ಎಸ್.ವೈ. ಗುರುಶಾಂತ್
ಕೆ.ಪಿ.ಸಿ.ಸಿ. ಕಾರ್ಯಾದ್ಯಕ್ಷ, ಮಾಜಿ ಸಚಿವ ಸತೀಶ ಜಾರಕಿಹೊಳಿ ಯವರು ಆಡಿದ ಒಂದು ಮಾತು ಸಂಘಪರಿವಾರ ಬಾಯಿಗೆ ‘ರಸಗವಳ’ ಆಗಿದೆ. ಬೆಳಗಾವಿ ಜಿಲ್ಲೆಯಲ್ಲಿ ‘ಮಾನವ ಬಂಧುತ್ವ ವೇದಿಕೆ’ಯ ಕಾರ್ಯಕ್ರಮವೊಂದರಲ್ಲಿ `ಹಿಂದು’ ಶಬ್ದದ ಉತ್ಪತ್ತಿ, ಚಾರಿತ್ರಿಕವಾಗಿ ವಿವಿಧ ಕಾಲಘಟ್ಟಗಳಲ್ಲಿ ಅದು ಬಳಕೆಯಾದ ಬಗೆ, ಅದರ ಅರ್ಥ ಹಾಗೂ ಅನರ್ಥಗಳ ಕುರಿತಾಗಿ ಆಡಿದ ಮಾತು ಅವರ ಮೇಲಿನ ಧಾಳಿಗೆ ಕಾರಣವಾಗಿದೆ. ಅದು ಚರ್ಚೆಯ ವಸ್ತುವಾಗಿಯಾಗಲೀ ಅಥವಾ ವ್ಯಕ್ತಿಗತ ನೆಲೆಗೆ ನಿಲ್ಲದೇ ಕಾಂಗ್ರೆಸ್ ಪಕ್ಷಕ್ಕೂ ಸುತ್ತಲಾಗಿದೆ. ಹಾಗೆ ಮಾಡುವುದರಿಂದ ಮಾತ್ರವೇ ತನಗೆ ಲಾಭ ಎನ್ನುವುದು ಚೆನ್ನಾಗಿ ಗೊತ್ತಿರುವ ಬಿಜೆಪಿ ಕಾಂಗ್ರೆಸ್ಸಿನ ಇತರೆ ನಾಯಕರನ್ನೂ ಆರೋಪಿಸಿ ವಿವಾದಕ್ಕೆ ಎಳೆದುಕೊಳ್ಳಲೂ ನೋಡುತ್ತಿದೆ. ಹೀಗಾಗಿ ಅದು ಯಾವ ಚಾರಿತ್ರಿಕ ದಾಖಲೆ, ತರ್ಕ ವಾದಗಳ ವಿವೇಚನೆಗೆ ಆಸ್ಪದ ನೀಡದೇ ಇಡೀ ಹಿಂದೂಗಳನ್ನೇ ಅವಮಾನಿಸಲಾಗಿದೆ ಎಂದೂ ಬಾವೋದ್ರಿಕ್ತಗೊಳಿಸಲು ಅಬ್ಬರಿಸುತ್ತಿದೆ. ಇದಕ್ಕಾಗಿಯೇ ಕಾದು ಕುಳಿತಿರುವ ಮುತಾಲಿಕ, ಸೂಲಿಬೆಲೆ, ಪ್ರತಾಪಸಿಂಹ, ಯತ್ನಾಳ, ಯವರಂತಹ ನಾಗರ ನಾಲಿಗೆಯ ‘ದ್ವೇಷ ಭಕ್ತ’ರು, ಪದವಿ ಮತ್ತು ಪದಾರ್ಥಗಳ ಜತನದಲ್ಲಿರುವ ಮುಖ್ಯಮಂತ್ರಿ ಬೊಮ್ಮಾಯಿ ಯವರು ತಮಗೆ ವಹಿಸಿದ ಕೆಲಸವನ್ನು ಮಾಡುತ್ತಿರುವ ಬಗ್ಗೆ `ಕೇಶವ ಕೃಪಾ’ದಲ್ಲಿ ‘ಗುತ್ತಿಗೆಯ ಲೈಸನ್ಸ್ ‘ನವೀಕರಿಸಿಕೊಳ್ಳುತ್ತಿದ್ದಾರೆ.
