ಜನಮತ 2023 : ಹಲವು ಪಕ್ಷಗಳ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಬೆಂಗಳೂರು : ಪ್ರಸಕ್ತ ರಾಜ್ಯ ವಿಧಾನಸಭಾ ಚುನಾವಣೆಯ ಅಧಿಸೂಚನೆಯಂತೆ ಪ್ರಕಟವಾಗಿರುವ ವೇಳಾಪಟ್ಟಿಯಂತೆ ರಾಜ್ಯದ 224 ವಿಧಾಸಭಾ ಕ್ಷೇತ್ರಗಳಿಂದ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸುತ್ತಿದ್ದು. 16ನೇ ವಿಧಾನಸಭೆ ಚುನಾವಣೆಗೆ ಏ.20ರವರೆಗೂ ನಾಮಪತ್ರ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.

ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಚುನಾವಣಾ ಸ್ಪರ್ಧಾಕಾಂಕ್ಷಿಗಳು ನಾಮಪತ್ರ ಸಲ್ಲಿಸಲು ತಯಾರಿ ನಡೆಸಿದ್ದಾರೆ. ವಿವಿಧ ರಾಜಕೀಯ ಪಕ್ಷಗಳಿಂದ ಘೋಷಣೆಯಾಗಿರುವ ಅಭ್ಯರ್ಥಿಗಳು ಪ್ರಶಸ್ತವಾದ ದಿನಾಂಕ, ಸಮಯದಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಪೈಪೋಟಿಗಿಳಿದು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರೂ ಈತನಕ ಪೂರ್ಣ ಪ್ರಮಾಣದಲ್ಲಿ ಅಭ್ಯರ್ಥಿಗಳ ಆಯ್ಕೆಮಾಡಿಕೊಂಡಿದ್ದು ಕೆಲವು ಪಕ್ಷಗಳು ಮಾತ್ರ ಅಭ್ಯರ್ಥಿಗಳ ಪಟ್ಟಿಯನ್ನು ಉಳಿಸಿಕೊಂಡಿವೆ.

ಇಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು :

ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ : ಕಾಂಗ್ರೆಸ್‌ ಪಕ್ಷ – ಉಡುಪಿ

ಪ್ರಸಾದ್ ರಾಜ್ ಕಾಂಚನ್ ರವರು ಕಾಂಗ್ರೆಸ್ ಭವನದ ಮುಂಭಾಗದಲ್ಲಿ ಸಭೆ ನಡೆಸಿ ಅನಂತರ ಅಲ್ಲಿಂದ ಪಾದಯಾತ್ರೆಯಲ್ಲಿ ಬಂದು ಬೆಳಗ್ಗೆ 11.15ಕ್ಕೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಅವರ ತಾಯಿ ಸರಳಾ ಕಾಂಚನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಕಾಂಚನ್, ಕಾಪು ಅಭ್ಯರ್ಥಿ ವಿನಯ ಕುಮಾರ್ ಸೊರಕೆ, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನಕರ ಹೇರೂರು ಇದ್ದರು.


ಎಂಟಿಬಿ ನಾಗರಾಜ್ : ಬಿಜೆಪಿ ಪಕ್ಷ – ಹೊಸಕೋಟೆ

ಹೊಸಕೋಟೆ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಎಂಟಿಬಿ ನಾಗರಾಜ್ ನಾಮಪತ್ರ ಸಲ್ಲಿಸಿದ್ದಾರೆ. ಹೊಸಕೋಟೆ ನಗರದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ರ್‍ಯಾಲಿ ನಡೆಸಿ ತಾಲೂಕು ಕಛೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು.


ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ : ಕಾಂಗ್ರೆಸ್‌ ಪಕ್ಷ – ಕನಕಪುರ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಸೋಮವಾರ ಕನಕಪುರ ವಿಧಾನಸಭಾ ಕ್ಷೇತ್ರದಿಂದ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ.ನಾಮಪತ್ರ ಸಲ್ಲಿಕೆಗೂ ಮುನ್ನ ಕೆಂಕೇರಮ್ಮ ದೇವಸ್ಥಾನದಲ್ಲಿ ಕುಟುಂಬಸ್ಥರು ಹಾಗೂ ಮುಖಂಡರೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ಡಿ.ಕೆ.ಶಿವಕುಮಾರ್​ ನಂತರ ಬೃಹತ್​ ಬೈಕ್​ ರ್‍ಯಾಲಿ ಹಾಗೂ ರೋಡ್​ಶೋ ನಡೆಸಿ  ಅಪಾರ ಜನಸ್ತೋಮದ ನಡುವೆ ನಾಮಪತ್ರ ಸಲ್ಲಿಸಿದರು.


