64 ಲಕ್ಷಜನ ತುರ್ತಾಗಿ ಎರಡನೇ ಡೋಸ್ ಪಡೆಯಬೇಕಿದೆ ಆದರೆ ರಾಜ್ಯ ಸರ್ಕಾರದ ಬಳಿ 7.76 ಲಕ್ಷ ಡೋಸ್ ಲಸಿಕೆ ಮಾತ್ರ ಸ್ಟಾಕ್ ಇದೆ.
– ಗುರುರಾಜ ದೇಸಾಯಿ
ಬೆಡ್, ಆಕ್ಸಿಜನ್ ಗಾಗಿ ಹಾಹಾಕಾರ ಶುರುವಾದ ಬೆನ್ನಲ್ಲೆ ಈಗ ಲಸಿಕೆಗೆ ಹಾಹಾಕಾರ ಶುರುವಾಗಿದೆ. ಲಸಿಕೆಯ ಕೊರತೆ ದೊಡ್ಡ ಪ್ರಮಾಣದಲ್ಲಿ ಎದ್ದು ಕಾಣುತ್ತಿದ್ದು, ಎರಡನೇ ಡೋಸ್ ಪಡೆಯಲು ಜನ ಪರದಾಡುತ್ತಿದ್ದಾರೆ. ಲಸಿಕೆ ವಿಚಾರದಲ್ಲಿ ಕೇಂದ್ರ ರಾಜ್ಯ ಸರಕಾರಗಳು ಸೂಕ್ತ ಸಿದ್ಧತೆಯನ್ನು ಮಾಡಿಕೊಂಡಿಲ್ಲ. ಪರಿಣಾಮವಾಗಿ ಜನ ಲಸಿಕೆ, ಲಸಿಕೆ, ಲಸಿಕೆ ಎಂದು ಜಪ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಮೂರನೇ ಹಂತದ ಲಸಿಕಾ ಅಭಿಯಾನ ಆರಂಭವಾಗಿ ತಿಂಗಳು ಸಮೀಪಿಸಿದರೂ ನಿರೀಕ್ಷಿತ ಪ್ರಮಾಣದಲ್ಲಿ ಲಸಿಕೆ ನೀಡಿಕೆ ಪ್ರಕ್ರಿಯೆ ವೇಗ ಪಡೆದುಕೊಂಡಿಲ್ಲ. ಬಹುತೇಕ ಕಡೆ ಈ 18 ರಿಂದ 45 ನೇ ವಯೋಮಾನದವರು ಲಸಿಕೆಯ ಒಂದನೇ ಡೋಸ್ ಪಡೆಯಲು ಸರದಿಯಲ್ಲಿದ್ದರೆ ಇನ್ನು ಕೆಲವೆಡೆ ಈಗಾಗಲೇ ಮೊದಲ ಡೋಸ್ ಪಡೆದು ಎರಡನೇ ಡೋಸ್ ಪಡೆಯಲು ಕಾಯುತ್ತಿದ್ದಾರೆ. ಆದರೆ ಲಸಿಕೆಯ ಕೊರತೆ ಇಡೀ ಪ್ರಕ್ರಿಯೆಗೆ ತೊಡಕಾಗಿ ಪರಿಣಮಿಸಿದೆ. “ಯಾವುದೇ ಕಾರಣಕ್ಕೂ ಲಸಿಕೆ ವಿತರಣೆ ವೇಗಕ್ಕೆ ಬ್ರೇಕ್ ಹಾಕಬೇಡಿ. ಲಾಕ್‌ಡೌನ್‌ನಂಥ ನಿರ್ಬಂಧಗಳಿದ್ದರೂ ಲಸಿಕೆ ಹಾಕಿಸಿಕೊಳ್ಳಲು ಹೋಗುವ ನಾಗರಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ. ವ್ಯಾಕ್ಸಿನ್ ನೀಡುವ ಆರೋಗ್ಯ ಕಾರ್ಯಕರ್ತರಿಗೆ ಬೇರೆ ಕೆಲಸ ಕೊಡಬೇಡಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ರಾಜ್ಯದಲ್ಲಿ 15 ದಿನಗಳ ಕಾಲ ಲಾಕ್‌ಡೌನ್ ವಿಸ್ತರಣೆ ಮಾಡಿದ್ದರಿಂದ ಯಾರೂ ಹೊರಬರುವಂತಿಲ್ಲ, ಲಸಿಕೆ ಹಾಕಿಸಿಕೊಳ್ಳುವವರಿಗೆ ವಿನಾಯತಿಯನ್ನು ನೀಡಲಾಗಿದೆ ಎಂದು ರಾಜ್ಯ ಸರಕಾರ ಹೇಳುತ್ತಿದೆ. ಈ ಲಾಜಿಕ್ ಯಾಕೆಂದು ಅರ್ಥವಾಗುತ್ತಿಲ್ಲ, ಲಸಿಕೆಯ ಕೊರತೆ ಇದೆ ಎಂದು ಗೊತ್ತಾದ ಮೇಲೂ ಪ್ರಧಾನಿಯವರು ವಿತರಣೆಯ ವೇಗಕ್ಕೆ ಬ್ರೇಕ್ ಹಾಕಬೇಡಿ ಅಂತಾರೆ, ರಾಜ್ಯ ಸರಕಾರ ಲಸಿಕೆಯ ನೀಡುತ್ತೇವೆ, ಲಸಿಕೆ ಪಡೆಯುವವರು ಓಡಾಡಬಹುದು ಎಂದು ಹೇಳಲಾಗುತ್ತಿದೆ. ಸರಕಾರಕ್ಕೆ ತಳ ಮಟ್ಟದ ರಿಪೋರ್ಟ್ ತಲುಪಿದೆಯಾ ಅಥವಾ ತಳಮಟ್ಟದ ಅಧಿಕಾರಿಗಳು ಸರಕಾರಕ್ಕೆ ರಿಪೋರ್ಟ್ ನೀಡುತ್ತಿದ್ದಾರಾ ಇಲ್ಲವಾ ಗೊತ್ತಾಗುತ್ತಿಲ್ಲ. ಆದರೆ ಸರಕಾರ ನಾಟಕೀಯತೆ ಜನರಿಗೆ ಅರ್ಥವಾಗುತ್ತಿದೆ. ಲಸಿಕೆಯ ಕೊರತೆ ಇಡೀ ದೇಶದ ತುಂಬೆಲ್ಲ ಇದೆ ಅನ್ನುವದಕ್ಕೆ ಈ ಕೆಳಗಿನ ಅಂಕಿ ಅಂಶಗಳೇ ಸಾಕ್ಷಿ.
ಲಸಿಕೆ ಪ್ರಕ್ರಿಯೆ ಆಮೇಗತಿಯಲ್ಲಿ ಸಾಗುತ್ತಿದೆ : ಕೆಲವು ರಾಜ್ಯಗಳು 18ರಿಂದ 44 ವರ್ಷದೊಳಗಿನ ಜನರು ಲಸಿಕೆ ಪಡೆಯಲು ಮೇ ಮೂರನೇ ವಾರದವರೆಗೆ ಕಾಯಬೇಕಾಗುತ್ತದೆ ಎಂದು ಹೇಳಿವೆ. ಸ್ಥಳೀಯ ಉತ್ಪಾದಕರಾದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್‌ಇಂಡಿಯಾ (ಎಸ್‌ಐಐ) ಮತ್ತು ಭಾರತ್ ಬಯೋಟೆಕ್ ಜತೆ ಆದೇಶಗಳನ್ನು ನೀಡಿದ್ದರೂ ಡೋಸೇಜ್‌ಗಳನ್ನು ತಲುಪಿಸುವಲ್ಲಿ ವಿಳಂಬವಾಗಲಿದೆ ಎಂದು ಕಂಪೆನಿಗಳು ತಿಳಿಸಿವೆ. ದೇಶದಲ್ಲಿ ಲಸಿಕೆ ಕೊರತೆಯ ಸ್ಪಷ್ಟ ಮಾಹಿತಿ ಇದ್ದರೂ ಕೋಟ್ಯಂತರ ಮಂದಿ ಈಗಾಗಲೇ ಕೋ-ವಿನ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಕೊರೊನಾ ನಿರೋಧಕ ಲಸಿಕೆ ನೀಡಿಕೆ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದೆ. ಕೆಲವು ರಾಜ್ಯಗಳಲ್ಲಿನ ಕೋವಿಡ್ ಲಸಿಕೆ ನೀಡಿಕೆ ಪ್ರಕ್ರಿಯೆಯ ಸದ್ಯದ ಸ್ಥಿತಿಗತಿಗಳ ಚಿತ್ರಣವನ್ನು ನಾವೀಗ ನೋಡ್ತಾ ಹೋಗೋಣ
ಕರ್ನಾಟಕ ದಲ್ಲಿ 18+ ಜನರಿಗೆ ಲಸಿಕೆ ನೀಡುವ ಪ್ರಕ್ರಿಯೆ ಆರಂಭಗೊಳ್ಳಲು ಕೆಲವು ವಾರಗಳಷ್ಟು ಸಮಯ ತಗಲುವ ಸಾಧ್ಯತೆ ಇದೆ. ರಾಜ್ಯ ಸರಕಾರ ಕೂಡ ಈ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ. ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್‌ಗೆ ಒಂದು ಕೋಟಿಗೂ ಹೆಚ್ಚು ಲಸಿಕೆ ಪೂರೈಸುವಂತೆ ಬೇಡಿಕೆ ಸಲ್ಲಿಸಲಾಗಿದೆ. ಸೀರಮ್ ಇನ್‌ಸ್ಟಿಟ್ಯೂಟ್ ಒಂದು ತಿಂಗಳಲ್ಲಿ 5ರಿಂದ 6 ಕೋಟಿ ಡೋಸ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ 1ರಿಂದ 1.5 ಕೋಟಿ ಡೋಸ್ ಉತ್ಪಾದಿಸಬಹುದು.
