ಜನವರಿ 10 ರಿಂದ ಅಂಗನವಾಡಿ ನೌಕರರ ಅನಿರ್ಧಿಷ್ಟಾವದಿ ಹೋರಾಟ

ಬೆಂಗಳೂರು: 2021ರ ಬಜೆಟ್‌ನಲ್ಲಿ ನೀಡಬೇಕಾದ ಅನುದಾನ ನೀಡಲಿಲ್ಲ. ಇಲಾಖಾ ಹಂತದಲ್ಲಿ ಹಲವು ಮಾತುಕತೆಗಳಾದರೂ ಯಾವುದೇ ಅನುದಾನ ಬಿಡುಗಡೆಯಾಗಲಿಲ್ಲ ಮಾತ್ರವಲ್ಲ ನಿವೃತ್ತಿಯಾದವರಿಗೆ ಇಡಗಂಟು ನೀಡಲಿಲ್ಲ ಇವೆಲ್ಲವುಗಳನ್ನು ಇಟ್ಟುಕೊಂಡು ಜನವರಿ 10ರಿಂದ ಅಂಗನವಾಡಿ ಕೇಂದ್ರಗಳನ್ನು ಬಂದ್‌ ಮಾಡಿ ಅನಿರ್ಧಿಷ್ಟಾವದಿ ಹೋರಾಟ  ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ತಿಳಿಸಿದೆ.

