‘ಜನತಾ ಮಾಧ್ಯಮ’ ಜನತೆಯ ಆಶೋತ್ತರಗಳ ದನಿ ಹಾಗೂ ವ್ಯಾಪಕ ವೇದಿಕೆಯಾಗಬೇಕು: ಪ್ರಬೀರ್ ಪುರಕಾಯಸ್ಥ

ವಸಂತರಾಜ ಎನ್.ಕೆ.

‘ಜನತಾ ಮಾಧ್ಯಮ’ವು ಮೊದಲನೆಯದಾಗಿ ಮಾಧ್ಯಮವಾಗಿರಬೇಕು. ಹೇಳಬೇಕಾದ್ದನ್ನು ಹೇಳಬೇಕಾದ ಶೇಕಡ 90 ಜನತೆಗೆ ಅರ್ಥವಾಗುವಂತೆ ಆಸಕ್ತಿಕಾರಕವಾಗಿ ಮುಟ್ಟಿಸುವ ಕೌಶಲ್ಯ, ಕಲೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಈವರೆಗಿನ ಮಾಧ್ಯಮ ಬೆಳವಣಿಗೆಗಳಲ್ಲಿ ಆಗಿರುವ ಸಂವಹನ, ತಾಂತ್ರಿಕ ಅಂಶಗಳಿಂದ ಉತ್ತಮವಾದದ್ದನ್ನು ಕಲಿಯಬೇಕು. ‘ಜನತಾ ಮಾಧ್ಯಮ’ ಎಲ್ಲ ಜನವಿಭಾಗಗಳ ಆಶೋತ್ತರಗಳ ದನಿ ಹಾಗೂ ವ್ಯಾಪಕ ವೇದಿಕೆಯಾಗಬೇಕು. ಇದಕ್ಕಾಗಿ ಈ ಜನವಿಭಾಗಗಳನ್ನು ಪ್ರತಿನಿಧಿಸುವ ಜನಸಂಘಟನೆ ಮತ್ತು ಜನಚಳುವಳಿಗಳ ಜತೆ ಸಂಪರ್ಕ ಬೆಳೆಸಬೇಕು.

ಹೀಗೆಂದವರು ಪ್ರಸಿದ್ಧ ಇಂಗ್ಲಿಷ್ ವೆಬ್ ಪತ್ರಿಕೆ ‘ನ್ಯೂಸ್ ಕ್ಲಿಕ್’ ನ ಪ್ರಧಾನ ಸಂಪಾದಕ ಹಾಗೂ ಮಾರ್ಕ್ಸ್‌ವಾದಿ ಚಿಂತಕ ಪ್ರಬೀರ್ ಪುರಕಾಯಸ್ಥ. ಅವರು ಜನಶಕ್ತಿ ಮೀಡಿಯಾ ನವೆಂಬರ್ 1 ರಂದು ಏರ್ಪಡಿದ್ದ “ಕಾರ್ಪೊರೇಟ್ ಮಾಧ್ಯಮಗಳಿಗೆ ಬದಲಿಯಾಗಿ ‘ಜನತಾ ಮಾಧ್ಯಮ’ ಕಟ್ಟುವ ಅನುಭವಗಳು ಮತ್ತು ಸವಾಲುಗಳು” ಎಂಬ ವಿಷಯವಾಗಿ ಭೌತಿಕ+ಆನ್ ಲೈನ್ ವಿಚಾರ ಸಂಕಿರಣದಲ್ಲಿ ದಿಕ್ಸೂಚಿ ಭಾಷಣ ಮಾಡಿ ಮಾತನಾಡುತ್ತಿದ್ದರು. ‘ನ್ಯೂಸ್ ಕ್ಲಿಕ್’ ಮೋದಿ ಸರಕಾರದ ಜನ-ವಿರೋಧಿ ನೀತಿಗಳನ್ನು ಬಯಲಿಗೆಳೆಯುವ, ಜನತೆಯ ಹೋರಾಟಗಳ ಕುರಿತು ವಾಸ್ತವಿಕ ತಳಮಟ್ಟದ ವರದಿ ಮಾಡುವ ವೆಬ್ ಪತ್ರಿಕೆ. ಮೋದಿ ಸರಕಾರ ಭಯ ಪಡುವ ಕೆಲವೇ ಮಾಧ್ಯಮ ಸಂಸ್ಥೆಗಳಲ್ಲಿ ಒಂದು. ಆದ್ದರಿಂದಲೇ ಇತ್ತೀಚೆಗೆ ‘ನ್ಯೂಸ್ ಕ್ಲಿಕ್’ ಕಚೇರಿಯ ಮೇಲೆ ಮತ್ತು ಪ್ರಬೀರ್ ಅವರ ನಿವಾಸದ ಮೇಲೆ ಇಡಿ, ಐ.ಟಿ ದಾಳಿಗಳು ನಡೆದಿವೆ.

