ಕಾರ್ಮಿಕ ಚಳುವಳಿಯು ರೈತ ಚಳುವಳಿಯೊಂದಿಗಿನ ಸಖ್ಯದೊಂದಿಗೆ ಮುನ್ನಡೆಯುತ್ತದೆ…
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) 17ನೇ ಅಖಿಲ ಭಾರತ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಸಿಐಟಿಯು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಅವರು ಮಾತನಾಡಿದರು.
ಸಿಐಟಿಯು 17ನೇ ಅಖಿಲ ಭಾರತ ಸಮ್ಮೇಳನ ಬೆಂಗಳೂರಿನ ಅರಮನೆ ಮೈದಾನ (ಗಾಯತ್ರಿ ವಿಹಾರ)ದ ರಂಜನ ನಿರುಲಾ ಮತ್ತು ರಘುನಾಥ್ ಸಿಂಗ್ ವೇದಿಕೆ – ಶ್ಯಾಮಲ್ ಚಕ್ರವರ್ತಿ ನಗರದಲ್ಲಿ ನಡೆಯುತ್ತಿದೆ. ಸಮ್ಮೇಳನದ ಮೊದಲ ದಿನದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.
ತಪನ್ ಸೇನ್ ಮಾತನಾಡಿ, ದೇಶದ ಆಳುವ ಸರಕಾರಗಳು ನವ ಉದಾರವಾದಿ ನೀತಿಗಳ ಏಜೆಂಟರಂತೆ, ಕಾರ್ಪೋರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿರುವುದರಿಂದ ಜನಗಳು ದಿವಾಳಿ ಆಗುತ್ತಿದ್ದಾರೆ. ದೇಶದ ಮುಖ್ಯ ವಾಹಿನಿ ಮಾಧ್ಯಮಗಳ ದೊಡ್ಡ ವಿಭಾಗವೂ ಇದಕ್ಕೆ ಬೆಂಬಲ ನೀಡುತ್ತಿದೆ. ಇಂತಹ ವಿಷಕಾರಿ ನೀತಿಗಳ ಪರಿಣಾಮಗಳ ವಿರುದ್ಧ, ಸರ್ವಾಧಿಕಾರಿ ರೀತಿಯಲ್ಲಿ ನಡೆದುಕೊಳ್ಳುತ್ತಾ, ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿರುವ ಸರಕಾರದ ನೀತಿಗಳು ಜಾರಿಗೊಳ್ಳುತ್ತಿವೆ ಎಂದು ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು, ಆಳುವ ಸರ್ಕಾರವು ಜನರ ಒಗ್ಗಟ್ಟನ್ನು ಮುರಿಯುವ ವಿಭಜನಕಾರಿ ನೀತಿಗಳನ್ನು ಹೇರುತ್ತಾ ಸಮಾಜದ ಸಾಮಾಜಿಕ ಸಾಮರಸ್ಯವನ್ನು ಹಾಳುಗೆಡಹುತ್ತಿದೆ. ದೇಶದ ಹಿತಾಸಕ್ತಿಗೆ ಮತ್ತು ದುಡಿಯುವ ವರ್ಗದ ಹಿತಗಳಿಗೆ ವಿರುದ್ಧವಾಗಿ ಇಂತಹ ಕ್ರಿಮಿನಲ್ ದಾಳಿಗಳನ್ನು ನಡೆಸುತ್ತಿರುವ ಸರಕಾರವನ್ನು ರೈತ-ಕಾರ್ಮಿಕ ಚಳುವಳಿಯ ಸಖ್ಯತೆಯೊಂದಿಗೆ ಅಧಿಕಾರದಿಂದ ಕಿತ್ತೆಸೆಯಲಾಗುವುದು ಎಂದು ತಿಳಿಸಿದ ತಪನ್ ಸೇನ್, ಈ ನಿಟ್ಟಿನಲ್ಲಿ ಕಾರ್ಮಿಕ ಹೋರಾಟಗಳನ್ನು ಬಲಪಡಿಸುವ ಕುರಿತು ಸಿಐಟಿಯು ಸಂಘಟನೆಯ 17 ನೇ ಅಖಿಲ ಭಾರತ ಸಮ್ಮೇಳನವು ಗಂಭೀರವಾಗಿ ಚರ್ಚಿಸಲಿದೆ ಎಂದೂ ಹೇಳಿದರು.
