಎಡಪಕ್ಷ ಸಹ ಗಮನಾರ್ಹ ಪ್ರಮಾಣದಲ್ಲಿ ಮತಪಾಲು ಕಳೆದುಕೊಂಡಿವೆ. ಚುನಾವಣೆ ಫಲಿತಾಂಶಗಳ ವಿವರಗಳು ಮತ್ತು 2017ರ ಫಲಿತಾಂಶಗಳೊಂದಿಗೆ ಹೋಲಿಕೆ ಕೋಷ್ಟಕ-1ರಲ್ಲಿದೆ. ನಡು-ಎಡಪಂಥೀಯ ಪಕ್ಷಗಳು (ಎಸ್.ಡಿ.ಪಿ, ಗ್ರೀನ್) ಶೇ. 29.4 ರಿಂದ ಶೇ.40.4ಕ್ಕೆ ತಮ್ಮ ಮತಪಾಲು ಹೆಚ್ಚಿಸಿಕೊಂಡರೆ, ನಡು-ಬಲಪಂಥೀಯ ಪಕ್ಷಗಳ (ಸಿ.ಡಿ.ಯು/ಸಿ.ಎಸ್.ಯು, ಎಫ್.ಡಿ.ಪಿ) ಮತಪಾಲು ಕಳೆದ ಬಾರಿಗೆ ಹೋಲಿಸಿದರೆ ಶೇ. 43.6 ರಿಂದ ಶೇ.35.6 ಕ್ಕೆ ಕುಸಿದಿದೆ.

ಕೋಷ್ಟಕ-1 ಜರ್ಮನ್‌ ಪಾರ್ಲಿಮೆಂಟರಿ ಚುನಾವಣೆ 2021/ 2017 ರ ಫಲಿತಾಂಶ ಹೋಲಿಕೆ

ಪಕ್ಷ 2017 ಸೀಟು 2021 ಸೀಟು ಸೀಟು ಹೆಚ್ಚಳ/ ಕುಸಿತ 2017 ಮತ ಪಾಲು 2021 ಮತ ಪಾಲು ಮತ ಪಾಲು ಹೆಚ್ಚಳ/ ಕುಸಿತ
ಎಸ್‌.ಡಿ.ಪಿ. 153 206 +53 20.5 25.7 +5.2
ಸಿ.ಡಿ.ಯು/ಸಿ.ಎಸ್‌.ಯು. 246 196 -50 32.9 24.1 -8.8
ಗ್ರೀನ್‌ 67 118 +51 8.9 14.8 +5.9
ಎಫ್‌.ಡಿ.ಪಿ. 80 92 +12 10.7 11.5 +0.8
ಎ.ಎಫ್‌.ಡಿ. 94 83 -11 12.6 10.3 -2.3
ಎಡಪಕ್ಷ 69 39 -30 9.2 4.9 -4.3

 

ಜರ್ಮನ್ ಮತದಾರರು ಬದಲಾವಣೆ ಬಯಸಿದ್ದಾರೆ ಎಂಬುದು ಸ್ಪಷ್ಟ. ಜಾಗತಿಕ ಮಾಧ್ಯಮ ಹಾಡಿ ಹೊಗಳುತ್ತಿದ್ದ ಮೆರ್ಕೆಲ್ ಅವರ ನವ-ಉದಾರವಾದಿ ಸರಕಾರವನ್ನು ತಿರಸ್ಕರಿಸಿದ್ದಾರೆ. ಈ ಚುನಾವಣೆಯಲ್ಲಿ ಹವಾಮಾನ ಬದಲಾವಣೆಯ ಫಲವಾಗಿ ದೇಶದಲ್ಲಿ ಭಾರೀ ಸಾವು-ನೋವು ನಷ್ಟ ಉಂಟಾಗಿದ್ದು, ಹಿಂದಿನ ಸರಕಾರ ಈ ನಿಟ್ಟಿನಲ್ಲಿ ದೂರದರ್ಶಿ ಕ್ರಮಗಳನ್ನು ತೆಗೆದುಕೊಳ್ಳದ್ದು ಪ್ರಮುಖ ವಿಷಯವಾಗಿತ್ತು. ವಿವಿಧ ಪಕ್ಷಗಳು ವಿವಿಧ ಭವಿಷ್ಯದ ಯೋಜನೆಗಳನ್ನು ಮಂಡಿಸಿದ್ದರು. ಪರಿಸರವಾದಿ ಪಕ್ಷವಾದ ಗ್ರೀನ್ ಪಕ್ಷ ಅತ್ಯಂತ ಹೆಚ್ಚು ಮತಪಾಲು ಹೆಚ್ಚಳ ಸಾಧಿಸಿದ್ದಕ್ಕೆ ಬಹುಶಃ ಇದೇ ಕಾರಣ.

