ಇತ್ತೀಚೆಗೆ ಕೇಂದ್ರದ ಮತ್ತು ರಾಜ್ಯದ ಮೋದಿ ಸರಕಾರ ಕೊವಿಡ್-19 ಮಹಾಸೋಂಕಿನ ಪರಿಸ್ಥಿತಿಯ ದುರ್ಬಳಕೆ ಮಾಡಿಕೊಂಡು ಹಿಂದೆಂದೂ ಕಂಡರಿಯದ ಸರಣಿ ಆರ್ಥಿಕ ದಾಳಿಗಳನ್ನು ರೈತ-ಕಾರ್ಮಿಕರು ಮತ್ತು ಜನತೆಯ ಮೇಲೆ ಹರಿಯಬಿಟ್ಟಿದೆ. ಈ ದಾಳಿಗಳಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಲವ್-ಜಿಹಾದ್, ಗೋಹತ್ಯೆ ನಿಷೇಧದ ಕಾನೂನುಗಳನ್ನು ತರಲು ಮುಂದಾಗಿದೆ. ಜನತೆ ಈ ದಾಳಿಗೆ ಪ್ರತಿರೋಧ ಒಡ್ಡದಂತೆ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ದಮನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೂ ಇದಕ್ಕೆ ರೈತ-ಕಾರ್ಮಿಕರು ತೀವ್ರ ಪ್ರತಿರೋಧ ಒಡ್ಡಿ ದೇಶದಾದ್ಯಂತ ನಡೆಯುತ್ತಿರುವ ಚಾರಿತ್ರಿಕ ರೈತರ ಹೋರಾಟ ನಡೆಯುತ್ತಿದೆ.
ಈ ಚಾರಿತ್ರಿಕವಾದ ನಿರ್ಣಾಯಕ ಹೋರಾಟಕ್ಕೆ ಬೆಂಬಲ ಕೊಡುವುದಲ್ಲದೆ ರೈತ-ಕಾರ್ಮಿಕರು ಮತ್ತು ಜನತೆಯ ಮೇಲಿನ ಸರಣಿ ಆರ್ಥಿಕ ರಾಜಕೀಯ ದಾಳಿಗಳನ್ನು ಎಲ್ಲಾ ಪ್ರಜಾಪ್ರಭುತ್ವ ಶಕ್ತಿಗಳು ಒಗ್ಗೂಡಿ ಹಿಮ್ಮೆಟ್ಟಿಸಬೇಕಾಗಿದೆ. ಇದನ್ನು ಮನಗಂಡ ಸಿ.ಐ.ಟಿ.ಯು, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಕೃಷಿ ಕೂಲಿಕಾರರ ಸಂಘಟನೆ, ಎಸ್.ಎಫ್.ಐ, ಡಿ.ವೈ.ಎಫ್.ಐ, ಜನವಾದಿ ಮಹಿಳಾ ಸಂಘಟನೆ, ದಲಿತ ಹಕ್ಕುಗಳ ಸಮಿತಿ – ಈ ಸಂಘಟನೆಗಳು ಜಂಟಿಯಾಗಿ ರಾಜ್ಯವ್ಯಾಪಿ ರೈತ-ಕಾರ್ಮಿಕ ಜಾಥಾಗಳನ್ನು ಸಂಘಟಿಸಲು ನಿರ್ಧರಿಸಿವೆ. ರಾಜ್ಯದಾದ್ಯಂತ ಜನವರಿ 22 ರಿಂದ 30ರ ವರೆಗೆ ಒಂದೇ ಸಮಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸುವ ಏಳು ಪ್ರಾದೇಶಿಕ ಜಾಥಾಗಳನ್ನು ಸಂಘಟಿಸಲಿವೆ ಎಂದು ತಿಳಿದು ಬಂದಿದೆ.
ಜನವರಿ 26 ರಂದು ದೇಶವ್ಯಾಪಿ ರೈತರ ಹೋರಾಟದ ಬೆಂಬಲಾರ್ಥ ನಡೆಯಲಿರುವ ಟ್ರಾಕ್ಟರ್ ರ‍್ಯಾಲಿಗಳಿಗೆ ಬೆಂಬಲ ಕೊಡಲಾಗುವುದು.
