ಹೂಡಿಕೆಯ ಸಮಾಜೀಕರಣವಷ್ಟೇ ಸಾಕಾಗುತ್ತದೆಯೇ?

ಪ್ರೊ. ಪ್ರಭಾತ್ ಪಟ್ನಾಯಕ್

ಬಂಡವಾಳಶಾಹಿ ವ್ಯವಸ್ಥೆಯೊಳಗಿನ ದೋಷಗಳನ್ನು ನಿವಾರಿಸಲು ಹೂಡಿಕೆಯ ಸಮಾಜೀಕರಣವಷ್ಟೇ ಸಾಕಾಗುತ್ತದೆ; ಆದ್ದರಿಂದ, ಸಮಾಜವಾದಿ ಪದ್ಧತಿಯ ರೀತಿಯ ಉತ್ಪಾದನಾ ಸಾಧನಗಳ ಒಡೆತನವನ್ನು ಸಾಮಾಜಿಕಗೊಳಿಸುವುದು ಅನಗತ್ಯವಾಗುತ್ತದೆ ಎಂದು ಕೀನ್ಸ್ ಭಾವಿಸಿದ್ದರು. ಆದರೆ ಅವರ ಸಮಯದಲ್ಲೂ ಸಹ, ಅನೇಕ ವಿಶ್ಲೇಷಕರು, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕೀನ್ಸ್ ಅವರು ಸೂಚಿಸಿದ ಹೂಡಿಕೆಯ ಸಮಾಜೀಕರಣದ ಪರಿಹಾರವು ಅಸಮರ್ಪಕವಾಗಿದೆ, ಅದು ಬೃಹತ್ ಪ್ರಮಾಣದ ನಿರುದ್ಯೋಗವನ್ನು ನಿವಾರಿಸಲು ಸಾಕಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು. ಕೀನ್ಸ್ ಅವರು ಸೂಚಿಸಿದ ಪರಿಹಾರವು ಕಾರ್ಯಸಾಧ್ಯವಲ್ಲ ಎಂಬುದನ್ನು ಅವರ ಕಾಲದಿಂದಲೂ ಹಿಡಿದು ಹಲವಾರು ವರ್ಷಗಳ ಪ್ರತ್ಯಕ್ಷ ಅನುಭವವೂ ತೋರಿಸಿಕೊಟ್ಟಿದೆ. ಬಂಡವಾಳಶಾಹಿ ಅರ್ಥವ್ಯವಸ್ಥೆಯ ಕಾರ್ಯವಿಧಾನವೇ, ಅದು ವರ್ಗ ವೈಷಮ್ಯವನ್ನು ಆಧರಿಸಿದೆ ಎಂಬ ಅರ್ಥದಲ್ಲಿ, ದೋಷಪೂರಿತವಾಗಿದೆ. ಆದ್ದರಿಂದ, ಈ ವ್ಯವಸ್ಥೆಯನ್ನು ಅದರ ದೋಷಪೂರಿತ ಕಾರ್ಯನಿರ್ವಹಣೆಯಿಂದ ರಕ್ಷಿಸಬಹುದು ಎಂದು ನಂಬುವುದು ಒಂದು ಹುಚ್ಚು ಕಲ್ಪನೆಯಾಗುತ್ತದೆ.

ಜಾನ್ ಮೇನಾರ್ಡ್ ಕೀನ್ಸ್, ಇಪ್ಪತ್ತನೇ ಶತಮಾನ ಕಂಡ ಅತ್ಯಂತ ಹೆಚ್ಚಿನ ಮಟ್ಟದ ಸೂಕ್ಷ್ಮದೃಷ್ಟಿಯುಳ್ಳ ಒಬ್ಬ ಬೂರ್ಜ್ವಾ ಅರ್ಥಶಾಸ್ತ್ರಜ್ಞರಾಗಿದ್ದರು. ಅವರು ಮಹಾ ಆರ್ಥಿಕ ಕುಸಿತ ಸಂಭವಿಸುತ್ತಿದ್ದ ಸಮಯದಲ್ಲಿ ಮತ್ತು ರಷ್ಯಾದ ಬೋಲ್ಶೆವಿಕ್ ಕ್ರಾಂತಿ ಸಂಭವಿಸಿದ ಹಿನ್ನೆಲೆಯಲ್ಲಿ ಬರೆಯುತ್ತಿದ್ದುದರಿಂದ, ಕೇವಲ ವ್ಯವಸ್ಥೆಯ ಒಬ್ಬ ಸಮರ್ಥಕರಾಗಿ ಕಾಣಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಮಹಾ ಕುಸಿತದಂಥಹ ಒಂದು ಕಾಲಘಟ್ಟದಲ್ಲಿ, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಾಗಿದೆ ಎಂದು ಸೋಗುಹಾಕುವುದು ಅವರು ಮನಃಪೂರ್ವಕವಾಗಿ ಇಷ್ಟಪಡುತ್ತಿದ್ದ ಆ ವ್ಯವಸ್ಥೆಗೆ ಅವರು ಬಗೆವ ಬಹು ದೊಡ್ಡ ಅಪಚಾರವಾಗುತ್ತಿತ್ತು. ಹಾಗಾಗಿ, ಅವರಿಗೆ ಆ ವ್ಯವಸ್ಥೆಯ ದೋಷಗಳನ್ನು ಪ್ರಾಮಾಣಿಕವಾಗಿ ಗುರುತಿಸಿ ಅವುಗಳಿಗೆ ತೇಪೆ ಹಾಕಲು ಪ್ರಯತ್ನಿಸುವ ಕ್ರಮವೇ ಆ ವ್ಯವಸ್ಥೆಯನ್ನು ಉಳಿಸುವ ಅತ್ಯುತ್ತಮ ಮಾರ್ಗವಾಗಿತ್ತು.

ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕೀನ್ಸ್ ಗುರುತಿಸಿದ ಮುಖ್ಯ ದೋಷವೆಂದರೆ, ಸಾಮೂಹಿಕ ನಿರುದ್ಯೋಗದ ಹೊರೆ. ಬಹುತೇಕ ನಿರಂತರವಾಗಿ ಮತ್ತು ಅನಿವಾರ್ಯವಾಗಿ ನಿರುದ್ಯೋಗವನ್ನೇ ಮೈವೆತ್ತ ಬಂಡವಾಳಶಾಹಿಯ ಈ ದೋಷವು ವ್ಯವಸ್ಥೆಯನ್ನು ತಿರಸ್ಕಾರಕ್ಕೆ ಗುರಿಪಡಿಸುತ್ತದೆ ಮತ್ತು ಆ ಕಾರಣದಿಂದಾಗಿ ಈ ವ್ಯವಸ್ಥೆಯನ್ನೇ ದಾಟಿ ಹೋಗಬೇಕಾಗಬಹುದು ಎಂದು ಅವರು ಭಯಪಟ್ಟರು. ಇಂತಹ ಬೃಹತ್ ಪ್ರಮಾಣದ ನಿರುದ್ಯೋಗಕ್ಕೆ ಕಾರಣವೆಂದರೆ, ಬಂಡವಾಳ ಹೂಡಿಕೆಯ ನಿರ್ಧಾರಗಳನ್ನು ಒಂದಿಷ್ಟು ಮಂದಿ ಬಂಡವಾಳಶಾಹಿಗಳು ಖಾಸಗಿಯಾಗಿ ಮತ್ತು ಪ್ರತ್ಯೇಕವಾಗಿ ಕೈಗೊಳ್ಳುವುದರಿಂದ, ಒಟ್ಟಾರೆ ಹೂಡಿಕೆಯ ಗಾತ್ರವು ದೊಡ್ಡದಾಗಿರುವುದು ಶಕ್ಯವಿಲ್ಲ. ಪೂರ್ಣ ಉದ್ಯೋಗದ ಪರಿಸ್ಥಿತಿಯಲ್ಲಿ ಉತ್ಪಾದಿಸಬಹುದಾದ ಉತ್ಪತ್ತಿ ಮತ್ತು ಆ ಉತ್ಪತ್ತಿಯನ್ನು ನಿಜಕ್ಕೂ ಉತ್ಪಾದಿಸಿದರೆ ಸಂಭವಿಸುವ ಬಳಕೆ ಇವುಗಳ ನಡುವಿನ ವ್ಯತ್ಯಾಸವನ್ನು ವ್ಯಾಪಿಸುವಷ್ಟು ದೊಡ್ಡದಾಗಿರಲು ಎಂದಿಗೂ ಸಾಧ್ಯವಿಲ್ಲ. ಈ ಅಂಶವೇ, ಪೂರ್ಣ ಉದ್ಯೋಗದ ಉತ್ಪಾದನೆಗೆ ಒದಗಬಹುದಾದ ಒಟ್ಟಾರೆ ಬೇಡಿಕೆಯಲ್ಲಿ ಕೊರೆಯುಂಟಾಗಲು ಕಾರಣವಾಗಿದೆ. ಆದ್ದರಿಂದ, ಹೂಡಿಕೆಯ ಹಿಂದಿರುವ ಈ ಅಂಶವು ಪೂರ್ಣ ಉದ್ಯೋಗದ ಸನ್ನಿವೇಶ ಸಾಕಾರಗೊಳ್ಳದಂತೆ ತಡೆದಿದೆ. (ಏಕೆಂದರೆ, ಯಾವುದೇ ಒಂಟಿ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಸಾಧಿಸಿದ ಉತ್ಪಾದನೆಯು, ಬಳಕೆ ಮತ್ತು ಹೂಡಿಕೆಯ ಮೊತ್ತಕ್ಕೆ ಸಮಾನವಾಗಿರಬೇಕು).

ಇದನ್ನು ಓದಿ: ಸಂಪ್ರದಾಯಶರಣ ಆರ್ಥಿಕ ನೀತಿಯ ಅಸಂಬದ್ಧತೆ – ಬಂಡವಾಳಶಾಹಿಗಳಿಗೂ ಈಗ ಗೋಚರಿಸುತ್ತಿದೆ