‘ಜನತಾ ಮಾಧ್ಯಮ’ವು ಜನಸಂಘಟನೆ ಮತ್ತು ಜನಚಳುವಳಿಗಳ ಜತೆ ಸತತ ಸಂಪರ್ಕ ಸಾಧಿಸಬೇಕು. ಜನವಿಭಾಗಗಳ ಜತೆ ಸಂವಹನ ನಡೆಸುವ ಕುರಿತು ಅವುಗಳಿಂದ ಕಲಿಯಬೇಕು. ಆದರೆ ಜನಸಂಘಟನೆ ಮತ್ತು ಜನಚಳುವಳಿಗಳ ಚಟುವಟಿಕೆಗಳೆಲ್ಲ ಸುದ್ದಿಯಲ್ಲ. ಅವುಗಳು ಮಾಡಿದ್ದು ಮಾತ್ರ ಸುದ್ದಿಯಲ್ಲ ಎಂಬುದನ್ನೂ ಅವರಿಗೆ ಸ್ಪಷ್ಟಪಡಿಸಬೇಕು. ಅವರ ಜತೆಗೂಡಿ ಜನತೆಯ ಎಲ್ಲ ಜನವಿಭಾಗಗಳ ಜತೆ ಸತತ ಸಂವಹನ ಸಾಧಿಸಬೇಕು. ಅವರ ಆಶೋತ್ತರಗಳಿಗೆ ವೇದಿಕೆಯಾಗಬೇಕು. ಸರಕಾರದ ನೀತಿ ಧೋರಣೆಗಳ, ಸಮಾಜದ ದೂರಗಾಮಿ ಸಮಸ್ಯೆಗಳು ಸವಾಲುಗಳು ಮತ್ತು ಪರಿಹಾರಗಳ ಕುರಿತು ವಿಮರ್ಶಾತ್ಮಕ ಸಂವಾದ ಏರ್ಪಡಿಸುವ ವೇದಿಕೆಯಾಗಬೇಕು ಎಂದೂ ಪ್ರಬೀರ್ ಅವರು ಮುಂದುವರೆದು ಹೇಳಿದರು.

