ಜನತಾ ಜಲಧಾರೆ: ಜೆಡಿ(ಎಸ್) ನ ಸಂದೇಶವೇನು?

ಎಸ್.ವೈ. ಗುರುಶಾಂತ್

ಮೇ 13ರಂದು ಬೆಂಗಳೂರಿನ ನೆಲಮಂಗಲ ಪ್ರದೇಶದಲ್ಲಿ ಜರುಗಿದ ಜಾತ್ಯಾತೀತ ಜನತಾ ದಳ- ಜೆಡಿ(ಎಸ್) ಪಕ್ಷದ `ಜನತಾ ಜಲಧಾರೆ’ ಸಮಾರೋಪದ ಬೃಹತ್ ರ‍್ಯಾಲಿ ರಾಜ್ಯದ ರಾಜಕೀಯ ರಂಗದಲ್ಲಿ ಒಂದು ಮಹತ್ವದ ಘಟನೆ. ಈ ರ‍್ಯಾಲಿಯಲ್ಲಿ 3.5 ಲಕ್ಷಕ್ಕೆ ಕಡಿಮೆ ಇಲ್ಲದಂತೆ ಜನ ಭಾಗವಹಿಸಿದ್ದಾರೆ ಎನ್ನುವ ಅಂದಾಜಿದೆ. ಸ್ವತಃ ಜೆಡಿ(ಎಸ್) ಐದು ಲಕ್ಷ ಜನ ಭಾಗವಹಿಸಲಿದ್ದಾರೆ ಎಂದು ಪ್ರಕಟಿಸಿತ್ತು. ಜೆಡಿ(ಎಸ್) ನ ವರ್ತಮಾನದಲ್ಲಿನ ಹಲವು ಸೋಲುಗಳನ್ನು ಕಂಡಿದ್ದವರು ಆ ಮಾತನ್ನು ಅಷ್ಟು ಸುಲಭದಲ್ಲಿ ನಂಬಲು ಸಾಧ್ಯವಿರಲಿಲ್ಲ. ಈ ರ‍್ಯಾಲಿಗೆ ಹರಿದು ಬಂದ ಜನಸಾಗರ, ತೋರಿದ ಉತ್ಸಾಹ ಸ್ವತಃ ಜೆಡಿ(ಎಸ್) ನಾಯಕರಿಗೇ ಆತ್ಮವಿಶ್ವಾಸ, ಹುಮ್ಮಸ್ಸು ತುಂಬಿದೆ. ಬಹುತೇಕ ಪಕ್ಷಗಳು 2023ರ ಚುನಾವಣೆಯ ತಯಾರಿಗೆ ಇಳಿದಿರುವಾಗ ಜೆಡಿ(ಎಸ್) ಈ ಸಮಾವೇಶದ ಮೂಲಕ ಚುನಾವಣಾ ಹೋರಾಟಕ್ಕೆ ಸರ್ವ ಸನ್ನದ್ಧತೆಯನ್ನು ಘೋಷಿಸಿದೆ.

ಜೆಡಿ(ಎಸ್) ಪಕ್ಷ ಇತ್ತೀಚಿನ ಬಹುತೇಕ ಎಲ್ಲ ಚುನಾವಣೆಗಳಲ್ಲಿ ದಯನೀಯವಾದ ಸೋಲನ್ನು ಕಂಡಿದೆ. ರಾಜಕೀಯ ಮತ್ತು ಸಂಘಟನಾತ್ಮಕವಾಗಿಯೂ ಹಿನ್ನಡೆಯನ್ನು ಅನುಭವಿಸಿರುವುದು ಕಾಣುತ್ತದೆ. ವಿಶೇಷವಾಗಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಭಾರಿ ಹರುಪಿನಲ್ಲಿ ಒಬ್ಬರಿಗೆ ಮತ್ತೊಬ್ಬರು ಪೈಪೋಟಿ ಎನ್ನುವಂತೆ ಪ್ರಚಾರದ ಸ್ಪರ್ಧೆಗೆ ಇಳಿದಿದ್ದಾರೆ. ಒಬ್ಬರು ಇನ್ನೊಬ್ಬರಿಗೆ ಪರ್ಯಾಯ ಎನ್ನುವಂತೆಯೂ ಚಿತ್ರಣವನ್ನು ಬಿಂಬಿಸುತ್ತಿದ್ದಾರೆ. ಮಾತ್ರವಲ್ಲ, ಜೆಡಿ(ಎಸ್) ನ ಮೇಲೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ರಾಜಕೀಯವಾಗಿ ಮತ್ತು ಸಂಘಟನಾತ್ಮಕವಾಗಿ ಸತತ ದಾಳಿಯನ್ನು ನಡೆಸುತ್ತಿವೆ. ಜೆಡಿ(ಎಸ್) ಪಕ್ಷದಲ್ಲಿನ ಹಲವರು ಪಕ್ಷವನ್ನು ತೊರೆದು ಹೋಗುತ್ತಿದ್ದರೆ, ಕೆಲವರು ತೊರೆಯಲು ಸಿದ್ಧರಿದ್ದಾರೆ. ಅಂತಹವರು ಹೋಗುವುದಿದ್ದರೆ ಹೋಗಲಿ ಎಂದು ಜೆಡಿ(ಎಸ್) ನ ನಾಯಕತ್ವವೇ ಬಹಿರಂಗವಾಗಿ ಹೇಳುವುದರ ಮೂಲಕ ವಲಸೆಯ ಸಾಧ್ಯತೆ ಒಪ್ಪಿಕೊಂಡಿದೆ. ಪರಿಷತ್ತಿನ ಸಭಾದ್ಯಕ್ಷ ಬಸವರಾಜ ಹೊರಟ್ಟಿಯವರು ನಾಯಕರ `ಸೌಹಾರ್ದ ಸಮ್ಮತಿ’ ಪಡೆದು ಬಿಜೆಪಿಗೆ ಕಾಲಿಟ್ಟಿರುವುದು ಇನ್ನೂ ಕೆಲವರು ಅವರಂತೆ ಚಿಂತಿಸುತ್ತಿರುವುದು ನಿತ್ಯದ ಸುದ್ದಿಗಳು.

ಈ ‘ಜನತಾ ಜಲಧಾರೆ’ ಸಮಾವೇಶಕ್ಕೆ ಪೂರ್ವಭಾವಿಯಾಗಿ ಕಳೆದ ಏಪ್ರಿಲ್ 16 ರಿಂದ ರಾಜ್ಯದಲ್ಲಿ ಸುಮಾರು 15 ಗಂಗಾರಥಗಳು, 180 ವಿಧಾನ ಸಭಾ ಕ್ಷೇತ್ರದಲ್ಲಿ ಸಂಚರಿಸಿವೆ. ಜನತಾ ಜಲಧಾರೆ ಸಮಾವೇಶದಲ್ಲಿ `ಗಂಗಾ ಪೂಜೆ’ ಮತ್ತು `ಗಂಗಾ ಆರತಿ’ ಪ್ರಮುಖವಾಗಿತ್ತು. ತನ್ನ ರಾಜಕೀಯ ಪ್ರಚಾರದಲ್ಲಿ ರಾಜ್ಯದ ನೀರಾವರಿ ಪ್ರಶ್ನೆಯನ್ನು ಬಹುಮುಖ್ಯವಾದ ಕೇಂದ್ರದ ಪ್ರಶ್ನೆಯನ್ನಾಗಿ ಜೆಡಿ(ಎಸ್) ಬಿಂಬಿಸಿದೆ. ವಿಶೇಷವಾಗಿ, ಈ ಸಮಾವೇಶಕ್ಕೆ ಅತಿ ದೊಡ್ಡ ಸಂಖ್ಯೆಯಲ್ಲಿ ದಕ್ಷಿಣ ಕರ್ನಾಟಕದ ಭಾಗದಿಂದ ಜನರನ್ನು ಅಣಿ ನಡೆಸಿದೆ ಎನ್ನುವುದು ಒಂದು ಗಮನಾರ್ಹವಾದ ಅಂಶ. ಜೆಡಿ(ಎಸ್) ತಾನು ಕರ್ನಾಟಕದಲ್ಲಿ ಒಂದು ಪ್ರಾದೇಶಿಕ ಪಕ್ಷ, ರಾಜ್ಯದಾದ್ಯಂತ ನೆಲೆ ಇರುವ ಪಕ್ಷ ಎಂದು ಬಿಂಬಿಸಿ ಕೊಂಡರೂ ಖಚಿತವಾದ ರಾಜಕೀಯ ಬಲ ಮತ್ತು ಶಾಸಕರ ಪ್ರತಿನಿಧಿತ್ವ ಇರುವುದೇ ದಕ್ಷಿಣ ಕರ್ನಾಟಕದಲ್ಲಿ ಎನ್ನುವುದು ನಿರ್ವಿವಾದ. ತನ್ನದೇ ಸಂಕುಚಿತ ರಾಜಕೀಯ ನಿಲುವು, ಕುಟುಂಬ ರಾಜಕಾರಣ, ಅವಕಾಶವಾದಿ ರಾಜಕೀಯ ಚಂಚಲತೆ, ಸಂಘಟನಾತ್ಮಕವಾಗಿ ನಿಷ್ಕ್ರಿಯತೆ, ಅಧಿಕಾರದ ಅತಿ ಕೇಂದ್ರೀಕರಣ ದಂತಹ ಹಲವು ಪ್ರಶ್ನೆಗಳಿಂದ ಅದು ತನ್ನ ನೆಲೆಯನ್ನು ಹಂತಹಂತವಾಗಿ ಕಳೆದುಕೊಳ್ಳುತ್ತಾ ಇದೀಗ ಮತ್ತೆ ದಕ್ಷಿಣ ಕರ್ನಾಟಕಕ್ಕೆ ಅಂದರೆ ಒಕ್ಕಲಿಗರ ನೆಲೆಯ ಪ್ರದೇಶಕ್ಕೆ ಸೀಮಿತವಾಗಿ ಉಳಿದಿರುವುದು ಗುಟ್ಟಿನ ಸಂಗತಿಯೇನಲ್ಲ. ಆದರೆ ಕರ್ನಾಟಕದಲ್ಲಿ ಬಿಜೆಪಿ ಸ್ಪಷ್ಟ ಬಹುಮತವನ್ನು ಪಡೆಯಲು ಸಾಧ್ಯವಾಗದೇ ಇರುವುದಕ್ಕೆ ದಕ್ಷಿಣ ಕರ್ನಾಟಕದಲ್ಲಿ ಜೆಡಿ(ಎಸ್) ಬಲ ಹೊಂದಿರುವುದು ಕೂಡ ಒಂದು ಕಾರಣವಾಗಿರುವ ಅಂಶ. ಇದನ್ನು ಇತ್ತೀಚೆಗೆ ಗೃಹ ಸಚಿವ ಅಮಿತ್ ಶಾ ಈ ಪ್ರದೇಶಕ್ಕೆ ವಿಶೇಷ ಪಕ್ಷಾಂತರದ ಪ್ಯಾಕೇಜ್ ಮತ್ತು ಅಡ್ಡ ಹಾದಿಗಳ ಅಜೆಂಡಾ ನಿಗದಿಪಡಿಸಿ ರಾಜಕೀಯ ಮತ್ತು ಸಂಘಟನಾತ್ಮಕ ಕಾರ್ಯಸೂಚಿಯ ಚುನಾವಣಾ ಶಂಖ ಊದಿ ಹೋಗಿದ್ದಾರೆ! ಜೊತೆಗೆ ಇಲ್ಲಿಯೇ ಆರೆಸ್ಸೆಸ್ ಕೂಡ ಸಾಮಾಜಿಕ ವಾತಾವರಣವನ್ನು ಕಲಕಿ ಕೋಮುವಾದಿ ದ್ವೇಷದ ಕೃತ್ಯಗಳನ್ನು ರೂಢಿಸಲು ಗಮನ ಕೇಂದ್ರೀಕರಿಸಿದೆ. ಪರ್ಯಾಯ ಬಯಸುವ ಉದಾರವಾದಿಗಳನ್ನು, ಕಾಂಗ್ರೆಸ್ ಮತ್ತು ಜೆಡಿ(ಎಸ್) ಪಕ್ಷಗಳ ಹಿಂದಿರುವ ಸೆಕ್ಯುಲರ್ ಮತದಾರರನ್ನು ಸೆಳೆಯುವ ಕಾರ್ಯ ಯೋಜನೆ ಬಿಜೆಪಿಯದ್ದು. ಪಕ್ಷೇತರವಾಗಿರುವ ಸಂಸದೆ ಸುಮಲತಾ ಅಂಬರೀಶ್ ಮತ್ತವರ ಬೆಂಬಲಿಗರೂ ಆ ಟಾರ್ಗೆಟ್ ನಿಂದ ಹೊರತಿಲ್ಲ. ಹಾಸನ ಜಿಲ್ಲೆಯಲ್ಲಿ ಖಾತೆ ತೆರೆದಿರುವ ಬಿಜೆಪಿ ಅಲ್ಲಿಯೂ ಸುಮ್ಮನೆ ಕುಳಿತಿಲ್ಲ. ಒಕ್ಕಲಿಗರನ್ನು ಗುರಿಯಾಗಿಸಿರುವ ಬಿಜೆಪಿ ಆದಿಚುಂಚನಗಿರಿ ಮಠವನ್ನೂ ತನ್ನ ಕಾರ್ಯತಂತ್ರದಲ್ಲಿ ಇರಿಸಿದೆ. ಇದು ಕಾಂಗ್ರೆಸ್ ನಲ್ಲಿ ಸಹ ಆತಂಕ ಸೃಷ್ಟಿಸಿದೆಯಾದರೂ ಮುಖ್ಯವಾಗಿ, ಜೆಡಿ(ಎಸ್) ಪಕ್ಷ ತನ್ನ ನೆಲೆಯನ್ನು ಉಳಿಸಿಕೊಳ್ಳಲು ಹೆಣಗಬೇಕಾದ ಆತಂಕದ ಸ್ಥಿತಿಯಲ್ಲಿ ಇದೆ. ಈ ಎಲ್ಲ ಸನ್ನಿವೇಶದ ಹಿನ್ನೆಲೆಯಲ್ಲಿ ಜೆಡಿಎಸ್ಸಿನ ಈಗಿನ ಮುತುವರ್ಜಿಗೆ ಬಹುಮುಖ್ಯ ರಾಜಕೀಯ ಆಯಾಮ ಇದೆ.

ಜನತಾ ಜನಧಾರೆ ಬೃಹತ್ ಸಮಾವೇಶದ ಮೂಲಕ ತಾನು ಕನ್ನಡ ನಾಡಿನಲ್ಲಿ ಒಂದು ಗಂಭೀರ ರಾಜಕೀಯ ಶಕ್ತಿಯೆಂದೂ,  ಬಿಜೆಪಿ ಹಾಗೂ ಕಾಂಗ್ರೆಸ್ ಒಳಗೊಂಡು ಯಾರೂ ತನ್ನನ್ನು ಹಗುರವಾಗಿ ಪರಿಗಣಿಸಬಾರದೆಂದೂ ಸ್ಪಷ್ಟ ಸಂದೇಶ ನೀಡಿದೆ. ಮುಂದಿನ ಸರಕಾರ ರಚಿಸುವಲ್ಲಿ ಏಕ ಪಕ್ಷವಾಗಿ ತಾನೇ ಬಲ ಹೊಂದುವ ಆಶಯವನ್ನು ಹೊಂದಿದೆ. ಆದಾಗ್ಯೂ ಪ್ರಾಯೋಗಿಕವಾಗಿ ಅತಂತ್ರದ ತೀರ್ಪನ್ನು ಮತದಾರ ನೀಡಿದಲ್ಲಿ ತಾನೇ’ ಕಿಂಗ್ ಮೇಕರ್’ ನಂತಹ ನಿರ್ಣಾಯಕ ಪಾತ್ರ ವಹಿಸಬೇಕಾಗುತ್ತದೆ ಎಂಬ ಗಟ್ಟಿ ನಂಬಿಕೆಯಲ್ಲಿ ಜೆಡಿ(ಎಸ್) ಇರುವಂತೆ ಕಾಣುತ್ತಿದೆ.