ಹಾಗಾಗಿ, ಬಂಡವಾಳ ಹೂಡಿಕೆಯ ನಿರ್ಧಾರಗಳನ್ನು ಸಾಮಾಜಿಕಗೊಳಿಸಲು ಕೀನ್ಸ್ ಸಲಹೆ ನೀಡಿದರು. ಅಂದರೆ, ಹಣಕಾಸು ನೀತಿ ಮತ್ತು ವಿತ್ತ ನೀತಿ ಈ ಎರಡೂ ನೀತಿಗಳ ಸಂಯೋಜನೆಯ ಮೂಲಕ ಪ್ರಭುತ್ವವು, ಪೂರ್ಣ ಉದ್ಯೋಗದ ಉತ್ಪತ್ತಿ ಮತ್ತು ಆ ಉತ್ಪತ್ತಿಯಿಂದ ಸಂಭವಿಸುವ ಬಳಕೆ ಇವುಗಳ ನಡುವಿನ ವ್ಯತ್ಯಾಸವನ್ನು ಒಳಗೊಳ್ಳುವಷ್ಟು ದೊಡ್ಡದಾದ ಹೂಡಿಕೆಯನ್ನು “ಸಮಾಜ”ದ ಪರವಾಗಿ ಖಚಿತಪಡಿಸಿಕೊಳ್ಳಲು ಸಾಧ್ಯವಾದರೆ, ಆಗ ವ್ಯವಸ್ಥೆಯು ಸಮರ್ಪಕವಾಗಿ ಕಾರ್ಯನಿರ್ವಹಿಸಬಲ್ಲದು ಎಂದು ಅವರು ಅಭಿಪ್ರಾಯ ಪಟ್ಟಿದ್ದರು.

ಬಂಡವಾಳಶಾಹಿ ವ್ಯವಸ್ಥೆಯೊಳಗಿನ ದೋಷಗಳನ್ನು ನಿವಾರಿಸಲು ಹೂಡಿಕೆಯ ಸಮಾಜೀಕರಣವಷ್ಟೇ ಸಾಕಾಗುತ್ತದೆ. ಆದ್ದರಿಂದ, ಸಮಾಜವಾದಿ ಪದ್ಧತಿಯ ರೀತಿಯ ಉತ್ಪಾದನಾ ಸಾಧನಗಳ ಒಡೆತನವನ್ನು ಸಾಮಾಜಿಕಗೊಳಿಸುವುದು ಅನಗತ್ಯವಾಗುತ್ತದೆ ಎಂದು ಕೀನ್ಸ್ ಭಾವಿಸಿದ್ದರು. ಈ ಬಗ್ಗೆ ಅವರು ಹೇಳಿರುವ ಮಾತುಗಳನ್ನು ಇಲ್ಲಿ ಉದ್ಧರಿಸುವುದಾದರೆ: “ಉತ್ಪಾದನಾ ಸಾಧನಗಳ ಒಡೆತನವೇ ಮುಖ್ಯ ಎಂದು ಪ್ರಭುತ್ವವು ಭಾವಿಸಿಕೊಳ್ಳಬೇಕಿಲ್ಲ. ಉತ್ಪಾದನಾ ಸಾಧನಗಳನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿಯೇ ಬೇಕಾಗುವ ಸಂಪನ್ಮೂಲಗಳ ಪ್ರಮಾಣ ಎಷ್ಟೆಂಬುದನ್ನು ಮತ್ತು ಈ ಸಾಧನಗಳನ್ನು ಹೊಂದಿರುವವರಿಗೆ ಸಲ್ಲಬೇಕಾದ ಪ್ರತಿಫಲದ ಮೂಲ ದರ ಎಷ್ಟೆಂಬದನ್ನು ನಿರ್ಧರಿಸುವುದು ಪ್ರಭುತ್ವಕ್ಕೆ ಸಾಧ್ಯವಾದರೆ, ಅಗತ್ಯವಿರುವ ಎಲ್ಲವನ್ನೂ ಸಾಧಿಸಿದಂತಾಗುತ್ತದೆ.”

ಕೀನ್ಸ್ ಬರೆಯುತ್ತಿದ್ದ ಸಮಯದಲ್ಲೂ ಸಹ, ಮಾರ್ಕ್ಸ್ ವಾದಿ ಪರಂಪರೆಗೆ ಸೇರಿದ ಅನೇಕ ಲೇಖಕರು, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕೀನ್ಸ್ ಅವರು ಸೂಚಿಸಿದ ಹೂಡಿಕೆಯ ಸಮಾಜೀಕರಣದ ಪರಿಹಾರವು ಅಸಮರ್ಪಕವಾಗಿದೆ ಮತ್ತು ಅದು ಬೃಹತ್ ಪ್ರಮಾಣದ ನಿರುದ್ಯೋಗವನ್ನು ನಿವಾರಿಸಲು ಸಾಕಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ಕೀನ್ಸ್ ಅವರು ಸೂಚಿಸಿದ ಪರಿಹಾರವು ಕಾರ್ಯಸಾಧ್ಯವಲ್ಲ ಎಂಬುದನ್ನು ಅವರ ಕಾಲದಿಂದಲೂ ಹಿಡಿದು ಹಲವಾರು ವರ್ಷಗಳ ಪ್ರತ್ಯಕ್ಷ ಅನುಭವವೂ ತೋರಿಸಿಕೊಟ್ಟಿದೆ.

