ದೆಹಲಿಯ ಸಂಡೇ ಗಾರ್ಡಿಯನ್ ಇಂಗ್ಲೀಷ್ ಪತ್ರಿಕೆಯ ಪಂಕಜ್ ವೋರಾ
ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸಂದರ್ಶಿಸಿದ್ದು,
ಸಂದರ್ಶನದ ಕನ್ನಡಾನುವಾದ ಇಲ್ಲಿದೆ:
ಪ್ರಶ್ನೆ: ಕಳೆದ ಮಂಗಳವಾರ ನೀವು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಸುಮಾರು 40 ನಿಮಿಷ ಮಾತುಕತೆ ನಡೆಸಿದ್ದೀರಿ. ಕಾಂಗ್ರೆಸ್ ಪಕ್ಷದ ಭವಿಷ್ಯದ ನೀಲಿನಕ್ಷೆ ನಿಮ್ಮ ಮಾತುಕತೆಯ ಅಜೆಂಡಾ ಆಗಿತ್ತೇ?
ಸಿದ್ದರಾಮಯ್ಯ: ಸೋನಿಯಾ ಗಾಂಧಿಯವರನ್ನು ಕಳೆದ ಹದಿನೈದು ವರ್ಷಗಳಲ್ಲಿ ಹಲವು ಬಾರಿ ಭೇಟಿ ಮಾಡಿದ್ದೇನೆ. ಅವರೆಂದೂ ನನಗೆ ಒಬ್ಬ ರಾಜಕಾರಣಿಯಂತೆ ಕಂಡಿಲ್ಲ, ಪ್ರತಿ ಬಾರಿ ದೇಶದ ಜನ ಮತ್ತು ಅವರ ಬದುಕಿನ ಬಗ್ಗೆ ಕಾಳಜಿ ಉಳ್ಳ ಸಮಾಜಸೇವಕಿಯನ್ನು ಅವರಲ್ಲಿ ಕಂಡಿದ್ದೇನೆ.
ಸಮಕಾಲೀನ ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನಗಳ ಬಗ್ಗೆ ಅವರಿಗೆ ಇರುವ ತಿಳುವಳಿಕೆ ಕಂಡು ಪ್ರತಿಬಾರಿ ನಾನು ಚಕಿತಗೊಂಡಿದ್ದೇನೆ. ಯಾವುದೇ ವಿಷಯವನ್ನು ಅವರು ನಮ್ಮಂತಹ ವೃತ್ತಿನಿರತ ರಾಜಕಾರಣಿಗಳ ಕಣ್ಣಿನಲ್ಲಿ ನೋಡದೆ, ಒಬ್ಬ ಸಾಮಾನ್ಯ ಮನುಷ್ಯನ ದೃಷ್ಟಿಯಿಂದ ನೋಡುತ್ತಾರೆ. ಈ ದೃಷ್ಟಿಕೋನ ನನಗೆ ಮತ್ತು ಪಕ್ಷಕ್ಕೆ ಅಮೂಲ್ಯವಾದುದು.
ನನ್ನ ಇತ್ತೀಚಿನ ಭೇಟಿಯ ಸಮಯದಲ್ಲಿಯೂ ಅವರು ದೇಶದಾದ್ಯಂತ ನಡೆಯುತ್ತಿರುವ ರೈತರ ಹೋರಾಟ, ಕೊರೊನಾ ಸೋಂಕಿನಿಂದಾಗಿ ಜನರು ಪಡುತ್ತಿರುವ ಬವಣೆ, ನಿರುದ್ಯೋಗ, ಬೆಲೆಏರಿಕೆ ಮೊದಲಾದ ವಿಷಯಗಳನ್ನು ಪ್ರಸ್ತಾಪಿಸಿದರು. ಈ ವಿಷಯಗಳಲ್ಲಿ ಕರ್ನಾಟಕದ ಬಿಜೆಪಿ ಸರ್ಕಾರದ ವಿರುದ್ದ ವಿರೋಧಪಕ್ಷವಾಗಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಹೋರಾಟದ ವಿವರವನ್ನು ನೀಡಿದೆ..
ಪ್ರಶ್ನೆ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿರುವಂತಹ ದಕ್ಷಿಣದ ಏಕೈಕ ರಾಜ್ಯ ಕರ್ನಾಟಕ. 2023ರಲ್ಲಿ ಇದು ಸಾಧ್ಯವೆಂದು ನಿಮಗೆ ಅನಿಸುತ್ತಾ?