ಯಾವುದೇ ಒಂದು ಪಕ್ಷಕ್ಕೆ ನಿಚ್ಚಳ ಬಹುಮತ ಬರದ್ದರಿಂದ, ಮುಂದಿನ ಸರಕಾರ ರಚಿಸಲು ಮೈತ್ರಿಕೂಟದ ರಚನೆಯ ಕಸರತ್ತು ಆರಂಭವಾಗಿದೆ. ಪ್ರಮುಖವಾಗಿ ಮೊದಲ ನಾಲ್ಕು ಪಕ್ಷಗಳು ವಿವಿಧ ಸಾಧ್ಯತೆಗಳ ಅನ್ವೇಷಣೆಯಲ್ಲಿ ತೊಡಗಿವೆ. ಜರ್ಮನ್ ಪಾರ್ಲಿಮೆಂಟಿನಲ್ಲಿ 735 ಸೀಟುಗಳಿದ್ದು ಸರಕಾರ ರಚಿಸಬೇಕಾದ ಮೈತ್ರಿಕೂಟಕ್ಕೆ 368 ಸೀಟುಗಳು ಅಗತ್ಯ. ಮೊದಲ ಎರಡು ಪಕ್ಷಗಳಾದ ಎಸ್.ಡಿ.ಪಿ, ಮತ್ತು ಸಿ.ಡಿ.ಯು. ಎರಡೂ ಮೂರನೆಯ/ನಾಲ್ಕನೆಯ ಸ್ಥಾನದಲ್ಲಿರುವ ಗ್ರೀನ್ ಮತ್ತು ಎಫ್.ಡಿ.ಪಿಗಳೊಂದಿಗೆ ಮಾತುಕತೆ ಆರಂಭಿಸಿವೆ. ಗ್ರೀನ್ ಮತ್ತು ಎಫ್.ಡಿ.ಪಿ ಪಕ್ಷಗಳು ಸಹ ತಮ್ಮ ಪ್ರಣಾಳಿಕೆ ನೀತಿ-ಧೋರಣೆಗಳಲ್ಲಿ ಇರುವ ವ್ಯತ್ಯಾಸಗಳನ್ನು ಕಡಿಮೆ ಮಾಡುವ ಕುರಿತು ಚರ್ಚೆ ನಡೆಸುತ್ತಿವೆ. ಈಗಾಗಲೇ ಎರಡು ಸುತ್ತಿನ ಮಾತುಕೆಗಳನ್ನು ನಡೆಸಲಾಗುತ್ತಿದೆ.