ಜಾರಕಿಹೊಳಿ ಯವರ ಹೇಳಿಕೆ ತರಬಹುದಾದ ಮತಗಳ ಡ್ಯಾಮೇಜ್ ಬಗ್ಗೆ ಬೆಚ್ಚಿ ಬಿದ್ದ ಕಾಂಗ್ರೆಸ್ ಪಕ್ಷ ಬಿಜೆಪಿಯವರಿಗಿಂತಲೂ ಮೊದಲು `ಖಂಡಿಸಿ’ ಅಂತರ ಕಾಯ್ದುಕೊಳ್ಳಲು ಮುಂದಾಯಿತು. ಬಿಜೆಪಿ ಇದನ್ನು ಹೇಗೆಲ್ಲಾ ದುರ್ಬಳಕೆ ಮಾಡಬಲ್ಲದು ಎಂಬುದರ ಪ್ರಾಯೋಗಿಕ ಅಂದಾಜಿಲ್ಲದೇ ಮುಗ್ಧವಾಗಿರಲು ಸಾಧ್ಯವಿಲ್ಲ ಎನ್ನುವುದು ನಿಜ. ಆದರೆ ಕೆಪಿಸಿಸಿ ಅದ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ಹಿಂದು ಶಬ್ದ ಮತ್ತು ಧರ್ಮ, ಧರ್ಮಾಚರಣೆ ಮುಂತಾದವುಗಳ ಬಗ್ಗೆ ಮಾಡಿದ ವ್ಯಾಖ್ಯಾನ ‘ವೇ ಚಿತೋಹಾರಿ’! ತಮ್ಮ ಅನುಯಾಯಿ ಹೇಳಿಕೆಯ ಬಗ್ಗೆ ಅವರದ್ದೇನೂ ಹೇಳದೇ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಹೇಳಿಕೆಯತ್ತ ತೋರು ಬೆರಳು ತೋರಿಸಿ ಸಿಧ್ದರಾಮಯ್ಯನವರು ಸುಮ್ಮನಾಗಿದ್ದಾರೆ. ಬಹುಶಃ ಅದಕ್ಕಿಂತಲೂ ಹೆಚ್ಚು ಹೇಳಲು, ಮಾಡಲು ಕಷ್ಟ ಸಾಧ್ಯವಿರಬಹುದು. ಹೀಗೆ ಒಟ್ಟು ಪ್ರಕರಣದ ರಾಜಕೀಯ ದುರ್ಬಳಕೆ, ಸ್ವಪಕ್ಷದಲ್ಲಿನ ಸನ್ನಿವೇಶ ಸೂಕ್ಷ್ಮತೆ, ಮಿತಿಗಳನ್ನು, ಒತ್ತಡಗಳನ್ನು ಒಬ್ಬ ಸಾಮಾಜಿಕ ಚಿಂತಕನಂತಲ್ಲದೇ ರಾಜಕೀಯ ನಾಯಕನಾಗಿರುವ ಸತೀಶ ಜಾರಕಿಹೊಳಿ ಯವರು ಅರಿತುಕೊಂಡರು. ತಾವು ಆಡಿದ ಮಾತು ತಿರುಚುತ್ತಿರುವುದನ್ನು ಖಂಡಿಸುತ್ತಾ, ಅಪಾರ್ಥಗೊಂಡು ಯಾರಿಗಾದರೂ ನೋವುಂಟು ಮಾಡಿದ ಬಗ್ಗೆ ವಿಷಾದ ವ್ಯಕ್ತ ಪಡಿಸಿದ್ದಾರೆ. ತಮ್ಮ ಅಭಿಪ್ರಾಯಕ್ಕೆ ದಾಖಲೆಗಳನ್ನು ನೀಡಲು, ವಿಚಾರಣೆ ನಡೆಸಲು ಕೋರಿ ಮುಖ್ಯಮಂತ್ರಿಗಳಿಗೆ ಪತ್ರವನ್ನೂ ಬರೆದಿದ್ದಾರೆ. ವಿಚಾರಣೆಗೆ ಆದೇಶಿಸುವುದರ ಔಚಿತ್ಯವನ್ನು ಮುಖ್ಯಮಂತ್ರಿ ನಿರಾಕರಿಸಿದ್ದಾರೆ. ಅಕಾಡೆಮಿಕ್ ಔಚಿತ್ಯವನ್ನು ಕಟ್ಟಿಕೊಂಡು ಅವರಿಗೇನಾಗಬೇಕಿದೆ?
