ಜಗತ್ತಿನ ಅರ್ಧಕ್ಕಿಂತ ಹೆಚ್ಚು ಜನರಿಗೆ ಯಾವುದೇ ಸಾಮಾಜಿಕ ಭದ್ರತೆ ಇಲ್ಲ: ಐಎಲ್‌ಒ

ಕೋವಿಡ್‌ ಮಹಾಸೋಂಕು ಕಾಲದಲ್ಲಿ ಸಾಮಾಜಿಕ ಭದ್ರತೆ ಮತ್ತು ರಕ್ಷಣೆಯ ಕ್ರಮಗಳು ವಿಸ್ತಾರವಾಗಿದ್ದರೂ ಜಗತ್ತಿನಲ್ಲಿ ಶೇಕಡ 53 ಜನ ಅಂದರೆ ಅರ್ಧಕ್ಕಿಂತಲೂ (400 ಕೋಟಿಗಿಂತಲೂ) ಹೆಚ್ಚು ಜನರು ಯಾವುದೇ ಸ್ವರೂಪದ ಸಾಮಾಜಿಕ ಭದ್ರತೆ ಅಥವಾ ರಕ್ಷಣೆಯನ್ನು ಹೊಂದಿಲ್ಲ. ಶೇ.25 (ಅಥವಾ 4 ಮಕ್ಕಳಲ್ಲಿ 1 ಮಗು) ಮಕ್ಕಳು ಮಾತ್ರ ರಾಷ್ಟ್ರೀಯ ಕಲ್ಯಾಣ ಭದ್ರತಾ ಜಾಲದಲ್ಲಿ ಇವೆ. ಈಗ ಒಂದಾದರೂ ಸಾಮಾಜಿಕ ಭದ್ರತೆ ಇರುವ ಜನ ಜಗತ್ತಿನಲ್ಲಿ ಶೇ.47 ಮಾತ್ರ. ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆಗಳಲ್ಲಿ ಒಂದಾದ ಐ.ಎಲ್.ಒ (ಅಂತರ‍್ರಾಷ್ಟ್ರೀಯ ಕಾರ್ಮಿಕ ಸಂಘಟನೆ) ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ.

ಹೆರಿಗೆಯ ನಂತರ ಶೇ.45ರಷ್ಟು ಮಹಿಳೆಯರು ಸ್ವಲ್ಪವಾದರೂ ಹಣದ ನೆರವು ಪಡೆದರೂ, ಮೂವರಲ್ಲಿ ಒಬ್ಬ ವಿಕಲಾಂಗ ಮಾತ್ರ ಯಾವುದೇ ಸವಲತ್ತವನ್ನು ಪಡೆಯುತ್ತಾರೆ. ಜಗತ್ತಿನ ನಿರುದ್ಯೋಗಿಗಳಲ್ಲಿ ಶೇ. 18.6ರಷ್ಟು (ಆರರಲ್ಲಿ ಒಬ್ಬರು) ಮಾತ್ರ ನಿರುದ್ಯೋಗ ಭತ್ಯೆ ಪಡೆಯುತ್ತಾರೆ.

