ಜನಶಕ್ತಿಯ ವಿರಾಟ್ ಪ್ರದರ್ಶನ

ವರ್ಷದ ಗಣತಂತ್ರ ದಿನದಂದು ನಡೆದಿರುವ ವೈಶಿಷ್ಟ್ಯ ಪೂರ್ಣ ಸಾಮೂಹಿಕ ಕಾರ್ಯಾಚರಣೆ ಹಾಗೂ ಶಾಂತಿಯುತ ಪ್ರತಿಭಟನೆಯ ಮಹತ್ವವನ್ನು ಕೆಲವೇ ಕೆಲವು ಕ್ಷುಲ್ಲಕ ಶಕ್ತಿಗಳು ನಡೆಸಿದ ಕೃತ್ಯಗಳ ಕಾರಣದಿಂದ ತಳ್ಳಿಹಾಕಲು ಆಗುವುದಿಲ್ಲ. ಚಳಿಮಳೆಗಳನ್ನೂ ಲೆಕ್ಕಿಸದೆ ಸಾವಿರಾರು ಪುರುಷರು ಮತ್ತು ಮಹಿಳೆಯರು ಕಳೆದ ಎರಡು ತಿಂಗಳಿಂದ ರಾಜಧಾನಿ ಪ್ರವೇಶಿಸುವ ಗಡಿ ಭಾಗಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಲೇ ಇದ್ದಾರೆ. ಮೂರು ಕರಾಳ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವಲ್ಲಿ ಸರ್ಕಾರದ ಮೊಂಡುತನದ ನಿರಾಕರಣೆ ಹಾಗೂ ಅಸಮರ್ಥನೀಯ ಧೋರಣೆಯೇ ಜನವರಿ 26ರಂದು ಟ್ರ್ಯಾಕ್ಟರ್ ರ್ಯಾಲಿ ನಡೆಸಿ ಜನ ಗಣರಾಜ್ಯ ಆಚರಿಸಲು ಮುಂದಾಗುವ ಪರಿಸ್ಥಿತಿ ನಿರ್ಮಿಸಿತ್ತು ಎನ್ನುವುದನ್ನು ಗಮನಿಸಬೇಕು. ದೆಹಲಿ ಗಡಿಗಳಲ್ಲಿ ವೀರಾವೇಶದ ಹೋರಾಟ ನಡೆಸುತ್ತಿರುವ ರೈತರು ಏಕಾಂಗಿಗಳಲ್ಲ. ಇತರ ಶ್ರಮಜೀವಿಗಳೂ ವಿವಿಧ ಜನವಿಭಾಗಗಳೂ ಅವರ ಜೊತೆಗಿದ್ದಾರೆ. ಹೊಸ ಕಸುವುಸಂಕಲ್ಪದೊಂದಿಗೆ ಚಳವಳಿ ಮುಂದುವರಿಯಲಿದೆ.

ಪ್ರಕಾಶ್ ಕಾರಟ್

ದಿಲ್ಲಿಯಲ್ಲಿ 2021ರ ಗಣರಾಜ್ಯ ದಿನದಂದು ರೈತರ ಟ್ರ್ಯಾಕ್ಟರ್ ಮೆರವಣಿಗೆ ಒಂದು ಅಭೂತಪೂರ್ವ ಹಾಗೂ ಅತ್ಯಂತ ವಿಭಿನ್ನವಾದ ಸಾಮೂಹಿಕ ಕಾರ್ಯಾಚರಣೆ ಆಗಿತ್ತು. ದೇಶದ ರಾಜಧಾನಿ ಹಿಂದೆ ಯಾವತ್ತೂ ಇಂಥ ಅಸಾಮಾನ್ಯ ಪ್ರತಿಭಟನೆಯನ್ನು ಕಂಡಿರಲಿಲ್ಲ. ಒಂದು ಲಕ್ಷಕ್ಕೂ ಹೆಚ್ಚು ಟ್ರ್ಯಾಕ್ಟರ್ ‌ಗಳು ಮತ್ತು ಹತ್ತಾರು ಸಾವಿರ ಜನರು ಅದರಲ್ಲಿ ಭಾಗವಹಿಸಿದ್ದರು. ಹಿಂದೆ ದೊಡ್ಡ ಪ್ರತಿಭಟನೆಗಳು ನಡೆದಿರಬಹುದು; ಆದರೆ ಇಷ್ಟೊಂದು ಅಗಾಧವಾದ ಪ್ರತಿಭಟನಾ ಕಾರ್ಯಾಚರಣೆ ನಡೆದಿರಲಿಲ್ಲ.