ಬಂಡವಾಳಶಾಹಿಯ ಅಡಿಯಲ್ಲಿ ಕೇವಲ ಅಸಮರ್ಪಕ ಬೇಡಿಕೆಯಿಂದಾಗಿ ಸಾಮೂಹಿಕ ನಿರುದ್ಯೋಗ ಸೃಷ್ಟಿಯಾಗುವುದಿಲ್ಲ. ಕನಿಷ್ಠ ಪ್ರಮಾಣದ ಸಾಮೂಹಿಕ ನಿರುದ್ಯೋಗ, ಅಥವಾ ಮಾರ್ಕ್ಸ್ ಯಾವುದನ್ನು ಒಂದು “ಕಾರ್ಮಿಕರ ಮೀಸಲು ಸೈನ್ಯ” ಎಂದು ಕರೆದರೋ ಅದು ವ್ಯವಸ್ಥೆಯ ಮುಂದುವರಿಕೆಗೆ ಅಗತ್ಯವಾಗುತ್ತದೆ. ಬಂಡವಾಳಶಾಹಿ ವ್ಯವಸ್ಥೆಯ ಅಡಿಯಲ್ಲಿ ಸಾಮೂಹಿಕ ನಿರುದ್ಯೋಗವು ಒಂದು ದೋಷವೇ ಅಲ್ಲ; ಅದರ ಕಾರ್ಯವಿಧಾನದ ಒಂದು ಭಾಗವೇ ಆಗಿದೆ. 1930ರ ದಶಕದ ಮಹಾ ಕುಸಿತದ ಸಮಯದಲ್ಲಿ ಕಂಡುಬಂದ ಅಗಾಧ ನಿರುದ್ಯೋಗ, ಅಥವಾ ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಕಂಡುಬರುವ ಸಾಮಾನ್ಯ ಮಟ್ಟದ ಸಾಮೂಹಿಕ ನಿರುದ್ಯೋಗವನ್ನು ಪ್ರಭುತ್ವವು ಒಟ್ಟು ಬೇಡಿಕೆಯನ್ನು ಉತ್ತೇಜಿಸುವ ಮೂಲಕ ಕಡಿಮೆ ಮಾಡಬಹುದು ಎಂಬುದು ನಿಜವೇ. ಸಾಂಪ್ರದಾಯಿಕ ಬಂಡವಾಳಶಾಹಿಯು, ವಾಸ್ತವವಾಗಿ, ಒಂದು “ಬೇಡಿಕೆ-ನಿರ್ಬಂಧಿತ ವ್ಯವಸ್ಥೆ” ಎಂಬುದನ್ನು ಪೋಲಿಷ್ ಮಾರ್ಕ್ಸ್ ವಾದಿ ಅರ್ಥಶಾಸ್ತ್ರಜ್ಞ ಮೈಕೆಲ್ ಕಲೆಕಿ ಹೇಳಿದ್ದರು. ಆದರೆ, ಬೇಡಿಕೆಯನ್ನು ಹೆಚ್ಚಿಸುತ್ತಲೇ ಹೋದರೆ, ನಿರುದ್ಯೋಗವು ಸ್ವಲ್ಪ ಮಟ್ಟಿಗೆ ಇಳಿಕೆಯಾದ ನಂತರದಲ್ಲಿ ಭಾರಿ ಹಣದುಬ್ಬರ ಇರುತ್ತದೆ.

ನಿರುದ್ಯೋಗ ಇಳಿಕೆಯಾದ ನಂತರ ಹಣದುಬ್ಬರ ಉಂಟಾಗುವ ಕಾರಣ ಹೀಗಿದೆ: ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ “ಕಾರ್ಮಿಕರ ಮೀಸಲು ಸೈನ್ಯ”ವು, ಕಾರ್ಮಿಕರು ತಮ್ಮ ವೇತನವನ್ನು ಹೆಚ್ಚಿಸುವಂತೆ ಕೇಳುವ ಅವರ ಚೌಕಾಶಿಯ ಹಕ್ಕಿನ ಶಕ್ತಿಯನ್ನು ತಗ್ಗಿಸುವಲ್ಲಿ ಒಂದು ಪ್ರಭಾವಶಾಲಿ ಅಂಶವಾಗಿ ಕೆಲಸ ಮಾಡುತ್ತದೆ. ಹಾಗಾಗಿ, ಸಾಮೂಹಿಕ ನಿರುದ್ಯೋಗವನ್ನು ಒಂದು ನಿರ್ದಿಷ್ಟ ಮಟ್ಟಕ್ಕಿಂತ ಕಡಿಮೆ ಮಾಡುವುದರಿಂದ, ಯಾವ ಉದ್ದೇಶಕ್ಕಾಗಿ ಕಾರ್ಮಿಕರ ಮೀಸಲು ಸೈನ್ಯವನ್ನು ಬೆಳೆಸಲಾಗಿತ್ತೋ ಆ ಉದ್ದೇಶದ ಈಡೇರಿಕೆಯಾಗುವುದಿಲ್ಲ. ಬದಲಿಗೆ, ಕಾರ್ಮಿಕರ ಚೌಕಾಶಿಯ ಬಲ ಹೆಚ್ಚುತ್ತದೆ. ಉತ್ಪಾದನೆಯನ್ನು ಹೆಚ್ಚಿಸುವ ನೆಲೆಯಲ್ಲಿ ಕಾರ್ಮಿಕರು ಹೆಚ್ಚಿನ ಹಣ ವೇತನವನ್ನು (ಕಾರ್ಮಿಕ ಉತ್ಪಾದಕತೆಯ ಬೆಳವಣಿಗೆಯ ದರಕ್ಕಿಂತ ಹೆಚ್ಚಿನದನ್ನು) ಕೇಳುತ್ತಾರೆ. ಆದರೆ, ಉತ್ಪಾದನೆಯ ಹೆಚ್ಚಳದಲ್ಲಿ ಕಾರ್ಮಿಕರ ಕೊಡುಗೆಯನ್ನು ಒಪ್ಪಿಕೊಳ್ಳಲು ಇಷ್ಟಪಡದ ಕಾರಣದಿಂದಾಗಿ ಬಂಡವಾಳಗಾರರು, ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸುತ್ತಾರೆ. ಹಾಗಾಗಿ, ಉತ್ಪಾದನೆಯ ವೆಚ್ಚದಲ್ಲಿ ವೇತನದ ಪಾಲು ಹೆಚ್ಚುವುದಿಲ್ಲ. ಇದು ಹಣದುಬ್ಬರಕ್ಕೆ ಕಾರಣವಾಗುತ್ತದೆ. ಕಾರ್ಮಿಕರು ಒಂದು ವೇಳೆ ಹೆಚ್ಚಿನ ಪಾಲು ಪಡೆಯುವ ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದೇ ಆದರೆ, ಆಗ, ಹಣದುಬ್ಬರವು ನಿರಂತರವಾಗುತ್ತದೆ. ಹಣದುಬ್ಬರವನ್ನು ನಿರೀಕ್ಷಿಸಿದ ಕಾರ್ಮಿಕರು, ಅದನ್ನು ತಮ್ಮ ವೇತನ ಬೇಡಿಕೆಗಳಲ್ಲಿ ಸೇರಿಸಿಕೊಂಡಿದ್ದರೆ, ಕಾಲಾನಂತರದಲ್ಲಿ, ಹಣದುಬ್ಬರವು ವೇಗ ಪಡೆಯುತ್ತದೆ. ಆದ್ದರಿಂದ ಬಂಡವಾಳಶಾಹಿಯ ಅಡಿಯಲ್ಲಿ ಸಾಮೂಹಿಕ ನಿರುದ್ಯೋಗವನ್ನು ಎಂದಿಗೂ ತೊಡೆದುಹಾಕಲು ಸಾಧ್ಯವಿಲ್ಲ. ಒಂದು ತೀವ್ರ ಹಣದುಬ್ಬರ ಬಿಕ್ಕಟ್ಟಿನ ಮೂಲಕ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸದ ಹೊರತು, ಹಣದುಬ್ಬರವು ಎಂದಿಗೂ ಒಂದು ನಿರ್ದಿಷ್ಟ ಮಟ್ಟಕ್ಕಿಂತ ಕೆಳಕ್ಕೆ ಬೀಳಲು ಸಾಧ್ಯವಿಲ್ಲ.

