ಜನವರಿ 18 : ರೈತ ಮಹಿಳೆಯರ ದಿನ : ಎಲ್ಲೆಲ್ಲೂ ಇದ್ದೂ. . .ಎಲ್ಲೂ ಕಾಣದವರು..

 ‘ದೆಹಲಿಯ ಗಡಿಯಲ್ಲಿ ಸ್ವಾಭಿಮಾನಿ ಕೃಷಿಕ್ಷೇತ್ರದಲ್ಲಿ ದುಡಿಯುತ್ತಿರುವ ರೈತಕುಟುಂಬಗಳ ಮಹಿಳೆಯರು ಕೃಷಿ ಕ್ಷೇತ್ರದ ಉಳಿವಿಗಾಗಿ, ಸ್ವಾಭಿಮಾನಿ ಬದುಕಿಗಾಗಿ ಬಂದು ನಿಂತಿದ್ದಾರೆ. ಅಲ್ಲಿ ಅಸಹಾಯಕತೆ ಇಲ್ಲ, ಆಕ್ರೋಶವಿದೆ. ಸಾತ್ವಿಕ ಆಕ್ರೋಶ, ಬೆವರಿನ ಬೆಲೆ ಗೊತ್ತಿರುವ ಆಕ್ರೋಶವದು. ಹಾಗಾಗಿ ‘ಮಹಿಳೆಯರು ಯಾಕಿದ್ದಾರೆ ಅಲ್ಲಿ? ಅವರನ್ನು ಸಮಜಾಯಿಸಿ ವಾಪಸ್ ಕಳಿಸಿ’ ಎನ್ನುವ ನಿಮ್ಮ ಮಾತಿನಲ್ಲಿ ಮನುವಿನ ಆಲೋಚನೆಗಳ ವಾಸನೆ ಬಡಿಯುತ್ತಿದೆ. ..ಯುವರ್ ಆನರ್..’

 .. ಆದರೆ, ಈ ದೇಶದ ಬಹು ಸಂಖ್ಯಾತ ತಿನ್ನುವ ಅನ್ನದ ಮೂಲ ಗೊತ್ತಿರುವ ಜನ ಇದನ್ನು ಬೆಂಬಲಿಸುವುದಿಲ್ಲ. ಹಾಗೆಂದೇ ಸಂಯುಕ್ತ ಕಿಸಾನ್ ಮೋರ್ಚಾ ಜನವರಿ 18ನ್ನು ರೈತ ಮಹಿಳಾ ದಿನವೆಂದು ಘೋಷಿಸಿದೆ. ಇದನ್ನು ಬೆಂಬಲಿಸಿ ದೇಶದ ರಾಷ್ಟ್ರೀಯ ಆರು ಮಹಿಳಾ ಸಂಘಟನೆಗಳು ಕೃಷಿ ಮಸೂದೆಗಳನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳಲು ಒತ್ತಾಯಿಸಿ ಈ ದಿನವನ್ನು ರಾಷ್ಟ್ರೀಯ ಪ್ರತಿಭಟನಾ ದಿನವನ್ನಾಗಿ ಆಚರಿಸಲು ಕರೆ ನೀಡಿವೆ.

– ಕೆ.ಎಸ್.ವಿಮಲ

ಮಹಿಳೆಯರೇಕೆ ಅಲ್ಲಿದ್ದಾರೆ? ಅವರನ್ನು ಕಳಿಸಿಬಿಡಿ. ಇದು ದೇಶದ ಸರ್ವೋಚ್ಛ ನ್ಯಾಯಾಲಯದ ಪ್ರಶ್ನೆ. ಕರಾಳ ಕೃಷಿ ಮಸೂದೆಯನ್ನು ಹಿಂತೆಗೆದುಕೊಳ್ಳಲು ನಡೆಯುತ್ತಿರುವ ರೈತ ಸ್ವಾಭಿಮಾನೀ ಹೋರಾಟದ ಕಣದಲ್ಲಿ ದೆಹಲಿಯ ಗಡಿಗಳಲ್ಲಿ ಚಳಿ ಮಳೆ ಸರಕಾರದ ದಬ್ಬಾಳಿಕೆ ಜಲಫಿರಂಗಿ, ಲಾಠಿಗಳಿಗೆ ಹೆದರದೆ ಕುಳಿತ ರೈತ ಸಮೂಹದಲ್ಲಿರುವ ರೈತ ಮಹಿಳೆಯರ ಬಗ್ಗೆ ಸರ್ವೋಚ್ಛ ನ್ಯಾಯಾಲಯ ಆಡಿದ ಮಾತಿದು.

