ಯುಎಸ್ ನಲ್ಲಿ ಇಸ್ರೇಲಿ ನರಮೇಧದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ: ಕುತರ್ಕ ಮತ್ತು ಮಾನವೀಯತೆಯ ನಡುವಿನ ಹೋರಾಟ

ಪ್ರೊ.ಪ್ರಭಾತ್ ಪಟ್ನಾಯಕ್

 ಅನು:ಕೆ.ವಿ.

ಯುಎಸ್ ವಿದ್ಯಾರ್ಥಿಗಳ ಪ್ರತಿಭಟನೆಗಳು ನೆಲಸಿಗ ವಸಾಹತುಶಾಹಿಯ ನರಮೇಧದ ಬಗ್ಗೆ ಮತ್ತು ಝಿಯೋನಿಸ್ಟ್ ಆಳ್ವಿಕೆಯೊಂದಿಗೆ ಸಾಮ್ರಾಜ್ಯಶಾಹಿಯ ಶಾಮೀಲಿನ ಬಗ್ಗೆ ಅಸಹ್ಯತೆಯ ಭಾವದ, ಶಾಂತಿ ಮತ್ತು ಭ್ರಾತೃತ್ವಕ್ಕಾಗಿ ಮಾನವ ಕುಲದ ಅನ್ವೇಷಣೆಯ ಅಭಿವ್ಯಕ್ತಿಯಾಗಿವೆ. ಮತ್ತೊಂದೆಡೆ, ಯುಎಸ್ ಆಳುವ ವ್ಯವಸ್ಥೆಯ ಇಬ್ಬಂದಿ ಮಾತುಗಳು ಶಾಂತಿಯ ಮಂತ್ರವನ್ನು ಪಠಿಸುತ್ತಲೇ, ಮುಗ್ಧ ನಾಗರಿಕರ ಮೇಲೆ ಕ್ರೌರ್ಯವನ್ನು ವಿರೋಧಿಸುತ್ತಲೇ, ಅಂತಹ ಕ್ರೌರ್ಯವನ್ನು ನಡೆಸಲು  ಶಸ್ತ್ರಾಸ್ತ್ರಗಳ ಪೂರೈಕೆಯನ್ನು ಮುಂದುವರಿಸುತ್ತಿವೆ. ಒಂದೆಡೆ, ವಿದ್ಯಾಥಿಗಳ ಕಡೆಯಿಂದ ಮಾನವೀಯತೆಗೆ ತದ್ವಿರುದ್ಧವಾಗಿ ಇನ್ನೊದೆಡೆಯಲ್ಲಿ ಕಾಣುತ್ತಿರುವುದು ಕುತರ್ಕ. ಮೊದಲನೆಯದು ಭವಿಷ್ಯದ ಭರವಸೆಯ ಮುನ್ಸೂಚನೆಯಾಗಿದ್ದರೆ, ಎರಡನೆಯದು ತತ್ತರಿಸುತ್ತಿರುವ ಸಾಮ್ರಾಜ್ಯಶಾಹಿಯ ಹತೋಟಿ ಮೀರಿದ ಅಪ್ರಾಮಾಣಿಕತೆಯನ್ನು ಪ್ರತಿನಿಧಿಸುತ್ತದೆ. ಯುಎಸ್ ಕ್ಯಾಂಪಸ್ಗಳಲ್ಲಿ ಮಾನವೀಯತೆ ಮತ್ತು ಕುತರ್ಕದ ನಡುವೆ ನಡೆಯುತ್ತಿರುವ ಹೋರಾಟವು ಮುಂದಿನ ದಿನಗಳಲ್ಲಿ ನಿರ್ಣಾಯಕ ವರ್ಗ ಹೋರಾಟಗಳ ಮುನ್ಸೂಚನೆಯಾಗಿದೆ. ನರಮೇಧ

