ಕತ್ತು ಹಿಸುಕಿದ ಬಿಜೆಪಿಯನ್ನು ಕಣಿವೆಯ ಜನ ತಿರಸ್ಕರಿಸುವರೇ?

ಗುರುರಾಜ ದೇಸಾಯಿ
ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ಮುಕ್ತಾಯವಾಗಿದೆ.  ಒಟ್ಟು ಮೂರು ಹಂತದಲ್ಲಿ ನಡೆದ ಚುನಾವಣೆಯೂ ಶಾಂತಿಯುತವಾಗಿ, ಉತ್ಸಾಹದಾಯಕವಾಗಿ ನಡೆಯುವ ಮೂಲಕ ಸಾಂವಿಧಾನಿಕ ಮೌಲ್ಯಗಳೇ ಕಾಶ್ಮೀರದಲ್ಲಿನ ಜನತೆಯ ಹಕ್ಕುಗಳನ್ನು ರಕ್ಷಿಸುವಲ್ಲಿ ಪ್ರಮುಖಪಾತ್ರ ವಹಿಸಲಿದೆ ಎಂಬುದನ್ನು ಈ ಚುನಾವಣೆ ತೋರಸಲಿದೆ. 

2019ರ ಆಗಸ್ಟ್‌ನಲ್ಲಿ, ಸಂವಿಧಾನದ 370ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಮೂರು ಹಂತಗಳಲ್ಲಿ ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ಮುಗಿದಿದ್ದು, ಒಟ್ಟಾರೆ ಶೇಕಡಾ 63.88 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಅಂಕಿ- ಅಂಶಗಳು ತಿಳಿಸಿವೆ. ಸೆಪ್ಟೆಂಬರ್ 18 ರಂದು ನಡೆದ ಮೊದಲ ಹಂತದಲ್ಲಿ ಶೇ 61.38 ಹಾಗೂ ಸೆಪ್ಟೆಂಬರ್ 25 ರಂದು ನಡೆದ ಎರಡನೇ ಹಂತದಲ್ಲಿ ಶೇ 57.31ರಷ್ಟು ಮತದಾನವಾಗಿತ್ತು.  ಅಕ್ಟೋಬರ್​​ 1 ರಂದು ನಡೆದ ಮೂರನೇ ಮತ್ತು ಅಂತಿಮ ಹಂತದ ಚುನಾವಣೆಯಲ್ಲಿ ಶೇಕಡಾ 69.65 ರಷ್ಟು ಮತದಾನವಾಗಿದೆ. ಒಟ್ಟಾರೆ 63.88% ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರಕ್ಕಿದ್ದ ರಾಜ್ಯದ ವಿಶೇಷ ಸ್ಥಾನಮಾನ ತೆಗೆದುಹಾಕಿ ಅದನ್ನು ವಿಧಾನಸಭೆಯುಳ್ಳ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು.  ಅದರ ಭಾಗವಾಗಿದ್ದ ಲಡಾಖ್ ಅನ್ನೂ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿತ್ತು. ಸದ್ಯದ ಮಟ್ಟಿಗೆ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿದ್ದರೂ ವಿಧಾನಸಭೆ ಹೊಂದುವ ಅವಕಾಶ ಹೊಂದಿದೆ. ಆದರೆ, ಲಡಾಖ್‌ಗೆ ಆ ಸೌಲಭ್ಯ ಇಲ್ಲ. ಲಡಾಖ್‌ನಲ್ಲಿ ಸ್ಥಳೀಯ ಸ್ವಾಯತ್ತ ಸಂಸ್ಥೆಗಳು ಕೇಂದ್ರ ಸರ್ಕಾರದ ಕಣ್ಗಾವಲಿನಲ್ಲಿ ಕೆಲಸ ಮಾಡಬೇಕಿದೆ. ಆರ್ಟಿಕಲ್ 370 ರದ್ದತಿ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ತ್ವರಿತವಾಗಿ ಚುನಾವಣೆ ನಡೆಸಬೇಕು ಅಂತ ಕಾಂಗ್ರೆಸ್‌, ಪಿಡಿಪಿ, ಎನ್‌, ಸಿ, ಸಿಪಿಐಎಂ ಸೇರಿದಂತೆ ವಿವಿಧ ಪಕ್ಷಗಳು ಹಾಗೂ ವಿವಿಧ ವಲಯಗಳು ಆಗ್ರಹಿಸಸುತ್ತಾ ಬಂದಿದ್ದವು.

ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಯ ಬಾರಿಗೆ ವಿಧಾನಸಭೆ ಚುನಾವಣೆ ನಡೆದಿದ್ದು 2014ರಲ್ಲಿ. ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಪಿಡಿಪಿ, 28  ಸ್ಥಾನಗಳಲ್ಲಿ ಜಯ ಗಳಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ನಂತರ 25 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಜತೆಗೆ ಮೈತ್ರಿ ಏರ್ಪಡಿಸಿಕೊಂಡು ಸರ್ಕಾರ ರಚನೆ ಮಾಡಿತ್ತು. ಪಿಡಿಪಿ ನಾಯಕ ಮುಫ್ತಿ ಮಹಮ್ಮದ್ ಸಯೀದ್ ಮುಖ್ಯಮಂತ್ರಿ ಆಗಿದ್ದರು. ಅವರು 2015ರಲ್ಲಿ ನಿಧನರಾದ ನಂತರ ಅವರ ಮಗಳು ಮೆಹಬೂಬ ಮುಫ್ತಿ ಮುಖ್ಯಮಂತ್ರಿ ಗಾದಿಗೇರಿದ್ದರು. 2018ರಲ್ಲಿ ಬಿಜೆಪಿಯು ಪಿಡಿಪಿಗೆ ನೀಡಿದ್ದ ಬೆಂಬಲ ವಾಪಸ್ ಪಡೆಯುವುದರೊಂದಿಗೆ ಸರ್ಕಾರ ಪತನಗೊಂಡಿತ್ತು. ಅಂದಿನಿಂದಲೂ ಚುನಾಯಿತ ಸರ್ಕಾರ ಅಲ್ಲಿ ಇರಲಿಲ್ಲ. ಸುಪ್ರೀಂ ಕೋರ್ಟ್‌, 2024ರ ಸೆಪ್ಟೆಂಬರ್‌ 30ರೊಳಗೆ ಚುನಾವಣೆ ನಡೆಸುವಂತೆ ಆದೇಶಿಸಿದ ನಂತರ ಅಲ್ಲಿ ಚುನಾವಣೆ ನಡೆಯುತ್ತಿದೆ.

ಇದನ್ನೂ ಓದಿಜಮ್ಮು ಮತ್ತು ಕಾಶ್ಮೀರವನ್ನು ಪುರಸಭೆ ಮಟ್ಟಕ್ಕಿಳಿಸುವ ತಿದ್ದುಪಡಿ: ತರಿಗಾಮಿ ತೀವ್ರ ಟೀಕೆ

ಹಿಂದಿನ ಚುನಾವಣೆಯ ಲೆಕ್ಕಾಚಾರ

2014 ರಲ್ಲಿ ನಡೆದ ಚುನಾವಣೆಯಲ್ಲಿ ಪಿಡಿಪಿ ಪಕ್ಷ 84 ಸ್ಥಾನಗಳಲ್ಲಿ ಸ್ಪರ್ದಿಸಿ 22.67% ಮತಗಳೊಂದಿಗೆ 28 ಸ್ಥಾನಗಳನ್ನು ಪಡೆದಿತ್ತು.  ಬಿಜೆಪಿ 75 ಸ್ಥಾನಗಳಲ್ಲಿ ಸ್ಪರ್ದಿಸಿ 22.98% ಮತಪ್ರಮಾಣದೊಂದಗೆ 25 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು 85 ಸ್ಥಾನಗಳಲ್ಲಿ ಸ್ಪರ್ಧಿಸಿ 20.77% ಮತ ಪ್ರಮಾಣದೊಂದಿಗೆ 15 ಸೀಟುಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್‌ ಪಕ್ಷವು 86 ಸ್ಥಾನಗಳಲ್ಲಿ ಸ್ಪರ್ಧಿಸಿ 18.01% ಮತಪ್ರಮಾಣದೊಂದಿಗೆ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಸಿಪಿಐಎಂ 3 ಸ್ಥಾನಗಳಲ್ಲಿ ಸ್ಪರ್ಧಿಸಿ, 1% ಮತ ಪ್ರಮಾಣದೊಂದಿಗೆ 1 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು.

2008 ರಲ್ಲಿ ನಡೆದ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು 28 ಸ್ಥಾನಗಳನ್ನು ಪಡೆದಿತ್ತು, ಪಿಡಿಪಿ21 ರಲ್ಲಿ ಗೆದ್ದರೆ, ಬಿಜೆಪಿ 11 ಸ್ಥಾನಗಳಲ್ಲಿ ಗೆಲವು ಸಾಧಿಸಿತ್ತು. ಕಾಂಗ್ರೆಸ್‌ 12 ಸ್ಥಾನಗಳಲ್ಲಿ, ಸಿಪಿಐಎಂ 1 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್‌ ಪಕ್ಷದ ಬೆಂಬಲದೊಂದಿಗೆ  ನ್ಯಾಷನಲ್ ಕಾನ್ಫರೆನ್ಸ್ ಓಮರ್‌ ಅಬ್ದುಲ್ಲಾ ಮುಖ್ಯಮಂತ್ರಿಯಾದರು.

ಲೋಕಸಭಾ ಚುನಾವಣೆಯ ಅಂಕಿಅಂಶಗಳನ್ನು ನೋಡುವುದಾದರೆ 2024 ರಲ್ಲಿ ಐದು ಕ್ಷೇತ್ರಗಳ ಪೈಕಿ ಬಿಜೆಪಿ ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ ತಲಾ ಎರಡು ಸ್ಥಾನಗಳನ್ನು ಗೆದ್ದಿದ್ದರೆ, ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

