ನವದೆಹಲಿ: ಕೆಲ ದಿನಗಳ ಹಿಂದೆ ಕೋಮು ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಜಹಾಂಗೀರ್‌ಪುರಿ ಪ್ರದೇಶ ಈಗ ಭಾವೈಕ್ಯತೆಯ ಸಂದೇಶ ಸಾರಲಾಗಿದೆ. ಏಪ್ರಿಲ್ 16ರಂದು ಇಲ್ಲಿ ಅತ್ಯಂತ ಗಂಭೀರ ಸ್ವರೂಪದಲ್ಲಿ ಹಿಂಸಾಚಾರ ನಡೆದಿತ್ತು. ಭಾನುವಾರ(ಏಪ್ರಿಲ್ 24) ಹಿಂದೂ ಮತ್ತು ಮುಸ್ಲಿಮ್ ಸಮುದಾಯದ ಜನರು ತ್ರಿವರ್ಣ ಧ್ವಜ ಮೆರವಣಿಗೆ ನಡೆದಿದ್ದಾರೆ. ಅಲ್ಲದೆ, ಕೋಮು ಸೌಹಾರ್ದತೆಯನ್ನು ಸಾರಿ ಇನ್ಮುಂದೆ ಕೋಮು ಗಲಭೆಗಳಂತಹ ಕೃತ್ಯಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪ್ರಮಾಣ ಮಾಡಿದರೆಂದು ತಿಳಿದುಬಂದಿದೆ.
ಈ ಮೆರವಣಿಗೆಯನ್ನು ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸುಮಾರು 100ಕ್ಕೂ ಹೆಚ್ಚು ಮಂದಿ ಈ ಶಾಂತಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಪ್ರತಿಯೊಬ್ಬರ ಕೈಯಲ್ಲಿ ರಾಷ್ಟ್ರಧ್ವಜ ಹಾರಿಸುತ್ತಾ ಡಾ. ಬಿ ಆರ್ ಅಂಬೇಡ್ಕರ್ ಅವರ ಫೋಟೋಗಳನ್ನು ಹಿಡಿದುಕೊಂಡು ಸಾಗಿದರು. ಶಾಂತಿ, ಸೌಹಾರ್ದತೆ, ಏಕತೆಯ ಸಂದೇಶವನ್ನು ಈ ಮೆರವಣಿಗೆ ಮೂಲಕ ನೀಡಲಾಗಿದೆ. ಅಲ್ಲದೆ, ಯಾವ ಹೆಚ್ಚಿನ ಬಿಗಿಭದ್ರತೆಯಿಲ್ಲದೆ ಈ ಮೆರವಣಿಗೆ ನಡೆದಿರುವುದು ಅತ್ಯಂತ ವಿಶೇಷವಾದ ಸಂಗತಿಯಾಗಿದೆ.
ಎಎನ್‌ಐ ಸುದ್ದಿಸಂಸ್ಥೆಯಿಂದಿಗೆ ಮಾತನಾಡಿದ, ದೆಹಲಿಯ ವಾಯವ್ಯ ವಿಭಾಗದ ಡಿಸಿಪಿ ಉಷಾ ರಂಗಣಿ ಅವರು “ಎರಡೂ ಸಮುದಾಯಗಳ ಸದಸ್ಯರಿರುವ ಜಂಟಿ ಶಾಂತಿ ಸಮಿತಿಯನ್ನು ನಾವು ರಚಿಸಿದೆವು. ಜಹಾಂಗೀರ್‌ಪುರಿಯಲ್ಲಿ ತಿರಂಗಾ ಯಾತ್ರೆ ನಡೆಸಿ ಜನರಲ್ಲಿ ಕೋಮುಸೌಹಾರ್ದತೆ ಪಾಲನೆಗೆ ಮನವಿ ಮಾಡುವ ಸಲಹೆಯನ್ನು ಸಮಿತಿ ನೀಡಿತು. ಎರಡೂ ಸಮುದಾಯಗಳಿಂದ ತಲಾ 50 ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡರು” ಎಂದಿದ್ದಾರೆ.
ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಹಿಂದೂ ಮತ್ತು ಮುಸ್ಲಿಮ್ ಸಮುದಾಯದ ಪ್ರತಿನಿಧಿಗಳು ಪರಸ್ಪರ ಆಲಂಗಿಸಿಕೊಂಡ ದೃಶ್ಯ ಕಾಣಸಿಗುತ್ತವೆ. ಇನ್ಮುಂದೆ ಹಿಂಸಾಚಾರ ಕೃತ್ಯಗಳು ಮರುಕಳಿಸದಂತೆ ನೋಡಿಕೊಳ್ಳುವುದಾಗಿ ಜನರು ಶಪಥ ಮಾಡಿದ್ದಾರೆ.
“ನಾವು ಸೌಹಾರ್ದತೆಯಿಂದ ಬದುಕಬಯಸುತ್ತೇವೆ. ಇಂಥ ಕೃತ್ಯಗಳು ಮತ್ತೆ ಆಗದಂತೆ ಎಚ್ಚರ ವಹಿಸುತ್ತೇವೆ. ಈ ಪ್ರದೇಶದಲ್ಲಿ ಹಾಕಲಾಗಿರುವ ಬ್ಯಾರಿಕೇಡ್‌ಗಳ ಸಂಖ್ಯೆಯನ್ನು ಪೊಲೀಸರು ಕಡಿಮೆ ಮಾಡಲಿ ಹಾಗು ಇಲ್ಲಿ ನಿಯೋಜನೆಗೊಂಡಿರುವ ಪೊಲೀಸರ ಸಂಖ್ಯೆಯೂ ಕಡಿಮೆ ಆಗಲಿ” ಎಂದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ತಬ್ರೇಜ್ ಖಾನ್ ಅವರು ಹೇಳಿರುವುದನ್ನು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.