ಜನರ ಕಳೆ ಕಸಿದ ಮಳೆ

ಗುರುರಾಜ ದೇಸಾಯಿ
ರಾಜ್ಯದಲ್ಲಿ ಈ ಬಾರಿ ಮಳೆಯ ಸದ್ದು ಜೋರಾಗಿಯೇ ಆರಂಭವಾಗಿದೆ. ಬಹಳಷ್ಟು ಜಿಲ್ಲೆಗಳಲ್ಲಿ ಜಲಾಶಯಗಳು ಭರ್ತಿಯಾಗಿವೆ. ಮುಂಗಾರಿಗೂ ಮುನ್ನ ಮಳೆ ಧರೆಗಿಳಿಯುತ್ತಿದ್ದಂತೆ ರೈತರಲ್ಲಿ ಮಂದಹಾಸ ಮೂಡಿತ್ತು. ಆದರೆ ಮಳೆ ನಿರೀಕ್ಷೆಗೂ ಮೀರಿ ಆರ್ಭಟಿಸಿದ್ದರಿಂದ ಬಹಳಷ್ಟು ಜಿಲ್ಲೆಗಳಲ್ಲಿ ಅನಾಹುತ ಸೃಷ್ಟಿಯಾಗಿದೆ. ಹೊಲಗದ್ದೆಗಳಿಗೆ ನೀರು ಹರಿದು ಬೆಳೆ ಹಾನಿಯಾಗಿದೆ. ಮನೆಗಳು ಕುಸಿದು ಬಿದ್ದಿವೆ. ರಸ್ತೆಯಲ್ಲ ಜಲಾವೃತಗೊಂಡು ಅನೇಕ ಕಡೆಗಳಲ್ಲಿ ಗುಡ್ಡ ಕುಸಿದಿದೆ. ಬಹಳಷ್ಟು ಕಡೆ ಪ್ರಾಣಹಾನಿಯೂ ಸಂಭವಿಸಿದೆ. ಜನರ 

ಕರ್ನಾಟಕದ ಕರಾವಳಿಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಅಷ್ಟೇ ಅಲ್ಲದೆ ಮಲೆನಾಡಿನಲ್ಲೂ ಮಳೆ ಜೋರಾಗಿದೆ. ಇನ್ನುಳಿದಂತೆ ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರಿನಲ್ಲಿ ಮಳೆಯಾದ ಬಗ್ಗೆ ವರದಿಯಾಗಿದೆ.

ಕಳೆದ ವರ್ಷ ಮುಂಗಾರು ಅವಧಿಯಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.25ರಷ್ಟು, ಹಿಂಗಾರು ಅವಧಿಯಲ್ಲಿ ಶೇ.38ರಷ್ಟು ಮಳೆ ಕೊರತೆ ಉಂಟಾಗಿತ್ತು. ಇದರಿಂದ ರಾಜ್ಯದಲ್ಲಿ ಭೀಕರ ಬರ ಸೃಷ್ಟಿಯಾಗಿತ್ತು. ಹಲವು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿತ್ತು. ಆದರೆ ಮುಂಗಾರು ಅವಧಿಯ ನಾಲ್ಕು ತಿಂಗಳ ಪೈಕಿ ಪ್ರಸಕ್ತ ಜೂನ್‌ ಮತ್ತು ಜುಲೈ ಅವಧಿಯಲ್ಲಿ ಸುರಿದ ಮಳೆಯು 1994ರ ನಂತರ ಸುರಿದ ಅತಿ ಹೆಚ್ಚು ಹಾಗೂ ದಾಖಲೆಯ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಅಂಕಿ-ಅಂಶಗಳು ದೃಢಪಡಿಸಿವೆ. ಜನರ 

