ಜೈ ಭೀಮ್‌ ಚಿತ್ರದ ವಕೀಲ ‘ಚಂದ್ರು’ ಯಾರೆಂಬ ಬಗ್ಗೆ ವ್ಯಾಪಕ ಚರ್ಚೆ

‘ಜೈ ಭೀಮ್’ ಸಿನಿಮಾದಲ್ಲಿ ಸೂರ್ಯ ನಟಿಸಿರುವ ಪಾತ್ರದ ಜಸ್ಟೀಸ್_ಚಂದ್ರು ಯಾರು..? ಇವರ ಹಿನ್ನೆಲೆ ಏನು.? ನೀವು ತಿಳಿಯಲೇಬೇಕು. ಈ ಕುರಿತಾಗ ಸಾಮಾಜಿಕ ಜಾಲತಾಣದಲ್ಲಿ ಇವರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಆಯ್ದ ಅಭಿಪ್ರಾಯಗಳನ್ನು ಓದುಗರ ಮುಂದಿಡುತ್ತಿದ್ದೇವೆ.

ಜೈ ಭೀಮ್ ಸಿನಿಮಾ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಕಾಲಿವುಡ್ ನ ಮೇರು ನಟ ಸೂರ್ಯ ಜ್ಯೋತಿಕಾ ನಟಿಸಿರುವ ಈ ಚಿತ್ರದ ನೈಜ ಕಥೆಯ ಮದ್ರಾಸ್ ಹೈಕೋರ್ಟ್ನಲ್ಲಿ ಅತಿ ದೀರ್ಘಕಾಲ ನಡೆದ “ಹೇಬಿಯಸ್ ಕಾರ್ಪಸ್” ಎಂದು ಕರೆಯಲಾಗುವ ವ್ಯಕ್ತಿಯನ್ನು ಹಾಜರು ಪಡಿಸಲು ಕೋರುವ ರಿಟ್ ಅರ್ಜಿಯ ಮೇಲಿನ ದಾವೆಯನ್ನು ಅವಲಂಬಿಸಿ ಜಸ್ಟೀಸ್ ಚಂದ್ರು ರವರು 25 ವರ್ಷಗಳ ಹಿಂದೆ ನಡೆದ ಈ ನ್ಯಾಯಾಂಗ ಹೋರಾಟ ರೋಚಕ ಪ್ರಕರಣವೇ ಜೈ ಭೀಮ್ ಸಿನಿಮಾಗೆ ಕಥೆಯಾಗಿದೆ.

ಹಾಗಾದರೆ ಈ ರಿಯಲ್ ಹಿರೋ ಜಸ್ಟೀಸ್ ಚಂದ್ರು ಯಾರು..? ಇವರ ಹಿನ್ನೆಲೆ ಏನು.!? ಎಂದು ತಿಳಿದುಕೊಳ್ಳಲು ಜನರಲ್ಲಿ ಕುತೂಹಲ ಮೂಡಿದೆ.

ಜಸ್ಟೀಸ್ ಚಂದ್ರು ರವರು ಚೆನ್ನೈನಲ್ಲೇ ಹುಟ್ಟಿ ಬೆಳೆದವರು ತನ್ನ 16 ನೇ ವಯಸ್ಸಿನಲ್ಲೇ ವಿದ್ಯಾರ್ಥಿ ಚಳುವಳಿಯಲ್ಲಿ ತೊಡಗಿಕೊಂಡಿದ್ದರು. ದಿ ಹಿಂದು ಮ್ಯಾನೇಜಿಂಗ್ ಡೈರೆಕ್ಟರ್ ಎನ್. ರಾಮ್ ಜೊತೆಗೂಡಿ 1970 ರಲ್ಲಿ ಚೆನ್ನೈನಲ್ಲಿ ಸ್ಟೂಡೆಂಟ್ಸ್  ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ)ವಿದ್ಯಾರ್ಥಿ ಸಂಘಟನೆಯನ್ನು ರೂಪಿಸಿದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರು. ಇವರು ವಿದ್ಯಾರ್ಥಿ ದೆಸೆಯಲ್ಲಿ ಅಧ್ಯಯನ ಮತ್ತು ಹೋರಾಟಗಳಲ್ಲಿ ಸಕ್ರಿಯ ವಿದ್ಯಾರ್ಥಿ ನಾಯಕನಾಗಿ ತಮಿಳು ನಾಡು ಎಸ್ಎಫ್ಐ ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಈ ವೇಳೆ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕುಗಳ ರಕ್ಷಣೆಗಾಗಿ ಹಲವು ಧೀರೋದಾತ್ತ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು.

