ಜಗತ್ತಿಗೆ ಹೊಸ ಮಾದರಿ ಹಾಕಿಕೊಟ್ಟ ದೆಹಲಿ ಗಡಿಗಳು ರೈತ ಹೋರಾಟದ ಗೆಲುವು

ಎಚ್.ಆರ್.ನವೀನ್ ಕುಮಾರ್, ಹಾಸನ

ಹೌದು ಕಳೆದ ಒಂದು ವರ್ಷಗಳಿಂದ ದೆಹಲಿಯ ವಿವಿಧ ಗಡಿಗಳಲ್ಲಿ ನಿರಂತರ ಚಳುವಳಿ ನಡೆಸುತ್ತಿದ್ದ 500ಕ್ಕೂ ಹೆಚ್ಚು ರೈತ ಸಂಘಟನೆಗಳ ವೇದಿಕೆ ಸಂಯುಕ್ತ ಕಿಸಾನ್ ಮೋರ್ಚಾ ಗೆಲುವು ಸಾಧಿಸಿದೆ. ಈ ಮೂಲಕ ಇದು ಇಡೀ ದೇಶದ ರೈತರ ಗೆಲುವು ಮಾತ್ರವಲ್ಲ ಸರ್ವಾಧಿಕಾರಿ ದೋರಣೆಯ ವಿರುದ್ದದ ಗೆಲುವು, ದೇಶವನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಲು ಹೊರಟ ದೇಶದ್ರೋಹಿಗಳ ವಿರುದ್ಧದ ಗೆಲುವು… ನಿಜವಾದ ಅರ್ಥದಲ್ಲಿ ಇದು ಭಾರತದ ಗೆಲುವು….

2020 ನವೆಂಬರ್ 26ರಂದು ದೇಶದ ರಾಜಧಾನಿ, ಪ್ರಜಾಪ್ರಭುತ್ವದ ಶಕ್ತಿ ಕೇಂದ್ರ ದೆಹಲಿಯ ಸಂಸತ್ತಿಗೆ ತಮ್ಮ ಬೇಡಿಕೆಗಳನ್ನು ಸಲ್ಲಿಸಲು ಮತ್ತು ಕರಾಳ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದು, ಎಂ.ಎಸ್.ಪಿ.ಯನ್ನು ಕಾನೂನುಬದ್ಧಗೊಳಿಸಬೇಕೆಂದು ಒತ್ತಾಯಿಸಲು ಬರುತ್ತಿದ್ದ ಸಂದರ್ಭದಲ್ಲಿ ರೈತರನ್ನು ಮೋದಿ ಸರ್ಕಾರ ತನ್ನ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ರೈತರ ಮೇಲೆ, ಲಾಠಿ ಪ್ರಹಾರ, ಜಲಫಿರಂಗಿ, ಅಶ್ರುವಾಯು ಸಿಡಿಸಿ ಅವರನ್ನು ದೆಹಲಿಗೆ ಪ್ರವೇಶಿಸದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲೇ ತಡೆಗೋಗೆಗಳನ್ನು ನಿರ್ಮಿಸಿ ತಡೆಯಲಾಯಿತು.

ಈ ಎಲ್ಲಾ ದಾಳಿಗಳನ್ನು ಸಹಿಸಿಕೊಂಡ ರೈತರು ತಾಳ್ಮೆಯಿಂದ ನಿಂತಲ್ಲೆ ತಳವೂರಿ ಬೇರು ಬಿಟ್ಟರು. ಮೆರವಣಿಗೆಗೆ ತಂದಿದ್ದ ಟ್ರ್ಯಾಕ್ಟರ್ ಗಳನ್ನೇ ಮನೆಗಳನ್ನಾಗಿಸಿಕೊಂಡು ಹೆದ್ದಾರಿಗಳನ್ನೇ ಹಾಸಿಗೆ ಮಾಡಿ‌ ಕುಳಿತರು…. ಒಟ್ಟು 378 ದಿನ ಕುಳಿತರು, ಈ ಚಳುವಳಿ ದೇಶಾಧ್ಯಂತ ಹಬ್ಬಿತು… ಜಗತ್ತಿನ ಗಮನ ಸೆಳೆಯಿತು.

ಪ್ರಧಾನ ಮಾಧ್ಯಮಗಳ ಹಸಿಹಸಿ ಸುಳ್ಳು ಪ್ರಚಾರ, ಪ್ರಭುತ್ವದ ಪಿತೂರಿಗಳು ಮತ್ತು ಪ್ರಾಕೃತಿಕ ಸವಾಲುಗಳನ್ನು ಎದುರಿಸಿ ಇಷ್ಟು ದಿನಗಳ ಕಾಲ ರೈತರು ಹೇಗೆ ಈ ಚಳುವಳಿಯನ್ನು ಮುಂದುವರೆಸಿದರು, ತಮ್ಮ ಅಗತ್ಯತೆಗಳನ್ನು ಹೇಗೆ ಪೂರೈಸಿಕೊಂಡರು ಈ ರೀತಿಯ ಪ್ರಶ್ನೆಗಳು ಹಲವರಿಗೆ ಮೂಡಿರುವುದು ಸಹಜ.

ಇಂತಹ ಪ್ರಶ್ನೆಗಳು ನನಗೂ ಮೂಡಿತ್ತು ಅವುಗಳಿಗೆ ಉತ್ತರ ಕಂಡುಕೊಂಡಿದ್ದು ನಾನು ಸ್ವತಃ ಈ ಚವಳಿಯಲ್ಲಿ ಭಾಗವಹಿಸಿ ಅವರೊಂದಿಗೆ ಉಳಿದು, ಅವರೊಂದಿಗೆ ಬೆರೆತು ಮಾತನಾಡಿದಾಗ.

ಈ ಅನುಭವಗಳ ಆಧಾರದಲ್ಲೇ ರೂಪಗೊಂಡ ಪುಸ್ತಕ “ಕದನ ಕಣ” ದೆಹಲಿ ಗಡಿಗಳ ರೈತರೊಂದಿಗೆ.

ನಾನು ಅರ್ಥಮಾಡಿಕೊಂಡಂತೆ ಈ ಚಳುವಳಿಯ ಯಶಸ್ಸಿನ ಹಿಂದಿ ಗುಟ್ಟು ಏನೆಂದರೆ ರೈತರ ಒಗ್ಗಟ್ಟು, ತಾಳ್ಮೆ, ಅಹಿಂಸೆ, ತ್ಯಾಗ (ಈ ಹೋರಾಟದಲ್ಲಿ 713 ಜನ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ) ಮತ್ತು ಕೇಂದ್ರ ಸರ್ಕಾರ ಜಾರಿಗೆ ತಂದ ಕರಾಳ ಕೃಷಿ ಕಾಯ್ದೆಗಳ ಅಪಾಯಗಳ ಕುರಿತು ರೈತರಿಗಿದ್ದ ಆಳವಾದ ತಿಳುವಳಿಕೆ. ಇವುಗಳನ್ನು ಹಿಮ್ಮೆಟ್ಟಿಸಬೇಕೆನ್ನುವ ಉತ್ಕಟ ಬದ್ದತೆ ಹಾಗೂ ತಮ್ಮ ಹೋರಾಟಕ್ಕೆ ರೈತರಲ್ಲದ ಕಾರ್ಮಿಕರು, ಮಹಿಳೆಯರು, ದಲಿತರು, ಕೂಲಿಕಾರರು, ವಿದ್ಯಾರ್ಥಿ, ಯುವಜನರು, ಸಾಹಿತಿ ಬುದ್ದಿಜೀವಿಗಳನ್ನು ಒಳಗೊಂಡದ್ದು.

ಒಂದಡೆ ಚಳುವಳಿಯಲ್ಲಿ ಭಾಗವಹಿಸುತ್ತಾ ತಂಡಗಳನ್ನು ರಚಿಸಿಕೊಂಡು ಕೃಷಿ ಚಟುವಟಿಕೆಗಳನ್ನೂ ನಡೆಸಿದ್ದಾರೆ. ತಮ್ಮ ಊಟಗಳನ್ನು ಪ್ರತಿಭಟನಾ ಸ್ಥಳಗಳಲ್ಲಿ ತಾವೇ ತಯಾರಿಸಿಕೊಳ್ಳುತ್ತಿದ್ದರು, ಬಂದವರಿಗೆಲ್ಲ ಊಟ ನೀಡಲು ಲಂಗರ್ ವ್ಯವಸ್ಥೆ ಮಾಡಲಾಗಿತ್ತು ಸಿಕ್ಕ್ ಧರ್ಮದ ಸೇವಾ ಮಾನೋಭಾವವೂ ಈ ಹೋರಾಟದ ಯಶಸ್ವಿಗೆ ಕೊಡುಗೆ ನೀಡಿದೆ.

ಎಸ್‌ಕೆಎಂ ನಲ್ಲಿ 545 ಸಂಘಟನೆಗಳಿದ್ದರೂ ಪ್ರತಿಯೊಂದರ ರಾಜಕೀಯ ನಿಲುವು ವಿಭಿನ್ನವಾಗಿದ್ದರೂ ಈ ವಿಚಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಂದು ನಿರ್ಧಿಷ್ಟ ಗುರಿಯತ್ತ ಎಲ್ಲರನ್ನು ಬಿನ್ನಭೇದಗಳ ಮರೆತು ಅಣಿನೆರಸಿದ್ದು ಒಂದು ದೊಡ್ಡ ಸಾಧನೆಯೇ ಸರಿ.

ಜನಸಮುದಾಯ ಒಗ್ಗಟ್ಟಿನಿಂದ ನಿಂತರ ಎಂತಹ ಕ್ರೂರ ಪ್ರಭುತ್ವವನ್ನಾದರೂ ಮಣಿಸಬಹುದು ಎನ್ನುವುದಕ್ಕೆ ಈ ಹೋರಾಟದ ಗೆಲುವೇ ಜೀವಂತ ಸಾಕ್ಷಿ.

Donate Janashakthi Media

Leave a Reply

Your email address will not be published. Required fields are marked *