ಐಪಿಎಲ್ ಮತ್ತು ಜಡ ಸಮಾಜದ ಸೃಷ್ಟಿ

ಹರೀಶ್ ಗಂಗಾಧರ

ಈಗ ಐಪಿಎಲ್ ಸೀಸನ್. ಹಿಂದಿನ ಸಂಜೆ ನೆಡೆದ ಪಂದ್ಯಗಳನ್ನ ನೋಡಿದ್ದರೂ, ಜನ ಬೆಳಗೆದ್ದು ಸೀದ ದಿನಪತ್ರಿಕೆಯ ಕೊನೆ ಪುಟದಲ್ಲಿ ಕಣ್ಣಾಯಿಸುತ್ತಾರೆ. ಅವರಿಗೆ ಅಂದಿನ ಪಂದ್ಯ ಯಾರ ನಡುವೆ, ಪಾಯಿಂಟ್ಸ್ ಟೇಬಲ್ ನಲ್ಲಿ ಯಾವ ತಂಡ ಎಲ್ಲಿದೆ, ತಾನು ಪ್ರೀತಿಸುವ ತಂಡ ಯಾವ ಸ್ಥಾನದಲ್ಲಿದ್ದೆ ಎಂಬ ಮಾಹಿತಿ ಬಲು ಮಹತ್ವದ್ದು. ಇಲ್ಲಿ ಸೋಲಿನ ಕುರಿತು ಕಣ್ಣೀರು ಸುರಿಸುತ್ತಾ ಕೂರಲು ಸಮಯವಿಲ್ಲ, ಗೆಲುವನ್ನು ಅತಿಯಾಗಿ ಸಂಭ್ರಮಿಸುವ ಅವಶ್ಯಕತೆಗಳು ಇಲ್ಲ. ಹತಾಶೆ, ಮುದಗಳೆಲ್ಲ ತ್ವರಿತ, ತಾತ್ಕಾಲಿಕ. ಪಂದ್ಯಗಳ ನಿಲ್ಲದ ಸುರಿಮಳೆಯೇ ಆಗುವುದರಿಂದ ನೋಡುಗರು, ಆಟಗಾರರು, ಈ ಸಲವಲ್ಲವಾದರೂ ಮುಂದಿನ ಸಲ “ಕಪ್ ನಮ್ದೇ” ಎಂಬ ನಂಬಿಕೆಯಲ್ಲಿರುತ್ತಾರೆ. Whatever happens everybody should move on! ಇದೊಂದು ಮನರಂಜನೀಯ ಪಂದ್ಯಾವಳಿಯಾದರೂ ಮನ ಮರಗಟ್ಟಿಸುವ ಪಂದ್ಯಾವಳಿಯೂ ಹೌದು .