ಇದನ್ನು ಓದಿ: ಸಾಮಾಜಿಕ ಭದ್ರತೆ ವಂತಿಗೆ ಆಧಾರಿತವಾಗಿರಬಾರದು

ಕೋವಿಡ್‌ ಮಹಾಸೋಂಕಿನ ನಿರ್ವಹಣೆಗೆ ಅಗತ್ಯವಾಗಿದ್ದ ಸಾಮಾಜಿಕ ಭದ್ರತೆ ಮತ್ತು ರಕ್ಷಣೆಯ ಕ್ರಮಗಳು ಹೆಚ್ಚಾಗಿ ಏನೇನು ಸಾಲದಾಗಿದ್ದವು ಮತ್ತು ಅವುಗಳಲ್ಲಿ ದೇಶ-ದೇಶಗಳ ಮತ್ತು ವಿವಿಧ ಕ್ಷೇತ್ರಗಳ ನಡುವೆ ಭಾರೀ ಏರುಪೇರುಗಳಿದ್ದವು. ಈ ವೈಫಲ್ಯದಿಂದಾಗಿ ಶ್ರೀಮಂತ ಮತ್ತು ಬಡ ದೇಶಗಳ ಜನರ ಜೀವನ ಮಟ್ಟದ ನಡುವಿನ ಕಂದರ ಇನ್ನಷ್ಟು ಹೆಚ್ಚಾಗಿದೆ ಎಂದೂ ವರದಿ ಹೇಳಿದೆ.

ಉದಾಹರಣೆಗೆ, ಯುರೋಪ್ ಮತ್ತು ಮಧ್ಯ ಏಶ್ಯಾ ಒಂದಾದಾರೂ ಸಾಮಾಜಿಕ ರಕ್ಷಣೆ ಕ್ರಮದ ಸವಲತ್ತು ಪಡೆದವರ ಪ್ರಮಾಣ ಶೇ.84. ಅಮೆರಿಕದಲ್ಲಿ ಇದರ ಪ್ರಮಾಣ ಶೇ.64.3 ಇದ್ದರೆ, ಏಷ್ಯಾ-ಪೆಸಿಫಿಕ್ ನಲ್ಲಿ ಶೇ.44, ಅರಬ್ ದೇಶಗಳಲ್ಲಿ ಶೇ. 40, ಆಫ್ರಿಕಾದಲ್ಲಿ ಶೇ.17.4 ಇದೆ.

‘ಪರಿಣಾಮಕಾರಿಯಾದ ಮತ್ತು ಸಮಗ್ರವಾದ ಸಾಮಾಜಿಕ ರಕ್ಷಣಾ ಕ್ರಮಗಳು ಯೋಗ್ಯ ಕೆಲಸ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಮಾತ್ರವಲ್ಲ ಸುಸ್ಥಿರ ಭವಿಷ್ಯಕ್ಕೂ ಅಗತ್ಯ. ಇಂತಹ ಕ್ರಮಗಳು ಕಾರ್ಮಿಕರು ಮತ್ತು ಉದ್ಯಮಗಳನ್ನು ಮುಂಬರುವ ಬಿಕ್ಕಟ್ಟುಗಳನ್ನು ಎದುರಿಸಲು ನೆರವಾಗಲಿವೆ’ ಎಂದು ಐ.ಎಲ್.ಒ ಡೈರೆಕ್ಟರ್ ಜನರಲ್ ಗಯ್ ರೈಡರ್ ಹೇಳಿರುವುದನ್ನು ವರದಿ ಉಲ್ಲೇಖಿಸಿದೆ.

ಇದನ್ನು ಓದಿ: ಕೋವಿಡ್‌ ದಾಳಿಯ ನಡುವೆ ಗ್ರಹಿಸಬೇಕಾದ ಕೆಲವು ನೀತಿಗಳು

‘ಮಹಾಸೋಂಕಿಗೆ ಪ್ರತಿಕ್ರಿಯೆಯನ್ನು ರೂಪಿಸುವುದರ ಭಾಗವಾಗಿ ಹೊಸ ತಲೆಮಾರಿನ ಹಕ್ಕು-ಆಧಾರಿತ ಸಾಮಾಜಿಕ ರಕ್ಷಣಾ ಕ್ರಮಗಳನ್ನು ಕಟ್ಟಲು ಇದು ಸರಿಯಾದ ಸಮಯ’ ಎಂದೂ ಗಯ್ ರೈಡರ್ ಹೇಳಿದ್ದಾರೆ.

