ಸರ್ಕಾರಗಳು ಜಾರಿಗೊಳಿಸುತ್ತಿರುವ ಜನ ವಿರೋಧಿ ಕಾಯ್ದೆಗಳ ವಾಪಸ್ಸಿಗೆ ಆಗ್ರಹಿಸಿ ಎಡ-ಪ್ರಜಾಸತ್ತಾತ್ಮಕ ಪಕ್ಷಗಳ ಪ್ರತಿಭಟನೆ

ಬೆಂಗಳೂರು: ಜನ ವಿರೋಧಿ ಕಾಯ್ದೆಗಳನ್ನು ಕೂಡಲೇ ವಾಪಸ್ಸು ಪಡೆಯಬೇಕೆಂದು, ಸಮಸ್ತ ಜನತೆಯ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಎಡ ಹಾಗೂ ಪ್ರಜಾಸತ್ತಾತ್ಮಕ ಪಕ್ಷಗಳು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಇಂದು(ಆಗಸ್ಟ್‌ 24) ಪ್ರತಿಭಟನೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಅತ್ಯಂತ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಇದರ ಭಾಗವಾಗಿ ಜನತೆಗೆ ವಿರುದ್ಧವಾಗಿರುವ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ. ಇದರಿಂದ ರೈತರು, ಕಾರ್ಮಿಕರು, ಹೈನೋದ್ಯಮ, ಸಾಮಾನ್ಯ ಜನತೆ, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು ಸೇರಿದಂತೆ ಸಮಸ್ತ ಜನಸಮುದಾಯ ಸಂಕಷ್ಟಕ್ಕ ಈಡಾಗಿದ್ದಾರೆ ಎಂದು ಪ್ರತಿಭಟನೆಕಾರರು ಆರೋಪಿಸಿದರು.

ದೇಶ ಹಾಗೂ ರಾಜ್ಯದಲ್ಲಿ ಆಡಳಿತದ ವೈಖರಿಯಿಂದಾಗಿ ಜನತೆಯನ್ನು ಉತ್ತಮ ಬದುಕಿಗೆ, ನೆಮ್ಮದಿಯ ಬದುಕಿಗೆ ಕೊಂಡೊಯ್ಯುವ ಯಾವ ಕಿಂಚಿತ್ತೂ ಪ್ರಯತ್ನಗಳನ್ನು ಮಾಡಲಾಗಿದೆ. ಒಂದೆಡೆ ಜನವಿರೋಧಿ ನೀತಿಗಳ ಜಾರಿ ಮತ್ತೊಂದೆಡೆ ಕೋಮು ದಳ್ಳುರಿ ಜ್ವಾಲೆಯಿಂದಾಗಿ ಜನತೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಪ್ರತಿಭಟನೆಕಾರರು ಸರಕಾರದ ವಿರುದ್ಧ ಕಿಡಿ ಕಾರಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಅವರು, ಬಿಜೆಪಿ ಪಕ್ಷವು ಚುನಾವಣೆಯಲ್ಲಿ ಭರವಸೆ ನೀಡಿದಂತೆ ದೇಶದ ಎಲ್ಲ ಜನತೆಗೆ ಶುಭ ದಿನಗಳು, ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿ, ಕಪ್ಪು ಹಣ ಹೊರಗೆಳೆದು ಎಲ್ಲರ ಬ್ಯಾಂಕ್ ಖಾತೆಗೆ ತಲಾ 15 ಲಕ್ಷ ರೂ. ನೀಡುವುದಾಗಿ ಹೇಳಿ ಅಧಿಕಾರ ಪಡೆದು ಕೇಂದ್ರ ಹಾಗೂ ರಾಜ್ಯ ಸರಕಾರಗಳು ದೇಶ ಹಾಗೂ ರಾಜ್ಯದ ಮೇಲೆ ನವಉದಾರೀಕರಣದ ಆರ್ಥಿಕ ನೀತಿಗಳು ಹಾಗೂ ಹಿಂದುತ್ವವಾದವನ್ನ ಹೇರುತ್ತಿವೆ. ಈ ನಡೆಗಳು ಈಗಾಗಲೇ ಸಂಕಷ್ಠದಲ್ಲಿರುವ ದೇಶ ಮತ್ತು ರಾಜ್ಯದ ಜನತೆಯನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡುತ್ತಿವೆ ಎಂದರು.