ರೂಪಾಲಿ ನಾಯ್ಕ :  ಬಿಜೆಪಿ ಪಕ್ಷ – ಅಂಕೋಲಾ

 

ಅಂಕೋಲಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಶಾಸಕಿ ರೂಪಾಲಿ ನಾಯ್ಕ ಸೋಮವಾರ ನಾಮಪತ್ರ ಸಲ್ಲಿಸಿದರು. ಈ ವೇಳೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಪಾಲ್ಗೊಂಡರು. ಇಲ್ಲಿನ ಮಾಲಾದೇವಿ ಮೈದಾನದಲ್ಲಿರುವ ಮಾಲಾದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು‌. ಎರಡು ತಾಲ್ಲೂಕುಗಳಿಂದ ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.


ಆರ್. ಅಶೋಕ್ : ಬಿಜೆಪಿ ಪಕ್ಷ – ಪದ್ಮನಾಭನಗರ

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಆರ್. ಅಶೋಕ್ (R Ashok) ನಾಮಪತ್ರ ಸಲ್ಲಿಕೆ ಮಾಡಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಅದಾದ ಬಳಿಕ ದೇವೇಗೌಡ ಪೆಟ್ರೋಲ್ ಬಂಕ್‍ನಿಂದ ಕಿಮ್ಸ್ ಕಾಲೇಜಿನವರೆಗೂ ಮೆರವಣಿಗೆ ಮೂಲಕ ಹೊರಟು ಬನಶಂಕರಿ ಎರಡನೇ ಹಂತದಲ್ಲಿ ಇರುವ ಆರ್‍ಓ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಯ ವೇಳೆ ಸಂಸದ ತೇಜಸ್ವಿ ಸೂರ್ಯ ಸಾಥ್ ನೀಡಿದರು. ಈ ವೇಳೆ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.


ಅಶ್ವಥ್ ನಾರಾಯಣ್ : ಬಿಜೆಪಿ ಪಕ್ಷ – ಮಲ್ಲೇಶ್ವರಂ

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಡಾ. ಸಿ.ಎನ್ ಅಶ್ವಥ್ ನಾರಾಯಣ್‌ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಿದರು. ಸರ್ಕಲ್ ಮಾರಮ್ಮ ದೇಗುಲದಿಂದ ಭರ್ಜರಿ ಮೆರವಣಿಗೆ ಮೂಲಕ ಸಾಗಿ ನಾಮಪತ್ರ ಸಲ್ಲಿಸಿದರು. ಇನ್ನು ನಾಮಪತ್ರ ಸಲ್ಲಿಕೆಗೂ ಮುನ್ನ ಮಲ್ಲೇಶ್ವರಂನ ಹಲವು ದೇಗುಲಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಜೊತೆಗೆ ಮನೆಯಲ್ಲಿಯೂ ವಿಶೇಷ ಹೋಮ ನಡೆಸಲಾಯಿತು.


ಹೆಚ್‍.ಡಿ ಕುಮಾರಸ್ವಾಮಿ : ಜೆಡಿಎಸ್ ಪಕ್ಷ  – ಚನ್ನಪಟ್ಟಣ

ಹೆಚ್‍.ಡಿ ಕುಮಾರಸ್ವಾಮಿ: ಚನ್ನಪಟ್ಟಣದ ಜೆಡಿಎಸ್ ಅಭ್ಯರ್ಥಿಯಾದ ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಅವರು ಜೆಡಿಎಸ್ ಕಾರ್ಯಕರ್ತರೊಂದಿಗೆ ಬಂದು ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಹಳೇ ಮೈಸೂರು-ಬೆಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕಂಡು ಬಂತು. ತಾಲೂಕು ಕಚೇರಿಗೆ ಆಗಮಿಸಿ ಬೆಂಬಲಿಗರೊಡನೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಚುನಾವಣಾಧಿಕಾರಿಗಳ ಕಾರ್ಯಾಲಯಕ್ಕೆ ಕೇವಲ 5 ಜನಕ್ಕೆ ಮಾತ್ರ ಅವಕಾಶ ನೀಡಲಾಯಿತು.


ವಿಜಯೇಂದ್ರ – ಬಿಜೆಪಿ ಪಕ್ಷ – ಶಿಕಾರಿಪುರ


ಶಿಕಾರಿಪುರ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಅವರು ದಿಢೀರಾಗಿ ಇಂದೇ ನಾಮಪತ್ರ ಸಲ್ಲಿಸಿದರು. ಶಿಕಾರಿಪುರದ ತಹಶೀಲ್ದಾರ್ ಕಚೇರಿಯಲ್ಲಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದರು. ಈ ಮೊದಲು 19ರಂದು ನಾಮಪತ್ರ ಸಲ್ಲಿಕೆಗೆ ನಿಗದಿಯಾಗಿತ್ತು. ಆದರೆ ಇಂದು ಸಾಂಕೇತಿಕವಾಗಿ ದಿಢೀರ್ ನಾಮಪತ್ರ ಸಲ್ಲಿಸಿದ್ದು, ಏ. 19ರಂದು ಮತ್ತೊಮ್ಮೆ ಬೃಹತ್ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಲಿದ್ದಾರೆ.