ಇಂದಿರಾಗಾಂಧಿ ಘೋಷಿಸಿದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ವಿದ್ಯಾರ್ಥಿ ಹೋರಾಟಗಳಲ್ಲಿ ತೊಗಿದ್ದರಿಂದ ಚಂದ್ರು ಜೈಲು ವಾಸದ ಅನುಭವ ಕಂಡಿದ್ದರು. ನಂತರದ ದಿನಗಳಲ್ಲಿ ತಮಿಳುನಾಡಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಕಮ್ಯುನಿಸ್ಟ್ ನಾಯಕ ಕಾಮ್ರೇಡ್ ಶಂಕರನ್ ಹೋರಾಟದ ಗರಡಿಯಲ್ಲಿ ಪಳಗಿದ ಈ ವಿದ್ಯಾರ್ಥಿ ನಾಯಕ ಚಂದ್ರು ಪ್ರಬುದ್ಧ ಯುವ ಮಾರ್ಕ್ ವಾದಿಯಾಗಿ ರೂಪುಗೊಂಡರು. ವಿಧ್ಯಾರ್ಥಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವಾಗಲೇ ಮದ್ರಾಸ್ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ವ್ಯಾಸಂಗ ಮುಗಿಸಿದ ಚಂದ್ರು ರವರು ನಂತರ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಸಿಪಿಐ(ಎಂ) ಪಕ್ಷದಲ್ಲಿ ಸೇರಿದರು. ನಂತರ ಈ ವೇಳೆ ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ (ಎಐಎಲ್ಯು) ಎಂಬ ಸಂವಿಧಾನ ಪರ ವಕೀಲರ ಸಂಘಟನೆ ಕಟ್ಟಿ ವಕೀಲರ ಹಕ್ಕುಗಳಿಗಾಗಿ ಹೋರಾಡಿದರು.

ನ್ಯಾಯಕ್ಕಾಗಿ ಹೋರಾಡುವ ನನಗೆ “ಲಾ” ಎನ್ನುವುದು ಒಂದು ಅಸ್ತ್ರ ಮಾತ್ರ.” ಒಂದು ಕಡೆ ಜನಪರ ಬೀದಿ ಹೋರಾಟಗಳು ಮತ್ತೊಂದು ಕಡೆ ನ್ಯಾಯಾಂಗ ಹೋರಾಟ.. ಅಂತಿಮವಾಗಿ ಜನಚಳುವಳಿಗಳೇ ಜನರನ್ನು ಕಾಪಾಡುವುದು ಎಂದು ಕಾಮ್ರೇಡ್ ಚಂದ್ರು ಸ್ಪಷ್ಟವಾಗಿ ನಂಬಿದ್ದರು

ಈ ನೇಪಥ್ಯದಲ್ಲಿ 1995 ನೇ ವರ್ಷದಲ್ಲಿ ತಮಿಳು ನಾಡು ರಾಜ್ಯದ ಕಡಲೂರು ಜಿಲ್ಲೆಯ ಕಮ್ಮಾಪುರಂ ನಲ್ಲಿ ಆದಿವಾಸಿ ಇರುಳಿಗರು ಮೇಲೆ ಜರುಗಿದ ಪ್ರಭುತ್ವ, ಪೋಲೀಸ್, ಪಾಳೆಗಾರಿ ವ್ಯವಸ್ಥೆಯ ದುಷ್ಟಕೂಟದ ಪೈಶಾಚಿಕ ದೌರ್ಜನ್ಯ ಘಟನೆಯ ವಿರುದ್ಧ ಸಿಪಿಎಂ ಪಕ್ಷದಿಂದ ಹೋರಾಟ ನಡೆಯುತ್ತದೆ.
ಈ ವೇಳೆಗೆ ಮದ್ರಾಸ್ ಹೈಕೋರ್ಟ್ನಲ್ಲಿ ಆಕ್ಟಿವಿಸ್ಟ್ ಅಡ್ವೋಕೇಟ್ ಆಗಿ ಮಾನವ ಹಕ್ಕುಗಳ ಕೇಸ್ ಗಳಿಗೆ ಹಣ ತೆಗೆದುಕೊಳ್ಳದೆ ಉಚಿತ ವಕಾಲತ್ತು ನಡೆಸುತ್ತಿದ್ದ ನ್ಯಾಯವಾದಿ ಚಂದ್ರು ರವರಿಗೆ ಸಿಪಿಎಂ ನಾಯಕರು ಈ ಪ್ರಕರಣವನ್ನು ಒಪ್ಪಿಸಿದರು.

ಇನ್ನು ಈ ಪ್ರಕರಣದಲ್ಲಿ ಪೋಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದರ ಕುರಿತು ಯಾವುದೇ ಸಾಕ್ಷಿಗಳು ಇಲ್ಲದಿದ್ದರೂ ಚಂದ್ರು ರವರು ಪ್ರಭುತ್ವ ಪ್ರಾಯೋಜಿತ ಎಲ್ಲ ಸುಳ್ಳು ಸೃಷ್ಟಿ ಸಾಕ್ಷಿಗಳು, ಹುನ್ನಾರಗಳ ವಿರುದ್ಧ ಧೃತಿಗೆಡದೆ ಹೇಗೆ ಹೋರಾಟ ನಡೆಸಿದರು ಎನ್ನುವುದನ್ನು ಸಿನಿಮಾ ನೋಡಿದವರಿಗೆಲ್ಲ ಮನವರಿಕೆಯಾಗುತ್ತದೆ.

