ನವದೆಹಲಿ: ದೇಶದ ಜನತೆ ಹಾಗೂ ವಿರೋಧ ಪಕ್ಷಗಳ ತೀವ್ರತರ ಒತ್ತಡಕ್ಕೆ ಮಣಿದಿರುವ ಕೇಂದ್ರದ ಬಿಜೆಪಿ ಸರ್ಕಾರವು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರಿಗೆ ₹10, ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರಿಗೆ ₹5ರಂತೆ ಕಡಿಮೆಗೊಳಿಸಿದೆ. ಕೇಂದ್ರದ ತೀರ್ಮಾನದ ನಂತರ ಕರ್ನಾಟಕ ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಲೀಟರಿಗೆ ತಲಾ ₹7 ರಷ್ಟು ಕಡಿತಗೊಳಿಸಲು ತೀರ್ಮಾನ ಮಾಡಿದೆ.
ಕೇಂದ್ರ ಸರ್ಕಾರದ ತೀರ್ಮಾನವು ನೆನ್ನೆ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದ್ದು, ರಾಜ್ಯ ಸರ್ಕಾರದ ತೀರ್ಮಾನವು ಇಂದು ಮಧ್ಯರಾತ್ರಿಯಿಂದ ಜಾರಿಗೊಳ್ಳಲಿದೆ. ʻರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸುಂಕ ಕಡಿತದಿಂದಾಗಿ ‘ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರಿಗೆ ಅಂದಾಜು ₹95.50 ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರಿಗೆ ಅಂದಾಜು ₹ 81.50 ಆಗುವ ನಿರೀಕ್ಷೆ ಇದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇದನ್ನು ಓದಿ: ಪೆಟ್ರೋಲ್, ಡಿಸೇಲ್ ದರ ಹೆಚ್ಚಳಕ್ಕೆ ತೆರಿಗೆ ದರ ಕಾರಣವೇ?
ಮೇ 4ರಿಂದ ಇಂದಿನ ದಿನದವರೆಗೆ ಪೆಟ್ರೋಲ್ ಒಟ್ಟು 56 ಬಾರಿ ಹಾಗೂ ಡೀಸೆಲ್ 51 ಬಾರಿ ಏರಿಕೆಯಾಗಿದೆ. ಮೇ 4ರಿಂದ ಪೆಟ್ರೋಲ್ ₹13 ಪ್ರತಿ ಲೀಟರ್ ಹಾಗೂ ಡೀಸೆಲ್ ₹11 ಪ್ರತಿ ಲೀಟರ್ ದರ ಏರಿಕೆ ಕಂಡಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸರ್ಕಾರಗಳು ಕೈಗೊಂಡಿರುವ ಈ ನಿರ್ಧಾರವು ಹಣದುಬ್ಬರದ ಬಿಸಿ ಅನುಭವಿಸುತ್ತಿರುವ ಜನಸಾಮಾನ್ಯರಿಗೆ ತುಸು ಸಮಾಧಾನ ನೀಡಲಿದೆ.
‘ಬುಧವಾರ ರಾತ್ರಿ ಕೇಂದ್ರ ಹಣಕಾಸು ಸಚಿವಾಲಯವು ಪ್ರಕಟಣೆ ಹೊರಡಿಸಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ತಗ್ಗಿಸುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದಿದೆ. ರಾಜ್ಯಗಳು ಸಹ ತಮ್ಮ ಮೌಲ್ಯವರ್ಧಿತ ತೆರಿಗೆ ಪ್ರಮಾಣವನ್ನು ತಗ್ಗಿಸಬೇಕು ಎಂದು ಅದು ಸಲಹೆ ನೀಡಿತ್ತು.
ಕೇಂದ್ರ ಸರ್ಕಾರದ ತೀರ್ಮಾನದ ನಂತರದ ಕೆಲವೇ ಹೊತ್ತಿನಲ್ಲಿ ಟ್ವೀಟ್ ಮಾಡಿದ ಬೊಮ್ಮಾಯಿ ಅವರು, ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದರು.