ಇವೆಲ್ಲವೂ ಕೆಲಸಕ್ಕೆ ಬಾರದ ಮಾತುಗಳಲ್ಲ ಅಥವಾ ಕಟ್ಟುಕತೆಗಳಲ್ಲ. ಇವೆಲ್ಲವೂ ಯಥಾವತ್ತಾಗಿ ಯುದ್ಧಾನಂತರದ ಆರ್ಥಿಕ ಉತ್ಕರ್ಷವನ್ನು ಕೊನೆಗೊಳಿಸಿದವು. ಯುದ್ಧಾನಂತರದ ವರ್ಷಗಳಲ್ಲಿ, ಕೀನ್ಸ್ ಪ್ರತಿಪಾದಿಸಿದ ನೀತಿಗಳನ್ನು ಬಹುತೇಕ ಬಂಡವಾಳಶಾಹಿ ದೇಶಗಳು ಅನುಸರಿಸಿದ ಪರಿಣಾಮವಾಗಿ, ಈ ದೇಶಗಳಲ್ಲಿ ಬೇಡಿಕೆ ಹೆಚ್ಚಿತು ಮತ್ತು ನಿರುದ್ಯೋಗದ ಮಟ್ಟವೂ ಇಳಿಯಿತು. ಉನ್ನತ ಮಟ್ಟದ ಬೇಡಿಕೆಯು ಬಂಡವಾಳ ಹೂಡಿಕೆಯನ್ನು ಉತ್ತೇಜಿಸಿತು ಮತ್ತು ಉನ್ನತ ಮಟ್ಟದ ಆರ್ಥಿಕ ಬೆಳವಣಿಗೆಗೂ ಕಾರಣವಾಯಿತು. ಪರಿಣಾಮವಾಗಿ, ಈ ಅವಧಿಯನ್ನು “ಬಂಡವಾಳಶಾಹಿಯ ಸುವರ್ಣಯುಗ” ಎಂದು ಕರೆಯಲಾಗಿದೆ. ಆದರೆ, ದೀರ್ಘಕಾಲೀನ ಕೆಳ ಮಟ್ಟದ ನಿರುದ್ಯೋಗವು ಅಂತಿಮವಾಗಿ ವೇತನ ಮತ್ತು ಲಾಭಗಳ ಹಂಚಿಕೆಯ ಬಗ್ಗೆ ಹಗೆತನದ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿತು. ಅದು ತೀವ್ರ ಹಣದುಬ್ಬರದ ರೂಪದಲ್ಲಿ ಪ್ರಕಟಗೊಂಡಿತು. ಈ ಕಾರಣದಿಂದಾಗಿ, ಬಂಡವಾಳಶಾಹಿಯು ಮಾರ್ಗರೆಟ್ ಥ್ಯಾಚರ್ ಮತ್ತು ರೊನಾಲ್ಡ್ ರೇಗನ್ ಅವರ ಕಾಲದ ಆಡಳಿತದಲ್ಲಿ ಹೆಚ್ಚಿನ ಮಟ್ಟದ ನಿರುದ್ಯೋಗಕ್ಕೆ ಹಿಂತಿರುಗಿತು.

