ಬೆಂಗಳೂರು: ಐಟಿಐ ಕಾರ್ಮಿಕರು ಸತತ 45ನೇ ದಿನಗಳಿಂದ ತಮ್ಮನ್ನು ಕಾನೂನು ಬಾಹಿರವಾಗಿ ಕೆಲಸದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಅನಿರ್ದಿಷ್ಟಾ ಹೋರಾಟವನ್ನು ನಡೆಸುತ್ತಿದ್ದಾರೆ. ಈ ಕಾರ್ಮಿಕರಿಗೆ ತಮ್ಮ ಬೆಂಬಲ ಸೂಚಿಸಲು ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರು ನಾಳೆ (ಜನವರಿ 14, 2022) ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.
ಬೆಂಗಳೂರಿನಲ್ಲಿರುವ ಭಾರತದ ಮೊದಲ ಸಾರ್ವಜನಿಕ ವಲಯದ ಉದ್ಯಮವಾದ ಐಟಿಐ ಲಿಮಿಟೆಡ್‍ನಲ್ಲಿ 5 ರಿಂದ 30 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ 80 ಕಾರ್ಮಿಕರು ಕಾರ್ಮಿಕ ಸಂಘಟನೆ ಕಟ್ಟಿ ತಮ್ಮ ಕಾನೂನು ಬದ್ಧ ಹಕ್ಕುಗಳಿಗೆ ಒತ್ತಾಯ ಮಾಡಿದ್ದರೆಂಬ ಒಂದೇ ಒಂದು ಕಾರಣಕ್ಕೆ 1ನೇ ಡಿಸೆಂಬರ್ 2021 ರಂದು ಐಟಿಐ ಆಡಳಿತ ಮಂಡಳಿಯು ಕೆಲಸ ನಿರಾಕರಿಸಿದೆ.
ಐಟಿಐ ಲಿಮಿಟೆಡ್ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ, ಸಂವಹನ ಸಚಿವಾಲಯದ ಅಡಿಯಲ್ಲಿ ಬರುತ್ತದೆ ಮತ್ತು ಮುಖ್ಯವಾದ ಹಲವಾರು ಸೂಕ್ಷ್ಮ ಮತ್ತು ರಕ್ಷಣಾ ಸಂಬಂಧಿತ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕಾರ್ಮಿಕರು ಈ ಯೋಜನೆಗಳಲ್ಲಿ ವಿವಿಧ ಸಾಧನಗಳ ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಸ್ಥಾಪನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ದೇಶದ ಗಡಿಗಳಿಗೂ ಸಹ ಆನ್-ಸೈಟ್ ರಕ್ಷಣಾ ಕಾರ್ಯಯೋಜನೆಗಳಿಗಾಗಿ ಕಳುಹಿಸಲಾಗಿದೆ. ಕಳೆದ ವರ್ಷ ಕೋವಿಡ್-19 ಸಾಂಕ್ರಾಮಿಕ ರೋಗದ ಮೊದಲ ಅಲೆಯ ಸಮಯದಲ್ಲಿ 3,000 ವೆಂಟಿಲೇಟರ್‍ಗಳು ಮತ್ತು ಫೇಸ್‍ಶೀಲ್ಡ್ ಉತ್ಪಾದನೆಯಲ್ಲಿ ಈ ಕಾರ್ಮಿಕರು ಭಾಗಿಯಾಗಿದ್ದರು.
ಸುದೀರ್ಘ ವರ್ಷಗಳ ಸೇವೆಯ ಹೊರತಾಗಿಯೂ, ಕಾರ್ಮಿಕರನ್ನು “ಗುತ್ತಿಗೆ ಕಾರ್ಮಿಕರು” ಎಂದು ಬಿಂಬಿಸಲಾಗಿದೆ ಮತ್ತು ಮೂಲಭೂತ ಹಕ್ಕುಗಳನ್ನು ನಿರಾಕರಿಸಲಾಗಿದೆ. ಅವರಲ್ಲಿ ಹೆಚ್ಚಿನವರು ದಲಿತರು ಮತ್ತು ಮಹಿಳೆಯರಾಗಿದ್ದಾರೆ. ಕಾರ್ಮಿಕ ಇಲಾಖೆಯು ನಡೆಸಿದ ಸಂಧಾನ ಪ್ರಕ್ರಿಯೆಯಲ್ಲಿ, ಪ್ರಾದೇಶಿಕ ಕಾರ್ಮಿಕ ಆಯುಕ್ತರು ಐಟಿಐ ಲಿಮಿಟೆಡ್‍ನ ಆಡಳಿತ ಮಂಡಳಿಗೆ ಕಾರ್ಮಿಕರಿಗೆ ಮತ್ತೆ ಕೆಲಸ ನೀಡುವಂತೆ ಸೂಚನೆ ನೀಡಿದ್ದಾರೆ. ಆದಾಗ್ಯೂ, ಕಾರ್ಮಿಕರು ಸಂಘಟನೆ ಕಟ್ಟಿ, ಆ ಸಂಘಟೆನೆಯ ಮೂಲಕ ತಮ್ಮನ್ನು ಖಾಯಂಗೊಳಿಸುವಂತೆ ಮತ್ತು ಮಾನವೀಯ ಕೆಲಸದ ವಾತಾವರಣಕ್ಕಾಗಿ ಕಾನೂನು ಹೋರಾಟವನ್ನು ಮಾಡುತ್ತಿರುವುದನ್ನು ಸಹಿಸಿಕೊಳ್ಳಲಾಗದ ಆಡಳಿತ ಮಂಡಳಿಯು, ಕಾರ್ಮಿಕ ಆಯುಕ್ತರ ಸೂಚನೆಯನ್ನು ಪಾಲಿಸಲು ವಿಫಲವಾಗಿದೆ.
ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಆಗಮಿಸಲಿದ್ದಾರೆ. ಅವರು ಆದಿವಾಸಿ, ದಲಿತ, ರೈತ ಮತ್ತು ಕಾರ್ಮಿಕ ಚಳುವಳಿಗಳಲ್ಲಿ ತೊಡಗಿಸಿಕೊಂಡಿದ್ದು, ನರ್ಮದಾ ಬಚಾವೋ ಆಂದೋಲನ ಮತ್ತು ನ್ಯಾಷನಲ್ ಅಲಯನ್ಸ್ ಫಾರ್ ಪೀಪಲ್ಸ್ ಮೂವ್ಮೆಂಟ್ ಸಂಸ್ಥಾಪಕಿಯಾಗಿದ್ದಾರೆ. ಐಟಿಐ ಕಾರ್ಮಿಕರು ಕಳೆದ 45 ದಿನಗಳಿಂದ ಅನಿರ್ದಿಷ್ಟಾವಧಿ ಹೋರಾಟವನ್ನು ಮುಂದುವರೆಸಿದ್ದಾರೆ. ಈ ಹೋರಾಟವನ್ನು ಬೆಂಬಲಿಸಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸುವ ಅವರು ತಮ್ಮ ಬೆಂಬಲವನ್ನು ಸೂಚಿಸಲಿದ್ದಾರೆ.