ಅಮೆರಿಕನ್ ವಿಶ್ವವಿದ್ಯಾನಿಲಯ ಕ್ಯಾಂಪಸ್‌ಗಳಲ್ಲಿ ಇಸ್ರೇಲ್‌ನ ಮಿಲಿಟರಿ ಯಂತ್ರದೊಂದಿಗೆ ಸಂಬಂಧವಿರುವ ಕಂಪನಿಗಳಿಂದ “ದೂರ ಸರಿಯಬೇಕು” ಎಂದು ಒತ್ತಾಯಿಸುವ ಪ್ರಸಕ್ತ ಪ್ರತಿಭಟನೆಗಳು ಅರವತ್ತರ ದಶಕದ ಉತ್ತರಾರ್ಧದಲ್ಲಿ ಮತ್ತು ಎಪ್ಪತ್ತರ ದಶಕದ ಆರಂಭದಲ್ಲಿ ವಿಯೆಟ್ನಾಂ ಯುದ್ಧವನ್ನು ಕೊನೆಗೊಳಿಸುವಂತೆ ಒತ್ತಾಯಿಸಿ ಈ ಕ್ಯಾಂಪಸ್‌ಗಳನ್ನೆಲ್ಲ ಆವರಿಸಿದ್ದ ಪ್ರತಿಭಟನೆಗಳನ್ನು ನೆನಪಿಸುತ್ತವೆ. ಆದರೆ ಒಂದು ಪ್ರಮುಖ ವ್ಯತ್ಯಾಸವಿದೆ: ಯುಎಸ್ ಆಗ ನೇರವಾಗಿ ಯುದ್ಧದಲ್ಲಿ ಭಾಗಿಯಾಗಿತ್ತು, ಆದರೆ ಇಂದು ಅದು ನೇರವಾಗಿ ಭಾಗಿಯಾಗಿಲ್ಲ.  ಆದ್ದರಿಂದ ಆಗ ಮಿಲಿಟರಿಯಲ್ಲಿ ಕಡ್ಡಾಯವಾಗಿ ಕೆಲಸ ಮಾಡಬೇಕಿತ್ತು. ಆದರೆ ಇಂದು ಹಾಗೇನಿಲ್ಲ. ಇದರಿಂದಾಗಿ ಈಗಿನ ವಿದ್ಯಾರ್ಥಿ ಪ್ರತಿಭಟನೆಗಳಲ್ಲಿ ಸ್ವಹಿತಾಸಕ್ತಿಯ ನೆರಳೂ ಇಲ್ಲ. ಅದೇ ಕಾರಣದಿಂದಾಗಿ, ಆ ಯುದ್ಧದಲ್ಲಿ ಯುಎಸ್ ನೇರವಾಗಿ ತೊಡಗಿದ್ದು, ಪ್ರತಿದಿನ ಅಮೆರಿಕನ್ ಸಿಬ್ಬಂದಿಯ ದೈನಂದಿನ ಸಾವು-ನೋವುಗಳು ವಿಯೆಟ್ನಾಂ ಯುದ್ಧವನ್ನು ಕೊನೆಗೊಳಿಸಬೇಕೆಂದು ಯುಎಸ್ ನ ಆಳುವ ವ್ಯವಸ್ಥೆಯೊಳಗಿಂದಲೂ ಬರುತ್ತಿದ್ದ ಕರೆಗಳಲ್ಲಿ ಇರುತ್ತಿದ್ದ ಗಂಭೀರತೆ ಈ ಬಾರಿ ಕಾಣುತ್ತಿಲ್ಲ. ಯುಎಸ್ ನೇರವಾಗಿ ಯುದ್ಧದಲ್ಲಿ ತೊಡಗಿಲ್ಲ ಎಂಬುದು ವಿದ್ಯಾರ್ಥಿಗಳ ಪ್ರತಿಭಟನೆಗಳನ್ನು ಹೆಚ್ಚು ತಾತ್ವಿಕ ಮತ್ತು ಗಂಭೀರವಾಗಿಸಿದರೆ, ಆಳುವ ವ್ಯವಸ್ಥೆಯೊಳಗಿಂದ ಶಾಂತಿಯ ಕುರಿತು ಬರುವ ಮಾತುಗಳು ಅಷ್ಟೇನೂ ತಾತ್ವಿಕವಾಗಿಲ್ಲ, ಗಂಭೀರವಾಗಿಯೂ ಇಲ್ಲ. ನರಮೇಧ

ಸಂಕ್ಷಿಪ್ತವಾಗಿ ಹೇಳುವುದಾದರೆ, ವಿದ್ಯಾರ್ಥಿಗಳ ನಡೆ ಶುದ್ಧ ಮಾನವೀಯತೆಯ ಪ್ರಜ್ಞೆಯಿಂದ ಕೂಡಿದೆ. ಅವರ ಪ್ರತಿಭಟನೆಗಳು ನೆಲಸಿಗ ವಸಾಹತುಶಾಹಿಯ ನರಮೇಧದ ಬಗ್ಗೆ ಮತ್ತು ಝಿಯೋನಿಸ್ಟ್ ಆಳ್ವಿಕೆಯೊಂದಿಗೆ ಸಾಮ್ರಾಜ್ಯಶಾಹಿಯ ಶಾಮೀಲಿನ ಬಗ್ಗೆ ಅಸಹ್ಯತೆಯ ಭಾವದಿಂದ ಪ್ರೇರಿತವಾಗಿವೆ; ಅವು ಶಾಂತಿ ಮತ್ತು ಭ್ರಾತೃತ್ವಕ್ಕಾಗಿ ಮಾನವ ಕುಲದ ಅನ್ವೇಷಣೆಯ ಅಭಿವ್ಯಕ್ತಿಯಾಗಿವೆ. ಮತ್ತೊಂದೆಡೆ, ಯುಎಸ್ ಆಳುವ ವ್ಯವಸ್ಥೆಯ ಮಾತುಗಳು ಇಬ್ಬಂದಿತನದಿಂದ ಕೂಡಿವೆ. ಶಾಂತಿಯ ಮಂತ್ರವನ್ನು ಪಠಿಸುತ್ತಲೇ, ಅದು ಸಂಘರ್ಷವನ್ನು ಉಲ್ಬಣಗೊಳಿಸಲು ಎಲ್ಲವನ್ನೂ ಮಾಡುತ್ತದೆ ; ಮುಗ್ಧ ನಾಗರಿಕರ ಮೇಲೆ ಕ್ರೌರ್ಯವನ್ನು ವಿರೋಧಿಸುತ್ತಲೇ, ಅಂತಹ ಕ್ರೌರ್ಯವನ್ನು ನಡೆಸಲುÄ ಶಸ್ತ್ರಾಸ್ತ್ರಗಳ ಪೂರೈಕೆಯನ್ನು ಮುಂದುವರಿಸುತ್ತದೆ. ಒಂದೆಡೆ, ವಿದ್ಯಾಥಿಗಳ ಕಡೆಯಿಂದ ಮಾನವೀಯತೆಗೆ ತದ್ವಿರುದ್ಧವಾಗಿ ಇನ್ನೊದೆಡೆಯಲ್ಲಿ ಕಾಣುತ್ತಿರುವುದು ಕುತರ್ಕ. ಮೊದಲನೆಯದು ಭವಿಷ್ಯದ ಭರವಸೆಯ ಮುನ್ಸೂಚನೆಯಾಗಿದ್ದರೆ, ಎರಡನೆಯದು ತತ್ತರಿಸುತ್ತಿರುವ ಸಾಮ್ರಾಜ್ಯಶಾಹಿಯ ಹತೋಟಿ ಮೀರಿದ ಅಪ್ರಾಮಾಣಿಕತೆಯನ್ನು ಪ್ರತಿನಿಧಿಸುತ್ತದೆ.