ನಿರುದ್ಯೋಗವು ಮತ್ತೆ ತನ್ನ ಹಿಂದಿನ ಎತ್ತರದ ಮಟ್ಟಕ್ಕೆ ಬಂದು ನಿಲ್ಲುವ ಮೊದಲು, “ಬೆಲೆಗಳ ಮತ್ತು ವರಮಾನಗಳ ನೀತಿ”ಯನ್ನು ಹೇರುವ ಮೂಲಕ ಕೀನ್ಸ್ ಕಣ್ಣೋಟವನ್ನು ರಕ್ಷಿಸುವ ಪ್ರಯತ್ನ ಮಾಡಲಾಯಿತು. ಕಾರ್ಮಿಕರು ಮತ್ತು ಬಂಡವಾಳಗಾರರ ನಡುವೆ ಅವರವರ ಪಾಲಿನ ಹಂಚಿಕೆಯ ಬಗ್ಗೆ ಒಪ್ಪಂದ ಸಾಧಿಸುವ ಮೂಲಕ ಹಣದುಬ್ಬರವನ್ನು ನಿಯಂತ್ರಿಸುವುದು ಈ ಪ್ರಯತ್ನದ ಉದ್ದೇಶವಾಗಿತ್ತು, ಈ ಮೂಲಕ ಹಣ ವೇತನ ಮತ್ತು ಬೆಲೆ ಹೆಚ್ಚಳವನ್ನು ನಿಯಂತ್ರಣದಲ್ಲಿಡಲು ಉದ್ದೇಶಿಸಲಾಗಿತ್ತು. ಆದರೆ, ಬೆಲೆಗಳ ಮತ್ತು ವರಮಾನಗಳ ನೀತಿಯು ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಎಂದಿಗೂ ಯಶಸ್ವಿಯಾಗುವುದಿಲ್ಲ. ಏಕೆಂದರೆ, ಕಾರ್ಮಿಕರು ಮತ್ತು ಬಂಡವಾಳಶಾಹಿಗಳು ಪ್ರತಿಯೊಂದು ನಿರ್ದಿಷ್ಟ ಕೈಗಾರಿಕೆಯಲ್ಲಿ ಒಪ್ಪಂದಕ್ಕೆ ಬಂದರೂ, ಕಾರ್ಮಿಕರ ಉತ್ಪಾದಕತೆಯ ಬೆಳವಣಿಗೆಯ ದರವು ವಿವಿಧ ಕೈಗಾರಿಕೆಗಳಲ್ಲಿ ಭಿನ್ನವಾಗಿರುವುದರಿಂದ, ಈ ಒಪ್ಪಂದಗಳ ಫಲವಾಗಿ ಉಂಟಾಗುವ ನೈಜ ವೇತನಗಳ ಬೆಳವಣಿಗೆಯ ದರವೂ ಭಿನ್ನವಾಗಿರುತ್ತದೆ. ಹಾಗಾಗಿ, ಶ್ರಮದ ಉತ್ಪಾದಕತೆ ಕಡಿಮೆ ಇರುವ ಅಥವಾ ಸ್ಥಗಿತವಾಗಿರುವ ಕೈಗಾರಿಕೆಗಳಲ್ಲಿನ ಕಾರ್ಮಿಕರು ತಮ್ಮದಲ್ಲದ ತಪ್ಪಿಗೆ ತಮ್ಮ ನೈಜ ವೇತನದಲ್ಲಿ ಸ್ಥಗಿತತೆಯನ್ನು ಅನುಭವಿಸುತ್ತಾರೆ (ಅಷ್ಟಕ್ಕೂ, ಶ್ರಮದ ಉತ್ಪಾದಕತೆಯ ಬೆಳವಣಿಗೆಯನ್ನು ಅವರು ನಿರ್ಧರಿಸುವುದಿಲ್ಲ). ಹಾಗಾಗಿ, ಕಾರ್ಮಿಕರ ನಡುವೆ ಒಂದು ವಿಭಜನೆ ಸಂಭವಿಸುತ್ತದೆ. ಕೆಲವರು ನಿಜ ವೇತನದಲ್ಲಿ ತ್ವರಿತ ಹೆಚ್ಚಳವನ್ನು ಕಾಣುತ್ತಾರೆ ಮತ್ತು ಇತರರು ನೈಜ ವೇತನ-ಸ್ಥಗಿತಗಳಿಗೆ ಒಳಗಾಗುತ್ತಾರೆ. ಆದ್ದರಿಂದ, ಇಂತಹ ಒಪ್ಪಂದಗಳು ಅನಿವಾರ್ಯವಾಗಿ ಮುರಿದು ಬೀಳುತ್ತವೆ.

