ಕಣಿವೆಯಿಂದ ಸ್ಥಳಾಂತರಗೊಂಡ ಮೊದಲ ಕಾಶ್ಮೀರಿಯ ಕಳಕಳಿಯ ಮನವಿ
“ಇದು ಸ್ಥಳಾಂತರಗೊಂಡ ಮೊದಲ ಕಾಶ್ಮೀರಿಯ ಮನವಿ. ಈಗ ದಯವಿಟ್ಟು ನಿಲ್ಲಿಸಿ; ಸತ್ತ ಪ್ರತಿಯೊಬ್ಬರೂ ಕಾಶ್ಮೀರಿಯೇ, ಜನಗಳ ಕಣ್ಣೀರನ್ನು ಒಡೆಯುವುದನ್ನು ಮತ್ತು ಅವರ ದುರಂತಗಳಿಂದ ದುಡ್ಡು ಮಾಡುವುದನ್ನು ನಿಲ್ಲಿಸಿ…. ಕಾಶ್ಮೀರದ ರಕ್ತವನ್ನು ವಿವಿಧ ಮಾರುಕಟ್ಟೆಗಳಲ್ಲಿ ಮಾರುತ್ತಿರುವ ಅಧಿಕಾರಸ್ಥರಿಗೆ ನನ್ನದು ಒಂದೇ ಪ್ರಶ್ನೆ..ಯಾರು ಕೊಂದರು, ಯಾರನ್ನು ಕೊಂದರು ಎಂದು ಕೇಳುವುದನ್ನು ನಿಲ್ಲಿಸಿ!” ಎಂದು ಮಹಮ್ಮದ್ ಯುಸುಫ್ ತರಿಗಾಮಿ ‘ಕಾಶ್ಮೀರಿ ಫೈಲ್ಸ್’ ಚಿತ್ರದ ಮರೆಯಲ್ಲಿ ವಿಷ ಹರಡುತ್ತಿರುವ ಬಗ್ಗೆ ಶ್ರೀನಗರದಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ಮನನೊಂದು ಕಳಕಳಿಯಿಂದ ಮನವಿಮಾಡಿಕೊಂಡರು.
ಕಾಶ್ಮೀರದ ಹಿರಿಯ ಕಮ್ಯುನಿಸ್ಟ್ ಮುಖಂಡರಾದ ಇವರು 1989ರಲ್ಲಿ ಪ್ರತ್ಯೇಕವಾದಿಗಳ ದಾಳಿಗಳಿಂದಾಗಿ ತಮ್ಮ ಊರು ಬಿಟ್ಟು ಹೋಗಬೇಕಾಗಿ ಬಂದ ಮೊದಲ ಕಾಶ್ಮೀರಿ. ಅವರು ಜಮ್ಮುವಿಗೆ ಹೋಗಿ ಪಂಡಿತ್ ಸಮುದಾಯದ ಒಬ್ಬ ಸ್ನೇಹಿತರ ಜತೆಗಿದ್ದರು. ಉಗ್ರಗಾಮಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಪಂಡಿತ್ ಸಮುದಾಯದ ಜನಗಳು ಜಮ್ಮುವಿಗೆ ಬಂದಾಗ ಅವರನ್ನು ಮೊದಲು ಭೇಟಿ ಮಾಡಿದವರು ಇವರೇ. ಪಂಡಿತ ಸಮುದಾಯದ ಪುನರ್ವಸತಿಗಾಗಿ ಹೋರಾಟ ಆರಂಭಿಸಿದ ಮೊದಲಿಗರೂ ಕೂಡ. ತಮ್ಮ ಮಾವ(ಪತ್ನಿಯ ತಂದೆ), ಸೋದರಳಿಯ ಸೇರಿದಂತೆ ಕುಟುಂಬದ ಆರು ಸದಸ್ಯರನ್ನು ಕಳಕೊಂಡರು; ಅವರ ಸಂಬಂಧಿಕರಲ್ಲಿ ಹಲವರು ಹುತಾತ್ಮರಾದರು. ತರಿಗಾಮಿ ನಾಲ್ಕು ಬಾರಿ ಚುನಾಯಿತರಾದ ಶಾಸಕರು ಮತ್ತು ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯರು.