ಐಪಿಎಲ್ ಅನ್ನೋದು ಎಷ್ಟು ಅಸಂಗತ ಪಂದ್ಯವಳಿಯೋ ಅಷ್ಟೇ ಅಮುಖ್ಯವೂ ಕೂಡ. ಅಸಂಗತವೇಕೆ? ಒಂದು ತಂಡಕ್ಕೆ ನೀವು ಅಡವಿಟ್ಟಿರುವ ನಿಯತ್ತು, ನಿಷ್ಠೆ ಮಾಧ್ಯಮಗಳ ಸೃಷ್ಟಿಯಷ್ಟೇ. ನಿಮ್ಮ ಭಾಷೆ ಗೊತ್ತಿಲ್ಲದವ, ನಿಮ್ಮ ನೆಲ, ಜಲ, ಸಂಸ್ಕೃತಿಯ ಕುರಿತು ಕನಿಷ್ಠ ಜ್ಞಾನವಿಲ್ಲದ ಆಟಗಾರರನ್ನ “ನಿಮ್ಮ ತಂಡದ ಆಟಗಾರ”ರೆಂದು ಮಾಧ್ಯಮ/ವ್ಯಾಪಾರೀ ಸಂಸ್ಥೆಗಳು ನಿಮಗೆ ಬಿಕರಿ ಮಾಡುತ್ತದೆ. ಹರಾಜಿನಲ್ಲಿ ಬಿಕಾರಿಯಾಗಿ ಹಣ ಎಣಿಸಿಕೊಳ್ಳುವ ಆಟಗಾರರಿಗೆ ಗೊತ್ತಿದೆ how to play to the gallery ಎಂದು! ಐಪಿಎಲ್ ಅಮುಖ್ಯವೇಕೆ? ಈ ಐಪಿಎಲ್ ಪಂದ್ಯಗಳಿಂದ ಆಟಗಾರರ ವಿಶ್ವ ranking ನಿರ್ಧಾರವಾಗಲ್ಲ. ಆದ್ದರಿಂದ ಜಗತ್ತಿನ ಎಲ್ಲಾ ಆಟಗಾರರಿಗೂ ಈ ಪಂದ್ಯಾವಳಿ ಭಾರತಕ್ಕೆ ಬಂದು ಸುದೀರ್ಘ ಪಿಕ್ನಿಕ್ ಮಾಡುವ ಜೊತೆಗೆ ಹೇರಳ ದುಡ್ಡು ಮಾಡಿಕೊಳ್ಳುವ ಅವಕಾಶವಷ್ಟೆ. ಆಟಗಾರ ಐಪಿಎಲ್ ಗೆ ಬಿಕರಿಯಾದ ಮೌಲ್ಯ ದೇಶಕ್ಕಾಗಿ ಆಟಗಾರ ಮಾಡಿದ ಸಾಧನೆಯಿಂದ ನಿರ್ಧಾರವಾಗುತ್ತೆ ಹೊರತು not the other way round. ಇಂತಹ ಅಸಂಗತ, ಅಮುಖ್ಯ ಪಂದ್ಯಾವಳಿಗೆ, ವ್ಯಾಪಾರ ಮಾದರಿಗೆ ಅತ್ಯಂತ ಸೂಕ್ತವಾದ ಕ್ರಿಕೆಟ್ ಸ್ವರೂಪ 20-20 ಮಾತ್ರ. ಬಹುಶ ಏಕದಿನ ಪಂದ್ಯದ ಐಪಿಎಲ್ ಸೀಸನ್ ನೆಡೆದಿದ್ದರೆ ಆ ಪಂದ್ಯಾವಳಿ ಒಂದೆರೆಡು ಸೀಸನ್ ನಲ್ಲಿ ಕಮರಿ ಹೋಗಿರುತ್ತಿತ್ತು. ಈ ರೀತಿಯ ಟೆಸ್ಟ್ ಪಂದ್ಯಾವಳಿ ಹುಚ್ಚುತನವಾಗಿರುತ್ತಿತ್ತು.

ಪ್ರೇಕ್ಶಕರು ಈ ಅಸಂಗತ ಮತ್ತು ಅಮುಖ್ಯ ಪಂದ್ಯಾವಳಿಗಳನ್ನ ಹೀಗೆ ಹುಚ್ಚೆದ್ದು ನೋಡುವುದಾದರೂ ಏತಕ್ಕೆ? ದಿನವೆಲ್ಲಾ ದೇಹದಂಡಿಸಿ ದುಡಿದು, ದಣಿದು ಸಂಜೆ ಏಳಕ್ಕೆ ಮನೆಗೆ ಹೋಗುವ ಬಹುಸಂಖ್ಯಾತ ಜನರಿಗೆ ಐಪಿಎಲ್ ಪಂದ್ಯಗಳು ಹಿತಕರ ಮುಲಾಮು ಎಂದರೆ ತಪ್ಪಾಗಲಾರದು. ದಿನದ ಎಲ್ಲಾ ನೋವನ್ನು, ಹತಾಶೆಗಳನ್ನು ಮರೆಸುವ ಹೆಂಡದಂತಹ ನಶೆಯಿದು. ನಿಮ್ಮನ್ನು ಆವರಿಸಿಕೊಂಡು ಮುಳುಗಿಸಿಬಿಡುವ ಚಟವಿದು. (ಕುದುರೆ ರೇಸ್ ಜೂಜು, ಮಾದಕ ವಸ್ತುಗಳಿಗಿಂತ ಬಹುದೊಡ್ಡ ಚಟ ಡ್ರೀಮ್ ಇಲೆವೆನ್ ಎಂದರೆ ತಪ್ಪಾಗಲಾರದು.) ಎಲ್ಲರ ಮನ ಮರಗಟ್ಟಿಸಿ, ಹತಾಶೆಗಳನ್ನ ತಣ್ಣಗಾಗಿಸುವ ಇಂತಹ ಪಂದ್ಯಾವಳಿಗಳಿಂದ ಬಂಡವಾಳಶಾಯಿಗಳಿಗೆ ಎಷ್ಟು ಲಾಭವೋ ಅದಕ್ಕಿಂತ ನೂರು ಪಟ್ಟು ಅಧಿಕ ಲಾಭ ಪ್ರಭುತ್ವಕ್ಕೆ ಎಂಬುದನ್ನ ಮರೆಯಬಾರದು.

