ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ…

ಜಗತ್ತಿನ ಎಲ್ಲೆ ಆಗಲಿ
ಅನ್ಯಾಯದ ವಿರುದ್ದ ನೀನು ಸಿಡಿದು ನಿಂತರೆ
ಆಗ ನೀನು ನನ್ನ ಸಂಗಾತಿ’
ಎಂದು ಸಾರಿದ `ಚೇ’ಗೆ ತನ್ನ ಸುಖಸಂಸಾರದ ಬೆಚ್ಚನೆಯ ಗೂಡಲ್ಲಿ ನೆಮ್ಮದಿಯಾಗಿ ನಿದ್ರೆ ಮಾಡಿಕೊಂಡು ಹೋಗುವ ಅವಕಾಶವೂ ಇತ್ತು. ಉಹುಂ. ಚೇ ನಿದ್ರೆಗೆಟ್ಟುಬಿಟ್ಟ

ಆರ್. ರಾಮಕೃಷ್ಣ

ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ…
ಹೀಗಂದ ಕೂಡಲೇ ಅದು ಗೌತಮ ಬುದ್ದನ ಕುರಿತಾದದ್ದು ಎಂದು ಯಾರಿಗಾದರೂ ತಿಳಿಯುತ್ತದೆ. ಬುದ್ದನ ಮೊದಲ ಹೆಸರು ಸಿದ್ದಾರ್ಥ. ಅವನು ಕಪಿಲ ವಸ್ತುವಿನ ರಾಜ ಶುದ್ದೋದನನ ಮಗ. ಅವನು ಜಗತ್ತಿನ ಸಂಕಷ್ಟಗಳನ್ನು ಕಾಣದೇ ಬಾಲ್ಯವನ್ನು ಕಳೆದನಂತೆ. ಒಮ್ಮೆ ವಿಹಾರ ಹೊರಟಾಗ ಅವನು ದಾರಿಯಲ್ಲಿ ಒಬ್ಬ ಭಿಕ್ಷುಕನನ್ನು, ಒಬ್ಬ ರೋಗಿಯನ್ನು, ಒಬ್ಬ ವೃದ್ದನನ್ನು, ಒಂದು ಶವದ ಮೆರವಣಿಗೆಯನ್ನು ನೋಡಿದನಂತೆ.

ಆಗ ಅವನಿಗೆ ಜಗತ್ತು ತಾನು ಅಂದುಕೊಂಡಂತಿಲ್ಲ. ಜಗತ್ತು ಸಾವು, ನೋವು, ಬಡತನ, ಸಂಕಟಗಳಿಂದ ತುಂಬಿದೆ ಎಂಬ ವಿಚಾರ ಅರಿವಿಗೆ ಬರುತ್ತದೆ. ಅವನ ಮನಸ್ಸು ಜಗತ್ತನ್ನು ಕಾಡುತ್ತಿರುವ ಈ ಸಂಕಟಗಳಿಂದ ಪಾರು ಮಾಡುವ ದಾರಿಯನ್ನು ಹುಡುಕಲು ತುಡಿಯುತ್ತದೆ. ಸಂಸಾರ, ಸಿರಿ, ಅರಮನೆಯನ್ನು ತೊರೆದು ಸಿದ್ದಾರ್ಥ ಜಗತ್ತಿನ ಸಂಕಟಗಳಿಗೆ ಉತ್ತರವನ್ನು ಹುಡುಕುತ್ತಾ ಹೊರಟು ಬಿಡುತ್ತಾನೆ.