ಸಿದ್ದರಾಮಯ್ಯ: ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ರಾಜ್ಯದಲ್ಲಿ ಪ್ರಜ್ಞಾವಂತ ಮತದಾರರಿದ್ದಾರೆ. ಅವರು ಈಗಿನ ರಾಜ್ಯ ಮತ್ತು ಕೇಂದ್ರ ಸರ್ಕಾರದ ದುರಾಡಳಿತ ಮತ್ತು ಹಿಂದಿನ ಐದು ವರ್ಷಗಳ ಕಾಲದ ನಮ್ಮ ಕಾಂಗ್ರೆಸ್ ಸರ್ಕಾರದ ಜನಪರ, ಭ್ರಷ್ಟಾಚಾರರಹಿತ ಮತ್ತು ಸರ್ವರನ್ನೂ ಒಳಗೊಂಡ ಆಡಳಿತವನ್ನು ನೋಡಿ ಸರಿಯಾದ ತೀರ್ಮಾನ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ.
ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದನಂತರ ಚುನಾವಣಾ ಪ್ರಣಾಳಿಕೆಯನ್ನು ಮರೆತುಬಿಡುತ್ತಾರೆ. ನಾನು ಮುಖ್ಯಮಂತ್ರಿಯಾಗಿ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳನ್ನು ಈಡೇರಿಸಿದ್ದೇನೆ. ಈ ಬಗ್ಗೆ ನಾನು ಯಾವುದೇ ಸಾರ್ವಜನಿಕ ಚರ್ಚೆಗೆ ಸಿದ್ಧನಿದ್ದೇನೆ. ಪ್ರಣಾಳಿಕೆಯ ಭರವಸೆಗಳ ಜೊತೆ 25 ಹೆಚ್ಚುವರಿ ಕಾರ್ಯಕ್ರಮಗಳನ್ನು ಜಾರಿಗೆತಂದಿದ್ದೇನೆ. ಉದಾಹರಣೆಗೆ ಇಂದಿರಾ ಕ್ಯಾಂಟೀನ್.
ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುಗಳಿಗೆಯಲ್ಲಿಯೇ ಬಡತನದ ರೇಖೆಗಿಂತ ಕೆಳಗಿರುವ ಸುಮಾರು ಒಂದು ಕೋಟಿ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ತಲಾ ಐದು ಕಿಲೋ ಅಕ್ಕಿ ನೀಡುವ ಅನ್ನ ಭಾಗ್ಯ ಕಾರ್ಯಕ್ರಮ ಜಾರಿಗೊಳಿಸಿದೆ. ಅದರ ನಂತರ ಈ ಅಕ್ಕಿ ಪ್ರಮಾಣವನ್ನು ಏಳು ಕಿಲೋಗೆ ಹೆಚ್ಚಿಸಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿ ನಮ್ಮ ಜನರನ್ನು ಬದುಕಿಸಿದ್ದೇ ಈ ಅನ್ನಭಾಗ್ಯ ಕಾರ್ಯಕ್ರಮ. ನರೇಂದ್ರ ಮೋದಿ ಸರ್ಕಾರ ಅದನ್ನೇ ಕಾಪಿಮಾಡಿದೆ.
ಆದ್ದರಿಂದ ರಾಜ್ಯದ ಜನ ಈಗಿನ ಸರ್ಕಾರದ ದುರಾಡಳಿತವನ್ನು ಕಂಡನಂತರ ನಮ್ಮ ಪಕ್ಷವನ್ನು ಸೋಲಿಸಿರುವ ಬಗ್ಗೆ ಪಶ್ಚಾತಾಪ ಮಾಡಿಕೊಳ್ಳುತ್ತಿದ್ದಾರೆ. 2004ರಲ್ಲಿ ಕಾಂಗ್ರೆಸ್ ಪರಾಭವಗೊಂಡ ನಂತರದ ಹತ್ತು ವರ್ಷಗಳ ಕಾಲ ಕರ್ನಾಟಕ ಐದು ಮುಖ್ಯಮಂತ್ರಿಗಳನ್ನು ಕಂಡಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪರಾಭವ ಗೊಂಡ ನಂತರದ ನಾಲ್ಕು ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳನ್ನು ರಾಜ್ಯ ಕಂಡಿದೆ. ಅಭದ್ರ ಸರ್ಕಾರ, ದುರಾಡಳಿತ ಮತ್ತು ಮೇರೆ ಮೀರಿದ ಭ್ರಷ್ಟಾಚಾರದಿಂದ ಜನ ರೋಸಿಹೋಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಜನ ಖಂಡಿತಾ ಆಶೀರ್ವದಿಸುತ್ತಾರೆ.