ಒಕ್ಕೂಟ ಸರ್ಕಾರ ಹಾಗೂ ರಾಜ್ಯ ಸರಕಾರಗಳ ಈ ಜನ ವಿರೋಧಿ ನೀತಿಗಳನ್ನು ನಾವು ಒಟ್ಟಾಗಿ ಖಂಡಿಸುತ್ತವೆ ಮತ್ತು ಈ ಕೂಡಲೇ ಅಂತಹ ನೀತಿಗಳನ್ನು ವಾಪಾಸು ಪಡೆದು ಜನರ ತಲಾ ಆದಾಯ ಹೆಚ್ಚಿಸುವ ದಿಸೆಯಲ್ಲಿ ಕ್ರಮವಹಿಸಲು ಒತ್ತಾಯಿಸುತ್ತವೆ ಎಂದರು.

ಒಕ್ಕೂಟ ಸರಕಾರ ವಿದ್ಯುತ್ ರಂಗದ ಖಾಸಗೀಕರಣಕ್ಕಾಗಿ ವಿದ್ಯುತ್ ಮಸೂದೆಯನ್ನು ದೇಶದ ಜನತೆಯ ತೀವ್ರ ವಿರೋಧದ ನಡುವೆ ಪಾರ್ಲಿಮೆಂಟಿನಲ್ಲಿ ಮಂಡಿಸಿದೆ. ಇದು ಒಂದು ಕಡೆ ತೀವ್ರ ವಿದ್ಯುತ್ ದರ ಏರಿಕೆ ಉಂಟು ಮಾಡಿದರೇ ಮತ್ತೊಂದು ಕಡೆ ಕ್ರಾಸ್ ಸಹಾಯಧನದ ಮೂಲಕ ವಿದ್ಯುತ್ ಪಡೆಯುವ ಬಡವರ ಭಾಗ್ಯ ಜ್ಯೋತಿ, ಕುಠೀರ ಜ್ಯೋತಿ ಇಲ್ಲವಾಗಿಸಿ ಅವರ ಮನೆಗಳನ್ನು ಕತ್ತಲಾಗಿಸಿದರೇ, ರೈತರು ನೀರಾವರಿ ಪಂಪ್ ಸೆಟ್‌ಗಳನ್ನು ಬಳಸದಂತೆ ಮತ್ತು ಸಣ್ಣ ಕೈಗಾರಿಕೆಗಳು ಮುಚ್ಚುವಂತೆ ಕ್ರಮವಹಿಸುತ್ತದೆ.

ಪೆಟ್ರೋಲ್, ಡೀಸೆಲ್, ಗ್ಯಾಸ್, ಔಷಧಿ ಮತ್ತು ಆಹಾರ ಧಾನ್ಯಗಳ ಹಾಗೂ ಎಲ್ಲ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿರುವಾಗಲೇ ಮತ್ತೆ ಅಕ್ಕಿ, ಬೆಲ್ಲ ಮೊಸರು, ಮಜ್ಜಿಗೆ ಮುಂತಾದವುಗಳ ಮೇಲೆ ಭಾರೀ ಪ್ರಮಾಣದ ಜಿಎಸ್‌ಟಿಯನ್ನು ಹೇರಿದೆ.

ಕರ್ನಾಟಕ ಸರಕಾರವು, ದಲಿತರು ಮಹಿಳೆಯರು ಮತ್ತು ಶೂದ್ರ ಹಾಗೂ ಹಿಂದುಳಿದ ವರ್ಗದ ಸಮುದಾಯಗಳ ಬಡವರನ್ನು ಶಿಕ್ಷಣದಿಂದ ಹೊರ ದೂಡುವ ಒಕ್ಕೂಟ ಸರಕಾರದ ಸಾರ್ವಜನಿಕ ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಿಸುವ ಮತ್ತು ಶಿಕ್ಷಣವನ್ನು ಕೋಮುವಾದಿಕರಿಸುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿದೆ. ಅದಾಗಲೇ 13,800 ಶಾಲೆಗಳನ್ನು ಮುಚ್ವಲು ಕ್ರಮವಹಿಸಿದೆ. ಶಿಶುಗಳ ಅಂಗನವಾಡಿ ಕೇಂದ್ರಗಳನ್ನು ಕೈ ಬಿಡಲು ಯೋಜಿಸಲಾಗಿದೆ.