ಈ ಪರಿಸ್ಥಿತಿಗೆ ಪರ್ಯಾಯವೆಂದರೆ, ಕಾರ್ಮಿಕರ ಪ್ರತಿನಿಧಿಗಳು ಮತ್ತು ಬಂಡವಾಳಗಾರರ ಪ್ರತಿನಿಧಿಗಳ ನಡುವೆ ವೇತನದ ಪಾಲಿನ ಬಗ್ಗೆ ಒಂದು ರಾಷ್ಟ್ರವ್ಯಾಪಿ ಒಪ್ಪಂದಕ್ಕೆ ಬರುವುದು ಮತ್ತು ಎಲ್ಲೆಡೆ ನಿಜ ವೇತನಗಳು ಶ್ರಮದ ಉತ್ಪಾದಕತೆಯ ಸರಾಸರಿ ಬೆಳವಣಿಗೆಯ ದರದಷ್ಟೇ ಮಟ್ಟದ ದರದಲ್ಲಿ ಹೆಚ್ಚಾಗಲು ಬಿಡುವುದು. ಅಂತಹ ಸಂದರ್ಭದಲ್ಲಿ, ಕೆಲವು ಕೈಗಾರಿಕೆಗಳಲ್ಲಿ (ಕಾರ್ಮಿಕರ ಉತ್ಪಾದಕತೆಯ ಬೆಳವಣಿಗೆ ಹೆಚ್ಚಿರುವಲ್ಲಿ) ಲಾಭದ ಪಾಲು ಹೆಚ್ಚಾಗುತ್ತದೆ ಮತ್ತು ಇತರವುಗಳಲ್ಲಿ ಕುಸಿಯುತ್ತದೆ. ಈ ಕಾರಣದಿಂದಾಗಿಯೇ ಅಂತಹ ಒಪ್ಪಂದಗಳು ಅನಿವಾರ್ಯವಾಗಿ ಮುರಿದು ಬೀಳುತ್ತವೆ. ಲಾಭದ ಪಾಲು ಇಳಿಕೆಯಾಗುವ ಕೈಗಾರಿಕೆಗಳ ಬಂಡವಾಳಗಾರರು ಒಪ್ಪಂದದ ವಿರುದ್ಧ ದಂಗೆ ಏಳುತ್ತಾರೆ. ಹೀಗಾಗಿ, ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಬೆಲೆಗಳ ಮತ್ತು ವರಮಾನಗಳ ನೀತಿಯ ಗುರಿ ಸಾಧಿಸುವುದು ಅಸಾಧ್ಯವಾಗುತ್ತದೆ.

ಈ ಪರಿಸ್ಥಿತಿಗೆ ವ್ಯತಿರಿಕ್ತವಾಗಿ ಸಮಾಜವಾದಿ ಅರ್ಥವ್ಯವಸ್ಥೆಯನ್ನು ಪರಿಗಣಿಸೋಣ. ಎಲ್ಲಾ ಕೈಗಾರಿಕೆಗಳೂ ಸರ್ಕಾರದ ಒಡೆತನದಲ್ಲಿರುವುದರಿಂದ, ಕೈಗಾರಿಕೆಗಳ ನಡುವೆ ಲಾಭದ ಹಂಚಿಕೆಯ ಪ್ರಶ್ನೆಯೇ ಏಳುವುದಿಲ್ಲ. ಏಕೆಂದರೆ, ಎಲ್ಲಾ ಲಾಭಗಳೂ ಅಂತಿಮವಾಗಿ ರಾಜ್ಯದ ಖಜಾನೆಗೆ ಹೋಗುತ್ತವೆ. ಆದ್ದರಿಂದ, ಎಲ್ಲಾ ಕಾರ್ಮಿಕರಿಗೂ ಪ್ರತಿ ವರ್ಷವೂ ಕಾರ್ಮಿಕ-ಉತ್ಪಾದಕತೆಯ ಸರಾಸರಿ ಬೆಳವಣಿಗೆಯ ದರಕ್ಕೆ ಸಮನಾದ ನೈಜ ವೇತನ ದೊರೆಯುವ ಒಪ್ಪಂದಕ್ಕೆ ಬರುವಲ್ಲಿ ಯಾವುದೇ ಅಡೆ-ತಡೆಗಳಿರುವುದಿಲ್ಲ. ವೇತನದ ಪಾಲನ್ನು ಹೆಚ್ಚಿಸುವ ಒಪ್ಪಂದವಿದ್ದರೆ, ಸರಾಸರಿ ವೇತನ ಬೆಳವಣಿಗೆಯು ಸರಾಸರಿ ಉತ್ಪಾದಕತೆಯ ಬೆಳವಣಿಗೆಯನ್ನು ಮೀರಲೂಬಹುದು, ಮತ್ತು ವೇತನ-ಪಾಲನ್ನು ಕಡಿತಗೊಳಿಸುವ ಒಪ್ಪಂದವಿದ್ದರೆ ವೇತನಗಳು ಕಡಿಮೆಯಾಗಲೂ ಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ, ಸಮಾಜವಾದಿ ಅರ್ಥವ್ಯವಸ್ಥೆಯಲ್ಲಿ ಬೆಲೆಗಳ ಮತ್ತು ವರಮಾನಗಳ ನೀತಿಯನ್ನು ಸುಲಭವಾಗಿ ಅನುಸರಿಸಬಹುದು ಎಂಬುದನ್ನು ಮತ್ತು ಪೂರ್ಣ ಉದ್ಯೋಗದ ಮಟ್ಟವನ್ನು ಕಾಪಾಡಿಕೊಳ್ಳಬಹುದು ಎಂಬುದನ್ನೂ ಈ ಹಿಂದೆ ಅಸ್ತಿತ್ವದಲ್ಲಿದ್ದ ಸಮಾಜವಾದಿ ರಾಷ್ಟ್ರಗಳು ಸಾಧಿಸಿ ತೋರಿಸಿವೆ.

ಹೀಗೆ 1930ರ ದಶಕದಲ್ಲಿ ಕೀನ್ಸ್ ಸೂಚಿಸಿದ ಪರಿಹಾರಗಳು ಬಂಡವಾಳಶಾಹಿ ಅರ್ಥವ್ಯವಸ್ಥೆಯ ಕಾರ್ಯನಿರ್ವಹಣೆಯಲ್ಲಿನ ಒಂದೇ ಒಂದು ದೋಷವನ್ನು ಮಾತ್ರ ಪರಿಹರಿಸಬಲ್ಲವಾಗಿದ್ದವು. ಆದರೆ, ಬಂಡವಾಳಶಾಹಿ ಅರ್ಥವ್ಯವಸ್ಥೆಯ ಕಾರ್ಯವಿಧಾನವೇ, ಅದು ವರ್ಗ ವೈಷಮ್ಯವನ್ನು ಆಧರಿಸಿದೆ ಎಂಬ ಅರ್ಥದಲ್ಲಿ, ದೋಷಪೂರಿತವಾಗಿದೆ. ಆದ್ದರಿಂದ, ಈ ವ್ಯವಸ್ಥೆಯನ್ನು ಅದರ ದೋಷಪೂರಿತ ಕಾರ್ಯನಿರ್ವಹಣೆಯಿಂದ ರಕ್ಷಿಸಬಹುದು ಎಂದು ನಂಬುವುದು ಒಂದು ಹುಚ್ಚು ಕಲ್ಪನೆಯಾಗುತ್ತದೆ.