ಜೈ ಭೀಮ್ ಸಿನಿಮಾದಲ್ಲಿ ತೋರಿಸಿರುವಂತೆ ಚಂದ್ರು ರವರು ಒಂದು ಕೈಯಲ್ಲಿ ಕರಿ ಕೋಟು ಮತ್ತೊಂದು ಕೈಯಲ್ಲಿ ಕೆಂಬಾವುಟ ಹಿಡಿದು ಜನರಿಗೆ ನ್ಯಾಯ ದೊರಕಿಸಲು ಹೋರಾಡಿದವರು.

ಜಸ್ಟೀಸ್ ಚಂದ್ರು ರವರು ತನ್ನ ಚೇಂಬರ್ ಮುಂದೆ ಹೀಗೊಂದು ಸಂದೇಶ! ಹಾಕಿದ್ದಾರೆ

“ಇಲ್ಯಾರೂ ದೇವರಿಲ್ಲ, ಮಾಲಾರ್ಪಣೆ ಬೇಡ.
ಇಲ್ಯಾರೂ ಚಳಿಗೆ ನಡುಗುವರಿಲ್ಲ, ಶಾಲು ಬೇಡ.
ಇಲ್ಯಾರೂ ಹಸಿವಿನಿಂದಿಲ್ಲ, ಹಣ್ಣು ಹಂಪಲು ಬೇಡ.”
ಈ ಒಂದು ಸಂದೇಶವೇ ಸಾಕು ನ್ಯಾಯವಾದಿ ಚಂದ್ರು ರವರು ಯಾವ ರೀತಿಯ ಪ್ರಚಾರ , ಸನ್ಮಾನ, ಸ್ಥಾನಮಾನದ ಪ್ರಲೋಭೆಗಳಿಗಳಿಂದ ದೂರವಿದ್ದರು ಎಂದು ತಿಳಿಯುತ್ತದೆ.

ಇವರ ಕರ್ತವ್ಯ ನಿಷ್ಠೆ, ಕಠಿಣ ಪರಿಶ್ರಮ, ಅಗಾಧವಾದ ವಕೀಲಿ ವೃತ್ತಿಯ ಅನುಭವದಿಂದ 2007 ರಿಂದ 2013 ರವರೆಗೆ ಆರುವರೆ ವರ್ಷಗಳ ಕಾಲ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಜನಪರ ನ್ಯಾಯಮೂರ್ತಿಯೊಬ್ಬರು ಹೇಗೆ ಕೆಲಸ ಮಾಡಬೇಕು ಮತ್ತು ಮಾಡಲು ಸಾಧ್ಯ ಎಂಬುದನ್ನು ನಿರೂಪಿಸಿದರು.
ಜಸ್ಟಿಸ್ ಚಂದ್ರು ರವರು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಆಗಿದ್ದಾಗ ಅವರ ಕೆಲವು ಮಾದರಿಯಾದ ತಿರ್ಮಾನಗಳು ಹೀಗಿವೆ.

ನನ್ನನ್ನು ಮೈ ಲಾರ್ಡ್ ಎಂದು ಸಂಭೋದಿಸಬೇಡಿ.

ನನ್ನ ಕಾರಿನ ಮೇಲೆ ಕೆಂಪು ದೀಪದ ಕಾರು ಬೇಡ.

ನ್ಯಾಯಾಧೀಶರ ಚೇಂಬರ್ ಮುಂದೆ ನಿಲ್ಲುವ, “ನ್ಯಾಯಾಧೀಶರು ಬರುತ್ತಿದ್ದಾರೆ” ಎಂದು ಕೂಗುವ ಕೆಂಪು ಪೇಟ, ಕೆಂಪು ಪಟ್ಟಿಯ ದವಾಲಿ ಎಂದು ಕರೆಯಲ್ಪಡುವ ಸೇವಕ ಬೇಡ.

ಸೆಕ್ಯುರಿಟಿಯಾಗಿ ಸಬ್ ಇನ್ಸ್‌ಪೆಕ್ಟರ್ ಬೇಡ.

ತಮ್ಮ ಆಸ್ತಿಯನ್ನು ಘೋಷಿಸಿದ ಮೊದಲ ನ್ಯಾಯಾಧೀಶರುಗಳಲ್ಲೊಬ್ಬರು. ತಮ್ಮ ನಿವೃತ್ತಿಯ ಮುನ್ನಾ ಮತ್ತೊಮ್ಮೆ ಆಸ್ತಿಯನ್ನು ಘೋಷಿಸಿದ ಮೊದಲ ನ್ಯಾಯಾಧೀಶರು.