ಬಜೆಟ್‌ ನಲ್ಲಿ ನೀಡಬೇಕಾದ ಅನುದಾನಕ್ಕಾಗಿ 2021ರ ಮಾರ್ಚ್ 15 ಹಾಗೂ 25ರಂದು, ಜುಲೈ 13 ಹೋರಾಟಗಳನ್ನು ನಡೆಸಿದಾಗ 25-3-2021ರಂದು ಇಂದಿನ ಇಲಾಖಾ ಮಂತ್ರಿ ಶಶಿಕಲಾ ಜೊಲ್ಲೆಯವರು ಮೇ ತನಕ ಸಮಯ ಕೇಳಿದರು. ಹಾಲಿ ಇಲಾಖೆ ಸಚಿವರಾದ ಹಾಲಪ್ಪ ಆಚಾರ್ 24-8-2021ರಂದು ಜಂಟಿ ಸಭೆ ನಡೆಸಿ ಸಮಯ ಕೇಳಿದ್ದರು. ಇಲಾಖಾ ಹಂತದಲ್ಲಿ ಹಲವು ಮಾತುಕತೆಗಳಾದರೂ ಯಾವುದೇ ಅನುದಾನ ಬಿಡುಗಡೆಯಾಗಲಿಲ್ಲ ಎಂದು ಸಂಘಟನೆ ಆರೋಪಿಸಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ರಾಜ್ಯ ಅಧ್ಯಕ್ಷರಾದ ಎಸ್‌.ವರಲಕ್ಷ್ಮಿ ಅವರು ʻʻರಾಜ್ಯದಲ್ಲಿ ಮಹಿಳೆಯರ ಮತ್ತು ಮಕ್ಕಳ ಸರ್ವತೋಮುಖ ಅಭಿವೃದ್ದಿಗಾಗಿ ಅಂಗನವಾಡಿ ನೌಕರರು ಸದಾ ದುಡಿಯುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಹೈಕೋರ್ಟ್‌ನ ಆದೇಶದಂತೆ ರಾಜ್ಯದ 47.37 ಲಕ್ಷ ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ಮತ್ತು ಆರೋಗ್ಯ ಸವಲತ್ತುಗಳನ್ನು ಖಾತ್ರಿಪಡಿಸಲಾಗಿದೆ. ಅಷ್ಟು ಮಾತ್ರವಲ್ಲದೆ ಕೊರೊನಾ ಫ್ರಂಟ್‌ಲೈನ್ ವಾರಿಯರ್ಸ್‌ ಆಗಿ ದುಡಿದು 59 ಜನರು ಬಲಿದಾನವಾಗಿದ್ದಾರೆ. ಮಾತ್ರವಲ್ಲದೆ, 293 ಜನರು ಕೊರೊನಾ ಸೋಂಕಿಗೊಳಗಾಗಿದ್ದಾರೆ. ಕೆಲವರು ಕುಟುಂಬದವರನ್ನು ಕಳೆದುಕೊಂಡು ಒಂಟಿಯಾಗಿದ್ದಾರೆ. ಕೊರೊನಾ ಸಂದರ್ಭದ ನಂತರದಲ್ಲಿ ಇ-ಸರ್ವೆ, ಚುನಾವಣೆಗಳು, ವ್ಯಾಕ್ಸಿನ್ ಹಾಕುವುದು ಮತ್ತು ಅದರ ಸರ್ವೆಗಳು, ಪೋಷಣ್ ಅಭಿಯಾನ, ಪೋಷಣ್ ಪಕ್ವಾಡ ಅಂತ ಆಚರಣೆಗಳು ನಿರಂತರವಾಗಿ ನಡೆಯುತ್ತಿವೆ. ಸರ್ಕಾರದ ನೀತಿಗಳಿಂದ ಅನಿಯಂತ್ರಿತವಾಗಿ ಪೆಟ್ರೋಲ್, ಡೀಸೆಲ್ ಬೆಲೆಗಳು ಹೆಚ್ಚಾಗಿ ಆಹಾರ ದಾನ್ಯಗಳು ಸೇರಿದಂತೆ ಪ್ರತಿಯೊಂದು ವಸ್ತು ಮತ್ತು ಸೇವೆಯ ಬೆಲೆಗಳು ಹೆಚ್ಚಾಗಿದೆ. ಆದರೆ ಆದಾಯ ಮಾತ್ರ ಹೆಚ್ಚಳವಾಗಲಿಲ್ಲ. ಆದರೆ ನೌಕರರ ಬದುಕು ಮಾತ್ರ ದುಸ್ತರವಾಗಿ ಎಂದು ತಿಳಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಸುನಂದಾ ಅವರು ಕೊರೊನಾ ಲಾಕ್‌ಡೌನ್ ಇದ್ದಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೂತನ ಶಿಕ್ಷಣ ನೀತಿ 2020 (ಎನ್‌ಇಪಿ)ನ್ನು ತಂದಿದೆ. ರಾಜ್ಯದಲ್ಲಿ ಸಂಬಂಧಿಸಿದ ಸಂಘಟನೆಗಳ ಬಳಿ ಚರ್ಚಿಸದೇ ಟಾಸ್ಕ್ ಪರ್ಸ್‌ ಕಮಿಟಿಯನ್ನು ಎನ್‌ಇಪಿಯ ಜಾರಿಗಾಗಿ ನೇಮಕ ಮಾಡಿದೆ. ಎನ್‌ಇಪಿಯ ದಸ್ತಾವೇಜಿನಲ್ಲಿ ಆಶಯಗಳು ಬೆಟ್ಟದಷ್ಟಿವೆ. ಆದರೆ ಜಾರಿಯ ಸಂದರ್ಭದಲ್ಲಿ ಸಂಪೂರ್ಣವಾಗಿ ಖಾಸಗೀಕರಣ ಮತ್ತು ವಾಣಿಜ್ಯೀಕರಣವಾಗುವ ಅಂಶಗಳೇ ಹೆಚ್ಚಾಗಿವೆ. ಐಸಿಡಿಎಸ್ ಯೋಜನೆಗೆ ಸಂಬಂಧಿಸಿ 3 ರಿಂದ 6 ವರ್ಷ ಅಂದರೆ 36 ತಿಂಗಳ ಮಗುವಿನಿಂದ 5 ವರ್ಷ 10 ತಿಂಗಳ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ದಾಖಲಾಗುತ್ತಿದ್ದರು. ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗಳಲ್ಲಿ ಅನಿಯಮಿತವಾಗಿ ಎಲ್.ಕೆ.ಜಿ – ಯು.ಕೆ.ಜಿ.ಗಳನ್ನು ತೆರೆದಿದ್ದರಿಂದ ಅಂಗನವಾಡಿ ಮಕ್ಕಳನ್ನು ಅಲ್ಲಿ ದಾಖಲು ಮಾಡಿ ಅಂಗನವಾಡಿ ಕೇಂದ್ರಕ್ಕೆ ಈಗಾಗಲೇ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. 5 ವರ್ಷ ತುಂಬುವುದಕ್ಕೆ ಮೊದಲು ಎನ್‌ಇಪಿಯ ಪ್ರಕಾರ 5 ವರ್ಷದ ಮಕ್ಕಳಿಗೆ ಬಾಲವಾಟಿಕಾ ಎನ್ನುವ ಪ್ರತ್ಯೇಕ ವ್ಯವಸ್ಥೆ ಮಾಡಿದರೆ ಅಂಗನವಾಡಿಗಳಲ್ಲಿ ಕೇವಲ 3 ವರ್ಷದ ಮಕ್ಕಳು ಮಾತ್ರ ಇರುತ್ತಾರೆ. ಇದರಿಂದ ಅಂಗನವಾಡಿ ಕೇಂದ್ರಗಳು ನಿಧಾನಗತಿಯಲ್ಲಿ ಮಕ್ಕಳೇ ಇಲ್ಲದ ಪರಿಸ್ಥಿತಿ ಸಂಭವಿಸುತ್ತದೆ. ಇದರಿಂದಾಗಿ 1974 ಮಕ್ಕಳ ರಾಷ್ಟ್ರೀಯ ನೀತಿ, 1975ರ ಐಸಿಡಿಎಸ್ ಯೋಜನೆಯ ಉದ್ದೇಶ, 2002ರ ವಿಶ್ವ ಸಂಸ್ಥೆಯ ಪೋಷಣೆ 2013ರ ಮಕ್ಕಳ ರಾಷ್ಟ್ರೀಯ ನೀತಿ ಮತ್ತು ಗುರಿಗಳನ್ನು ಸಾಧಿಸಲು ಸಾಧ್ಯವಿಲ್ಲ ಎಂದರು.