3 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ, ಶೇ 24.36 ಮತ ಗಳಿಕೆಯ ಮೂಲಕ  ಜಮ್ಮು ಭಾಗದಲ್ಲಿರುವ ಉಧಂಪುರ ಮತ್ತು ಜಮ್ಮು ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ನ್ಯಾಷನಲ್‌ ಕಾನ್ಫರೆನ್ಸ್‌ 3 ರಲ್ಲಿ ಸ್ಪರ್ಧಿಸಿ ಶೇ 22.3 ಮತ ಗಳಿಕೆಯ ಮೂಲಕ  ಕಾಶ್ಮೀರ ವಿಭಾಗದಲ್ಲಿ ಬರುವ ಶ್ರೀನಗರ, ಅನಂತನಾಗ್‌ ರಾಜೌರೀ ಕ್ಷೇತ್ರಗಳನ್ನು ನ್ಯಾಷನಲ್‌ ಕಾನ್ಫರೆನ್ಸ್‌  ತನ್ನದಾಗಿಸಿಕೊಂಡಿತ್ತು. ಬಾರಾಮುಲ್ಲಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿದ್ದ ಅಬ್ದುಲ್‌ ರಶೀದ್‌ ಶೇಖ್‌ ಅವರು ಜಯಭೇರಿ ಬಾರಿಸಿದ್ದರು.   ಪಿಡಿಪಿ 3ರಲ್ಲಿ ಸ್ಪರ್ಧೆಸಿ ಶೇ 8.48 ಮತ ಗಳಿಸಿದ್ದರೆ,  ಕಾಂಗ್ರೆಸ್‌ 2ರಲ್ಲಿ ಸ್ಪರ್ಧೆಸಿ ಶೇ 19.38 ಮತ ಪಡೆದಿತ್ತು. ಆದರೆ ಯಾವುದೆ ಸ್ಥಾನಗಳು ದೊರೆತಿರಲಿಲ್ಲ.

2019 ರಲ್ಲಿ ಬಿಜೆಪಿ 46.24% ಮತಗಳೊಂದಿಗೆ 3 ಲೋಕಸಭಾ ಸ್ಥಾನಗಳಲ್ಲಿಗೆಲುವು ಸಾಧಿಸಿತು,    ನ್ಯಾಷನಲ್‌ ಕಾನ್ಫರೆನ್ಸ್‌  ಪಕ್ಷವು, 7.87% ದೊಂದಿಗೆ 2 ಸ್ಥಾನದಲ್ಲಿ ಗೆಲುವು ಸಾಧಿಸಿತು. ಕಾಂಗ್ರೆಸ್‌ 28.38%, ಪಿಡಿಪಿ 3.38% ಮತ ಪಡೆದರೂ ಯಾವುದೇ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.

ಪಕ್ಷಗಳ ಬಲಾಬಲ ಹೇಗಿದೆ?

ಒಟ್ಟು 90 ಕ್ಷೇತ್ರಗಳಲ್ಲಿ 22 ಸ್ಥಾನಗಳಲ್ಲಿ ನ್ಯಾಶನಲ್‌ ಕಾನ್ಫರೆನ್ಸ್‌ ಪಕ್ಷ ಸುಲಭವಾಗಿ ಗೆಲ್ಲಲಿದೆ ಎಂದು ಹೇಳಲಾಗುತ್ತಿದೆ. ಈ 22 ಕ್ಷೇತ್ರಗಳಲ್ಲಿ ಕಳೆದು ಮೂರು ವರ್ಷಗಳಿಂದ ನ್ಯಾಶನಲ್‌ ಕಾನ್ಫರೆನ್ಸ್‌ ಪಕ್ಷ ಗೆಲ್ಲುತ್ತಿದೆ. ಅದೇ ರೀತಿ ಪಿಡಿಪಿ 21, ಕಾಂಗ್ರೆಸ್‌ ಮತ್ತು ಬಿಜೆಪಿ ತಲಾ 12 ಸ್ಥಾನಗಳನ್ನು ಸುಲಭವಾಗಿ ಗೆಲ್ಲಲಿದೆ. ಸಿಪಿಐಎಂ 1 ಸ್ಥಾನವನ್ನು ಸುಲಭವಾಗಿ ಗೆಲ್ಲಲಿದೆ.

ಕಳೆದ ಮೂರು ಚುನಾವಣೆಗಳಲ್ಲಿ ನ್ಯಾಶನಲ್‌ ಕಾನ್ಫರೆನ್ಸ್‌ ಪಕ್ಷ 43 ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಪಿಡಿಪಿ 51, ಕಾಂಗ್ರೆಸ್ 52 ಮತ್ತು ಬಿಜೆಪಿ 61 ಸ್ಥಾನಗಳಲ್ಲಿ ಗೆಲುವು ಸಾಧಿಸಿಲ್ಲ. ಕಾಶ್ಮೀರದಲ್ಲಿ ನ್ಯಾಶನಲ್‌ ಕಾನ್ಫರೆನ್ಸ್‌ ಪಕ್ಷ ಪ್ರಭಲವಾಗಿದ್ದರೆ, ಜಮ್ಮುವಿನಲ್ಲಿ ಬಿಜೆಪಿ ಪ್ರಭಲವಾಗಿದೆ. ಕಾಶ್ಮೀರದಲ್ಲಿ ಕಾಂಗ್ರೆಸ್‌ ಗೆಲವು ಕ್ಷವಾಗಿದ್ದು, ಜಮ್ಮುವಿನಲ್ಲಿ 50:50 ಲೆಕ್ಕಾಚಾರದಲ್ಲಿ ಒಂದಿಷ್ಟು ಸ್ಥಾನಗಳಳನ್ನು ಗೆಲ್ಲಬಹುದು ಎಂದು ಹೇಳಲಾಗುತ್ತಿದೆ.

ಇಂಡಿಯಾ ಕೂಟ

ಇದೆಲ್ಲವನ್ನು ಅರ್ಥಮಾಡಿಕೊಂಡಿರುವ ವಿಪಕ್ಷಗಳ ಕೂಟ ಇಂಡಿಯಾ ಕೂಟ ಏನಿದೆ ಅದು ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತಿದೆ. ಮೈತ್ರಿ ಒಪ್ಪಂದದ ಪ್ರಕಾರ ಕಾಂಗ್ರೆಸ್ 32 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಎನ್‌ಸಿ 51 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಮತ್ತು ಪ್ಯಾಂಥರ್ಸ್ ಪಾರ್ಟಿ ತಲಾ ಒಂದು ಸ್ಥಾನಕ್ಕೆ ಸ್ಪರ್ಧಿಸಿವೆ.