ನಿವೃತ್ತಿಯ ದಿನ ಸ್ಟಾರ್ ಹೋಟೆಲಿನಲ್ಲಿ ಗೌರವ ಸಮಾರಂಭ ನಿರಾಕರಿಸಿದರು.

ನಿವೃತ್ತಿಯ ನಂತರ ಅರಸಿ ಬಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ, ಕೆಲ ಆಯೋಗಗಳ ಅಧ್ಯಕ್ಷ ಹುದ್ದೆಗಳನ್ನು ನಿರಾಕರಿಸಿದರು.

ದೇಶದಲ್ಲೇ ಅತಿ ಹೆಚ್ಚು ಕೇಸುಗಳನ್ನು -ಆರು ವರ್ಷಗಳಲ್ಲಿ 96,000 ಕೇಸುಗಳಿಗೆ ತೀರ್ಪು ನೀಡಿ ಕಾಯುತ್ತಿದ್ದ ಲಕ್ಷಗಟ್ಟಲೆ ಕುಟುಂಬಗಳಿಗೆ ಪರಿಹಾರ ಒದಗಿಸಿದವರು.

ಹಲವು ಮಾನವ ಹಕ್ಕುಗಳ ಕೇಸುಗಳಲ್ಲಿ ದಲಿತರು,ಆದಿವಾಸಿಗಳು, ಮಹಿಳೆಯರಿಗೆ ನ್ಯಾಯ ಒದಗಿಸುವ ತೀರ್ಪುಗಳನ್ನು ನೀಡಿದರು.

ಜಸ್ಟೀಸ್ ಚಂದ್ರು ರವರ ಕೆಲವು ಮಹತ್ವದ ತೀರ್ಪುಗಳು

1.ಮಹಿಳೆಯರು ದೇವಾಲಯಗಳಲ್ಲಿ ಅರ್ಚಕರಾಗಬಹುದು

2. ಜಾತಿಯನ್ನು ಲೆಕ್ಕಿಸದೆ ಎಲ್ಲರಿಗೂ ಸಾಮಾನ್ಯ ಸ್ಮಶಾನ ಭೂಮಿ ಇರಬೇಕು

3. ಬೀದಿ ನಾಟಕಗಳನ್ನು ಪ್ರದರ್ಶಿಸಲು, ಪೊಲೀಸ್ ಅನುಮತಿ ಅಗತ್ಯವಿಲ್ಲ;

4. ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಊಟದ ತಯಾರಿಸುವವರಿಗೆ ಕೂಡಾ ಮೀಸಲಾತಿ ಇರಬೇಕು.
ಇತ್ಯಾದಿ.

ಈ ಎಲ್ಲ ಅಂಶಗಳನ್ನು ತಿಳಿದ ನಂತರ ನಮಗೆ ಅರ್ಥವಾಗಬೇಕು ಈ ದೇಶದಲ್ಲಿ ಜಾತಿ ಮತ್ತು ವರ್ಗ ಹೋರಾಟವನ್ನು ಕಮ್ಯುನಿಸ್ಟ್ ರು , ಅಂಬೇಡ್ಕರ್ ವಾದಿಗಳು ಕೂಡಿ ನಡೆಸಿದಾಗ ಮಾತ್ರ ಶೋಷಿತರ ಜನರಿಗೆ ನ್ಯಾಯ ದೊರಕಿಸಲು ಸಾಧ್ಯವೆಂದು ಈ ಜೈ ಭೀಮ್ ಚಿತ್ರದಲ್ಲಿ ತೋರಿಸಿರುವಂತೆ ನ್ಯಾಯವಾದಿ ಚಂದ್ರು ರವರ ಕಛೇರಿಯಲ್ಲಿ ಹಿಂದೆ ಗೋಡೆ ಮೇಲೆ ಕಾರ್ಲ್ ಮಾರ್ಕ್ಸ್, ಬಾಬಾ ಸಾಹೇಬ್ ಅಂಬೇಡ್ಕರ್, ಪೆರಿಯಾರ್ ಮುಂದೆ ಟೇಬಲ್ ಮೇಲೆ ಮಹಾನ್ ಮಾನವತಾವಾದಿ ಲೆನಿನ್ ಈ ಮಹನೀಯರ ಆದರ್ಶಗಳು, ಕುಡುಗೋಲು ಸುತ್ತಿಗೆಯ ಕೆಂಬಾವುಟ ಈ ಸಿನಿಮಾದಲ್ಲಿ ಅಂಡರ್ ಕರೆಂಟ್ ಆಗಿ ಕೆಲಸ ಮಾಡಿವೆ.

