ದೆಹಲಿ ರೈತ ಚಳುವಳಿ ನೇರ ಅನುಭವ – 2 : ಜೈಜವಾನ್ ಜೈಕಿಸಾನ್ ಘೋಷಣೆ ಗೆ ಅರ್ಥ ಬರಬೇಕಾದರೆ ನಾವು ಈ ರೈತ ಹೋರಾಟದಲ್ಲಿ ಭಾಗಿಯಾಗಬೇಕು

ದೆಹಲಿ ರೈತ ಚಳುವಳಿ ಅನುಭವ ಶಾಹಜಾನ್ ಪುರ್ ಗಡಿಯಿಂದ ಹೋರಾಟದ ಅನುಭವ ಹಂಚಿಕೊಂಡಿರುವ ರೈತ ನಾಯಕ ನವೀನ್ ಕುಮಾರ್.

“ದೇಶದ ಅನೇಕ ಸಾರ್ವಜನಿಕ ಕೈಗಾರಿಕೆಗಳನ್ನು ಮಾರಾಟ ಮಾಡಿದಾಗ, ರೈಲು, ವಿಮಾನಯಾನ ಮಾರಾಟ ಮಾಡಿದಾಗ, ಸೇವಾ ವಲಯ, ಆರ್ಥಿಕ ವಲಯ ಮಾರಿದಾಗ ಏನೆಲ್ಲ ಮಾರಿದರೂ ಸಿಟ್ಟು ಬಂದಿಲ್ಲ, ಪ್ರಶ್ನಿಸಿಲ್ಲ. ಈಗ ನಾವಿರುವ ನೆಲವನ್ನ, ನಮ್ಮ ಬದುಕನ್ನೇ ಮಾರಲು ಮೋದಿ ಸರ್ಕಾರ ಹೊರಟಾಗ ಇದನ್ನು ಸಹಿಸಿ ಸುಮ್ಮನಿರಲು ಸಾಧ್ಯವಾಗಲಿಲ್ಲ”. ಈ ಮಾತುಗಳನ್ನು ಹೇಳಿದವರು ಬೇರಾರೂ ಅಲ್ಲ “ಜೈ ಜವಾನ್ ಜೈ ಕಿಸಾನ್” ಘೋಷಣೆಯನ್ನ ನಿಜವಾದ ಅರ್ಥದಲ್ಲಿ ಸಾಕಾರಗೊಳಿಸುತ್ತಿರುವ ಪ್ರತಿಭಟನಾ ನಿರತ ಮಾಜಿ ಸೈನಿಕ.


ರಾಜಸ್ಥಾನದ ಸಿಕಾರ್ ಜಿಲ್ಲೆಯ ಅಮರ್ ಜಿತ್ ಸಿಂಗ್ ಸತತ 18 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದವರು. ಇವರ ಇಡೀ ಕುಟುಂಬ ಹೆಂಡತಿ, ಎರಡು ಹೆಣ್ಣು ಮಕ್ಕಳು ರೈತರ ಚಳುವಳಿಯ ಜೊತೆ ಸೇರಿಕೊಂಡಿದ್ದಾರೆ. ಪ್ರಸ್ತುತ ದೆಹಲಿ ರಾಜಸ್ಥಾನ್ ಗಡಿಯಾದ ಶಹಜಾನ್ ಪುರ್ ಗಡಿಯಲ್ಲಿ 20 ಕ್ಕೂ ಹೆಚ್ಚು ಮಾಜಿ ಸೈನಿಕರು ಮತ್ತವರ ಕುಟುಂಬ ಪ್ರತಿಭಟನೆಯಲ್ಲಿ ಪ್ರಾರಂಭದಿಂದಲೂ ಭಾಗವಹಿಸುತ್ತಿದ್ದಾರೆ. ಮಾತ್ರವಲ್ಲದೆ ದೇಶದ ಮೂಲೆ ಮೂಲೆಗಳಲ್ಲಿರುವ ಮಾಜಿ ಸೈನಿಕರುಗಳನ್ನು ಸಂಪರ್ಕಿಸಿ ಅವರುಗಳನ್ನು ರೈತರ ಪ್ರತಿಭಟನೆಗಳಲ್ಲಿ ಭಾಗವಹಿಸಲು ಬೇಕಾದ ತಯಾರಿಯನ್ನೂ ಮಾಡುತ್ತಿದ್ದಾರೆ.