ಕಾಶ್ಮೀರ ಕಣಿವೆಯಲ್ಲಿ ನ್ಯಾಶನಲ್‌ ಕಾನ್ಫರೆನ್ಸ್‌ ಪ್ರಭಾವ ಮತ್ತು ಜಮ್ಮು ಪ್ರದೇಶದಲ್ಲಿ ಕಾಂಗ್ರೆಸ್‌ ಪ್ರಭಾವ ಒಟ್ಟು ಸೇರಿದರೆ 53 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಹೇಳಲಾಗುತ್ತಿದೆ.  ಹಾಗಾಗಿ ಇಂಡಿಯಾ ಕೂಟ ಒಟ್ಟಾರೆ 65ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರವಾಗಿದೆ.

ಬಿಜೆಪಿ ಮತ್ತು ಮಿತ್ರಪಕ್ಷ ಗೆಲ್ಲಬಹುದೆ?

ಬಿಜೆಪಿ ಗೆಲ್ಲಬಹುದೇ? ಕ್ಷೇತ್ರ ವಿಂಗಡಣೆಯ ನಂತರ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಬಹುದು ಎಂಬ ನಿರಿಕ್ಷೆಯಲ್ಲಿದೆ. ಆದರೆ ಅಂಕಿಅಂಶಗಳು ಬೇರೆಯದನ್ನೆ ಹೇಳುತ್ತವೆ. ಜಮ್ಮುವಿನಲ್ಲಿ ಬಿಜೆಪಿ ಪ್ರಭಲವಾಗಿದ್ದರೂ 43 ಸ್ಥಾನಗಳಲ್ಲಿ 12 ಸ್ಥಾನಗಳಲ್ಲಿ ಮಾತ್ರ ಗೆಲ್ಲಬಹುದು ಎಂದು ಹೇಳಲಾಗುತ್ತಿದೆ. ಕಾಶ್ಮೀರದಲ್ಲಿ ಸಣ್ಣ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿದ್ದರೂ ಗೆಲುವು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಬಾರಾಮುಲ್ಲಾ ಲೋಕಸಭಾ ಕ್ಷೇತ್ರದ ಸಂಸದ ಅಬ್ದುಲ್‌ ರಶೀದ್‌ ಶೇಖ್ (ಎಂಜಿನಿಯರ್‌ ರಶೀದ್‌) ಬಿಜೆಪಿಗೆ ಬೆಂಬಲವನ್ನು ಸೂಚಿಸಿದ್ದಾರೆ. 370 ವಿಧಿ ವಾಪಾಸ್ಸಾತಿಯ ಬಗ್ಗೆ ಇವರು ಇಲ್ಲಿಯವರೆಗೆ ಸ್ಪಷ್ಟ ನಿಲುವನ್ನು ಹೊಂದಿಲ್ಲ. ಹಾಗಾಗಿ ಇವರ ಪ್ರಭಾವ ಬಿಜೆಪಿಗೆ ಹೆಚ್ಚು ಲಾಭವನ್ನು ತಂದು ಕೊಡುವುದಿಲ್ಲ ಎಂದು ಹೇಳಲಾಗುತ್ತಿದೆ.

ಅತಂತ್ರ ವಿಧಾನಸಭಾ ಚುನಾವಣೆ ನಿರ್ಮಾಣ ಆಗಬೇಕು ಎಂದು ಬಿಜೆಪಿ ಬಯಸುತ್ತಿದೆ. ಆ ಕಾರಣಕ್ಕಾಗಿಯೇ ಕಾಶ್ಮಿರವನ್ನು ಆಕ್ರಮಿತ ಪ್ರದೇಶ ಎಂದು ಪದೇ ಪದೇ ಸುಳ್ಳು ಹೇಳುತ್ತಾ ಬರುತ್ತಲೇ ಇದೆ.  ಜಮ್ಮು ಕಾಶ್ಮೀರದ ಸೌಹಾರ್ದತೆಯನ್ನು ಹಾಳು ಮಾಡಿ ಹಿಂದೂತ್ವದ ಅಜೆಂಡವನ್ನು ಜಾರಿ ಮಾಡಲು ಈ ಚುನಾವಣೆಯನ್ನು ಬಿಜೆಪಿ ಬಳಸಿಕೊಂಡಿದೆ ಎಂದು ರಾಜಕೀಯ ವಿಶ್ಲೇಷಕರು ಆರೋಪಗಳನ್ನು ಮಾಡುತ್ತಿದ್ದಾರೆ.

