ಜನ ಸಾಹಿತ್ಯ ಸಮ್ಮೇಳನಕ್ಕೆ ಬೆಂಬಲ ಸೂಚಿಸಿದ ಜಾಗೃತ ನಾಗರಿಕರು ಕರ್ನಾಟಕ

ಬೆಂಗಳೂರು :  ಜನವರಿ 8 ರ ಜನ ಸಾಹಿತ್ಯ ಸಮ್ಮೇಳನಕ್ಕೆಜಾಗೃತ ನಾಗರಿಕರು ಕರ್ನಾಟಕ ಬೆಂಬಲವನ್ನು ಸೂಚಿಸಿದೆ. ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳಿಗೆ ಕ.ಸಾ.ಪ ವನ್ನು ಕನ್ನಡದ ಕೂಡಿ ಬಾಳುವ ಪರಂಪರೆಗೆ ಧಕ್ಕೆ ತರುವ ಕೆಲಸ ಮಾಡದಂತೆ ಕಾಪಾಡಲು  ಕ್ರಮ ವಹಿಸಲು ಕೋರಿ ಬಹಿರಂಗ ಪತ್ರವನ್ನು ಬರೆಯಲಾಗಿದೆ.

ಹಾವೇರಿ ಸಾಹಿತ್ಯ ಸಮ್ಮೇಳನದ ನ್ಯೂನತೆಗಳನ್ನು ಪ್ರಶ್ನಿಸಿ ಅನೇಕ ಬರಹಗಾರರು, ಚಿಂತಕರು, ಈ ಸಮ್ಮೇಳನದ ರೂಪುರೇಷೆ ಹಾಗೂ ಅಧ್ಯಕ್ಷರ ನಿಲುವು ನಡೆಗಳ ಬಗ್ಗೆ ತಮ್ಮ ವಿರೋಧವನ್ನು ವ್ಯಕ್ತ ಪಡಿಸಿದ್ದಾರೆ. ಈ ಯಾವುದೇ ಆಕ್ಷೇಪಣೇಗಳು ಮತ್ತು ವಿರೋಧ ಯಾವುದೇ ವೈಯಕ್ತಿಕ ನೆಲೆಯಿಂದ ಅಥವಾ ಪಕ್ಷ ಸಿದ್ದಾಂತದ ನೆಲೆಯಿಂದ ಬಂದವುಗಳಲ್ಲ. ಬರಹಗಾರರಾಗಿ, ಕನ್ನಡದ ಚಿಂತಕರಾಗಿ, ಹಾಗೂ ಕನ್ನಡ ಭಾಷೆ, ಸಂಸ್ಕೃತಿ,ಹಾಗೂ ಸಾಹಿತ್ಯಗಳ ಬಗ್ಗೆ ಗಂಭೀರ ಕಾಳಜಿ ಉಳ್ಳವರಾಗಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ದಿನಾಂಕ 8 ಜನವರಿಯಂದು ಬೆಂಗಳೂರಿನಲ್ಲಿ ಜನ ಪರ ನಿಲುವಿನ ಜನ ಸಾಹಿತ್ಯ ಸಮ್ಮೇಳನವನ್ನೂ ನಡೆಸುತ್ತಿದ್ದಾರೆ. ನಾವು ಅವರ ನಿಲುವುಗಳನ್ನು ಬೆಂಬಲಿಸುತ್ತಿದ್ದೇವೆ ಎಂದು ಪ್ರೊ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಡಾ .ಎಸ್.ಜಿ.ಸಿದ್ದರಾಮಯ್ಯ, ಡಾ.ವಿಜಯಾ,ಡಾ.ಬಂಜಗೆರೆ ಜಯಪ್ರಕಾಶ್, ವಿಮಲಾ.ಕೆ.ಎಸ್, ಡಾ.ಎನ್.ಗಾಯತ್ರಿ ಸೇರಿದಂತೆ 15 ಜನರ ಸಹಿಯೊಂದಿಗೆ ತಿಳಿಸಿದ್ದಾರೆ.

