75 ವರ್ಷಗಳ ನಂತರವೂ ʼಸಂವಿಧಾನ ರಕ್ಷಣೆʼ ಅಪೇಕ್ಷಿಸುವುದು ಪ್ರಜಾಸತ್ತೆಯ ವೈಫಲ್ಯವಲ್ಲವೇ ?
-ನಾ ದಿವಾಕರ
ಜನವರಿ 26ರಂದು ಭಾರತದ ಸಾರ್ವಭೌಮ ಜನತೆ ಗಣತಂತ್ರದ 75ನೆಯ ವರ್ಷದ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ವಸಾಹತು ದಾಸ್ಯದಿಂದ ವಿಮೋಚನೆ ಪಡೆದ ಯಾವುದೇ ದೇಶಕ್ಕಾದರೂ ತನ್ನದೇ ಆದ ಪ್ರಜಾಸತ್ತಾತ್ಮಕ ಗಣತಂತ್ರ ವ್ಯವಸ್ಥೆಯನ್ನು ಗಟ್ಟಿಯಾಗಿ ನೆಲೆಯೂರುವಂತೆ ಮಾಡುವ ದೃಷ್ಟಿಯಿಂದ, 75 ವರ್ಷಗಳು ಸುದೀರ್ಘ ಅವಧಿ ಎಂದೇ ಹೇಳಬಹುದು. ಭಾರತ ಈ ನಿಟ್ಟಿನಲ್ಲಿ ಹಲವು ಏಳುಬೀಳುಗಳ ನಡುವೆ ಸಾಗುತ್ತಾ ಬಂದಿದೆ. 75ನೆಯ ವಾರ್ಷಿಕೋತ್ಸವದ ಸಂದರ್ಭವು, ಮೂಲತಃ ದೇಶ ನಡೆದುಬಂದ ಹಾದಿಯನ್ನು ವಸ್ತುನಿಷ್ಠವಾಗಿ ವಿಮರ್ಶೆಗೊಳಪಡಿಸುವ ಆತ್ಮಾವಲೋಕನದ ಒಂದು ಸದಾವಕಾಶ ಎಂದೇ ಭಾವಿಸಬೇಕಾಗುತ್ತದೆ. ಭಾರತೀಯ ಸಮಾಜದಲ್ಲಿ ʼಆತ್ಮವಿಮರ್ಶೆಯʼ ನೆಲೆಗಳು ಕ್ರಮೇಣ ಇಲ್ಲವಾಗುತ್ತಿರುವುದರ ಪರಿಣಾಮ, ವೈಭವೀಕರಣದ ಸಂಭ್ರಮದಲ್ಲೇ ನಾವು ಮುಳುಗಿಹೋಗುತ್ತಿದ್ದೇವೆ.
ಜಗತ್ತಿನ ಅತ್ಯಂತ ಶ್ರೇಷ್ಠ ಸಂವಿಧಾನ ಎಂದೇ ಪರಿಗಣಿಸಲ್ಪಡುವ ಭಾರತೀಯ ಸಂವಿಧಾನವೂ ಈ ಇದೇ ವೈಭವೀಕರಣಕ್ಕೊಳಗಾಗುತ್ತಿದೆ. ಒಂದು ನೆಲೆಯಲ್ಲಿ ʼ ಸಂವಿಧಾನ ʼ ವನ್ನು ಒಂದು Icon ಆಗಿ ಪರಿವರ್ತಿಸಲಾಗಿದ್ದು, ಈ ಮೂರ್ತೀಕರಣ (Iconisation)ದ ಪರಾಕಾಷ್ಠೆಯಲ್ಲಿ ವಸ್ತುಸ್ಥಿತಿಯನ್ನು ಪ್ರಾಮಾಣಿಕವಾಗಿ ಪರಾಮರ್ಶಿಸುವ ಕ್ಷಮತೆಯನ್ನು ಭಾರತೀಯ ಸಮಾಜ ಕಳೆದುಕೊಳ್ಳುತ್ತಿರುವುದು ಯೋಚಿಸಬೇಕಾದ ವಿಚಾರ. ಇದರ ಸೂಚನೆಯನ್ನು ಕೇಂದ್ರ ಸರ್ಕಾರದ “ ಸಂವಿಧಾನ ಗೌರವ ಅಭಿಯಾನ ” ಮತ್ತು ಕಾಂಗ್ರೆಸ್ ಪಕ್ಷದ “ ಸಂವಿಧಾನ ರಕ್ಷಣಾ ಅಭಿಯಾನ ”ಗಳಲ್ಲಿ ಗುರುತಿಸಬಹುದು. ಏಳುದಶಕಗಳ ಆಳ್ವಿಕೆಯಲ್ಲಿ ಬಹುತೇಕವಾಗಿ ಈ ಎರಡು ಬಣಗಳೇ ಅಧಿಕಾರ ನಡೆಸಿದ್ದರೂ, ಎರಡೂ ನೆಲೆಗಳಲ್ಲಿ ಆತ್ಮಾವಲೋಕನದ ಛಾಯೆ ಕಾಣದಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ಸಂವಿಧಾನ ರಕ್ಷಣೆ ಮತ್ತು ಯಾರಿಗಾಗಿ ?