ನಿಗದಿತ ಮಾರ್ಗಗಳಾದ ಸಿಂಘು, ಟಿಕ್ರಿ ಮತ್ತು ಗಾಜಿಪುರ ಗಡಿ ಪ್ರದೇಶಗಳಿಂದ  ಟ್ರ್ಯಾಕ್ಟರ್ ಗಳು ಮತ್ತು ಜನರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ತಪ್ಪುಹಾದಿಗೆಳೆಯಲ್ಪಟ್ಟ ಕೆಲವರು ನಿಗದಿತ ಮಾರ್ಗಗಳನ್ನು ಬಿಟ್ಟು ಬೇರೆಯೇ ಮಾರ್ಗದಲ್ಲಿ ಸಾಗಿ ರಿಂಗ್ ರೋಡ್ ಮೂಲಕ ಕೆಂಪು ಕೋಟೆಯತ್ತ ಸಾಗಿದರು. ಅಲ್ಲಿ ಖಾಲ್ಸಾ ಧ್ವಜ ಹಾರಿಸಿದ್ದು ಒಂದು ಪ್ರಚೋದನಕಾರಿ ಕೃತ್ಯ. ರಿಂಗ್ ರೋಡ್‌ಗೆ ಹೋಗುವಂತೆ ಕರೆ ನೀಡಿದ್ದ “ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ’ಯು ಹೊಸ ಕೃಷಿ ಕಾನೂನುಗಳ ವಿರುದ್ಧ ಚಳವಳಿಯನ್ನು ಮುನ್ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾದ (ಎಸ್‌ಕೆಎಂ) ಭಾಗವಲ್ಲ.

ಕೆಲವೇ ಕೆಲವು ಕ್ಷುಲ್ಲಕ ಶಕ್ತಿಗಳು ನಡೆಸಿದ ಕೃತ್ಯಗಳ ಕಾರಣದಿಂದ ಇಡೀ ಸಾಮೂಹಿಕ ಕಾರ್ಯಾಚರಣೆ ಹಾಗೂ ಶಾಂತಿಯುತ ಪ್ರತಿಭಟನೆಯ ಮಹತ್ವವನ್ನು ತಳ್ಳಿಹಾಕಲು ಆಗುವುದಿಲ್ಲ. ಬಿಜೆಪಿ, ಕಾರ್ಪೊರೇಟ್‌ಗಳ ಸಾಕುಪ್ರಾಣಿಗಳಂತಿರುವ ಕೆಲವು ಮಾಧ್ಯಮ ಹಾಗೂ ಕೆಲವು ಪ್ರತಿಪಕ್ಷಗಳ ರಾಜಕಾರಣಿಗಳು ಕೆಂಪುಕೋಟೆಯಲ್ಲಿ ನಡೆದ ಕೃತ್ಯವನ್ನು ಇಡೀ ರೈತ ಚಳವಳಿ ಹಾಗೂ ರೈತ ಸಂಘಟನೆಗಳಿಗೆ ಮಸಿ ಬಳಿಯಲು ಬಳಸಿಕೊಂಡಿದ್ದಾರೆ. ಹೀಗಾಗಿ, ಈ ವಿದ್ಯಮಾನವನ್ನು ಸರಿಯಾದ ದೃಷ್ಟಿಕೋನದಿಂದ ವಿಶ್ಲೇಷಿಸುವುದು ಅಗತ್ಯವಾಗಿದೆ.