ಹ್ಞಾಂ… ಕೇಳಬೇಕಾದ್ದೇ. ಯಾಕೆಂದರೆ ಮಹಿಳೆಯರು ಎಲ್ಲ ಕಡೆಯೂ ಗೋಚರರೂ ಹೌದು ಅಗೋಚರರೂ ಹೌದು. ಸಮಾಜ ಅವರನ್ನು ಮನುಷ್ಯರೆಂದೇ ಗುರುತಿಸದ ಮೇಲೆ ಅವರ ದುಡಿಮೆಯಲ್ಲಿ, ಕೃಷಿಯಲ್ಲಿ ಅವರನ್ನೆಂತು ಗುರುತಿಸೀತು? ಆದರೆ ಮಹಿಳೆಯರು ಇತಿಹಾಸ ರಚಿಸಿದವರು. ಇಂದೂ ರಚಿಸುತ್ತಿದ್ದಾರೆ, ಮುಂದೆಯೂ ರಚಿಸುತ್ತಾರೆ. ಯಾಕೆಂದರೆ ಮಹಿಳೆಯರು ಪಾಲ್ಗೊಳ್ಳದ ಯಾವ ಕ್ಷೇತ್ರವೂ ಇಲ್ಲ. ಕುರುಡಾದ ಸಮಾಜಕ್ಕೆ ಕಾಣದ ಸಂಗತಿಗಳವು. ಹಾಗೆಂದೇ ಸರ್ವೋಚ್ಛ ನ್ಯಾಯಾಲಯಕ್ಕೆ, ದೆಹಲಿಯ ಗಡಿಗಳಲ್ಲಿ ‘ಯೇ ಹಮಾರಾ ಫರ್ಜ್ ಬನತಾ ಹೈ’ (ಇದು ನಮ್ಮ ಕರ್ತವ್ಯ) ಎಂದು ಹೆಮ್ಮೆಯಿಂದ ಹೇಳುತ್ತ ಚಳಿ ಮಳೆ ಗಾಳಿಗಳಿಗೆ ಅಂಜದೇ ಕುಳಿತ ರೈತ ಮಹಿಳೆಯರು ಅಲ್ಲಿ ಅನಗತ್ಯ ಎನಿಸಿದೆ.

ಮರೆತ ಚರಿತ್ರೆ:

ನೆಲದ ಚರಿತ್ರೆ, ಕೃಷಿಯ ಕಥೆ, ನಾಗರಿಕತೆಯ ಬೆಳವಣಿಗೆಯಲ್ಲಿ ಕೇಳುವ ಪಿಸುದನಿಗೆ ಕಿವಿಗೊಟ್ಟು ಆಲಿಸಿದರೆ ಅಲ್ಲಿ ಕೇಳುವುದು ಹೆಣ್ದನಿ. ಕೃಷಿಯನ್ನು ಕಂಡುಹಿಡಿದವಳೇ ಮಹಿಳೆ. ನೆಂದ ನೆಲಕ್ಕೆ ಬಿದ್ದ ಬೀಜ ಮಣ್ಣಿನ ಸೊಗಡು ಹೀರಿ, ಫಲವಂತಿಕೆ ಪಡೆದು ಮೊಳೆತು ಚಿಗುರಾಗಿ ಹಸಿರಾಗಿ ಎದ್ದು ಮೇಲೆದ್ದು ಮತ್ತೆ ಹೂ ಕಾಯಿ ಹಣ್ಣು ಬೀಜಗಳಾಗುವ ಆವರ್ತನ ಪ್ರಕ್ರಿಯೆಗೆ ಬೆರಗುಗೊಂಡವಳು. ಕ್ರಮೇಣ ತಾನೇ ಅದರ ಭಾಗವಾಗಿರುವುದನ್ನು ಅನುಭವಿಸಿ ಪುಳಕಗೊಂಡವಳು. ಏಯ್……ಕ್ರೂರ ಸಮಾಜವೇ! ಭೂಮಿಯನ್ನು ಆಸ್ತಿ ಎಂದು ಪರಿಗಣಿಸುತ್ತ ಬೆಳೆಯನ್ನು ಸಂಪತ್ತೆಂದು ಭಾವಿಸಿದ ಮೇಲಲ್ಲವೇ ನೀವು ಹೆಣ್ಣಿನಿಂದ ಕೃಷಿಯ ಮೇಲಿನ ಅಧಿಕಾರ ಕಿತ್ತುಕೊಂಡಿದ್ದು. ಮರೆತಿರೇನು ಚರಿತ್ರೆಯನ್ನು?!

