ಗುರುರಾಜ ದೇಸಾಯಿ
ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹಲವು ಅಚ್ಚರಿಗಳನ್ನು, ಶಾಕ್‌ಗಳನ್ನು ನೀಡಿದೆ. ನಾನೇ ಗೆಲ್ಲೋದು ನನ್ನ ಬಿಟ್ರೆ ಬೇರೆ ಯಾರು ಗೆಲ್ತಾರೆ ಎಂದಿದ್ದ ಶಾಸಕ, ಸಚಿವರನ್ನು ಮನಕಡೆಗೂ ಕಳಿಹಿಸಿದ್ದಾರೆ. ಹಾಗಾದರೆ ಈ ಚುನಾವಣೆಯಲ್ಲಿ ಕಂಡ ಅಚ್ಚರಿಗಳೇನು? ಅಂಕಿಅಂಶಗಳು ಇಲ್ಲಿವೆ…..
ಆಡಳಿತವನ್ನು ನಡೆಸುತ್ತಿದ್ದ ಬಿಜೆಪಿ ಸೋಲುಂಡು ಕಾಂಗ್ರೆಸ್ ಬಹುಮತವನ್ನು ಗಳಿಸಿದೆ. ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆಲುವು ದಾಖಲಿಸಿದರೆ, ಬಿಜೆಪಿ 66 ಕ್ಷೇತ್ರಗಳಲ್ಲಿ, ಜೆಡಿಎಸ್ 19 ಹಾಗೂ ಇತರರು 04 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಶೇ.73ರಷ್ಟು ದಾಖಲೆಯ ಪ್ರಮಾಣದ ಮತದಾನವಾಗಿದೆ. ಕಾಂಗ್ರೆಸ್, 2018 ರಲ್ಲಿ ಶೇ.38ರಷ್ಟು ಮತಗಳನ್ನು ಪಡೆದಿದ್ದ ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ಶೇ.43ರಷ್ಟು ಮತ ಗಳಿಕೆಯನ್ನು ಹೊಂದಿದ್ದು ಶೇ. 05 ರಷ್ಟು ಮತಪ್ರಮಾಣವನ್ನು ಹೆಚ್ಚಿಸಿಕೊಂಡಿದೆ. 2018ರಲ್ಲಿ ಬಿಜೆಪಿ ಶೇ.36 ರಷ್ಟು ಮತ ಗಳಿಕೆಯೊಂದಿಗೆ 104 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಬಿಜೆಪಿ 38 ಸ್ಥಾನಗಳಲ್ಲಿ ಸೋತರು ಮತ ಪ್ರಮಾಣದಲ್ಲಿ ಯತಾಸ್ಥಿತಿಯನ್ನು ಕಾಯ್ದುಕೊಂಡಿದೆ. ಜೆಡಿಎಸ್ 06% ಮತ ಪ್ರಮಾಣವನ್ನು ಕಳೆದುಕೊಂಡಿದೆ.
ಇನ್ನೂ ವಲಯವಾರು ನೋಡುವುದಾದರೆ, ಅಲ್ಲಿಯೂ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.
ಪ್ರದೇಶ | ಒಟ್ಟು ಸೀಟುಗಳು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಇತರೆ |
ಮೈಸೂರು ಕರ್ನಾಟಕ | 57 | 5 | 36 | 14 | 2 |
ಕಿತ್ತೂರು ಕರ್ನಾಟಕ | 50 | 16 | 33 | 1 | 0 |
ಕಲ್ಯಾಣ ಕರ್ನಾಟಕ | 40 | 10 | 26 | 3 | 2 |
ಬೆಂಗಳೂರು | 32 | 17 | 15 | 0 | 0 |
ಮಧ್ಯಕರ್ನಾಟಕ | 26 | 5 | 19 | 1 | 0 |
ಕರಾವಳಿ ಕರ್ನಾಟಕ | 19 | 13 | 6 | 0 |