30-40 ಸ್ಥಾನ ಪಡೆಯಬೇಕಾದರೂ ಅದು ಕಣದಲ್ಲಿ ಹಣಾಹಣಿಗೆ ಇಳಿಯಬೇಕು. ಈಗ ಪೂರ್ಣ ಬಹುಮತ ಪಡೆದೇ ಏಕಪಕ್ಷದ ಸರ್ಕಾರ ರಚಿಸುವಂತೆ ಬಲ ನೀಡಲು ಜನರಲ್ಲಿ ಜೆಡಿ(ಎಸ್) ಮನವಿ ಮಾಡಿದೆ. ಆದರೆ ಅಂತಹ ಸಾಧ್ಯತೆಗಳ ಬಗೆಗೆ ಅದರ ಪ್ರಾಯೋಗಿಕ ಮಿತಿಗಳ ಅಂದಾಜು ಅದರ ನಾಯಕರಿಗೆ ಇದ್ದೇ ಇದೆ. ಏಕಾಂಗಿಯಾಗಿ ಚುನಾವಣೆ ಎದುರಿಸುವ ಗುರಿ ಪ್ರಕಟಿಸಿದ್ದರೂ ಸಮಾನ ಮನಸ್ಕರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮಾತುಗಳನ್ನೂ ನಾಯಕರು ಆಗೀಗ ಆಡುವುದನ್ನು ಮರೆತಿಲ್ಲ. ಈ ಸಮಾನ ಮನಸ್ಕರು ಯಾರು ಎನ್ನುವ ಬಗ್ಗೆ ನಿಖರವಾಗಿ ಅದು ಗುರುತಿಸಿಕೊಂಡಿಲ್ಲ ಅಥವಾ ಬಹಿರಂಗವಾಗಿ ಹೇಳಿಲ್ಲ. ಒಂದು ವೇಳೆ ಅದಕ್ಕೆ ಅಂತಹ ನಿರ್ದಿಷ್ಟತೆ ಇದ್ದರೆ ರಾಜಕೀಯ ಜಂಟಿ ಕಾರ್ಯಾಚರಣೆ, ಪರ್ಯಾಯ ಧೋರಣೆ, ಕಾರ್ಯಕ್ರಮಗಳನ್ನು ಆಧರಿಸಬಹುದು. ಆದರೆ ಜೆಡಿ(ಎಸ್) ಯಾವುದಕ್ಕೂ ಖಚಿತವಾಗಿ ಅಂಟಿಕೊಳ್ಳದೇ ಚುನಾವಣಾ ಸಂದರ್ಭಕ್ಕೆ ಆಯ್ಕೆ ಮಾಡಿಕೊಳ್ಳುವ ಪೂರ್ಣ ಸ್ವಾತಂತ್ರ್ಯವನ್ನು ತೆರೆದಿಟ್ಟುಕೊಂಡಿದೆ. ಎಡ ಪಕ್ಷಗಳೊಂದಿಗೂ ಸ್ಥಾನ ಹೊಂದಾಣಿಕೆಯ ಬಗ್ಗೆ ಖಾಸಗಿಯಾಗಿ ಹೇಳಿಕೊಂಡರೂ `ಸಮಾನ ದೂರ’ವನ್ನು ಅದು ಕಾಯ್ದುಕೊಳ್ಳುವುದೇ ಎಂಬುದೂ ಗೊತ್ತಿಲ್ಲ. ರಾಜ್ಯದ ಪ್ರಶ್ನೆಗಳನ್ನು ಬಗೆಹರಿಸುವಲ್ಲಿ ರಾಷ್ಟ್ರೀಯ ಪಕ್ಷಗಳು ವಿಫಲವಾಗಿದ್ದು ಪ್ರಾದೇಶಿಕ ಪಕ್ಷವಾಗಿರುವ ತಾನೇ ಒಂದು ಪರಿಹಾರ ಎನ್ನುವುದಕ್ಕೆ ಹಿಂದಿನಂತೆ ಅದು ಒತ್ತು ನೀಡಿದೆ. ಇದಾಗ ಬೇಕಾದರೆ  ಪರ್ಯಾಯ ನೀತಿ, ಕಾರ್ಯಕ್ರಮಗಳನ್ನು ಸಾರ್ವಜನಿಕವಾಗಿ ಖಾತ್ರಿ ಪಡಿಸಬೇಕು. ಬರೀ ಹೇಳುತ್ತಾ ಹೋಗುವುದರಿಂದ ಏನು ಪ್ರಯೋಜನ?

ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ಮತದಾರರು ನಿರಂತರವಾಗಿ ಒಂದು ಪಕ್ಷಕ್ಕೇ ಎರಡನೆಯ ಮೂರರಷ್ಟು  ಅಥವಾ ಪೂರ್ಣ ಬಹುಮತವನ್ನು ಬಹುತೇಕ ನೀಡುತ್ತಿಲ್ಲ. ಕಾಂಗ್ರೆಸ್ ಪಕ್ಷದ ವಿರುದ್ಧ ಜನತಾ ಪಕ್ಷವನ್ನು ಗೆಲ್ಲಿಸುವ ಮೂಲಕ ಒಂದು ಪರ್ಯಾಯವನ್ನು ಕಂಡುಕೊಂಡಿದ್ದ ಸನ್ನಿವೇಶವನ್ನು ಹಂತ ಹಂತವಾಗಿ ಬಿಜೆಪಿ ತಂತ್ರ- ಕುತಂತ್ರಗಳ ಮೂಲಕವಾಗಿ ಕಬಳಿಸುತ್ತಾ ತಾನೆ ಪರ್ಯಾಯ ಎಂದು ನಿಂತಿದೆ. ಇಂದು ಬಿಜೆಪಿಗೆ ಪರ್ಯಾಯ ಏನು ಎನ್ನುವ ಹಂತಕ್ಕೆ ರಾಜಕೀಯ ಬದಲಾಗಿದೆ. ಕಾಂಗ್ರೆಸ್ ತುಲನಾತ್ಮಕವಾಗಿ ವಿಸ್ತಾರ ಹೊಂದಿದ್ದರೂ ಅದರ ಸ್ಥಿತಿಯೂ ದುರ್ಬಲವಾಗಿದೆ. ಕಾಂಗ್ರೆಸ್ ಗೆ ನಿಜ ಪರ್ಯಾಯವಲ್ಲದ ನೀತಿಗಳು, ತಪ್ಪು ರಾಜಕೀಯ ಆರ್ಥಿಕ ಧೋರಣೆಗಳು, ಸಂದರ್ಭಸಾಧಕ ರಾಜಕಾರಣದಿಂದ ಜನತಾ ಪರಿವಾರದ ಬಹುತೇಕ ಬಣಗಳು ಸಂಪೂರ್ಣ ನಾಶವಾಗಿ ಜೆಡಿ(ಎಸ್) ಮಾತ್ರವೇ ಉಳಿದುಕೊಂಡಿದೆ. ಈಗಲೂ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಮೂರನೆಯ ಪರ್ಯಾಯವನ್ನು ಪ್ರತಿಪಾದಿಸುವ, ಬೆಂಬಲಿಸುವ ಬಹು ದೊಡ್ಡ ನೆಲೆ ಬಲವಾಗಿರುವುದು ಅದಕ್ಕೆ ಬಹು ಮುಖ್ಯ ಕಾರಣ. ಇದು ಜಾತಿ, ರೈತ-ಮಣ್ಣಿನ ಮಕ್ಕಳು ಮುಂತಾದ ಅಸ್ಮಿತತೆಗಳೊಂದಿಗೆ ತಳುಕು ಹಾಕಿರುವುದು ಒಂದು ಸಂಗತಿ ಕೂಡ. ಕರ್ನಾಟಕದಲ್ಲಿ ಪರ್ಯಾಯ ರೂಪಿಸಬೇಕೆಂದರೆ ಮೂರನೆಯ ಪರ್ಯಾಯ ಬಯಸುವ ಶಕ್ತಿಗಳನ್ನು ಜನಪರ ಪರ್ಯಾಯ ರಾಜಕಾರಣದ ಮೂಲಕ ಕ್ರೋಢೀಕರಿಸುವುದು ಮತ್ತು ವಿಸ್ತರಿಸುವುದು ಅಗತ್ಯ. ಈ ದೆಸೆಯಲ್ಲಿ ಎಡ ಪಕ್ಷಗಳ ಶಕ್ತಿ ಸೀಮಿತವಿದ್ದರೂ ಹೋರಾಟದ ಕಣದಲ್ಲಿರುವ ಇತರೆ ಸೆಕ್ಯುಲರ್, ಪ್ರಗತಿಪರ ಶಕ್ತಿಗಳೂ ಬಹು ಮುಖ್ಯವಾದ ಪಾತ್ರವನ್ನು ವಹಿಸಬಹುದು. ಚುನಾವಣೆಗೆ ಸಿದ್ಧವಾಗುತ್ತಿರುವ ಜೆಡಿ(ಎಸ್) ಪಕ್ಷ ತನ್ನ ಮಿತ್ರರು ಮತ್ತು ಶತೃಗಳು ಯಾರೆಂಬ ಬಗ್ಗೆ ಇನ್ನಷ್ಟೂ ಸ್ಪಷ್ಟತೆ ಪಡೆಯುವುದು, ಜನರೆದುರು ಪ್ರತಿಪಾದಿಸಿ ಬದ್ಧತೆಯಿಂದ ಧೃಡವಾಗಿ ನಿಲ್ಲುವುದು ಅಗತ್ಯ ಎಂದಷ್ಟೇ ಈ ಹಂತದಲ್ಲಿ ಹೇಳಬಹುದು.