ಜುಲೈನಲ್ಲಿ ವಾಡಿಕೆಗಿಂತಲೂ 48% ಜಾಸ್ತಿ ಮಳೆ

ಜುಲೈನಲ್ಲಿ 263 ಮಿ.ಮೀ ಮಳೆಯಾಗುವುದು ವಾಡಿಕೆ. ಆದರೆ ಈ ಬಾರಿ ಜುಲೈ 1 ರಿಂದ 30ರ ವರೆಗೆ ರಾಜ್ಯದಲ್ಲಿ 390 ಮಿ.ಮೀ ನಷ್ಟು ಮಳೆ ಸುರಿದಿದೆ. ವಾಡಿಕೆಗಿಂತ 48% ಹೆಚ್ಚಾಗಿ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ರಾಜ್ಯದಲ್ಲಿ 1994ರಿಂದ 2024ರ ಜೂನ್‌ ಮತ್ತು ಜುಲೈ ಅವಧಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾದ ವರ್ಷಗಳೇ ಹೆಚ್ಚಾಗಿವೆ. ಒಟ್ಟು 18 ವರ್ಷ ವಾಡಿಕೆ ಪ್ರಮಾಣಕ್ಕಿಂತ ಮಳೆ ಕಡಿಮೆಯಾಗಿದೆ. ಪ್ರಸಕ್ತ ವರ್ಷ ಸೇರಿದಂತೆ 12 ವರ್ಷ ಮಾತ್ರ ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ಮಳೆಯಾಗಿದೆ.

 

ಜೂನ್‌ –ಜುಲೈ ಮಳೆ ವಿವರ

ಪ್ರದೇಶ ವಾಡಿಕೆ ಸುರಿದ ಮಳೆ ಶೇಕಡಾ
ದಕ್ಷಿಣ ಒಳನಾಡು 142 202 42
ಉತ್ತರ ಒಳನಾಡು 216 283 31
ಮಲೆನಾಡು 936 1,199 28
ಕರಾವಳಿ 1,940 2,409 24
ಒಟ್ಟು 463 593 28
(ಮಿ.ಮೀ.ಗಳಲ್ಲಿ)

 

ಹಲವೆಡೆ ಗುಡ್ಡ ಕುಸಿತ,ಸಾವು ನೋವು

ಮುಂಗಾರು ಮಳೆಯ ಅಬ್ಬರಕ್ಕೆ ಪಶ್ಚಿಮ ಘಟ್ಟಗಳು ನಲುಗಿ ಹೋಗಿವೆ. ಮಳೆಯ ರೌದ್ರ ನರ್ತನಕ್ಕೆ ಹಲವೆಡೆ ಭೂಕುಸಿತ ಉಂಟಾಗಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.ಮಲೆನಾಡು, ಕರಾವಳಿ ಭಾಗದಲ್ಲಿ ಬೆಟ್ಟ- ಗುಡ್ಡಗಳು ಕುಸಿದು ಬೀಳುತ್ತಿದ್ದು ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ.

ಜುಲೈ 15 ರಾತ್ರಿ ಶಿರೂರಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿಯಿತು. ಘಟನೆಯಲ್ಲಿ ಆಟವಾಡುತಿದ್ದ ಪುಟ್ಟ ಕಂದಮ್ಮಗಳು, ಟೀ ಅಂಗಡಿಯಲ್ಲಿ ಚಹ ಸವಿಯುತಿದ್ದ ಟ್ರಕ್‌ ಚಾಲಕರು, ಗುಡ್ಡದ ಬದಿಯಲ್ಲಿ ವಿಶ್ರಾಂತಿ ಪಡೆಯುತಿದ್ದ ಚಾಲಕ, ಮನೆಯಲ್ಲಿ ಅಡುಗೆ ಮಾಡುತಿದ್ದ ಮಹಿಳೆ ಸೇರಿ 11 ಜನ ಭೂ ಕುಸಿತ ದುರಂತದಲ್ಲಿ ಕಾಣೆಯಾದರು. ಸತತ ಕಾರ್ಯಾಚರಣೆ ನಂತರ ಗಂಗಾವಳಿ ನದಿ ತೀರದ ಭಾಗದಲ್ಲಿ ಎಂಟು ಶವಗಳು ದೊರೆತಿತ್ತು ಆದರೆ, ಕೇರಳ ಮೂಲದ ಅರ್ಜುನ್‌, ಶಿರೂರಿನ ಲೋಕೇಶ್‌ ನಾಯ್ಕ, ಜಗನ್ನಾಥ ನಾಯ್ಕ ಇನ್ನೂ ಪತ್ತೆಯಾಗಿಲ್ಲ. ಶೋಧಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಮಂಗಳೂರು ಹಾಗೂ ಘಟ್ಟದ ಮೇಲಿನ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್​​ನಲ್ಲಿ ಗುಡ್ಡ ಕುಸಿತದಿಂದ ಸಂಚಾರ ದುಸ್ತರವಾಗಿದೆ. ಮತ್ತೊಂದೆಡೆ, ಚಾರ್ಮಾಡಿ ಘಾಟ್ ರಸ್ತೆಯಲ್ಲಿಯೂ ಅಲ್ಲಲ್ಲಿ ಭೂಕುಸಿತವಾಗುತ್ತಿದೆ. ಪುತ್ತುರು, ಬೆಳ್ತಂಗಡಿ, ಉಡುಪಿ ಯಲ್ಲಿ ಗುಡ್ಡ ಕುಸಿದು ಅಪಾರ ಹಾನಿ ಸೃಷ್ಠಿಯಾಗಿದೆ.