ಕೊನೆಯಲ್ಲಿ ರಾಜಣ್ಣನ ಮಗಳು ಅಡ್ವಕೇಟ್ ಚಂದ್ರು ಸಮಾನವಾಗಿ ಕಾಲು ಮೇಲೆ ಕಾಲು ಹಾಕಿ ಪತ್ರಿಕೆ ಓದುವ ದೃಶ್ಯ ಸಿನಿಮಾದಲ್ಲಿ
ಶಿಕ್ಷಣ ಮತ್ತು ಹೋರಾಟಗಳಿಂದ ಮಾತ್ರ ಜನತೆಯ ವಿಮೋಚನೆ ಸಾಧ್ಯ ಎಂದು ಸಂದೇಶವನ್ನು ಜೈ ಭೀಮ್ ಸಿನಿಮಾದ ಮೂಲಕ ಜಸ್ಟೀಸ್ ಚಂದ್ರು ಸಾರಿದ್ದಾರೆ.

ಇಂತಹ ಆದರ್ಶ ನ್ಯಾಯಮೂರ್ತಿ, ಮಾರ್ಕ್ಸ್, ಅಂಬೇಡ್ಕರ್, ಪೆರಿಯಾರ್ ಚಿಂತನೆಗಳ ಸಮ್ಮಿಲಿತ ಜಸ್ಟೀಸ್ ಚಂದ್ರು ರವರು ಹೈಕೋರ್ಟ್ ನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತಿಯ ನಂತರ ತಮಿಳುನಾಡಿನಾದ್ಯಂತ ವಿದ್ಯಾರ್ಥಿ ಯುವಜನರ ನಡುವೆ ಸೈದ್ಧಾಂತಿಕ ತತ್ವ ಬದ್ಧತೆಯ ವಿಚಾರಗಳ ಪಸರಿಸುತ್ತಾ ಸರಳ ಜೀವನ ನಡೆಸುತ್ತಿದ್ದಾರೆ.

ನಮ್ಮ ನಾಡಿನಲ್ಲೂ ಸಹ ಎಡ ವಿದ್ಯಾರ್ಥಿ ಸಂಘಟನೆ ಮತ್ತು ಚಳುವಳಿಗಳ ಹಿನ್ನೆಲೆಯಿಂದ ಬಂದಿರುವ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಗೋಪಾಲಗೌಡ, ಜಸ್ಟೀಸ್ ಹೆಚ್.ಎನ್. ನಾಗಮೋಹನ್ ದಾಸ್, ಮಾಜಿ ಅಡ್ವೋಕೇಟ್ ಜನರಲ್ ಪ್ರೋ. ರವಿವರ್ಮಾ ಕುಮಾರ್ ಮುಂತಾದವರು ಸಹ ಜಸ್ಟಿಸ್ ಚಂದ್ರು ರವರ ಹಾದಿಯಲ್ಲಿ ಸಾಗಿದ್ದಾರೆ. ಇವರೆಲ್ಲ ಇಂದಿನ ಯುವ ವಕೀಲರಿಗೆ ಆದರ್ಶಪ್ರಾಯರಾಗಬೇಕು.

ಜಗತ್ತನಲ್ಲಿ ಮನುಷ್ಯನಿಂದ ಮನುಷ್ಯರ ಎಲ್ಲ ರೀತಿಯ ಶೋಷಣೆಯನ್ನು ಕೊನೆಗಾಣಿಸಲು ಜೀವನಗಳನ್ನೇ ತ್ಯಾಗ ಮಾಡುತ್ತಿರುವ ಕಮ್ಯುನಿಸ್ಟ್ ಪಕ್ಷಗಳ ಕಾರ್ಯಕರ್ತರು, ಮುಖಂಡರ ರಾಜಿ ರಹಿತ ಜನಪರ ಹೋರಾಟದ ಬದ್ಧತೆ, ಅಪಾರ ಮನುಷ್ಯ ಪ್ರೀತಿಯ ಪ್ರತೀಕವಾಗಿರುವ ಜಸ್ಟೀಸ್ ಚಂದ್ರು ರವರ ನಿಜ ಜೀವನದ ಘಟನೆಯೊಂದು ಜೈ ಭೀಮ್ ಚಿತ್ರಕ್ಕೆ ಕಥೆಯಾಗಿ ನೀಡಿ ನಮ್ಮೆಲ್ಲರಿಗೂ ಆದರ್ಶನೀಯ ಬದುಕಿನ ಹಾದಿ ತೋರಿಸಿದ್ದಾರೆ.

ವಾಸುದೇವರೆಡ್ಡಿ. ಕೆ (SFI ರಾಜ್ಯ ಕಾರ್ಯದರ್ಶಿ)

ತಮಿಳು ಭಾಷೆಯಲ್ಲಿ ತಯಾರಾದ ಜೈ ಭೀಮ್ ಸಿನಿಮಾ ಅಲ್ಲಿನ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಚಂದ್ರು ಎಂಬುವರ ನೈಜ ಕಥನ.