ಬಿಜೆಪಿ ವಾಹನ ಏರಿದ ಹೊರಟ್ಟಿಯವರು

ಬಸವರಾಜ ಹೊರಟ್ಟಿ ಅವರು ಏಳು ಬಾರಿ ವಿಧಾನ ಪರಿಷತ್ತಿಗೆ ಆಯ್ಕೆಯಾದವರು. ಜೆಡಿಎಸ್ ನಾಯಕರಾಗಿ,, ಹಾಲಿ ಸಭಾಪತಿಗಳಾಗಿ ಇದೀಗ ರಾಜಿನಾಮೆ ಕೊಟ್ಟವರು. ಹಿಂದೆ ಸಚಿವರಾಗಿ ಕೆಲಸ ಮಾಡಿದ ಅನುಭವವೂ ಇದೆ. ವಿಶೇಷವಾಗಿ ಶಿಕ್ಷಕರ ಸಂಘಟನೆಯನ್ನು ಕಟ್ಟಿ ಹೋರಾಟಗಳ ಅನುಭವ ಇರುವವರು. ವಿಧಾನ ಪರಿಷತ್ತಿನ ಸಭಾಪತಿಗಳಾಗಿರುವಾಗಲೇ ಹೊರಟ್ಟಿಯವರು ಬಿಜೆಪಿ ಸೇರಿದರು. ಬಿಜೆಪಿಗೆ ಸೇರಲು ಕಾರಣಗಳೇನು ಅನ್ನುವುದು ವಿವರವಾಗಿ ತಿಳಿಸಿಲ್ಲ. ಮೋದಿ- ಅಮಿತ್ ಶಾ ರವರನ್ನು ಅವರ ದಕ್ಷ ಆಡಳಿತದ, ಸರ್ಕಾರವನ್ನು ಇಲ್ಲವೇ ಸಂಘಪರಿವಾರದ ಶಿಸ್ತನ್ನು ಬಹುವಾಗಿ ಮೆಚ್ಚಿ ದೇಶಪ್ರೇಮದ ಸಲುವಾಗಿ ಬಿಜೆಪಿ ಸೇರುತ್ತಿದ್ದೇನೆ ಎಂದು ಹೇಳಿಕೊಳ್ಳುವವರು ಇದ್ದೇ ಇದ್ದಾರೆ!  ಆದರೆ ಹೊರಟ್ಟಿಯವರು ಹಾಗೆ ‘ಹಾಡ’ದಿದ್ದರೂ ಅಮಿತ್ ಶಾ ರವರ ಸಮ್ಮುಖದಲ್ಲಿ ಬಿಜೆಪಿಗೆ ಸೇರುವುದನ್ನು ಪ್ರಕಟಿಸಿದರು. ಹೇಗೂ ಮತ್ತೇ ಪರಿಷತ್ತಿನ ಸದಸ್ಯರಾಗಬೇಕು, ತಮ್ಮ ಈ ಭವಿಷ್ಯದಲ್ಲೇ ಮಗನ ರಾಜಕೀಯ ಭವಿಷ್ಯ ಅಡಗಿದೆಯೆಂದು ಚಿಂತಿಸಿದ್ದಾರೆನ್ನುವ ಮಾತುಗಳೂ ಇವೆ. ವಿಚಿತ್ರ ಎಂದರೆ ಸಭಾಧ್ಯಕ್ಷರಾಗಿ ಇರುವಾಗಲೇ ಅಮಿತ್ ಶಾ ರವರನ್ನು ಕಂಡು ಬಿಜೆಪಿಗೆ ಸೇರುವುದರ ನಿರ್ಧಾರವನ್ನು ಪ್ರಕಟಿಸಿರುವುದು! ಸಭಾಧ್ಯಕ್ಷ ಆ ಶಾಸನಸಭೆಯ ಸದಸ್ಯರಾಗಿರುತ್ತಾರೆ ಎನ್ನುವುದು ನಿಜ. ಕೆಲವೊಮ್ಮೆ ಸ್ವತಂತ್ರವಾಗಿಯೂ ಇಲ್ಲವೇ ಪಕ್ಷೇತರ ಅಥವಾ ಒಂದು ಪಕ್ಷದ ಸದಸ್ಯರಾಗಿ ಆಯ್ಕೆಯಾಗುವುದು ಸಂವಿಧಾನಾತ್ಮಕವಾದ ಪದ್ಧತಿ. ಆದರೆ ಸಭಾಧ್ಯಕ್ಷರಾದ ಬಳಿಕ ತಮ್ಮ ಮೂಲ ಪಕ್ಷವನ್ನು ಪ್ರತಿನಿಧಿಸುವುದಿಲ್ಲ, ಬದಲಿಯಾಗಿ ಪಕ್ಷಾತೀತವಾಗಿಯೂ ಇರಬೇಕಾಗುತ್ತದೆ. ಆದರೆ ಈ ನಿಯಮಗಳು ಹೊರಟ್ಟಿಯವರಿಗೆ ಗೊತ್ತಿಲ್ಲವೆಂದಲ್ಲ .