ಬೆಂಗಳೂರು: ಕರ್ನಾಟಕ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಚರ್ಚೆ ಮಾಡಲು ಸೂಕ್ತ ವೇದಿಕೆ ಇಲ್ಲ. ಪರಿಷತ್ತು, ಅಕಾಡೆಮಿ, ವಿಶ್ವವಿದ್ಯಾಲಯಗಳು, ಸರ್ಕಾರದ ಅನುದಾನ ಪಡೆಯುವ ಸಂಘ ಸಂಸ್ಥೆಗಳು ಭಾಷೆ ಸಾಹಿತ್ಯದ ಬಗ್ಗೆ ಅತ್ಯಂತ ಉನ್ನತ ಮಟ್ಟದ ಚರ್ಚೆ ನಡೆಸಬೇಕಿತ್ತು ಎಂದು ಜನಸಾಹಿತ್ಯ ಸಮ್ಮೇಳನದಲ್ಲಿ ದೆಹಲಿಯ ಜವಾಹರಲಾಲ್ ನೆಹರೂ(ಜೆಎನ್ಯು) ವಿಶ್ವವಿದ್ಯಾಲಯದ ಪ್ರೊಪೆಸರ್ ಹಾಗೂ ಚಿಂತಕ ಪುರುಷೋತ್ತಮ ಬಿಳಿಮಲೆ ಹೇಳಿದರು.
ಮುಂದುವರೆದು ಮಾತನಾಡಿದ ಪುರುಷೋತ್ತಮ ಬಿಳಿಮಲೆ ಅವರು, ಹಾವೇರಿ ಸಮ್ಮೇಳನ ಕಾಟಾಚಾರದ ಸಮ್ಮೇಳನ. ಕೊರಗ ಭಾಷೆ ಇಂದು ಅಳಿವಿನ ಅಂಚಿನಲ್ಲಿದೆ. ಭಾಷೆ ಅಳಿವಿನಂಚಿನಲ್ಲಿ ಇರುವಾಗ ಪರಿಷತ್ತು ಇವುಗಳನ್ನು ಉಳಿಸುವ ಕೆಲಸ ಮಾಡುತ್ತಿಲ್ಲ. ಕಾಟಾಚಾರಕ್ಕೆ ಕನ್ನಡ ಕಾರ್ಯಕ್ರಮ ಮಾಡಿದರೆ ಬಹಿಷ್ಕರಿಸುವುದೇ ಸರಿ ಎಂದು ತಿಳಿಸಿದರು.
ಕರ್ನಾಟಕಕ್ಕೆ ಭಾಷಾ ನೀತಿಗೆ ಒತ್ತಡ ಹಾಕಬೇಕು. ಜಾಗತೀಕರಣ, ಬಾಬ್ರಿ ಮಸೀದಿ ಬಿದ್ದ ನಂತರ ಭಾರತಕ್ಕೆ ಕೀವು ಆಗುತ್ತಿದೆ. ಈ ಸಂದರ್ಭದಲ್ಲಿ ಲೇಖಕರು ಪ್ರಶ್ನೆ ಮಾಡಬೇಕು. ಶೃಜನಶೀಲ ಕೃತಿಗಳಲ್ಲಿ, ಕಲಾವಿದರು, ಲೇಖಕರು ಜವಾಬ್ದಾರಿ ಅರಿತು ಜನಸಾಮಾನ್ಯರ ಕಡೆಗೆ ತಲುಪಿಸಬೇಕು ಎಂದರು.
ಸಂಸ್ಕೃತಿ ಬಗೆಗೆ ಅಪವ್ಯಾಖ್ಯಾನಗಳೇ ಆಗುತ್ತಿದೆ. ಕ್ರೈಸ್ತ ಮಿಷನರಿಗಳು ಶಾಲೆ ಆರಂಭಿಸದಿದ್ದರೆ ನಾನು ಈ ವೇದಿಕೆಯಲ್ಲಿ ಮಾತನಾಡುತ್ತಿರಲಿಲ್ಲ. ಕರ್ನಾಟಕದಲ್ಲಿ 72 ಭಾಷೆ ಇದೆ. ಎಂದರೆ, ಒಳಗೊಳ್ಳುವ ಪ್ರಕ್ರಿಯೆ ಎಷ್ಟಿದೆ ಎಂದು ತಿಳಿಯಬಹುದು. ನಾವು ಪರಂಪರೆಯ ಉತ್ತಮ ಗುಣಗಳನ್ನು ಹೇಳಬೇಕು. ಕುವೆಂಪು ಹೇಳಿದ ಶಾಂತಿಯ ತೋಟದಿಂದ ಹೆಚ್ಚು ಕರ್ನಾಟಕವನ್ನು ವಿವರಿಸಲು ಸಾಧ್ಯವಿಲ್ಲ. ಜಾಗತಿಕವಾಗಿ ಭಾಷೆ ಎದುರಿಸುವ ಸಮಸ್ಯೆಗಳನ್ನು ಅರಿತು ಮುನ್ನಡೆಯಬೇಕಿದೆ ಎಂದು ಕರೆ ನೀಡಿದರು.