ಇದನ್ನೂ ಓದಿ : “ಧೀರ ಟಿಪ್ಪುವಿನ ಲಾವಣಿಗಳು” ಜನವರಿ 8 ರಂದು ‘ಜನಸಾಹಿತ್ಯ ಸಮ್ಮೇಳನ’ದಲ್ಲಿ ಬಿಡುಗಡೆಯಾಗಲಿದೆ.

ಇಂದಿನ ಸಂದರ್ಭದಲ್ಲಿ ಪ್ರಜಾಪ್ರಭುತ್ವವಾದೀ ಸಂಸ್ಥೆಗಳನ್ನು ನಿಷ್ಕ್ರಿಯಗೊಳಿಸುವ ಪ್ರಯತ್ನಗಳು ಸತತವಾಗಿ ನಡೆಯುತ್ತಿವೆ. ಇದಕ್ಕೆ ಸಮಾನಾಂತರವಾಗಿ ಸಾಂಸ್ಕೃತಿಕ ಸಂಸ್ಥೆಗಳ ಮೇಲೆ ಕರ್ನಾಟಕದಲ್ಲಿ ಬೆಂಬಲಿತವಾದ ಆಕ್ರಮಣಗಳು ನಡೆದಿವೆ. ಮುಖ್ಯವಾಗಿ ಶಿಕ್ಷಣ, ಸಾಹಿತ್ಯ,ಹಾಗೂ ಸಾಂಸ್ಕೃತಿಕ ವಲಯಗಳ ಮೇಲೆ ಇವು ನಡೆದಿವೆ. ಹಾವೇರಿ ಸಮ್ಮೇಳನವನ್ನು ಇಂಥದ್ದೇ ದುರುದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎನ್ನುವುದರ ಬಗ್ಗೆ ನಮಗೆ ಸಂದೇಹವಿಲ್ಲ. ನಮ್ಮ ದೃಷ್ಟಿಯಲ್ಲಿ ಸಾಹಿತ್ಯವು ಯಾವಾಗಲೂ ಜನಪಪರವಾದ, ಪ್ರಜಾಪ್ರಭುತ್ವವಾದಿಯಾದ, ಮೌಲ್ಯಗಳನ್ನು ಪ್ರತಿನಿಧಿಸುತ್ತದೆ. ಈ ಮೌಲ್ಯಗಳ ಜೀವನಾಡಿಯಾದ ಸಂವಿಧಾನವನ್ನು ಬೆಂಬಲಿಸುತ್ತದೆ ಎಂದಿದ್ದಾರೆ.

ಹಾವೇರಿ ಸಮ್ಮೇಳನವು ಅಲ್ಪಸಂಖ್ಯಾತರ, ದ್ವೇಶ, ಕನ್ನಡ ಪರಂಪರೆಗಳ ಅವಗಣನೆಯ ಉದ್ದೇಶ ಹೊಂದಿದೆ. ಬರಹಗಾರರ ಆಕ್ಷೇಪಣೆಗಳಿಂದಾಗಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ ಎಂದು ಯಾರೂ ನಿರೀಕ್ಷಿಸಿರಲೂ ಇಲ್ಲ. ನಿರೀಕ್ಷೆಯಂತೇ ಅವರು ಉಡಾಫೆ, ಸ್ವಸಮರ್ಥನೆ,ಸುಳ್ಳುಗಳಿಂದ ಕೂಡಿದ ಹೇಳಿಕೆಗಳನ್ನು ನೀಡಿದ್ದಾರೆ. ಪ್ರಗತಿಪರರನ್ನು ಹೀಯಾಳಿಸಿದ್ದಾರೆ. ಬಲಪಂಥೀಯ ಧೋರಣೆಗೆ ಅನುಗುಣವಾಗಿ ತಮ್ಮ ನಾಲಗೆ ಹರಿಬಿಟ್ಟಿದ್ದಾರೆ. ತಾವೇ ಕನ್ನಡದ ಏಕೈಕ ಪ್ರತಿನಿಧಿ ಎನ್ನುವ ಮಾನಸಿಕ ವಿಕಲ್ಪವನ್ನು ತೋರಿಸಿದ್ದಾರೆ. ತಮ್ಮ ಕುತ್ಸಿತ ಹಾಗೂ ಅಲ್ಪ ಮತೀಯ ಆರ್ಭಟದ ಮಾತುಗಳಿಂದ ಬರಹಗಾರರು ಹೆದರಿ ಹಿಂದೆ ಸರಿಯುತ್ತಾರೆ ಎನ್ನುವ ಭ್ರಮೆಯಲ್ಲಿದ್ದಾರೆ.