ಅಪ್ರಾಮಾಣಿಕತೆ ಪ್ರತಿ ಹಂತದಲ್ಲೂ

ಈ ಅಪ್ರಾಮಾಣಿಕತೆ ಪ್ರತಿ ಹಂತದಲ್ಲೂ ಪ್ರಕಟವಾಗಿದೆ. ಈಗ ಹಲವು ವರ್ಷಗಳಿಂದ, ಮೆಟ್ರೋಪಾಲಿಟನ್ ದೇಶಗಳು ಪ್ಯಾಲೇಸ್ಟಿನಿಯನ್ ಸಮಸ್ಯೆಗೆ “ಎರಡು-ಪ್ರಭುತ್ವ್ಯ”ದ ಪರಿಹಾರಕ್ಕೆ ಬದ್ಧವಾಗಿವೆ, ಅಂದರೆ, ಇಸ್ರೇಲ್ ಪ್ರಭುತ್ಬದ ಜೊತೆಗೆ ಪ್ಯಾಲೇಸ್ಟಿನಿಯನ್ ಪ್ರಭುತ್ವವನ್ನು ಹೊಂದುವುದು, ಇಲ್ಲಿ ” ಸಾರ್ವತ್ರಿಕ ವಯಸ್ಕ ಮತದಾನದ ಮೂಲಕ ಚುನಾಯಿತವಾದ ಕೇಂದ್ರ ಕಾರ್ಯಾಂಗವಿರುವ, ಅದರೊಳಗೇ ಪ್ಯಾಲೆಸ್ಟೀನಿಯನ್ನರು ಮತ್ತು ಇಸ್ರೇಲಿಗಳು ಒಂದೇ ಗಡಿಯೊಳಗೆ ಒಟ್ಟಿಗೆ ವಾಸಿಸುವ ಏಕಪ್ರಭುತ್ವದ” ಪರಿಹಾರ ಎರಡು-ಪ್ರಭುತ್ವಗಳ ಪರಿಹಾರಕ್ಕಿಂತ ಉತ್ತಮವಾಗಿದೆಯೇ ಎಂಬುದು ಮುಖ್ಯವಲ್ಲ; ಮುಖ್ಯ ವಿಷಯವೆಂದರೆ ಎರಡು-ಪ್ರಭುತ್ವ ಪರಿಹಾರವನ್ನು ದೀರ್ಘ ಕಾಲದಿಂದ ಅಂತರರಾಷ್ಟ್ರೀಯವಾಗಿ ಸ್ವೀಕರಿಸಲಾಗಿದೆ ಮತ್ತು ಸಾಮ್ರಾಜ್ಯಶಾಹಿ ರಾಷ್ಟ್ರಗಳು ಕೂಡ ಇದನ್ನು ಒಪ್ಪಿಕೊಂಡಿವೆ. ಎರಡು-ಪ್ರಭುತ್ವಗಳ ಪರಿಹಾರದ ಪ್ರಕಾರ ಪ್ಯಾಲೇಸ್ಟಿನಿಯನ್ ಪ್ರಭುತ್ವವು ತಕ್ಷಣವೇ ಅಸ್ತಿತ್ವಕ್ಕೆ ಬರಬೇಕು ಮತ್ತು ಅದು ವಿಶ್ವಸಂಸ್ಥೆಯ ಪೂರ್ಣ ಪ್ರಮಾಣದ ಸದಸ್ಯ ಎಂದು ಮಾನ್ಯತೆ ಪಡೆಯಬೇಕು. ಆದರೆ ಪ್ಯಾಲೆಸ್ತೀನನ್ನು ವಿಶ್ವಸಂಸ್ಥೆಯ ಪೂರ್ಣ ಸದಸ್ಯ ಎಂದು ಒಪ್ಪಿಕೊಳ್ಳುವ ಪ್ರಶ್ನೆ ಬಂದಾಗಲೆಲ್ಲಾ, ಯುಎಸ್, ಈ ಪರಿಕಲ್ಪನೆಗೆ ಬದ್ಧವಾಗಿದ್ದರೂ, ಈ ವಿಷಯದಲ್ಲಿ ಅಂತಿಮ ಅಧಿಕಾರವನ್ನು ಹೊಂದಿರುವ ಭದ್ರತಾ ಮಂಡಳಿಯಲ್ಲಿ ನಕಾರದ ತನ್ನ ವೀಟೋ ಅಧಿಕಾರವನ್ನು ಚಲಾಯಿಸಿದೆ. ನರಮೇಧ