‘ಜನತಾ ಮಾಧ್ಯಮ’ವು ‘ಸಾಮಾಜಿಕ ಮಾಧ್ಯಮ’ಕ್ಕಿಂತ ಭಿನ್ನವಾದದ್ದು. ‘ಸಾಮಾಜಿಕ ಮಾಧ್ಯಮ’ ಎಂದು ಕರೆಯಲಾಗುವಂಥದ್ದು ಜಾಗತಿಕ ದೈತ್ಯ ಟೆಕ್ ವೇದಿಕೆಗಳ (ಗೂಗಲ್, ಫೇಸ್ ಬುಕ್, ಯೂ ಟ್ಯೂಬ್, ಟ್ವಿಟರ್, ವಾಟ್ಸಪ್ – ಇವೂ ದೈತ್ಯ ಜಾಗತಿಕ ಕಾರ್ಪೊರೆಟ್‌ಗಳೇ) ಮೇಲೆ ಆಧಾರಿತವಾದವುಗಳು. ಅವುಗಳನ್ನು ‘ಜನತಾ ಮಾಧ್ಯಮ’ವು ಬಳಸಿಕೊಳ್ಳುತ್ತಲೇ, ಅವುಗಳ ಮೇಲೆನೇ ಪೂರ್ಣವಾಗಿ ಅವಲಂಬಿತವಾಗಿರಬಾರದು. ಅವುಗಳ ಏಕಸ್ವಾಮ್ಯ ನಿಯಂತ್ರಣದ ಕುರಿತು ಎಚ್ಚರಿಕೆಬೇಕು.  ಈ ದೈತ್ಯ ಟೆಕ್ ವೇದಿಕೆಗಳು ಬಹುತೇಕ ಬಲಪಂಥೀಯ, ನವಉದಾರವಾದಿ-ಪರ, ಕೋಮುವಾದಿ, ಸಾಮಾಜಿಕ ಸಾಮರಸ್ಯ ಕದಡುವ ವಿಷಪೂರಿತ ಪ್ರಚಾರಗಳ ವೇದಿಕೆಗಳಾಗಿರುವುದು ಆಕಸ್ಮಿಕವಲ್ಲ ಅಥವಾ ಮೇಲುಸ್ತುವಾರಿಯ ಅಭಾವದಿಂದಲ್ಲ. ದುಡ್ಡು ಕೊಟ್ಟು ಪ್ರೊಮೋಟ್ ಮಾಡುವವರ ಪೋಸ್ಟ್‌ಗಳನ್ನು ಪ್ರೊತ್ಸಾಹಿಸುವ ಅವುಗಳ ‘ಅಲ್ಗೊರಿತಂ’ ಎಂದು ಕರೆಯಲಾಗುವ ಗಣಿತ-ಆಧಾರಿತ ವಿಧಾನಗಳು ಈ ರೀತಿಯ ವಿನ್ಯಾಸ ಹೊಂದಿರುವುದೇ ಮೂಲಕಾರಣ. ಅವುಗಳು ತಮ್ಮ ‘ಅಲ್ಗೊರಿತಂ’ನ್ನು ಬಹಿರಂಗಪಡಿಸಲು, ಸಾರ್ವಜನಿಕ ಪ್ರಜಾಸತ್ತಾತ್ಮಕ ನಿಬಂಧನೆಗಳಿಗೆ ಒಳಪಡಿಸಲು ಒತ್ತಾಯಿಸಬೇಕು. ಅದೇ ಸಮಯದಲ್ಲಿ ದೈತ್ಯ ಟೆಕ್ ವೇದಿಕೆಗಳ ದುರ್ವರ್ತನೆಗಳನ್ನು ನೆಪವಾಗಿಟ್ಟುಕೊಂಡು, ಸಾಮಾಜಿಕ ಮಾಧ್ಯಮ ಅಥವಾ ನೆಟ್/ವೆಬ್ ಆಧಾರಿತ ಎಲ್ಲ (ಜನತಾ ಮಾಧ್ಯಮಗಳು ಸೇರಿದಂತೆ) ವೇದಿಕೆಗಳ ನಿಬಂಧನೆಯ ಹೆಸರಲ್ಲಿ (ಇತ್ತೀಚಿನ ಐಟಿ ಕಾನೂನಿನ ತಿದ್ದುಪಡಿಯಂತಹ) ಕಾನೂನು ಕ್ರಮಗಳ ಭೀತಿ ಹುಟ್ಟಿಸಿ ಸೆನ್ಸಾರ್ ಮಾಡುವುದನ್ನು ವಿರೋಧಿಸಬೇಕು. ‘ಜನತಾ ಮಾಧ್ಯಮ’ವು ಆ ಕುರಿತು ಜನಶಿಕ್ಷಣದ ಮೂಲಕ ಹೋರಾಡಬೇಕು ಎಂದು ಪುರಕಾಯಸ್ಥ ಅವರು ಕರೆ ಕೊಟ್ಟರು.