ನಿಖಿಲ್ ಕುಮಾರಸ್ವಾಮಿ : ಜೆಡಿಎಸ್‌ ಪಕ್ಷ – ರಾಮನಗರ

ರಾಮನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ತಾಲೂಕು ಕಚೇರಿಗೆ ತಾಯಿ ಅನಿತಾ ಕುಮಾರಸ್ವಾಮಿ ಜೊತೆ ಬಂದು ನಾಮಪತ್ರ ಸಲ್ಲಿಸಿದರು. ಇನ್ನೂ ನಿಖಿಲ್ ನಾಮಪತ್ರ ಸಲ್ಲಿಕೆ ಹಿನ್ನೆಲೆ ಮಾಜಿ ಸಿಎಂ ಹೆಚ್‍ಡಿಕೆ ರೋಡ್ ಶೋ ನಡೆಸಿದರು.


ಭಾಸ್ಕರ್ ರಾವ್ : ಬಿಜೆಪಿ ಪಕ್ಷ – ಚಾಮರಾಜಪೇಟೆ

ಚಾಮರಾಜಪೇಟೆ ಕ್ಷೇತ್ರದಿಂದ ಬಿಜೆಪಿಯಿಂದ ಭಾಸ್ಕರ್ ರಾವ್ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಲಹರಿ ವೇಲು ಉಪಸ್ಥಿತರಿದ್ದರು.


ಹೆಚ್.ಡಿ. ರೇವಣ್ಣ : ಜೆಡಿಎಸ್‌ ಪಕ್ಷ – ಹೊಳೆನರಸೀಪುರ


ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ನಾಮಪತ್ರ ಸಲ್ಲಿಸಿದರು. ಕುಟುಂಬ ಸಮೇತರಾಗಿ ಹೊಳೆನರಸೀಪುರದ ತಾಲೂಕು ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ವೇಳೆ ರೇವಣ್ಣಗೆ ಪತ್ನಿ ಭವಾನಿ, ಪುತ್ರರಾದ ಸೂರಜ್, ಪ್ರಜ್ವಲ್ ರೇವಣ್ಣ ಸಾಥ್ ನೀಡಿದರು. ಹೊಳೆನರಸೀಪುರ ಕ್ಷೇತ್ರದಲ್ಲಿ ಏಳನೇ ಬಾರಿ ನಾಮಪತ್ರ ಸಲ್ಲಿಸಿದರು. ಐದು ಬಾರಿ ಹೊಳೆನರಸೀಪುರದಿಂದ ಶಾಸಕರಾಗಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮೊದಲು ಹೊಳೆನರಸೀಪುರದಲ್ಲಿರುವ ಶ್ರೀಲಕ್ಷ್ಮಿ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಪೂಜೆ ಬಳಿಕ ದೇವಾಲಯದ ಆವರಣದಿಂದ ಹೊಳೆನರಸೀಪುರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ರೋಡ್ ಶೋ ನಡೆಸಿದರು.

ದರ್ಶನ್ ಧ್ರುವನಾರಾಯಣ್ : ಕಾಂಗ್ರೆಸ್‌ ಪಕ್ಷ – ನಂಜನಗೂಡು

ನಂಜನಗೂಡಿನ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಅವರು ಇಂದು ತಮ್ಮ ನಾಮಪತ್ರವನ್ನ ಸಲ್ಲಿಕೆ ಮಾಡಿದರು.

ನಗರದ ಚಿಂತಾಮಣಿ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಬೃಹತ್ ಮೆರವಣಿಗೆಯ ಮೂಲಕ ಮಿನಿ ವಿಧಾನಸೌಧಕ್ಕೆ ತಲುಪಿ ಚುನಾವಣಾಧಿಕಾರಿಗಳಿಗೆ ದರ್ಶನ್ ಧ್ರುವನಾರಾಯಣ್ ಅವರು ತಮ್ಮ ನಾಮಪತ್ರವನ್ನ ಸಲ್ಲಿಸಿದರು.


ಸಿ ಎಸ್‌ ನಿರಂಜನ್‌ ಕುಮಾರ್‌ : ಬಿಜೆಪಿ ಪಕ್ಷ – ಗುಂಡ್ಲುಪೇಟೆ

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ ಎಸ್‌ ನಿರಂಜನ್‌ ಕುಮಾರ್‌ ರವರು ಇಂದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಜೊತೆಗೂಡಿ ಮೆರವಣಿಗೆಯ ಮೂಲಕ ನಾಮಪತ್ರ ಸಲ್ಲಿಸಿದರು.

ಇವರುಗಳು ಸೇರಿದಂತೆ  ಹೋಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಶರತ್ ಬಚ್ಚೇಗೌಡ, ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಹೆಚ್.ಪಿ.ಸ್ವರೂಪ್ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಪ್ರೀತಂಗೌಡ, ಬಾಗಲಕೋಟೆ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಚ್.ವೈ.ಮೇಟಿ, ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಹೇಶ್ ಕುಮಟಳ್ಳಿ ಹಾಗೂ ಅನೇಕ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಕೆ ಮಾಡಿದರು.

Donate Janashakthi Media

Leave a Reply

Your email address will not be published. Required fields are marked *