ಇನ್ನೂ ಈ ಬಾರಿಯ ಚುನಾವಣೆಯಲ್ಲಿ ಹಲವು ಅಚ್ಚರಿಗಳನ್ನು ನಾವು ನೋಡಬಹುದು. ಅವುಗಳನ್ನು ಒಂದೊಂದಾಗಿ ನೋಡ್ತಾ ಹೋಗೋಣ. ಪಕ್ಷಾಂತರಿಗಳಿಗೆ ಮತದಾರ ಶಾಕ್ ನೀಡಿದ್ದು, 30 ಮಂದಿಯ ಪೈಕಿ 8 ಮಂದಿ ಮಾತ್ರ ಜಯಗಳಿಸಿದ್ದಾರೆ. ಅಥಣಿಯಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದಿದ್ದ ಲಕ್ಷ್ಮಣ ಸವದಿ ಗೆಲುವು ಸಾಧಿಸಿದ್ದಾರೆ. ಅರಕಲಗೂಡಿನಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದಿದ್ದ ಎ ಮಂಜು, ಕಾಗವಾಡದಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದಿದ್ದ ರಾಜೂ ಕಾಗೆ ಅರಸೀಕೆರೆಯಲ್ಲಿ ಜೆಡಿಎಸ್ ನಿಂದ ಕಾಂಗ್ರೆಸ್‌ಗೆ ಬಂದಿದ್ದ ಶಿವಲಿಂಗೇಗೌಡ ಗುಬ್ಬಿಯಲ್ಲಿ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದಿದ್ದ ಎಸ್ ಆರ್ ಶ್ರೀನಿವಾಸ್, ಹಗರಿಬೊಮ್ಮನಹಳ್ಳಿಯಲ್ಲಿ ಬಿಜೆಪಿಯಿಂದ ಜೆಡಿಎಸ್‌ಗೆ ಬಂದಿದ್ದ ನೇಮಿರಾಜನಾಯ್ಕ್, ಮೊಳಕಾಲ್ಮೂರಿನಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದಿದ್ದ ಎನ್ ವೈ ಗೋಪಾಲಕೃಷ್ಣ ಮತ್ತು ಚಿಕ್ಕಮಗಳೂರಿನಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದಿದ್ದ ಎಚ್ ಡಿ ತಮ್ಮಣ್ಣ ಗೆಲುವು ಸಾಧಿಸಿದ್ದಾರೆ.
ಬಿಜೆಪಿಯಿಂದ ಕಾಂಗ್ರೆಸ್ ಬಂದಿದ್ದ, ಜಗದೀಶ್ ಶೆಟ್ಟರ್, ಪುಟ್ಟಣ್ಣ ಬಾಬುರಾವ್ ಚಿಂಚನಸೂರ್, ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಸೇರಿದ್ದ ರಘು ಆಚಾರ್, ತೇಜಸ್ವಿ ಪಟೇಲ್, ಎಲ್ ಎಲ್ ಘೋಟ್ನೆಕರ್, ಮನೋಹರ್ ತಹಶೀಲ್ದಾರ್, ಮೊಯ್ದಿನ್ ಬಾವಾ, ಸೌರಭ್ ಚೋಪ್ರಾ, ಅನೀಲ್ ಲಾಡ್ ಸೋಲುಕಂಡಿದ್ದಾರೆ.ಬಿಜೆಪಿಯಿಂದ ಜೆಡಿಎಸ್ ಸೇರ್ಪಡೆಯಾಗಿದ್ದ ಎಬಿ ಮಾಲಕರೆಡ್ಡಿ, ಆಯನೂರು ಮಂಜುನಾಥ್, ಭಾರತಿ ಶಂಕರ್, ಎನ್ ಆರ್ ಸಂತೋಷ್, ವೀರಭದ್ರಪ್ಪ ಹಾಲರವಿ, ದೊಡ್ಡಪ್ಪಗೌಡ ನರಿಬೋಳ, ಸೂರ್ಯಕಾಂತ್ ಸೋಲು ಕಂಡಿದ್ದಾರೆ.
ಬಿಜೆಪಿಗೆ ಸೋಲೇ ಇಲ್ಲದ ಜಿಲ್ಲೆಗಳಲ್ಲೂ ಬಿಜೆಪಿ ಮಕಾಡೆ ಮಲಗಿದೆ. ಚಿಕ್ಕಮಗಳೂರು, ಯಾದಗಿರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಕೋಲಾರ, ಕೊಡಗು, ರಾಮನಗರ, ಮಂಡ್ಯ, ಚಾಮರಾನಗರ ಸೇರಿದಂತೆ 9 ಜಿಲ್ಲೆಗಳಲ್ಲಿ ಬಿಜೆಪಿ ಒಂದು ಸ್ಥಾನವನ್ನು ಗೆದ್ದಿಲ್ಲ. 8 ಜಿಲ್ಲೆಗಳಲ್ಲಿ ಕೇವಲ ಒಂದು ಸ್ಥಾನವನ್ನು ಹಾಗೂ 07 ಜಿಲ್ಲೆಗಳಲ್ಲಿ ಎರಡು ಸ್ಥಾನಗಳಲ್ಲಿ ಗೆದ್ದುಕೊಂಡಿದೆ. ಕರಾವಳಿ ಕರ್ನಾಟಕ ಮತ್ತು ಬೆಂಗಳೂರು ನಗರದ ಮತದಾರರು ಬಿಜೆಪಿಗೆ ಮತ ಕೊಡದೆ ಇದ್ದರೆ ಇನ್ನಷ್ಟು ಸ್ಥಾನಗಳನ್ನು ಬಿಜೆಪಿ ಕಳೆದುಕೊಳ್ಳುತ್ತಿತ್ತು ಎಂಬ ಲೆಕ್ಕಾಚಾರಗಳು ಕೇಳಿ ಬರುತ್ತಿವೆ.