ಇದನ್ನು ಓದಿ: ಆರೋಗ್ಯ ಬಿಕ್ಕಟ್ಟಿನ ನಡುವೆ ಲಸಿಕೆ ಬೆಲೆಯಲ್ಲೂ ಹಗರಣ!
ಮಹಾರಾಷ್ಟ್ರ ರಾಜ್ಯ ಸರಕಾರ ಮುಂದಿನ ಆರು ತಿಂಗಳುಗಳಲ್ಲಿ ತನ್ನ ನಾಗರಿಕರಿಗೆ ಲಸಿಕೆ ನೀಡಲು ಯೋಜಿಸಿದೆ. ಅಲ್ಲಿನ ಸರಕಾರ ಈಗ 18-44 ವರ್ಷದೊಳಗಿನ ಜನರಿಗೆ ಲಸಿಕೆ ನೀಡಲು ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಇದರಲ್ಲಿ 18-25, 25-35 ಮತ್ತು 35-44 ವರ್ಷದವರು..ಹೀಗೆ ಮೂರು ವರ್ಗಗಳಲ್ಲಿ ವಿಂಗಡಿಸಿ ಲಸಿಕೆ ನೀಡಿಕೆ ಪ್ರಕ್ರಿಯೆಯನ್ನು ಹಂತಹಂತವಾಗಿ ನಡೆ ಸಲು ಸರಕಾರ ರಚಿಸಿರುವ ಉನ್ನತಮ ಟ್ಟದ ಸಮಿತಿ ಗಂಭೀರ ಚಿಂತನೆ ನಡೆಸಿದೆ.
ಹೊಸದಿಲ್ಲಿಯಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಕೊವಿಶೀಲ್ಡ. ಮತ್ತು ಕೊವಾಕ್ಸಿನ್‌ನ ತಲಾ 67 ಲಕ್ಷ ಡೋಸ್‌ಗಳಿಗೆ ಆದೇಶ ನೀಡಿದ್ದಾರೆ. ಕಂಪೆನಿಗಳು ಸಾಕಷ್ಟು ಪ್ರಮಾಣದ ಲಸಿಕೆಗಳನ್ನು ಪೂರೈಸಿದರೆ ಮುಂದಿನ 3 ತಿಂಗಳು ಗಳಲ್ಲಿ ಎಲ್ಲರಿಗೂ ಲಸಿಕೆ ಹಾಕುವ ಗುರಿಯನ್ನು ಸರಕಾರ ಹೊಂದಿದೆ.
ಗುಜರಾತ್ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ಕನಿಷ್ಠ ಮೇ 15ರ ವರೆಗೆ ಕಾಯಬೇಕಾಗುತ್ತದೆ. ಫಾರ್ಮಾ ಕಂಪೆನಿಗಳಿಂದ ಸಾಕಷ್ಟು ಪ್ರಮಾಣದ ಲಸಿಕೆಗಳನ್ನು ಪಡೆದ ಬಳಿಕ ಇವರಿಗೆ ಲಸಿಕೆ ಪ್ರಾರಂಭವಾಗುತ್ತದೆ. ರಾಜ್ಯವು 2.5 ಕೋಟಿ ಡೋಸ್‌ಗಳನ್ನು ಆದೇಶಿಸಿದೆ. ಅದರಲ್ಲಿ 2 ಕೋಟಿ ಕೊವಿಶೀಲ್ಡ್ ಮತ್ತು 50 ಲಕ್ಷ ಕೊವಾಕ್ಸಿನ್ ಡೋಸ್‌ಗಳಾಗಿವೆ.