ನಿರಂತರವಾಗಿ ಗುಡ್ಡ, ಭೂಮಿ ಕುಸಿಯುತ್ತಿರುವುದು ಜನರಲ್ಲಿ ಆತಂಕದ ವಾತಾವರಣ ಉಂಟು ಮಾಡಿದೆ. ಮಳೆ ಬೇಕು, ಬೇಕು ಎನ್ನುತ್ತಿದ್ದ ಜನ ಈಗ ಮಳೆ ಸಾಕಪ್ಪ ಎಂದು ಹೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜನರು ಪ್ರವಾಹದ ಭೀತಿಯಲ್ಲಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಕಡೆ ಸೇತುವೆಗಳು, ರಸ್ತೆಗಳು, ಮಳೆಯ ಅಬ್ಬರಕ್ಕೆ ಕೊಚ್ಚಿಕೊಂಡು ಹೋಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಜಲಾಶಯಗಳು ಭರ್ತಿಯಾಗಿ ಭಾರಿ ಪ್ರಮಾಣದ ನೀರನ್ನು ಹೊರ ಬಿಡುತ್ತಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.ಈ ಭಾಗದಲ್ಲಿ ಜನರು ಜೀವ ಕೈಯಲ್ಲಿ ಹಿಡಿದು ಜೀವನ ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

44,000 ಹೆಕ್ಟರ್ ಬೆಳೆ ಕೃಷಿ ಭೂಮಿಯಲ್ಲಿ ಹಾನಿ

ರಾಜ್ಯದ ಬಹುತೇಕ ಭಾಗಗಳಲ್ಲಿ ಈ ಬಾರಿ ನೈರುತ್ಯ ಮುಂಗಾರು ಮಳೆ ಅಬ್ಬರಿಸಿದ್ದು, ಪರಿಣಾಮ ಕಳೆದ ಎರಡು ತಿಂಗಳಲ್ಲಿ ತೋಟಗಾರಿಕೆ ಮತ್ತು ಕೃಷಿ ಸೇರಿ ಒಟ್ಟು 45,397 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ

ಅತೀ ಹೆಚ್ಚಿನ ಪ್ರಮಾಣದಲ್ಲಿ ಜಲಾಶಯಗಳಿಗೆ ಮಳೆ ನೀರು ಹರಿದುಬಂದ ಕಾರಣ, ಬೆಳಗಾವಿ ಜಿಲ್ಲೆಯ ಗೋಕಾಕ, ಅಥಣಿ, ಹುಕ್ಕೇರಿ, ನಿಪ್ಪಾಣಿ, ಮೂಡಲಗಿ, ಚಿಕ್ಕೋಡಿ ತಾಲ್ಲೂಕುಗಳಲ್ಲಿ ಮತ್ತು ಬಾಗಲಕೋಟೆಯ ಕೆಲವು ಭಾಗಗಳಲ್ಲಿ ಭಾರಿ ಪ್ರವಾಹ ಉಂಟಾಗಿದೆ. ಕಾವೇರಿ ಜಲಾನಯನ ಪ್ರದೇಶಗಳ ಎಲ್ಲ ನಾಲ್ಕು ಅಣೆಕಟ್ಟುಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಒಳ ಹರಿವು ಉಂಟಾಗಿದೆ ಎಂದು ಕಂದಾಯ ಇಲಾಖೆ ಹೇಳಿದೆ.

ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು 26,674 ಹೆಕ್ಟೇರ್‌ ಪ್ರದೇಶದಲ್ಲಿ, ಬಾಗಲಕೋಟೆಯಲ್ಲಿ 15,455 ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಹಾನಿ ಉಂಟಾಗಿದೆ. ನಷ್ಟದ ಪ್ರಮಾಣವನ್ನು ಸಮೀಕ್ಷೆ ಮಾಡಬೇಕಿದೆ  ಮಳೆಯಿಂದ 380 ಗ್ರಾಮಗಳಲ್ಲಿ ಸಮಸ್ಯೆಯಾಗಿದೆ. 278 ಜಾನುವಾರುಗಳು ಬಲಿ ಆಗಿವೆ. 1,064 ಮನೆಗಳು ಸಂಪೂರ್ಣ, 5,406 ಮನೆಗಳು ಭಾಗಶಃ ಹಾನಿಯಾಗಿದೆ. ಚಿಕ್ಕಮಗಳೂರಿನಲ್ಲಿ ಅತೀ ಹೆಚ್ಚು 353, ಉತ್ತರ ಕನ್ನಡದಲ್ಲಿ 183, ಹಾಸನದಲ್ಲಿ 153, ಮನೆಗಳಿಗೆ ತೀವ್ರ ಹಾನಿ ಯಾಗಿದೆ. ಒಟ್ಟು 23,284 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಎರಡು ತಿಂಗಳಲ್ಲಿ 54ಕ್ಕೂ ಹೆಚ್ಚುಜನ ಮಳೆ ಆರ್ಭಟಕ್ಕೆ ಬಲಿಯಾಗಿದ್ದಾರೆ.

ಧಾರಕಾರ ಮಳೆ ಎಸ್ಕಾಂಗಳಿಗೆ 96.66 ಕೋಟಿ ರೂ. ನಷ್ಟ

ರಾಜ್ಯದಲ್ಲಿ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಎಸ್ಕಾಂಗಳಿಗೆ ಒಟ್ಟಾರೆ 96.66 ಕೋಟಿ ರೂ. ನಷ್ಟವಾಗಿದೆ. “ಮಳೆ ಮತ್ತು ಗಾಳಿಯಿಂದ 53,816 ಕಂಬಗಳು, 3,924 ಟ್ರಾನ್ಸ್ ಫಾರ್ಮರ್ ಗಳು, 1,120 ಕಿ.ಮೀ. ವಿದ್ಯುತ್ ತಂತಿಗಳು ಹಾನಿಗೊಳಗಾಗಿದ್ದು. ಈ ಪೈಕಿ 51,119 ಕಂಬಗಳು, 3,918 ಟ್ರಾನ್ಸ್ ಫಾರ್ಮರ್ ಗಳು, 1,063 ಕಿ.ಮೀ. ವಿದ್ಯುತ್ ತಂತಿಗಳನ್ನು ದುರಸ್ತಿಗೊಳಿಸುವ ಕಾರ್ಯ ಪೂರ್ಣಗೊಂಡಿದೆ. ಬಾಕಿ ಉಳಿದ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಮರ್ಪಕ ವಿದ್ಯುತ್ ಪೂರೈಕೆಗೆ ಎಸ್ಕಾಂ ಸಿಬ್ಬಂದಿ ಸತತವಾಗಿ ಶ್ರಮಿಸುತ್ತಿದ್ದಾರೆ.