75 ವರ್ಷಗಳ ನಂತರವೂ ಸಂವಿಧಾನ ರಕ್ಷಣೆಗಾಗಿ ಆಳುವ ವರ್ಗಗಳೇ ಆಗ್ರಹಿಸಿದಾಗ, ಈ ರಕ್ಷಣೆ ಯಾರಿಂದ, ಯಾರಿಗಾಗಿ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಬಾಹ್ಯ ಸಮಾಜದಲ್ಲೂ ಸಂವಿಧಾನವನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗ ಎಂದೇ ಭಾವಿಸಿರುವ ಜನಸ್ತೋಮ ಭಾರತದಲ್ಲಿದೆ. ದಲಿತ ಸಂಘಟನೆಗಳು, ಅಲ್ಪಸಂಖ್ಯಾತರು, ಪ್ರಗತಿಪರ ಚಳುವಳಿಗಳು, ಎಡಪಂಥೀಯ ಹೋರಾಟಗಳು, ಮಹಿಳಾ ಆಂದೋಲನಗಳು ಹಾಗೂ ಆದಿವಾಸಿ-ತಳಸಮುದಾಯಗಳು ಭಾರತದ ಸಂವಿಧಾನವೇ ದೇಶದ ಪ್ರಜಾಪ್ರಭುತ್ವವನ್ನು ಉಳಿಸುವ ಏಕೈಕ ಸಾಧನ ಎಂದು ಗಟ್ಟಿಯಾಗಿ ನಂಬಿವೆ. ಈ ಸ್ವಾಭಾವಿಕ ನಂಬಿಕೆಯನ್ನು ದಾಟಿ ನೋಡುವುದೇ ಆದರೆ, ವರ್ತಮಾನದ ಸಂದರ್ಭದಲ್ಲಿ ನಾವು ಸಂವಿಧಾನದ ಆಚೆ ಇರುವ ಅಂಬೇಡ್ಕರ್ ಮತ್ತು ಅಂಬೇಡ್ಕರ್ ಅವರನ್ನು ದಾಟಿ ಕಾಣುವ ಸಾಂವಿಧಾನಿಕ ಮೌಲ್ಯಗಳತ್ತ ಗಮನಹರಿಸುವುದು ಅತ್ಯವಶ್ಯ.
ಈ ವಿಶಾಲ ದೃಷ್ಟಿಯಿಂದ ನೋಡಿದಾಗ ನಮಗೆ ʼ ಸಂವಿಧಾನ ತಿದ್ದುಪಡಿ ʼ ಎಂಬ ಭಾವನಾತ್ಮಕ-ಪ್ರಾಯೋಗಿಕ ವಿದ್ಯಮಾನಕ್ಕಿಂತಲೂ ʼ ಸಾಂವಿಧಾನಿಕ ಮೌಲ್ಯಗಳ ಕುಸಿತ ʼ ಪ್ರಧಾನವಾಗಿ ಕಾಣಲು ಸಾಧ್ಯ. ಭಾರತೀಯ ಸಂವಿಧಾನದ ಶ್ರೇಷ್ಠತೆ ಇರುವುದೇ ಅದರ ನಮ್ಯತೆಯಲ್ಲಿ (Flexbility). ಆದರೆ ಈ ನಮ್ಯತೆ ದೇಶದ ಬಹುಸಂಖ್ಯಾತ ಜನತೆಯ ಪರವಾಗಿ ಬಳಕೆಯಾಗಿದೆಯೇ ಎಂಬ ಜಟಿಲ ಪ್ರಶ್ನೆಗೆ ನಾವು ಉತ್ತರ ಶೋಧಿಸಬೇಕಿದೆ. ನಿರ್ದೇಶಕ ತತ್ವಗಳಲ್ಲಿರುವ ಕೆಲವು ಶಾಸನಾತ್ಮಕ ನಿಯಮಗಳನ್ನು ಕಾಲಕಾಲಕ್ಕೆ ಆಡಳಿತಾರೂಢ ಸರ್ಕಾರಗಳು ತಮ್ಮ ಸೈದ್ಧಾಂತಿಕ ನಿಲುವುಗಳಿಗೆ ಅನುಗುಣವಾಗಿ ಶಾಸನಬದ್ಧವಾಗಿಸುತ್ತಿರುವುದನ್ನು ಗೋ ಹತ್ಯೆ ನಿಷೇಧ, ಮತಾಂತರ ನಿಷೇಧ ಮುಂತಾದ ಬಹುಜನ ವಿರೋಧಿ ಕಾಯ್ದೆಗಳಲ್ಲಿ ಗುರುತಿಸಬಹುದು. ಮತ್ತೊಂದೆಡೆ ಸಂವಿಧಾನದ ಚೌಕಟ್ಟಿನೊಳಗೇ ತಳಸಮಾಜದ ಪ್ರತಿರೋಧದ ದನಿಯನ್ನು ಹದ್ದುಬಸ್ತಿನಲ್ಲಿಡುವ ಕರಾಳ ಶಾಸನಗಳು ಜಾರಿಯಾಗಿರುವುದನ್ನೂ ಗಮನಿಸಬಹುದು. 1975ರ ತುರ್ತುಪರಿಸ್ಥಿತಿ ಇದರ ಪರಾಕಾಷ್ಠೆಯನ್ನು ಕಂಡರೆ, ವರ್ತಮಾನದ ಸಂದರ್ಭದಲ್ಲಿ ಸಾಂಸ್ಥಿಕ ನೆಲೆಯಲ್ಲಿ ಇದನ್ನು ಗುರುತಿಸಬಹುದು.