ಇದನ್ನು ಓದಿ: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ವಿರುದ್ಧ ಕೇರಳದಲ್ಲಿ ಸಿಪಿಐ(ಎಂ) ವಿವಿದೆಡೆ ಪ್ರತಿಭಟನೆ
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಹೆಚ್ಚಳವಾಗುತ್ತಿದೆ ಎಂದು ಕಳೆದ ಕೆಲವು ದಿನಗಳಿಂದ ಸತತವಾಗಿ ಪ್ರತಿದಿನವೂ ದರ ಏರಿಕೆಯಲ್ಲಿಯೇ ಕಂಡಿದ್ದರಿಂದ ಜನರು ತೀವ್ರತರವಾಗಿ ಆಕ್ರೋಶಗೊಂಡಿದ್ದರು. ಅದರಲ್ಲೂ ದೇಶದ ಬಹುತೇಕ ಭಾಗಗಳಲ್ಲಿ ಪೆಟ್ರೋಲ್ ಬೆಲೆಯು ದೇಶದ ಬಹುತೇಕ ಕಡೆಗಳಲ್ಲಿ ಲೀಟರಿಗೆ ₹100ರ ದಾಟಿದೆ. ಡೀಸೆಲ್ ಬೆಲೆ ಕೂಡ ಹಲವು ಕಡೆಗಳಲ್ಲಿ ₹100ಕ್ಕಿಂತ ಹೆಚ್ಚಾಗಿದ್ದರಿಂದ ಜನತೆ ಸರ್ಕಾರಗಳ ವಿರುದ್ಧ ಆಕ್ರೋಶಗೊಂಡಿದ್ದರು.
ಕಳೆದ 2020ರ ಮಾರ್ಚ್–ಮೇ ನಡುವೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ ₹13 ಹಾಗೂ ₹ 16ರಷ್ಟು ಏರಿಸಲಾಗಿತ್ತು. ಈ ಏರಿಕೆಯ ನಂತರ ಪೆಟ್ರೋಲ್ ಮೇಲಿನ ಕೇಂದ್ರದ ತೆರಿಗೆಗಳು ಲೀಟರಿಗೆ ₹ 32.9ಕ್ಕೆ ಹಾಗೂ ಡೀಸೆಲ್ ಮೇಲಿನ ಕೇಂದ್ರದ ತೆರಿಗೆಗಳು ಲೀಟರಿಗೆ ₹ 31.8ಕ್ಕೆ ತಲುಪಿದ್ದವು.
ಇದನ್ನು ಓದಿ: ಪೆಟ್ರೋಲ್ ಬೆಲೆ ಏರಿಕೆ ಐತಿಹಾಸಿಕ ಶೋಷಣೆ: ಸುಬ್ರಮಣಿಯನ್ ಸ್ವಾಮಿ
2020ರ ಮೇ 5ರ ನಂತರ ಸರ್ಕಾರದ ತೆರಿಗೆ ಏರಿಕೆಗಳ ನಿರ್ಧಾರದ ವಿರುದ್ಧ ಕೇಂದ್ರವು ಅಬಕಾರಿ ಸುಂಕವನ್ನು ತಗ್ಗಿಸಬೇಕು ಎಂದು ಕಾಂಗ್ರೆಸ್, ಎಡಪಕ್ಷಗಳು, ವಿವಿಧ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಒಳಗೊಂಡು ಎಲ್ಲಾ ವಿರೋಧ ಪಕ್ಷಗಳು ಒತ್ತಾಯಿಸಿದ್ದವು.
ಕಚ್ಚಾತೈಲ ಬೆಲೆ ನಿರ್ಧಾರ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನವೆಂಬರ್ 04ರಂದು ಕಚ್ಚಾತೈಲ ಬೆಲೆ ಕೊಂಚ ಇಳಿಕೆ ಕಂಡು 81.38 ಯುಎಸ್ ಡಾಲರ್(1 ಯುಎಸ್‌ಡಿ= ₹74.35) ಪ್ರತಿ ಬ್ಯಾರೆಲ್‌ನಷ್ಟಿದೆ. ಕಚ್ಚಾ ತೈಲ ಬೆಲೆ ಫೆಬ್ರವರಿಯಲ್ಲಿ 61.22 ಡಾಲರ್, ಮಾರ್ಚ್ ತಿಂಗಳಲ್ಲಿ 64.73 ಡಾಲರ್, ಏಪ್ರಿಲ್ ತಿಂಗಳಲ್ಲಿ 66 ಡಾಲರ್ ಹಾಗೂ ಮೇ ತಿಂಗಳಲ್ಲಿ ಸರಾಸರಿ 68 ಡಾಲರ್ ನಷ್ಟಿತ್ತು. ನಂತರ ಸರಾಸರಿ 80-85 ಪ್ಲಸ್ ಡಾಲರ್‌ನಂತೆ ಮುಂದುವರೆದಿತ್ತು. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98 ರೂ ಹಾಗೂ ಡೀಸೆಲ್ ಮೇಲೆ 31.80 ರೂ ನಷ್ಟಿದೆ.
ಯಾವ ರಾಜ್ಯದಲ್ಲಿ ಎಷ್ಟು ಇಳಿಕೆ?