ಸಿಪಿಐಎಂ ನಿರ್ಣಾಯಕ ಪಾತ್ರ

ಜಮ್ಮು ಕಾಶ್ಮೀರದ ಜನರ ಹಕ್ಕುಗಳನ್ನು ಕಾಪಾಡಲು ಸಿಪಿಐಎಂ ಮಹತ್ವದ ಪಾತ್ರವಹಿಸುತ್ತಿದೆ. 370 ರದ್ದತಿ ವಿರುದ್ದ ಇತ್ತೀಚೆಗೆ ನಿದನರಾದ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹಾಗೂ ಮಾಜಿ ಶಾಸಕ ಮೊಹಮ್ಮದ್‌ ಯುಸೂಫ್‌ ತರೀಗಾಮಿ ಮಹತ್ವದ ಹೋರಾಟ ನಡೆಸುತ್ತಾ ಬಂದಿದ್ದಾರೆ. ಅಲ್ಲಿ ಹೇರಿದ್ದ ನಿರ್ಬಂದಗಳ ವಿರುದ್ದ ಕಾನೂನಾತ್ಮಕ ಹೋರಾಟಗಳನ್ನು ನಡೆಸಿದ್ದರು. ಬಿಜೆಪಿಯ ಆಟವನ್ನು ಚನ್ನಾಗಿ ಅರಿತಿರುವ ಮೊಹಮ್ಮದ್‌ ಯುಸೂಫ್‌ ತರೀಗಾಮಿ, ಈ ಚುನಾವಣೆಯಲ್ಲಿ ಬಿಜೆಪಿಯ ವಿರುದ್ದ ಮೈತ್ರಿಕೂಟವನ್ನು ರಚಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು.

ಬಿಜೆಪಿಯ ಹಿಂದುತ್ವ ಪ್ರಯೋಗ ಶಾಲೆ

ಜಮ್ಮು ಪ್ರದೇಶವು ‘ದೇವಾಲಯಗಳ ನಗರ’ ಎಂದೇ ಪ್ರಸಿದ್ಧವಾಗಿದೆ. ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣವೇ ಜಮ್ಮು ಪ್ರದೇಶದ ಲೋಕಸಭಾ ಕ್ಷೇತ್ರಗಳ ಮುಖ್ಯ ಚುನಾವಣಾ ವಿಷಯವಾಗಿತ್ತು. ಜಮ್ಮುವಿನ ಎರಡು ಕ್ಷೇತ್ರಗಳಿಗೆ ಈಗಾಗಲೇ ಮತದಾನ ಮುಗಿದಿದೆ. ಬೀದಿ ಬೀದಿಗಳಲ್ಲಿ ರಾಮ ಮಂದಿರದ ವಿಚಾರಗಳನ್ನೇ ಇಟ್ಟುಕೊಂಡು ಬಿಜೆಪಿಯು ಮತಯಾಚನೆ ಮಾಡಿ ಅಲ್ಲಿ ಗೆಲುವು ಸಾಧಿಸಿತ್ತು.

ಮನೆಗಳಿಗೆ ಅಳವಡಿಸಲಾದ ಸ್ಮಾರ್ಟ್‌ ವಿದ್ಯುತ್‌ ಮೀಟರ್‌ನಲ್ಲಿನ ತಾಂತ್ರಿಕ ಸಮಸ್ಯೆಯು ಜನರನ್ನು ಹೈರಾಣು ಮಾಡಿತ್ತು. ದೊಡ್ಡ ಮೊತ್ತದ ಬಿಲ್‌ಗಳು ಜನರನ್ನು ಕಾಡಿದವು. ಇದಕ್ಕಾಗಿ ಜನರು ಬೀದಿಗಿಳಿದು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು. ಇದು ಚುನಾವಣೆಯ ಪ್ರಮುಖ ವಿಚಾರವಾಯಿತು. ಇದರ ಜೊತೆಯಲ್ಲಿಯೇ ನಿರುದ್ಯೋಗ ಸಮಸ್ಯೆಯು
ತಾರಕಕ್ಕೇರಿತ್ತು. ಇದು ಕೂಡ ಪ್ರಮುಖ ವಿಷಯವಾಯಿತು. ಈ ವಿಚಾರಗಳನ್ನು ಮರೆಸಲು, ಬಿಜೆಪಿಯು ಹಿಂದುತ್ವದ ಮೊರೆ ಹೋಯಿತು. ಸುಳ್ಳು ಕಾರಣ ನೀಡಿ ಏಕಾಏಕಿ ಅಮರನಾಥ ಯಾತ್ರೆಯನ್ನು ನಿಲ್ಲಿಸಿ ಅದನ್ನು ಮುಸ್ಲಿಂರ ವಿರುದ್ಧ ತಿರುಗಿಸುವ ಪ್ರಯತ್ನ ಮಾಡಿತು.

ಕಾಶ್ಮೀರದ ಜನಸಂಖ್ಯಾ ರಚನೆ ಯನ್ನೇ ಬದಲಾವಣೆ ಮಾಡಲು ಈ ಚುನಾವಣೆಯನ್ನು ಬಿಜೆಪಿ ಬಳಸಿಕೊಂಡಿದೆ ಎಂಬ ಆರೋಪ ಕೇಳಿ ಬಂದಿದೆ.  ಹಿಂದೂ ವಲಸಿಗರನ್ನು ಕರೆತಂದು ಇಲ್ಲಿ ನೆಲೆಸುವಂತೆ ಮಾಡುವ ಮೂಲಕ ಮುಸ್ಲಿಂರ  ಜನಸಂಖ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿದೆ. ಅದಕ್ಕಾಗಿ ಚುನಾವಣಾ ಆಯೋಗವನ್ನು ಬಳಸಿಕೊಂಡಿದೆ ಎಂದು ನ್ಯಾಶನಲ್‌ ಕಾನ್ಫುರೆನ್ಸ್‌ ಮುಖ್ಯಸ್ಥ ಫಾರೂಕ್‌ ಅಬ್ದುಲ್‌ ಆರೋಪಿಸಿದ್ದಾರೆ.

