ಬೆಂಗಳೂರು: ಕೇಂದ್ರ ಬಜೆಟ್‌ನಲ್ಲಿ ಶಿಕ್ಷಣದ ಮೂಲಭೂತ ಹಕ್ಕಿನ ಪ್ರಸ್ತಾವನೆಯೇ ಇಲ್ಲದಿರುವುದು ದುರದೃಷ್ಟಕರ ಎಂದು ಶಿಕ್ಷಣ ತಜ್ಞ ವಿಪಿ ನಿರಂಜನಾರಾಧ್ಯ ಆರೋಪಿಸಿದ್ದಾರೆ.
ಮಂಗಳವಾರ, ಜುಲೈ 23 ರಂದು, ಕೇಂದ್ರದ ಹಣಕಾಸು ಸಚಿವರು ಆಯವ್ಯಯ ಮಂಡಿಸುತ್ತಾ “ ಜನರು ನಮ್ಮ ಸರ್ಕಾರಕ್ಕೆ ದೇಶವನ್ನು ಬಲಿಷ್ಠ ಮತ್ತು ಸರ್ವತೋಮುಖ ಅಭಿವೃದ್ಧಿಯತ್ತ ಕೊಂಡೊಯ್ಯಲು ಒಂದು ಅನನ್ಯ ಅವಕಾಶವನ್ನು ನೀಡಿದ್ದಾರೆ. ಮಧ್ಯಂತರ ಬಜೆಟ್‌ನಲ್ಲಿ ನಾವು ಭರವಸೆ ನೀಡಿದ್ದೇವೆ. ನಮ್ಮ ವಿಕಸಿತ ಭಾರತದಲ್ಲಿ ವಿವರವಾದ ಮಾರ್ಗಸೂಚಿಯನ್ನು ಪ್ರಸ್ತುತಪಡಿಸಿತ್ತಿದ್ದೇವೆ.” ಎಂದು ಹೇಳುತ್ತಾ ಬಜೆಟ್‌ನಲ್ಲಿ 9 ಆದ್ಯತೆಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ಸಂಚಾಲಕರು ಹಾಗು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ .ವಿ.ಪಿ ಹೇಳಿದ್ದಾರೆ. ಕೇಂದ್ರ
ದುರಾದೃಷ್ಟವೆಂದರೆ , ಈ ಪಟ್ಟಿಯಲ್ಲಿ ಶಿಕ್ಷಣದ ಪ್ರಸ್ತಾಪವೇ ಇಲ್ಲ. ಬಲಿಷ್ಟ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿಕೊಳ್ಳದೆ ಬಲಿಷ್ಠ ಭಾರತ ಹಾಗು ಸರ್ವತೋಮುಖ ಅಭಿವೃದ್ಧಿ ಕಂಡುಕೊಳ್ಳಲು ಹೇಗೆ ಸಾಧ್ಯವೆಂಬುದು ಆಶ್ಚರ್ಯಕರ ಸಂಗತಿ ಎಂದರು.
2024-25 ನೇ ಆರ್ಥಿಕ ವರ್ಷದ ಆಯವ್ಯಯದ ಗಾತ್ರ 48,20,512 ಕೋಟಿ. ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಒಕ್ಕೂಟ ಸರ್ಕಾರವು , ರಾಷ್ಟ್ರೀಯ ಮಹತ್ವದ ಮತ್ತು ಸಂವಿಧಾನ ಬದ್ಧ ಮೂಲಭೂತ ಶಿಕ್ಷಣದ ಹಕ್ಕನ್ನು ರಾಷ್ಟ್ರ ಮಟ್ಟದಲ್ಲಿ ಜಾರಿಗೊಳಿಸಲು ಸಮಗ್ರ ಶಿಕ್ಷಣ ಅಭಿಯಾನದ ಅಡಿಯಲ್ಲಿ ಮೀಸಲಿಟ್ಟಿರುವ ಹಣ ಕೇವಲ 37500 ಕೋಟಿ. ಕಳೆದ ಆಯವ್ಯಯಕ್ಕೆ ಹೋಲಿಸಿದರೆ ಹೆಚ್ಚಾದ ಹಣ ಕೇವಲ 46.53 ಕೋಟಿ. ಶೇಕಡಾವರು ಲೆಕ್ಕದಲ್ಲಿ ಒಟ್ಟು ಆಯವ್ಯದಲ್ಲಿ ಶಿಕ್ಷಣ ಹಕ್ಕು ಕಾಯಿದೆ ಜಾರಿಗೆ ಸಿಕ್ಕಿರುವ ಹಣ ಕೇವಲ ಶೇಕಡ. 0.78. ಕಳೆದ ಆಯವ್ಯಯಕ್ಕಿಂತ ಈ ಆಯವ್ಯಯದಲ್ಲಿ ಹೆಚ್ಚಾದದ್ದು ಶೇಕಡ 0.12 ಎಂದು ಹೇಳಿದರು.