ದೇಶದ ಹತ್ತು ಕೇಂದ್ರ ಕಾರ್ಮಿಕ ಸಂಘಟನೆಗಳ ಒಕ್ಕೂಟವು ಒಂದುಗೂಡಿ ಕಾರ್ಮಿಕರ ಹಕ್ಕುಗಳು, ರೈತರ ಹಕ್ಕುಗಳು ಮಾತ್ರವಲ್ಲ. ದೇಶದ ರಕ್ಷಣೆಗಾಗಿ ದೇಶವಿರೋಧಿ ಕುತಂತ್ರಗಳ ವಿರುದ್ಧ ಹೋರಾಟ ರೂಪಿಸಲಿವೆ. ಇತ್ತೀಚಿನ ಎರಡು ದಿನಗಳ ದೇಶವ್ಯಾಪಿ ಯಶಸ್ವಿ ಮುಷ್ಕರ ಈ ಹೋರಾಟದ ಭಾಗವಾಗಿದೆ. ನಾಲ್ಕು ವರ್ಷಗಳ ಹೋರಾಟದ ಅನುಭವವು – ವಿದ್ಯುತ್ – ಕಲ್ಲಿದ್ದಲು ಮುಂತಾದ ಕ್ಷೇತ್ರದಲ್ಲಿ ಸರಕಾರದ ಧೋರಣೆಗಳನ್ನು ಹಿಮ್ಮೆಟ್ಟಿಸಲು ಸಾಧ್ಯ ಹಾಗೂ ಯಾವುದೇ ರಂಗದಲ್ಲೇ ಇರಲಿ ಹಿಮ್ಮೆಟ್ಟಿಸಲು ಸಾಧ್ಯ ಎಂದು ತೋರಿಸಿಕೊಟ್ಟಿದೆ. ನವ ಉದಾರೀಕರಣ ನೀತಿಗಳ ಸವಾಲು ಕೇವಲ ಕಾರ್ಮಿಕ ವರ್ಗಕ್ಕೆ ಮಾತ್ರ ಸೀಮಿತವಲ್ಲ. ಇದು ಇಡೀ ಮನುಕುಲದ ಮುಂದಿನ ಸವಾಲು. ಪ್ರಜಾಸತ್ತಾತ್ಮಕ ಸಮಾಜಕ್ಕೆ ಮಾರಕ. ಕೆಲವು ಸ್ವದೇಶಿ ಮತ್ತು ವಿದೇಶಿ ಕಾರ್ಪೋರೇಟ್ ಹಿತರಕ್ಷಣೆಗಾಗಿ, ವಿಶಾಲ ಜನ ಸಮುದಾಯಗಳ ಜನರ ಹಿತ ಬಲಿ ಕೊಡಲಾಗುತ್ತಿದೆ. ದೇಶದ ಕಾರ್ಮಿಕ ಚಳುವಳಿಯ ಸರಕಾರವು ದೇಶವನ್ನು ಮಾರಲು ಅವಕಾಶ ನೀಡಲಾಗದು ಎಂದು ತಪನ್ ಸೇನ್ ಹೇಳಿದರು.
ಉದ್ಘಾಟನಾ ಸಮಾರಂಭದ ಸಭೆಯ ಸಿ.ಐ.ಟಿ.ಯು. ಅಖಿಲ ಭಾರತ ಅಧ್ಯಕ್ಷೆ ಡಾ. ಕೆ. ಹೇಮಲತಾ ಮಾತನಾಡಿ, ಭಾರತದಲ್ಲಿ ಹೆಚ್ಚುತ್ತಿರುವ ಅಸಮಾನತೆ, ಸಂಪತ್ತಿನ ಕೇಂದ್ರೀಕರಣ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಕಾರ್ಮಿಕ ವರ್ಗದ ಐಕ್ಯ ಹೋರಾಟವನ್ನು ಬಲಗೊಳಿಸಲಾಗುವುದು ಎಂದು ಹೇಳಿದರು.
ಸಮ್ಮೇಳನದ ಉದ್ಘಾಟನಾ ಭಾಷಣದ ಆರಂಭಕ್ಕೂ ಮುನ್ನ ಕೆಂಪು ಸ್ವಯಂ ಸೇವಕರ ಪಥ ಸಂಚಲನ ನಡೆಯಿತು ಹಾಗೂ ಸಿಐಟಿಯು ಅಖಿಲ ಭಾರತ ಅಧ್ಯಕ್ಷೆ ಡಾ. ಕೆ. ಹೇಮಲತಾ ಅವರು ಧ್ವಜಾರೋಹಣ ಮಾಡುವ ಮೂಲಕ ಸಮ್ಮೇಳನಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ಸಿಐಟಿಯು 17ನೇ ಅಖಿಲ ಭಾರತ ಸಮ್ಮೇಳನದ ಸ್ವಾಗತ ಭಾಷಣವನ್ನು ಕೆ. ಸುಬ್ಬರಾವ್ ಅವರು ಮಾಡಿಕೊಟ್ಟರು. ಕಾರ್ಯಕ್ರಮದ ಭಾಗವಾಗಿ ಅಖಿಲ ಭಾರತ ವಿಮಾ ನೌಕರರ ಸಂಘಟನೆಯ ಸಂಗಾತಿಗಳು ಕ್ರಾಂತಿಕಾರಿ ಗೀತೆಗಳನ್ನು ಪ್ರಸ್ತುತಪಡಿಸಿದರು. ಈ ವೇಳೆ ಎಚ್ ಜನಾರ್ದನ್(ಜನ್ನಿ) ಹಾಗೂ ಚಿಂತನ್ ವಿಕಾಸ್ ಸಾಥ್ ನೀಡಿದರು.