ಮುವತ್ತು ವರ್ಷಗಳ ಹಿಂದೆ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರುರವರು,
ಸಿ.ಪಿ.ಐ.ಎಂ. ಸಂಘಟನೆಯ ಕೋರಿಕೆ ಮೇರೆಗೆ ರಾಜಕಣ್ಣು ಎಂಬ ಇರುಳ ಜನಾಂಗಕ್ಕೆ ಸೇರಿದ ನತದೃಷ್ಟನ ಸಾವಿನ ಬಗ್ಗೆ ಹೋರಾಡಿ ಪೋಲಿಸರಿಗೆ ಶಿಕ್ಷೆ ಕೊಡಿಸಿದರಲ್ಲದೆ, ಇರುಳ ಜನಾಂಗಕ್ಕೆ ವಸತಿ. ರೇಷನ್ ಕಾರ್ಡು, ಮತದಾರರ ಪಟ್ಟಿಯಲ್ಲಿ ಹೆಸರು ಸೇರುವಂತೆ ಮಾಡಿದರು.

ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ‌ 96 ಸಾವಿರ ಪ್ರಕರಣಗಳನ್ನು ವಿಲೇವಾರಿ ಮಾಡಿ ತೀರ್ಪನ್ನು ನೀಡುವುದರ ಮೂಲಕ ದಾಖಲೆ ಮಾಡಿದ್ದಾರೆ. ದಿನವೊಂದಕ್ಕೆ ಎಪ್ಪತ್ತೈದು ಪ್ರಕರಣಗಳನ್ನು ರಾತ್ರಿ ಒಂಬತ್ತು ಗಂಟೆಯವರೆಗೆ ಅವರು ವಿಚಾರಣೆ ನಡೆಸುತ್ತಿದ್ದರಂತೆ.

ಎಡಪಂಥೀಯ ವಿಚಾರಧಾರೆಯಲ್ಲಿ ಬೆಳೆದ ಬಹುತೇಕ ವಕೀಲರು ಮತ್ತು ನ್ಯಾಯಾಧೀಶರಲ್ಲಿ ಇಂತಹ ಮಾನವೀಯ ಗುಣಗಳನ್ನು ನಾವು ಕಾಣಬಹುದು.

ಹಿಂದಿ, ತಮಿಳು ಹಾಗು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿರುವ “ಜೈ ಬೀಮ್” ಚಲನಚಿತ್ರವನ್ನು ತಪ್ಪದೇ ನೋಡಿ.

ಸಾಮಾಜಿಕ ನ್ಯಾಯಕ್ಕಾಗಿ ನಡೆಯುವ ಚಳುವಳಿಗೆ ಹಾಗು ಆ ಚಳುವಳಿಯ ಕಾರ್ಯಕರ್ತರಿಗೆ ಮಾತ್ರವಲ್ಲ “ಸ್ವಾಭಾವಿಕ ನ್ಯಾಯ” (natural justice)ದ ಅನುಷ್ಟಾನಕ್ಕಾಗಿ ದುಡಿಯುವ ಪ್ರತಿಯೊಬ್ಬರಿಗೂ ಆತ್ಮವಿಶ್ವಾಸ ತುಂಬುವ ಒಂದೊಳ್ಳೇಯ ಚಲನಚಿತ್ರ.

– AILU Karnataka

ಜೈ ಭೀಮ್ ಒಂದು ಅತ್ಯುತ್ತಮವಾದ ಚಲನಚಿತ್ರ ಇದು 1995 ರಲ್ಲಿ ತಮಿಳುನಾಡಿನಲ್ಲಿ ನಡೆದ ನೈಜ ಘಟನೆಯನ್ನು ಆಧಾರಿಸಿದೆ. ಮುಗ್ದ ಆದಿವಾಸಿ ವ್ಯಕ್ತಿಯನ್ನು ಉದ್ದೇಶ ಪೂರ್ವಕವಾಗಿ ಕಳ್ಳತನದ ಸುಳ್ಳು ಕೇಸ್ ನಲ್ಲಿ ಬಂಧಿಸಿ ಅತ್ಯಂತ ಕ್ರೂರವಾಗಿ ಹಿಂಸೆ ಮಾಡಿ ಲಾಕಪ್ ಡೆತ್ ಮಾಡಿ ನಂತರ ಅದನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲಾಗಿರುತ್ತದೆ.