ಏಳು ರೈತ-ಕಾರ್ಮಿಕರ ಪ್ರಾದೇಶಿಕ ಜಾಥಾಗಳ ವಿವರಗಳು ಹೀಗಿವೆ :
ಜಾಥಾ ಸಂಖ್ಯೆ ಜಿಲ್ಲೆಗಳು
ಜಾಥಾ 1 ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ
ಜಾಥಾ 2 ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು
ಜಾಥಾ 3 ಮಂಡ್ಯ, ಚಾಮರಾಜನಗರ, ಮೈಸೂರು, ಕೊಡಗು, ಹಾಸನ
ಜಾಥಾ 4 ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ
ಜಾಥಾ 5 ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ಧಾರವಾಡ
ಜಾಥಾ 6 ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಹಾವೇರಿ
ಜಾಥಾ 7 ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು.
ಈ ಏಳು ಜಾಥಾಗಳು ಎಲ್ಲ ತಾಲೂಕುಗಳನ್ನು ಮುಟ್ಟಲಿದ್ದು ಎಲ್ಲ ತಾಲೂಕು ಕೇಂದ್ರಗಳಲ್ಲಿ ಬೃಹತ್ ಜನಸಭೆಗಳನ್ನು ನಡೆಸಲಿದೆ. ಮೇಲೆ ಹೇಳಿದ ಸಾಮೂಹಿಕ ಸಂಘಟನೆಗಳ ಜಿಲ್ಲಾ ಸಮಿತಿಗಳು ಪ್ರಾದೇಶಿಕ ಜಾಥಾ ಸಮಿತಿಯನ್ನು ರಚಿಸಿಕೊಂಡು ಜಾಥಾದ ರೂಟ್, ದಿನಾಂಕ ಮತ್ತಿತರ ವಿವರಗಳನ್ನು ತಯಾರಿಸಲಿದೆ. ಪ್ರತಿದಿನ ಒಟ್ಟು ನಾಲ್ಕು ಸಭೆಗಳನ್ನು ನಡೆಸುವ ಯೋಜನೆಯಿದೆ. ಬೆಳಿಗ್ಗೆ 10 ರಿಂದ 12 ಗಂಟೆಯೊಳಗೆ ಒಂದು ಸಭೆ ಮತ್ತು 1 ಗಂಟೆಯಿಂದ 3 ಗಂಟೆಯೊಳಗೆ ಏಕಕಾಲದಲ್ಲಿ ಎರಡು ತಾಲೂಕು ಕೇಂದ್ರಗಳಲ್ಲಿ ಬಹಿರಂಗ ಸಭೆಗಳನ್ನು ನಡೆಸಲಾಗುವುದು. ರಾತ್ರಿ 8 ರಿಂದ 9.30 ರೊಳಗೆ ಮೂರನೇ ಬಹಿರಂಗ ಸಭೆ ನಡೆಸಿದ ತಾಲೂಕಿನಲ್ಲಿ ಯಾವುದಾದರೊಂದು ಗ್ರಾಮದಲ್ಲಿ ಅಥವಾ ನಗರದ ವಾರ್ಡಗಳಲ್ಲಿ ಬಹಿರಂಗ ಸಭೆ ಸಂಘಟಿಸಲಾಗುವುದು.
ಪ್ರತಿ ಪ್ರಾದೇಶಿಕ ಜಾಥಾಗಳಲ್ಲಿ ಒಂದು ಕಲಾತಂಡ ಇರಬೇಕು. ಕನಿಷ್ಟ ಇಬ್ಬರು ಹಾಡುಗಾರರಿರುವ ಈ ತಂಡ ಬೀದಿ ನಾಟಕ ಹಾಗೂ ಹಾಡುಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡುವುದು.
ಪ್ರತಿಯೊಂದು ತಾಲೂಕಿನಲ್ಲೂ ಉಪ ಜಾಥಾಗಳ ಮೂಲಕ ಪ್ರಾದೇಶಿಕ ಜಾಥಾಗಳಿಗೆ ಪೂರಕವಾಗಿ ಪ್ರಚಾರಾಂದೋಲನಗಳನ್ನು ಸಂಘಟಿಸಲಾಗುವುದು.