ಪ್ರಶ್ನೆ: ಲಿಂಗಾಯತ ಸಮುದಾಯದ ಹಿರಿಯ ನಾಯಕರಾದ ಬಿ.ಎಸ್.ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕಿದ ನಂತರ ಆ ಸಮುದಾಯ ತೀವ್ರ ಅಸಮಾಧಾನಕ್ಕೀಡಾಗಿದೆ ಎಂದು ಹೇಳಲಾಗಿದೆ. ಈ ಪರಿಸ್ಥಿತಿಯನ್ನು ಕಾಂಗ್ರೆಸ್ ಪಕ್ಷ ರಾಜಕೀಯವಾಗಿ ಹೇಗೆ ಬಳಸಿಕೊಳ್ಳಲಿದೆ?
ಸಿದ್ದರಾಮಯ್ಯ: ಕೇವಲ ಲಿಂಗಾಯತರಲ್ಲ ರಾಜ್ಯದ ಪ್ರತಿಯೊಂದು ಜಾತಿ-ಧರ್ಮದ ಜನ ಎರಡು ವರ್ಷಗಳ ಬಿಜೆಪಿ ಆಡಳಿತದಿಂದ ಬೇಸತ್ತು ಹೋಗಿದ್ದಾರೆ. ಲಿಂಗಾಯತರ ಅತೃಪ್ತಿಯನ್ನು ರಾಜಕೀಯವಾಗಿ ಬಳಸಿಕೊಳ್ಳುವ ಉದ್ದೇಶ ನಮ್ಮ ಪಕ್ಷಕ್ಕೆ ಇಲ್ಲ.
ಬಳಸಿಕೊಂಡು ಬಿಸಾಕುವ ಕೃತಘ್ನತನ ಬಿಜೆಪಿಯ ರಕ್ತದಲ್ಲಿದೆ. ಆ ಪಕ್ಷದ ಹಿರಿಯ ನಾಯಕರಾದ ಅಟಲ ಬಿಹಾರಿ ವಾಜಪೇಯಿ, ಮುರಳಿ ಮನೋಹರ ಜೋಷಿ, ಲಾಲ್ ಕೃಷ್ಣ ಅಡ್ವಾಣಿ, ಯಶವಂತ್ ಸಿನ್ಹಾ ಮೊದಲಾದ ಹಿರಿಯರನ್ನು ಪಕ್ಷ ಎಷ್ಟೊಂದು ನಿರ್ದಯವಾಗಿ ಮೂಲೆಗುಂಪು ಮಾಡಿದೆ ಎನ್ನುವುದನ್ನು ದೇಶದ ಜನ ನೋಡಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವಾಗ ಯಡಿಯೂರಪ್ಪನವರು ಕಣ್ಣೀರು ಹಾಕಿದ್ದನ್ನು ನೋಡಿದಾಗ ಆಂತರಿಕವಾಗಿ ಅವರು ಬಹಳಷ್ಟು ನೋವು ಅನುಭವಿಸಿರಬಹುದು ಎಂಬ ಅಭಿಪ್ರಾಯ ಮೂಡುತ್ತದೆ. ಅದನ್ನು ಅವರು ಬಹಿರಂಗವಾಗಿ ಹೇಳುವ ಧೈರ್ಯಮಾಡಬೇಕು.
ಪ್ರಶ್ನೆ: ರಾಜ್ಯದ ಪ್ರಮುಖ ಲಿಂಗಾಯತ ನಾಯಕರನ್ನು ರಾಜ್ಯ ಇಲ್ಲವೇ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ನಾಯಕರಾಗಿ ಬಿಂಬಿಸುವ ಉದ್ದೇಶ ಇದೆಯೇ?
ಸಿದ್ದರಾಮಯ್ಯ: ನಮ್ಮದು ಸರ್ವಧರ್ಮ, ಸರ್ವ ಜಾತಿಗಳ ಪಕ್ಷ. ಯಾವುದೇ ಒಂದು ಧರ್ಮ ಇಲ್ಲವೇ ಜಾತಿಯನ್ನು ಓಲೈಸಿ ನಾವು ರಾಜಕಾರಣ ಮಾಡುವುದಿಲ್ಲ. ನಮ್ಮಲ್ಲಿ ಎಲ್ಲ ಸಮುದಾಯದ ನಾಯಕರಿದ್ದಾರೆ. ಶ್ಯಾಮನೂರು ಶಿವಶಂಕರಪ್ಪ, ಎಸ್.ಆರ್.ಪಾಟೀಲ್, ಎಂ.ಬಿ.ಪಾಟೀಲ್, ಈಶ್ವರಖಂಡ್ರೆ ಸೇರಿದಂತೆ ಹಲವಾರು ಹಿರಿಯ -ಯುವ ಲಿಂಗಾಯತ ನಾಯಕರೂ ಇದ್ದಾರೆ. ನಿಜವಾದ ಅರ್ಥದಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ’’ ನೀತಿಯನ್ನು ಅನುಸರಿಸುತ್ತಿರುವುದು ಕಾಂಗ್ರೆಸ್ ಪಕ್ಷ.