ಚರಿತ್ರೆಗೊಂದು ವರ್ತಮಾನದ ಬೆಳಕು :

ಆದರೆ ಸತ್ಯ ಮತ್ತು ವಾಸ್ತವ ಮರೆಯಗೊಡುವುದಿಲ್ಲ. ಅಂದಿನ ಚರಿತ್ರೆಗೆ ಇಂದಿನ ವರ್ತಮಾನ ಬೆಳಕು ಬೀರುತ್ತಿದೆ. ದೆಹಲಿಯ ಗಡಿಗಳಲ್ಲಿ ರೈತ ಸೈನ್ಯ ಬೀಡುಬಿಟ್ಟಿದೆ. ಅದು ಕೃಷಿ ಸ್ವಾತಂತ್ರ್ಯಯಕ್ಕಾಗಿ, ಸ್ವಾಭಿಮಾನದ ವೈರಿಗಳ ವಿರುದ್ಧ ಸಮರ ಸಾರಿದೆ. ಸಮರದ ಪ್ರತಿ ಕಣವೂ, ಪ್ರತಿ ಕ್ಷಣವೂ ಸಂಘರ್ಷದ ಘೋಷಣೆಗಳಿವೆ, ಆತ್ಮಾಭಿಮಾನದ, ಭೂಮಿಯ ಘನತೆಯನ್ನು ಕಾಯುವ ಛಲವಿದೆ. ಆದರೆ ಅಷ್ಟೇ ಆತ್ಮಬಲವಿದೆ. ಸಂಘರ್ಷವೆಂದರೆ ಹಿಂಸೆಯಲ್ಲ. ಅರಾಜಕವೂ ಅಲ್ಲ. ದೇಶದ ಗಡಿ ಕಾಯುವ ಸೈನಿಕರೂ ಸೇರಿದಂತೆ ದೇಶದ ಎಲ್ಲರಿಗೆ ಅನ್ನ ನೀಡಿ ಕಾಪಾಡುವವರು ನಾವು ಎನ್ನುವ ಮನೋಬಲದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಹ್ಞಾಂ. . . ಸಾಮಾನ್ಯವಾಗಿ ರೈತರೆಂದರೆ ಕಣ್ಣಮುಂದೆ ಚಿತ್ರ ಸುಳಿಯುತ್ತದೆ ಮುಂಡಾಸು ಸುತ್ತಿದ, ನೇಗಿಲು ಹೊತ್ತ, ಹಿಂದೆಲ್ಲ ಎತ್ತುಗಳನ್ನು ಹಿಡಿದ, ಈಗ ಬದಲಾದ ಚಿತ್ರಣದಲ್ಲಿ ಟ್ರಾಕ್ಟರ್ ಓಡಿಸುವ ಪುರುಷ!. ಆದರೆ ಅದು ಅರ್ಧ ಸತ್ಯ. ಹೇಗೆ ಕುಟುಂಬವೆಂದರೆ, ಕುಟುಂಬದ ಯಜಮಾನಿಕೆ ಎಂದರೆ, ಕುಲವೆಂದರೆ ಪುರುಷರನ್ನೇ ಅರಸುವ ಪರಿಪಾಠವಿದೆಯೋ ಹಾಗೆಯೇ ಇಲ್ಲಿಯೂ. . ಸತ್ಯವೆಂದರೆ ಇಡೀ ವಿಶ್ವದಲ್ಲಿ ಸರಿ ಸುಮಾರು 43% ಮಹಿಳೆಯರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಹಲವಾರು ಅಧ್ಯಯನಗಳು ತಿಳಿಸುತ್ತವೆ. ಭಾರತಕ್ಕೆ ಸಂಬಂಧಿಸಿದಂತೆ 85% ಗ್ರಾಮೀಣ ಮಹಿಳೆಯರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಭೂ ಒಡೆತನ ಕೇವಲ 13% ಮಾತ್ರ!!.