ಪ್ರಸ್ತುತತೆಗಾಗಿ ಹೋರಾಡುತ್ತಿರುವ ಪ್ರದೇಶ

ಜಮ್ಮು ಮತ್ತು ಕಾಶ್ಮೀರಕ್ಕೆ ರಾಜಕೀಯ ಭವಿಷ್ಯ ಪ್ರಮುಖವಾಗಿದ್ದರೂ, ಜಮ್ಮು ಇನ್ನೂ ಪ್ರಸ್ತುತತೆಯನ್ನು ಕಂಡುಕೊಳ್ಳಲು ಹೆಣಗಾಡುತ್ತಿದೆ. ಜಮ್ಮುವಿನ ಸಮಸ್ಯೆಗಳು ಹೊಸದಲ್ಲ, ಆದರೆ ಕೇಂದ್ರ ಸರ್ಕಾರದಿಂದ ನಿರ್ಲಕ್ಷ್ಯಕ್ಕೆ ಒಳಗಾಗುಗುತ್ತಿದೆ. ಕಳೆದ ಏಳು ವರ್ಷಗಳಿಂದ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ನೊಂದಿರುವ ಪ್ರದೇಶವಿದು. ಕಾಶ್ಮೀರ ಕಣಿವೆಯು ತನ್ನದೇ ಆದ ಸವಾಲುಗಳನ್ನು ಎದುರಿಸುತ್ತಿರುವಾಗ, ಜಮ್ಮುವಿನ ಹೋರಾಟಗಳನ್ನು ಸಾಮಾನ್ಯವಾಗಿ ಹತ್ತಿಕ್ಕಲಾಗುತ್ತದೆ. ಸ್ಥಗಿತಗೊಂಡಿರುವ ಅಭಿವೃದ್ಧಿ ಯೋಜನೆಗಳಿಂದ ಉದ್ಯೋಗಾವಕಾಶಗಳ ಸವೆಯುತ್ತಿವೆ.

ಜಮ್ಮುವಿನ ಆರ್ಥಿಕ ಬೆನ್ನೆಲುಬು ಪ್ರವಾಸೋಧ್ಯಮ ಮತ್ತು ಸಾರಿಗೆ ಉಧ್ಯಮ ದೊಡ್ಡ ಪ್ರಮಾಣದ ನಷ್ಟ ಅನುಭವಿಸಿದೆ. ಅನೇಕ ಟ್ರಕ್ಕರ್‌ಗಳು ಮತ್ತು ವಾಣಿಜ್ಯ ವಾಹನ ಮಾಲೀಕರು ಸರ್ಕಾರದಿಂದ ಯಾವುದೇ ಯೋಜನೆಗಳನ್ನು ಪಡೆಯಲಾಗಿದೆ ಸಾಲದ ಹೊರೆಯನ್ನು ಹೊತ್ತಿದ್ದಾರೆ.

ಹೆಚ್ಚಿನ ಉದ್ಯೋಗಗಳು ಸರ್ಕಾರಿ ಹುದ್ದೆಗಳಿಗೆ ಸಂಬಂಧಿಸಿರುವುದರಿಂದ, ಹಲವಾರು ಯುವಕರು ವಯಸ್ಸಿನ ಮಿತಿಯನ್ನು ದಾಟಿ ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿದ್ದಾರೆ.
ಆರ್ಟಿಕಲ್ 370 ರದ್ದಾದ ನಂತರ ಭೂಮಿ ಮತ್ತು ಉದ್ಯೋಗದ ಸುರಕ್ಷತೆಗಳ ಬಗ್ಗೆ ಕಾಶ್ಮೀರದ ಜನರು ಎತ್ತಿರುವ ಕಳವಳಗಳಂತೆಯೇ, ಜಮ್ಮುವಿನ ನಿವಾಸಿಗಳು ಇದೇ ರೀತಿಯ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಭಯೋತ್ಪಾದನಾ ಕೃತ್ಯ: ಭಾರಿ ಏರಿಕೆ

ಸಂವಿಧಾನದ 370ನೇ ವಿಧಿಯ ಅಡಿ ನೀಡಲಾದ ವಿಶೇಷ ಸ್ಥಾನವನ್ನು ತೆಗೆದುಹಾಕುವುದರಿಂದ ಜಮ್ಮು–ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದು ಎಂದು 2019ರ ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರವು ಹೇಳಿತ್ತು. ಆದರೆ, ವಾಸ್ತವದಲ್ಲಿ ಇದು ಸಾಧ್ಯವಾಗಿಲ್ಲ ಎಂಬುದನ್ನು ಕೇಂದ್ರ ಸರ್ಕಾರದ್ದೇ ದತ್ತಾಂಶಗಳು ಹೇಳುತ್ತವೆ. ಬದಲಿಗೆ ಜಮ್ಮು–ಕಾಶ್ಮೀರದ ವಿಶೇಷ ಸ್ಥಾನವನ್ನು ತೆಗೆದುಹಾಕಿದ ನಂತರ ಭಯೋತ್ಪಾದನಾ ಚಟುವಟಿಕೆಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿವೆ.