ರಾಜಸ್ಥಾನ ರಾಜ್ಯದಲ್ಲಿ ಮೇ 15ರಂದು 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಪ್ರಕ್ರಿಯೆ ಪ್ರಾರಂಭಿಸುವ ನಿರೀಕ್ಷೆ ಇದೆ. 18 ವರ್ಷ ಮೇಲ್ಪಟ್ಟ 3.25 ಕೋಟಿ ಜನರಿದ್ದಾರೆ¬ 3.75 ಕೋಟಿ ಡೋಸ್‌ಗಳಷ್ಟು ಕೊವಿಶೀಲ್ಡ. ಲಸಿಕೆಗೆ ಬೇಡಿಕೆ ಸಲ್ಲಿಸಲಾಗಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ರಾಜ್ಯದಲ್ಲಿ ಲಸಿಕೆಯ ಕೊರತೆಯನ್ನು ಒಪ್ಪಿಕೊಂಡಿದ್ದು, 18ರಿಂದ 44 ವರ್ಷದೊಳಗಿನವರು ಲಸಿಕೆ ಪಡೆಯಲು ಸೆಪ್ಟಂಬರ್ ವರೆಗೆ ಕಾಯಬೇಕಾಗುತ್ತದೆ ಎಂದಿದ್ದಾರೆ. ರಾಜ್ಯದಲ್ಲಿ 18-45 ವಯಸ್ಸಿನ 60 ಕೋಟಿ ಜನರಿದ್ದು, ಅವರಿಗೆ 120 ಕೋಟಿ ಡೋಸ್‌ಗಳ ಅಗತ್ಯವಿದೆ.
ಗೋವಾ ರಾಜ್ಯದ ಬೇಡಿಕೆಗೆ ತಕ್ಕಷ್ಟು ಪ್ರಮಾಣದಲ್ಲಿ ಲಸಿಕೆ ಲಭ್ಯವಾದ ಬಳಿಕವಷ್ಟೇ 18-45 ವರ್ಷದೊಳಗಿನವರಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ. ಸದ್ಯಕ್ಕೆ 45ವರ್ಷ ಮೇಲ್ಪಟ್ಟವರಿಗೆ ಎರಡು ಡೋಸ್‌ಗಳಲ್ಲಿ ಲಸಿಕೆ ನೀಡಲು ಅಗತ್ಯವಿರುವಷ್ಟು ಲಸಿಕೆ ರಾಜ್ಯಕ್ಕೆ ಪೂರೈಕೆಯಾಗಿಲ್ಲ. ಆದ್ದರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಪ್ರಕ್ರಿಯೆಯ ಆರಂಭ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಇದನ್ನು ಓದಿ: ಭಾರತೀಯರು ಕೊರೊನಾದಿಂದಷ್ಟೆ ಸಾಯುತ್ತಿಲ್ಲ – WHO ವಿಜ್ಞಾನಿ ಸೌಮ್ಯ ಸ್ವಾಮಿನಾಥನ್
ಪೂರೈಕೆಯನ್ನು ಹೆಚ್ಚಿಸಲು ಈಗಾಗಲೇ ಲಸಿಕೆ ತಯಾರಕರು ಉತ್ಪಾದನ ಸಾಮ ರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಿದ್ದಾರೆ. ಆದರೆ ಇದು ಸಮಯ ತೆಗೆದುಕೊಳ್ಳುವ ನಿರೀಕ್ಷೆಯಿದೆ. ಪ್ರಸ್ತುತವಾಗಿ ಕೋವಿಶೀಲ್ಡ್ ತಿಂಗಳಿಗೆ 60-70 ದಶಲಕ್ಷ ಡೋಸ್ ಗಳನ್ನು ನಿರ್ಮಾಣ ಮಾಡುತ್ತಿದೆ. ಜುಲೈ ವೇಳೆಗೆ ಕೊವಿಶೀಲ್ಡ್ ಉತ್ಪಾದನೆಯನ್ನು ತಿಂಗಳಿಗೆ 100 ಮಿಲಿಯನ್ ಡೋಸ್‌ಗಳಿಗೆ ಹೆಚ್ಚಿಸಲು ಸೀರಮ್ ಸಂಸ್ಥೆ ಯೋಚಿಸುತ್ತಿದೆ. ಇನ್ನು ಭಾರತ್ ಬಯೋಟೆಕ್ ತನ್ನ ಸಾಮರ್ಥ್ಯವನ್ನು ತಿಂಗಳಿಗೆ 10 ಮಿಲಿಯನ್ ಡೋಸ್‌ಗಳಿಂದ ಜೂನ್ ವೇಳೆಗೆ ಸುಮಾರು 20 ಮಿಲಿಯನ್‌ಗೆ, ಆಗಸ್ಟ್ ವೇಳೆಗೆ 60-70 ಮಿಲಿಯನ್‌ಗೆ ಮತ್ತು ಸೆಪ್ಟಂಬರ್ ವೇಳೆಗೆ 100 ಮಿಲಿಯನ್‌ಗೆ ಹೆಚ್ಚಿಸಲು ಯೋಜನೆಯನ್ನು ಹಾಕಲಾಗಿದೆ.
