ಎಚ್.ಆರ್.ನವೀನ್ ಕುಮಾರ್, ಹಾಸನ
ʻಜೈ ಭೀಮ್ʼ ಇದು ಕೇವಲ ಒಂದು ಸಿನಿಮಾ ಮಾತ್ರವಲ್ಲ, ಬದಲಾಗಿ ಆದಿವಾಸಿಗಳ ಕರಾಳ ಬದುಕಿನ ಚಿತ್ರಣ ಮತ್ತು ಇದು ಕಥೆಯಲ್ಲ, ನೈಜ ಘಟನೆ ಆಧಾರಿತ ಚಿತ್ರ.
ಸೂಕ್ಷ್ಮ ಸಂವೇದನೆಯ ನಟ ಸೂರ್ಯ ಒಬ್ಬ ಮಾರ್ಕ್ಸ್ವಾದಿ ವಕೀಲನಾಗಿ ತನ್ನ ಮಾರ್ಕ್ಸ್ವಾದಿ ಹೋರಾಟ ಮತ್ತು ಅಂಬೇಡ್ಕರ್ ರವರ ಕಾನೂನಿನ ಬಲವಾದ ಅಸ್ತ್ರ ಹಾಗೂ ಪೆರಿಯಾರ್ ರವರ ಸ್ವಾಬಿಮಾನವನ್ನು ಮೈಗೂಡಿಸಿಕೊಂಡು ಅನ್ಯಾಯ ಮತ್ತು ಶೋಷಣೆಗೆ ಒಳಗಾಗಿರುವ ಸಮಾಜ ಮತ್ತು ವ್ಯವಸ್ಥೆ ಕಡೆಗಣಿಸುವುದು ಮಾತ್ರವಲ್ಲ ಅತ್ಯಂತ ತುಚ್ಚವಾಗಿ ಕಾಣುವ ಆದಿವಾಸಿಗರ ಪರವಾಗಿ ಬೀದಿ ಹೋರಾಟ ಮತ್ತು ಕಾನೂನಿನ ಅಸ್ತ್ರವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿ ಪೊಲೀಸ್ ವ್ಯವಸ್ಥೆ, ಸಮಾಜ ಮತ್ತು ಆಳುವ ವರ್ಗದ ಮನಸ್ಥಿತಿಗಳನ್ನ ಬೆತ್ತಲುಗೊಳಿಸುವ ಪ್ರಯತ್ನವನ್ನ ನಡೆಸಲಾಗಿದೆ.
ಇಡೀ ಸಿನಿಮಾ ಹಿರೋ ಹಿಂದೆ ಗಿರಿಕಿಯೊಡೆಯುವುದರ ಬದಲು 2 ಗಂಟೆ 44 ನಿಮಿಷಗಳು ಆದಿವಾಸಿಗಳ ಬದುಕು ಮತ್ತು ಪೋಲಿಸ್ ವ್ಯವಸ್ಥೆಯ ಕ್ರೌರ್ಯವನ್ನು ಮತ್ತು ನ್ಯಾಯಾಲಯ ಪ್ರಕ್ರಿಯೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ. ಯಾರ ಮುಖಗಳಲ್ಲೂ ನಟನೆಯ ಛಾಯೆ ಡಾಳಾಗಿ ಕಾಣಿಸದೇ ಪ್ರತಿಯೊಬ್ಬರೂ ಪಾತ್ರಗಳಿಗೆ ಜೀವ ತುಂಬಿದ್ದಾರೆ.
1993 ರಲ್ಲಿ ನ್ಯಾಯಮೂರ್ತಿ ಕೆ.ಚಂದ್ರುರವರು ಇರುಳರ್ ಬುಡಕಟ್ಟುಗಳ ಬಗ್ಗೆ ನಡೆಸಿದ ಹೋರಾಟದ ಸತ್ಯ ಘಟನೆಯನ್ನು ಆಧರಿಸಿ ಟಿ.ಜೆ. ಜ್ಞಾನವೇಲ್ “ಜೈ ಭೀಮ್” ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸೂರ್ಯನ ಜೊತೆ ಪ್ರಕಾಶ್ ರಾಜ್, ರಜಿಶಾ ವಿಜಯನ್, ಲಿಜೊಮೋಲ್ ಜೋಶ್, ರಮೇಶ್ ಮತ್ತು ಮಣಿಕಂದನ್ ರವರು ಇದ್ದಾರೆ.
ರಾಜಾ ಕಣ್ಣು ಮತ್ತು ಸಿಂಗಾನಿ ಇಡೀ ಸಿನಿಮಾದಲ್ಲಿ ಕಾಡುತ್ತಾರೆ.