ಇದನ್ನೂ ಓದಿ: ಮನಪಾ ಆಯುಕ್ತರನ್ನು ವಜಾಗೊಳಿಸಲು ಒತ್ತಾಯಿಸಿ ಸಿಪಿಐಎಂ ಕಾರ್ಯಕರ್ತರಿಂದ ಪಾಲಿಕೆ ಕಚೇರಿಗೆ ಮುತ್ತಿಗೆ, ಬಂಧನ
ಸಮಗ್ರ ಶಿಕ್ಷಾ ಅಭಿಯಾನಕ್ಕೆ ಒಕ್ಕೂಟ ಸರ್ಕಾರ ನೀಡಿರುವ ಹಣಕಾಸನ್ನು ಸೂಕ್ಷ್ಮವಾಗಿ ಗಮನಿಸಿದರೆ , ಈ ಮಹತ್ವದ ಒಕ್ಕೂಟ ಪ್ರಾಯೋಜಿತ ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ದೊಡ್ಡಮಟ್ಟದ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಎಂಬುದು ಸ್ಪಷ್ಟವಾಗಿದೆ. ಮೇಲೆ ತಿಳಿಸಿದಂತೆ, ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ ಸಮಗ್ರ ಶಿಕ್ಷಾ ಅಭಿಯಾನಕ್ಕೆ 2023-24 ರ ಬಜೆಟ್ ಅಂದಾಜಿನಲ್ಲಿ ರೂ.37453.47 ಕೋಟಿಯನ್ನು ನೀಡಲಾಗಿತ್ತು. 2024-25 ನೇ ಸಾಲಿನಲ್ಲಿ ಸಮಗ್ರ ಶಿಕ್ಷಾ ಅಭಿಯಾನಕ್ಕೆ ರೂ.37,500 ಕೋಟಿಯನ್ನು ಒದಗಿಸಲಾಗಿದೆ . ಈ ಮಹತ್ವದ ರಾಷ್ಟ್ರೀಯ ಯೋಜನೆಗೆ ಹೆಚ್ಚಳವಾಗಿದ್ದು ಕೇವಲ 46.57 ಕೋಟಿ ರೂ ಎಂದು ಹೇಳಿದರು.
ಆದರೆ, ಪಿಎಮ್ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ (PM SHRI) ರೂ. 2050 ಕೋಟಿಯನ್ನು ಹೆಚ್ಚಿಸಲಾಗಿದೆ . ಕುತೂಹಲದ ಅಂಶವೆಂದರೆ , ಪ್ರಧಾನ ಮಂತ್ರಿ ಕೇಂದ್ರಿತ ಒಕ್ಕೂಟ ಯೋಜನೆಗಳಿಗೆ ಒದಗಿಸಿರುವ ಹಣನ್ನು ದೇಶದ ಎಲ್ಲಾ ಮಕ್ಕಳಿಗೆ ಸಿಗಲೇಬೇಕಾದ ಶಿಕ್ಷಣದ ಮೂಲಭೂತ ಹಕ್ಕನ್ನು ಜಾರಿಗೊಳಿಸುವ ಸಮಗ್ರ ಶಿಕ್ಷಣ ಅಭಿಯಾನಕ್ಕೆ ಒದಗಿಸಿರುವ ಮೊತ್ತಕ್ಕೆ ಹೋಲಿಸಿ ನೋಡಿದರೆ ಅತೀ ಕಡಿಮೆ. ಇದು ನ್ಯಾಯಸಮ್ಮತ ಹಕ್ಕನ್ನು ದುರ್ಬಲಗೊಳಿಸಿ ಕ್ರಮೇಣವಾಗಿ ಸಾಂವಿಧಾನಿಕ ಹಕ್ಕನ್ನು ಕಸಿಯುವ ಸ್ಪಷ್ಟ ಸೂಚನೆಯಾಗಿದೆ. ಮತ್ತೊಂದೆಡೆ, ಪ್ರಧಾನ ಮಂತ್ರಿಯವರ ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸುವ ಯೋಜನೆಗಳು ಬಜೆಟ್‌ನಲ್ಲಿ ಹೆಚ್ಚಿನ ಹೆಚ್ಚಳವನ್ನು ಪಡೆದಿವೆ.