 

ದೆಹಲಿಯ ಹೋರಾಟದ ಕಣಕ್ಕೆ ಹತ್ತಾರು ಮಹಿಳೆಯರು ಟ್ರಾಕ್ಟರ್ ಓಡಿಸಿಕೊಂಡೇ ಬರುತ್ತಿರುವ ಹೆಮ್ಮೆ ಎನಿಸುವ ಚಿತ್ರಗಳು  ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡುತ್ತಿವೆ. ಅದು ಈ ಸಮಾಜಕ್ಕೆ ‘ಮನೋಭಾವ  ಬದಲಿಸಿಕೊಳ್ಳು.. ..ಏ ಸಮಾಜವೇ!’ ಎನ್ನುತ್ತಿದೆ. ಅಂದ ಹಾಗೆ ಅದು ಎದುರಿಗೊಬ್ಬ ಪಟ ಹಿಡಿಯುವವರನ್ನು ನಿಲ್ಲಿಸಿಕೊಂಡು ನವಿಲಿಗೆ ಕಾಳು ತಿನ್ನಿಸುವಷ್ಟು ಸರಾಗವೂ ಅಲ್ಲ. ಅಲ್ಲೊಂದು ಸ್ಪಷ್ಟ ಸೂಚನೆ ಇದೆ. ತೊಟ್ಟಿಲು ಮಾತ್ರ ತೂಗೆಂದು ನೀವು ಹೇಳಬಹುದು. ಆದರೆ ಪೃಕೃತಿದತ್ತವಾದ ತಾಯಾಗುವ ಕೆಲಸದಷ್ಟೇ ಜವಾಬ್ದಾರಿಯಿಂದ ನಾನು ಕೃಷಿಯನ್ನೂ ನಿಭಾಯಿಸುತ್ತಿದ್ದೇನೆ. ನೀವದನ್ನು ಗುರುತಿಸಿಲ್ಲ. ಆದರೆ ಗುರುತಿಸಲೇಬೇಕೆಂಬ ಛಲ ಅದು.

ಭಾರತದ ಬಡವರಲ್ಲಿ 40% ಭೂಹೀನ ಕೃಷಿ ಕಾರ್ಮಿಕರು. 45% ಎರಡು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಸಾಮಾನ್ಯ ರೈತರು. 7.5% ಗ್ರಾಮೀಣ ಕುಶಲಕರ್ಮಿಗಳು. ಮತ್ತು ‘ಇತರರು’  ಎಂದು ನಗರದ ಬಡವರೂ ಸೇರಿದಂತೆ – ಅರ್ಥಶಾಸ್ತ್ರಜ್ಞರು ಪರಿಗಣಿಸುವ ವಿಭಾಗ ಉಳಿದ 7.5%. ಇದರಲ್ಲಿ ಮೊದಲ 40% ಭೂಹೀನ ಕೃಷಿ ಚಟುವಟಿಕೆಗಾರರು ಬಹುತೇಕ ಮಹಿಳೆಯರು. ಅಲ್ಲದೇ 40%+45% = 85% ನಲ್ಲಿ ಬರುವ ಮೊದಲ ಕೆಟಗರಿ ಭೂ ಸಂಬಂಧೀ ಹಲವು ಸಮಸ್ಯೆಗಳನ್ನು ಎದುರಿಸುವ ವಿಭಾಗ. ಭಾರತದಲ್ಲಿ ಮಹಿಳೆಯರು ಬಹುತೇಕ ಭೂಹೀನರು. ಯಾಕೆಂದರೆ ಅವರ ಹೆಸರಿನಲ್ಲಿ ಜಮೀನು ಮನೆ ಆಸ್ತಿ ಪಾಸ್ತಿ ಇರುವುದೇ ಇಲ್ಲ. ಜೊತೆಗೆ ಆಳವಾಗಿ ಬೇರೂರಿರುವ ಜಾತಿ ವ್ಯವಸ್ಥೆಯ ಈ ದೇಶದಲ್ಲಿ 67% ಕೃಷಿ ಕೂಲಿಕಾರ ಮಹಿಳೆಯರು ದಲಿತರು. ಇದು ಈ ದೇಶದ ವಾಸ್ತವ ಮತ್ತು ಸತ್ಯ.