ವಿಕೇಂದ್ರೀಕರಣದ ವಿಶಾಲ ನೆಲೆ
1950ರ ಜನವರಿ 26ರಂದು ಭಾರತ ತನಗೆ ತಾನೇ ಅರ್ಪಿಸಿಕೊಂಡ ಸಂವಿಧಾನ ಮತ್ತು ಸಾಂವಿಧಾನಿಕ ಗಣತಂತ್ರದ ಮೂಲ ಆಶಯ ಮತ್ತು ತಳಹದಿ ಇರುವುದು ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಮತ್ತು ಇದನ್ನು ಕಾಪಾಡಲು ಅತ್ಯವಶ್ಯವಾದ ಅಧಿಕಾರ ವಿಕೇಂದ್ರೀಕರಣದಲ್ಲಿ. ಹಾಗಾಗಿಯೇ ಕೃಷಿ, ಅರಣ್ಯ, ಶಿಕ್ಷಣ ಮೊದಲಾದ ವಿಷಯಗಳನ್ನು ಸಮವರ್ತಿ ಪಟ್ಟಿಯಲ್ಲಿ ನಮೂದಿಸಲಾಗಿದ್ದು, ಕೇಂದ್ರ ಸರ್ಕಾರದ ಸುಪರ್ದಿಗೊಳಪಟ್ಟರೂ ಸಹ ರಾಜ್ಯ ಸರ್ಕಾರಗಳು ಸ್ವಾಯತ್ತ ನೀತಿಗಳನ್ನು ಜಾರಿಗೊಳಿಸುವ ಸಾಂವಿಧಾನಿಕ ಅಧಿಕಾರವನ್ನು ಹೊಂದಿರುತ್ತವೆ. ಆದರೆ ಕಳೆದ ಹಲವು ದಶಕಗಳಿಂದ ಈ ಸಾಂವಿಧಾನಿಕ ನಿಯಮವನ್ನು ಹಂತಹಂತವಾಗಿ ಶಿಥಿಲಗೊಳಿಸುತ್ತಲೇ ಬರಲಾಗಿದೆ. ಇದನ್ನು ದಾಟಿ ನೋಡಿದಾಗ ಭಾರತದ ʼ ಸಾಂವಿಧಾನಿಕ ಗಣತಂತ್ರದ ʼ ಮೂಲ ಆಕರವನ್ನು ಆಂತರಿಕ ಹಾಗೂ ಬಾಹ್ಯ ಪ್ರಜಾಪ್ರಭುತ್ವದಲ್ಲಿ ಗುರುತಿಸಬಹುದು. 1980ರ ದಶಕದಲ್ಲಿ ಜಾರಿಗೊಳಿಸಲಾದ ಪಂಚಾಯತ್ ರಾಜ್ ವ್ಯವಸ್ಥೆ ಈ ನಿಟ್ಟಿನಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿ ಕಾಣುತ್ತದೆ.
ಆದರೆ ವಾಸ್ತವದ ನೆಲೆಯಲ್ಲಿ ಭಾರತದ ಆಳ್ವಿಕೆಯಲ್ಲಿ ಅಧಿಕಾರ ವಿಕೇಂದ್ರೀಕರಣ ಸಾಧ್ಯವಾಗುತ್ತಿದೆಯೇ? ಈ ಪ್ರಶ್ನೆ ಇಂದು ಮತ್ತೊಮ್ಮೆ ಪರಾಮರ್ಶೆಗೊಳಗಾಗಬೇಕಿದೆ. ರಾಜ್ಯಗಳ ಶಾಸನಾತ್ಮಕ ಅಧಿಕಾರವನ್ನು ನಿರ್ಬಂಧಿಸುವ ಹಲವು ಪ್ರಯತ್ನಗಳು ನಡೆಯುತ್ತಲೇ ಇವೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಇದನ್ನು ಗಮನಿಸಬಹುದು. ಮತ್ತೊಂದು ಬದಿಯಲ್ಲಿ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪಕ್ಷಗಳು, ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅಳವಡಿಸಿಕೊಂಡರೂ, ಅದು ಕೇವಲ ಚುನಾವಣೆ ಮತ್ತು ಅಧಿಕಾರ ಹಂಚಿಕೆಗಳಿಗಷ್ಟೇ ಸೀಮಿತವಾಗಿರುವುದನ್ನೂ ಗಂಭೀರವಾಗಿ ಪರಾಮರ್ಶಿಸಬೇಕಿದೆ. ಭಾರತದ ಸಂವಿಧಾನದ ಪರಿಭಾಷೆಯಲ್ಲೇ ಹೇಳುವುದಾದರೆ ʼ ಅಧಿಕಾರ ವಿಕೇಂದ್ರೀಕರಣ ʼ ಎನ್ನುವುದು ಕೇವಲ ಆಳ್ವಿಕೆ, ಹಣಕಾಸು ವಿನಿಯೋಗ ಮತ್ತು ಆಡಳಿತ ನಿರ್ವಹಣೆಗೆ ಸೀಮಿತವಾಗಿ ಕಾಣುವುದಿಲ್ಲ.