ಭಾರಿ ಮಳೆ ಬೀಳುತ್ತಿರುವ ಮಲೆನಾಡು, ಕರಾವಳಿ ಮತ್ತು ಬೆಳಗಾವಿ ಭಾಗಗಳಲ್ಲಿ ನೀರಿನ ಮಧ್ಯೆಯೂ ಕೆಲಸ ಮಾಡುತ್ತಿದ್ದಾರೆ. ಹೆಚ್ಚು ಹಾನಿ ಸಂಭವಿಸಿರುವ ಪ್ರದೇಶಗಳಿಗೆ ಹೆಚ್ಚುವರಿ ಲೈನ್ ಮೆನ್ ಗಳನ್ನು ನೇಮಿಸುವುದರ ಜತೆಗೆ ಗುತ್ತಿಗೆದಾರರ ನೆರವಿನೊಂದಿಗೆ ತಂಡಗಳನ್ನು ಮಾಡಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ವಿದ್ಯುತ್ ಮರು ಸಂಪರ್ಕಕ್ಕೆ ಕಂಬಗಳು, ಕಂಡಕ್ಟರ್ ಗಳು, ತಂತಿಗಳ ಕೊರತೆಯಾಗದಂತೆ ಮೊದಲೇ ಸಂಗ್ರಹಿಸಿಟ್ಟುಕೊಂಡಿದೆ.

ಜಲಾಶಯಗಳು ಭರ್ತಿ

ಪ್ರಸಕ್ತ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಕೇವಲ 2 ತಿಂಗಳಲ್ಲಿ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಪ್ರಮುಖ 14 ಜಲಾಶಯಗಳ ಪೈಕಿ 8 ಜಲಾಶಯಗಳು ತುಂಬಿವೆ.

ಕೆಆರ್‌ಎಸ್‌ ಜಲಾಶಯ ​: ದಕ್ಷಿಣ ಭಾರತದ ಅತಿ ಉದ್ಧನೆಯ ನದಿ ಕಾವೇರಿಗೆ ನಿರ್ಮಿಸಿರುವ ಕೃಷ್ಣರಾಜ ಸಾಗರ (ಕೆಆರ್‌ಎಸ್‌) ಎರಡು ವರ್ಷಗಳ ಬಳಿಕ ಸಂಪೂರ್ಣ ಭರ್ತಿಯಾಗಿದೆ. ಸದ್ಯ ಜಲಾಶಯದಲ್ಲಿ ಗರಿಷ್ಠ ಮಟ್ಟ 124 ಅಡಿಗೆ ನೀರು ತಲುಪಿದ್ದು, 49 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಇನ್ನು ಜಲಾಶಯದಿಂದ 90 ಸಾವಿರ ಕ್ಯೂಸೆಕ್ಸ್‌ ನೀರನ್ನು ಹೊರಬಿಡಲಾಗುತ್ತಿದೆ. 50 ಸಾವಿರ ಕ್ಯೂಸೆಕ್ಸ್‌ಗಿಂತಲೂ ಅಧಿಕ ಒಳಹರಿವು ಇದೆ.

ಹೇಮಾವತಿ ಜಲಾಶಯ​​:  ಹಾಸನದ ಹೇಮಾವತಿ ನದಿಗೆ ಗೊರೂರಿನಲ್ಲಿ ಈ ಜಲಾಶಯ ನಿರ್ಮಿಸಲಾಗಿದೆ. ಸದ್ಯ ಈ ಜಲಾಶಯಗವು ಕಳೆದ ಮೂರು ದಿನಗಳಿಂದ ಭರ್ತಿಯಾಗಿದ್ದು, ನದಿಗೆ ನೀರು ಹರಿಬಿಡಲಾಗುತ್ತಿದೆ. ನೀರಿನಮಟ್ಟ ಗರಿಷ್ಠ 890 ಮೀಟರ್‌ ತಲುಪಿದೆ. ಸದ್ಯ ಜಲಾಶಯದಲ್ಲಿ 35.3 ಟಿಎಂಸಿ ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 25 ಟಿಎಂಸಿ ನೀರಿತ್ತು.