ಬಹುಸಂಖ್ಯಾತ ದಲಿತರಿಗೆ ಭೂ ಒಡೆತನವಿಲ್ಲ. ದಲಿತ ಮಹಿಳೆಯರ ಸ್ಥಿತಿ ಕೇಳುವುದೇ ಬೇಡ. ಇನ್ನು ಇತರ ವರ್ಗದ ಮಹಿಳೆಯರ ವಿಷಯದಲ್ಲಿಯೂ ಭೂಒಡೆತನದ ವಿಷಯ ಬಂದಾಗ ಅವರ ಸ್ಥಿತಿಯಲ್ಲಿಯೂ ಬಹಳ ವ್ಯತ್ಯಾಸವಿಲ್ಲ. ಭೂ ಒಡೆತನ ಸುಲಭ ಸಾಧ್ಯದ್ದಲ್ಲ.

ಹೀಗಿರುವಾಗ ಭಾರತದ ಸರ್ವೋಚ್ಛನ್ಯಾಯಾಲಯ ಕೇಳಬೇಕಿತ್ತು – ‘ಭೂ ಒಡೆತನದ ಪಟ್ಟಿಯಲ್ಲಿ ಮಹಿಳೆಯರ ಹೆಸರೇಕೆ ಕಾಣುತ್ತಿಲ್ಲ. ಕೆಲಸಗಾರರಲ್ಲಿ ಬಹುತೇಕ ಮಹಿಳೆಯರಿದ್ದಾರೆ. ಆದರೆ ಅವರಿಗೇಕೆ ಸಮಾನ ಕೆಲಸಕ್ಕೆ ಸಮಾನವೇತನ ಸಿಗುತ್ತಿಲ್ಲ ಎಂದು.

ಇಲ್ಲ. .. .ಸರ್ವೋಚ್ಛನ್ಯಾಯಾಲಯಕ್ಕೆ ದೆಹಲಿಯ ಗಡಗಡ ಚಳಿ, ಚಳಿಗಾಲದಲ್ಲಿ ಸುರಿದ ಮಳೆ, ಅದರಿಂದಾಗಿ ‘ಕೋಮಲ ಕಾಯದ ಮಹಿಳೆಯರು’ ತೊಂದರೆ ಅನುಭವಿಸುತ್ತಾರೆ ಎಂಬ ಕಕ್ಕುಲತೆ ಎಂದುಕೊಳ್ಳೋಣವೇನು? ಹಾಗಿದ್ದರೆ ನಿಜವಾದ ಅರ್ಥದಲ್ಲಿ ಸೂಚನೆ ಕೊಡಬಹುದಿತ್ತು ಆಳರಸರಿಗೆ. ಜೊತೆಗೇ. . . . ಈ ದೇಶದ ಪ್ರಭುತ್ವ ಕಾಶ್ಮೀರದಲ್ಲಿ ತಮ್ಮ ಮೇಲುಗೈ ಸಾಧಿಸಲು ತಿಂಗಳಾನುಗಟ್ಟಲೇ ಕರ್ಫ್ಯೂ ಹೇರಿ ನಾಗರಿಕ ಸೌಲಭ್ಯಗಳನ್ನೆಲ್ಲ ನಿರಾಕರಿಸಿದಾಗ ತೊಂದರೆಗೆ ಒಳಗಾದ ಗರ್ಭಿಣಿ, ಬಾಣಂತಿಯರು, ವಯೋವೃದ್ಧರು ಕಣ್ಣಿಗೆ ಬೀಳಬೇಕಿತ್ತು. ಸರ್ಕಾರಕ್ಕೆ ತಾಕೀತು ಮಾಡಬೇಕಿತ್ತು ತಕ್ಷಣ, ಇಂತಹ ಅಪ್ರಜಾಪ್ರಭುತ್ವ ರೀತಿಯ ಆಡಳಿತ ನಿಲ್ಲಿಸಿ ದೇಶದ ಸಂವಿಧಾನ ನೀಡಿದ ಮಾನವರ ಘನತೆಯ ಬದುಕಿನ ಹಕ್ಕನ್ನು ಉಲ್ಲಂಘಿಸಬೇಡಿರೆಂದು. ಸಂವಿಧಾನದಲ್ಲಿರುವ ಅಪರೂಪದ ಅನಿವಾರ್ಯದ ಸಂದರ್ಭದಲ್ಲಿ ಬಳಸಬೇಕಾದ ಕಲಮುಗಳ ದುರ್ಬಳಕೆ ಮಾಡದಿರುವಂತೆ ಹೇಳುವುದು ಅಗತ್ಯವಿತ್ತಲ್ಲವೇ? ನ್ಯಾಯಕ್ಕಾಗಿ ಮಾನವ ಹಕ್ಕುಗಳ ಸ್ಥಾಪನೆಗಾಗಿ ಸಲ್ಲಿಸಿದ ಅರ್ಜಿಗಳತ್ತ ಗಮನ ನೀಡದ ಸಂಗತಿಯೂ ಚರಿತ್ರೆಯೇ ಈಗ.

ಹಾಗೆಯೇ, ಯಾವುದೇ ಪೂರ್ವ ಸಿದ್ಧತೆಯೂ ಇಲ್ಲದೇ, ಪೂರ್ವ ಸೂಚನೆಗಳೂ ಇಲ್ಲದೇ, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕನಿಷ್ಟ ಸುಳಿವಾದರೂ ನೀಡದೇ ಏಕಾಏಕಿ ಲಾಕ್ಡೌನ್ ಘೋಷಿಸಿ, ತವರಿನಲ್ಲಿ ಬೆವರಿಗೆ ಬೆಲೆ ಸಿಗದ ಕಾರಣ ಊರಿಂದೂರಿಗೆ ವಲಸೆ ಬಂದವರಿಗೆ ದಿಕ್ಕು ಕಾಣದ ಸ್ಥಿತಿ ಉಂಟಾಗಿ ತಂಡೋಪತಂಡವಾಗಿ ಜೀವದ ಭಯವನ್ನೂ ಲೆಕ್ಕಿಸದೇ ‘ಸಾವಾದರೆ ನಾ ಹುಟ್ಟಿದ ನೆಲದಲ್ಲಿ, ನನ್ನ ಬಂಧು ಬಳಗಗಳ ಮಧ್ಯೆಯೇ ಆಗಲಿ’ ಎಂದು ಕಾಲ್ನಡಿಗೆಯಲ್ಲಿಯೇ ಹೊರಟೇ ಬಿಟ್ಟ ಕೂಲಿ ಕಾರ್ಮಿಕರಲ್ಲಿ ಎಷ್ಟೊಂದು ಜನ ಮಹಿಳೆಯರಿದ್ದರಲ್ಲ. ಗರ್ಭಿಣಿಯರು, ದಾರಿಯಲ್ಲಿಯೇ ಹೆತ್ತು ಹಸುಗೂಸನ್ನೇ ಎದೆಗವಚಿ, ಹೆರಿಗೆಯ ರಕ್ತ ಹರಿಯುತ್ತಿರುವಾಗಲೇ ಮತ್ತೆ ನಡೆದವರು. . . .ಅಲ್ಲೆಲ್ಲೂ ಕಾಣದ ಕಕ್ಕುಲತೆ ಇಲ್ಲೇಕೆ.. ಯುವರ್ ಆನರ್. . ..ದೆಹಲಿಯ ಗಡಿಯಲ್ಲಿ ಸ್ವಾಭಿಮಾನಿ ಕೃಷಿಕ್ಷೇತ್ರದಲ್ಲಿ ದುಡಿಯುತ್ತಿರುವ ರೈತಕುಟುಂಬಗಳ ಮಹಿಳೆಯರು ಕೃಷಿ ಕ್ಷೇತ್ರದ ಉಳಿವಿಗಾಗಿ, ಸ್ವಾಭಿಮಾನಿ ಬದುಕಿಗಾಗಿ ಬಂದು ನಿಂತಿದ್ದಾರೆ. ಅಲ್ಲಿ ಅಸಹಾಯಕತೆ ಇಲ್ಲ, ಆಕ್ರೋಶವಿದೆ. ಸಾತ್ವಿಕ ಆಕ್ರೋಶ, ಬೆವರಿನ ಬೆಲೆ ಗೊತ್ತಿರುವ ಆಕ್ರೋಶವದು. ಹಾಗಾಗಿ ‘ಮಹಿಳೆಯರು ಯಾಕಿದ್ದಾರೆ ಅಲ್ಲಿ? ಅವರನ್ನು ಸಮಜಾಯಿಸಿ ವಾಪಸ್ ಕಳಿಸಿ’ ಎನ್ನುವ ನಿಮ್ಮ ಮಾತಿನಲ್ಲಿ ಮನುವಿನ ಆಲೋಚನೆಗಳ ವಾಸನೆ ಬಡಿಯುತ್ತಿದೆ.