ಪ್ರಶ್ನೆ: ಒಕ್ಕಲಿಗ ಜಾತಿಗೆ ಸೇರಿರುವ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತತು ನಿಮ್ಮ ನಡುವೆ ಸಂಘರ್ಷವಿದೆ ಎಂದು ಹೇಳಲಾಗುತ್ತಿದೆ. ಬಹುಪಾಲು ಒಕ್ಕಲಿಗ ಮತದಾರರು ಜೆಡಿಎಸ್ ಪಕ್ಷಕ್ಕೆ ಸೇರಿರುವ ಎಚ್.ಡಿ.ದೇವೇಗೌಡ ಮತ್ತು ಕುಮಾರ ಸ್ವಾಮಿಯವರನ್ನು ಬೆಂಬಲಿಸುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಲಿಂಗಾಯತರಿಗೆ ನೀಡಿ, ಶಿವಕುಮಾರ್ ಅವರಿಗೆ ರಾಷ್ಟ್ರಮಟ್ಟದಲ್ಲಿ ಪಕ್ಷದ ಜವಾಬ್ದಾರಿ ವಹಿಸುವ ಯೋಜನೆಯೇನಾದರೂ ಪಕ್ಷದ ಹೈಕಮಾಂಡ್ ಗೆ ಇದೆಯೇ?
ಸಿದ್ದರಾಮಯ್ಯ: . ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತ್ತು ನನ್ನ ನಡುವೆ ಯಾವುದೇ ಪೈಪೋಟಿ – ಸಂಘರ್ಷ ಇಲ್ಲ. ಬಿಜೆಪಿಯವರು ದುರುದ್ದೇಶದಿಂದ ಇಂತಹದ್ದೊಂದು ಅಪಪ್ರಚಾರ ನಡೆಸುತ್ತಿದ್ದಾರೆ. ನಮ್ಮ ನಡುವೆ ಹಾರ್ದಿಕ ಸಂಬಂಧ ಇದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಅವರು ನನ್ನ ಸಂಪುಟದಲ್ಲಿದ್ದರು. ಅವರೊಬ್ಬ ಉತ್ಸಾಹಿ- ಕ್ರಿಯಾಶೀಲ ನಾಯಕ. ಪಕ್ಷದ ಸಂಘಟನೆಯನ್ನು ಬಲಪಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಅವರನ್ನು ದಮನಿಸಲು ಬಿಜೆಪಿ ತನಿಖಾಸಂಸ್ಥೆಗಳ ಮೂಲಕ ಸತತ ಪ್ರಯತ್ನ ಮಾಡುತ್ತಿದೆ. ನಾವೆಲ್ಲ ಅವರ ಬೆಂಬಲಕ್ಕೆ ನಿಂತಿದ್ದೇವೆ.
ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಬೆಂಬಲಿಗರು. ಇತಿಹಾಸವನ್ನು ತೆಗೆದು ನೋಡಿದರೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗ ಮುಖ್ಯಮಂತ್ರಿಗಳು ಮತ್ತು ಸಚಿವರು ಆಗಿರುವುದು ಕಾಂಗ್ರೆಸ್ ಪಕ್ಷದಲ್ಲಿ. ಎಚ್.ಡಿ.ದೇವೇಗೌಡರ ಜೆಡಿಎಸ್ ಪಕ್ಷ ಸ್ಪಷ್ಟವಾಗಿ ಕಾಣುವಂತೆ ಕುಟುಂಬ ಕೇಂದ್ರಿತ ಪಕ್ಷ. ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಜೆಡಿ ಎಸ್ ಪಕ್ಷವನ್ನು ಬೆಂಬಲಿಸುತ್ತಾರೆ ಎನ್ನುವುದು ತಪ್ಪು ವಿಶ್ಲೇಷಣೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗ ಮತದಾರರಿರುವ ತುಮಕೂರು ಲೋಕಸಭಾಕ್ಷೇತ್ರದಲ್ಲಿ ದೇವೇಗೌಡರು ಸೋತಿದ್ದರು ಎನ್ನುವುದನ್ನು ಮರೆಯಬಾರದು. ಡಿ.ಕೆ.ಶಿವಕುಮಾರ್ ಅವರನ್ನು ಕೇವಲ ಒಕ್ಕಲಿಗನಾಯಕರೆಂದು ಬ್ರಾಂಡ್ ಮಾಡುವುದು ಕೂಡಾ ಸರಿ ಅಲ್ಲ.