1996ರಲ್ಲಿ ಚುನಾವಣಾ ಫಲಿತಾಂಶಗಳು ಘೋಷಣೆಯಾದ ನಂತರ, ಡಿಸೆಂಬರ್ 4 ರಂದು ಕುಲ್ಗಾಮ್ ನಲ್ಲಿ ಒಂದು ಸಾರ್ವಜನಿಕ ಸಭೆಯ ಮೇಲೆ ಉಗ್ರಗಾಮಿಗಳು ಗ್ರೆನೇಡ್ ಎಸೆದರು. ಅದರಲ್ಲಿ ಏಳು ಜನ ಪ್ರಾಣ ಕಳಕೊಂಡರು, ಹತ್ತಾರು ಜನಗಳಿಗೆ ಗಾಯಗಳಾದವು. ಈ ರ್ಯಾಲಿಯನ್ನುದ್ದೇಶಿಸಿ ತರಿಗಾಮಿ ಮಾತಾಡುತ್ತಿದ್ದರು. ಭಾರತ ಕಮ್ಯುನಿಸ್ಟ್ ಪಕ್ಷದ ಹಿರಿಯ ಮುಖಂಡ, ಪ್ರಮುಖ ಲೇಖಕ ಮತ್ತು ಕವಿ ಅಬ್ದುಲ್ ಸತ್ತಾರ್ ರಂಜೂರ್ ಹತ್ಯೆಯಾಯಿತು.
“ಸತ್ತವರೆಲ್ಲರೂ ನನ್ನವರು, ನಮ್ಮವರು …ನಷ್ಟವಾದದ್ದು ಕಾಶ್ಮೀರಕ್ಕೆ, ಕಾಶ್ಮೀರದ ಅಸ್ಮಿತೆಗೆ, ಕಾಶ್ಮೀರದ ಜೀವನ ಮಾರ್ಗಕ್ಕೆ… ಈ ದುಃಖವು ನಿಮ್ಮದೂ ಅಲ್ಲ ಅಥವಾ ನನ್ನದೂ ಅಲ್ಲ, ಅದು ನಮ್ಮದು ಆತ್ಮೀಯರೇ! ಈ ದುಃಖವು ಕಾಶ್ಮೀರಿ ಪಂಡಿತರಿಗೆ, ಸಿಖ್ಖರಿಗೆ, ಮುಸ್ಲಿಮರಿಗೆ, ಪತ್ರಿಕಾ ಸಂಪಾದಕರುಗಳಿಗೆ, ಪತ್ರಕರ್ತರಿಗೆ, ವಕೀಲರಿಗೆ, ಸಾಮಾನ್ಯ ಕಾರ್ಮಿಕರಿಗೆ, ಸಾಮಾನ್ಯ ಬಡಜನರಿಗೆ, ನನ್ನ ಸೋದರಿಯವರಿಗೆ ಸೇರಿದ್ದು. ನಮ್ಮ ಕಣ್ಣೀರುಗಳ ಒಡೆಯಬೇಡಿ!” ಎಂದು ಕೊನೆಯಲ್ಲಿ ಅವರು ಹೇಳಿದರು.
ಶ್ರೀನಗರದ ಈ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದ ಮಾತುಗಳನ್ನು ಈ ಮುಂದೆ ಕೊಡಲಾಗಿದೆ:
ಈ ಚಿತ್ರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ನನ್ನ ಅಭಿಪ್ರಾಯದಲ್ಲಿ, ಇಲ್ಲಿನ ಸನ್ನಿವೇಶವನ್ನು, ಇಲ್ಲಿನ ದುರಂತಗಳನ್ನು, ಇಂದಿನ ವರೆಗೆ ಏನೇನು ನಡೆಯಿತೋ ಅವೆಲ್ಲವನ್ನೂ ವಿವರಿಸಬೇಕಾಗಿರುವುದು ಈಗಿನ ಅವಶ್ಯಕತೆ. ಇವನ್ನು ಇಲ್ಲಿನ ‘ಮೌರೂಜಿಹಕಾಯಕ್’(ಪಾರಂಪರಿಕ ಸತ್ಯ)ವನ್ನು ಮನಸ್ಸಿನಲ್ಲಿಟ್ಟುಕೊಂಡು ವಸ್ತುನಿಷ್ಟವಾಗಿ ಪ್ರಸ್ತುತ ಪಡಿಸಬೇಕಿತ್ತು. ಈ ಚಿತ್ರ ಹಾಗೆ ಕಾಣುತ್ತಿಲ್ಲ. ಕಳೆದ ಕೆಲವು ದಶಕಗಳಿಂದ ದುರಂತಕಾರೀ ಸನ್ನಿವೇಶಗಳಿಂದ ಹಾದು ಬರಬೇಕಾಗಿರುವುದು ನಮ್ಮ ದುರದೃಷ್ಟ. ಇದರಲ್ಲಿ ಕಾಶ್ಮೀರದ ಅಸ್ಮಿತೆಗೆ ಧಕ್ಕೆ ತಂದಿರುವ ಅತ್ಯಂತ ದುರಂತದ ಘಟನೆಯೆಂದರೆ ವಲಸೆ…ಭಯದಿಂದ ಮನೆ ಬಿಟ್ಟು ಹೋಗಬೇಕಾಗಿ ಬಂದಿರುವುದು… ನಮ್ಮ ಸಮಾಜದ ಒಂದು ಗಮನಾರ್ಹ ವಿಭಾಗ ಭಯದಿಂದ ಕಣಿವೆ ಬಿಟ್ಟು ಹೋಗಬೇಕಾಗಿ ಬಂತು. ಅವರೆಂದರೆ ಕಾಶ್ಮೀರಿ ಪಂಡಿತರು.
ಇದು ನಮ್ಮ ಚರಿತ್ರೆಯ ಅತ್ಯಂತ ದುರಂತಮಯ ಅಧ್ಯಾಯ, ಅದರಲ್ಲಿ ಸಂಶಯವೇನೂ ಇಲ್ಲ. ಆದರೆ ಅದೇ ವೇಳೆಗೆ, ಸತ್ಯಸಂಗತಿಯೂ ಏನೆಂದರೆ, ಹಿಂಸಾಚಾರದ ಹಿಂದಿದ್ದ ಶಕ್ತಿಗಳು ಯಾರು ಯಾವ ಧರ್ಮಕ್ಕೆ, ಸಮುದಾಯಕ್ಕೆ ಸೇರಿದವರು, ಅಥವ ಯಾವ ನಂಬಿಕೆಯನ್ನು ಪಾಲಿಸುತ್ತಾರೆ ಎಂದು ನೋಡುತ್ತಿರಲಿಲ್ಲ. ಅವರು ಟಿಕ್ಲ ತಪ್ಲುರವರನ್ನು ಕೊಂದರು, ಲಸ್ಸ ಕೌಲ್ ರನ್ನೂ, ಮೊಹಮ್ಮದ್ ಶಬಾನ್ ವಕೀಲ್ ರನ್ನೂ ಕೊಂದರು. ಇನ್ನೊಂದು ದುರಂತಮಯ ಘಟನೆಯಲ್ಲಿ, ಮರಣಶಯ್ಯೆಯಲ್ಲಿದ್ದ ಹಿರಿಯ ವಿದ್ವಾಂಸ ಮೌಲಾನಾ ಮಸೂದಿಯವರನ್ನೂ ಕೊಂದರು. ಕಾಶ್ಮೀರದ ಮೀರ್‍ವಾಜ್ ಮೌಲಾನಾ ಫರೂಕ್‍ರವರ ಹತ್ಯೆಯಾದದ್ದು ಯಾರ ಬುಲೆಟ್ ನಿಂದ? ನಂತರ ಅವರ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ್ದ ಹತ್ತಾರು ಜನಸಾಮಾನ್ಯರನ್ನೂ ಗುಂಡಿಕ್ಕಿ ಕೊಂದರು. ಅದರು ಮಾಡಿದ್ದ ತಪ್ಪಾದರೂ ಏನು? ಇದು ಚಿತ್ರದ ಇನ್ನೊಂದು ಮಗ್ಗಲು.
ಹೆಚ್ ಎಂ ಟಿ ಯ ಜನರಲ್ ಮ್ಯಾನೇಜರ್ ಖೇರಾ ಸಾಹೇಬ್ ಮೇಲೆ ಗುರಿಯಿಟ್ಟರು, ಕಾಶ್ಮೀರ ವಿಶ್ವ ವಿದ್ಯಾಲಯದ ಉಪಕುಲಪತಿ ಮುಶಿರುಲ್ ಹಕ್ ಸಾಹೇಬರನ್ನೂ, ಅವರ ಖಾಸಗೀ ಕಾರ್ಯದರ್ಶಿ ಅಬ್ದುಲ್ ಘನಿ ಸಾಹೇಬರನ್ನೂ ಬಿಡಲಿಲ್ಲ. ರಾಜಕೀಯದೊಡನೆ ಯಾವುದೇ ಸಂಬಂಧವಿಲ್ಲದ, ಯಾವುದೇ ಪ್ರಭಾವವಿಲ್ಲದ ಎಷ್ಟೋ ಜನಸಾಮಾನ್ಯರನ್ನೂ ಗುರಿಮಾಡಲಾಯಿತು ಎಂಬುದು ನಿಜ ಸಂಗತಿಯಲ್ಲವೇ? ಶ್ರೀನಗರಕ್ಕೆ ಸೇರಿದ ನಮ್ಮ ಸೋದರಿಯರಲ್ಲಿ ಒಬ್ಬರಾದ ಶೀತಲ ಕೌಲ್‍ರನ್ನು ಅಮಾನುಷವಾಗಿ ಸಾಯಿಸಲಾಯಿತು. ಅನಂತನಾಗ್ ನಲ್ಲಿ ಪ್ರೇಮ್ ನಾಥ್ ಭಟ್‍ರವರನ್ನು ಹತ್ಯೆ ಮಾಡಿದರು, ಅಲ್ಲಿ ಗುಲಾಮ್ ನಭಿ ಕ್ವಾಲರ್ ಸಾಹೇಬರನ್ನೂ ಗುರಿಮಾಡಿದರು.