ಸ್ವತಃ ಕೃಷಿ ಕುಟುಂಬದಿಂದ ಬಂದಿರುವ ಇವರು ಕೇಂದ್ರದ ಕೃಷಿ ಕಾನೂನುಗಳಿಂದ ಏನೆಲ್ಲ ಅನಾನುಕೂಲಗಳಾಗುತ್ತವೆ ಎನ್ನುವುದನ್ನು ತುಂಬಾ ಚನ್ನಾಗಿ ಅರಿತುಕೊಂಡಿದ್ದಾರೆ. ಪ್ರತಿಭಟನೆಗೆ ಮಕ್ಕಳನ್ನೆಲ್ಲ ಏಕೆ ಕರೆತಂದಿದ್ದೀರಿ ಎಂದು ಕೇಳಿದ್ದಕ್ಕೆ ಅವರು ಹೇಳಿದ್ದೇನು ಗೊತ್ತಾ… “ನಾವು ಮಾಡುವ ಕೆಲಸದ ಬಗ್ಗೆ ನಮ್ಮ ಮಕ್ಕಳಿಗೆ ಸರಿಯಾದ ತಿಳುವಳಿಕೆ ಮೂಡಿಸಬೇಕು ಮತ್ತು ನಮ್ಮ ತಂದೆ ಮಾಡುತ್ತಿರುವ ಕೆಲಸದ ಬಗ್ಗೆ ಅವರಿಗೆ ಹೆಮ್ಮೆಯಿರಬೇಕು. ಹಾಗು ಇಂತಹ ಚಳುವಳಿಗಳನ್ನು ಭವಿಷ್ಯದಲ್ಲಿ ಇವರುಗಳೇ ಮುಂದುವರೆಸಬೇಕಾಗಿರುವುದರಿಂದ ಈಗಿನಿಂದಲೇ ಇದರಲ್ಲೆಲ್ಲ ಭಾಗವಹಿಸಿ ಕಲಿಯಬೇಕು.” ಎಂದರು.

ನಾವು ಗಡಿಗಳಲ್ಲಿ ದೇಶವನ್ನು ಕಾಯುತ್ತೇವೆ, ರೈತರು ಒಳಗೆ ದೇಶವನ್ನು ಕಾಯುತ್ತಾರೆ. ಅವರೇ ಸಂಕಷ್ಟದಲ್ಲಿರುವಾಗ ನಾವು ಗಡಿಗಳಲ್ಲಿರುವುದು ವ್ಯರ್ಥ. ಆಗ ಜೈ ಜವಾನ್ ಜೈ ಕಿಸಾನ್” ಘೋಷಣೆಗೆ ಯಾವುದೇ ಅರ್ಥ ಇರುವುದಿಲ್ಲ ಎಂದತು.

 

 

ಶಹಜಾನ್ ಪುರ್ ಗಡಿಯಲ್ಲಿ ಇಂದು ಟೆಂಟ್ ಗಳ ಸಂಖ್ಯೆ, ಲಂಗರ್ ಗಳ ಸಂಖ್ಯೆ ಹೆಚ್ಚಾಗಿತ್ತು ಇದಕ್ಕೆ ಮುಖ್ಯ ಕಾರಣ ಈ ಹೋರಾಟದಲ್ಲಿ ದಿನದಿಂದ ದಿನಕ್ಕೆ ರೈತರ ಸಂಖ್ಯೆ ಹೆಚ್ಚಾಗುತ್ತಿದೆ. ಒಂದು ಕಡೆ ರೈತರು ನೇರವಾಗಿ ಕದನ ಕಣದಲ್ಲಿದ್ದರೆ ಮತ್ತೊಂದೆಡೆ ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು, ಸಾಹಿತಿಗಳು, ಕಲಾವಿದರು ಸಮಾಜದ ಇತರೆ ವಿಭಾಗದ ಜನ ಸಮುದಾಯ ದೊಡ್ಡ ಪ್ರಮಾಣದಲ್ಲಿ ಬೆಂಬಲವನ್ನು ವ್ಯಕ್ತಪಡಿಸುತ್ತಿರುವುದನ್ನ ಕಾಣಬಹುದು.