ಏಪ್ರಿಲ್ 19 ರಂದು ಇದೇ ನಡೆದದ್ದು. ಇಸ್ರೇಲಿನ ಝಿಯೋನಿಸ್ಟ್ ಪ್ರಭುತ್ವ ಸ್ವತಂತ್ರ ಪ್ಯಾಲೇಸ್ಟಿನಿಯನ್ ಪ್ರಭುತ್ವವನ್ನು ಬಯಸುವುದಿಲ. ಏಕೆಂದರೆ ಅದು ಅದರ ನೆಲಸಿಗ ವಸಾಹತುಶಾಹಿ ಯೋಜನೆಯನ್ನು ಕೊನೆಗೊಳಿಸುತ್ತದೆ; ಈ ವಿಷಯ ಮುನ್ನೆಲೆಗೆ ಬಂದಾಗಾಲೆಲ್ಲ ಯುಎಸ್, ತನ್ನ ಸಾರ್ವಜನಿಕ ನಿಲುವಿನ ಹೊರತಾಗಿಯೂ, ಈ ಝಿಯೋನಿಸ್ಟ್ ಯೋಜನೆಯ ಪರವಾಗಿ ನಿಲ್ಲುತ್ತದೆ. ಮೇ 10 ರಂದು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು ಪ್ಯಾಲೆಸ್ಟೈನ್‌ನ ಪೂರ್ಣ ಸದಸ್ಯತ್ವದ ಪರವಾಗಿ ಮತ ಚಲಾಯಿಸಿತು ಮತ್ತು ಈ ವಿಷಯವನ್ನು ಮರುಪರಿಶೀಲಿಸುವಂತೆ ಭದ್ರತಾ ಮಂಡಳಿಯನ್ನು ವಿನಂತಿಸಿತು( ಪರವಾಗಿ 143, ವಿರುದ್ಧವಾಗಿ ಒಂಬತ್ತು ಮತ್ತು 25 ಗೈರುಹಾಜರಿಗಳೊಂದಿಗೆ). ಅದಕ್ಕೆ ಅರ್ಜೆಂಟೀನಾ ಮತ್ತು ಹಂಗರಿಯಂತಹ ವಿಶ್ವದ ಕೆಲವು ಬಲಪಂಥೀಯ ಆಡಳಿತಗಳೊಂದಿಗೆ ಯುಎಸ್ ವಿರುದ್ಧವಾಗಿ ಮತ ಚಲಾಯಿಸಿದರೆ, ಇತರ ಮೆಟ್ರೋಪಾಲಿಟನ್ ರಾಷ್ಟ್ರಗಳು (ಪರವಾಗಿ ಮತ ಚಲಾಯಿಸಿದ ಕೇವಲ ಫ್ರಾನ್ಸ್ ಅನ್ನು ಹೊರತುಪಡಿಸಿ) ಗೈರು ಹಾಜರಾದವು. ಈ ವಿಷಯವು ಭದ್ರತಾ ಮಂಡಳಿಯ ಮುಂದೆ ಮತ್ತೊಮ್ಮೆ ಬಂದಾಗ ಯುಎಸ್, ಖಂಡಿತವಾಗಿಯೂ ಮತ್ತೊಮ್ಮೆ ತನ್ನ ವೀಟೋವನ್ನು ಪ್ರಯೋಗಿಸುತ್ತದೆ, ಈ ಮೂಲಕ ಶಾಂತಿಯ ಯಾವುದೇ ಸಾಧ್ಯತೆಯನ್ನು ಮಾತ್ರವಲ್ಲದೆ, ಸಮಸ್ಯೆಯನ್ನು ಪರಿಹರಿಸಬೇಕೆಂಬ ವಿಶ್ವದ ಬಹುಜನರ ಇಚ್ಛೆಯನ್ನು ವಿಫಲಗೊಳಿಸುತ್ತದೆ.