ಕರ್ನಾಟಕ: ರಾಜ್ಯದ ತೆರಿಗೆ ಕಡಿತ ಗುರುವಾರ ಸಂಜೆಯಿಂದಲೇ ಅನ್ವಯವಾಗಲಿದೆ. ಇದರಿಂದ ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹ 95.50 ಮತ್ತು ಪ್ರತಿ ಲೀಟರ್ ಡೀಸೆಲ್ ದರ ₹ 81.50ಗೆ ಇಳಿಕೆಯಾಗುವ ನಿರೀಕ್ಷೆ ಇದೆ. ಅಂದರೆ, ರಾಜ್ಯದಲ್ಲಿ ಪೆಟ್ರೋಲ್ 12 ರೂಪಾಯಿ ಮತ್ತು ಡೀಸೆಲ್ 17 ರೂಪಾಯಿ ಇಳಿಕೆಯಾಗಲಿದೆ.
ಉತ್ತರಾಖಂಡ ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ತೆರಿಗೆಯನ್ನು 2 ರೂಪಾಯಿ ಕಡಿತಗೊಳಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ ಪೆಟ್ರೋಲ್ ದರ ಲೀಟರ್‌ಗೆ ಒಟ್ಟು 7 ರೂಪಾಯಿ ಕಡಿಮೆಯಾಗಲಿದೆ.
ಅಸ್ಸಾಂ ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್‌ಗೆ ತಲಾ ₹7 ಇಳಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಪೆಟ್ರೋಲ್ ದರದಲ್ಲಿ ಒಟ್ಟು 12 ರೂಪಾಯಿ ಮತ್ತು ಡೀಸೆಲ್ 17 ರೂಪಾಯಿ ಕಡಿಮೆಯಾಗಲಿದೆ.
ಗೋವಾ ಸರ್ಕಾರವು ಪೆಟ್ರೋಲ್, ಡೀಸೆಲ್ ಎರಡರ ಮೇಲಿನ ತೆರಿಗೆಯನ್ನು 7 ರೂಪಾಯಿ ಕಡಿಮೆ ಮಾಡುವುದಾಗಿ ಪ್ರಕಟಿಸಿದ್ದಾರೆ.
ತ್ರಿಪುರಾ ರಾಜ್ಯ ಸರ್ಕಾರವು ಪೆಟ್ರೋಲ್ ₹12 ಮತ್ತು ಡೀಸೆಲ್ ₹17ರಷ್ಟು ಕಡಿಮೆಯಾಗಲಿದೆ ಎಂದು ತ್ರಿಪುರಾ ಸರ್ಕಾರ ಪ್ರಕಟಿಸಿದೆ. ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತಲಾ ₹7 ಇಳಿಕೆ ಮಾಡಿದೆ.
ಉತ್ತರ ಪ್ರದೇಶ ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ತೆರಿಗೆಯನ್ನು 7 ರೂಪಾಯಿ ಮತ್ತು ಡೀಸೆಲ್ ಮೇಲಿನ ತೆರಿಗೆ 2 ರೂಪಾಯಿ ಇಳಿಸಲು ನಿರ್ಧರಿಸಿದೆ. ಈ ಮೂಲಕ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರ ತಲಾ ₹12ರಷ್ಟು ಕಡಿತವಾಗಲಿದೆ.
ಗುಜರಾತ್ ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ತೆರಿಗೆಯಲ್ಲಿ 7 ರೂಪಾಯಿ ತೆರಿಗೆ ಇಳಿಕೆ ಮಾಡುತ್ತಿರುವುದಾಗಿ ಪ್ರಕಟಿಸಿದೆ.
ಮಣಿಪುರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ತಕ್ಷಣದಿಂದಲೇ (ಬುಧವಾರ ರಾತ್ರಿ) ಅನ್ವಯವಾಗುವಂತೆ 7 ರೂಪಾಯಿ ಕಡಿತಗೊಳಿಸಿದೆ.
ಸಿಕ್ಕಿಂ ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಲೀಟರ್‌ಗೆ 7 ರೂಪಾಯಿಯಷ್ಟು ಕಡಿಮೆ ಮಾಡುತ್ತಿರುವುದಾಗಿ ಪ್ರಕಟಿಸಿದ್ದಾರೆ. ಈ ಮೂಲಕ ಪ್ರತಿ ಲೀಟರ್ ಪೆಟ್ರೋಲ್ ₹12 ಮತ್ತು ಡೀಸೆಲ್ ₹17 ರೂಪಾಯಿ ಕಡಿಮೆಯಾಗಲಿದೆ.