ಪ್ರಶ್ನೆ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸೋನಿಯಾ ಗಾಂಧಿಯವರಲ್ಲಿ ಚರ್ಚೆ ನಡೆಯಿತೇ?
ಸಿದ್ದರಾಮಯ್ಯ: ಕೆಪಿಸಿಸಿ ಅಧ್ಯಕ್ಷಸ್ಥಾನ ಬದಲಾವಣೆ ಬಗ್ಗೆ ಸೋನಿಯಾ ಗಾಂಧಿಯವರ ಜೊತೆ ಯಾವುದೇ ಚರ್ಚೆ ನಡೆದಿಲ್ಲ.
ಪ್ರಶ್ನೆ: ಜಾತಿ ಸಮೀಕರಣದ ಕಲೆಯನ್ನು ಪಡೆದಿದ್ದ ದೇವರಾಜ ಅರಸು ನಂತರ ನೀವು ಪೂರ್ಣಾವಧಿ ಮುಗಿಸಿದ ಏಕೈಕ ಮುಖ್ಯಮಂತ್ರಿ. ಇದರ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?
ಸಿದ್ದರಾಮಯ್ಯ: ಧನ್ಯವಾದಗಳು, ಹೌದು, ದೇವರಾಜ ಅರಸು ಅವರ ನಂತರ ಪೂರ್ಣ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದು ನಾನು ಎನ್ನುವುದು ಸತ್ಯ. ನಮ್ಮ ಪಕ್ಷವನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದು ರಾಜ್ಯದ ಜನತೆ, ಮುಖ್ಯಮಂತ್ರಿಯಾಗುವ ಅವಕಾಶ ನೀಡಿ ಸಂಪೂರ್ಣ ಬೆಂಬಲ ನೀಡಿದ್ದು ಈಗಿನ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ಹಿಂದಿನ ಅಧ್ಯಕ್ಷರಾದ ರಾಹುಲ್ ಗಾಂಧಿಯವರು.
ನಾನು ಸಾಮಾಜಿಕನ್ಯಾಯದಲ್ಲಿ ನಂಬಿಕೆ ಇಟ್ಟವನು. ಸಾಮಾಜಿಕ ನ್ಯಾಯ ಎಂದರೆ ಸರ್ವರಿಗೂ ನ್ಯಾಯ. ಸರ್ವರಿಗೂ ಸಮಪಾಲು, ಸಮಬಾಳು. ಅಧಿಕಾರ ಮತ್ತು ಸಂಪತ್ತುಗಳನ್ನು ಸಮಾನವಾಗಿ ಹಂಚುವಾಗ ಜಾತಿ ತಾರತಮ್ಯದ ಕಾರಣದಿಂದ ವಂಚಿತರಾದವರಿಗೆ ಸ್ವಲ್ಪ ಹೆಚ್ಚಿನಪಾಲು ಕೊಡಬೇಕಾಗುತ್ತದೆ. ನಾವು ಬಯಸುವ ಸಮಾನತೆಯ ಸಮಾಜ ನಿರ್ಮಾಣಕ್ಕೆ ಇದು ಅಗತ್ಯವಾಗುತ್ತದೆ.
ಭಾರತೀಯ ಸಮಾಜದಲ್ಲಿ ಜಾತಿ ಎನ್ನುವುದು ವಾಸ್ತವ. ಜಾತಿ ಇಲ್ಲವೇ ಇಲ್ಲ ಎನ್ನುವುದು ಹಿಪಾಕ್ರಸಿ. ಜಾತಿ ಇದೆ ಎಂದು ಒಪ್ಪಿಕೊಂಡು ಅದರ ನಾಶಕ್ಕೆ ನಾವು ಪ್ರಯತ್ನ ಪಡಬೇಕು. ಜಾತಿಯನ್ನು ಬ್ಯಾಲೆನ್ಸ್ ಮಾಡುವುದೆಂದರೆ ಜಾತಿ ನಾಯಕರನ್ನು ಓಲೈಸುವುದಲ್ಲ, ಪ್ರತಿಯೊಂದು ಜಾತಿಯಲ್ಲಿ ಕಟ್ಟಕಡೆಯಲ್ಲಿರುವ ಮನುಷ್ಯರ ಬಗ್ಗೆ ಕಾಳಜಿತೋರುವುದು ಮತ್ತು ಅವರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸುವುದು. ಇದನ್ನೇ ನಾನು ಮಾಡಿದ್ದೇನೆ.