ಲಸಿಕೆ ದರವೂ ಕೂಡ ಲಸಿಕೆ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ. ಅಭಾವವನ್ನು ಸೃಷ್ಟಿಸಿ, ಅದರ ಹೆಸರಿನಲ್ಲಿ ಹಣ ಮಾಡುವ ಯೋಜನೆ ಕೂಡ ಇದರಲ್ಲಿ ಇದ್ದಂತೆ ಕಾಣುತ್ತಿದೆ. ಅದು ಹೇಗೆ ಅಂದ್ರೆ, ಕೇಂದ್ರ ಸರ್ಕಾರವು ತಮಗೆ ಮಾತ್ರ ಪ್ರತಿ ಡೋಸ್ ಲಸಿಕೆಗೆ 150 ರೂ.ಗಳಂತೆ ಮಾರಾಟ ಮಾಡಬೇಕು, ಉಳಿದವರಿಗೆ ಮಾರುವ ಲಸಿಕೆಯ ದರ ಎಷ್ಟಿರಬೇಕು ಎಂಬುದು ನಿಮಗೆ ಬಿಟ್ಟದ್ದು ಎಂದು ತಯಾರಕರಿಗೆ ಹೇಳಿದೆ. ಹಾಗಾಗಿ, ಹಾಲು ಬೀಳುವಲ್ಲಿ ತುಪ್ಪವೇ ಬಿದ್ದ ಖುಷಿಯಲ್ಲಿರುವ ಲಸಿಕೆ ತಯಾರಕರು, ರಾಜ್ಯ ಸರ್ಕಾರಗಳಿಗೆ ಮತ್ತು ಖಾಸಗಿ ನರ್ಸಿಂಗ್ ಹೋಂಗಳಿಗೆ ಮಾರುವ ಲಸಿಕೆಯ ಬೆಲೆಗಳನ್ನು ದುಬಾರಿ ಮಟ್ಟದಲ್ಲಿ ನಿಗದಿಪಡಿಸಿದ್ದಾರೆ.
ಆರೋಗ್ಯ ಬಿಕ್ಕಟ್ಟಿನ ನಡುವೆ ಲಸಿಕೆ ಬೆಲೆಯಲ್ಲೂ ಹಗರಣ ನಡೆಯುತ್ತಿದೆ ಎಂದು ಆರ್ಥಿಕತಜ್ಙ ಪ್ರಭಾತ್ ಪಟ್ನಾಯಕ್ ಆರೋಪವನ್ನು ಮಾಡಿದ್ದಾರೆ. ಎಸ್.ಐ.ಐ. ಮತ್ತು ಭಾರತ್ ಬಯೋಟೆಕ್ ಈ ಎರಡೂ ಸಂಸ್ಥೆಗಳು ಮಂಡಿಸಿರುವ ಪ್ರತಿಯೊಂದು ವಾದವೂ ಅಪ್ರಾಮಾಣಿಕ ವಾದವೇ. ಲಸಿಕೆ ತಯಾರಿಸುವ ಈ ಎರಡೂ ಸಂಸ್ಥೆಗಳು ಕೊರೊನಾ ಬಿಕ್ಕಟ್ಟನ್ನು ಲಾಭದ ಹಪಾಹಪಿಗಾಗಿ ಬಳಸಿಕೊಳ್ಳುತ್ತಿವೆ. ಈ ಅಂಶವು ಕೇಂದ್ರ ಸರ್ಕಾರಕ್ಕೆ ತಿಳಿದಿಲ್ಲವೆಂದರೆ, ಅದು ಸಂಪೂರ್ಣವಾಗಿ ಅಸಮರ್ಥವಾಗಿದೆ ಎಂದಾಗುತ್ತದೆ. ಒಂದು ವೇಳೆ ತಿಳಿದಿದ್ದರೆ, ಈ ವಂಚನೆಯಲ್ಲಿ ಭಾಗಿಯಾಗಿದೆ ಎಂದಾಗುತ್ತದೆ. ಹಾಗಾಗಿ, ಈ ಬಗ್ಗೆ ಒಂದು ತನಿಖೆ ನಡೆಸುವ ಅಗತ್ಯವಿದೆ ಎಂದು ಪ್ರೊ. ಪ್ರಭಾತ್ ಪಟ್ನಾಯಕ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಭಾರತದಲ್ಲಿ ಕೋವಿಡ್ ಲಸಿಕೆ ಉತ್ಪಾದನೆ ಮತ್ತು ಪೂರೈಕೆ ಪ್ರಮಾಣ ಹೇಗಿದೆ?