ಮುಂದುವರಿದು ಒಂದು ಅವಿದ್ಯಾವಂತ ತುಳಿತಕ್ಕೆ ಒಳಗಾದ ಸಮುದಾಯವನ್ನು ಪ್ರಭುತ್ವ ಮತ್ತು ಪೋಲಿಸ್ ಇಲಾಖೆ ಹೇಗೆ ದುರುಪಯೋಗ ಮಾಡಿಕೊಂಡು ತಮ್ಮ ಬಲ ಪ್ರಯೋಗವನ್ನು ಮಾಡುತ್ತದೆ ಎಂಬುದನ್ನು ಇದು ಎಳೆ ಎಳೆಯಾಗಿ ಬಿಡಿಸಿ ಹೇಳುತ್ತದೆ. ಆಳುವ ಪ್ರಭುತ್ವ ಮತ್ತು ಪೋಲಿಸ್ ವ್ಯವಸ್ಥೆಗೆ ಬಲಿಪಶುವಾದ ಸಮಾಜದ ಕಟ್ಟಕಡೆಯ ವಂಚಿತ ಬುಡಕಟ್ಟು ಜನಾಂಗದ ಕುಟುಂಬಕ್ಕೆ ಕಾನೂನಿನ ಮೂಲಕ ಹೋರಾಟ ನಡೆಸಿ ನ್ಯಾಯ ಕೊಡಿಸುವ ಒಟ್ಟಾರೆಯ ಕಾನೂನಿನ ಪ್ರಕ್ರಿಯೆ, ಅದಕ್ಕೆ ಪುಷ್ಟಿ ನೀಡುವಂತೆ ಮಾಡುವ ಜನತೆಯ ಬೀದಿ ಹೋರಾಟ ಸೇರಿ ಎಲ್ಲವೂ ಅದ್ಬುತವಾದುದ್ದು.

ಅಂಬೇಡ್ಕರ್ ರವರ ಸಂವಿಧಾನದ ಶಕ್ತಿ, ಕಾರ್ಲ್ ಮಾರ್ಕ್ಸ್ ರವರ ಬೀದಿ ಹೋರಾಟ ಮತ್ತು ವರ್ಗ ಸಂಘರ್ಷ ಹಾಗೂ ಪೆರಿಯಾರ್ ರಾಮಸ್ವಾಮಿ ಅವರ ಸ್ವಾಭಿಮಾನ ವನ್ನು ಇದು ಇಲ್ಲಿ ಎತ್ತಿ ತೋರಿಸುತ್ತದೆ. ಮುಚ್ಚಿ ಹೋದ ಕೇಸ್ ಗೆ ಸಂವಿಧಾನದ ಅನುಚ್ಛೇದ 32ರ ಅಡಿಯಲ್ಲಿ ( ಸಂವಿಧಾನಾತ್ಮಕ ಪರಿಹಾರದ ಹಕ್ಕುಗಳು ) ಒಂದು ಹೇಬಿಯಸ್ ಕಾರ್ಪಸ್ ನ ಮೂಲಕ ಅರ್ಜಿ ಸಲ್ಲಿಸಿ ಇಡೀ ಪ್ರಕರಣದ ದಿಕ್ಕನ್ನೆ ಬದಲಿಸಿ ಒಂದು ಮಾದರಿ ತೀರ್ಪನ್ನು ಕೊಡುವ ಹಂತಕ್ಕೆ ತಂದು ನಿಲ್ಲಿಸುತ್ತದೆ ಅಂದರೆ ಅದಕ್ಕಿರುವ ಶಕ್ತಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಜೊತೆಗೆ ಯಾವುದೇ ಅನ್ಯಾಯ ನಡೆದರೂ ಅದರ ವಿರುದ್ದ ಮುಂಚೂಣಿಯಲ್ಲಿ ನಿಂತು ಹೋರಾಡುವುದು ಕಮ್ಯೂನಿಸ್ಟ್‌ ಪಕ್ಷಗಳು ಎಂಬುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ.

ಚಂದ್ರು ನಂತವರು ಒಬ್ಬ ಜನಪರ, ನ್ಯಾಯವಾದಿ, ನ್ಯಾಯವಾಧಿರಾಗಿ ಬದ್ದತೆ ಮತ್ತು ಗಟ್ಟಿತನದಿಂದ ಕೆಲಸ ಮಾಡಲು ಸಾಧ್ಯವಾಗಿದ್ದು ಅವರು ಬೆಳೆದ ಅಂಬೇಡ್ಕರ್, ಮಾರ್ಕ್ಸ್ ಮತ್ತು ಪೆರಿಯಾರ್ ಹಾದಿಯ ಹಿನ್ನಲೆ, ದ್ರಾವಿಡರ ಅಸ್ಮೀತೆಯೆ ಕಾರಣ ಎಂಬುದನ್ನು ನಾವು ಇಲ್ಲಿ ಗಮನಿಸಲೆಬೇಕು. ಹುದುಗಿ ಹೋದ ಶೋಷಿತರ ಸಂಕಷ್ಟ ಮತ್ತು ಚರಿತ್ರೆಗಳನ್ನು ಬರೆಯುವುದು ತೀರಾ ವಿರಳ ಅದನ್ನು ಸಮಾಜಕ್ಕೆ ತೋರಿಸುವ ಕೆಲಸವನ್ನು ಚಲನಚಿತ್ರ ಚಿತ್ರದ ಮ‌ೂಲಕ ನಿರ್ದೇಶಿಸಿದ ನಿರ್ದೇಶಕ ಜ್ಞಾನವೇಲ್, ನಿರ್ಮಾಪಕಿ ಜ್ಯೋತಿಕಾ ಸೂರ್ಯ, ನಟ ಸೂರ್ಯ ಶಿವಕುಮಾರ್ ಸೇರಿ ಅವರ ಇಡೀ ತಂಡಕ್ಕೆ ಅಭಿನಂದನೆಗಳು. ನಟಿಸಿದ ಎಲ್ಲರ ಅಭಿನಯವು ಶ್ಲಾಘನೀಯ ಒಟ್ಟಾರೆ ಈ ಸಿನೆಮಾ ವ್ಯವಸ್ಥೆಯ ಕ್ರೂರತ್ವ ಮತ್ತು ಸಂವಿಧಾನ ಹಾಗೂ ನಮ್ಮ ಕಾನೂನಿಗೆ ಇರುವ ಶಕ್ತಿಯನ್ನು ಎತ್ತಿ ತೋರಿಸುತ್ತದೆ.