ರಾಜ್ಯ ಬಜೆಟ್-ಪೂರ್ವ ಫೆಬ್ರವರಿ ಮೊದಲ ಅಥವಾ ಎರಡನೇ ವಾರದಲ್ಲಿ ಬೆಂಗಳೂರು ಚಲೋ ಸಹ ಸಂಘಟಿಸಲು ಉದ್ದೇಶಿಸಲಾಗಿದೆ.
ರೈತ-ಕಾರ್ಮಿಕರ ಜಾಥಾದ ಹಕ್ಕೊತ್ತಾಯಗಳು
ಕೇಂದ್ರ ಸರಕಾರ
ಜಾರಿಗೆ ತರಲು ಕ್ರಮವಹಿಸುತ್ತಿರುವ ಕಾರ್ಪೋರೇಟ್ ಕಂಪನಿಗಳ ಪರವಾದ ಎಲ್ಲಾ ಕೃಷಿ ಕಾಯ್ದೆಗಳನ್ನು ವಾಪಾಸು ಪಡೆಯಬೇಕು.
- ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ- 2020 ವಾಪಾಸು ಪಡೆಯಬೇಕು.
- ವಿದ್ಯುತ್ ತಿದ್ದುಪಡಿ ಮಸೂದೆ- 2020 ನ್ನು ಕೈ ಬಿಡಬೇಕು.
- ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳು – 2020 ಗಳನ್ನು ವಾಪಾಸು ಪಡೆಯಬೇಕು.
ಕರ್ನಾಟಕ ಸರಕಾರ,
- ಭೂ ಸುಧಾರಾಣಾ ತಿದ್ದುಪಡಿ ಕಾಯ್ದೆ- 2020 ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ- 2020 ಹಾಗೂ ಜಾನುವಾರು ಹತ್ಯಾ ನಿಷೇಧ ಸುಗ್ರೀವಾಜ್ಞೆಗಳನ್ನು ಈ ಕೂಡಲೇ ಹಿಂಪಡೆಯಬೇಕು.
- ಕೇಂದ್ರ ಸರಕಾರ ಕೂಡಲೇ ಕನಿಷ್ಟ ಬೆಂಬಲ ಕಾಯ್ದೆ ಹಾಗೂ ರೈತ ಹಾಗೂ ಗ್ರಾಮೀಣ ಜನತೆಗೆ ಅಗತ್ಯ ಸಾಲ ಒದಗಿಸುವ ಮತ್ತು ಋಣ ಮುಕ್ತ ಕಾಯ್ದೆಗಳನ್ನು ಅಂಗೀಕರಿಸಬೇಕು. ತಕ್ಷಣವೇ ರೈತರು, ಕೃಷಿಕೂಲಿಕಾರರು ಕಸುಬುದಾರರು ಹಾಗೂ ಕಾರ್ಮಿಕರ ಮತ್ತು ಮಹಿಳೆಯರ ಎಲ್ಲ ಸಾಲಗಳನ್ನು ಒಂದು ಬಾರಿ ಮನ್ನಾ ಮಾಡಬೇಕು.
- ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕನಿಷ್ಟ ಕೂಲಿಯನ್ನು 700 ರೂ.ಗಳಿಗೆ ಮತ್ತು ಮಾಸಿಕ ವೇತನವನ್ನು 21,000 ರೂ.ಗಳಿಗೆ ಹೆಚ್ಚಿಸಬೇಕು. ಉದ್ಯೋಗ ಖಾತ್ರಿ ಕೆಲಸವನ್ನು ಕುಟುಂಬದ ತಲಾ ವ್ಯಕ್ತಿಗೆ ಕನಿಷ್ಟ 200 ದಿನ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ದೊರೆಯುವಂತೆ ಕ್ರಮವಹಿಸಬೇಕು.