ನನಗೀಗ ಅಧಿಕಾರದಲ್ಲಿ ಇರುವವರಿಂದ, ಕಾಶ್ಮೀರದ ರಕ್ತವನ್ನು ವಿವಿಧ ಮಾರುಕಟ್ಟೆಗಳಲ್ಲಿ ಮಾರುತ್ತಿರುವವರಿಂದ ಒಂದೇ ಪ್ರಶ್ನೆ- ಯಾರು ಕೊಂದರು, ಯಾರನ್ನು ಕೊಂದರು ಎಂಬುದನ್ನು ನಿಲ್ಲಿಸಿ ಬಿಡಿ; ಸತ್ತವರೆಲ್ಲರೂ ನನ್ನ ಸಂಬಂಧಿಕರು, ನನ್ನ ಪ್ರೀತಿಪಾತ್ರರು ಸತ್ತರು,ನನ್ನ ಹಿರಿಯರು ಸತ್ತರು. ಅವರ ಹೆಸರುಗಳೇನು? ಯಾವ ಪಂಗಡಕ್ಕೆ ಸೇರಿದವರು? ಅವರೆಲ್ಲರೂ ಕಾಶ್ಮೀರಿಗಳೇ! ಮತ್ತು, ಇಂದು ನಾನು ಇದನ್ನು ಮತ್ತೊಮ್ಮೆ ಹೇಳ ಬಯಸುತ್ತೇನೆ, ವಂಧಮಾದ ದುರಂತ ಘಟನೆ ಮುನ್ನೆಲೆಗೆ ಬಂತು, ಅದೇ ವೇಳೆಯಲ್ಲಿ ಗಾವಕದಲ್ ಘಟನೆಯನ್ನು ಸಹ ಮರೆಯಲು ಸಾಧ್ಯವಿಲ್ಲ. ಬುಡ್ಗಾಮ್ ನಲ್ಲಿ ಕೆಲವು ಮುಗ್ಧ ಸಹೋದರ ಸಹೋದರಿಯರು ನಮ್ಮ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಇದ್ದರು ಕೊಲ್ಲಲ್ಪಟ್ಟರು, ಅಲ್ಲಿ ಇನ್ನೊಂದು ಘಟನೆಯೂ ನಡೆದಿತ್ತು. ಕುಪ್ವಾರಕ್ಕೆ ಬರುತ್ತಿದ್ದ ಬಸ್ಸೊಂದರ ಮೇಲೆ ಗುಂಡು ಹಾರಿಸಲಾಯಿತು. ಯಾರು ಕೊಂದರು ಈ ಬಸ್ಸಿನ ಪ್ರಯಾಣಿಕರನ್ನು? ಒಬ್ಬ ಮುಗ್ಧ ಸೋಪೋರ್‌ನ ಸಹೋದರಿ ಅತ್ಯಾಚಾರಕ್ಕೊಳಗಾದಳು, ಕೊಲೆ ಮಾಡಲ್ಪಟ್ಟಳು. ಅವಳು ಒಂದು ಪಂಡಿತ ಕುಟುಂಬಕ್ಕೆ ಸೇರಿದವಳು. ಅದೇ ಸಮಯದಲ್ಲಿ, ದಿಕುನನ್ ಪೋಷ್ಪೋರದ ಘಟನೆಯೂ ನಮ್ಮ ಮುಂದೆ ಇದೆ. ಆ ರಾತ್ರಿಯಲ್ಲಿ ಯಾರ ಮರ್ಯಾದೆಯನ್ನು ದೋಚಲಾಯಿತು?
ಇವತ್ತಿಗೂ ಪ್ರಧಾನ ಮಂತ್ರಿಗಳು ಧೈರ್ಯ ತೋರಿಸ ಬೇಕು ಎಂದು ನಾನು ಬಯಸುತ್ತೇನೆ. ದಕ್ಷಿಣ ಆಫ್ರಿಕಾದಲ್ಲಿ ವರ್ಣದ್ವೇಷದ ಆಳ್ವಿಕೆಯನ್ನು ಕೊನೆಗೊಳಿಸಿದ ನಂತರ ರಚಿಸಿದ ‘ಸತ್ಯ ಮತ್ತು ವ್ಯಾಜ್ಯ ಮುಕ್ತಾಯ ಆಯೋಗ’ದಂತಹ ವಿಶ್ವಾಸದ ಮರುಸ್ಥಾಪನೆಯ ಆಯೋಗವನ್ನು ಯಾರು ಸತ್ತರು ಮತ್ತು ಅವರನ್ನು ಯಾರು ಕೊಂದರು ಎಂದು ತಿಳಿಯಲು. ರಚಿಸಬೇಕು. ಸತ್ತವರು ಯಾರೇ ಆಗಲಿ ಅವರು ಮತ್ತೆ ಬದುಕಿ ಬರಲು ಸಾಧ್ಯವಿಲ್ಲ ಆದರೆ ಹೊಣೆಗಾರಿಕೆಯನ್ನಾದರೂ ನಿರ್ಧರಿಸಬೇಕು. ಯಾರು ಸತ್ತರು, ಯಾಕೆ ಸತ್ತರು ಎಂದು ಅವರ ಬಂಧು-ಬಳಗಕ್ಕೆ ತಿಳಿಯಬೇಕು.