ಇದನ್ನೂ ಓದಿಸಾಹಿತ್ಯ ಸಮ್ಮೇಳನದಲ್ಲಿ ತಾರತಮ್ಯ : ಕವಿಗೋಷ್ಠಿಯಿಂದ ಹಿಂದೆ ಸರಿದ ಕವಿಗಳು

ಜನವರಿ 8 ರ ಪ್ರತಿರೋಧ ಸಮಾವೇಶ ಕೇವಲ ಶುರುವಾಯಿತು ಅಷ್ಟೆ. ಕರ್ನಾಟಕದ ಜನ ಸಾಮಾನ್ಯರು ಕಟ್ಟಿದ ಸಾಹಿತ್ಯ ಪರಿಷತ್ತನ್ನು ಮನುಷ್ಯ ವಿರೋಧೀ ಸಿದ್ದಾಂತ ಹಾಗು ಕ್ರಿಯೆಗಳಿಂದ ಶುದ್ಧಗೊಳಿಸಿ ಅದು ಕನ್ನಡ ಪರಂಪರೆಯ ಬಹುತ್ವ, ಜಾತ್ಯಾತೀತ,ಧರ್ಮಾತೀತ, ಮಾನವೀಯ ಕಾಳಜಿಗಳನ್ನು ಹೊಂದಿದ ಸಂಸ್ಥೆಯಾಗಿ ಮುಂದುವರೆಯುವಂತೆ ಕಾಪಾಡಲು ಬರಹಗಾರರು ಸನ್ನದ್ಧರಾಗಿದ್ದಾರೆ. ಅಧ್ಯಕ್ಷರ ಹೇಳಿಕೆಗಳನ್ನು ಅತ್ಯಂತ ಮರುಕ ಹಾಗೂ ಕರುಣೆಯಿಂದ ನಾವು ಗಮನಿಸಿದ್ದೇವೆ. ಆದರೆ ಸಧ್ಯದ ಸಂದರ್ಭದಲ್ಲಿ ಅವುಗಳನ್ನು ತೀವ್ರವಾಗಿ ಖಂಡಿಸುವುದು ನಮ್ಮ ನೈತಿಕ ಜವಾಬ್ದಾರಿಯೆಂದು ತಿಳಿದು ಈ ಹೇಳಿಕೆಯನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇದೇ ವೇಳೆಗೆ ರಾಜ್ಯದ ಇತರ ಜಿಲ್ಲೆಗಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಮತ್ತು ಸದಸ್ಯರುಗಳು ಕನ್ನಡ ಸಾಹಿತ್ಯ ಪರಿಷತ್ತಿನ ಇಂದಿನ ಅಧ್ಯಕ್ಷರ ಈ ಕನ್ನಡದ ಕೂಡು ಬಾಳ್ವಿಕೆಯ ಪರಂಪರೆಗೆ ವಿರೋಧವಾದ ನಡೆಯನ್ನು ವಿರೋಧಿಸಿ ಜಾತ್ಯತೀತ, ಮತ ನಿರಪೇಕ್ಷ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಉಳಿಸಿ ಬೆಳೆಸಲು ಮುಂದಾಗಬೇಕೆಂದು ವಿನಂತಿಸಿದ್ದಾರೆ.

ಪ್ರೊ.ರಾಜೇಂದ್ರ ಚೆನ್ನಿ, ಬಿ.ಶ್ರೀಪಾದ ಭಟ್, ಎನ್.ಆರ್.ವಿಶುಕುಮಾರ್, ಟಿ.ಸುರೇಂದ್ರ ರಾವ್, ಕೆ.ನೀಲಾ, ಡಾ.ಮೀನಾಕ್ಷಿ ಬಾಳಿ, ಬಿ.ಎನ್.ಯೋಗಾನಂದ,  ಎನ್.ಕೆ.ವಸಂತ್ ರಾಜ್ ಬೆಂಬಲ ಸೂಚಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *