ಬೆಂಗಳೂರಿನಲ್ಲಿ ಕಟ್ಟಡ ಒಡೆಯಲು ಯಾವುದೇ ಕಾನೂನು ಇದೆಯೇ? ಇದ್ದರೂ ಅದಕ್ಕೆ ಜನಪರ ಕಾಳಜಿ ಇದೆಯೇ? ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದೆಯೇ? ರಾಜಧಾನಿ
-ಮಂಜುಶ್ರೀ ಕಡಕೋಳ
ಸಂಪಂಗಿ ರಾಮನಗರದ ಫ್ಲೈಓವರ್ ಕೆಳಗೆ, ಮಿಷನ್ ರಸ್ತೆಯಲ್ಲಿ ಕಳೆದ ಒಂದು ವಾರದಿಂದ ವಾಣಿಜ್ಯ ಕಟ್ಟಡ ಸಂಕೀರ್ಣವೊಂದನ್ನು ಕೆಡಲವಾಗುತ್ತಿದೆ. ಇದನ್ನು ಮಾಡಿಸುತ್ತಿರುವ ಕಟ್ಟಡ/ಜಾಗದ ಮಾಲೀಕರಿಗಾಗಲೀ, ಮಾಡಿಸುತ್ತಿರುವ ಅವರ ಕೈಕೆಳಗಿನ ಗುತ್ತಿಗೆದಾರ/ ಸೂಪರ್ ವೈಸರ್ ಗಾಗಲೀ ಕಿಂಚಿತ್ತೂ ಜನ ಕಾಳಜಿ ಇಲ್ಲ.
ಕಟ್ಟಡ ಒಡೆಯಲು ಆರಂಭಿಸಿದ ಮೊದಲ ದಿನವೇ ನಾನು ಮತ್ತು ನನ್ನ ಗಂಡ ಹೋಗಿ ಒಡೆಯಲು ಇನ್ ಚಾರ್ಚ್ ತೆಗೆದುಕೊಂಡ ವ್ಯಕ್ತಿಯ ಬಳಿ ಹೋಗಿ ಕಟ್ಟಡ ಒಡೆಯುವ ಜಾಗದ ಸುತ್ತಲೂ ಕನಿಷ್ಠ ಕಬ್ಬಿಣದ ತಗಡು, ಹಸಿರು ಪರದೆಯನ್ನಾದರೂ ಕಟ್ಟಿ. ಸುತ್ತಮುತ್ತಲಿನ ಮನೆಗಳಲ್ಲಿ ವಯೋವೃದ್ಧರು, ಹಸುಗೂಸುಗಳು, ಶಾಲೆಗೆ ಹೋಗುವ ಪುಟ್ಟ ಮಕ್ಕಳು, ಅಲರ್ಜಿ ಇರುವವರು, ಆಸ್ತಮಾ ಇರುವವರು ಇದ್ದಾರೆ ಎಂದು ಮನವಿ ಮಾಡಿದ್ದೆವು. ರಾಜಧಾನಿ
ಕೆಲಕಾಲ ನೀರು ಹಾಕಿ ಕಟ್ಟಡ ಒಡೆಯುವಂತೆ ಮಾಡಿದ ಆಸಾಮಿ, ಮರುದಿನದಿಂದ ಯಥಾ ಪ್ರಕಾರ ಮತ್ತೆ ಜೆಸಿಬಿಯಿಂದ ದೂಳು ಪಸರಿಸುವಂತೆ ಕಟ್ಟಡ ಒಡೆಯಲು ಶುರು ಮಾಡಿದ. ಪಕ್ಕದ ಮನೆಯಲ್ಲಿ ಒಂದು ತಿಂಗಳ ಹಸುಗೂಸು ಇದೆ. ನಮ್ಮನೆಯಲ್ಲಿ ವಯಸ್ಸಾದ ಅಪ್ಪ ಇದ್ದಾರೆ. ನನಗೆ ದೂಳಿನ ಅಲರ್ಜಿ ಶುರುವಾಗಿದೆ. ಮಗಳಿಗೆ ಕೆಮ್ಮು ಶುರುವಾಗಿದೆ. ಈ ಕಟ್ಟಡದ ಎದುರು ಇರುವ ನಮ್ಮ ಅಪಾರ್ಟ್ಮೆಂಟಿನ ತುಂಬೆಲ್ಲಾ ದೂಳುಮಯ. ಉಸಿರಾಡಲೂ ಕಷ್ಟವಾಗುತ್ತಿದೆ… ರಾಜಧಾನಿ
ಇದನ್ನೂ ಓದಿ: ಟ್ರಾಫಿಕ್ ನಿಯಂತ್ರಿಸಲು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ನಿಯಮ ಜಾರಿ
ಯಾವುದೇ ಪರದೆ ಇಲ್ಲದೇ ಸುರಕ್ಷತಾ ಕ್ರಮವಿಲ್ಲದೆ ಕಟ್ಟಡ ಒಡೆಯಲಾಗುತ್ತಿದೆ. ಕಟ್ಟಡ ಒಡೆಯುವ ಕಾರ್ಮಿಕ ಜೀವವೂ ಇಲ್ಲಿ ಅಗ್ಗವಾಗಿದೆ. ಅವರಿಗೆ ಕನಿಷ್ಠ ತಲೆಗೆ ಹೆಲ್ಮೆಟ್ ಕೂಡಾ ಇಲ್ಲ. ಕಾಲುಗಳ ರಕ್ಷಣೆಗೆ ಸೂಕ್ತ ಬೂಟುಗಳೂ ಇಲ್ಲ… ಕಟ್ಟಡ ಒಡೆಯುವ ನಿಯಮಗಳು ಅಷ್ಟೊಂದು ಸರಳವಾಗಿವೆಯೇ?

ಕಟ್ಟಡ/ಜಾಗದ ಮಾಲೀಕ ಯಾರೋ ಪ್ರಮೋದ್ ರೆಡ್ಡಿ ಅಂತೆ… ಅವರ ಮನೆಯ ಮುಂದೆ ಇದೇ ರೀತಿ ಕಟ್ಟಡ ಒಡೆಯುತ್ತಿದ್ದರೆ ಸುಮ್ಮನಿರುತ್ತಿದ್ದರಾ? ಅಷ್ಟಕ್ಕೂ ಬಿಬಿಎಂಪಿಯಾಗಲೀ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಗಮನಕ್ಕಾಗಲೀ ಇದು ಬಂದಿಲ್ಲವಾ? ಕಟ್ಟಡ ಒಡೆಯಲು ಅವರಿಂದ ಅನುಮತಿ ಪಡೆದಿದ್ದಾರಾ? ಮುಖ್ಯ ರಸ್ತೆಯಲ್ಲೇ ಈ ಕಟ್ಟಡ ಒಡೆಯುವ ಕಾರ್ಯ ನಡೆಯುತ್ತಿದ್ದು, ಯಾವುದೇ ಕ್ಷಣದಲ್ಲಾದರೂ ವಾಹನ ಸವಾರರ ಮೇಲೆ ಕಟ್ಟಡದ ಅವಶೇಷಗಳು ಬಿದ್ದರೆ ಸಾವು ನಿಶ್ಚಿತ!
ರಾಜಧಾನಿಯಲ್ಲಿ ಜನಸಾಮಾನ್ಯರ ಜೀವ ಅಷ್ಟೊಂದು ಅಗ್ಗವೇ?
ಇದನ್ನೂ ನೋಡಿ: ಕ್ರಾಂತಿಗೀತೆ | ಭಾರತ ದೇಶದ ಭವಿಷ್ಯ ಬರೆಯಲು | CITU Janashakthi Media