ನಮಗೆ ತಿಳಿದಿರುವಂತೆ, ಭಾರತದಲ್ಲಿ ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಶಿಕ್ಷಣದ ಜವಾಬ್ದಾರಿಯನ್ನು ಹೊಂದಿವೆ. ರಾಜ್ಯ ಸರ್ಕಾರಗಳು ಶಾಲೆ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸುತ್ತವೆ. ಉದಾಹರಣೆಗೆ, ಪ್ರಸಕ್ತ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಸಮಗ್ರ ಶಿಕ್ಷಾ ಅಭಿಯಾನಕ್ಕೆ ರೂ.37,500 ಕೋಟಿಗಳನ್ನು ಒದಗಿಸಿದೆ. ಈ ಮೊತ್ತವನ್ನು 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಲಾಗುವುದು. ಈ ಅತ್ಯಲ್ಪ ಹಣದಿಂದ ಶಿಕ್ಷಣದ ಮೂಲಭೂತ ಹಕ್ಕನ್ನು ಜಾರಿಗೊಳಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ದುಸ್ಥಿತಿಯನ್ನು ಯಾರು ಬೇಕಾದರು ಊಹಿಸಬಹುದು ಎಂದು ಹೇಳಿದ್ದಾರೆ.
ಜೊತೆಗೆ , ಸಮಗ್ರ ಶಿಕ್ಷಣ ಅಭಿಯಾನದ ಕೆಳಗೆ ಈ ಹಣವನ್ನು ಪಡೆಯಲು ರಾಜ್ಯ ಸರ್ಕಾರಗಳು PM-SHRI ಯೋಜನೆಯಲ್ಲಿ ತಮ್ಮ ಭಾಗವಹಿಸುವಿಕೆಯನ್ನು ದೃಢೀಕರಿಸಲು ಶಿಕ್ಷಣ ಸಚಿವಾಲಯದೊಂದಿಗಿನ ಒಪ್ಪಂದ ಪತ್ರಕ್ಕೆ ಸಹಿ ಹಾಕಬೇಕು . ಈ ಮೂಲಕ ರಾಜ್ಯಗಳು PM-SHRI ಯೋಜನೆಯಲ್ಲಿ ನಲ್ಲಿ ತಮ್ಮ ಭಾಗವಹಿಸುವಿಕೆಯನ್ನು ದೃಢೀಕರಿಸಬೇಕು. ಇಲ್ಲವಾದಲ್ಲಿ, ಸಮಗ್ರ ಶಿಕ್ಷಣ ಅಭಿಯಾನದ ಕೆಳಗೆ ರಾಜ್ಯಗಳಿಗೆ ದೊರೆಯುವ ಅತ್ಯಲ್ಪ ಹಣವನ್ನು ಕೂಡ ನಿರಾಕರಿಸಲಾಗುತ್ತದೆ. ಉದಾಹರಣೆಗೆ, ಇತ್ತೀಚೆಗೆ ಇಂಥಹ ಒಪ್ಪಂದ ಪತ್ರಕ್ಕೆ ಸಹಿ ಮಾಡಲು ನಿರಾಕರಿಸಿದ ಪಶ್ಚಿಮ ಬಂಗಾಳ, ದೆಹಲಿ ಮತ್ತು ಪಂಜಾಬ್ ರಾಜ್ಯಗಳಿಗೆ ಸಮಗ್ರ ಶಿಕ್ಷಣ ಅಭಿಯಾನದ ಅಡಿಯಲ್ಲಿ ನೀಡಬೇಕಾದ ಮೂರನೇ ಮತ್ತು ನಾಲ್ಕನೇ ಕಂತುಗಳನ್ನು ಸ್ಥಗಿತಗೊಳಿಸಲಾಗಿದೆ. ನಮ್ಮ ಒಕ್ಕೂಟ ವ್ಯವಸ್ಥೆ ಯಾವಕಡೆ ಸಾಗುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ ಎಂದರು.
ಒಟ್ಟಾರೆ, ಒಕ್ಕೂಟ ಸರ್ಕಾರದ ಈ ಆಯವ್ಯಯವು , ರಾಜ್ಯ ಸರ್ಕಾರಗಳು ಮಕ್ಕಳ ಅಭಿವೃದ್ಧಿ ಹಕ್ಕುಗಳನ್ನು ಜಾರಿಗೆ ತರಲು ಸಾಧ್ಯವಾಗದ ರೀತಿಯಲ್ಲಿ ರಾಜ್ಯಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸಿ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿದ್ದರೂ, ಒಕ್ಕೂಟ ಸರ್ಕಾರವು ಅದರ ಆರ್ಥಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಒಟ್ಟಾರೆ , ಸಾಂವಿಧಾನಿಕ ಹಕ್ಕುಗಳನ್ನು ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರಗಳನ್ನು ಅಸಹಾಯಕ ಸ್ಥಿತಿಗೆ ತಳ್ಳುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ನೋಡಿ: ಸಕ್ಕರೆ ಕಾಯಿಲೆ : ಮಾತ್ರೆ ಇಲ್ಲದೆ ನಿಯಂತ್ರಣ ಮಾಡಿಕೊಳ್ಳಬಹುದೆ? – ಡಾ. ಅನೀಲ್ ಕುಮಾರ್ Janashakthi Media