ನನ್ನನ್ನು ಅಹಿಂದ ನಾಯಕ ಎಂದು ಸಾಮಾನ್ಯವಾಗಿ ಬ್ರಾಂಡ್ ಮಾಡಲಾಗುತ್ತದೆ. ಆದರೆ ನಾನು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಳಿಸಿದ ಮತ್ತು ಜನಮೆಚ್ಚಿದ ಕಾರ್ಯಕ್ರಮಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿಭಾಗ್ಯ ಮೊದಲಾದ ಕಾರ್ಯಕ್ರಮಗಳು ಎಲ್ಲಾ ಜಾತಿ-ಧರ್ಮ ಜನರಿಗೆ ಸೇರಿದ್ದಾಗಿದೆ. ಅದೇ ರೀತಿ ಐದು ವರ್ಷಗಳ ಕಾಲದ ನನ್ನ ಅಧಿಕಾರವಧಿಯಲ್ಲಿ ಚುನಾವಣಾಪೂರ್ವದಲ್ಲಿ ಭರವಸೆ ನೀಡಿದಂತೆ 50 ಸಾವಿರ ಕೋಟಿ ಖರ್ಚು ಮಾಡಿ ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ.
ಪ್ರಶ್ನೆ: ಉಪರಾಷ್ಟ್ರಪತಿಯಾಗಿ ಬಿ.ಡಿ.ಜತ್ತಿ ಮತ್ತು ಪ್ರಧಾನಮಂತ್ರಿಯಾಗಿ ಎಚ್.ಡಿ.ದೇವೇಗೌಡ ಅವರು ಕರ್ನಾಟಕದಿಂದ ರಾಷ್ಟ್ರೀಯ ಮಟ್ಟದ ಉನ್ನತ ಹುದ್ದೆಗೇರಿದ ಪ್ರಮುಖ ನಾಯಕರು. ನಿಮಗೇನಾದರೂ ಪ್ರಧಾನಿಯಾಗುವ ಆಸೆ ಇದೆಯೇ?
ಸಿದ್ದರಾಮಯ್ಯ: ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ ಎಂದು ನಾನು ಹಿಂದೆಯೇ ಸ್ಪಷ್ಟಪಡಿಸಿದ್ದೇನೆ. ರಾಹುಲ್ ಗಾಂಧಿಯವರು ಅಧ್ಯಕ್ಷರಾಗಿದ್ದಾಗ ನನಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಲು ಆಹ್ವಾನ ನೀಡಿದ್ದರು. ನಾನು ಎರಡು ಬಾರಿ ಲೋಕಸಭೆಗೆ ಸ್ಪರ್ಧಿಸಿದ್ದೆ, ಜನ ನನಗೆ ಆಶೀರ್ವಾದ ಮಾಡಲಿಲ್ಲ. ಬಹುಶಃ ರಾಜ್ಯದ ಜನತೆ ನಾನು ರಾಜ್ಯ ರಾಜಕಾರಣದಲ್ಲಿಯೇ ಮುಂದುವರಿಯಲು ಬಯಸುತ್ತಿದ್ದಾರೆ ಎಂದು ನನಗನಿಸಿದೆ. ಪ್ರಧಾನಮಂತ್ರಿಯಾಗುವುದನ್ನು ನಾನು ಕನಸು ಕೂಡಾ ಕಂಡಿಲ್ಲ. ಆ ಹುದ್ದೆಗೆ ಅರ್ಹರಾದವರು ನಮ್ಮ ಪಕ್ಷದಲ್ಲಿ ಬಹಳ ನಾಯಕರಿದ್ದಾರೆ.