ಒಂದೆರಡು ದಶಕಗಳ ಹಿಂದೆ ಜನ ಈ ರೀತಿಯ ಅಬ್ಬರ, ಹುಚ್ಚುತನಕ್ಕಾಗಿ ವಿಶ್ವಕಪ್ ಗಾಗಿ ಕಾಯಬೇಕಿತ್ತು. ನಾಲ್ಕು ವರ್ಷಕೊಮ್ಮೆ ನಡೆಯುವ ವಿಶ್ವಕಪ್ ನಲ್ಲಿ ತಮ್ಮ ದೇಶ ಸೋತರೆ ಜನ ತೀವ್ರ ನಿರಾಶರಾಗುತ್ತಿದ್ದರು. ಆದರೆ ಪ್ರತಿ ವರ್ಷ ನೆಡೆಯುವ ಈ ಪಂದ್ಯಾವಳಿಗಳು ಪ್ರೇಕ್ಷಕರಿಗೆ ಅಷ್ಟು ಡಿಮ್ಯಾಂಡಿಂಗ್ ಅಲ್ಲ. ಇಲ್ಲಿ ಪ್ರತಿ ದಿನ ಸಂಜೆ ಕಾಲು ಚಾಚಿ ಕೂತು ರಿಲ್ಯಾಕ್ಸ್ ಮಾಡಿಕೊಳ್ಳಬಹುದು ಮನಕೆ ಮಾರಕವಲ್ಲದ ಈ ಪಂದ್ಯಗಳನ್ನ ನೋಡುತ್ತಾ ತಮ್ಮ ತಂಡ ಗೆದ್ದರೆ ಒಂದೆರಡು ಪೆಗ್ ಹಾಕಾಬಹುದು, ಸೋತರೆ ಒಂದೆರಡು ಆಟಗಾರರ ಆಟದ ವೈಖರಿಯನ್ನ ತೀವ್ರವಾಗಿ ಖಂಡಿಸಬಹುದು. ಯಥಾಸ್ಥಿತಿ ಕಾಪಾಡಿಕೊಳ್ಳಲು, ಜಡ ಸಮಾಜ ಕಾಯ್ದುಕೊಳ್ಳಲು ಪ್ರಭುತ್ವಕ್ಕೆ ಇದಕ್ಕಿಂತ ಒಳ್ಳೆಯ ಆಯುಧಬೇಕಿಲ್ಲ. Tomorrow is a new day. Every game is just another Game.