ಇದನ್ನೂ ಓದಿ: ಸಮಾನತೆಯನ್ನು ನಿರಾಕರಿಸುವ ‘ಜಿಡಿಪಿ- ರಾಷ್ಟ್ರೀಯವಾದ’
ಇದನ್ನೂ ಮೀರಿದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಭಾರತದ ರಾಜಕೀಯ ವ್ಯವಸ್ಥೆ ಅಳವಡಿಸಿಕೊಳ್ಳಬೇಕಿದೆ. ಇದಕ್ಕೆ ಮುಖ್ಯವಾಗಿ ಬೇಕಿರುವುದು ʼ ಆಂತರಿಕ ಪ್ರಜಾಪ್ರಭುತ್ವ ʼ. ಭಾರತದ ಸಂವಿಧಾನವನ್ನು ರಕ್ಷಿಸಲು ಅಥವಾ ಗೌರವಿಸಲು ಹೊರಟಿರುವ, ಆಳ್ವಿಕೆಯನ್ನು ಪ್ರತಿನಿಧಿಸುವ, ರಾಜಕೀಯ ಪಕ್ಷಗಳು 75 ವರ್ಷಗಳು ಕಳೆದರೂ ತಂತಮ್ಮ ಪಕ್ಷಗಳಲ್ಲಿ ʼ ಆಂತರಿಕ ಪ್ರಜಾಪ್ರಭುತ್ವʼವನ್ನು ಸ್ಥಾಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಸಂಸದೀಯ ಎಡಪಕ್ಷಗಳು ಅನುಸರಿಸುವ ʼಪ್ರಜಾಪ್ರಭುತ್ವೀಯ ಕೇಂದ್ರೀಕರಣʼ (Democratic Centralism) ವರ್ತಮಾನದ ಯುಗದಲ್ಲಿ ಮರುವಿಮರ್ಶೆಗೊಳಗಾಗಬೇಕಿದೆ. ಪ್ರಧಾನ ಮತ್ತು ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು ಹೆಚ್ಚು ಹೆಚ್ಚಾಗಿ ಹೈಕಮಾಂಡ್ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿವೆ. ಮತ್ತೊಂದೆಡೆ ವಿವಿಧ ರಾಜ್ಯಗಳ ಪ್ರಾದೇಶಿಕ ಹಿತಾಸಕ್ತಿಗಳ ನೆಲೆಯಲ್ಲಿ ಸ್ಥಾಪನೆಯಾಗಿರುವ ಪ್ರಾದೇಶಿಕ ರಾಜಕೀಯ ಪಕ್ಷಗಳು ಬಹುತೇಕ ಏಕವ್ಯಕ್ತಿ ಅಥವಾ ಕುಟುಂಬದ ನಿಯಂತ್ರಣದಲ್ಲೇ ಮುಂದುವರೆಯುತ್ತಿವೆ.
ಆಂತರಿಕ ಪ್ರಜಾಪ್ರಭುತ್ವದ ಕನಸು
ಎಲ್ಲ ಪಕ್ಷಗಳಲ್ಲೂ ಪದಾಧಿಕಾರಿಗಳ ಆಯ್ಕೆಗಾಗಿ ನಡೆಯುವ ಚುನಾವಣೆಗಳು ಮೇಲ್ನೋಟಕ್ಕೆ ಪ್ರಜಾಸತ್ತಾತ್ಮಕವಾಗಿ ಕಂಡರೂ ಅಂತಿಮವಾಗಿ ಅದು ಒಂದು ಪ್ರಬಲ ಗುಂಪಿನ, ವ್ಯಕ್ತಿಯ, ಕುಟುಂಬದ ಅಥವಾ ಬಣದ ನಿಯಂತ್ರಣದಲ್ಲೇ ನಡೆಯುತ್ತದೆ. ಈ ಆಯ್ಕೆ ಪ್ರಕ್ರಿಯೆಯೇ ಅಸಂಗತವಾಗಿ (Farcical) ಕಾಣುತ್ತಿದ್ದು ಮತದಾರರನ್ನು ತೆಪ್ಪಗಿರಿಸುವ ಒಂದು ತಂತ್ರವಾಗಿ ಕಾಣುತ್ತದೆ. ಕೇಂದ್ರದಿಂದ ರಾಜ್ಯಕ್ಕೆ, ರಾಜ್ಯ ಸ್ತರದಿಂದ ಜಿಲ್ಲಾ ಮಟ್ಟಕ್ಕೆ, ಅಲ್ಲಿಂದ ಗ್ರಾಮ ಪಂಚಾಯತ್‌ವರೆಗೆ ವ್ಯಾಪಿಸುವ ಈ ʼನಿಯಂತ್ರಣಾಧಿಕಾರʼದ ಪರಿಣಾಮವಾಗಿಯೇ ಭಾರತದ ತಳಸಮಾಜದಲ್ಲಿ ಪ್ರಜಾಪ್ರಭುತ್ವದ ಆಶಯಗಳು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳು ಬೇರೂರಲು ಸಾಧ್ಯವಾಗುತ್ತಿಲ್ಲ. ಮಂಡಲ-ಗ್ರಾಮ ಪಂಚಾಯತ್ ಚುನಾವಣೆಗಳಿಂದ ಲೋಕಸಭೆಯವರೆಗೂ ವ್ಯಾಪಿಸಿರುವ ಈ ಕೇಂದ್ರೀಕೃತ ಹಿಡಿತ, ತಳಮಟ್ಟದಲ್ಲಿ ಯುವ ಜನತೆ, ವಿಶೇ಼ಷವಾಗಿ ಮಹಿಳೆಯರು ಅವಕಾಶವಂಚಿತರಾಗಲು ಕಾರಣವಾಗುತ್ತಿದೆ.