ಸಾಮಾಜಿಕ ಮತ್ತು ಇತರ ಸಾಂಪ್ರದಾಯಿಕ ಮಾಧ್ಯಮಗಳಲ್ಲೂ ಕೋಮುದ್ವೇಷ, ಮಹಿಳಾ ದೂಷಣೆಯ ಮತ್ತು ಸಾಮಾಜಿಕ ಸಾಮರಸ್ಯ ಕದಡುವ ವಿಷಪೂರಿತ ಪ್ರಚಾರವನ್ನು ಎದುರಿಸುವುದು ಹೇಗೆ ಎಂಬುದರ ಕುರಿತು ‘ಜನತಾ ಮಾಧ್ಯಮ’ವು ಸೃಜನಾತ್ಮವಾಗಿರಬೇಕು. ಅವುಗಳ ವಿಷಪೂರಿತ ಭಾಷೆಯಲ್ಲಿ ಪ್ರತಿಕ್ರಿಯಿಸಲು ಹೋಗಬಾರದು.  ಬದಲಿಗೆ ಇಂತಹ ಪ್ರಚಾರವನ್ನು ಹರಿತವಾದ ವಿಡಂಬನೆಗಳ ಮೂಲಕ ಗೇಲಿ ಮಾಡುವ ಮೂಲಕ, ಅವುಗಳನ್ನು ಬಯಲುಗೊಳಿಸುವ ಸೃಜನಾತ್ಮಕ ಮೀಮ್, ವಿಡಿಯೋ, ಬರಹಗಳ ಮೂಲಕ ಅದನ್ನು ಮಾಡಬೇಕು ಎಂದು ಪ್ರಬೀರ್ ಪುರಕಾಯಸ್ಥ ಸಲಹೆ ಮಾಡಿದರು.