ಅದೇ ಅಪ್ರಾಮಾಣಿಕತೆ ಯುಎಸ್ ಆಳುವ ವ್ಯವಸ್ಥೆ ವಿದ್ಯಾರ್ಥಿ ಚಳುವಳಿಯನ್ನು ಎದುರಿಸುವ ವಿಧಾನದಲ್ಲಿ ಗೋಚರಿಸುತ್ತದೆ. ಪ್ರತಿಭಟನೆಗಳು ಶಾಂತಿಯುತವಾಗಿದ್ದರೂ ಸಹ ವಿದ್ಯಾರ್ಥಿಗಳು ರಚಿಸಿಕೊಂಡಿದ್ದ ಶಿಬಿರಗಳನ್ನು ಒಡೆಯಲು ಹಲವಾರು ಕ್ಯಾಂಪಸ್‌ಗಳಿಗೆ ಪೊಲೀಸರನ್ನು ಕಳುಹಿಸಲಾಗಿದೆ ಮತ್ತು ನೂರಾರು ವಿದ್ಯಾರ್ಥಿ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಶಾಂತಿಯುತ ಪ್ರತಿಭಟನೆಗಳಿಗೆ ಎದುರಾಗಿ ಆಳುವ ವ್ಯವಸ್ಥೆಯು ಬಲವಂತದ ವಿಧಾನಗಳನ್ನು ಬಳಸಿರುವುದು ಅಭಿವ್ಯಕ್ತಿ ಸ್ವಾತಂತ್ರ‍್ಯದ ಮೇಲೆ ಆಕ್ರಮಣವನ್ನು ತೋರಿಸುತ್ತದೆ; ಆದರೆ ಡೊನಾಲ್ಡ್ ಟ್ರಂಪ್, ಬಿಡೆನ್‌ನಿಂದ ಹಿಲರಿ ಕ್ಲಿಂಟನ್‌ವರೆಗೆ ಇಡೀ ಅಮೇರಿಕನ್ ಆಳುವ ವ್ಯವಸ್ಥೆ ಇದನ್ನು ಸಮರ್ಥಿಸಿದೆ. ಡೊನಾಲ್ಡ್ ಟ್ರಂಪ್ ಅವರು “ತೀವ್ರವಾದಿ ಜನಜಂಗುಳಿ ನಮ್ಮ ಕಾಲೇಜು ಕ್ಯಾಂಪಸ್‌ಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿವೆ”, ಮತ್ತು ಬಿಡೆನ್ ಅಂತಹ “ಜನಜಂಗುಳಿ” ಯೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಅತ್ತ ಬಿಡೆನ್ “ಉದಾರವಾದಿ”ಗಳ ಸಾರ್ವತ್ರಿಕ ಅಭಿಪ್ರಾಯಕ್ಕೆ ಅನುಗುಣವಾಗಿ, ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಮಾಡಿರುವಂತೆ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಕ್ರಮವನ್ನು ಬಹಿರಂಗವಾಗಿ ಬೆಂಬಲಿಸುತ್ತ ಪ್ರತಿಭಟನಕಾರರ ಮೇಲೆ ಅವರು “ಯೆಹೂದಿ-ವಿರೋಧಿ”ಗಳು ಎಂಬ ವಿಲಕ್ಷಣ ಆರೋಪವನ್ನು ಸೇರಿಸಿದ್ದಾರೆ. ಈ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಸಂಖ್ಯೆಯ ಯಹೂದಿ ವಿದ್ಯಾರ್ಥಿಗಳೂ ಇದ್ದಾರೆ ಎಂಬುದು ಗಮನಾರ್ಹ. ಈ ವಿದ್ಯಾರ್ಥಿಗಳಿಗೆ ಮಧ್ಯಪ್ರಾಚ್ಯದ ಇತಿಹಾಸದ ಅರಿವಿಲ್ಲ ಎಂದು ಹಿüಲರಿ ಕ್ಲಿಂಟನ್ ಆರೋಪಿಸಿದ್ದಾರೆ, ಅಂತಹ ಇತಿಹಾಸದ ಅರಿವು ನರಮೇಧದ ಅಪರಾಧವನ್ನು ಕ್ಷಮಿಸಬಹುದೋ ಎಂಬಂತೆ! ನರಮೇಧ

ಇದನ್ನು ಓದಿ : ಕೊನೆಗೂ ಚುನಾವಣಾ ಆಯೋಗ ಮತದಾರರ ವಿವರಗಳನ್ನು ಪ್ರಕಟಿಸಿದೆ! ಏಕೆ?