- ಬಗರ್ ಹುಕುಂ ಹಾಗೂ ಅರಣ್ಯ ಭೂಮಿ ಬಡ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕು. ಎಲ್ಲಾ ದಲಿತರು ಹಾಗೂ ದಲಿತ ಮಹಿಳೆಯರಿಗೆ ಕನಿಷ್ಟ 5 ಎಕರೆ ನೀರಾವರಿ ಜಮೀನು ಒದಗಿಸಬೇಕು. ಎಲ್ಲಾ ಬಡವರಿಗೆ ಕನಿಷ್ಟ 80:80 ಚದರ ಅಡಿ ವಿನ್ಯಾಸದ ಸ್ಥಳದಲ್ಲಿ 5 ಲಕ್ಷ ರೂ. ಮೌಲ್ಯದ ಉಚಿತ ಮನೆಯನ್ನು ಒದಗಿಸಬೇಕು.
- ಕೇಂದ್ರ ಮತ್ತು ರಾಜ್ಯ ಸರಕಾರಗಳು, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮುದಾಯಗಳ ಜನ ಸಂಖ್ಯೆಗನುಗುಣವಾಗಿ ಮತ್ತು ಹಿಂದುಳಿತ ಜಾತಿ ಹಾಗೂ ವರ್ಗಗಳ ಬಡ ಜನಸಮುದಾಯಗಳ ಜನ ಸಂಖ್ಯೆಗನುಗುಣ ಅನುದಾನ ನೀಡುವ ಮತ್ತು ಶಿಕ್ಷಣ ಹಾಗೂ ಉದ್ಯೋಗಗಳನ್ನು ಒದಗಿಸುವ ಮತ್ತು ಬಡ್ತಿಯಲ್ಲಿ ಮೀಸಲಾತಿಯನ್ನು ನೀಡುವ ಕಾಯ್ದೆಗಳನ್ನು ಜಾರಿಗೊಳಿಸಬೇಕು. ಸಾಚಾರ್ ಸಮಿತಿ ವರದಿಯನ್ನು ಜಾರಿಗೊಳಿಸಬೇಕು.
- ಸಾರ್ವಜನಿಕ ರಂಗದ ಕೈಗಾರಿಕೆಗಳ ಮತ್ತು ಲಾಭದಾಯಕ ಸಂಸ್ಥೆಗಳ ಖಾಸಗೀಕರಣವನ್ನು ವಾಪಾಸು ಪಡೆದು, ಸಾರ್ವಜನಿಕ ರಂಗ ಬಲಪಡಿಸಲು ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆ ಮಾಡಬೇಕು.
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಶಿಕ್ಷಣವನ್ನು ಬಲಪಡಿಸಬೇಕು. ಜನ ವಿರೋದಿ ಹೊಸ ಶಿಕ್ಷಣ ನೀತಿಯನ್ನು ಹಿಂಪಡೆಯಬೇಕು. ಉದ್ಯೋಗ ದೊರೆಯುವವರೆಗೆ ಎಲ್ಲಾ ನಿರುದ್ಯೋಗಿಗಳಿಗೆ ಕನಿಷ್ಟ ಮಾಸಿಕ 10,000 ರೂ ನಿರುದ್ಯೋಗ ಭತ್ಯೆ ನೀಡಬೇಕು.
- ಎಲ್ಲಾ ಯೋಜನೆಗಳ ಕಾರ್ಮಿಕರಿಗೆ ಉದ್ಯೋಗ ಭದ್ರತೆಗೆ ಕ್ರಮವಹಿಸಬೇಕು. ದೇವದಾಸಿ ಮಹಿಳೆಯರು ಸೇರಿದಂತೆ ಎಲ್ಲರ ಮಾಸಿಕ ಪಿಂಚಣಿಯನ್ನು ಕನಿಷ್ಟ 3,000 ರೂ. ಗಳಿಗೆ ಹೆಚ್ಚಿಸಬೇಕು. ಮಸಣ ಕಾರ್ಮಿಕರಿಗೂ ಮಾಸಿಕ ಸಹಾಯ ಧನದ ಪಿಂಚಣಿ ವಿಸ್ತರಿಸಬೇಕು.
- ಕಳೆದ ಎರಡು ವರ್ಷಗಳಿಂದ ಹೆಚ್ಚಿಸಲಾದ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಹಾಗೂ ವಿದ್ಯುತ್ ಬೆಲೆಗಳನ್ನು ವಾಪಾಸು ಪಡೆಯಬೇಕು.