ಕಬಿನಿ ಜಲಾಶಯ: ಪ್ರಸಕ್ತ ವರ್ಷ ​ಕರ್ನಾಟಕದಲ್ಲಿ ಮೊದಲು ಭರ್ತಿಯಾದ ಜಲಾಶಯ ಕಬಿನಿ. ಜುಲೈ ಮೊದಲ ವಾರದಲ್ಲಿಯೇ ಈ ಜಲಾಶಯ ಭರ್ತಿಯಾಗಿದ್ದು, ನದಿ ನೀರು ಬಿಡುಗಡೆ ಮಾಡಲಾಗಿತು. ಜಲಾಶಯದಲ್ಲಿ ಸದ್ಯ ಗರಿಷ್ಟ 695 ಅಡಿಯಷ್ಟು ​ನೀರಿದೆ. 18.4 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಇನ್ನು ಕಳೆದ ವರ್ಷ ಇದೇ ಅವಧಿಯಲ್ಲಿ 18 ಟಿಎಂಸಿ ನೀರಿತ್ತು.

ಹಾರಂಗಿ ಜಲಾಶಯ​​ : ಹಾರಂಗಿ ಕಾವೇರಿ ನದಿಯ ಮುಖ್ಯ ಉಪನದಿಗಳಲ್ಲಿ ಒಂದು. ಇದಕ್ಕೆ ಸುವರ್ಣಾವತಿ ಎಂಬ ಹೆಸರೂ ಇದೆ. ಈ ನದಿ ಮಡಿಕೇರಿ ತಾಲೂಕಿನ ಬೋರೋ ಬೆಟ್ಟದಲ್ಲಿ ಉಗಮವಾಗಿ ಕುಶಾಲನಗರದ ಕೂಡಿಗೆ ಎಂಬಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಹುದುಗೂರು ಎಂಬಲ್ಲಿ ಈ ನದಿಗೆ ಅಡ್ಡಲಾಗಿ ಡ್ಯಾಂ ನಿರ್ಮಿಸಲಾಗಿದೆ. ಈ ಡ್ಯಾಂನಲ್ಲಿ 870 ಮೀಟರ್‌ನಷ್ಟು ನೀರಿದೆ. 7.5 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ 6.6 ಟಿಎಂಸಿ ನೀರಿತ್ತು.

ತುಂಗಭದ್ರಾ ಜಲಾಶಯ : ಮಧ್ಯ ಹಾಗೂ ಕಲ್ಯಾಣ ಕರ್ನಾಟಕ ಜನರ ಜೀವನಡಿ ತುಂಗಭದ್ರಾ ಜಲಾಶಯ. ರಾಜ್ಯದ ಅತಿ ದೊಡ್ಡ ಜಲಾಶಯಗಳ ಪೈಕಿ ಇದೂ ಒಂದು. ಕೆಆರ್‌ಎಸ್‌ ಜಲಾಶಯದ ದುಪ್ಪಟ್ಟು ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಕಳೆದ ಎರಡು ವಾರದಿಂದ ಜಲಾಶಯಕ್ಕೆ ಭಾರೀ ನೀರು ಹರಿದು ಬರುತ್ತಿದೆ. ಕಳೆದ ಎರಡು ದಿನಗಳಿಂದ ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗುತ್ತಿದೆ. ಸದ್ಯ ಜಲಾಶಯದಲ್ಲಿ 497 ಮೀಟರ್‌ ನೀಡಿದ್ದು, 102 ಟಿಎಂಟಿ ನೀರು ಶೇಖರಣೆಯಾಗಿದೆ. ಕಳೆದ ವರ್ಷ ಈ ವೇಳೆಗೆ 40 ಟಿಎಂಸಿ ನೀರಿತ್ತು.

ನಾರಾಯಣಪುರ ಜಲಾಶಯ : ಕೃಷ್ಣಾ ನದಿಗೆ ಅಡ್ಡಲಾಗಿ ನಾರಾಯಣಪುರ ಜಲಾಶಯ(ಬಸವ ಸಾಗರ ಜಲಾಶಯ)ಕಟ್ಟಲಾಗಿದೆ. ರಾಜ್ಯದ ಮೂರನೇ ದೊಡ್ಡ ಆಣೆಕಟ್ಟು ಎಂದು ಪ್ರಸಿದ್ಧಿ ಪಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಾರಾಯಣಪುರ ಎಂಬಲ್ಲಿ ಇದೆ. ಮಹಾರಾಷ್ಟ್ರ, ಉತ್ತರ ಕರ್ನಾಟಕ ಭಾಗದಲ್ಲಿ ಜೋರು ಮಳೆಯಾದ ಪರಿಣಾಮ ಜಲಾಶಯ ಬಹುತೇಕ ಭರ್ತಿಯಾಗಿ ನದಿಗೆ ನೀರು ಹರಿಸಲಾಗುತ್ತಿದೆ. 490 ಮೀಟರ್‌ಗಳಷ್ಟು ನೀರಿದ್ದು, 27 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷ ಈ ವೇಳೆಗೆ 18 ಟಿಎಂಸಿ ನೀರಿತ್ತು.