ಪ್ರಶ್ನೆ: 2019ರ ಲೋಕಸಭಾ ಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ರಾಹುಲ್ ಗಾಂಧಿಯವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನಂತರ ಇಲ್ಲಿಯ ವರೆಗೆ ಪಕ್ಷಕ್ಕೆ ಪೂರ್ಣಪ್ರಮಾಣದ ಅಧ್ಯಕ್ಷರಾಗಿಲ್ಲ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕು ಎಂದು ಹಲವು ಹಿರಿಯ ಕಾಂಗ್ರೆಸ್ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಸಿದ್ದರಾಮಯ್ಯ: ಕಾಂಗ್ರೆಸ್ ಪಕ್ಷದ ಇತಿಹಾಸದ ಬಗ್ಗೆ ಒಬ್ಬ ಹಿರಿಯ ಪತ್ರಕರ್ತರಾಗಿ ನನಗಿಂತ ಹೆಚ್ಚು ನಿಮಗೆ ತಿಳಿದಿದೆ. 2000ನೇ ವರ್ಷದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆದ ಆಂತರಿಕ ಚುನಾವಣೆಯಲ್ಲಿ ಶ್ರೀಮತಿ ಸೋನಿಯಾ ಗಾಂಧಿಯವರು ಸ್ಪರ್ಧಿಸಿ ಜಿತೇಂದ್ರ ಪ್ರಸಾದ ವಿರುದ್ಧ ಗೆದ್ದು ಅಧ್ಯಕ್ಷರಾದವರು. ಭಾರತೀಯ ಜನತಾಪಕ್ಷದಲ್ಲಿ ಎಂದಾದರೂ ಪಕ್ಷದ ಅಧ್ಯಕ್ಷಸ್ಥಾನಕ್ಕೆ ಚುನಾವಣೆ ನಡೆದಿದೆಯೇ?
ನಮ್ಮ ಕೆಲವು ಹಿರಿಯ ನಾಯಕರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕೆಂಬ ಅಭಿಪ್ರಾಯ ನೀಡಿದ್ದಾರೆ. ಇದು ಪಕ್ಷದ ಕೋಟ್ಯಂತರ ಕಾರ್ಯಕರ್ತರ ಅಭಿಪ್ರಾಯ ಖಂಡಿತ ಅಲ್ಲ. ಇಂತಹದ್ದೊಂದು ಅಭಿಪ್ರಾಯ ನೀಡುವಂತಹ ಆಂತರಿಕ ಪ್ರಜಾಪ್ರಭುತ್ವ ಕಾಂಗ್ರೆಸ್ ಪಕ್ಷದಲ್ಲಿ ಇದೆಯಲ್ಲಾ ಎಂದು ನಾವು ಹೆಮ್ಮೆ ಪಡಬೇಕು. ರಾಹುಲ್ ಗಾಂಧಿಯವರ ಅಪೇಕ್ಷೆಯಂತೆಯೇ ಯುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಆಂತರಿಕವಾಗಿ ಚುನಾವಣೆ ನಡೆಯುತ್ತಿಲ್ಲವೇ? ಇಂತಹ ಚುನಾವಣೆ ಬೇರೆ ಯಾವ ಪಕ್ಷದಲ್ಲಿಯಾದರೂ ನಡೆಯುತ್ತಿದೆಯೇ?
ಬಿಜೆಪಿಯ ವೈಯಕ್ತಿಕ ದಾಳಿಯಿಂದ ಕೂಡಿದ ಅಪಪ್ರಚಾರ, ಕೇಂದ್ರ ಸರ್ಕಾರ ಛೂಬಿಟ್ಟಿರುವ ತನಿಖಾಸಂಸ್ಥೆಗಳ ಪಕ್ಷಪಾತತನದಿಂದ ಕೂಡಿದ ಕಾರ್ಯವೈಖರಿ ಮತ್ತು ಆಡಳಿತ ಪಕ್ಷದ ಪರವಾಗಿರುವ ಬಹುತೇಕ ಮಾಧ್ಯಮಗಳ ವಿರೋಧದ ಹೊರತಾಗಿಯೂ ರಾಹುಲ್ ಗಾಂಧೀಯವರು ನರೇಂದ್ರ ಮೋದಿ ನೇತೃತ್ವದ ದುರಾಡಳಿತದ ವಿರುದ್ದ ಸಮರ್ಥ ರೀತಿಯಲ್ಲಿ ದಿಟ್ಟತನದಿಂದ ಹೋರಾಟ ನಡೆಸಿದ್ದಾರೆ. ಕೇವಲ ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಮಾತ್ರವಲ್ಲ ಇಡೀ ದೇಶದ ಹಿತದೃಷ್ಟಿಯಿಂದ ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯುವುದು ಸೂಕ್ತ ಎಂದು ನನ್ನ ಭಾವನೆ. ಚುನಾವಣೆ ನಡೆದರೂ ಪ್ರತಿಯೊಬ್ಬ ಕಾಂಗ್ರೆಸಿಗನ ಆಯ್ಕೆ ರಾಹುಲ್ ಗಾಂಧಿಯವರೇ ಆಗಿರುತ್ತಾರೆ. ಫಲಿತಾಂಶವೇ ಗೊತ್ತಿರುವಾಗ ಚುನಾವಣೆಯ ಕಸರತ್ತು ನಡೆಸುವುದಲ್ಲಿ ಯಾವ ಅರ್ಥವೂ ಇಲ್ಲ.