ಬಹುತೇಕರು ಮಾತನಾಡುವ ಹಾಗೆ ಮತ್ತು ಇಲ್ಲಿ ಖುದ್ದು ಕಣ್ಣಾರೆ ನೋಡಿದ ಮೇಲಂತೂ ನನಗೆ ಮನವರಿಕೆಯಾದ ವಿಷಯವೆಂದರೆ ಭಾರತದ ಸ್ವಾತಂತ್ರ್ಯ ನಂತರದ ಇತಿಹಾಸದಲ್ಲಿ ಇಂತಹ ರೈತ ಚಳುವಳಿಯನ್ನು ದೇಶ ಕಂಡಿಲ್ಲ. ಅದಕ್ಕಾಗಿಯೇ ಇದನ್ನ ಐತಿಹಾಸಿಕ ಚಳುವಳಿ ಎಂದು ಕರೆಯಲಾಗುತ್ತಿದೆ. ಕೇವಲ ಮನವಿ ಪತ್ರಗಳಿಗೆ ಹೋರಾಟಗಳು ಸೀಮಿತವಾಗುತ್ತಿರುವ ಸಂದರ್ಭದಲ್ಲಿ ಚಳುವಳಿ ಎಂದರೆ ಹೀಗೂ ನಡೆಸಬಹುದೂ ಮತ್ತು ಹೀಗೆ ನಡೆಸಿದರೆ ಮಾತ್ರ ಆಳುವ ವರ್ಗವನ್ನ ಮಣಿಸಲು ಸಾಧ್ಯ ಎಂಬುದನ್ನ ಜಗತ್ತಿದೆ ತೋರಿಸಿಕೊಟ್ಟಿದ್ದಾರೆ. ಆದರೆ ಈ ಚಳುವಳಿ ದೇಶಾದ್ಯಂತ ಮಾಧ್ಯಮಗಳಲ್ಲಿ ಪಡೆದುಕೊಳ್ಳಬೇಕಾದ ಸ್ಥಾನವನ್ನು ಪಡೆದುಕೊಳ್ಳುತ್ತಿಲ್ಲ. ಮಾಧ್ಯಮಗಳು ಒಂದು ರೀತಿ ಸರ್ಕಾರದ ರೀತಿಯ ದೋರಣೆಯನ್ನು ತಾಳುತ್ತಿವೆ. ಅವು ತನ್ನ ವಿರೋಧ ಪಕ್ಷದ ಕೆಲಸವನ್ನು ಸಂಪೂರ್ಣ ಮರೆತಿವೆ ಎಂದು ಚಳುವಳಿಯಲ್ಲಿರುವ ರೈತರು ಮಾತನಾಡಿಕೊಳ್ಳುತ್ತಿದ್ದಾರೆ.

ಪ್ರತಿಭಟನಾಕಣದಲ್ಲಿನ ಇಡೀ ದಿನದ ದಿನಚರಿಯಿದೆಯಲ್ಲ ಅದೇ ಒಂದು ರೀತಿಯ ವಿಶೇಷವಾಗಿರುತ್ತದೆ. ಬೆಳಿಗ್ಗೆ 6 ಗಂಟೆ ಸುಮಾರಿಗೆ ಆ ಕೊರೆವ ಚಳಿಯಲ್ಲಿ (3-4 ಡಿಗ್ರಿ) ಪ್ರತೀ ಟೆಂಟಿಗೂ ಹಿಂದಿನ ದಿನದ ಸುದ್ದಿಗಳು, ಬೆಳವಣಿಗೆಗಳು ಮತ್ತು ಇಡೀ ಚಳುವಳಿಗೆ ನೇತೃತ್ವ ನೀಡಿರುವ 500 ಹೆಚ್ಚು ಸಂಘಟನೆಗಳ ವಿಶಾಲ ವೇದಿಕೆ ‘ಸಂಯುಕ್ತ ಕಿಸಾನ್ ಮೋರ್ಚಾ’ದ ತೀರ್ಮಾನಗಳ ಕುರಿತು ಪತ್ರಿಕೆಯೊಂದು ಬರುತ್ತದೆ. ಅದೇ ಬೆಳಗಿನ ಅಲರಾಮ್. ಈ ಪತ್ರಿಕೆಯನ್ನು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮುದ್ರಿಸಲಾಗಿದೆ.