ಇನ್ನೂ ಕರ್ನಾಟಕದ ವಿಚಾರಕ್ಕೆ ಬರೋದಾದ್ರೆ, ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆ ಎದ್ದು ಕಾಣ್ತಾ ಇದೆ. ರಾಜ್ಯದಲ್ಲಿನ ವ್ಯಾಕ್ಸಿನ್ ಕೊರತೆ ಬಗ್ಗೆ ಹೈ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಲಸಿಕೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈ ಕೋರ್ಟ್ ಸೂಚನೆಯನ್ನು ನೀಡಿದೆ. ಆರಂಭದ ಹಂತಗಳಲ್ಲಿ ಲಸಿಕೆಯ ಬಗೆಗೆ ಜನರಲ್ಲಿ ಸಾಕಷ್ಟು ಜಾಗೃತಿ ಮೂಡದಿರುವುದು ಮತ್ತು ಲಸಿಕೆಯ ಕುರಿತಾಗಿನ ವದಂತಿಗಳಿಂದಾಗಿ ಜನರು ಲಸಿಕೆ ಪಡೆಯಲು ಹಿಂದೇಟು ಹಾಕಿದ್ದರು. ಆದರೆ ಕೋವಿಡ್ 2ನೇ ಅಲೆ ದೇಶವ್ಯಾಪಿಯಾಗಿ ಹರಡುತ್ತಿರುವಂತೆಯೇ ಜನರೂ ಸೋಂಕಿನ ತೀವ್ರತೆಯ ಬಗೆಗೆ ಭೀತರಾಗಿ ಲಸಿಕೆ ಪಡೆಯಲು ಲಸಿಕಾ ಕೇಂದ್ರಗಳತ್ತ ಮುಗಿ ಬೀಳುತ್ತಿದ್ದಾರೆ. ಆದರೆ ಬೇಡಿಕೆಗೆ ತಕ್ಕಷ್ಟು ಪ್ರಮಾಣದಲ್ಲಿ ಲಸಿಕೆ ಸಿಗುತ್ತಿಲ್ಲ. ಟೋಕನ್ ಕ್ಲೋಸ್ ನಾಳೆ ಬನ್ನಿ, ನಾಳೆ ಬನ್ನಿ ಎಂಬ ಮಾತುಗಳು ಲಸಿಕಾ ಕೇಂದ್ರಗಳಲ್ಲಿ ಕೇಳಿ ಬರುತ್ತಿವೆ.
ಕರ್ನಾಟಕದಲ್ಲಿ ಇಲ್ಲಿಯವರೆಗೆ 18 ರಿಂದ 45 ವರ್ಷದೊಳಗಿನವರಲ್ಲಿ ಮೊದಲ ಡೋಸ್ ಪಡೆದವರ ಸಂಖ್ಯೆ 17,519. 45 ವರ್ಷ ಮೇಲ್ಪಟ್ಟವರಲ್ಲಿ ಮೊದಲ ಡೋಸ್ 73, 20,518 ಜನ ಪಡೆದಿದ್ದರೆ, ಎರಡನೇ ಡೋಸ್ ಪಡೆದವರ ಸಂಖ್ಯೆ 14,86,102 ಜನ. ಒಟ್ಟಾರೆ ಮೊದಲ ಡೋಸ್ ಹಾಕಿಸಿಕೊಂಡವರ ಸಂಖ್ಯೆ 84, 92, 968, ಎರಡನೇ ಡೋಸ್ ಹಾಕಿಸಿಕೊಂಡವರ ಸಂಖ್ಯೆ 21, 15, 571. ಎರಡು ಲಸಿಕೆ ಸೇರಿ ಕರ್ನಾಟಕದಲ್ಲಿ ಲಸಿಕೆ ಹಾಕಿಸಿಕೊಂಡವರ ಸಂಖ್ಯೆ 1,06,08 539. ಇದರಲ್ಲಿ 18 ವರ್ಷ ಮೇಲಪ್ಟ್ಟವರು, 45 ವರ್ಷ ಮೇಲ್ಪಟ್ಟವರು, 65 ವರ್ಷ ಮೇಲ್ಪಟ್ಟವರು ಮೂರು ವಿಭಾಗದ ಜನರಿದ್ದಾರೆ. 64 ಲಕ್ಷಜನ ತುರ್ತಾಗಿ ಎರಡನೇ ಡೋಸ್ ಪಡೆಯಬೇಕಿದೆ ಆದರೆ ರಾಜ್ಯ ಸರ್ಕಾರದ ಬಳಿ 7.76 ಲಕ್ಷ ಡೋಸ್ ಲಸಿಕೆ ಮಾತ್ರ ಸ್ಟಾಕ್ ಇದೆ.