ಸಾಂತ್ವನ
ವೈದಿಕ ಧರ್ಮದ ವರ್ಣ ವ್ಯವಸ್ಥೆಯ ಕ್ರೌರ್ಯ, ಡಾಂಬಿಕತೆ, ಹಿಂಸೆ, ಶೋಷಣೆಯ ಸಂದರ್ಭದ ಚಾರಿತ್ರಿಕ ಹಿನ್ನೆಲೆಯಲ್ಲಿ ನೋಡಿದಾಗ ಬುದ್ದ, ಬುದ್ದನ ಬೋಧನೆಗಳು ಒಂದು ಬಗೆಯ ಪ್ರತಿಭಟನಾ ಚಳವಳಿಯಂತೆ, ಬಂಡಾಯ ಧರ್ಮದಂತೆ ನೊಂದ ಜನತೆಯ ಪಾಲಿಗೆ ಸಾಂತ್ವನದಂತೆ ಒದಗಿ ಬಂದವು. ಬುದ್ದನ ಸರಳ, ನೈತಿಕ ವಿಚಾರಗಳು ಅಂದಿನ ಐತಿಹಾಸಿಕ ಸನ್ನಿವೇಶದಲ್ಲಿ ಸಮಾಜದ ನೋವು ನರಳಾಟಗಳಿಗೆ ಕಂಡುಕೊಂಡ ಅಂದಿನ ಹಂತದ ಪರಿಹಾರಗಳಾಗಿದ್ದವು. ಬುದ್ದ, ಬುದ್ದನ ಬೋಧನೆಗಳ ವಿಷಯ ಸುಮಾರು 2500 ವರ್ಷಗಳ ಹಿಂದಿನ ಕ್ರಿಸ್ತ ಪೂರ್ವ 6 ನೇ ಶತಮಾನಕ್ಕಾಯಿತು. ಜಗತ್ತಿನ ದುಃಖ, ಜನಗಳ ಬದುಕಿನ ಸಂಕಟಗಳು ಸಿದ್ಧಾರ್ಥನನ್ನು ಕಾಡಿದಂತೆ ಇನ್ನೂ ಎಷ್ಟೋ ಜನರನ್ನು ಕಾಡಿವೆ.
ಈಗ 20 ಶತಮಾನದಲ್ಲಿ 60 ರ ದಶಕದಲ್ಲಿ ಕೆಲಮಟ್ಟಿಗೆ ಇದನ್ನು ಹೋಲುವ ಒಂದು ಪ್ರಕರಣವಿದೆ.

ಪತ್ರ ಬರೆದಿಟ್ಟು ಹೋದ…
1965 ಒಂದು ದಿನ ಕ್ಯೂಬಾ ದೇಶದ ಕೈಗಾರಿಕಾ ಸಚಿವ, ಅಧಿಕಾರ ರೂಢ ಕಮ್ಯುನಿಸ್ಟ್ ಪಕ್ಷದ ಒಬ್ಬ ಅಗ್ರಗಣ್ಯ ನಾಯಕ, `ಚೇ’ ಎಂದೇ ಖ್ಯಾತನಾದ ಅರ್ನೆಸ್ಟೋ ಚೆ ಗುವಾರ, ಕ್ಯೂಬಾ ಕ್ರಾಂತಿಯ ಜೊತೆಗಾರ ಹಾಗೂ ಕ್ಯೂಬಾದ ಅಧ್ಯಕ್ಷನಾದ ಫಿಡೆಲ್ ಕ್ಯಾಸ್ಟ್ರೋಗೆ ಒಂದು ಪತ್ರವನ್ನು ಬರೆದಿಟ್ಟು ಹೇಳದೇ ಕೇಳದೇ ಹೊರಟು ಬಿಡುತ್ತಾನೆ. ಕೇವಲ 37 ವರ್ಷದ ಯುವಕ ಮುದ್ದಿನ ಮಕ್ಕಳು, ಪ್ರೀತಿಯ ಹೆಂಡತಿಯನ್ನು ಬಿಟ್ಟು ಗುಡ್ಡಬೆಟ್ಟಗಳ ಕಗ್ಗಾಡಿನ ಹಾದಿಯಲ್ಲಿ ತಂಡ ಕಟ್ಟಿಕೊಂಡು ನುಗ್ಗಿ ಬಿಡುತ್ತಾನೆ.

ಆತ ಹೋಗಿದ್ದು ದಕ್ಷಿಣ ಅಮೆರಿಕದ ಬೊಲಿವಿಯಾ ದೇಶಕ್ಕೆ. ಬೊಲಿವಿಯಾದ ಕಾಡಿನಲ್ಲಿ ಅಕ್ಟೋಬರ್ 7, 1967 ರಂದು ಸೆರೆ ಸಿಕ್ಕ `ಚೇ’ ಯನ್ನು ಅಕ್ಟೋಬರ್ 9, 1968 ರಂದು ಅಮೆರಿಕದ ಸಿಐಎ ಬೆಂಬಲಿತ ಬೊಲಿವಿಯನ್ ಸರ್ವಾಧಿಕಾರಿಯ ಸೈನಿಕರು ನಿರ್ದಯವಾಗಿ ಕೊಂದು ಹಾಕಿದರು.