ಸತೀಶ ಜಾರಕಿಹೊಳಿ ಯವರು ಒಬ್ಬ ಅನುಭವಿ ಹಿರಿಯ ರಾಜಕಾರಣಿ. ಜನ ಬೆಂಬಲವುಳ್ಳವರೂ ಕೂಡ. ಹಾಗೆ ಒಬ್ಬ ಉದ್ಯಮಿ. ಮೇಲಾಗಿ ಸಾಮಾಜಿಕ ಚಿಂತನೆ, ಕಳಕಳಿಯುಳ್ಳ ಕಾರ್ಯಕರ್ತ. ಇಂದಿನ ರಾಜಕೀಯ ಉದ್ಯಮದ ವಾತಾವರಣ ದಲ್ಲಿಯೂ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವದ ಬೆಳೆ ಬೆಳೆಯಲು ತಮ್ಮ ಭಾಗಶಃ ಸಮಯ, ಸಂಪನ್ಮೂಲಗಳನ್ನು ವ್ಯಯಿಸುತ್ತಿರುವ ಭಿನ್ನ ರಾಜಕಾರಣಿ. ಅವರದ್ದೇ ಆಗಿರುವ ಮಾನವ ಬಂಧುತ್ವ ವೇದಿಕೆಯಲ್ಲಿ ಆಡಿದ ಒಟ್ಟು ಮಾತುಗಳ ಇಂಗಿತ ಹಿಂದುತ್ವದ ರಾಜಕಾರಣವನ್ನು ಬಯಲಿಗೆಳೆಯುವುದೇ ಆಗಿದೆ. ಉದ್ದೇಶವೇನೋ ಸರಿ, ಆದರೆ `ಹಿಂದು’ ಮತ್ತು `ಹಿಂದುತ್ವ’ ಕ್ಕಿರುವ ವ್ಯತ್ಯಾಸ ಹಾಗೂ ಹಿಂದುತ್ವದ ಮತೀಯ ರಾಜಕಾರಣವನ್ನು ಎದುರಿಸಲು ಬೇಕಾದ ಎಚ್ಚರ, ಸೂಕ್ಷ್ಮತೆಗಳು ಯಾವುದೇ ಸಾಮಾಜಿಕ ಕಾರ್ಯಕರ್ತನಿಗೆ ಸದಾ ಇರಲೇ ಬೇಕು. ಅದರಲ್ಲೂ ಒಬ್ಬ ರಾಜಕಾರಣಿ ಆಡುವ ಪ್ರತಿ ಮಾತುಗಳು, ಜನರು ಅದನ್ನು ಗ್ರಹಿಸಬಹುದಾದ ರೀತಿ, ಅಭಿಪ್ರಾಯವನ್ನು ಮನವರಿಕೆ ಮಾಡಲು ಇಲ್ಲವಾಗುವ ಮಿತಿಗಳು, ವಿರೋಧಿಗಳು ಅದನ್ನು ಬಳಸಬಲ್ಲ ಸಾಧ್ಯತೆಗಳು ಈ ಎಲ್ಲವುಗಳ ಬಗ್ಗೆ ಎಚ್ಚರದ ಜೊತೆ ಸೂಕ್ಷ್ಮತೆಗಳನ್ನೂ ಹೊಂದಿರ ಬೇಕು. ವೈಚಾರಿಕತೆ ಮೂಡಿಸುವ ಭರದಲ್ಲಿ ಹಿಂದು ಧರ್ಮವನ್ನೂ ಹಿಂದುತ್ವದೊಂದಿಗೆ ಸಮೀಕರಿಸುವಂತೆ ಸನ್ನಿವೇಶ ಸೃಷ್ಟಿಸುವುದು ಸರಿಯಲ್ಲ. ಸಂಘಪರಿವಾರಕ್ಕೆ ಬೇಕಿರುವುದೂ ಇದೇ. ಈ ಗೊಂದಲಗಳಿಂದ ಜಾರಕಿಹೊಳಿಯವರು ಮಾತ್ರವಲ್ಲ ಕಾಂಗ್ರೆಸ್ ಪಕ್ಷವೇ ಹೊರತಿಲ್ಲ. ತಾವು ಹಿಂದುಗಳ ಮತ, ಬೆಂಬಲ ಕಳೆದು ಕೊಳ್ಳಬೇಕಾದಿತೆಂದು ಹಿಂದುತ್ವವನ್ನು ಅವರದೇ ಶೈಲಿಯಲ್ಲಿ ಸ್ವಲ್ಪವಾದರೂ ಅನುಸರಿಸುತ್ತಲೇ ಇರುವುದನ್ನು ಕಾಣುತ್ತಲೇ ಇದ್ದೇವೆ. ಬಿಜೆಪಿಗಿಂತಲೂ ತಾವು ಉತ್ತಮ ಹಿಂದುಗಳೆಂದು, ಹಿಂದುತ್ವವನ್ನು ಕಾಯುವವರೆಂದೂ ಸ್ಪರ್ದೆಗೆ ಇಳಿದು ಮೂತಿ ಸುಟ್ಟುಕೊಂಡಿರುವುದನ್ನು ಕಾಂಗ್ರೆಸ್ ನೆನಪಿಸಿಕೊಳ್ಳುವುದಿಲ್ಲ. ಇಂತಹ ಇಬ್ಭಂದಿ, ಅವಕಾಶವಾದಿ ರಾಜಕಾರಣ ಗುಜರಾತ್ ನಂತಹ ಕಡೆಗಳಲ್ಲಿ ಉಗ್ರ ಹಿಂದುತ್ವವಾದಿ ಫ್ಯಾಶಿಸ್ಟ್ ಶಕ್ತಿಗಳನ್ನು, ಬಿಜೆಪಿಯನ್ನು ಬಲಗೊಳಿಸಿದೆ.
ಜಾರಕಿಹೊಳಿಯವರ ಅಭಿಪ್ರಾಯಗಳನ್ನು ಅಕಾಡೆಮಿಕ್ ವಲಯದಲ್ಲಿ ಅಥವಾ ಶಿಬಿರಗಳಲ್ಲಿ ಚರ್ಚಿಸಬಹುದು. ತಪ್ಪೇನಿಲ್ಲ. ಆದರೆ ಮಾಧ್ಯಮದವರನ್ನೂ ಇಟ್ಟುಕೊಂಡು ಸಾರ್ವಜನಿಕವಾಗಿ ಇಂತಹ ಹೇಳಿಕೆ ನೀಡುವುದು ಅದೆಷ್ಟೇ ಸಾಧಾರಗಳಿದ್ದರೂ ಅಪಾರ್ಥಕ್ಕೆ ದುರ್ಬಳಕೆಯ ಗೊಂದಲಕ್ಕೆ ಎಡೆ ಮಾಡಬಲ್ಲದು.
ಈ ಗೊಂದಲ ನಿವಾರಣೆಯಾಗಲಿ, ಫ್ಯಾಶಿಸ್ಟ್ ಹಿಂದುತ್ವದ ಅಸಲಿ ಮುಖವನ್ನು ಜನತೆ ಇನ್ನಷ್ಟು ಹೆಚ್ವು ಅರಿಯಲಿ.