ಮಂಡ್ಯ ಜಿಲ್ಲೆಯ ಜಿಲ್ಲಾಸ್ಪತ್ರೆ,ತಾಲೂಕು ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲಾಗುತ್ತಿದೆ. ಜಿಲ್ಲಾದ್ಯಂತ 22 ಸಾವಿರ ಮಂದಿಗೆಮೊದಲ ಲಸಿಕೆ ಕೋವ್ಯಾಕ್ಸಿನ್ ಲಸಿಕೆ ಹಾಕಲಾಗಿದೆ. ಇದರಲ್ಲಿಈಗಾಗಲೇ 2 ಸಾವಿರ ಮಂದಿಗೆ 2ನೇ ಲಸಿಕೆ ನೀಡಲಾಗಿದೆ. ಇನ್ನುಳಿದ 18 ಸಾವಿರ ಮಂದಿಗೆಲಸಿಕೆ ಇಲ್ಲದಂತಾಗಿದೆ. ಲಸಿಕೆ ಬರುವವರೆಗೂ ಮಂಡ್ಯದ ಜನ ಕಾಯಬೇಕಾಗಿದೆ. ಈಗಾಗಲೇ ಮೊದಲ ಲಸಿಕೆ ಪಡೆದವರು 6 ವಾರ ಕಳೆದಿದ್ದು, ಲಸಿಕೆಗಾಗಿ ಕಾಯುತ್ತಿದ್ದಾರೆ. ಅವರೆಲ್ಲರಿಗೂ ಲಸಿಕೆ ಲಭ್ಯತೆ ಆಧರಿಸಿ ನೀಡಲಾಗುವುದು ಎಂದು ಮಂಡ್ಯ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಹಾಸನ ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಕೊವ್ಯಾ ಕ್ಸಿನ್ ಲಸಿಕೆ ಪೂರೈಕೆಸ್ಥಗಿತಗೊಂಡಿತ್ತು. ಒಂದನೇ ಡೋಸ್ ಪಡೆದು 28 ದಿನಪೂರೈಸಿ 2ನೇ ಡೋಸ್ ಪಡೆಯಲು 2 ಲಕ್ಷದ 26 ಸಾವಿರ ಮಂದಿ ಕಾಯುತ್ತಿದ್ದಾರೆ. 28 ದಿನ ಮುಗಿದ ತಕ್ಷಣವೇ 2ನೇ ಡೋಸ್ ಪಡೆಯಬೇಕೆಂದೇನಿಲ್ಲ. 4 ರಿಂದ 6ವಾರಗಳ ನಡುವೆ 2ನೇ ಡೋಸ್ ಪಡೆದರೆ ಸಾಕು. ಕೆಲ ದಿನಗಳು ಹೆಚ್ಚುಕಡಿಮೆಯಾದರೂ ಆತಂಕಪಡದೆ 2ನೇ ಡೋಸ್ ಲಸಿಕೆ ಪಡೆಯಬೇಕು.ಮೊದಲ ಲಸಿಕೆ ಪಡೆದು 6 ವಾರ ಸಮೀಪಿಸುತ್ತಿರುವವರು ಆದ್ಯತೆ ಮೇಲೆಲಸಿಕೆ ಪಡೆಯಬೇಕು. ಮುಂದಿನ ದಿನಗಳಲ್ಲಿ ಹಂತ, ಹಂತವಾಗಿಲಸಿಕೆ ಪೂರೈಕೆಯಾಗಲಿದೆ. ನೂಕು ನುಗ್ಗಲಿನಲ್ಲಿ ಲಸಿಕೆಪಡೆಯುವ ಧಾವಂತ ಬೇಡ ಎಂದು ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ಕುಮಾರ್‌ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಏರಿಕೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಕೊರೋನ ಲಸಿಕೆ ಪಡೆಯುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಆದರೆ ಸರಕಾರದಿಂದ ಜಿಲ್ಲೆಗೆ ಲಸಿಕೆ ಪೂರೈಕೆ ಆಗದ ಹಿನ್ನೆಲೆಯಲ್ಲಿ ಸದ್ಯ ಒಂದು ವಾರಗಳ ಕಾಲ ಜಿಲ್ಲೆಯ ಎಲ್ಲ ಕೇಂದ್ರ ಗಳಲ್ಲಿ ಲಸಿಕೆ ನೀಡುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 13, ಕಾಪು- 10, ಕುಂದಾಪುರ- 16, ಬೈಂದೂರು- 15 ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 19 ಸೇರಿದಂತೆ ಒಟ್ಟು 74 ಸರಕಾರಿ ಕೊರೋನ ಲಸಿಕಾ ಕೇಂದ್ರಗಳಿವೆ.