ಹುಡುಕಾಟ
`ಚೇ’ ಒಬ್ಬ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ. (ಆತ ಸ್ವತಃ ಒಬ್ಬ ಆಸ್ತಮಾ ರೋಗಿಯೂ ಆಗಿದ್ದ) ಅವನು ಮನುಷ್ಯನ ದೇಹದ ರೋಗ ರುಜಿನಗಳು, ದೇಹ ಕೆಲಸ ಮಾಡುವ ಬಗೆಯನ್ನು ಅಧ್ಯಯನ ಮಾಡುತ್ತಿರುವಾಗಲೇ, ಸಮಾಜಕ್ಕೆ ಅಂಟಿರುವ ರೋಗಗಳು, ಸಮಾಜ, ವ್ಯವಸ್ಥೆ ನಿಂತಿರುವ, ನಡೆಯುತ್ತಿರುವ ರೀತಿಯನ್ನೂ ಗಮನಿಸತೊಡಗಿದ. ಆಮೇಲೆ ಮೋಟಾರು ಸೈಕಲ್ಲನ್ನೇರಿ ದಕ್ಷಿಣ ಅಮೆರಿಕದ ದೇಶಗಳನ್ನೆಲ್ಲಾ ಸುತ್ತಿದ. ಎಲ್ಲೆಲ್ಲೂ ರೋಗಿಗಳು. ಕುಷ್ಠ ರೋಗಿಗಳು. ದಾರುಣ ಬದುಕು. `ವೈದ್ಯನ ಮನ ಕಲಕಿತು. ರೋಗಗಳನ್ನು, ಕುಷ್ಠರೋಗವನ್ನು ನಿರ್ಮಲ ಮಾಡುವ ನಿರ್ಧಾರ ಮನದಲ್ಲಿ ಮೊಳೆತು ಬಿಟ್ಟಿತು. ಅನುದಿನವೂ ದುಡಿದು ದುಡಿದು ಹುಡಿಯಾದರೂ ಜನರು ಯಾಕೆ ಬಡತನದ ಬೇಗೆಯಲ್ಲಿ ಬೇಯುತ್ತಿದ್ದಾರೆ.? ಇಲ್ಲಿ `ಬಡತನವ ಬುಡಮಟ್ಟ ಕೀಳಲೈತನ್ನಿ’ ಎನ್ನುವ ಬಯಕೆ ಬಲಿಯಿತು. ಬಡತನದ ಬೇರು ಎಲ್ಲಿದೆ ? ಅದನ್ನು ಕೀಳ ಹೋಗುವವರಿಗೆ ಏನಡ್ಡಿ ?

ಅಲ್ಲಿ ಸಿಂಹಾಸನದಲ್ಲಿ ಅಮೆರಿಕ ಕುಳ್ಳಿರಿಸಿದ ಕೈ ಗೊಂಬೆ ಸರ್ವಾಧಿಕಾರಿಗಳು. ನಗ್ನ ಸರ್ವಾಧಿಕಾರ. ಅವರ ಆಶ್ರಯದಲ್ಲಿ ಖನಿಜ ಕಾಡು, ನಿಸರ್ಗದ ಸಂಪತ್ತು ಲೂಟಿ ಮಾಡುವ, ಜನರ ದುಡಿಮೆಯ ಫಲವನ್ನು-ಜನರ ರಕ್ತವನ್ನು ಹೀರುವ ಶೋಷಕರ ಹಿಂಡು. ಈ ವ್ಯವಸ್ಥೆಯನ್ನು ಕಾಯಲು ಸೇನೆ, ತುಪಾಕಿ, ದಂಡು. ಬಂದೂಕು, ಗುಂಡು. ದಕ್ಷಿಣ ಅಮೆರಿಕ ಎಂಬುದೇ ಅಮೆರಿಕ ದೇಶದ ಹಿತ್ತಲು. ರಕ್ತ ಬಸಿದು ಕೊಡುವ ಜನರಿಗೆ ಅಮೆರಿಕದಿಂದ ಪ್ರತಿಯಾಗಿ ಸಿಗುವುದು ಬರಿ ಕತ್ತಲು.