ಪಂಜಾಬ್‌ನ ಪ್ರತಿ ಹಳ್ಳಿ, ಹರಿಯಾಣದ ಬಹಳಷ್ಟು ಭಾಗಗಳು ಮತ್ತು ದೆಹಲಿ ಗಡಿಗೆ ಹೊಂದಿಕೊಂಡಿರುವ ಉತ್ತರ ಪ್ರದೆಶದ ಜಿಲ್ಲೆಗಳಿಂದ ಜನರು ಹಾಗೂ  ಟ್ರ್ಯಾಕ್ಟರ್ ಗಳು ಬಂದಿದ್ದರಿಂದಲೇ ಇಷ್ಟೊಂದು ಅಗಾಧ ರೀತಿಯಲ್ಲಿ ಪ್ರತಿಭಟನೆ ರೂಪಿಸಲು ಸಾಧ್ಯವಾಗಿತ್ತು. ಜತೆಗೆ ದೇಶದ ವಿವಿಧ ಭಾಗಗಳಿಂದಲೂ ಜನರು ಆಗಮಿಸಿದ್ದರು.

2020ರ ಜೂನ್‌ನಲ್ಲಿ ಮೂರು ಕೃಷಿ ಸುಗ್ರೀವಾಜ್ಞೆಗಳನ್ನು ಜಾರಿ ಮಾಡಿದ ಕ್ಷಣದಿಂದಲೇ ಪಂಜಾಬ್ ಮತ್ತು ಹರಿಯಾಣದಲ್ಲಿ ಪ್ರತಿಭಟನೆಯ ದಾವಾನಲ ಹರಡತೊಡಗಿತ್ತು. ಅದುವೇ ಬೃಹತ್ ಆಂದೋಲನದ ಮೂಲ ಕಿಡಿಯಾಗಿದೆ. ರೈತ ಸಂಘಗಳ ಒಂದು ಒಕ್ಕೂಟದ ನೇತೃತ್ವದಲ್ಲಿ ನಡೆಯುತ್ತಿದ್ದ ಐದುವರೆ ತಿಂಗಳಷ್ಟು ಹಳೆಯ ಚಳವಳಿ ನೀಡಿದ್ದ ದೆಹಲಿ ಚಲೋ ಕರೆಗೆ ಸಂಘಟನೆಗಳ ಪ್ರಭಾವದಾಚೆಗೂ ಇರುವವರಿಂದಲೂ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಾಮಾನ್ಯ ರೈತರು ಹಾಗೂ ಅವರ ಕುಟುಂಬ ವರ್ಗದವರು ಮಾತ್ರವಲ್ಲದೆ ಕೆಲವು ಹಳ್ಳಿಗೆ ಹಳ್ಳಿಯೇ ಎದ್ದು ಬಂದಾಗ ಅವರನ್ನು ನಿಭಾಯಿಸುವುದು ಯಾವುದೇ ಸಂಘಟನೆ ಅಥವಾ ನಾಯಕರ ನಿಯಂತ್ರಣಕ್ಕೆ ಮೀರಿದ ವಿಚಾರವಾಗಿತ್ತು.

ಆದ್ದರಿಂದ, ಹಾದಿ ತಪ್ಪಿದ ಶಕ್ತಿಗಳಿಂದ ನಡೆದ ಯಾವುದೋ ಕೆಲವು ಅನಪೇಕ್ಷಿತ ಘಟನೆಗಳಿಗೆ ರೈತ ಸಂಘಟನೆಗಳು ಮತ್ತು ಅವುಗಳ ಮುಖಂಡರನ್ನು ದೂರುವುದು ಆಂದೋಲನಕ್ಕೆ ಕೆಟ್ಟ ಹೆಸರು ತರುವ ದುರುದ್ದೇಶದಿಂದ ಪ್ರೇರಿತವಾದುದು ಎನ್ನಬೇಕಾಗುತ್ತದೆ. ಪ್ರತಿಭಟನೆಕಾರರ ಒಂದು ಸಣ್ಣ ವಿಭಾಗವನ್ನು ತಪ್ಪುದಾರಿಗೆ ಎಳೆದವರು ಯಾರು ಎನ್ನುವುದು ಶೀಘ್ರದಲ್ಲೇ ಗೊತ್ತಾಗಲಿದೆ. ಈ ಶಕ್ತಿಗಳನ್ನು ಸಂಯುಕ್ತ ಕಿಸಾನ್ ಮೋರ್ಚಾ ಕಟುವಾಗಿ ಖಂಡಿಸಿದೆ. ಚಳವಳಿಯನ್ನು ಶಾಂತಿಯುತವಾಗಿ ಮುಂದಕ್ಕೊಯ್ಯುವ ಬದ್ಧತೆಯನ್ನು ಘೋಷಿಸಿದೆ.