ಆಲಮಟ್ಟಿ ಜಲಾಶಯ:  ಆಲಮಟ್ಟಿಯ ಲಾಲ್‌ಬಹದ್ದೂರ್‌ ಶಾಸ್ತ್ರಿ ಜಲಾಶಯವು ಉತ್ತರ ಕರ್ನಾಟಕದ ಜೀವನಾಡಿ. ಕೃಷ್ಣಾ ನೀರಾವರಿ ಯೋಜನೆ ಪ್ರಮುಖ ಜಲಾಶಯ. ಮಹಾರಾಷ್ಟ್ರ, ಬೆಳಗಾವಿ ಭಾಗದಲ್ಲಿ ಹೆಚ್ಚು ಮಳೆಯಾಗಿದ್ದು, ಜಲಾಶಯಕ್ಕೆ ಅಪಾರ ನೀರು ಹರಿದುಬರುತ್ತಿದೆ. ಜಲಾಶಯದ ಗೇಟ್‌ಗಳನ್ನು ತೆರೆಯಲಾಗಿದೆ. ​​​​​​​​​516 ಮೀಟರ್‌ನಷ್ಟು ನೀರಿದ್ದು, 84 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಈ ವೇಳೆಗೆ 80 ಟಿಎಂಸಿ ನೀರಿತ್ತು.

​ಘಟಪ್ರಭಾ ಜಲಾಶಯ: ಘಟಪ್ರಭಾ ನದಿಗೆ ಗೋಕಾಕ ತಾಲೂಕಿನ ಧೂಪದಾಳ ಗ್ರಾಮದ ಹತ್ತಿರ ಈ ಡ್ಯಾಂ ನಿರ್ಮಿಸಲಾಗಿದೆ. ಈ ಜಲಾಶಯದಲ್ಲಿ 661 ಮೀಟರ್‌ ನೀರಿದ್ದು, 46.5 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದಿಂದ ನದಿಗೆ ನೀರು ಬಿಡುಗಡೆ ಮಾಡಲಾಗಿದೆ.

ಎಚ್ಚೆತ್ತುಕೊಳ್ಳದ ಸರ್ಕಾರ

‘ಪ್ರತಿ ಬಾರಿ ಮಳೆ ಸುರಿದಾಗಲೂ ಮನೆಗಳಿಗೆ ನೀರು ನುಗ್ಗಿ ಜನರ ಪ್ರಾಣ ಹಾಗೂ ಆಸ್ತಿಪಾಸ್ತಿಗೆ ಹಾನಿಯಾಗುತ್ತದೆ, ಗುಡ್ಡ ಕುಸಿಯುತ್ತವೆ, ರಸ್ತೆ ಸಂಚಾರ ಬಂದಾಗುತ್ತದೆ,ನದಿಗಳು ತುಂಬಿ ನದಿಪಾತ್ರದ ಜನರಿಗೆ ಸಂಕಷ್ಟ ಬರುತ್ತದೆ ಎಂದ ಅಂಶಗಳು ಸರ್ಕಾರಕ್ಕೆ ಗೊತ್ತಿರುತ್ತದೆ. ಆದರೆ ಮುನ್ನೆಚ್ಚರಿಕಾ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಲುತ್ತಿಲ್ಲ ಎಂಬ ಆರೋಪಗಳು ಪದೇ ಪದೇ ಕೇಳಿ ಬರುತ್ತಿವೆ.

 

 

Donate Janashakthi Media

Leave a Reply

Your email address will not be published. Required fields are marked *