ಅಂಗನವಾಡಿ ನೌಕರರನ್ನು ಐಸಿಡಿಎಸ್‌ನ 6 ಸೇವೆಗಳಿಗೆ ಮಾತ್ರ ಸೀಮಿತ ಮಾಡಬೇಕು. ಐಸಿಡಿಎಸ್ ಯೇತರ ಕೆಲಸಗಳನ್ನು ನಿರ್ಬಂಧಿಸಬೇಕು ಹಾಗೂ ಕಾರ್ಯಕರ್ತೆಯರನ್ನು ಶಿಕ್ಷಕಿ ಎಂದು ಗುರುತಿಸಬೇಕು. ಅಂಗನವಾಡಿ ನೌಕರರಿಗೆ ತರಬೇತಿ ನೀಡಿ ಇಸಿಸಿಇ ಮಾರ್ಗದರ್ಶನ ಪ್ರಕಾರ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಬೇಕು. ಅಂಗನವಾಡಿ ಕೇಂದ್ರಕ್ಕೆ ಹೆಚ್ಚುವರಿ ಸಹಾಯಕಿಯನ್ನು ನೇಮಕ ಮಾಡಬೇಕು. ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳಿಗೆ ಸಮವಸ್ತ್ರ, ಷೂಗಳು ಅಗತ್ಯವಿರುವ ವಿದ್ಯಾಭ್ಯಾಸದ ಪರಿಕರಗಳನ್ನು ಕೊಡಬೇಕು. ಅಂಗನವಾಡಿ ನೌಕರರ ವೇತನವನ್ನು ಹೆಚ್ಚಿಸಬೇಕು.  ಕೊರೋನಾ ವಾರಿಯರ್ಸ್‌ ಆಗಿ ಕೆಲಸ ಮಾಡಿ ಸೋಂಕಿತರಾಗಿ ನಿಧನರಾದ ಅಂಗನವಾಡಿ ನೌಕರರಿಗೆ ಕೂಡಲೇ 30 ಲಕ್ಷ ಪರಿಹಾರ ಬಿಡುಗಡೆ ಮಾಡಬೇಕು. ಕೊರೋನಾ ಸಂದರ್ಭದ ಕೆಲಸದ ಒತ್ತಡದಿಂದ ಮೃತರಾದವರಿಗೆ ಮರಣ ಪರಿಹಾರ 1 ಲಕ್ಷ ರೂ. ಕೊಡಬೇಕು ಎಂಬ ಬೇಡಿಕೆ ಸೇರಿದಂತೆ 25 ಕ್ಕೂ ಹೆಚ್ಚು ಬೇಡಿಕೆಗಳ ಈಡೇರಿಕೆಗಾಗಿ ಅನಿರ್ಧಿಷ್ಟಾವದಿ ಹೋರಾಟಕ್ಕೆ ಅಂಗನವಾಡಿ ನೌಕರರು ಸಿದ್ದರಾಗಿದ್ದಾರೆ.

Donate Janashakthi Media

One thought on “ಜನವರಿ 10 ರಿಂದ ಅಂಗನವಾಡಿ ನೌಕರರ ಅನಿರ್ಧಿಷ್ಟಾವದಿ ಹೋರಾಟ

Leave a Reply

Your email address will not be published. Required fields are marked *