ದೊಂಬಿ ಮತ್ತು ಹಿಂಸಾಚಾರ ನಡೆಯಿತು ಎಂದು ಹೇಳುವುದು ಕೂಡ ಒಂದು ಅಪ್ರಾಮಾಣಿಕ ಪಿತೂರಿಯೇ ಆಗಿದೆ. ತಪ್ಪುದಾರಿಗೆಳೆಯಲ್ಪಟ್ಟ ಪ್ರತಿಭಟನೆಕಾರರು ಕೂಡ ನಗರವನ್ನು ಪ್ರವೇಶಿಸಿ ತಮ್ಮ ಒಂದು ಅಂಶವನ್ನು ಎತ್ತಿ ತೋರಿಸ ಬಯಸಿದ್ದರಷ್ಟೇ. ಕೆಂಪುಕೋಟೆಯಲ್ಲಿ ದಾಂಧಲೆ ನಡೆದಿದ್ದು ಹೊರತುಪಡಿಸಿದರೆ ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ತಿಪಾಸ್ತಿ ಮೇಲೆ ದಾಳಿ ನಡೆದಿಲ್ಲ, ಅಂಗಡಿಗಳ ಲೂಟಿ ನಡೆಯಲಿಲ್ಲ ಅಥವಾ ಜನಸಾಮಾನ್ಯರ ಮೇಲೆ ದೈಹಿಕ ಹಿಂಸೆಯೂ ಆಗಿಲ್ಲ. ನಿಗದಿತ ಮಾರ್ಗ ಬಿಟ್ಟು ಬೇರೆ ಕಡೆಯಿಂದ ಬಂದ ಪ್ರತಿಭಟನೆಕಾರರು ಮತ್ತು ಅವರನ್ನು ನಿಯಂತ್ರಿಸಲು ಪ್ರಯತ್ನಿಸಿದ ಪೊಲೀಸರ ನಡುವೆ ಕೆಲವು ಘರ್ಷಣೆಗಳು ನಡೆದವು.

ದೆಹಲಿ ಘಟನಾವಳಿಗಳ ಮೇಲೆ ಗಮನ ಕೇಂದ್ರೀಕರಿಸುವಾಗ, ಹರಿಯಾಣದ ಪಲ್ವಾಲ್‌ನಿಂದ ದೆಹಲಿ ಗಡಿಗೆ ಬರುತ್ತಿದ್ದಾಗ ಸಿಕ್ರಿ ಗಡಿಯಲ್ಲಿ ಹರಿಯಾಣ ಪೊಲೀಸರು ಅಮಾನುಷವಾಗಿ ಥಳಿಸಿದ್ದನ್ನು ಮರೆಯಬಾರದು. ದೆಹಲಿ ಗಡಿ ವರೆಗೆ ಹೋಗಲು ಪೊಲೀಸರು ಅನುಮತಿ ನೀಡಿದ್ದರೂ ಅನ್ನದಾತರ ಮೇಲೆ ದೌರ್ಜನ್ಯ ಎಸಗಲಾಯಿತು. ಪೊಲೀಸರು ಸಿಡಿಸಿದ ಅಶ್ರುವಾಯು ತಾಗಿದ್ದರಿಂದ  ಟ್ರ್ಯಾಕ್ಟರ್  ಉರುಳಿ ಅದರಲ್ಲಿದ್ದ 23 ವರ್ಷದ ಯುವಕ ಮೃತಪಟ್ಟ ದುರ್ಘಟನೆಯೂ ದಾಖಲಾಗಿದೆ. ದಿಲ್ಲಿ ಪೊಲೀಸರು ರೈತರ ಅನೇಕ  ಟ್ರ್ಯಾಕ್ಟರ್ ಗಳಿಗೆ ಹಾನಿ ಮಾಡಿರುವುದೂ ಇದೆ.