ಭಾರತದ ಅವಳಿ ಗೀಳುಗಳು- ಸಿನಿಮಾ ಮತ್ತು ಕ್ರಿಕೆಟ್. ಲಗಾನ್ ಮತ್ತು ಎಂ ಎಸ್ ಧೋನಿ ಅಂತ ಚಿತ್ರಗಳು ಅದ್ಭುತ ಯಶಸ್ಸು ಕಾಣಲಿಕ್ಕೆ ಸಿನಿಮಾ ಕ್ರಿಕೆಟ್ ಅನ್ನು ಒಳಗೊಂಡದ್ದು ಕಾರಣವಾದರೆ ಚಿತ್ರರಂಗದ ಎಷ್ಟು ಮಂದಿ ಕ್ರಿಕೆಟ್ ಜೊತೆಗೆ ಬೆಸೆದುಗೊಂಡಿದ್ದಾರೆ ಅನ್ನೋದು ಗಮನಿಸಬೇಕಾದ ವಿಚಾರ. ಭಾರತದಲ್ಲಿ ಸಿನಿಮಾ ಸ್ಟಾರ್ ಗಳಿಗೆ ಇರುವ ಜನಪ್ರಿಯತೆಗೆ ಸವಾಲೊಡ್ಡುವವರು ಕ್ರಿಕೆಟಿಗರು ಮಾತ್ರ. ಸಿನಿಮಾ, ಕ್ರೀಡೆಗಿರುವ ಈ ಜನಪ್ರಿಯತೆಯಿಂದ ವ್ಯಾಪಾರ ಮತ್ತು ಪ್ರಭುತ್ವಕ್ಕೆ ಈ ಎರಡು ಕ್ಷೇತ್ರ ಗಳಿಂದ ದೂರ ಉಳಿಯಲಾಗಲಿಲ್ಲ. Cricket was a potent weapon. It was suppose to be used.

ಭಾರತದಲ್ಲಿ ಕ್ರಿಕೆಟ್ ಇತಿಹಾಸ ಕೆದುಕುತ್ತಾ ಹೋದರೆ ತಿಳಿಯುತ್ತೆ ಅದೊಂದು ಎಲೈಟ್ ಕ್ರೀಡೆಯೆಂದು. ಬ್ರಿಟಿಷರು ಭಾರತವನ್ನ ಆಳುವಾಗ ಬೇಸರ ಕಳೆಯಲಿಕ್ಕೆ ಆಡುತ್ತಿದ್ದ ಆಟಗಳು ಕ್ರಿಕೆಟ್ ಮತ್ತು ಪೋಲೊ. ನೂರಾರು ರೂಲ್ಸ್ ಗಳಿರುವ ಕ್ರಿಕೆಟ್ ಅನ್ನು ಭಾರತೀಯರೆಂದಿಗೂ ಅರ್ಥ ಮಾಡಿಕೊಳ್ಳಲಾರರು ಮತ್ತು ಕುದುರೆಯನ್ನೇರಿ ಪೋಲೊ ಆಡಲಾರರೆಂದು ಬ್ರಿಟಿಷರಿಗೆ ಖಾತರಿ ಇತ್ತು. ಬಿಳಿಯ ಸಮವಸ್ತ್ರ ತೊಟ್ಟು ಬಿಳಿಯರೇ ಆಡುತ್ತಿದ್ದ ಆಟವನ್ನ ಭಾರತೀಯ ಎಲೈಟ್ ಗಳು ಬಹುಬೇಗ ಕಲಿತರು. ದೇಶ ವಿಭಜನೆಗೆ ಮುನ್ನವೇ ಬಾಂಬೆಯಲ್ಲಿ ಪಾರ್ಸಿ, ಹಿಂದೂ, ಮುಸ್ಲಿಂ ಹಾಗು ಬ್ರಿಟಿಷ್ ತಂಡಗಳ ನಡುವೆ ಚತುಶ್ಕೋನ ಸರಣಿ ನಡೆಯುತ್ತಿತ್ತು. ಭಾರತೀಯರು ಬಿಳಿಯರ ಆಟ ಕಲಿತುಬಿಟ್ಟರೆಂಬ ಆಘಾತ ಬೇಸರ ಬ್ರಿಟಿಷರಲ್ಲಿದ್ದರು, ಧರ್ಮಧಾರಿತ ತಂಡಗಳು ಹುಟ್ಟಿಕೊಂಡದ್ದು ಅವರಲ್ಲಿ ಅತೀವ ಸಂತಸ ಮೂಡಿಸಿತ್ತು.