ಜಾತಿಯ ಕಾರಣಕ್ಕಾಗಿ ತನ್ನದಲ್ಲದ ತಪ್ಪಿಗೆ ಪೋಲೀಸರ ಕೇಸುಗಳಿಗೆ ಆಯುಧಗಳಾಗುವ ಕೆಳ ಜಾತಿಗಳ ಜನ ಜೈಲು ಶಿಕ್ಷೆ ಅನುಭವಿಸಿ ಹೊರಬಂದರೂ ಮತ್ತೆ ಪೊಲೀಸ್ ವ್ಯವಸ್ಥೆ ಅವರನ್ನ ತಮ್ಮ ಕುತಂತ್ರಗಳಿಗೆ ಹೇಗೆ ಬಲಿಕೊಡುತ್ತದೆ ಎನ್ನುವ ದೃಶ್ಯದ ಮೂಲಕ ಪ್ರಾರಂಭವಾಗುವ ಸಿನಿಮಾ ಅಂತಿಮವಾಗಿ ನಾಯಕ ವಕೀಲ ಚಂದ್ರು ತನ್ನ ಮನೆಯಲ್ಲಿ ಪೇಪರ್ ಓದುತ್ತಾ ಕುಳಿತಿರುವಾಗ ಅವನ ಪಕ್ಕದ ಕುರ್ಚಿಯಲ್ಲಿ ಇರುಳರ್ ಆದಿವಾಸಿ ಬುಡಕಟ್ಟು ಜನರಾದ ಸಿಂಗಾನಿ ಮತ್ತು ರಾಜಾ ಕಣ್ಣನ್ ಮಗಳು ಕಾಲಮೇಲೆ ಕಾಲು ಹಾಕಿಕೊಂಡು ಕೈಯಲ್ಲಿ ಪತ್ರಿಕೆಯನ್ನಿಡಿದುಕೊಂಡು ಓದುವ ದೃಶ್ಯದ ಮೂಲಕ ಮುಕ್ತಾಯವಾಗುವಾಗ ಅವರ ಮುಂದಿನ ಟೇಬಲ್ ಮೇಲೆ ಮಹಾನ್ ಮಾನವತಾವಾದಿ, ಮನುಕುಲದ ವಿಮೋಚನೆಗೆಂದು ದುಡಿದ, ಶೋಷಣಾ ಮುಕ್ತ ಸುಂದರ ಸಾಮಾಜಿಕ ವ್ಯವಸ್ಥೆಯನ್ನು ಕ್ರಾಂತಿ ಮೂಲಕ ರಷ್ಯಾದಲ್ಲಿ ಸಾಧಿಸಿ ತೋರಿಸಿದ ಕಾಮ್ರೇಡ್ ಲೆನಿನ್ ರವರ ಪ್ರತಿಮೆಯು ನಮಗೆ ಗೋಚರಿಸುತ್ತದೆ.
ಇಡೀ ಸಿನಿಮಾದಲ್ಲಿ ಶಿಕ್ಷಣದ ಮಹತ್ವ ಮತ್ತು ಯಾರ ಅರಿವಿಗೂ ಬಾರದಂತೆ ಆದಿವಾಸಿಗಳಿಗೆ ಶಿಕ್ಷಣ ನೀಡುವ ಟೀಚರ್ ಗಮನ ಸೆಳೆಯುವ ಪಾತ್ರವಾಗಿದೆ.
ಇನ್ನೂ ಇಡೀ ಸಿನಿಮಾದ ಉದ್ದಕ್ಕೂ ಬರುವ ಸಂಭಾಷಣೆ, ಚಿತ್ರೀಕರಣ ಎಲ್ಲವನ್ನೂ ಸಿನಿಮಾ ನೋಡಿಯೇ ಅನುಭವಿಸಬೇಕು.
ಸೈರಾಟ್, ಅಸುರನ್, ಫಂಡ್ರಿ ತರದ ಸಿನಿಮಾಗಳ ರೀತಿಯಲ್ಲಿಯೇ ಬಹಳ ದೀರ್ಘ ಕಾಲ ಕಾಡುವ “ಜೈ ಭೀಮ್” ಸಿನಿಮಾ ಮಾರ್ಕ್ಸ್, ಅಂಬೇಡ್ಕರ್, ಪೆರಿಯಾರ್ ಅವರುಗಳ ಚಿಂತನೆಗಳನ್ನ ಸಮಕಾಲೀನಗೊಳಿಸಿಕೊಂಡು ಎಲ್ಲರ ಚಿಂತನೆಯ ಅಸ್ತ್ರಗಳನ್ನು ಪರಿಣಾಮಕಾರಿಯಾಗಿ ಬಳಸಿ ದುರುಳ ಶೋಷಕ ವ್ಯವಸ್ಥೆಯ ವಿರುದ್ದ ಎಲ್ಲರೂ ಒಟ್ಟಾಗಿ ಹೋರಾಟ ಮಾಡುವ ಅನಿವಾರ್ಯತೆಯನ್ನು ಸೂಚಿಸುತ್ತದೆ.