ಈ ರಾಜಕೀಯ ಪಕ್ಷ , ಆ ರಾಜಕೀಯ ಪಕ್ಷ ಎಂದು ಏನೇನೋ ಹೇಳಲಾಗುತ್ತಿದೆ… ನನಗೊಂದು ಪ್ರಶ್ನೆ ಇದೆ; ನಮ್ಮ ವಿಧಾನ ಸಭೆಯ ಸಭಾದ್ಯಕ್ಷರು, ಸದಸ್ಯರು, ನ್ಯಾಷನಲ್ ಕಾನ್ಫರೆನ್ಸ್ ಗೆ ಸೇರಿದವರು, ಕಾಂಗ್ರೆಸಿಗೆ ಸೇರಿದವರು, ಪಿಡಿಪಿಗೆ ಸೇರಿದವರು ಇವರನ್ನೆಲ್ಲ ಕೊಂದವರು ಯಾರು? ಅವರೇಕೆ ಸತ್ತರು? ಎಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಅವರನ್ನು ನಿರ್ದಯವಾಗಿ ಕೊಲ್ಲಲಾಯಿತು. ಅವರು ಏಕೆ ಕೊಲೆಯಾದರು? ಏಕೆಂದರೆ ಅವರು ಆ ಮಾರ್ಗವನ್ನು (ಪ್ರತ್ಯೇಕತಾವಾದಿಗಳ ಮಾರ್ಗವನ್ನು). ಆರಿಸಿಕೊಳ್ಳಲಿಲ್ಲ. ಸಾವಿನ ದುರಂತ ಕಂಡ ಮೊದಲನೆಯವನು ಯಾರು? ಅವನು ನ್ಯಾಷನಲ್ ಕಾನ್ಫರೆನ್ಸಿನ ಶ್ರೀನಗರದ ಕಾರ್ಯಕರ್ತ ಮೊಹಮ್ಮದ್ ಯೂಸುಫ್ ಹಲ್ವಾಯಿ. ಉಗ್ರಗಾಮಿಗಳು ಆಗಸ್ಟ್ 15ರಂದು ಬ್ಲಾಕ್ ಔಟ್ ಮಾಡಬೇಕು ಎಂದಾಗ ಅವನು ಪ್ರತಿಭಟಿಸಿದ ಎಂಬ ಕಾರಣಕ್ಕೇ ಸಾಯಿಸಿದರು. ಇಂದು ಆತನನ್ನು ಯಾವ ಗುಂಪಿನಲ್ಲಿ ಸೇರಿಸುತ್ತೀರಿ?
ಮಾನವ ರಕ್ತವನ್ನು ಇಂದು ರಾಜಕೀಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಇದು ದೇಶಕ್ಕೆ ಹಾನಿಕಾರಕ, ಜನರಿಗೆ ಹಾನಿಕಾರಕ ಮತ್ತು ಕಾಶ್ಮೀರಕ್ಕೆ ಹಾನಿಕಾರಕ.
ನಾನು ಇಂದು ಮತ್ತೆ ಹೇಳ ಬಯಸುತ್ತೇನೆ, ಪ್ರಭಾವೀ ಮಂದಿಗೆ, ಆಳುವವರಿಗೆ ಹೇಳ ಬಯಸುತ್ತೇನೆ-ಕಾಶ್ಮೀರ ಕೇವಲ ಒಂದು ತುಂಡು ಭೂಮಿಯಷ್ಟೇ ಅಲ್ಲ. ಕಾಶ್ಮೀರ ಎಂಬುದು ಒಂದು ಜೀವನ ಮಾರ್ಗದ ಹೆಸರು, ಇದು ಒಂದು ನಾಗರಿಕತೆಯ ಹೆಸರು. ನಮಗೆ ಐದು ಸಾವಿರ ವರ್ಷಗಳ ಇತಿಹಾಸವಿದೆ ಅವು ಅಳಿಸಲಾಗದ ವರ್ಷಗಳು – ಯಾವುದೇ ಶಕ್ತಿ, ಹೊರಗಿನಿಂದ ಅಥವಾ ಒಳಗಿನಿಂದ, ನಮ್ಮ ಗುರುತನ್ನು ಅಳಿಸಲು ಸಾಧ್ಯವಿಲ್ಲ….