ಮತ್ತೊಂದು ಆಯಾಮದಲ್ಲಿ ನೋಡಿದಾಗ, ʼ ಅಧಿಕಾರ ವಿಕೇಂದ್ರೀಕರಣ ʼ ಎನ್ನುವ ಉದಾತ್ತ ಕಲ್ಪನೆ ಭಾರತದ ರಾಜಕಾರಣದಲ್ಲಿ ಕೇವಲ ಅಧಿಕಾರ ನಿರ್ವಹಣೆಯ ಕೇಂದ್ರಗಳಿಗಷ್ಟೇ ಸೀಮಿತವಾಗಿದೆ. ಸಾಂವಿಧಾನಿಕ ನಿಬಂಧನೆಗಳಿಗೊಳಪಟ್ಟು ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಪ್ರಾತಿನಿಧ್ಯ ದೊರೆಯುತ್ತಿದೆ. ಪಂಚಾಯತ್ ರಾಜ್ಯ ವ್ಯವಸ್ಥೆಯಡಿ ಮಹಿಳೆಯರಿಗೂ ಅವಕಾಶ ಲಭಿಸುತ್ತಿದೆ. ಆದರೆ ಇದನ್ನೂ ಮೀರಿದ ಸಾಂಸ್ಥಿಕ ನೆಲೆಗಳಲ್ಲಿ, ಸಾಂಘಿಕ ಚೌಕಟ್ಟುಗಳಲ್ಲಿ ಮಹಿಳೆ ಸದಾ ನಿರ್ಲಕ್ಷಿತಳೇ ಆಗಿರುವುದನ್ನು ಗಮನಿಸಬೇಕಿದೆ. ರಾಜಕೀಯ ಪಕ್ಷಗಳ ಆಂತರಿಕ ನಿರ್ವಹಣೆಯಲ್ಲಿ ʼ ಮಹಿಳಾ ಧ್ವನಿ ʼ ಎನ್ನುವುದು ಕ್ಷೀಣವಾಗಿರುವುದನ್ನು ಎಲ್ಲ ಪಕ್ಷಗಳಲ್ಲೂ, ಸಂಘಟನೆಗಳಲ್ಲೂ, ಪ್ರಗತಿಪರ ಎನಿಸಿಕೊಳ್ಳುವ ಸಾಂಘಿಕ ಚೌಕಟ್ಟುಗಳಲ್ಲೂ ಗುರುತಿಸಬಹುದು. ಇಲ್ಲಿ ಘಾಸಿಗೊಳಗಾಗುವ ʼ ಮಹಿಳಾ ಅಸ್ಮಿತೆ ʼ, ತತ್ಪರಿಣಾಮವಾಗಿ ಹಿನ್ನಲೆಗೆ ಸರಿಯುವ ʼ ಹೆಣ್ತನದ ಸ್ಥಾನಮಾನ ʼ ಪ್ರಜಾಪ್ರಭುತ್ವದ ಸಾಂಸ್ಥಿಕ ನೆಲೆಗಳನ್ನು ಏಕಪಕ್ಷೀಯವಾಗಿಸುತ್ತಿದೆ. ಇದನ್ನು ಗಮನಿಸಬೇಕಲ್ಲವೇ ?
ಇಂದು ಸಂವಿಧಾನವನ್ನು ವೈಭವೀಕರಿಸುತ್ತಿರುವ ಮತ್ತು ಗ್ರಾಂಥಿಕವಾಗಿ ಮೂರ್ತೀಕರಿಸುತ್ತಿರುವ (Iconising) ಸಮಾಜದ ಎಲ್ಲ ಸ್ತರಗಳಲ್ಲೂ ಈ ಕೊರತೆ ಢಾಳಾಗಿ ಕಾಣುತ್ತಿದೆ. ಭಾರತದ ಸಂವಿಧಾನ ಈ ರೀತಿಯಲ್ಲಿ Romanticisation ಗೆ ಒಳಗಾದಷ್ಟೂ ಅದರ ಅಂತಃಸತ್ವಗಳು ತಳಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೆ ತಲುಪುವುದು ದುಸ್ತರವಾಗುತ್ತದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗಾಗಿ ಹೋರಾಡುವ ಸಂಘಟನೆಗಳು ಈ ಪ್ರಕ್ರಿಯೆಯಿಂದಾಚೆ ಯೋಚಿಸುವಂತಾಗಬೇಕು. ಸಂವಿಧಾನದ ಪಠಣ, ಓದು, ಸಂವಾದ ಮತ್ತು ಚರ್ಚೆ ಇವೆಲ್ಲವೂ ಒಂದು ಹಂತದವರೆಗೆ ತಳಸಮಾಜವನ್ನು ತಲುಪುವ ಸಾಧನಗಳಾಗಲು ಸಾಧ್ಯ. ಆದರೆ ಸಾಂವಿಧಾನಿಕ ಮೌಲ್ಯಗಳನ್ನು ವೈಯುಕ್ತಿಕ ನೆಲೆಯಲ್ಲಿ, ವ್ಯಕ್ತಿಗತವಾಗಿ, ಅಂತರಿಕೀಕರಿಸಿಕೊಳ್ಳಲು (Internalise) ಇದು ಸಾಲುವುದಿಲ್ಲ.