ವಿಶೇಷ ಸ್ಥಾನ ತೆಗೆದುಹಾಕುವುದರ ಮೂಲಕ ಭಯೋತ್ಪಾದನಾ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಸರ್ಕಾರ ವಿಫಲವಾಗಿದೆ. ಜತೆಗೆ ಭಯೋತ್ಪಾದನಾ ಚಟುವಟಿಕೆಗಳು ಉಲ್ಬಣಗೊಳ್ಳಲು ಸರ್ಕಾರದ ಈ ಕ್ರಮ ಕಾರಣವಾಗಿದೆ ಎಂಬುದನ್ನೂ ಈ ದತ್ತಾಂಶಗಳು ವಿವರಿಸುತ್ತವೆ. 2017ರಲ್ಲಿ ನಡೆದಿದ್ದ ಭಯೋತ್ಪಾದನಾ ಚಟುವಟಿಕೆಗಳಿಗೆ ಹೋಲಿಸಿದರೆ 2022ರಲ್ಲಿ ನಡೆದ ಕೃತ್ಯಗಳ ಸಂಖ್ಯೆಯಲ್ಲಿ ಎರಡು ಪಟ್ಟಿನಷ್ಟು ಏರಿಕೆಯಾಗಿದೆ ಎಂಬುದನ್ನು ಅಂಕಿಅಂಶಗಳು ತೋರಿಸುತ್ತಿವೆ.

ಕಣಿವೆಯಲ್ಲಿ 18 ತಿಂಗಳ ಯಾತನೆ

ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನವನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ್ದರಿಂದ ಜಮ್ಮು–ಕಾಶ್ಮೀರ ಬಿಕ್ಕಟ್ಟು ಎದುರಿಸಿತು. ಇಂಟರ್‌ನೆಟ್‌ ಸ್ಥಗಿತಗೊಂಡಿದ್ದರಿಂದ 2019ರ ಆಗಸ್ಟ್ 5ರ ಬಳಿಕ ಹೊರಜಗತ್ತಿನ ಜೊತೆ ಇಲ್ಲಿನ ಜನರ ಸಂಪರ್ಕ ಬಹುತೇಕ ನಿಂತು ಹೋಯಿತು. ಎಲ್ಲ ರೀತಿಯ ಸಂವಹನ ಮಾರ್ಗಗಳು ಕಡಿತಗೊಂಡವು. ಇದು ಸುದೀರ್ಘ 18 ತಿಂಗಳವರೆಗೆ ರಾಜ್ಯವನ್ನು ಬಾಧಿಸಿತು. ಜನಜೀವನ, ಆರೋಗ್ಯ, ಪ್ರವಾಸೋದ್ಯಮ, ಆರ್ಥಿಕತೆ ಬುಡಮೇಲಾಗಲು ಕಾರಣಯಾಯಿತು.

ಜಮ್ಮು–ಕಾಶ್ಮೀರ ಚೇಂಬರ್ ಆಫ್ ಕಾಮರ್ಸ್‌ನ ವರದಿ ಪ್ರಕಾರ, 2019ರ ಆಗಸ್ಟ್ 5ರಿಂದ 2020ರ ಜುಲೈ ಅವಧಿಯಲ್ಲಿ ಉದ್ಯಮಗಳು ₹40,000 ಕೋಟಿಯಷ್ಟು ಆರ್ಥಿಕ ನಷ್ಟ ಎದುರಿಸಿದ್ದವು. 4.96 ಲಕ್ಷ ಜನರು ಉದ್ಯೋಗ ಕಳೆದುಕೊಂಡರು. ಪ್ರವಾಸೋದ್ಯಮ ಹಾಗೂ ದೂರಸಂಪರ್ಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ರಾಜ್ಯದ ಸುಮಾರು 5,000 ಜನರಿಗೆ ಹಲವು ತಿಂಗಳು ವೇತನ ಸಿಕ್ಕಿರಲಿಲ್ಲ. ಇಂಟರ್‌ನೆಟ್ ಇಲ್ಲದ ಕಾರಣ, ಆನ್‌ಲೈನ್ ಶಾಪಿಂಗ್, ಬುಕ್ಕಿಂಗ್ ಸೇವೆಗಳು, ಇ–ಕಾಮರ್ಸ್, ಕೊರಿಯರ್ ಸೇವೆಗಳು, ನವೋದ್ಯಮಗಳು ಇನ್ನಿಲ್ಲದ ನಷ್ಟ ಅನುಭವಿಸಿದ್ದವು ಎಂದು ಜಮ್ಮು–ಕಾಶ್ಮೀರ ಚೇಂಬರ್ ಆಫ್ ಕಾಮರ್ಸ್‌ ತಿಳಿಸಿದೆ.

ಆನ್‌ಲೈನ್ ಆಧಾರಿತ ಸಾರಿಗೆ ಸೇವೆಗಳನ್ನು ನೀಡುವ ಕ್ಯಾಬ್ ಸಂಸ್ಥೆಗಳು, ಆಹಾರ ಪೂರೈಕೆ ಉದ್ಯಮಗಳು, ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ತುಂಬುವ ಅಂಗಡಿಯವರು ಸತತ ಒಂದೂವರೆ ತಿಂಗಳವರೆಗೆ ಬಾಗಿಲು ಹಾಕಬೇಕಾಯಿತು. ಡಿಜಿಟಲ್‌ ಆಧಾರಿತ ಆರೋಗ್ಯ ಸೇವೆಗಳನ್ನು ಪಡೆಯಲು ರೋಗಿಗಳು ಕಷ್ಟಪಟ್ಟರು. ಆಸ್ಪತ್ರೆಗಳಲ್ಲಿ ಇಂಟರ್‌ನೆಟ್ ಸಹಾಯದಿಂದ ನಡೆಯಬೇಕಿದ್ದ ವಿವಿಧ ಸೇವೆಗಳು ನಿಂತುಹೋದವು. ಆನ್‌ಲೈನ್ ಮೂಲಕ ವೈದ್ಯರನ್ನು ಸಂಪರ್ಕಿಸಿ ಆರೋಗ್ಯ ಸಲಹೆ ಪಡೆಯುವ ಅವಕಾಶ ಮುಚ್ಚಿಹೋಯಿತು. ಆಯುಷ್ಮಾನ್ ಭಾರತ್ ಸೇವೆಯಡಿ ಚಿಕಿತ್ಸೆ ಪಡೆಯಬೇಕಿದ್ದ ಜನರಿಗೆ ಡಿಜಿಟಲ್‌ ದಾಖಲೆಗಳು ಲಭ್ಯವಾಗದೇ ಕಷ್ಟ ಅನುಭವಿಸಬೇಕಾಯಿತು.  ಹಾಗಾಗಿ ಜಮ್ಮು ಕಾಶ್ಮೀರದ ಜನ ಈ ಚುನಾವಣೆಯಲ್ಲಿ ತಮ್ಮ ಹಕ್ಕಿನ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ.