ಎಸ್.ಡಿ.ಪಿ ಗೆ ಗ್ರೀನ್ ಮತ್ತು ಎಫ್.ಡಿ.ಪಿ ಪಕ್ಷಗಳ ಜತೆ ಮೈತ್ರಿಕೂಟ ಸರಕಾರ ರಚಿಸುವುದು ಮೊದಲ ಆದ್ಯತೆಯಾಗಿದೆ. ಸಿ.ಡಿ.ಯು ಗೆ ಸಹ ಇದೇ ಮೊದಲ ಆದ್ಯತೆ. ಗ್ರೀನ್ ಪಕ್ಷ ನಡು-ಎಡಪಂಥೀಯ ಪಕ್ಷವಾಗಿದ್ದು ಪರಿಸರ ನೀತಿ-ಧೋರಣೆಗಳ ಕುರಿತು ಬಿಗಿ ಅಭಿಪ್ರಾಯಗಳನ್ನು ಹೊಂದಿದೆ. ಗ್ರೀನ್ ಪಕ್ಷದಲ್ಲಿ ಸಾಕಷ್ಟು ಪ್ರಬಲವಾದ ಎಡಪಂಥೀಯ ಬಣವಿದ್ದು ದುಡಿಯುವ ಜನರ ಪರವಾದ ಮತ್ತು ಸಾಮಾಜಿಕ ಸಾಮುದಾಯಿಕ ಆದ್ಯತೆಗಳ ಸಲುವಾಗಿ ಬಂಡವಾಳಶಾಹಿಯ ಲಾಭಕೋರತನದ ಮೇಲೆ ಕಡಿವಾಣ ಹಾಕುವ ತೆರಿಗೆ ಹಾಕುವುದಕ್ಕೆ ಪರವಾಗಿದೆ. ಆದರೆ ಎಫ್.ಡಿ.ಪಿ ಮಾರುಕಟ್ಟೆಯಲ್ಲಿ ನಂಬಿಕೆಯಿಡುವ ಮತ್ತು ಹೆಚ್ಚಿನ ತೆರಿಗೆಗೆ ವಿರೋಧವಿರುವ ನಡು-ಬಲಪಂಥೀಯ ಪಕ್ಷ. ಎಸ್.ಡಿ.ಪಿ, ಮತ್ತು ಸಿ.ಡಿ.ಯು. ನಾಯಕತ್ವದ ಎರಡೂ ಮೈತ್ರಿಕೂಟಗಳು ಸಫಲವಾಗಬೇಕಾದರೆ ಗ್ರೀನ್ ಮತ್ತು ಎಫ್.ಡಿ.ಪಿ.ಗಳ ನಡುವಿನ ನೀತಿ-ಧೋರಣೆಗಳ ಕುರಿತು ಒಮ್ಮತ ಅವಶ್ಯ.

2017ರಲ್ಲಿ ಈ ಎರಡು ಪಕ್ಷಗಳು ಯಾವುದೇ ಒಮ್ಮತಕ್ಕೆ ಬಾರದೆ ಎಸ್.ಡಿ.ಪಿ. ಮತ್ತು ಸಿ.ಡಿ.ಯು. ನಡುವೆ ಮಹಾಮೈತ್ರಿ ಸರಕಾರ ರಚನೆಯಾಗಿತ್ತು ಎಂದು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಬಾರಿಯು ತಾವು ವಿಫಲವಾದರೆ ಇದೇ ಉಳಿದಿರುವ ದಾರಿ ಎಂಬ ಅರಿವಿರುವ  ಗ್ರೀನ್ ಮತ್ತು ಎಫ್.ಡಿ.ಪಿ. ಈ ಬಾರಿ ಸಹಮತ ಮೂಡಿಸಲು ಗರಿಷ್ಠ ಪ್ರಯತ್ನ ಮಾಡುತ್ತವೆ ಎಂದು ನಿರೀಕ್ಷಿಸಲಾಗಿದೆ. ಸಿ.ಡಿ.ಯು. ಜತೆ ಮಹಾಮೈತ್ರಿ ಸರಕಾರ ಅನಿವಾರ್ಯವಾಗುವ ಪರಿಸ್ಥಿತಿ ಬರುವುದು ಮೊದಲ ಸ್ಥಾನ ಪಡೆದ ಎಸ್.ಡಿ.ಪಿ.ಗೂ ಇಷ್ಟವಿಲ್ಲ. ಆದ್ದರಿಂದ ಗ್ರೀನ್ ಮತ್ತು ಎಫ್.ಡಿ.ಪಿ.ಗಳ ಜತೆ ವಿವರವಾದ ಮಾತುಕತೆ ನಡೆಸಿ ನೀತಿ-ಧೋರಣೆಗಳ ಸಹಮತ ಮೂಡಿಸಿ ಮೈತ್ರಿಕೂಟದ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಲು ಶತಪ್ರಯತ್ನ ಮಾಡಲಿದೆ. ಈಗಿನ ಸೂಚನೆಗಳ ಪ್ರಕಾರ ಎಸ್.ಡಿ.ಪಿ.-ಗ್ರೀನ್-ಎಫ್.ಡಿ.ಪಿ. ಮೈತ್ರಿಕೂಟ ಸರಕಾರದ ಸಾಧ್ಯತೆಯೇ ಅತಿ ಹೆಚ್ಚಿದೆ ಎನ್ನಲಾಗಿದೆ. ಹಿಂದಿನ ಸರಕಾರದಲ್ಲಿ ಹಣಕಾಸು ಸಚಿವರಾಗಿದ್ದ ಎಸ್.ಪಿ.ಡಿ. ಪಕ್ಷದ ನಾಯಕ ಶೋಲಫ್ ಶೋಲ್ಝ್ ಹೊಸ ಸರಕಾರದ ಚಾನ್ಸಲರ್ (ನಮ್ಮ ಪ್ರಧಾನಿಯಂತಹ ಹುದ್ದೆ) ಆಗುವ ಸಾಧ್ಯತೆ ಹೆಚ್ಚು. ಆದರೆ ಸಿ.ಡಿಯು. ಪಕ್ಷದ ಆರ್ಮಿನ್ ಲಾಶೆಟ್ ಚಾನ್ಸಲರ್ ಹುದ್ದೆ ಪಡೆಯುವ ಪೈಪೋಟಿ ನಡೆಸಲಿದ್ದಾರೆ.