ಆಂತರಿಕೀಕರಣದ ಕನಸು
ಈ ಆಂತರಿಕೀಕರಣ (Internalisation) ಸಾಧ್ಯವಾಗದಿರುವುದರಿಂದಲೇ ಸಂವಿಧಾನ ಗ್ರಾಂಥಿಕವಾಗಿ ನಮ್ಮ ಸಮಾಜದ ನಡುವೆ ವಿಜೃಂಭಿಸುತ್ತದೆ. ಮೌಖಿಕವಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಪ್ರತಿಧ್ವನಿಸುತ್ತಿದೆ. ಆದರೆ ಪ್ರತಿಯೊಂದು ಜಾತಿಯಲ್ಲೂ, ಪ್ರತಿ ಮತದ ಗುಂಪುಗಳಲ್ಲೂ, ಪ್ರತಿಯೊಂದು ಸಮುದಾಯದಲ್ಲೂ, ಸಂವಿಧಾನದ ಆಶಯಗಳಿಗೆ ತದ್ವಿರುದ್ಧ ದಿಕ್ಕಿನಲ್ಲಿ ಸಾಗುವ ಮನುಸ್ಮೃತಿ ಅಂತರ್ಗತವಾಗಿದೆ. ಬೌದ್ಧಿಕವಾಗಿ ಈ ಅಂತರ್ಗತವಾದ ಪ್ರಾಚೀನ, ಪ್ರಜಾತಂತ್ರ ವಿರೋಧಿ ಮೌಲ್ಯಗಳನ್ನು ಗಟ್ಟಿಗೊಳಿಸಲೆಂದೇ ಮತೀಯ ಸಂಘಟನೆಗಳು, ಜಾತಿ ಶ್ರೇಷ್ಠತೆಯ ಗುಂಪುಗಳು ಮತ್ತು ಧಾರ್ಮಿಕ ಸಂಸ್ಥೆಗಳು ವ್ಯವಸ್ಥಿತ ಭೂಮಿಕೆಗಳನ್ನು ನಿರ್ಮಿಸುತ್ತಿವೆ. ಮನುಸ್ಮೃತಿಯಂತಹ ಪ್ರಾಚೀನ ಆಲೋಚನಾ ವಿಧಾನಗಳು ಬೌದ್ಧಿಕವಾಗಿ ಗಟ್ಟಿಯಾಗಿರುವುದರಿಂದಲೇ ಎಲ್ಲ ರಾಜಕೀಯ ಪಕ್ಷಗಳಲ್ಲೂ, ಅದರಿಂದಲೇ ಪ್ರೇರಿತವಾದ ಊಳಿಗಮಾನ್ಯ ಪಿತೃಪ್ರಧಾನ ಮೌಲ್ಯಗಳೂ ಜೀವಂತಿಕೆಯಿಂದಿವೆ.
ನೂರು ವರ್ಷಗಳ ಹಿಂದೆ ರಷ್ಯಾ ಕ್ರಾಂತಿಯ ಸಂದರ್ಭದಲ್ಲಿ ಚಾರಿತ್ರಿಕ ಅನಿವಾರ್ಯತೆಗಳಿಂದ ಲೆನಿನ್ ರೂಪಿಸಿದ ಪ್ರಜಾಪ್ರಭುತ್ವೀಯ ಕೇಂದ್ರೀಕರಣ (Democratic Centralism) ನೀತಿಯನ್ನು ಪರಿಷ್ಕರಿಸುವುದು ಎಡಪಕ್ಷಗಳ ಆದ್ಯತೆಯಾಗಬೇಕಿದೆ. ಏಕೆಂದರೆ ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವ, ಮುಂದಿನ ತಲೆಮಾರಿಗೆ ಯಥಾಸ್ಥಿತಿಯಲ್ಲಿ ಕೊಂಡೊಯ್ಯುವ ಹಾಗೂ ಪಸರಿಸುವ ದೊಡ್ಡ ಜವಾಬ್ದಾರಿ ಎಡಪಕ್ಷಗಳ ಮೇಲಿದೆ. ಇಲ್ಲಿ ʼ ಆಂತರಿಕ ಪ್ರಜಾಪ್ರಭುತ್ವ ʼ (Internal Democracy) ಅನುಕರಣೆಯಾಗದೆ, ಹೊರಗಿನ ರಾಜಕೀಯ ವ್ಯವಸ್ಥೆಯಲ್ಲಿ ಇದನ್ನು ಅಪೇಕ್ಷಿಸುವುದು ಪ್ರಾಮಾಣಿಕವಾಗಿ ಕಾಣುವುದಿಲ್ಲ. ನೂರು ವರ್ಷಗಳ ಇತಿಹಾಸದಲ್ಲಿ ಎರಡೂ ಪ್ರಧಾನ ಕಮ್ಯುನಿಸ್ಟ್ ಪಕ್ಷಗಳ ನಾಯಕತ್ವ ವಹಿಸುವ ಪ್ರಧಾನ ಕಾರ್ಯದರ್ಶಿ ಹುದ್ದೆ ಮಹಿಳಾ ಸಂಗಾತಿಗಳಿಗೆ ಲಭಿಸದೆ ಇರುವುದನ್ನು ಗಮನಿಸಿದಾಗ, ಈ ಅಂಶ ಮತ್ತಷ್ಟು ಸ್ಪಷ್ಟವಾಗುತ್ತದೆ.