ಇದಕ್ಕಿಂತ ಮೊದಲು ವೆಬಿನಾರಿನ ವಿಷಯದ ಕುರಿತು ಪ್ರಸ್ತಾವನೆಯ ಮಾತುಗಳನ್ನು ಆಡುತ್ತಾ ವಸಂತರಾಜ ಎನ್.ಕೆ ‘ಜನತಾ ಮಾಧ್ಯಮ’ ಎಂದರೇನು ಎಂದು ವಿವರಿಸಿದರು. ಅಕ್ಟೋಬರ್ 2020ರಲ್ಲಿ “ಪರ್ಯಾಯ ಮಾಧ್ಯಮ ಏಕೆ? ಹೇಗೆ?” ಎಂಬ ವಿಷಯದ ಕುರಿತು ಜನಶಕ್ತಿ ಮೀಡಿಯಾ ಸಂಘಟಿಸಿದ ವೆಬಿನಾರಿನ ದಿಕ್ಸೂಚಿ ಭಾಷಣ ಮಾಡುತ್ತಾ ಪಿ.ಸಾಯಿನಾಥ ಅವರು ಅರ್ಥೈಸಿದಂತೆ ‘ಜನತಾ ಮಾಧ್ಯಮ’ವನ್ನು ಕಲ್ಪಿಸಲಾಗಿದೆ. ಅವರು ‘ಮುಖ್ಯವಾಹಿನಿ ಮಾಧ್ಯಮ’, ‘ಪರ್ಯಾಯ ಮಾಧ್ಯಮ’ ಎಂಬ ಪರಿಕಲ್ಪನೆಯನ್ನೇ ಒಪ್ಪುವುದಿಲ್ಲ ಎಂದಿದ್ದರು. ಇಂದು ‘ಮುಖ್ಯವಾಹಿನಿ ಮಾಧ್ಯಮ’ ಎಂದು ಕರೆಸಿಕೊಳ್ಳುವಂತಹದು ಯಾವುದೇ ಅರ್ಥದಲ್ಲಿ ಮುಖ್ಯವಾಹಿನಿಯ ಮಾಧ್ಯಮವಲ್ಲ. ಅದು ಕಾರ್ಪೊರೇಟುಗಳಿಗಾಗಿ ಇರುವ ಕಾರ್ಪೊರೇಟ್ ಮಾಧ್ಯಮ. ಈ ಮಾಧ್ಯಮಗಳಿಗೆ ಈಗ ದೇಶದ ‘ಮುಖ್ಯವಾಹಿನಿ’ಯ ಶೇಕಡ 90ರಷ್ಟು ಇರುವ ಜನರ ಜೀವನ, ಸಮಸ್ಯೆಗಳ ಕುರಿತು ಅರಿವಿಲ್ಲ, ಅದು ಬೇಕಾಗಿಯೂ ಇಲ್ಲ. ಅವರನ್ನು ಉದ್ದೇಶಿಸುವುದು ಕೂಡಾ ಅವರಿಗೆ ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ಕಾರ್ಪೊರೇಟ್ ಕಂಪನಿಗಳ ಉತ್ಪನ್ನಗಳಿಗೆ ಗ್ರಾಹಕರನ್ನು ಒದಗಿಸುವುದು ಮಾತ್ರ. ಅದರ ಎಲ್ಲ ಚಟುವಟಿಕೆಗಳು ಅದರ ಸುತ್ತ ಗಿರಕಿ ಹೊಡೆಯುತ್ತವೆ.  ಇದು (ಕೆಲವು ಅಪರೂಪದ ಅಪವಾದಗಳನ್ನು ಬಿಟ್ಟರೆ) ಕಾರ್ಪೊರೇಟ್ ಕಂಪನಿಗಳ ನೇರ/ಪರೋಕ್ಷ ಒಡೆತನ/ನಿಯಂತ್ರಣದಲ್ಲಿರುವ, ಅವುಗಳ ಮತ್ತು ಅವುಗಳ ಹಿತಾಸಕ್ತಿ ಕಾಪಾಡುವ ಆಳುವ ವರ್ಗಗಳ/ಪಕ್ಷಗಳ ನೀತಿಗಳ ಬೆಂಬಲಕ್ಕೆ ಟೊಂಕಕಟ್ಟಿ ನಿಂತಿರುವ, ಅದಕ್ಕೆ ಕುರುಡು ಹಿಂಬಾಲಕರನ್ನು ಶೇ. 90ರಷ್ಟು ಇರುವ ಜನರಲ್ಲಿ ಸೃಷ್ಟಿಸುವ ಉದ್ದೇಶವಿರುವ ‘ಕಾರ್ಪೊರೇಟ್ ಮಾಧ್ಯಮ’. ಜನಮಾನಸವನ್ನು ಈ ‘ಕಾರ್ಪೊರೇಟ್ ಮಾಧ್ಯಮ’ದ ಹಿಡಿತದಿಂದ ವಿಮೋಚನೆ ಮಾಡುವುದು ‘ಜನತಾ ಮಾಧ್ಯಮ’ದ ಮುಖ್ಯ ಕೆಲಸ. ನಿಜವಾದ ಅರ್ಥದಲ್ಲಿ ‘ಜನತಾ ಮಾಧ್ಯಮ’ವೇ ‘ಮುಖ್ಯವಾಹಿನಿಯ ಮಾಧ್ಯಮ’ ಎಂದು ಸಾಯಿನಾಥ ಹೇಳಿದ್ದರು.