ಚುನಾವಣಾ ವಿಷಯಗಳು

ಎರಡು ಪ್ರಾದೇಶಿಕ ಪಕ್ಷಗಳಾಗಿರುವ ನ್ಯಾಷನಲ್‌ ಕಾನ್ಫರೆನ್ಸ್‌ ಹಾಗೂ ಪಿಡಿಪಿ ಮತ್ತು ರಾಷ್ಟ್ರೀಯ ಪಕ್ಷಗಳಾಗಿರುವ ಕಾಂಗ್ರೆಸ್‌ ಹಾಗೂ ಸಿಪಿಐಎಂ ಪಕ್ಷಗಳು  ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮತ್ತೆ ಪಡೆಯುವುದು ಹಾಗೂ 370ನೇ ವಿಧಿಯಡಿ ಪುನಃ ವಿಶೇಷ ಸ್ಥಾನಮಾನ ಕಲ್ಪಿಸುವುದಕ್ಕೆ ಸಂಬಂಧಿಸಿದ ಆಗ್ರಹದ ಮೇಲೆ ಮತದಾರರನ್ನು ಸೆಳೆಯುತ್ತಿವೆ.  ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಕಾಶ್ಮೀರ ಪ್ರಾಂತ್ಯದಲ್ಲಿ ಭಯೋತ್ಪಾದನೆ ಕಡಿಮೆಯಾಗಿದೆ ಎನ್ನುವುದೂ ಸೇರಿದಂತೆ ವಾಸ್ತವಕ್ಕೆ ವಿರುದ್ಧವಾದ ಅನೇಕ ವಿಚಾರಗಳನ್ನು ವ್ಯವಸ್ಥಿತವಾಗಿ ಹಬ್ಬಿಸಲಾಗುತ್ತಿದೆ. ಚುನಾವಣೆಯಲ್ಲಿ ಅವು ಕೂಡ ಪ್ರಮುಖ ಪಾತ್ರ ವಹಿಸಿರುವ ಸಾಧ್ಯತೆಯಿದೆ. ನಿರುದ್ಯೋಗ, ವಿದ್ಯುತ್, ರಸ್ತೆ, ನೀರು ಆಸ್ಪತ್ರೆಗಳು, ಶಾಲೆಗಳು ಮತ್ತು ಕಾಲೇಜುಗಳು ಮೂಲಸೌಕರ್ಯಗಳು ಚುನಾವಣೆಯ ಚರ್ಚಿತ ವಿಷಯಗಳಾಗಿವೆ..  ತಮ್ಮ ನಿರೀಕ್ಷೆಗಳನ್ನು ಪೂರೈಸುವಲ್ಲಿ ಇಲ್ಲಿಯವರೆಗೆ ಯಾರೂ ಉತ್ತಮ ಸಾಧನೆ ಮಾಡಿಲ್ಲ. ರಾಜಕೀಯ ಪಕ್ಷಗಳು ಈ ಸಮಸ್ಯೆಗಳನ್ನು ನಿವಾರಿಸತ್ತವಾ ಅಥವಾ ನಮ್ಮನ್ನು ಮತಬ್ಯಾಂಕ್‌ ಆಗಿ ಅಷ್ಟೆ ನೋಡುತ್ತಾರಾ? ಎಂಬ  ಎಂಬ ಆತಂಕ ಮತದಾರರಲ್ಲಿ ಮೂಡಿದೆ.

ಒಟ್ಟಾರೆ ಬಹು ನಿರೀಕ್ಷೆಯಲ್ಲಿರುವ ಜಮ್ಮು ಕಾಶ್ಮೀರದ ಚುನಾವಣೆಯಲ್ಲಿ ಯುವಜನತೆ ಮತದಾನಕ್ಕೆ ಉತ್ಸಾಹವನ್ನು ತೋರಿದ್ದಾರೆ. ಇಂಡಿಯಾ ಕೂಟ ಗೆಲ್ಲಬಹುದಾ ಅಥವಾ, ಬಿಜೆಪಿ ಮೈತ್ರಿಕೂಟ ಗೆಲ್ಲಬಹುದಾ ಅಕ್ಟೋಬರ್‌ 8ರ ವರಗೆ ಕಾದು ನೋಡಬೇಕಿದೆ.

ಇದನ್ನೂ ನೋಡಿ : ಕತ್ತು ಹಿಸುಕಿದ ಬಿಜೆಪಿಯನ್ನು ಕಣಿವೆಯ ಜನ ತಿರಸ್ಕರಿಸುವರೇ?

 

Donate Janashakthi Media

Leave a Reply

Your email address will not be published. Required fields are marked *