ಇನ್ನೂ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹಾಲಿ 14 ಸಚಿವರು ಸೋಲು ಕಂಡಿದ್ದಾರೆ. ಗೋವಿಂದ ಕಾರಜೋಳ, ಜೆ.ಸಿ.ಮಾಧುಸ್ವಾಮಿ, ಬಿ.ಸಿ.ಪಾಟೀಲ, ಶಂಕರ ಪಾಟೀಲ ಮುನೇನ ಕೊಪ್ಪ, ಹಾಲಪ್ಪ ಆಚಾರ್, ಬಿ.ಶ್ರೀರಾಮುಲು, ಡಾ.ಕೆ.ಸುಧಾಕರ್,ವಿ.ಸೋಮಣ್ಣ, ನಾರಾಯಣಗೌಡ , ಬಿ.ಸಿ.ನಾಗೇಶ್, ಮುರುಗೇಶ ನಿರಾಣಿ, ಬಿ.ಸಿ.ಪಾಟೀಲ, ಎಂ.ಟಿ.ಬಿ.ನಾಗರಾಜ್ ಸೋಲುಂಡ ಸಚಿವರಾಗಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹೊಸ ಮುಖಗಳಿಗೆ ಟಿಕೆಟ್ ನೀಡಿತ್ತು, ಕಾಂಗ್ರೆಸ್‌ಗೆ ಇದು ವರ್ಕೌಟ್ ಆಗಿದ್ದರೆ ಬಿಜೆಪಿಗೆ ಇದು ವರ್ಕೌಟ್ ಆಗಿಲ್ಲ, ಕಾಂಗ್ರೆಸ್ 42 ಮಂದಿ ಹೊಸಬರಿಗೆ ಟಿಕೆಟ್ ನೀಡಿತ್ತು ಅದರಲ್ಲಿ 35 ಮಂದಿ ಗೆಲುವು ಸಾಧಿಸಿದ್ದಾರೆ. ಇನ್ನೂ ಬಿಜೆಪಿಯಿಂದ 75 ಮಂದಿ ಹೊಸಬರಿಗೆ ಟಿಕೆಟ್ ನೀಡಲಾಗಿತ್ತು. ಇವರಲ್ಲಿ 14 ಜನ ಮಾತ್ರ ಗೆಲುವು ಕಂಡಿದ್ದಾರೆ.
ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಹೆಚ್ಚು ಗೆಲುವು ದಾಖಲಿಸಿದೆ, 36 ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ 21 ಕ್ಷೇತ್ರಗಳಲ್ಲಿ, ಬಿಜೆಪಿ 12 ಕ್ಷೇತ್ರಗಳಲ್ಲಿ ಜೆಡಿಎಸ್ 03 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. 15 ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ 14 ಕ್ಷೇತ್ರಗಳಲ್ಲಿ ಜಯಗಳಿಸಿದ್ದರೆ, ಜೆಡಿಎಸ್ 01 ಕ್ಷೇತ್ರದಲ್ಲಿ ಜಯಗಳಿಸಿದೆ. ಇನ್ನೂ ಈ ಬಾರಿಯ 184 ಜನ ಮಹಿಳೆಯರು ಸ್ಪರ್ಧೆ ಮಾಡಿದ್ದರು ಅದರಲ್ಲಿ ಕಾಂಗ್ರೆಸ್ನಿಂದ ನಾಲ್ವರು, ಬಿಜೆಪಿಯಿಂದ ಮೂವರು ಮತ್ತು ಜೆಡಿಎಸ್‌ನಿಂದ ಇಬ್ಬರು ಮಹಿಳಾ ಅಭ್ಯರ್ಥಿಳು ಗೆಲುವು ದಾಖಲಿಸಿದ್ದಾರೆ. ಕಳೆದ ಬಾರಿ 10 ಜನ ಮಹಿಳಾ ಶಾಸಕರಿದ್ದರು.