ಹೀಗೆ ಆಳುವವರಿಂದ, ಶೋಷಕರಿಂದ ನಾವು ಕಲಿತ ಕ್ರೀಡೆಯಿಂದು ಸಂಪೂರ್ಣ ದೇಶವನ್ನು ಆವರಿಸಿಕೊಂಡಿದೆ. ಭಾರತೀಯರು ಕ್ರಿಕೆಟ್ ಅನ್ನು ತಮಗೆ ಬೇಕಾದ ಹಾಗೆ ರೂಪಾಂತರ ಮಾಡಿಕೊಂಡಿದ್ದಾರೆ. ಹಳ್ಳಿಗಳಲ್ಲಿ ಎರಳಿ ಕಾಯಿ ಚೆಂಡಾದರೆ, ತೆಂಗಿನ ಮಟ್ಟೆ ಬ್ಯಾಟ್ ಆದವು. ಕ್ರಿಕೆಟ್ ಆಡಲು ದುಬಾರಿ ಕ್ರಿಕೆಟ್ ಕಿಟ್ ಇಲ್ಲದವರ ಸಣ್ಣ ಗಲ್ಲಿಗಳಲ್ಲಿ, ಶಾಲಾತರಗತಿಯ ಒಳಗೆ ಪರೀಕ್ಷೆಗೆ ಬಳಸುತ್ತಿದ್ದ ಕಾರ್ಡ್ ಬೋರ್ಡ್ ಮತ್ತು ರದ್ದಿ ಪೇಪರ್ ಬಳಸಿ ಕ್ರಿಕೆಟ್ ಆಡುತ್ತಾರೆ. ಮೂರೂ ವಿಕೆಟ್ ಗಳ ಚಿತ್ತಾರವಿರದ ಗೋಡೆಗಳು ಭಾರತದಲ್ಲಿ ಕಾಣಸಿಗುವುದು ಅತಿ ವಿರಳ.

ಕ್ರಿಕೆಟ್ ಈ ರೀತಿ ರೂಪಾಂತರಗೊಂಡರು ಕ್ರಿಕೆಟ್ ಮೂಲಭೂತವಾಗಿ ಎಲೈಟ್ ಗಳ ವಾಗಿಯೇ ಉಳಿದಿದೆ ಅನ್ನೋದನ್ನ ಯುವಕರು ಎಂದು ಒಪ್ಪಲಾರರು. ಪ್ರತಿಭೆಯಿಂದ ತಾವು ಕೂಡ ಒಂದು ದಿನ ಧೋನಿಯಾಗುತ್ತೇವೆ ಎಂಬ ಕನಸುಕಾಣುತ್ತಾರೆ! ಕ್ರಿಕೆಟ್ ಜನಪ್ರಿಯ ಕ್ರೀಡೆಯಾದರು ಭಾರತೀಯ ಕ್ರಿಕೆಟ್ ತಂಡಕ್ಕೆ ಎಂಟ್ರಿ ಪಡೆಯುವವರೆಲ್ಲಾ ಎಲೈಟ್ ಗಳೇ ಆಗಿರುತ್ತಾರೆ ಎಂಬ ಸತ್ಯವನ್ನ ಮರೆಮಾಚಲು ಎಂ ಎಸ್ ಧೋನಿರಂತವರ ಅಗತ್ಯತೆ ಭಾರತೀಯ ಕ್ರಿಕೆಟ್ ಬೋರ್ಡಿಗಿದೆ ಎಂಬುದನ್ನ ಯುವಕರು ಕಡೆಗಣಿಸುತ್ತಾರೆ. ಪ್ರತಿಭಾನ್ವಿತ ಪುಲವಂಕರ್ ಬಾಲೋ ಸಹೋದರರಂತವರು ದಲಿತರೆಂಬ ಕಾರಣಕ್ಕೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲಿಲ್ಲ ಎಂಬ ವಿಚಾರವನ್ನ ತಿಳಿಯಲು ನಿರಾಕರಿಸುತ್ತಾರೆ.