ಮದ್ರಾಸ್ ಹೈ ಕೋರ್ಟ್ ನ ವಿಶ್ರಾಂತ ನ್ಯಾಯಮೂರ್ತಿ ಚಂದ್ರು ನ್ಯಾಯಾಂಗದಲ್ಲಿ ಮಾಡಿದ ಸಾಧನೆ ಅಮೋಘವಾದದ್ದು, ಅವರು ಎಸ್ಎಫ್ಐ ನ (ಭಾರತ ವಿದ್ಯಾರ್ಥಿ ಫೆಡರೇಷನ್ ನ ತಮಿಳುನಾಡು ರಾಜ್ಯದ ಮಾಜಿ ಕಾರ್ಯದರ್ಶಿ ) ಮಾಜಿ ನಾಯಕರು ಅನ್ನುವುದು ಹೆಮ್ಮೆಯ ವಿಷಯ, ಮಾನ್ಯ ಚಂದ್ರ ರವರು ಈಗಲೂ ನಮ್ಮ ಮಧ್ಯೆ ಇದ್ದಾರೆ.

ಕೊನೆಯದಾಗಿ ನಮ್ಮ ಹೋರಾಟ ವಂಚಿತ ಮತ್ತು ದುರ್ಬಲ ವರ್ಗಗಳ ಪರ, ಸಮಾನತೆಗಾಗಿ ಎಂದು ಸ್ಪಷ್ಟವಾಗಿ ಹೇಳುತ್ತಾ ಅದನ್ನು ಬಾಬಾ ಸಾಹೇಬ್ ಅಂಬೇಡ್ಕರ್, ಕಾರ್ಲ್ ಮಾರ್ಕ್ಸ್ ಮತ್ತು ಪೆರಿಯಾರ್ ರವರ ಹಾದಿಯಾಗಿ ಸಾಗಿ ಇಂದಿನ ‌ದುರಿತದ ದಿನಗಳಲ್ಲಿ ಬೀದಿ ಮತ್ತು ನ್ಯಾಯಾಲಯದ ಒಳಗಿನ ಹೋರಾಟಗಳನ್ನು ಇನ್ನಷ್ಟು ಗಟ್ಟಿಯಾಗಿ ಕಟ್ಟಿಬೇಕಿದೆ ಎಂಬ ಸಂದೇಶವನ್ನೂ ಈ ಸಿನೆಮಾ ನಿಡುತ್ತದೆ.

ಮನೆಯ ಮಂದಿ ಎಲ್ಲಾ ಕುಳಿತುಕೊಂಡು ಇಂತಹ ಚಲನಚಿತ್ರಗಳನ್ನು ಪ್ರತಿಯೊಬ್ಬರು ತಪ್ಪದೆ ನೋಡಬೇಕಿದೆ.

ಇಂತಹ ಚಲನಚಿತ್ರಗಳು ಕನ್ನಡ ಚಲನಚಿತ್ರ ರಂಗದಲ್ಲಿ ಮೂಡಿ ಬರುವಂತಾಗಲಿ.!

ಶಿವಕುಮಾರ ಮ್ಯಾಗಳಮನಿ – ಯುವ ವಕೀಲರು

Donate Janashakthi Media

One thought on “ಜೈ ಭೀಮ್‌ ಚಿತ್ರದ ವಕೀಲ ‘ಚಂದ್ರು’ ಯಾರೆಂಬ ಬಗ್ಗೆ ವ್ಯಾಪಕ ಚರ್ಚೆ

  1. ತುಬಾ ಉತ್ತಮವಾದ ಕಾರ್ಯವನ್ನು ಮಾಡಿದ್ದಾರೆ. ಈ ನಿಮ್ಮ ಕಾರ್ಯಕ್ಕೆ ಅಭಿನಂದನೆಗಳು. ನೀವೇ ನಮಗೆ ಮಾರ್ಗ ದರ್ಶನ….!!!

Leave a Reply

Your email address will not be published. Required fields are marked *