1954 ರಲ್ಲಿ `ಚೇ’ ಮೆಕ್ಸಿಕೋದಲ್ಲಿ, ಕ್ಯೂಬಾದಿಂದ ಗಡಿಪಾರಾಗಿದ್ದ ಕ್ರಾಂತಿ ಕಿಡಿಗಳಾದ ಫಿಡೆಲ್ ಕ್ಯಾಸ್ಟ್ರೋ, ರೌಲ್ ಕ್ಯಾಸ್ಟ್ರೋ ಸಂಗಾತಿಗಳ ಕೈ ಕುಲುಕಿದ. ಆಮೇಲೆ ಕ್ಯೂಬಾದ ಸರ್ವಾಧಿಕಾರಿ ಬ್ಯಾಟಿಸ್ಟನ ಕೋಟೆಯ ಮೇಲೆ ದಾಳಿ. ಕದನ. ಭೀಕರ ಕದನ. ಕಾರ್ಮಿಕರು, ದುಡಿಯವ ಜನರೊಂದಿಗೆ ನಡೆದವರ ಕೊರಳಿಗೆ ವಿಜಯ ಮಾಲೆ. ಜನವರಿ 1. 1959 ನೀಚ ಸರ್ವಾಧಿಕಾರಿ ಕಂಬಿ ಕಿತ್ತ.

ಸಂಕಟಗಳನ್ನು ಅಳಿಸುವ ಸವಾಲು..

ಜಗತ್ತಿನ ಸಕ್ಕರೆಯ ಬಟ್ಟಲು ಕ್ಯೂಬಾದ ಭೂಮಿ ಕ್ಯೂಬನ್ನರ ಕೈಲಿ ಎಲ್ಲಿತ್ತು.? ಎಷ್ಟಿತ್ತು ? 56 ಸಾವಿರ ಎಕರೆ, 21 ಸಾವಿರ ಎಕರೆ …ಹೀಗೆ ಒಂದೊಂದು ಎಸ್ಟೇಟು ಅಮೆರಿಕದ ದುಷ್ಟ ಕಂಪನಿಗಳ ಕೈಯಲ್ಲಿ. ಫಲವತ್ತಾದ ನೆಲ. ಅದು ಈಗ ರೈತರ ಕೈಗೆ ಬಂತು. ಕ್ಯೂಬಾ ಕಂಡು ಕೇಳರಿಯದ ಬದಲಾವಣೆ. ಭಿಕ್ಷಕರು ಮಾಯವಾದರು. ಎಲ್ಲರಿಗೂ ಆಹಾರ ಹೊಟ್ಟೆ ತುಂಬ. ದೇಶದ ಸಮಸ್ತ ಜನರ ಕೈಗೆ ಅಕ್ಷರದ ಆಯುಧವನ್ನು ಕೊಡಲಾಯಿತು. ಕ್ಯೂಬಾ ದೇಶ ಜಗತಿನಲ್ಲೇ ಅತ್ಯುನ್ನತ ಎನ್ನುವ ಸಾಕ್ಷರತೆಯನ್ನು ಸಾಧಿಸಿತು. ಜನರ ಮನೆಮನೆಗೆ ವೈದ್ಯರು ಕುಟುಂಬ ಸ್ನೇಹಿತರಂತೆ ಬಂದು ಹೋಗುವ ಆರೋಗ್ಯ ವ್ಯವಸ್ಥೆ ಬಂತು. ಸಾವನ್ನು ಗೆಲ್ಲಲಾಗುವುದಿಲ್ಲ. ನಿಜ. ಆದರೆ 55 ವರ್ಷ ಇದ್ದ ಜನರ ಸರಾಸರಿ ಆಯಸ್ಸು ಕ್ರಾಂತಿಯಾದ ಮೇಲೆ 75 ವರ್ಷಕ್ಕೆ ಏರಿತು. ಅಂದರೆ 20 ವರ್ಷದ ಮಟ್ಟಿಗಾದರೂ ಸಾವನ್ನು ಹಿಂದಕ್ಕೆ ಇಕ್ಕಿದಂತೆ ಆಯಿತಲ್ಲ.