ಈ ಪತ್ರಿಕೆಯನ್ನು ಹಿಡಿದು ಟೆಂಟ್ ನ ಮುಂದಿರುವ ಬೆಂಕಿಯ ಸುತ್ತಲೂ 5-6 ಜನ ಕುಳಿತುಕೊಂಡು ಪತ್ರಿಕೆಯನ್ನು ಓದುತ್ತ, ಹುಕ್ಕ ಸೇದುತ್ತ ಉರಿವ ಬೆಂಕಿಯ ಎದುರು ಸುದ್ದಿಯನ್ನು ಓದುತ್ತಾ ಬಿಸಿ ಬಿಸಿ ಚರ್ಚೆಗಳನ್ನ ನಡೆಸುತ್ತಾರೆ. ಇದು ಸುಮಾರು ಎರಡು ಮೂರು ಗಂಟೆಗಳು ನಡೆಯುತ್ತದೆ ನಂತರ ಪ್ರತಿಭಟನಾ ಸ್ಥಳಗಳಲ್ಲಿ ನಿರ್ಮಿಸಿರುವ ಮೊಬೈಲ್ ಟಾಯ್ಲೆಟ್ ಗಳಲ್ಲಿ ನಿತ್ಯ ಕರ್ಮಗಳನ್ನು ಮುಗಿಸಿ ಲಂಗರ್ ಗಳ ಕಡೆಗೆ ಧಾವಿಸುತ್ತಾರೆ. ಅಲ್ಲಿ ಚಹಾ, ಬಿಸ್ಕೆಟ್, ರಸ್ಕ್, ವಿವಿಧ ಬಗೆಯ ಪಾಯಸಗಳನ್ನು ಕೊಡಲಾಗುತ್ತದೆ. ಈ ಭಾಗದ ಜನ ಬೆಳಗಿನ ತಿಂಡಿ ಎಂದು ಪ್ರತ್ತೇಕವಾಗಿ ಮಾಡುವ ಅಭ್ಯಾಸ ವಿದ್ದಂತಿಲ್ಲ. ನಂತರ 11 ಗಂಟೆಯಷ್ಟರಲ್ಲಿ ಪ್ರಧಾನ ವೇದಿಕೆಯ ಮೈಕ್ ಮೂಲಕ ಎಲ್ಲರನ್ನು ಸ್ವಾಗತಿಸಲಾಗುತ್ತದೆ ಎಲ್ಲರೂ ವೇದಿಕೆಗಳತ್ತ ತೆರಳುತ್ತಾರೆ. ಅಲ್ಲಿ ಬೆಳಿಗ್ಗೆ ಆರಂಭವಾದ ಭಾಷಣಗಳು ಇಡೀ ದಿನ ಬಿಡುವಿಲ್ಲದಂತೆ ನಡೆಯುತ್ತವೆ. ಸಂಘಟನೆಯ ಪ್ರಮುಖರೊಬ್ಬರು ಹಿಂದಿನ ದಿನದ ಎಲ್ಲ ಬೆಳವಣಿಗೆಗಳನ್ನು ವರದಿ ಮಾಡುತ್ತಾರೆ. ವಿವಿಧ ಸಂಘಟನೆಗಳ ಮುಖಂಡರುಗಳು ಬಂದು ಬೆಂಬಲ ಸೂಚಿಸಿ ಮಾತನಾಡುತ್ತಾರೆ.

 

12 ಗಂಟೆಗೆ ಲಂಗರ್ ಗಳಲ್ಲಿ ಊಟ ಪ್ರಾರಂಭವಾದರೆ ಅದು ರಾತ್ರಿ 11 ರ ವರೆಗೆ ನಡೆಯುತ್ತದೆ. ಈ ಮಧ್ಯೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ರಾತ್ರಿ ಮಲಗುವ ಮುನ್ನ ಟೆಂಟ್ ನ ಮುಂದಿರುವ ಬೆಂಕಿಯ ಸುತ್ತ ನಿಂತುಕೊಂಡು ತಮ್ಮ ಟ್ರ್ಯಾಕ್ಟರ್ ಗಳಲ್ಲಿರುವ ಸ್ಪೀಕರ್ ಗಳಲ್ಲಿ ಚಳುವಳಿಗಾಗಿ ರಚನೆಯಾಗಿರುವ ಮೋದಿ ವಿರೋಧಿ ಹಾಡುಗಳಿಗೆ ನೃತ್ಯ ಮಾಡುತ್ತಾ ದಿನ ಕಳೆಯುತ್ತಾರೆ. ಪ್ರತಿ ದಿನ ಒಂದೊಂದು ವಿಶೇಷ ಕಾರ್ಯಕ್ರಮಗಳಿರುತ್ತವೆ. ನೆನ್ನೆ ಪಂಜಿನ ಮೆರವಣಿಗೆ ಇಂದು ಮಾನವ ಸರಪಳಿ ಹೀಗೆ… ಜೊತೆಗೆ ಇಲ್ಲಿ ಸರದಿ ಪ್ರಕಾರ ಒಂದೊಂದು ದಿನ ಒಂದೊಂದು ಸಂಘಟನೆಯ ರೈತರು ಉಪವಾಸ ಸತ್ಯಗ್ರಹವನ್ನು ನಡೆಸುತ್ತಾರೆ.