ಮುಖ್ಯವಾಹಿನಿ ಜನತೆಯ ಕುರಿತು ಬರೆಯುವ ‘ಜನತಾ ಮಾಧ್ಯಮ’ಗಳು, ಅವುಗಳ ಗಾತ್ರ, ತಲುಪುವಿಕೆ ಎಷ್ಟೇ ಇರಲಿ, ತಮ್ಮನ್ನು ತಾವು ಮುಖ್ಯವಾಹಿನಿ  ಮಾಧ್ಯಮಗಳೆಂದು ಪರಿಗಣಿಸಬೇಕು. ಸ್ವಾತಂತ್ರ‍್ಯ ಚಳುವಳಿಯ ಕಾಲದಲ್ಲಿ ಗಾಂಧಿ, ಅಂಬೇಡ್ಕರ್ ನಡೆಸಿದ ಪತ್ರಿಕೆಗಳು ಎಷ್ಟೇ ಸಣ್ಣವಾಗಿದ್ದರೂ ಜನತೆಯ ಮಾಧ್ಯಮಗಳಾಗಿ ಅಗಾಧ ರಾಜಕೀಯ ಪರಿಣಾಮ ಬೀರಿದವು. ಕಳೆದ 2-3 ದಶಕ ಬಿಟ್ಟರೆ ಸುಮಾರು 2 ಶತಕಗಳ ಭಾರತೀಯ ಮಾಧ್ಯಮದ ಇತಿಹಾಸದ ಉದ್ದಕ್ಕೂ ಇದು ಸಾಧ್ಯವಾಗಿತ್ತು. ಆದ್ದರಿಂದ ಕಾರ್ಪೊರೇಟ್ ಮಾಧ್ಯಮಗಳಿಂದ ಪ್ರತ್ಯೇಕವಾದ ‘ಜನತಾ ಮಾಧ್ಯಮ’ಕ್ಕೆ ತಕ್ಕುದಾದ ಶೈಲಿ, ಉದ್ದೇಶ, ಕಂಟೆಂಟ್, ಸಂರಚನೆ, ಸಂಪನ್ಮೂಲ ಹೊಂಚುವಿಕೆ, ನೋಡುಗ/ಓದುಗ ಸಮೂಹವನ್ನು ಕಟ್ಟಿ ಬೆಳೆಸುವ ಬಗೆ ಇತ್ಯಾದಿಗಳನ್ನು ರೂಪಿಸಿಕೊಳ್ಳಬೇಕು ಎಂಬ ಸಾಯಿನಾಥ ಅವರ ಸಲಹೆಯನ್ನು ಜಾರಿ ಮಾಡುವುತ್ತ ಈ ವೆಬಿನಾರ್ ಒಂದು ಹೆಜ್ಜೆ ಎಂದು ವಸಂತರಾಜ್ ವಿವರಿಸಿದರು.

ಆ ನಂತರದ ನಡೆದ ಸಂವಾದದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿರುವ ಕನ್ನಡ ವೆಬ್ ಪತ್ರಿಕೆಗಳ ಸಂಪಾದಕರುಗಳಾದ ಶಶಿ ಸಂಪಳ್ಳಿ (ಪ್ರತಿಧ್ವನಿ ನ್ಯೂಸ್), ಸಿರಾಜ್ ಬಿಸರಳ್ಳಿ (ಕನ್ನಡನೆಟ್.ಕಾಂ) ಭಾಗವಹಿಸಿದ್ದರು. ಶಶಿ ಸಂಪಳ್ಳಿ ಅವರು ಮಾತನಾಡುತ್ತಾ ಇಂಗ್ಲಿಷ್ ವೆಬ್ ಪತ್ರಿಕೆಗಳು ಅಖಿಲ ಭಾರತ ಓದುಗರು, ಸಂಪನ್ಮೂಲಗಳು, ಅನುಕೂಲಕರ ಸನ್ನಿವೇಶ ಇಲ್ಲದ ಕನ್ನಡ ವೆಬ್ ಪತ್ರಿಕೆಗಳ ಸಮಸ್ಯೆ ಮತ್ತು ಸವಾಲುಗಳನ್ನು ವಿವರಿಸಿದರು. ಕಾರ್ಪೊರೇಟ್ ಮತ್ತು ಇತರ ಮಾಧ್ಯಮಗಳು ನಿರ್ಲಕ್ಷ್ಯ ಮಾಡುವ ಹಲವು ಸುದ್ದಿ ವಿದ್ಯಮಾನಗಳನ್ನು ಪ್ರಕಟಿಸಿದ ತಮ್ಮ ಅನುಭವದ ಬಗ್ಗೆ ಹೇಳಿದರು. ಒಂದು ವರದಿ ಬಹಳ ವೈರಲ್ ಆಗಿ ಇತರ ಮಾಧ್ಯಮಗಳೂ ಪ್ರಕಟಿಸುವುದು ಅನಿವಾರ್ಯ ಆಗಿದ್ದರ ಕುರಿತು ಹೇಳಿದರು. ಎಷ್ಟೋ ಬಾರಿ ಇಂತಹ ಪತ್ರಿಕೆಗಳು ವರದಿ ಮಾಡುವುದಕ್ಕಷ್ಟೆ ನಿಲ್ಲದೆ ಆ ವಿಷಯದ ಕುರಿತು ‘ಆಕ್ಟಿವಿಸ್ಟ್’ ಪಾತ್ರ ವಹಿಸಿ ಅದನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುವುದೂ ಅಗತ್ಯವಾಗುತ್ತದೆ ಎಂದರು.