ಐದನೆಯ ಮತ್ತು ಆರನೆಯ ಸ್ಥಾನಗಳಿಸಿರುವ ಉಗ್ರ ಬಲಪಂಥೀಯ ಎ.ಎಫ್.ಡಿ. ಮತ್ತು ಎಡಪಕ್ಷಗಳನ್ನು ಸರಕಾರ ರಚನೆಯ ಕಸರತ್ತಿನಲ್ಲಿ ಪರಿಗಣಿಸಲಾಗುತ್ತಿಲ್ಲ ಎಂಬುದನ್ನು ಗಮನಿಸಬಹುದು. ಎಸ್.ಡಿ.ಪಿ.-ಗ್ರೀನ್-ಎಡಪಕ್ಷ ಮೈತ್ರಿಕೂಟಗಳು ಹಲವು ರಾಜ್ಯಗಳಲ್ಲಿ ಪ್ರದೇಶಗಳಲ್ಲಿ ನಗರಗಳಲ್ಲಿ (ರಾಜಧಾನಿ ಬರ್ಲಿನ್ ಸೇರಿದಂತೆ) ಸರಕಾರ ರಚಿಸಿದ್ದು, ಅದರ ಸಾಧ್ಯತೆಯನ್ನು ನಿರೀಕ್ಷಿಸಲಾಗಿತ್ತು. ಆದರೆ ಈ ಮೈತ್ರಿಕೂಟಕ್ಕೆ 363 ಸೀಟುಗಳಿದ್ದು ಬಹುಮತಕ್ಕೆ 5 ಸೀಟುಗಳ ಕೊರತೆಯಿದೆ. ಆದ್ದರಿಂದ ನಡು-ಎಡಪಂಥೀಯ ಸರಕಾರ ಸಾಧ್ಯವಿಲ್ಲ. ಉಗ್ರ ಬಲಪಂಥೀಯ ಎ.ಎಫ್.ಡಿ. ಈ ಕಸರತ್ತಿನಲ್ಲಿ ‘ಅಸ್ಪೃಶ್ಯ’ರಂತಿದ್ದು ಯಾವ ಪಕ್ಷವೂ ಅದನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಗಮನಿಸಬೇಕು. ಸಿ.ಡಿಯು.-ಎಫ್,ಡಿ.ಪಿ-ಎ.ಎಫ್.ಡಿ.ಗೆ ಅಗತ್ಯ ಬಹುಮತವಿದ್ದರೂ ಸಿ.ಡಿ.ಯು. ಈ ಸಾಧ್ಯತೆಯನ್ನು ಪರಿಗಣಿಸಿಲ್ಲ.