ಪ್ರಶ್ನೆ: ಬಿ.ಎಸ್.ಯಡಿಯೂರಪ್ಪನವರ ನಾಯಕತ್ವದ ಗೈರುಹಾಜರಿ ಭಾರತೀಯ ಜನತಾ ಪಕ್ಷಕ್ಕೆ ಹಿನ್ನಡೆಯಾಗಬಹುದೇ? ಇದು ನಿಜವೆಂದಾದರೆ ಅಂತಹ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯತಂತ್ರಗಳೇನು:
ಸಿದ್ದರಾಮಯ್ಯ: ಇಲ್ಲಿಯ ವರೆಗೆ ಭಾರತೀಯ ಜನತಾಪಕ್ಷ ಸ್ವಂತ ಬಹುಮತದಿಂದ ಎಂದೂ ಸರ್ಕಾರ ರಚಿಸಿಲ್ಲ. ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿಯೇ ನಡೆದಿದ್ದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಬಹುಮತ ಸಿಗದೆ ಇದ್ದರೂ ಬಿಜೆಪಿಗಿಂತ ಶೇಕಡಾ ಎರಡರಷ್ಟು ಹೆಚ್ಚು ಮತವನ್ನು ಕಾಂಗ್ರೆಸ್ ಪಕ್ಷ ಗಳಿಸಿದೆ.
ಬಿ.ಎಸ್.ಯಡಿಯೂರಪ್ಪನವರ ನಾಯಕತ್ವವನ್ನು ರಾಜ್ಯದ ಜನತೆಯೂ ತಿರಸ್ಕರಿಸಿದ್ದಾರೆ, ಅವರ ಪಕ್ಷವೂ ತಿರಸ್ಕರಿಸಿದೆ. ಬಿಜೆಪಿಯೊಳಗಿನ ಬಹಳಷ್ಟು ಲಿಂಗಾಯತ ನಾಯಕರು, ಕಾಂಗ್ರೆಸ್ ನಾಯಕರಿಗಿಂತ ಹೆಚ್ಚು ಯಡಿಯೂರಪ್ಪನವರನ್ನು ವಿರೋಧಿಸುತ್ತಾರೆ. ಅವರ ಪಕ್ಷದಲ್ಲಿ ಲಿಂಗಾಯತ ನಾಯಕರೇ ಕಳೆದೆರಡು ವರ್ಷಗಳಲ್ಲಿ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಆಡುತ್ತಿರುವ ಮಾತುಗಳು ರಾಜ್ಯದ ಮಾಧ್ಯಮಗಳಲ್ಲಿ ಪ್ರತಿದಿನ ಪ್ರಕಟವಾಗುತ್ತಿದೆ.
ಕಳೆದ ಎರಡು ವರ್ಷಗಳಲ್ಲಿ ಬಿಜೆಪಿ ಆಡಳಿತ ರಾಜ್ಯವನ್ನು 20 ವರ್ಷಗಳಷ್ಟು ಹಿಂದಕ್ಕೆ ಕೊಂಡುಹೋಗಿದೆ. ಆಪರೇಷನ್ ಕಮಲ ಎಂಬ ಅನೈತಿಕ ರಾಜಕಾರಣದಿಂದ ಅವರು ಗಳಿಸಿದ ಅಧಿಕಾರ, ಭ್ರಷ್ಟಾಚಾರ, ದುರಾಡಳಿತ, ರೈತವಿರೋಧಿ ಕಾನೂನುಗಳು, ಯುವಜನ ಮತ್ತು ವಿದ್ಯಾರ್ಥಿಗಳು ವಿರೋಧಿಸುತ್ತಿರುವ ಹೊಸಶಿಕ್ಷಣ ನೀತಿ ಮತ್ತು ಪ್ರತಿದಿನದ ಪಕ್ಷದೊಳಗಿನ ಒಳಜಗಳಗಳಿಂದಾಗಿ ಈಗಾಗಲೇ ಬಿಜೆಪಿ ಡಿಪೆನ್ಸಿವ್ ಆಗಿದೆ. ಬಿಜೆಪಿಯನ್ನು ಕಿತ್ತೊಗೆಯಲು ರಾಜ್ಯದ ಜನತೆ ಚುನಾವಣೆಗಾಗಿ ಕಾಯುತ್ತಿದ್ದಾರೆ.
ಕೃಪೆ: ಸಂಡೇ ಗಾರ್ಡಿಯನ್ ಲೈವ್