ಚಳಿ ಮತ್ತು ಪ್ರತಿಕೂಲ ಹವೆಯನ್ನೂ ಲೆಕ್ಕಿಸದೆ ಸಾವಿರಾರು ಪುರುಷರು ಮತ್ತು ಮಹಿಳೆಯರು ಕಳೆದ ಎರಡು ತಿಂಗಳಿಂದ ರಾಜಧಾನಿ ಪ್ರವೇಶಿಸುವ ಗಡಿ ಭಾಗಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಲೇ ಇದ್ದಾರೆ. ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವ ವರೆಗೆ ಹೋರಾಟ ನಡೆಸುವುದು ಅವರ ಸಂಕಲ್ಪವಾಗಿದೆ. ಕಾನೂನುಗಳನ್ನು ವಾಪಸ್ ಪಡೆಯುವಲ್ಲಿ ಸರ್ಕಾರದ ಮೊಂಡುತನದ ನಿರಾಕರಣೆ ಹಾಗೂ ಅಸಮರ್ಥನೀಯ ಧೋರಣೆಯೇ ಅನ್ನದಾತರು ಗಣರಾಜ್ಯ ದಿನವಾದ ಜನವರಿ 26 ರಂದು  ಟ್ರ್ಯಾಕ್ಟರ್  ರ‍್ಯಾಲಿ ನಡೆಸಿ ಜನ ಗಣರಾಜ್ಯ ಆಚರಿಸಲು ಮುಂದಾಗುವ ಪರಿಸ್ಥಿತಿ ನಿರ್ಮಿಸಿತ್ತು ಎನ್ನುವುದನ್ನು ಗಮನಿಸಬೇಕು.

ಗಣತಂತ್ರ ದಿನದಂದು ನಾವು ನೋಡಿದ್ದು ಜನತಾ ಶಕ್ತಿಯ ವಿರಾಟ್ ರೂಪವನ್ನು. ಇದರಿಂದ ಬಿಜೆಪಿಯ ಆಡಳಿತಗಾರರಲ್ಲಿ ನಡುಕ ಹುಟ್ಟಿರುವದಂತೂ ವಾಸ್ತವ. ಶಾಂತಿಯುತ ಚಳವಳಿಯನ್ನು ಹಾಳುಗೆಡವಲು ಹಾಗೂ ಕಿಸಾನ್ ಸಂಘಟನೆಗಳಿಗೆ ಅಪಕೀರ್ತಿ ತರುವ ಪ್ರಯತ್ನಗಳು ಮುಂದಿನ ದಿನಗಳಲ್ಲಿ ಬಿರುಸು ಪಡೆಯಲಿದೆ. ಇಂಥ ಪ್ರಯತ್ನಗಳನ್ನು ರೈತ ಸಂಘಟನೆಗಳು ಒಗ್ಗಟ್ಟಿಂದ ಎದುರಿಸಿ ಹಿಮ್ಮೆಟ್ಟಿಸಬೇಕಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಷಾ ಆಡಳಿತ ವ್ಯಾಪ್ತಿಗೆ ಬರುವ ದಿಲ್ಲಿ ಪೊಲೀಸ್, ಕೇಂದ್ರ ಸರ್ಕಾರದೊಂದಿಗೆ ಸಂಧಾನ ನಡೆಸುತ್ತಿರುವ ಸುಮಾರು 40 ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಈ ಎಲ್ಲ ಮುಖಂಡರು ನಿಗದಿಪಡಿಸಿ ಪೊಲೀಸರು ಅನುಮತಿಸಿದ್ದ ಮಾರ್ಗದಲ್ಲೇ  ಟ್ರ್ಯಾಕ್ಟರ್  ರ‍್ಯಾಲಿ ನಡೆಸುತ್ತಿದ್ದುದು ಸ್ಪಷ್ಟವಾಗಿರುವುದರಿಂದ ಪೊಲೀಸರ ಈ ನಡೆ ಕುತಂತ್ರದ್ದು ಎನ್ನದೆ ವಿಧಿಯಿಲ್ಲ. ಅಂದಿನ ಕೃತ್ಯಗಳಿಗೆ ರೈತ ಮುಖಂಡರು ಹೊಣೆಯೆಂದು ಹೇಳುವ ದಿಲ್ಲಿ ಪೊಲೀಸ್ ಕಮಿಷನರ್, ಕೆಂಪು ಕೋಟೆಯ ಕೃತ್ಯ ಪ್ರಚೋದಿಸಿ ಗುಂಪಿನ ನೇತೃತ್ವ ವಹಿಸಿದ್ದ ಬಿಜೆಪಿ ಸಂಪರ್ಕ ಹೊಂದಿರುವ ದೀಪ್ ಸಿಧು ಬಗ್ಗೆ ಮೌನವಾಗಿದ್ದರು.