ವರದಿಯ ಪ್ರಕಾರ ಜಿಡಿಪಿಯ ಶೇ. 12.8ರಷ್ಟನ್ನು (ಆರೋಗ್ಯ ಹೊರತುಪಡಿಸಿ) ಜಾಗತಿಕವಾಗಿ ಸರಾಸರಿಯಾಗಿ ಸಾಮಾಜಿಕ ಭದ್ರತೆಗೆ ಖರ್ಚು ಮಾಡಲಾಗುತ್ತಿದೆ. ಆದರೆ ಶ್ರೀಮಂತ ದೇಶಗಳ ಸರಾಸರಿ ಜಿಡಿಪಿಯ ಶೇ. 16.4 ಇದ್ದರೆ, ಬಡದೇಶಗಳ ಸರಾಸರಿ ಕೇವಲ ಶೇ. 1.1 ಇದೆ.

ಕೋವಿಡ್ ಮಹಾಸೋಂಕು ಬಿಕ್ಕಟ್ಟಿನ ಪ್ರತಿಕ್ರಿಯಾ ಕ್ರಮವಾಗಿ ಸಾಮಾಜಿಕ ಭದ್ರತೆ ಮತ್ತು ರಕ್ಷಣೆಯ ಕ್ರಮಗಳನ್ನು ವಿಸ್ತರಿಸಲು ದೇಶಗಳು ಶೇ.30ರಷ್ಟು ಹೆಚ್ಚು ಖರ್ಚು ಮಾಡಿವೆ. (ಇದರಲ್ಲೂ ಅಸಮಾನತೆಗಳಿವೆ.) ಆದರೆ ಹಣಕಾಸು ಕೊರತೆಯಿಂದ ಈ ಕ್ರಮಗಳನ್ನು ಕೈ ಬಿಡುವ ಪರಿಸ್ಥಿತಿ ಬರುತ್ತಿದೆ. ಬದಲಿಗೆ ಕೋವಿಡ್ ಮಹಾಸೋಂಕು ಬಿಕ್ಕಟ್ಟಿನ ಪ್ರತಿಕ್ರಿಯಾ ಕ್ರಮದ ಭಾಗವಾಗಿ, ಹಕ್ಕು-ಆಧಾರಿತ ಸಾಮಾಜಿಕ ರಕ್ಷಣಾ ಕ್ರಮಗಳನ್ನು ಕಟ್ಟಬೇಕು ಎಂದು ವರದಿ ಹೇಳಿದೆ.

ಪ್ರಾಥಮಿಕ ಸಾಮಾಜಿಕ ರಕ್ಷಣಾ ಕ್ರಮಗಳನ್ನು ಜಾರಿಗೊಳಿಸಲು ಬಡ ದೇಶಗಳಲ್ಲಿ 77.9 ಶತಕೋಟಿ ಡಾಲರು (ಜಿಡಿಪಿಯ ಶೇ.15.9), ಕೆಳ-ಮಧ್ಯಮ ಆದಾಯ ದೇಶಗಳಲ್ಲಿ 362.9 ಶತಕೋಟಿ ಡಾಲರು, (ಜಿಡಿಪಿಯ ಶೇ.5.1) ಮೇಲು-ಮಧ್ಯಮ ಆದಾಯ ದೇಶಗಳಲ್ಲಿ 750.8 ಶತಕೋಟಿ ಡಾಲರು (ಜಿಡಿಪಿಯ ಶೇ.3.1) ಅಗತ್ಯವಿದೆ. ಇದಕ್ಕಾಗಿ ವಿಶೇಷವಾಗಿ ಬಡ ಮತ್ತು ಕೆಳ-ಮಧ್ಯಮ ಆದಾಯ ದೇಶಗಳಿಗೆ ಶ್ರೀಮಂತ ದೇಶಗಳ ನೆರವಿನ ಅಗತ್ಯವಿದೆ ಎಂದೂ ವರದಿ ಒತ್ತಿಹೇಳಿದೆ.

Donate Janashakthi Media

Leave a Reply

Your email address will not be published. Required fields are marked *