ಅದಾಗಲೇ ಒಕ್ಕೂಟ ಸರಕಾರ ರೈತರ ಪ್ರತಿಭಟನೆಗೆ ಮಣಿದು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಾಸು ಪಡೆದಿದ್ದರೂ ಕರ್ನಾಟಕ ಸರಕಾರ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ – 2020, ಎಪಿಎಂಸಿ ತಿದ್ದುಪಡಿ ಕಾಯ್ದೆ – 2020 ಮತ್ತು ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ – 2020 ಅವುಗಳನ್ನು ಜಾರಿಗೊಳಿಸುವ ಮೂಲಕ ಕೃಷಿ ರಂಗ ಮತ್ತು ಹೈನೋದ್ಯಮ, ಮಾಂಸೋದ್ಯಮ ಹಾಗು ಚರ್ಮೋದ್ಯಮಗಳನ್ನು ಕಾರ್ಪೋರೇಟ್ ಕಂಪನಿಗಳ ಲೂಟಿಗೆ ತೆರೆದಿದೆ. ಇದೀಗ ಹೊಸ ಜಲ ನೀತಿಯ ಮೂಲಕ ಕುಡಿಯುವ ನೀರು ಹಾಗೂ ನೀರಾವರಿಯನ್ನು ಖಾಸಗೀಕರಿಸುವ ಮತ್ತು ಮೀಟರ್ ಅಳವಡಿಸಿ ದುಬಾರಿ ಬಿಲ್ ವಸೂಲಿ ಮಾಡಲು ಕ್ರಮವಹಿಸಿದೆ.

ಮತಾಂತರ ಹಾಗೂ ಅಂತರ್ಜಾತೀಯ ವಿವಾಹಗಳನ್ನು ನಿಷೇಧಿಸುವ ಮತ್ತು ಜಾತಿ ಹಾಗೂ ಲಿಂಗ ತಾರತಮ್ಯ ಮತ್ತು ಅಸ್ಪೃಶ್ಯಾಚರಣೆ ಮುಂದುವರೆಸುವಂತೆ ಒತ್ತಾಯಿಸುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ ಸಂರಕ್ಷಣೆಯ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿದೆ. ಇವುಗಳಲ್ಲದೇ ರಾಜ್ಯ ಸರಕಾರವೇ ಬಹಿರಂಗವಾಗಿ ಧಾರ್ಮಿಕ ಅಸಹಿಷ್ಣುತೆಯನ್ನು ಮೆರೆಯುತ್ತಿದೆ.

ಸ್ವತಃ ತಾವು ಕೋಮುದ್ವೇಷದಿಂದ ಕೊಲ್ಲಲ್ಪಟ್ಟ ಹಿಂದುತ್ವವಾದಿಗಳ ಮನೆಗೆ ಭೇಟಿ ನೀಡಿ 25 ಲಕ್ಷ ರೂ.ಗಳ ಪರಿಹಾರ ನೀಡುತ್ತೀರಿ. ಆದರೇ, ಅದೇ ಕೋಮುದ್ವೇಷದಿಂದ ಕೊಲ್ಲಲ್ಪಟ್ಟ ಮುಸ್ಲಿಂ ಯುವಕರ ಮನೆಗೆ ಭೇಟಿ ಹಾಗೂ ಪರಿಹಾರವನ್ನು ನೀಡುವುದಿಲ್ಲ.