ಹೊಸ ಮೆಕಾರ್ಥಿವಾದ

ವಿಯೆಟ್ನಾಂ ಯುದ್ಧ-ವಿರೋಧಿ ಆಂದೋಲನವು ಯುಜೀನ್ ಮೆಕಾರ್ಥಿ ಮತ್ತು ರಾಬರ್ಟ್ ಕೆನಡಿ ಅವರಂತಹ ಪ್ರಮುಖ ಅಮೇರಿಕನ್ ಸಾರ್ವಜನಿಕ ವ್ಯಕ್ತಿಗಳ ಬೆಂಬಲವನ್ನು ಒಂದು ಹಂತದಲ್ಲಿ ಪಡೆದುಕೊಂಡಿತು, ಆದರೆ ಅದು ಯುದ್ಧದಲ್ಲಿ ಅಮೆರಿಕ ನೇರವಾಗಿ ತೊಡಗಿಕೊಂಡದ್ದರಿAದಾಗಿ. ಪ್ರಸಕ್ತ ಸಂದರ್ಭದಲ್ಲಿ, ಆಳುವ ವ್ಯವಸ್ಥೆಯ ರಾಜಕಾರಣಿಗಳ ದಂಡಿಗೆ ದಂಡೇ ಯುದ್ಧದ ಪರವಾಗಿ ಮತ್ತು ವಿದ್ಯಾರ್ಥಿಗಳ ವಿರುದ್ಧ ಸಾಲುಗಟ್ಟಿ ನಿಂತಿದೆ.

ಇದೇ ರೀತಿಯ ವಿದ್ಯಾರ್ಥಿಗಳ ಪ್ರತಿಭಟನೆಗಳು ಮುಂದುವರೆದ ಬಂಡವಾಳಶಾಹಿ ಪ್ರಪಂಚದ ಬೇರೆಡೆಯೂ ಭುಗಿಲೆದ್ದಿವೆ ಮತ್ತು ಅನೇಕ ಕ್ಯಾಂಪಸ್‌ಗಳಲ್ಲಿ ಆಳುವವರು ಇದೇ ರೀತಿಯ ಬಲವಾದ ತೋಳ್ಬಲ ಪ್ರದರ್ಶನದ ತಂತ್ರಗಳನ್ನು ಬಳಸುತ್ತಿದ್ದಾರೆ. ಆದರೆ ಇದಕ್ಕೆ ವಿರೋಧದ ನಿದರ್ಶನಗಳೂ ಕಂಡುಬಂದಿವೆ. ಉದಾಹರಣೆಗೆ ಬ್ರಿಟನ್‌ನಲ್ಲಿ ಇಂತಹ ಪ್ರತಿಭಟನೆಗಳನ್ನು ಕಂಡ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳಿಗೆ ಪ್ರಧಾನ ಮಂತ್ರಿ ರಿಷಿ ಸುನಕ್ ಪ್ರಭುತ್ವ ಯಂತ್ರವನ್ನು ಬಳಸಿ ಅವುಗಳನ್ನು ಒಡೆಯಲು ಸಲಹೆ ನೀಡಿರುವುದು ಎಲ್ಲಾ ಉಪಕುಲಪತಿಗಳಿಗೆ ಸರಿ ಹೋಗಿಲ್ಲ; ಕೆಲವರು ಅವರು ಕರೆದ ಸಭೆಗೆ ಹಾಜರಾಗಲು ನಿರಾಕರಿಸಿದ್ದಾರೆ. ಆದರೆ ಅಮೆರಿಕದಲ್ಲಿ ಅಂತಹ ವಿರೋಧ ಬಂದಿಲ್ಲ; ಪ್ರತಿಭಟನೆಗಳನ್ನು ಹೇಗೆ ಎದುರಿಸಬೇಕೆಂಬುದರ ಬಗ್ಗೆ ತಮ್ಮದೇ ಆದ ತೀರ್ಮಾನವನ್ನು ಪ್ರತಿಪಾದಿಸಲು ಪ್ರಯತ್ನಿಸುತ್ತಿರುವ ವಿಶ್ವವಿದ್ಯಾಲಯದ ಮುಖ್ಯಸ್ಥರು ರಾಜೀನಾಮೆ ನೀಡುವಂತೆ ಬಲವಂತ ಪಡಿಸಲಾಗಿದೆ.

ಕ್ಯಾಂಪಸ್‌ಗಳಲ್ಲಿನ ಈ ರೀತಿಯ ಚಿಂತನೆಯ ನಿಗ್ರಹದಿಂದ ಯುಎಸ್‌ನಲ್ಲಿ ಹೊಸ ಮೆಕಾರ್ಥಿವಾದವನ್ನು ಹರಿಬಿಡಲಾಗಿದೆ ಎಂಬ ಆರೋಪ ಬಂದಿದೆ. ಆಗಲೂ ಈಗಿನಂತೆ ಕ್ಯಾಂಪಸ್‌ಗಳಲ್ಲಿ ಸ್ವತಂತ್ರ ಚಿಂತನೆಯನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ಬಲಪಂಥೀಯ ಶಾಸಕರ ಗುಂಪು ಮುಂಚೂಣಿಯಲ್ಲಿತ್ತು. ಆದರೆ ಒಂದು ಪ್ರಶ್ನೆ ಉದ್ಭವಿಸುತ್ತದೆ: 1950 ರ ದಶಕದಲ್ಲಿ ಶೀತಲ ಸಮರ ಮತ್ತು ಕಮ್ಯುನಿಸಂನ ಭಯವು ಮೆಕಾರ್ಥಿವಾದಕ್ಕೆ ಅವಕಾಶವನ್ನು ಒದಗಿಸಿತ್ತು. ಆದರೆ ಪ್ರಸಕ್ತ ಸಂದರ್ಭದಲ್ಲಿ ಈ ಹೊಸ ಮೆಕಾರ್ಥಿವಾದಕ್ಕೆ ಚಾಲನೆ ನೀಡುವಂತದ್ದಾದರೂ ಏನು?

ನವ-ಉದಾರವಾದಿ ಬಂಡವಾಳಶಾಹಿಯ ಬಿಕ್ಕಟ್ಟಿನ ಸಂದರ್ಭದಲ್ಲಿ ಬಲಪಂಥೀಯರ ಉದಯ ಮತ್ತು ಬಂಡವಾಳಶಾಹಿ ಜಗತ್ತಿನಲ್ಲಿ ನವ-ಫ್ಯಾಸಿಸಂನ ಆರೋಹಣಕ್ಕೂ ಮತ್ತು ಹೊಸ ಮೆಕಾರ್ಥಿವಾದಕ್ಕೂ ಸಂಬಂಧವಿದೆ ಎಂಬುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ. ನವ-ಫ್ಯಾಸಿಸಂನ ಉದಯವು ಇಲ್ಲಿಯವರೆಗೆ ರಾಜಕೀಯ ಅಂಚಿನಲ್ಲಿದ್ದ ಫ್ಯಾಸಿಸ್ಟ್ ಅಂಶಗಳನ್ನು ರಂಗಸ್ಥಳದ ಮಧ್ಯಕ್ಕೆ ತಳ್ಳಿರುವುದಷ್ಟೇ ಅಲ್ಲ, ಅಂತಹವರು ತಥಾಕಥಿತ “ಉದಾರವಾದಿ” ರಾಜಕೀಯ ಶಕ್ತಿಗಳ ಮೇಲೂ ಪ್ರಾಬಲ್ಯ ಸಾಧಿಸಲು ಅವಕಾಶ ನೀಡಿದೆ. ಆಮೂಲಕ ಎಡಪಂಥದ ಪುನರುಜ್ಜೀವನದ ಎಲ್ಲಾ ಪ್ರಯತ್ನಗಳನ್ನು ಸೋಲಿಸುವ ಒಂದು ಏಕೀಕೃತ ಬಲಪಂಥೀಯ ಒಮ್ಮತವೊಂದನ್ನು ಸೃಷ್ಟಿಸಿರುವಂತೆ ಕಾಣುತ್ತದೆ.

ಯೆಹೂದಿವಿರೋಧಿಎಂಬ ಹಣೆಪಟ್ಟಿ

ಜೆರೆಮಿ ಕಾರ್ಬಿನ್ ಅವರು ಬ್ರಿಟನ್‌ನಲ್ಲಿ ಲೇಬರ್ ಪಕ್ಷದ ನಾಯಕರಾಗಿ ಆಯ್ಕೆಯಾಗಿ ಆಳುವ ವ್ಯವಸ್ಥೆಯ ವಿರುದ್ಧ ಸವಾಲು ಹಾಕಿದಾಗ ಪರಿಸ್ಥಿತಿ “ಕೈಮೀರಿ ಹೋಗುತ್ತಿದೆ” ಎಂದು ಬೆದರಿಕೆ ಉಂಟಾದ್ದರಿಂದ ಅವರ ವಿರುದ್ಧ ಒಂದು ಪಿತೂರಿ ನಡೆಸಲಾಯಿತು, ಅವರು ಪ್ಯಾಲೆಸ್ತೀನಿ ಗುರಿಯ ಬಗ್ಗೆ ಸಹಾನುಭೂತಿ ಹೊಂದಿದ್ದರಿಂದ, ಅವರಿಗೆ “ಯೆಹೂದಿ-ವಿರೋಧಿ” ಎಂಬ ಹಣೆಪಟ್ಟಿ ಹಚ್ಚಲಾಯಿತು ಮತ್ತು ಲೇಬರ್ ಪಾರ್ಟಿಯಿಂದಲೇ ಅವರನ್ನು ತೆಗೆದುಹಾಕಲಾಯಿತು ಎಂಬುದು ಗಮನಾರ್ಹ.