ಸಂವಿಧಾನವನ್ನು ವೈಭವೀಕರಿಸುವ ಅಥವಾ ಆರಾಧನೆಯ ವಸ್ತುವನ್ನಾಗಿ ಮಾಡುವ ಅತಿರೇಕದ ನಡೆಗಿಂತಲೂ ಮುಖ್ಯವಾಗಿ ಆಗಬೇಕಿರುವುದು, ವ್ಯಕ್ತಿಗತವಾಗಿ, ವೈಯುಕ್ತಿಕ ನೆಲೆಯಲ್ಲಿ, ಸಂಘಟನಾತ್ಮಕವಾಗಿ, ಸಾಂಸ್ಥಿಕವಾಗಿ ಹಾಗೂ ಸಾಮುದಾಯಿಕವಾಗಿ ಸಾಂವಿಧಾನಿಕ ಮೌಲ್ಯಗಳನ್ನು ಒಳಗಿಳಿಸಿಕೊಳ್ಳುವುದು ಅಥವಾ ಆಂತರಿಕೀಕರಿಸಿಕೊಳ್ಳುವುದು (Internalisation). ಇದು ಸಾಧ್ಯವಾಗಬೇಕಾದರೆ ಪಕ್ಷ-ಸಂಘಟನೆಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಊರ್ಜಿತವಾಗಬೇಕು. ಭಾರತದ ಗಣತಂತ್ರ 75 ವಸಂತಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ, ಇದು ಏಕೆ ಸಾಧ್ಯವಾಗಿಲ್ಲ ಎಂಬ ಆತ್ಮವಿಮರ್ಶೆ ನಮ್ಮಲ್ಲಿ ನಡೆಯಬೇಕಿದೆ. ಸಂವಿಧಾನ ರಕ್ಷಣಾ ಅಭಿಯಾನವನ್ನು ನೂರು ದಿನಗಳ ಕಾಲ ಹಮ್ಮಿಕೊಂಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರ “ ಜೀ ಭೀಮ್ ಜೈ ಬಾಪು ಜೈ ಸಂವಿಧಾನ ”ದ ಘೋಷಣೆಯೊಂದಿಗೆ ಚಾಲ್ತಿಯಲ್ಲಿದೆ. ಅತ್ತ ಬಿಜೆಪಿ ಸರ್ಕಾರ ರಾಷ್ಟ್ರ ಮಟ್ಟದಲ್ಲಿ “ ಸಂವಿಧಾನ ಗೌರವ ಅಭಿಯಾನ ” ಹಮ್ಮಿಕೊಂಡಿದೆ.
ಆಳ್ವಿಕೆಯ ನೆಲೆಗಳಿಂದಾಚೆಗೆ
ಈ ಎರಡೂ ಆಚರಣೆಗಳು ಸಂವಿಧಾನವನ್ನು ಗ್ರಾಂಥಿಕವಾಗಿ ಕಾಣುವ ಪರಂಪರೆಯನ್ನೇ ಪ್ರತಿನಿಧಿಸುತ್ತವೆ. ಮೌಲಿಕವಾಗಿ ನಮ್ಮ ಸರ್ಕಾರಗಳು, ರಾಜಕೀಯ ಪಕ್ಷಗಳು ಗಣತಂತ್ರದ ಆಶಯಗಳನ್ನು ಮತ್ತು ಅದರ ಅಡಿಪಾಯವಾದ ಸಂವಿಧಾನದ ಮೌಲ್ಯಗಳನ್ನು ಗೌರವಿಸಿ ಕಾಪಾಡುತ್ತಿವೆಯೇ ? ಈ ಪ್ರಶ್ನೆಗೆ ಹೌದು ಎನ್ನಲು ಪುರಾವೆಗಳೇ ಇಲ್ಲ. ಏಕೆಂದರೆ ರಾಜಕೀಯ ಆಳ್ವಿಕೆಯಲ್ಲಷ್ಟೇ ಅಲ್ಲದೆ, ಸರ್ಕಾರವನ್ನು ಪ್ರತಿನಿಧಿಸುವ ಸಾಂಸ್ಥಿಕ ನೆಲೆಗಳಲ್ಲೂ, ಸಾಂಸ್ಕೃತಿಕ ಚೌಕಟ್ಟುಗಳಲ್ಲೂ ಸಹ ಸಾಂವಿಧಾನಿಕ ಗಣತಂತ್ರದ ಆಶಯಗಳು ಬಿಂಬಿತವಾಗುತ್ತಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಶಿಥಿಲವಾಗುತ್ತಿವೆ. ನವ ಉದಾರವಾದ, ಕಾರ್ಪೋರೇಟ್ ಮಾರುಕಟ್ಟೆ ಮತ್ತು ಜಾತಿ ಮತಗಳನ್ನಾಧರಿಸಿದ ಸಾಂಪ್ರದಾಯಿಕತೆ ಇಡೀ ಸಾಮಾಜಿಕ-ರಾಜಕೀಯ ವ್ಯವಸ್ಥೆಯನ್ನು ಆಕ್ರಮಿಸಿಕೊಳ್ಳುತ್ತಿದೆ.
ಇದು ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿಯಾಗಿ ಕಾಣುತ್ತದೆ. ಏಕೆಂದರೆ ಭಾರತದಂತಹ ಬಹುಸಾಂಸ್ಕೃತಿಕ ದೇಶದಲ್ಲಿ ಗಣತಂತ್ರವನ್ನು ಪ್ರತಿನಿಧಿಸುವ ಒಕ್ಕೂಟ ವ್ಯವಸ್ಥೆಯಷ್ಟೇ ಮುಖ್ಯವಾಗಿ ಕಾಣುವುದು ಸಂವಿಧಾನವನ್ನು ಪ್ರತಿನಿಧಿಸುವ ರಾಜಕೀಯ ವ್ಯವಸ್ಥೆ. ಇಂದು ಈ ಎರಡೂ ನೆಲೆಗಳು ಶಿಥಿಲವಾಗುತ್ತಿರುವುದನ್ನು ಗಂಭೀರವಾಗಿ ಪರಾಮರ್ಶೆಗೊಳಪಡಿಸಬೇಕಿದೆ. ದೇಶದ ಬಹುತ್ವವನ್ನೇ ಶಿಥಿಲಗೊಳಿಸುವ ಮತೀಯ-ಸಾಂಸ್ಕೃತಿಕ ರಾಜಕಾರಣ ಮತ್ತು ಸಾಮಾಜಿಕ-ಆರ್ಥಿಕ ಅಸಮಾನತೆಗಳನ್ನು ಹಿಗ್ಗಿಸುವ ನವಉದಾರವಾದಿ ಕಾರ್ಪೋರೇಟ್ ಬಂಡವಾಳಶಾಹಿ ಹಾಗೂ ತಳದಿಂದ ಮೇಲಿನವರೆಗೆ ಇಡೀ ವ್ಯವಸ್ಥೆಯನ್ನು ಕಿತ್ತುತಿನ್ನುತ್ತಿರುವ ಜಾತಿಶ್ರೇಷ್ಠತೆ ಮತ್ತು ಪಾರಮ್ಯ ಈ ಮೂರೂ ವಿದ್ಯಮಾನಗಳು ಭಾರತದ ಗಣತಂತ್ರ ವ್ಯವಸ್ಥೆಯನ್ನು ಶಿಥಿಲಗೊಳಿಸುವ ವಾಹಕಗಳಾಗಿ ಪರಿಣಮಿಸುತ್ತವೆ.