ಗುಜರಾತ್ ಸರಕಾರ ಬಿಲ್ಕಿಸ್‌ ಬಾನೊ ಪ್ರಕರಣದ ಅತ್ಯಾಚಾರಿ ಆರೋಪಿಗಳನ್ನು ಬಿಡುಗಡೆ ಮಾಡುವ ಉದ್ಧಟತನ ತೋರಿದೆ. ರಾಜಾಸ್ಥಾನದಲ್ಲಿ ದಲಿತ ಬಾಲಕನೊಬ್ಬ ನೀರು ಕುಡಿದ ಅಪರಾಧಕ್ಕೆ ಶಿಕ್ಷಕನಿಂದಲೇ ಕೊಲ್ಲಲ್ಪಟ್ಟಿದ್ದಾನೆ. ಮಾನವ ಹಕ್ಕುಗಳಿಗಾಗಿ ಹೋರಾಟದಲ್ಲಿ ತೊಡಗಿದವರನ್ನು ಸಕಾರಣವಿಲ್ಲದೇ ಬಂಧಿಸಿ ಜೈಲಿನಲ್ಲಿಡುವ ಕೆಲಸವನ್ನು ಒಕ್ಕೂಟ ಸರಕಾರ ಮುಂದುವರೆಸಿದೆ.

ಆದ್ದರಿಂದ ಇಂತಹ ಎಲ್ಲ ಜನ ವಿರೋಧಿ ನೀತಿಗಳನ್ನು ತಕ್ಷಣವೇ ವಾಪಾಸು ಪಡೆಯುವಂತೆ ಹಾಗೂ ಕೆಳಕಂಡ ಹಕ್ಕೊತ್ತಾಯಗಳನ್ನು ಪರಿಗಣಿಸುವಂತೆ ನಿಮ್ಮ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಪ್ರತಿಭಟನೆಯ ಭಾಗವಾಗಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಕೆ ಮಾಡಿರುವ ಮನವಿ ಪತ್ರದಲ್ಲಿ ಈ ಕೆಳಗಿನ ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂದು ಆಗ್ರಹಿಸಲಾಯಿತು.