ಯಾದಗಿರಿ ಜಿಲ್ಲೆಯಲ್ಲಿ ಪ್ರತಿ ನಿತ್ಯವೂ ಕೋವಿಡ್ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿವೆ. ಇದರಿಂದ ಈಗ ಆತಂಕ ಗೊಂಡ ಜನ ಕೊರೊನಾ ಲಸಿಕೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೊಂದಣೆ ಮಾಡಿಸಿ ಲಸಿಕೆ ಪಡೆಯಲು ಮುಗಿ ಬಿಳುತ್ತಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಕೂಡ ಕೋವ್ಯಾಕ್ಸಿನ್ ಹಾಗೂ ಕೋವಿಶಿಲ್ಡ್ ಲಸಿಕೆ ಕಳೆದ ಎರಡು ದಿನದಿಂದ ಕೊರತೆಯಾಗಿದೆ. ಹೊಸಪೇಟೆಯ ಕಮಲಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ಮೂರು ದಿನಗಳಿಂದ ಖಾಲಿಯಾಗಿದ್ದು, ಸಾರ್ವಜನಿಕರು ಪರದಾಡುತ್ತಿದ್ದಾರೆ. ಮೊದಲ ಡೋಸ್ ಪಡೆದವರು ಎರಡನೇ ಡೋಸ್ ಪಡೆಯಲು ಆಸ್ಪತ್ರೆಗೆ ಎಡತಾಕುತ್ತಿದ್ದಾರೆ. ವೈದ್ಯರು ಇಂದು ನಾಳೆ ಎಂದು ಮುಂದೂಡುತ್ತಲೇ ಇದ್ದಾರೆ. ಲಸಿಕೆ ಇಲ್ಲದ ಕಾರಣ ಜನರು ವಾಪಸಾಗುತ್ತಿದ್ದಾರೆ. ಕೆಲವರು ಕೋವಿಶೀಲ್ಡ, ಕೆಲವರು ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಎರಡನೇ ಡೋಸ್‍ಗೂ ಅದೆ ಲಸಿಕೆ ಹಾಕಿಸಿಕೊಳ್ಳಬೇಕಿದ್ದು ಕೋವ್ಯಾಕ್ಸಿನ್ ಅಭಾವ ಉಂಟಾಗಿದೆ. ಸದ್ಯ ಕೋವಿಶೀಲ್ಡ್ ಸಹ ಖಾಲಿಯಾಗಿದ್ದು ಸಮಸ್ಯೆಯುಂಟಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ವಾಹನ ಓಡಾಟಕ್ಕೆ ಬ್ರೇಕ್ : 8 ಕಿಮಿ ನಡೆದ ತುಂಬು ಗರ್ಭಿಣಿ
ಎರಡನೇ ಡೋಸ್ ಲಸಿಕೆಯನ್ನು ಪಡೆಯದೇ ಇದ್ದರೇ, ಏನಾಗುತ್ತೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಮೊದಲ ಡೋಸ್ ಲಸಿಕೆ ನೀಡಿದ ಬಳಿಕ ಎರಡನೇ ಡೋಸ್ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ನೀಡಲಾಗುತ್ತೆ. ಆದರೇ, 2ನೇ ಡೋಸ್ ಲಸಿಕೆ ಸಿಗದಿದ್ದರೇ ಅಥವಾ ಒಂದು ವೇಳೆ 2ನೇ ಡೋಸ್ ಲಸಿಕೆ ವಿಳಂಬವಾದರೇ, ಮೊದಲ ಡೋಸ್ ಲಸಿಕೆಯ ಪರಿಣಾಮ ಕಡಿಮೆಯಾಗಬಹುದು. ಜೊತೆಗೆ ಲಸಿಕೆಯಿಂದ ಸಿಗುತ್ತಿದ್ದ ರಕ್ಷಣೆ ಕಡಿಮೆಯಾಗುತ್ತೆ. 2ನೇ ಡೋಸ್ ಲಸಿಕೆಯನ್ನು ಪಡೆಯದೇ ಇದ್ದರೇ, ಸಂಪೂರ್ಣ ಮತ್ತು ಪರಿಣಾಮಕಾರಿ ಲಸಿಕೆ ನೀಡಿಕೆಯ ಅಂದೋಲನದ ಉದ್ದೇಶವೇ ಈಡೇರಲ್ಲ ಎಂಬುದು ತಜ್ಞರವಾದವಾಗಿದೆ.
ಮೂರನೇ ಅಲೆ ಸಾಕಷ್ಟು ಅಪಾಯ ತಂದೊಡ್ಡಬಹುದು ಎಂದು ವೈದ್ಯರು ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಆದರೆ ಕೇಂದ್ರ ರಾಜ್ಯ ಸರಕಾರಗಳು ಇನ್ನು ಎಚ್ಚೆತ್ತುಕೊಂಡಿಲ್ಲ. ಕೋಡಲೆ ಬೆಡ್, ಆಕ್ಸಿಜನ್, ಲಸಿಕೆಯ ಪ್ರಮಾಣವನ್ನು ಹೆಚ್ಚಿಸಲು ಮುಂದಾಗಬೇಕಿದೆ.