ನಾನು ಇದನ್ನು ನಿಮಗೆ ನೆನಪಿಸಲು ಬಯಸುತ್ತೇನೆ- ನನ್ನದೇ ಸ್ವಂತ ಪ್ರದೇಶದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆಯಾಯಿತು, ಅಲ್ಲಿಯೇ ಬಿಜ್ಬೆಹಾರಾದಲ್ಲಿ ಇನ್ನೊಂದು ದುರಂತ ಘಟನೆಯೂ ನಡೆಯಿತು, ಅಲ್ಲಿ ನಮಾಝಿಗಳ ಹತ್ಯೆಗಳೂ ನಡೆದವು. ಎಲ್ಲಿ ಹಿಂದೂಗಳು ಸತ್ತರೋ, ಅಲ್ಲಿ ಮುಸ್ಲಿಮರೂ ಸತ್ತರು; ಚಿಟ್ಟಿಸಿಂಗಪುರದಲ್ಲಿ ನನ್ನ ಸಿಖ್ ಸಹೋದರಿ ಕೂಡ ಸತ್ತಳು, ಸಿಖ್ ಸಹೋದರರು ಸತ್ತರು ಮತ್ತು ಸಿಖ್ ಮಗುವಿನ ಕಣ್ಣುಗಳಲ್ಲಿ ಕಂಡ ನೀರು, ಅದು ಮಾನವೀಯತೆಯ ಕಣ್ಣೀರು, ಯಾರಾದರೂ ಸತ್ತಾಗ ಸುರಿಯುವಂತದ್ದು … ನಾನು ಚಿತ್ರದ (ಕಾಶ್ಮೀರ್ ಫೈಲ್ಸ್) ತಯಾರಕರಿಗೆ, ಆಳುವ ಮಂದಿಗೆ ಹೇಳುತ್ತೇನೆ- ದಯವಿಟ್ಟು ಹೇಳಿ-ಈ ಕಣ್ಣೀರಿನ ಬಣ್ನ ಯಾವುದು? ದಯವಿಟ್ಟು ಹೇಳಿ ಯಾವ ಮಾರುಕಟ್ಟೆಯಲ್ಲಿ ಈ ಕಣ್ನೀರನ್ನು ಮಾರಲಾಗುತ್ತದೆ? ದಯವಿಟ್ಟು ಇದನ್ನು ನಿಲ್ಲಿಸಿ!
ನಾನು ಇದನ್ನು ಹೇಳುತ್ತೇನೆ, ನನ್ನ ಅಶೋಕ (ಕುಮಾರ್ ಭಟ್) ಕುಲ್ಗಾಮ್‌ನಲ್ಲಿ ಸತ್ತ, ಹಜನ್ ಯೂಸುಫ್ ಸಹ ಸತ್ತ, ಬಶೀರ್ ಅಹ್ಮದ್ ಕೂಡ ಸತ್ತ, ಇನ್ನೂ ಹಲವರು ಸತ್ತರು. ಯಾರು ಸತ್ತರು? ನನ್ನ ಆತ್ಮೀಯರು ,ನನ್ನ ಸಂಬಂಧಿಗಳನ್ನು ವಿಭಜಿಸಲು ನಾನು ಬಯಸುವುದಿಲ್ಲ. ನನ್ನ ಸಮೀಪವರ್ತಿಗಳನ್ನು, ಆತ್ಮೀಯರನ್ನು ಅವರು ದೇವಸ್ಥಾನಕ್ಕೆ ಹೋಗುತ್ತಾರೆಯೇ ಅಥವಾ ಮಸೀದಿಗೋ ಎಂಬ ಆಧಾರದಲ್ಲಿ ತಿಳಿಯ ಬಯಸುವುದಿಲ್ಲ.
ಚಿತ್ರದಲ್ಲಿ ತೋರಿಸಿರುವುದು ಸತ್ಯವನ್ನಲ್ಲ ಎಂಬುದನ್ನು ನಾನಿಂದು ಹೇಳ ಬಯಸುತ್ತೇನೆ. ಸತ್ಯವನ್ನು ಒಂದು ಕಣ್ಣಿನಿಂದ ನೋಡಲಾಗುವುದಿಲ್ಲ. ಸತ್ಯವನ್ನು ನೋಡಲು ಮತ್ತು ತೀರ್ಮಾನಕ್ಕೆ ಬರಲು ಎರಡೂ ಕಣ್ಣುಗಳನ್ನು ವಿಪುಲವಾಗಿ ಬಳಸಬೇಕಾಗುತ್ತದೆ. ನಾನು ಇದನ್ನು ಮೊದಲೇ ಹೇಳಿದ್ದೇನೆ ಕಾಶ್ಮೀರದ ಆತ್ಮವು ಅಳುತ್ತಿದೆ ನನ್ನ ಸಹೋದರ ಸಹೋದರಿಯರಿಗಾಗಿ, ಕಾಶ್ಮೀರಿ ಪಂಡಿತರಿಗಾಗಿ, ಅವರು ತಮ್ಮ ತಾಯ್ನಾಡಿಗೆ ಮರಳಲು ಗೌರವ ಮತ್ತು ಸುರಕ್ಷತೆಯೊಂದಿಗೆ. ಮರಳಬೇಕು ಎಂದು ಬಯಸುತ್ತಿದೆ. ಬೇರೆ ಇನ್ನೇನು ಹೇಳಲು ಸಾಧ್ಯ?