ಆದರೆ, ಈ ದೇಶದ ಬಹು ಸಂಖ್ಯಾತ ತಿನ್ನುವ ಅನ್ನದ ಮೂಲ ಗೊತ್ತಿರುವ ಜನ ಇದನ್ನು ಬೆಂಬಲಿಸುವುದಿಲ್ಲ. ಹಾಗೆಂದೇ ಸಂಯುಕ್ತ ಕಿಸಾನ್ ಮೋರ್ಚಾ ಜನವರಿ 18ನ್ನು ರೈತ ಮಹಿಳಾ ದಿನವೆಂದು ಘೋಷಿಸಿದೆ. ಇದನ್ನು ಬೆಂಬಲಿಸಿ ದೇಶದ ರಾಷ್ಟ್ರೀಯ ಆರು ಮಹಿಳಾ ಸಂಘಟನೆಗಳು ಕೃಷಿ ಮಸೂದೆಗಳನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳಲು ಒತ್ತಾಯಿಸಿ ಈ ದಿನವನ್ನು ರಾಷ್ಟ್ರೀಯ ಪ್ರತಿಭಟನಾ ದಿನವನ್ನಾಗಿ ಆಚರಿಸಲು ಕರೆ ನೀಡಿವೆ. ಜೊತೆ ಜೊತೆಗೇ ಮಹಿಳೆಯರ ಆರೋಗ್ಯ, ಆಹಾರ, ದುಡಿಮೆಗಳ ಪ್ರಶ್ನೆಗಳನ್ನು ಎತ್ತಲು, ಮಹಿಳೆಯರನ್ನು ಆರ್ಥಿಕ ಸಂಕಷ್ಟದಿಂದ ರಕ್ಷಿಸಲು, ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದಿಂದ ಪಾರುಮಾಡಲು, ಸ್ವ-ಸಹಾಯ ಸಂಘಗಳ ಸಾಲ ಮನ್ನಾ ಬೇಡಿಕೆಗಳನ್ನು ಇಟ್ಟು ಪ್ರತಿಭಟನೆಯನ್ನು ನಡೆಸಲು ತೀರ್ಮಾನಿಸಿವೆ. ಈ ಆಕ್ರೋಶ ಗಡಿಯಲ್ಲಿ ಮಾತ್ರವಲ್ಲ ದೇಶದೆಲ್ಲೆಡೆ ಜನವರಿ 18ರಂದು ರೈತ ಮಹಿಳೆಯರ ದಿನವಾಗಿ ಪ್ರಕಟಗೊಳ್ಳಲಿದೆ.

ನಮ್ಮದು ಸಾತ್ವಿಕ ಸಂಘರ್ಷ. ಆದರೆ ರಾಜಿರಹಿತ ಸಂಘರ್ಷವೆಂಬ ಸಂಯುಕ್ತ ಕಿಸಾನ್ ಮೋರ್ಚಾದ ಕರೆಯ ಜೊತೆಗೆ ಬಲಿಷ್ಟ ಮಹಿಳಾ ಚಳುವಳಿಯನ್ನು ಮುನ್ನಡೆಸುತ್ತಿರುವ ಆರು ಮಹಿಳಾ ಸಂಘಟನೆಗಳು ನಾವಿದ್ದೇವೆಂಬ ಬೆಂಬಲ ವ್ಯಕ್ತಪಡಿಸಿದೆ. ಇದು ಸುಮ್ಮನೆ ಕರೆಯಲ್ಲ. ಅನ್ನದಾತರನ್ನು ಅವಮಾನಿಸುವ, ಆಹಾರ ಸ್ವಾವಲಂಬನೆಯನ್ನು ಕಸಿದು ಅದಾನಿ ಅಂಬಾನಿಗಳ ಕೈಗೆ ಮುಫತ್ತಾಗಿ ಕೊಡುತ್ತಿರುವ ಅನ್ನದ್ರೋಹಿ ಕೆಲಸದ ವಿರುದ್ಧ ರಣಕಹಳೆಯಿದು.

 

 

 

 

Donate Janashakthi Media

Leave a Reply

Your email address will not be published. Required fields are marked *