ಅಂತಿಮವಾಗಿ
ಈ ಬೆಳವಣಿಗೆಗಳ ನೇರ ಪರಿಣಾಮ ತಳಸ್ತರದ ಸಮಾಜದ ಮೇಲಾಗುತ್ತದೆ. ಏಕೆಂದರೆ ಈ ಮೇಲ್ಪದರದ ರಾಜಕೀಯ ವ್ಯವಸ್ಥೆಯಲ್ಲಿ (Elitist Political System) ತಳಹಂತದಿಂದ ನಾಯಕತ್ವ ಬೆಳೆಯುವುದೇ ಇಲ್ಲ. ಹಾಗೆಯೇ ಇದೇ ಮೇಲ್ಪದರ ಸಮಾಜದಲ್ಲಿ ಸಾಮಾಜಿಕವಾಗಿ-ಸಾಂಸ್ಕೃತಿಕವಾಗಿ-ಧಾರ್ಮಿಕವಾಗಿ ಅಧೀನ ಸ್ಥಿತಿಯಲ್ಲೇ ಇರಿಸಲಾಗಿರುವ ಮಹಿಳೆಯರಿಗೆ ಪ್ರಾತಿನಿಧ್ಯ ದೊರಕುವುದಿಲ್ಲ. ಡಾ. ಅಂಬೇಡ್ಕರ್ ಆದಿಯಾಗಿ ಸಂವಿಧಾನವನ್ನು ರೂಪಿಸಿದ ಸ್ವಾತಂತ್ರ್ಯಪೂರ್ವ ಮುತ್ಸದ್ದಿಗಳ ನಿರೀಕ್ಷೆಯನ್ನು ನಾವು ತಲುಪಲು ಸಾಧ್ಯವಾಗಿದೆಯೇ ? 75ನೇ ಗಣತಂತ್ರ ದಿನವನ್ನು ಆಚರಿಸುತ್ತಲೇ, ಸಂವಿಧಾನವನ್ನು ವೈಭವೀಕರಿಸುತ್ತಲೇ, ಪ್ರಜ್ಞಾವಂತ ಸಮಾಜದಲ್ಲಿ ಮೂಡಬೇಕಾದ ಜಟಿಲ ಪ್ರಶ್ನೆ ಇದು. ಗಣತಂತ್ರ ದಿನದ ಆಚರಣೆ ಮತ್ತು ಉತ್ಸವಗಳ ನಡುವೆಯೇ ನಡೆದು ಬಂದ ಹಾದಿಯ ಆತ್ಮಾವಲೋಕನ ಮತ್ತು ಭವಿಷ್ಯದತ್ತ ನೋಡುವ ದೂರಗಾಮಿತ್ವದ ಮನಸ್ಥಿತಿಯನ್ನು ರೂಢಿಸಿಕೊಳ್ಳುವುದು ಈ ಸಂದರ್ಭದಲ್ಲಿ ಅತ್ಯವಶ್ಯ.
75 ವರ್ಷಗಳ ಗಣತಂತ್ರವನ್ನು ಯಶಸ್ವಿಯಾಗಿ ನಡೆಸಿ ಫಲಾನುಭಾವಿಗಳಾಗಿರುವ ವರ್ತಮಾನ ಭಾರತದ ತಲೆಮಾರು ಭವಿಷ್ಯದ ಪೀಳಿಗೆಗಳಿಗಾಗಿ ಏನನ್ನಾದರೂ ಬಿಟ್ಟು ಹೋಗುವುದೇ ಆದರೆ, ಈ ಮೌಲ್ಯಗಳನ್ನು-ಅದರ ಬೇರುಗಳನ್ನು ಆಳಕ್ಕಿಳಿಸಿ ಬಿಟ್ಟುಹೋಗಬೇಕಿದೆ. ಇಲ್ಲವಾದರೆ ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ.
ಗಣತಂತ್ರ ದಿನಾಚರಣೆಯ ಶುಭಾಶಯಗಳು
ಇದನ್ನೂ ನೋಡಿ: ಮೋದಿ ಸರ್ಕಾರದ ಪ್ರಕಾರ ಭಾರತದಲ್ಲಿ 3-7 ಕೋಟಿ ಬಡವರಿದ್ದಾರೆ ಅಷ್ಟೇ! ಹೌದಾ ಭಾರತೀಯರೇ?? Janashakthi Media