1989 ರಲ್ಲಿ, ನಾನು ಎಂ.ಎಲ್.ಎ. ಬಿಡಿ, ಒಬ್ಬ ಸರಪಂಚನೂ ಆಗಿರದಿದ್ದಾಗ ಕೆಲವರು ಬಂದರು ಮನೆಗೆ ಘೇರಾವ್ ಹಾಕಿದರು. ನಾನು ಮನೆ ಬಿಡಬೇಕಾಗಿತ್ತು, ಜಮ್ಮುವಿಗೆ ಹೋಗಬೇಕಾಗಿತ್ತು. ನಾನು ಅಲ್ಲಿ ಕಾಶ್ಮೀರಿ ಪಂಡಿತರ ಬಳಿ ಆಶ್ರಯ ಪಡೆದೆ. ಆತ ಸೆಕ್ರೆಟರಿಯೇಟ್ ನಲ್ಲಿ ಉದ್ಯೋಗಿಯಾಗಿದ್ದರು. ಸರ್ಕಾರ ನನಗೆ ಗಾಂಧಿ ನಗರದಲ್ಲಿ ಜಾಗ ಕೊಡುವ ವರೆಗೂ ಅವರ ಜೊತೆಗಿದ್ದೆ. ನಂತರ ರಾಜ್ಯಪಾಲರ ಆಡಳಿತ ಹೇರಿದಾಗ ನನಗೂ ಭದ್ರತೆ ನೀಡಲಾಯಿತು.
ಕಾಶ್ಮೀರಿ ಪಂಡಿತರ ಅಸಹಾಯಕತೆಯನ್ನು ಸ್ವಂತ ಕಣ್ಣುಗಳಿಂದಲೇ ನೋಡಬೇಕಾಗಿ ಬಂದ ಕಾಶ್ಮೀರದ ಮೊದಲ ವ್ಯಕ್ತಿಯೆಂಬ ದುರದೃಷ್ಟ ನನ್ನದು. ಅವರು ತಮ್ಮ ಮನೆಗಳನ್ನು ಬಿಟ್ಟು ಜಮ್ಮುವಿಗೆ ಬಂದದ್ದನ್ನು ನೋಡಿದೆ. ದಾರಿಯಿರಲಿಲ್ಲ, ಸಹನೆಯಿರಲಿಲ್ಲ. ಬೆಂಬಲವಿರಲಿಲ್ಲ, ಸ್ವಲ್ಪವಾದರೂ ಪರಿಹಾರವನ್ನು ಪಡೆಯಬಹುದಾದ ಸ್ಥಳವಿರಲಿಲ್ಲ.. ನಾವು ರಾಜ್ಯಪಾಲರ ಮನೆ ಮುಂದೆ ಮೆರವಣಿಗೆ ನಡೆಸಿದೆವು.ನಾನು ರಾಜ್ಯಪಾಲರಿಗೆ ಬಾಗಿಲು ತೆರೆಯಲು ಹೇಳಿದ್ದೆ-ಇವರು ಕಾಶ್ಮೀರಿಗಳು, ಭಿಕ್ಷಕುಕರಲ್ಲ. ಅವರು ಭಿಕ್ಷೆ ಕೇಳಲು ಬಂದಿಲ್ಲ. ಯಾವುದೇ ಪ್ರವಾಸಕ್ಕೆ ಬಂದಿಲ್ಲ. ಅವರು ನಿಮ್ಮಿಂದ ಭಿಕ್ಷೆ ಕೇಳುವುದಿಲ್ಲ, ಅವರು ತಮ್ಮ ಹಕ್ಕುಗಳನ್ನು ಕೇಳುತ್ತಾರೆ-ಇಲ್ಲಿ ಸುರಕ್ಷಿತವಾಗಿ ಇರುವ ಹಕ್ಕನ್ನು ಕೇಳುತ್ತಿದ್ದಾರೆ ಎಂದು ನಾನಾಗ ಹೇಳಿದ್ದೆ. ನಮ್ಮ ಕಾಶ್ಮೀರಿ ಪಂಡಿತ್ ಸಹೋದರ ಸಹೋದರಿಯರಿಗೆ ಇವೆಲ್ಲವೂ ತಿಳಿದಿದೆ. ನಾನೇನು ಹೇಳಲಿ? ನನ್ನ ಸಂಬಂಧಿಕರನ್ನು ಕೊಂದರು. ಅಶೋಕ್ ಕೂಡ ನನ್ನ ಸಂಬಂಧಿ, ನನ್ನ ಒಡನಾಡಿ; ಬಹಳಷ್ಟು ಜನರು ಕೊಲ್ಲಲ್ಪಟ್ಟರು; ನನ್ನ ಮಾವನನ್ನು ಕೊಂದರು. ನನ್ನ ಸೋದರಳಿಯ ದುರದೃಷ್ಟವಶಾತ್ ಕೊಲೆಯಾದ. ವಿಧಾನಸಭಾಧ್ಯಕ್ಷ ವಾಲಿ ಮೊಹಮ್ಮದ್ ಇಟೂ ಸಹ ಕೊಲ್ಲಲ್ಪಟ್ಟರು. ವಿಧಾನ ಸಭೆಯ ಸದಸ್ಯರಾಗಿದ್ದ ಗುಲಾಂ ನಬಿ ದಾರ್ ಅವರೂ ಕೊಲೆಯಾದರು. ಪುಲ್ವಾಮಾದಲ್ಲಿದ್ದ ಇಬ್ಬರು, ಮೂವರು ಶಾಸಕರು ಕೊಲೆಯಾದರು. ಫುಲ್ವಾಮ ದಲ್ಲಿ ಗುಲಾಮ್ ಖಾದಿರ್ ರವರನ್ನು ಕೊಂದರು. ನಾನೇನು ಹೇಳಲಿ? ಯಾವ ಖಾತೆಯಲ್ಲಿ ಅವರನ್ನು ಹಾಕಲಿ?
ನಾನು ದೇಶದ ರಾಜಕೀಯ ಪಕ್ಷಗಳಿಗೆ, ವಿಶೇಷವಾಗಿ ಅಳುವವರಿಗೆ, ಬಿಜೆಪಿಗೆ ಮನವಿ ಮಾಡ ಬಯಸುತ್ತೇನೆ: ಹೇ ಸಾಹಿಬ್, ಮತಗಳ ಸಲುವಾಗಿ ನನ್ನ ಕಣ್ಣೀರನ್ನು, ನನ್ನ ಆತ್ಮೀಯರ ಕಣ್ಣೀರನ್ನು ಬಾಚಿಕೊಳ್ಳಬೇಡಿ ಅಥವಾ ವಿಭಜಿಸಬೇಡಿ ಸತ್ತವರೆಲ್ಲರೂ ನನ್ನವರು, ನಮ್ಮವರು …ನಷ್ಟವಾದದ್ದು ಕಾಶ್ಮೀರಕ್ಕೆ, ಕಾಶ್ಮೀರದ ಅಸ್ಮಿತೆಗೆ, ಕಾಶ್ಮೀರದ ಜೀವನ ಮಾರ್ಗಕ್ಕೆ– ಎಲ್ಲಿಯವರೆಗೆ ನಾವು ಒಟ್ಟಿಗೆ ಬರುವುದಿಲ್ಲವೋ, ಮತ್ತು ನಮ್ಮ ಮನೆಯನ್ನು ಸರಿಯಾಗಿ ಹೊಂದಿಸುವುದಿಲ್ಲವೋ (ಅಲ್ಲಿಯ ವರೆಗೂ).
ಕೊನೆಯಲ್ಲಿ, (ಕವನವೊಂದರಲ್ಲಿ ಹೇಳಿರುವಂತೆ) ‘ಈ ದುಃಖವು ನಿನ್ನದೂ ಅಲ್ಲ, ನನ್ನದೂ ಅಲ್ಲ, ಅದು
ನಮ್ಮದು ಗೆಳೆಯಾ!’ ಈ ದುಃಖವು ಕಾಶ್ಮೀರಿ ಪಂಡಿತರಿಗೆ, ಸಿಖ್ಖರಿಗೆ, ಮುಸ್ಲಿಮರಿಗೆ, ಪತ್ರಿಕಾ ಸಂಪಾದಕರುಗಳಿಗೆ, ಪತ್ರಕರ್ತರಿಗೆ, ವಕೀಲರಿಗೆ, ಸಾಮಾನ್ಯ ಕಾರ್ಮಿಕರಿಗೆ, ಸಾಮಾನ್ಯ ಬಡಜನರಿಗೆ, ನನ್ನ ಸೋದರಿಯವರಿಗೆ ಸೇರಿದ್ದು.
ನಮ್ಮ ಕಣ್ಣೀರುಗಳನ್ನು ಒಡೆಯಬೇಡಿ.