ಸಿರಾಜ್ ಬಿಸರಳ್ಳಿ ಅವರು ಸರಕಾರ, ಪ್ರಾದೇಶಿಕ/ಸ್ಥಳೀಯ ಪಟ್ಟಭದ್ರ ಹಿತಾಸಕ್ತಿಗಳು ವೆಬ್ ಪತ್ರಿಕೆಗಳಿಗೆ ಕೊಡುವ ಕಿರುಕುಳದ ಕುರಿತು ಮಾತನಾಡಿದರು. ಸಿಎಎ ವಿರುದ್ಧ ಅವರ ಕವನವನ್ನು ನೆಪ ಮಾಡಿಕೊಂಡು ಅವರ ಮೇಲೆ ಕೇಸು ಹಾಕಿದ್ದನ್ನು, ಹೆಚ್ಚಿನ ಸಂಖ್ಯೆಯಲ್ಲಿ ಹುಸಿ ದೂರಗಳನ್ನು ಸೃಷ್ಟಿಸುವ ಮೂಲಕ ತಮ್ಮ ಮತ್ತು ಪತ್ರಿಕೆಯ ಸಾ.ಮಾ ಅಕೌಂಟುಗಳನ್ನು ಬ್ಲಾಕ್ ಮಾಡಿಸಿದ್ದನ್ನು ಉದಾಹರಿಸಿದರು. ಇಬ್ಬರೂ ಇಂತಹ ವೆಬ್ ಪತ್ರಿಕೆಗಳು ಒಂದು ಸಂಯೋಜನೆ ಸ್ಥಾಪಿಸಿಕೊಂಡು ಸಮಸ್ಯೆಗಳನ್ನು ಜಂಟಿಯಾಗಿ ಎದುರಿಸಬೇಕೆಂದು ಸಲಹೆ ಮಾಡಿದರು. ವಸಂತರಾಜ ಎನ್.ಕೆ ಸಮಾರೋಪದ ಮಾತುಗಳನ್ನಾಡುತ್ತಾ ಕನ್ನಡ ವೆಬ್ ಪತ್ರಿಕೆಗಳ ಜಾಲವನ್ನು ರಚಿಸುವ ಸಲಹೆ ಮಾಡಿದರು. ಈ ಜಾಲ ಸಮಸ್ಯೆಗಳನ್ನು ಜಂಟಿಯಾಗಿ ಎದುರಿಸುವುದಲ್ಲದೆ ಜಂಟಿಯಾಗಿ ಒಂದು ಸುದ್ದಿ ಏಜೆನ್ಸಿ, ತನಿಖಾ ವರದಿಗಳ ಮೇಲೆ ಕೆಲಸ ಮಾಡುವುದು ಮತ್ತಿತರ ಜಂಟಿ ಕೆಲಸಗಳನ್ನು ಮಾಡಬಹುದು ಎಂದು ಸೂಚಿಸಿದರು. ಜನಶಕ್ತಿ ಮೀಡಿಯಾ ಇಂತಹ ಜಾಲ ಸ್ಥಾಪಿಸುವ ಪ್ರಯತ್ನಗಳನ್ನು ಮಾಡುವುದು ಎಂದರು. ಗುರುರಾಜ ದೇಸಾಯಿ ನಿರೂಪಣೆ ಮಾಡಿ ಕಾರ್ಯಕ್ರಮ ನಡೆಸಿಕೊಟ್ಟರು.

Donate Janashakthi Media

Leave a Reply

Your email address will not be published. Required fields are marked *