ಗೊತ್ತಿದ್ದು ಪ್ರಜ್ಞಾಪೂರ್ವಕವಾಗಿಯೂ ಸಹ ಅಮಿತ್ ಶಾ ರವರನ್ನು ಕಂಡು ಬಿಜೆಪಿಗೆ ಸೇರುವುದನ್ನು ಪ್ರಕಟಿಸಿದ್ದಾರೆ. ಆದರೆ ಬಿಜೆಪಿಯ ಸಂವಿಧಾನ ಉಲ್ಲಂಘನಾ ಸಂಸ್ಕೃತಿಗೆ ಒಗ್ಗಿ ಕೊಂಡಿರುವುದಾಗಿ ಪ್ರಕಟಿಸಿದ್ದಾರೆ. ಸಂವಿಧಾನಾತ್ಮಕ ಕನಿಷ್ಠ ನಿಯಮಗಳನ್ನು ಅದರ ಗೌರವವನ್ನು ಕಾಪಾಡುವಂತಹ ಅವಶ್ಯಕತೆ ಇರುವುದಿಲ್ಲ ಮತ್ತು ಅದಕ್ಕೆ ಸಿದ್ದರು ಎಂಬುದನ್ನು ಹೇಳಿದಂತಿದೆ. ಹೊರಟ್ಟಿಯವರು ಮತ್ತೆ ಅಧಿಕಾರದಲ್ಲಿ ಉಳಿದುಕೊಳ್ಳುವ ಇರಾದೆ ಒಂದನ್ನು ಬಿಟ್ಟರೆ ರಾಷ್ಟ್ರಕ್ಕಾಗಿ ರಾಜ್ಯದಲ್ಲಿ ಒಳಿತು ಬಯಸುವ ಯಾವ ಸೂಚನೆಯೂ ಇಲ್ಲ. ಅಧಿಕಾರ ವಲಯದಲ್ಲಿ ತಾವು ಮುಂದುವರೆಯುವ ಇಂಗಿತವನ್ನು ಸೂಚಿಸಿರುವ ಹೊರಟವರು ಮತ್ತೆ ಪದವೀಧರ ಕ್ಷೇತ್ರದಿಂದ ಗೆದ್ದು ಬರಲು ಸಿದ್ಧವಾಗಿದ್ದಾರೆ ಸಂದರ್ಭ ಸಾಧಕ ತನಕ್ಕೆ ಶಿಕ್ಷಕ ಸಮುದಾಯ ಪದವೀಧರರು ಮಣೆ ಹಾಕುತ್ತಾರೆಯೇ? ಯಾವುದೇ ನೀತಿ-ನಿಯಮ ರಾಜಕೀಯ ನೈತಿಕತೆ ಮತ್ತು ಸಂವಿಧಾನ ಬದ್ಧತೆ ಇಲ್ಲದಿರುವುದೇ ರಾಜಕಾರಣದಲ್ಲಿ ಮುಂದುವರಿಯಲು ಅರ್ಹತೆ ಎಂದು ಬಿಂಬಿಸುತ್ತಾ ಬಂದಿರುವ ಬಿಜೆಪಿಗೆ ಹೊರಟ್ಟಿಯವರು ತಕ್ಕ ಅನುಯಾಯಿ ಆಗಬಹುದು ಏನೋ!?

Donate Janashakthi Media

Leave a Reply

Your email address will not be published. Required fields are marked *