ಇನ್ನೆಷ್ಟು ನರಕ ?
ಕ್ಯೂಬಾ ದೇಶದ ಕ್ರಾಂತಿಯ ರೈಲನ್ನು ಹಳಿಯ ಮೇಲೆ ಹತ್ತಿಸಿದ್ದಾಯಿತು. ಅದು ಹಾಗೆ ಮುಂದೆ ಸಾಗುವುದನ್ನು ನೋಡಲು ಸಮರ್ಥ ಸಂಗಾತಿಗಳಿದ್ದಾರೆ. ಆದರೆ ಅಲ್ಲಿ, ಇನ್ನೂ ಎಷ್ಟೊಂದು ದೇಶಗಳಲ್ಲಿ ಜನರ ಪಾಲಿನ ಭೀಕರ ನರಕಗಳು. ಅವು ಹಾಗೇ ಉಳಿದು ಬಿಟ್ಟಿವೆಯಲ್ಲಾ !!
`ಜಗತ್ತಿನ ಎಲ್ಲೆ ಆಗಲಿ
ಅನ್ಯಾಯದ ವಿರುದ್ದ ನೀನು ಸಿಡಿದು ನಿಂತರೆ
ಆಗ ನೀನು ನನ್ನ ಸಂಗಾತಿ’
ಎಂದು ಸಾರಿದ `ಚೇ’ಗೆ ತನ್ನ ಸುಖಸಂಸಾರದ ಬೆಚ್ಚನೆಯ ಗೂಡಲ್ಲಿ ನೆಮ್ಮದಿಯಾಗಿ ನಿದ್ರೆ ಮಾಡಿಕೊಂಡು ಹೋಗುವ ಅವಕಾಶವೂ ಇತ್ತು. ಉಹುಂ. ಚೇ ನಿದ್ರೆಗೆಟ್ಟುಬಿಟ್ಟ.

`ಓ ನನ್ನ ಚೇತನ ಆಗು ನೀ ಅನಿಕೇತನ…’ ಅಂದರಲ್ಲ ಕುವೆಂಪು. `ಮನುಜ ಕುಲ ತಾನೊಂದೆ ವಲಂ’ ಅಂದಿಲ್ಲವೇ ಪಂಪ. ಹಾಗೇ `ಚೇ’ ಒಬ್ಬ ವಿಶ್ವ ಮಾನವ. ಕೆಲವರು `ಇದು ಭಾರತ. ಇದು ಪವಿತ್ರ ಭೂಮಿ. ಇನ್ನೊಂದು ಹೆಜ್ಜೆ ಆಚೆಗಿಟ್ಟರೆ ಅಪವಿತ್ರ ನೆಲ. ಅದು ಶತ್ರು ಭೂಮಿ’ ಎನ್ನುವರು. ಎಂತಹ ಕ್ಷುಲ್ಲಕ ಯೋಚನೆಯ ಕ್ರಿಮಿಗಳು !! ಅದು ಎಲ್ಲೇ ಆಗಲಿ ಇಡೀ ಜಗತ್ತಿನಲ್ಲಿ. ಅನ್ಯಾಯದ ವಿರುದ್ದ ಜಿದ್ದಿನಿಂದ ನುಗ್ಗಿ ಎದುರು ನಿಲ್ಲಬೇಕು. ಅದರ ಮುಸುಡಿಗೆ ಗುದ್ದಿ ಗೆಲ್ಲಬೇಕು. ಜಗತ್ತಿನ ಮೇಲೆ ಚಾಚಿಕೊಂಡಿರುವ ಸುಲಿಗೆಕೋರ ವ್ಯವಸ್ಥೆಯನ್ನು ಉಡಾಯಿಸಿ ಛಿದ್ರ ಛಿದ್ರ ಮಾಡಿಬಿಡಬೇಕು. ಬರೀ ರೊಚ್ಚು ಕೆಚ್ಚು ಅಲ್ಲ. ಆಳ ಆಧ್ಯಯನದಿಂದ ಹೊಮ್ಮಿದ ಪಕ್ವತೆ. ಎದೆಗಿಳಿದ `ಮಾರ್ಕ್ಸ್ ವಾದ-ಲೆನಿನ್ ವಾದ’ದ ಜೀವರಸ ತಂದು ಕೊಟ್ಟ ಕಸವು ಅದು. ನಗ್ನ ಸರ್ವಾಧಿಕಾರಿಗಳ ಪ್ರಭುತ್ವಗಳನ್ನು ಮಣಿಸಲು ಒಂದೆಡೆ ಶೋಷಿತ ದುಡಿಯುವ ವರ್ಗದ ಸಾಮೂಹಿಕ ಹೋರಾಟ ಮತ್ತೊಂದೆಡೆ ಗೆರಿಲ್ಲಾ ಕ್ರಾಂತಿಕಾರಿಗಳ ಸೆಣೆಸಾಟ.