ವಿಶ್ವವಿದ್ಯಾನಿಲಯಗಳಲ್ಲಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈಗಲೂ ಮೆಟ್ರೊಪಾಲಿಟನ್(ಮುಂದುವರೆದ ಬಂಡವಾಳಶಾಹಿ) ದೇಶಗಳಲ್ಲಿ ಚಿಂತನೆಯ ಒಂದು ಸ್ವತಂತ್ರ ಮೂಲವಾಗಿದ್ದಾರೆ, ಆಮೂಲಕ ಬಲಪಂಥೀಯ ಕ್ರೋಢೀಕರಣಕ್ಕೆ ಬೆದರಿಕೆ ಒಡ್ಡಿರುವ ನೈತಿಕ ಶಕ್ತಿಯಾಗಿದ್ದಾರೆ. ಆದ್ದರಿಂದ ವಿಶ್ವವಿದ್ಯಾನಿಲಯಗಳ ಮೇಲಿನ ನಿಯಂತ್ರಣವು ಈ ಬಲಪಂಥೀಯ ಕ್ರೋಡೀಕರಣದ ಕಾರ್ಯಸೂಚಿಯಲ್ಲಿ ಪ್ರಮುಖ ಅಂಶವಾಗಿದೆ. ಈ ಬಲಪಂಥೀಯ ಕ್ರೋಡೀಕರಣವು ತಾನು ಬಯಸಿದ್ದನ್ನು ಈಡೇರಿಸಿಕೊಳ್ಳಬೇಕಾದರೆ ಸ್ವತಂತ್ರ ಚಿಂತನೆಯನ್ನು ನಾಶಪಡಿಸಬೇಕು, ಮಾನವೀಯತೆಯ ಪ್ರತಿಯೊಂದು ಕುರುಹು ಕೂಡ ನಾಶವಾಗಬೇಕು. ಇಂದು ನಾವು ಯುಎಸ್‌ನಲ್ಲಿ ಕಾಣುತ್ತಿರುವುದು ಚಿಂತನೆಯ ಸ್ವಾತಂತ್ರ‍್ಯವನ್ನು ನಾಶಮಾಡುವ ಒಂದು ಲಜ್ಜೆಗೆಟ್ಟ ಪ್ರಯತ್ನವನ್ನು. ನರಮೇಧ

ನರಮೇಧವನ್ನು ಪ್ರತಿಭಟಿಸುವುದಕ್ಕೆ ಯೆಹೂದಿ-ವಿರೋಧಿ ನಿಲುವು ಎಂಬ ಹಣೆಪಟ್ಟಿ ಅಚಿಟಿಸಲಾಗಿದೆ. ಜೆರೆಮಿ ಕಾರ್ಬಿನ್ ಯೆಹೂದಿ-ವಿರೋಧಿಯಾಗಿರಲಿಲ್ಲ, ವಿದ್ಯಾರ್ಥಿಗಳು ಕೂಡ ಯೆಹೂದಿ-ವಿರೋಧಿಗಳಲ್ಲ. ವಾಸ್ತವವಾಗಿ ಅವರ ವಿರೋಧಿಗಳಲ್ಲೇ ದೇಶ- ವಿದೇಶಗಳಲ್ಲಿನ ಯೆಹೂದ್ಯ ವಿರೋಧಿ ಚಳುವಳಿಗಳೊಂದಿಗೆ ಸಂಪರ್ಕವನ್ನು ಹೊಂದಿರುವವರನ್ನು (ನಾಜಿ ಆಕ್ರಮಣಕಾರರೊಂದಿಗೆ ಸಹಕರಿಸಿದ ಉಕ್ರೇನ್‌ನ ಸ್ಟೆಪನ್ ಬಂಡೇರಾ ಪ್ರಾರಂಭಿಸಿದ ಚಳುವಳಿಯಂತೆ) ಕಾಣಬಹುದು. ಆದರೂ “ ಯೆಹೂದಿ-ವಿರೋಧಿ ‘ಎಂಬ ಹಣೆಪಟ್ಟಿಯನ್ನು ಮೆಟ್ರೋಪಾಲಿಟನ್ ದೇಶಗಳಲ್ಲಿ ಬಲಪಂಥೀಯ ಕ್ರೋಡೀಕರಣಕ್ಕೆ ಒಂದು ಆಯುಧವನ್ನಾಗಿ ಮಾಡಲಾಗುತ್ತಿದೆ.

ಆದ್ದರಿಂದ ಯುಎಸ್ ಕ್ಯಾಂಪಸ್‌ಗಳಲ್ಲಿ ನಡೆಯುತ್ತಿರುವುದು ಬಹಳ ಮಹತ್ವದ್ದಾಗಿದೆ. ಇಂದು ಕ್ಯಾಂಪಸ್‌ಗಳಲ್ಲಿ ಮಾನವೀಯತೆ ಮತ್ತು ಕುತರ್ಕದ ನಡುವೆ ನಡೆಯುತ್ತಿರುವ ಹೋರಾಟವು ಮುಂದಿನ ದಿನಗಳಲ್ಲಿ ನಿರ್ಣಾಯಕ ವರ್ಗ ಹೋರಾಟಗಳ ಮುನ್ಸೂಚನೆಯಾಗಿದೆ. ನರಮೇಧ

ಇದನ್ನು ನೋಡಿ : ಬಿಜೆಪಿ ಸೋತರೆ, ಮೋದಿ ಸುಲಭವಾಗಿ ಅಧಿಕಾರ ಬಿಟ್ಟುಕೊಡುವರೇ? Janashakthi Media

 

Donate Janashakthi Media

Leave a Reply

Your email address will not be published. Required fields are marked *