ಜರ್ಮನಿಯ ಸಂವಿಧಾನದ ಪ್ರಕಾರ ಸರಕಾರದ ರಚನೆಗೆ ಯಾವುದೇ ಸಮಯದ ಮಿತಿಯಿಲ್ಲ. 2017ರಲ್ಲಿ ಸರಕಾರ ರಚನೆಯ ಪ್ರಕ್ರಿಯೆಗೆ ಹಲವು ತಿಂಗಳುಗಳ ಕಾಲ ಹಿಡಿದಿತ್ತು. ಸಂಪ್ರದಾಯದ ಪ್ರಕಾರ ಮೊದಲ ಅತಿ ದೊಡ್ಡ ಪಕ್ಷವನ್ನು ಅಧ್ಯಕ್ಷರು ಸರಕಾರ ರಚಿಸಲು ಆಹ್ವಾನಿಸುತ್ತಾರೆ. ಆ ಪ್ರಯತ್ನ ವಿಫಲವಾದರೆ ಎರಡನೆಯ ಅತಿ ದೊಡ್ಡ ಪಕ್ಷಕ್ಕೆ ಅವಕಾಶವಿರುತ್ತದೆ. ಹಿಂದೆ ಮೂರು ಬಾರಿ ಎರಡನೆಯ ಅತಿ ದೊಡ್ಡ ಪಕ್ಷ ಮೈತ್ರಿಕೂಟ ಸರಕಾರ ರಚಿಸಿದ ಉದಾಹರಣೆಗಳಿವೆ. ಅಂದರೆ ಬಹುಮತವಿರುವ ಮೈತ್ರಿಕೂಟ ಯಾರು ರಚಿಸುತ್ತಾರೋ ಅವರಿಗೆ ಸರಕಾರ ಮಾಡುವ ಅವಕಾಶವಿರುತ್ತದೆ.

ಜರ್ಮನಿಯಲ್ಲಿ ಸರಕಾರ ರಚನೆ ಮತ್ತು ಅದು ಯಾವ ಧೋರಣೆಗಳ ಸರಕಾರವಾಗಿರುತ್ತದೆ ಎಂಬುದನ್ನು ಜರ್ಮನ್ ಮಾತ್ರವಲ್ಲ, ಇಡೀ ಯುರೋಕೂಟದ ಜನತೆ ಕಾತರದಿಂದ ನೋಡುತ್ತಿದ್ದಾರೆ. ಯುರೋಪಿನ ಅತಿ ದೊಡ್ಡ ಆರ್ಥಿಕವಾಗಿ, ಯುರೋಕೂಟದ ಸಹಜ ನಾಯಕನಾಗಿ ಮತ್ತು ಯುರೋಕೂಟದ ಅಧ್ಯಕ್ಷಗಿರಿಯನ್ನು 2022 ಜನವರಿಯಿಂದ ವಹಿಸಿಕೊಳ್ಳುತ್ತಿರುವ ದೇಶವಾಗಿ ಜರ್ಮನಿಯಲ್ಲಿ ಉತ್ತಮ ಭದ್ರ ಸರಕಾರ ರಚನೆ ಅಗತ್ಯ. ಕ್ವಾಡ್, ಔಕಸ್ ರಚನೆಯ ನಂತರ  ಯುರೋ ಕೂಟ ಮತ್ತು ಯು.ಎಸ್ ನಡುವೆ ಬದಲಾಗುತ್ತಿರುವ ಸಂಬಂಧಗಳ ಸಂದರ್ಭದಲ್ಲಿ ಸಹ ಇದು ಮಹತ್ವ ಪಡೆದಿದೆ.

Donate Janashakthi Media

Leave a Reply

Your email address will not be published. Required fields are marked *