ಅಭ್ಯರ್ಥಿಗಳು |
ಕ್ಷೇತ್ರ | ಪಕ್ಷ |
ಲಕ್ಷ್ಮಿ ಹೆಬ್ಬಾಳ್ಕರ್ | ಬೆಳಗಾವಿ ಗ್ರಾಮೀಣ | ಕಾಂಗ್ರೆಸ್ |
ನಯನ ಮೋಟಮ್ಮ | ಮೂಡಿಗೆರೆ | ಕಾಂಗ್ರೆಸ್ |
ರೂಪಾ ಶಶಿಧರ್ | ಕೆಜಿಎಫ್ | ಕಾಂಗ್ರೆಸ್ |
ಖನಿಜ ಫಾತಿಮಾ | ಕಲಬುರಗಿ ಉತ್ತರ | ಕಾಂಗ್ರೆಸ್ |
ಶಶಿಕಲಾ ಜೊಲ್ಲೆ | ನಿಪ್ಪಾಣಿ | ಬಿಜೆಪಿ |
ಮಂಜುಳಾ ಅರವಿಂದ್ ಲಿಂಬಾವಳಿ | ಮಹದೇವಪುರ | ಬಿಜೆಪಿ |
ಭಾಗೀರಥಿ ಮುರಳ್ಯ | ಸುಳ್ಯ | ಬಿಜೆಪಿ |
ಕರೆಮ್ಮ ನಾಯಕ್ | ದೇವದುರ್ಗ | ಜೆಡಿಎಸ್ |
ಶಾರದಾ ಪೂರ್ಯಾ ನಾಯಕ್ | ಶಿವಮೊಗ್ಗ ಗ್ರಾಮಂತರ |
ಜೆಡಿಎಸ್ |
ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯ ಇಡೀ ಪ್ರಚಾರ ಕಾರ್ಯವನ್ನು ಬಿಜೆಪಿ ಹೈಕಮಾಂಡ್ ನೇರವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಪ್ರಧಾನಿ ನರೇಂದ್ರ ಮೋದಿ ಹಾಗು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ ಅಬ್ಬರದ ಪ್ರಚಾರ ಕಾರ್ಯ ನಡೆಸಿದರು. ಆದರೂ ಮೋದಿ ಹಾಗು ಅಮಿತ್ ಶಾ ಅವರ ರೋಡ್ ಶೋಗಳು, ಚುನಾವಣಾ ರ್ಯಾಲಿಗಳು ಮಾತ್ರ ಬಿಜೆಪಿ ಕೈ ಹಿಡಿಯಲಿಲ್ಲ. ರ್ಯಾಲಿಗೆ ಜನ ಬಂದರೂ ಪಕ್ಷ ಅಧಿಕಾರಕ್ಕೆ ಬರಲಿಲ್ಲಮತಹಾಕಲಿಲ್ಲ. . ಕಳೆದ ಎರಡೂವರೆ ತಿಂಗಳಿನಲ್ಲಿ 17ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 10ಕ್ಕೂ ಹೆಚ್ಚು ಬಾರಿ ಬಂದಿದ್ದಾರೆ.31 ನಾಯಕರು ಹೊರ ರಾಜ್ಯದಿಂದ ಪ್ರಚಾರ ಕಾರ್ಯಕ್ಕೆ ಬಂದಿದ್ದರು. ನರೇಂದ್ರ ಮೋದಿ ರಾಜ್ಯದಲ್ಲಿ 19 ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದು, 6 ರೋಡ್ ಶೋ ನಡೆಸಿದ್ದರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ 10 ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದು, 16 ರೋಡ್ ಶೋ ನಡೆಸಿದ್ದರು, ಅಮಿತ್ ಶಾ 16ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದು,17 ರೋಡ್ ಶೋ ನಡೆಸಿದ್ದರು. ಆದರೆ ಮತದಾರ ಮಾತ್ರ ಈ ಮೋಡಿಗೆ ಒಳಗಾಗದೆ 40% ಸರ್ಕಾರವನ್ನು, ಜನವಿರೋಧಿ ಸರ್ಕಾರವನ್ನು ಕಿತ್ತೆಸೆದಿದ್ದಾನೆ.