  1. ರಾಜ್ಯದ ರೈತರ, ಕೂಲಿಕಾರರ ಮತ್ತು ಮೈಕ್ರೋ ಫೈನಾನ್ಸ್‌ ಸಂಸ್ಥೆಗಳ ಮಹಿಳೆಯರ ಖಾಸಗೀಯದ್ದು ಸೇರಿ ಎಲ್ಲ ಸಾಲ ಮನ್ನಾ ಮಾಡಬೇಕು ಮತ್ತು ಋಣ ಮುಕ್ತ ಕಾಯ್ದೆ ಜಾರಿಗೊಳಿಸಬೇಕು. ರೈತರ ಬೆಳೆಗೆ ಬೆಂಬಲ ಬೆಲೆ ಖಾತರಿ ಕಾಯ್ದೆ ಜಾರಿಗೊಳಿಸಿರಿ.
  2. ಬಡ ನಿವೇಶನ ಹಾಗೂ ಮನೆ ರಹಿತರಿಗೆ ಹಿತ್ತಲು ಹಾಗೂ ನಿವೇಶನ ಸಹಿತ ಪಕ್ಕಾ ಮನೆ ಒದಗಿಸಿರಿ. ದಲಿತರು ಮತ್ತು ಉಳುವವರಿಗೆ ಭೂಮಿ ನೀಡುವಂತೆ ಭೂ ಸುಧಾರಣಾ ಕಾಯ್ದೆ ಜಾರಿಗೊಳಿಸಿರಿ, ಬಗರ್ ಹುಕುಂ ಹಾಗೂ ಅರಣ್ಯ ಭೂಮಿ ಬಡ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿರಿ. ಬಲವಂತದ ಭೂ ಸ್ವಾಧೀನ ನಿಲ್ಲಿಸಿರಿ. ಭೂ ಸ್ವಾಧೀನ ಮಾಡಿ ಕೈಗಾರಿಕೆ ಸ್ಥಾಪಿಸದ ಜಮೀನು ವಾಪಾಸುಕೊಡಿ ಇಲ್ಲವೇ ಪ್ರತಿ ಭೂ ಸಂತ್ರಸ್ಥರಿಗೆ ಮಾಸಿಕ ತಲಾ 20 ಸಾವಿರ ರೂ ಉದ್ಯೋಗ ಪರಿಹಾರ ಒದಗಿಸಿರಿ.
  3. ಉದ್ಯೋಗ ಖಾತ್ರಿ ಯೋಜನೆಯನ್ನು ತಲಾ 200 ದಿನಗಳಿಗೆ ಮತ್ತು ನಗರ ಪ್ರದೇಶಕ್ಕೂ ವಿಸ್ತರಿಸಿರಿ ಹಾಗೂ ಕೂಲಿಯನ್ನು 750 ರೂ.ಗಳಿಗೆ ಹೆಚ್ಚಿಸಿರಿ. ಬಾಕಿ ವೇತನ ಬಿಡುಗಡೆ ಮಾಡಿರಿ.
  4. ಕಾರ್ಮಿಕರ ಕನಿಷ್ಠ ಮಾಸಿಕ ವೇತನ 27,000 ರೂ.ಗಳಿಗೆ ಹೆಚ್ಚಿಸಿರಿ ಹಾಗೂ ಸ್ಕೀಮುಗಳಲ್ಲಿ ಮತ್ತು ಗುತ್ತಿಗೆ ಆಧಾರದಲ್ಲಿ ದುಡಿಯುವ ಕಾರ್ಮಿಕರಿಗೆ ಖಾಯಂ ಉದ್ಯೋಗ ಒದಗಿಸಿರಿ. ಸಾರ್ವಜನಿಕ ಉದ್ದಿಮೆಗಳ ಮತ್ತು ಸಂಸ್ಥೆಗಳ ಖಾಸಗೀಕರಣ ತಡೆಯಿರಿ.
  5. ಸಾರ್ವಜನಿಕ ಶಿಕ್ಷಣ ಕ್ಷೇತ್ರವನ್ನು ಬಲಪಡಿಸಿರಿ ಮತ್ತು 13,400 ಶಾಲೆಗಳ ಮುಚ್ಚುವುದನ್ನು ರದ್ದುಪಡಿಸಿ. ಪಠ್ಯ ಪುಸ್ತಕಗಳ ಪರಿಷ್ಕರಣೆ ಹೆಸರಿನ ಕೋಮುವಾದೀಕರಣ ತಡೆಯಿರಿ.
  6. ಒಕ್ಕೂಟ ಹಾಗೂ ರಾಜ್ಯ ಸರಕಾರಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿರಿ. ಉದ್ಯೋಗ ದೊರೆಯುವವರೆಗೆ ಎಲ್ಲ ವಿದ್ಯಾವಂತ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ಮಾಸಿಕ ತಲಾ 10,000 ಒದಗಿಸಿರಿ.
  7. ಕೋಮು ದ್ವೇಶದಿಂದ ಕೊಲ್ಲಲ್ಪಟ್ಟ ಮುಸ್ಲಿಂ ಯುವಜನರ ಕುಟುಂಬಗಳಿಗೂ ಪರಿಹಾರ ಒದಗಿಸಬೇಕು. ತಾರತಮ್ಯ ನಿಲ್ಲಿಸಬೇಕು. ಬಿಲ್ಕಿಸ್‌ ಬಾನೊ ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಿದ್ದನ್ನು ಕೂಡಲೇ ವಾಪಾಸು ಪಡೆಯಬೇಕು.
  8. ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಮತ್ತು ರಸಾಯನಿಕ ಗೊಬ್ಬರ, ಬೀಜ, ಕ್ರಿಮಿನಾಶಕ, ಎಲ್ಲ ಔಷಧಿ ಬೆಲೆಗಳನ್ನು ಇಳಿಸಿರಿ. ಆಹಾರ ಪದಾರ್ಥಗಳ ಮೇಲಿನ ಜಿಎಸ್‌ಟಿ ವಾಪಾಸು ಪಡೆಯಿರಿ.
  9. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಉಪ ಯೋಜನೆಗಳ ಹಣದ ದುರುಪಯೋಗ ನಿಲ್ಲಿಸಿರಿ. ಇವರ ಜನ ಸಂಖ್ಯೆಗನುಗುಣವಾದ ಮೀಸಲಾತಿ ಸೌಲಭ್ಯ ಹೆಚ್ಚಿಸಿರಿ. ರಾಜಸ್ಥಾನದಲ್ಲಿ ಜಾತಿ ತಾರತಮ್ಯಕ್ಕೆ ಬಲಿಯಾದ ದಲಿತ ಬಾಲಕನಿಗೆ ನ್ಯಾಯ ದೊರೆಯಬೇಕು. ಅಪರಾಧಿಗೆ ಕಠಿಣ ಶಿಕ್ಷೆ ದೊರೆಯಬೇಕು. ಮಹಿಳೆಯರ ಜನಸಂಖ್ಯೆಗನುಗುಣವಾಗಿ ಮಹಿಳಾ ಸಬಲೀಕರಣದ ಅನುದಾನ ಒದಗಿಸಿರಿ. ಚುನಾಯಿತ ಸಂಸ್ಥೆಗಳಲ್ಲಿ ಶೇ 33 ಮೀಸಲಾತಿ ಜಾರಿಗೆ ತನ್ನಿ.
  10. ವೃದ್ಧರು, ಅಂಗವಿಕಲರ, ಗಂಡ ಸತ್ತ ಹಾಗೂ ದೇವದಾಸಿ ಮುಂತಾದವರ ಸಾಮಾಜಿಕ ಮಾಸಿಕ ಪಿಂಚಣಿಯನ್ನು ಕನಿಷ್ಠ 3,000 ರೂ.ಗಳಿಗೆ ಹೆಚ್ಚಿಸಿರಿ.

ಪ್ರತಿಭಟನೆಯಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಭಾರತ ಕಮ್ಯುನಿಸ್ಟ್ ಪಕ್ಷ-ಸಿಪಿಐ,  ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯ (ಕಮ್ಯೂನಿಸ್ಟ್‌)-ಎಸ್‌ಯುಸಿಐ(ಸಿ), ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ, ಲೆನಿನ್ ವಾದಿ – ಲಿಬರೇಷನ್)-ಸಿಪಿಐ(ಎಂಎಲ್‌), ಅಖಿಲ ಭಾರತ ಫಾರ್ವರ್ಡ್ ಬ್ಲಾಕ್- ಎಐಎಫ್‌ಬಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ-ಆರ್‌ಪಿಐ, ಸ್ವರಾಜ್ ಇಂಡಿಯಾ ಪಕ್ಷಗಳ ರಾಜ್ಯ ಘಟಕದ ಮುಖಂಡರು-ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತಿಭಟನೆಯ ನೇತೃತ್ವವನ್ನು ಯು. ಬಸವರಾಜ, ಕಾರ್ಯದರ್ಶಿ-ಸಿಪಿಐ(ಎಂ), ಸಾತಿ ಸುಂದರೇಶ್, ಕಾರ್ಯದರ್ಶಿ, ಸಿಪಿಐ, ಕೆ. ಉಮಾ, ಕಾರ್ಯದರ್ಶಿ, ಎಸ್‌ಯುಸಿಐ(ಸಿ), ಕ್ಲಿಫ್ಟನ್ ಡಿ ರೋಜಾರಿಯೋ, ಕಾರ್ಯದರ್ಶಿ ಸಿಪಿಐ(ಎಂಎಲ್‌), ಜಿ.ಆರ್. ಶಿವಶಂಕರ್, ಕಾರ್ಯದರ್ಶಿ ಎಐಎಫ್‌ಬಿ, ಚಾಮರಸ ಮಾಲೀ ಪಾಟೀಲ, ಗೌರವಾಧ್ಯಕ್ಷರು, ಸ್ವರಾಜ್‌ ಇಂಡಿಯಾ, ಮೋಹನ್ ರಾಜ್, ಅಧ್ಯಕ್ಷರು, ಆರ್‌ಪಿಐ ಇವರುಗಳು ವಹಿಸಿಕೊಂಡಿದ್ದರು.

Donate Janashakthi Media

Leave a Reply

Your email address will not be published. Required fields are marked *