ಆದಾಗ್ಯೂ, ಬಂಡವಾಳಶಾಹಿಯ ಅಡಿಯಲ್ಲಿ ಹಣದುಬ್ಬರವು ತೀವ್ರ ಸ್ವರೂಪದಲ್ಲಿ ಕಾಣಿಸಿಕೊಂಡಾಗ, ಮೂರನೇ ಜಗತ್ತಿನ ದೇಶಗಳ ಕಚ್ಚಾ ವಸ್ತುಗಳ ಮತ್ತು ವೇತನ ಸರಕುಗಳ (ಪ್ರಾಥಮಿಕ ಸರಕುಗಳ) ಕಿರು ಉತ್ಪಾದಕ ಪೂರೈಕೆದಾರರಿಗೆ ನಷ್ಟ ಉಂಟುಮಾಡಿ ಅದನ್ನು ಪರಿಹರಿಸುವ ಪ್ರಯತ್ನಗಳಿರುತ್ತವೆ. ಚೌಕಾಶಿಯ ಶಕ್ತಿ ಇಲ್ಲದ ಈ ಕಿರು ಉತ್ಪಾದಕ ಪೂರೈಕೆದಾರರು “ಕೊಟ್ಟಷ್ಟೇ ಬೆಲೆ ತೆಗೆದುಕೊಳ್ಳುವ”ರಾಗಿ ವ್ಯವಹರಿಸುತ್ತಾರೆ. ಮೆಟ್ರೋಪಾಲಿಟನ್ ಬಂಡವಾಳಶಾಹಿಗಳಿಗೆ ಲಾಗುವಾಡುಗಳನ್ನು ಪೂರೈಸುವ ಈ ಕಿರು ಉತ್ಪಾದಕರು ತಮ್ಮ ಉತ್ಪಾದನೆಯಲ್ಲಿ ತಮಗೆ ಸಲ್ಲಬೇಕಾದ ಪಾಲನ್ನೂ ಸಹ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿಯೇ ಹಣದುಬ್ಬರದ ಏರಿಕೆಯನ್ನು, ಅಂತಿಮವಾಗಿ, ಅವರಿಗೆ ನಷ್ಟ ಉಂಟುಮಾಡಿ ಮಣಿಸಲಾಗುತ್ತದೆ. ಸಾಮ್ರಾಜ್ಯಶಾಹಿಯ ಒಂದು ಪ್ರಮುಖ ಪಾತ್ರವೆಂದರೆ, ವಾಸ್ತವವಾಗಿ, ಅವರು ತಮಗೆ ಎಷ್ಟು ಬೇಕೊ ಅಷ್ಟು “ಬೆಲೆ ತೆಗೆದುಕೊಳ್ಳುವ”ವರಾಗಿ ಉಳಿಯುತ್ತಾರೆ. ಆದರೆ, ಈಗಾಗಲೇ ಸಾಕಷ್ಟು ಹಿಂಡುವಿಕೆಯನ್ನು ತಾಳಿಕೊಂಡಿರುವ ಮತ್ತು ತುಳಿತವನ್ನು ಸಹಿಸಿಕೊಂಡಿರುವ ಕಿರು ಉತ್ಪಾದಕ ಪೂರೈಕೆದಾರರ ಇತಿಹಾಸವನ್ನು ಗಮನಿಸಿದರೆ, ಇನ್ನು ಮುಂದೆ ಅವರನ್ನು ಮತ್ತಷ್ಟು ಹಿಂಡಿ ಹಿಪ್ಪೆ ಮಾಡಿ ನಗರಗಳಲ್ಲಿ ಹಣದುಬ್ಬರವನ್ನು ನಿಯಂತ್ರಿಸುವುದು ಈ ವೇಳೆಗೆ ಬಹುತೇಕ ಅಸಾಧ್ಯವಾಗಿ ಕಾಣುತ್ತದೆ. ಇದಲ್ಲದೆ, ಮೆಟ್ರೋಪಾಲಿಟನ್ ಬಂಡವಾಳಶಾಹಿಯು ಇತರ ರಾಷ್ಟ್ರಗಳಿಗೆ ನಷ್ಟ ಉಂಟುಮಾಡಿ ತನ್ನನ್ನು ಶಾಶ್ವತವಾಗಿ ಸ್ಥಿರಗೊಳಿಸಿಕೊಳ್ಳಬಹುದು ಎಂದು ನಂಬುವುದು ರೋಷಕಾರಕವೂ ಮತ್ತು ಅವಾಸ್ತವಿಕವೂ ಆಗುತ್ತದೆ.

ಅನು: ಕೆ.ಎಂ.ನಾಗರಾಜ್

Donate Janashakthi Media

Leave a Reply

Your email address will not be published. Required fields are marked *