ಇಂಕ್ವಿಲಾಬ್ ಜಿಂದಾಬಾದ್, ಕ್ರಾಂತಿ ಚಿರಾಯುವಾಗಲಿ ಅಂತ ಬ್ರಿಟೀಷರ ನ್ಯಾಯಾಲಯದಲ್ಲಿ ಘೋಷಣೆ ಮೊಳಗಿಸಿ `ಸಮಾಜವಾದ’ದ ಬೆಳಕನ್ನು ದೇಶಕ್ಕೆಲ್ಲಾ ಹಂಚುವ ಅವಕಾಶಕ್ಕಾಗಿ ಬ್ರಿಟೀಷ್ ಪಾರ್ಲಿಮೆಂಟಿನಲ್ಲಿ ಬಾಂಬ್ ಹಾಕಿ, ಯಾರನ್ನೂ ಕೊಲ್ಲದೇ-ಓಡಿ ಹೋಗದೇ ಶರಣಾಗಿ ನಿಂತು ಆಮೇಲೆ ನಗು ನಗುತ್ತ ನೇಣುಗಂಬವನ್ನು ಏರಿದ ಭಾರತದ ಅಮರ ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ ಮತ್ತು ಸಂಗಾತಿಗಳಂತೆ-ಚೇ.

ಅಲೆಮಾರಿ
ಹುಟ್ಟಿದ್ದು ಅರ್ಜೈಂಟೈನಾದಲ್ಲಿ. ಮೋಟಾರ್ ಬೈಕ್ನಲ್ಲಿ ಸುತ್ತಿದ್ದು ಇಡೀ ದಕ್ಷಿಣ ಅಮೆರಿಕಾ ದೇಶಗಳಲ್ಲಿ. ಯಶಸ್ವಿ ಕ್ರಾಂತಿಗೆ ಹೆಗಲು ಕೊಟ್ಟದ್ದು ಕ್ಯೂಬಾದಲ್ಲಿ. ಪ್ರಾಣ ತೆತ್ತದ್ದು ನೀಚ ಸಿಐಎ ನಿರ್ದೇಶಿತ ಬೊಲಿವಿಯ ದೇಶದ ಸರ್ವಾಧಿಕಾರಿಯ ಸೈನಿಕರ ಜೊತೆ ಸೆಣಸಿದ ರಣರಂಗದಲ್ಲಿ. ಯಾವ ದೇಶದವನೆಂದು ಕರೆಯುವುದು ಇವನನ್ನು? ಈ ಪರಿಯ `ಅಲೆಮಾರಿ’ಯನ್ನು. ಅಮೆರಿಕ ಮತ್ತು ಅಂಥವರ `ಸುಲಿಗೆ-ಶೋಷಣೆಯೇ ತನ್ನ ಜನರ ದುಃಖಕ್ಕೆ ಕಾರಣ’ ಎಂದು ಕಂಡು ಹಿಡಿದು ಹೆಗಲಿಗೆ ಬಂದೂಕು ಏರಿಸಿಕೊಂಡು ಹೊರಟು ಬಿಟ್ಟವನನ್ನು.

ಜಗತ್ತಿನ ಲಕ್ಷ ಲಕ್ಷ ಜನರಿಗೆ ಅದರಲ್ಲೂ ಯುವಜನರಿಗೆ ಚೇ ಎಂಬ ಹೆಸರೇ ಒಂದು ರೋಮಾಂಚನದ ಅಲೆ. ದೀಪದಿಂದ ದೀಪ ಹಚ್ಚಿಕೊಂಡಂತೆ. ಅಂದು ಚೇ ಮತ್ತು ಸಂಗಾತಿಗಳು ಹಚ್ಚಿಟ್ಟಿರುವ `ಕ್ಯೂಬಾ’ ಎಂಬ ಹಣತೆ ಈಗ ವೆನೆಜುವೆಲಾ, ಬೊಲಿವಿಯಾ, ಈಕ್ವೆಡಾರ್, ಚಿಲಿ, ಬ್ರೆಸಿಲ್, ಅರ್ಜೈಂಟೈನಾ ಇನ್ನೂ ಎಲ್ಲೆಲ್ಲೂ ಬೆಳಕು ಚೆಲ್ಲುತ್ತಿದೆ. ಮನುಕುಲದ ಪಯಣಕ್ಕೆ ದೀಪಸ್ತಂಭದಂತೆ. ಪಾತಕಿ ಸಿಐಎ ಏಜೆಂಟರು ಕೊಂದ `ಚೇ’ ಅಲ್ಲಿ ಮೇಲೆ ಬೆಳಕು ಚೆಲ್ಲುತ್ತಾ ನಿಂತಿರುವ ಧ್ರುವ ನಕ್ಷತ್ರದಂತೆ.

Donate Janashakthi Media

Leave a Reply

Your email address will not be published. Required fields are marked *