ದೇಶದಾದ್ಯಂತ ವಿವಿಧ ರಾಜ್ಯ ಹಾಗೂ ಜಿಲ್ಲಾ ಕೇಂದ್ರಗಳಲ್ಲೂ ಜನವರಿ 26 ರಂದು  ಟ್ರ್ಯಾಕ್ಟರ್  ರ‍್ಯಾಲಿಗಳು ನಡೆದಿವೆ. ಮಹಾರಾಷ್ಟ್ರದ ನಾಸಿಕ್‌ನಿಂದ ಮುಂಬೈವರೆಗೆ ಬೃಹತ್ ಕಿಸಾನ್ ರ‍್ಯಾಲಿ ನಡೆದಿದೆ. ಕಳೆದ ವಾರ ಕೊಲ್ಕತಾ ಮತ್ತು ಚೆನ್ನೆನಲ್ಲಿ ರೈತ-ಕಾರ್ಮಿಕರ ಸಂಯುಕ್ತ ರ‍್ಯಾಲಿಗಳು ಆಯೋಜನೆಗೊಂಡಿದ್ದವು. ದೆಹಲಿ ಗಡಿಗಳಲ್ಲಿ ವೀರಾವೇಶದ ಹೋರಾಟ ನಡೆಸುತ್ತಿರುವ ರೈತರು ಏಕಾಂಗಿಗಳಲ್ಲ. ಇತರ ಶ್ರಮಜೀವಿಗಳೂ ವಿವಿಧ ಜನವಿಭಾಗಗಳೂ ಅವರ ಜೊತೆಗಿದ್ದಾರೆ. ಹೊಸ ಕಸುವು-ಸಂಕಲ್ಪದೊಂದಿಗೆ ಚಳವಳಿ ಮುಂದುವರಿಯಲಿದೆ.

ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 29 ರಂದು ಆರಂಭವಾಗಿದೆ. ಮೋದಿ ಸರ್ಕಾರ ಸಂಸತ್ತಿನಲ್ಲಿ ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯಲು ಮುಂದಾಗಬೇಕು. ಪ್ರತಿಪಕ್ಷಗಳು ಒಟ್ಟಾಗಿ ಈ ಬೇಡಿಕೆಯನ್ನು ಪ್ರಬಲವಾಗಿ ಮುಂದೊತ್ತಬೇಕು.

ಅನು: ವಿಶ್ವ

Donate Janashakthi Media

Leave a Reply

Your email address will not be published. Required fields are marked *