ಪ್ರತಿಭಟನೆಯಲ್ಲಿ ಭಾಗವಹಿಸಿರುವ ವಿವಿಧ ರಾಜ್ಯಗಳು ಪರಸ್ಪರ ವಿಚಾರ ವಿನಿಮಯ ಮಾಡಿಕೊಳುವುದದನ್ನ ನೋಡಿದರೆ ಭಾರತ ಒಂದೇ ಮನೆಯಂತ ಭಾಸವಾಗುತ್ತದೆ.

ಇದು ಶಹಜಾನ್ ಪುರ್ ಗಡಿಯಲ್ಲಿನ ಬೆಳವಣಿಗೆ.

ಇನ್ನೊಂದು ಪ್ರಮುಖ ಅಂಶವನ್ನು ನಿಮ್ಮ ಗಮನಕ್ಕೆ ತರಬೇಕು ಈ ಪ್ರತಿಭಟನಾ ಸ್ಥಳಗಳಲ್ಲಿ ಸಾಮಾನ್ಯ ರೈತರು ಮತ್ತು ಸಂಘಟನೆಗಳ ಕಾರ್ಯಕರ್ತರು ಮಾತ್ರ ಟೆಂಟ್ ಗಳಲ್ಲಿ ಹಗಲು ರಾತ್ರಿ ಉಳಿವುವುದಿಲ್ಲ ಬದಲಾಗಿ ಜವಾಬ್ದಾರಿಯಿರುವ ಸಂಘಟನೆಗಳ ಎಲ್ಲಾ ಮುಖಂಡರೂ ಇಲ್ಲಿಯೇ ಠಿಕಾಣಿ ಹೂಡಿದ್ದಾರೆ. ರಾಜ್ಯಸಭಾ ಸದಸ್ಯರು AIKS ನ ಜಂಟಿ ಕಾರ್ಯದರ್ಶಿ ಕೆ.ಕೆ.ರಾಘೇಶ್, AIKS ನ ಮಾಜಿ ರಾಷ್ಟ್ರಾಧ್ಯಕ್ಷ ಮತ್ತು ಮಾಜಿ ಲೋಕಸಭಾ ಸದಸ್ಯರಾದ ಅಮರಾರಾಮ್, ಸ್ವರಾಜ್ ಇಂಡಿಯಾದ ಯೋಗೇಂದ್ರಯಾದವ್ ಹೀಗೆ ಹತ್ತು ಹಲವು ಮುಖಂಡರು ಎಲ್ಲರ ಜೊತೆಯಲ್ಲಿ ಬೆರೆತು ಎಲ್ಲರಂತೆಯೇ ಬದುಕುತ್ತಿದ್ದಾರೆ. ಇದೂ ಕೂಡ ಹೋರಾಟದ ಇನ್ನೊಂದು ಶಕ್ತಿ ಎಂದು ಹೇಳಿದರೆ ತಪ್ಪಾಗಲಾರದು.

ಈ ರೀತಿ ವ್ಯವಸ್ಥಿತವಾಗಿ ಚಳುವಳಿಯನ್ನು ಮುನ್ನಡೆಸುತ್ತಿರುವುದರಿಂದ ಪ್ರತಿಭಟನಾಕಾರರು ಸುಳ್ಳು ಸುದ್ದಿಗಳನ್ನು ಬಿತ್ತರಿಸುವ ಟಿವಿಗಳನ್ನು ನೋಡದಿರುವುದರಿಂದ ಅಪಪ್ರಚಾರಗಳಿಗೂ ಈ ಚಳುವಳಿಯನ್ನು ಮುರಿಯಲು ಅವಕಾಶವನ್ನು ಕೊಟ್ಟಿಲ್ಲ. ಇಲ್ಲಿ ಭಾಗವಹಿಸುವವರ ಬದ್ದತೆ, ಏನನ್ನಾದರೂ ಸಾಧಿಸಿ ತೋರಿಸಬೇಕೆಂಬ ಛಲ ನಿಜಕ್ಕೂ ಎಂತಹವರಿಗೂ ಸ್ಪೂರ್ತಿ ನೀಡುತ್ತದೆ.

 

 

 

Donate Janashakthi Media

Leave a Reply

Your email address will not be published. Required fields are marked *