ನಾನು ಶಾಲಾ ದಿನಗಳಲ್ಲಿ ಕ್ರಿಕೆಟ್ ಆಡುತ್ತಿದ್ದೆ. ನಾವು ಆಡುವ ಮೈದಾನದ ಒಂದೊಂದು ಮೂಲೆಯಲ್ಲಿ ಒಂದೊಂದು ತಂಡ ಕ್ರಿಕೆಟ್ ಆಡುತ್ತಿದ್ದವು. ಬಡವರು ಕೆಎಂಎಸ್ ಎಂಬ ಚೆಂಡು ಬಳಸಿದರೆ, ಮಧ್ಯಮ ವರ್ಗದವರು ಕಾಸ್ಕೊ ಟೆನಿಸ್ ಚೆಂಡು ಬಳಸುತ್ತಿದ್ದರು. ಯಾರಾದ್ರೂ ವಿಲ್ಸನ್ ಚೆಂಡು ಬಳಸಿದರೆ ಆತ ಧನಿಕನೇ ಆಗಿರಬೇಕೆಂಬ ನಿರ್ಧಾರಕ್ಕೆ ಬರುತ್ತಿದ್ದೆವು. ಮೈದಾನದ ಮಧ್ಯಭಾಗಕ್ಕೆ ನಾವ್ಯಾರು ಕಾಲಿಡುತ್ತಿರಲಿಲ್ಲ. ಚನ್ನಾಗಿ ರೋಲ್ ಮಾಡಿದ ಪಿಚ್ ಅಲ್ಲಿತ್ತು. ಪಿಚ್ ಸುತ್ತಾ ನೆಟ್ ಹಾಕಲಾಗಿತ್ತು. ದಿನ ಬೆಳ್ಳಿಗ್ಗೆ ಮತ್ತು ಸಂಜೆ ಶ್ರೀಮಂತರ ಮಕ್ಕಳು ಹೆಲ್ಮೆಟ್, ಪ್ಯಾಡ್, ಕೈ ಚೀಲ ಧರಿಸಿ ಅಭ್ಯಾಸ ಮಾಡುವುದನ್ನ ನಾವು ಕಣ್ಣು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದೆವು. ಅವರು ಬಳಸುವ ಬ್ಯಾಟ್, ಪ್ಯಾಡ್, ಕೈಚೀಲದ ಬೆಲೆ ಎಷ್ಟಿರಬಹುದೆಂಬ ಅಂದಾಜು ಮಾಡುತ್ತಿದ್ದೆವು. ಹೀಗೆ ಕ್ರಿಕೆಟ್ ನಮಗೆ ಒಂದು ಕಡೆ ಖುಷಿ ಕೊಟ್ಟರೆ ಇನ್ನೊಂದು ಅವ ಉಳ್ಳವ, ನಾ ಬಡವನೆಂಬ ಅರಿವು ಮೂಡಿಸಿತ್ತು. ಈ ಅರಿವು ಅಷ್ಟು ಸುಲಭವಾಗಿ ಅರಗಿಸಿಕೊಳ್ಳಲು ಆಗಿರಲಿಲ್ಲ ಕೂಡ.

ಮುಂದುವರೆದು ಧನಿಕ ವ್ಯಾಪಾರಿ, ಉನ್ನತ ಅಧಿಕಾರಿಗಳ ಕೂಸುಗಳೇ ಓದುವ ಕಾಲೇಜ್ ಆದ ಜೈನ್ ಕಾಲೇಜಿನಲ್ಲಿ ಕರುಣ್ ನಾಯರ್, ಮಾಯಾಂಕ್ ಅಗರ್ವಾಲ್ ಅಂತವರಿಗೆ ಪಾಠ ಮಾಡುವಾಗ ಹಲವು ವರ್ಷಗಳ ಹಿಂದೆ ಮೂಡಿದ್ದ ಅರಿವು ನನ್ನನ್ನ ಕಾಡುತ್ತಿತ್ತು. ಕರುಣಾ, ಮಾಯಾಂಕ್ ಗಿದ್ದ ಪ್ರತಿಭೆಗೆ ಪೋಷಕರಿಂದ ಪ್ರೋತ್ಸಾಹ ಸಿಕ್ಕಿತ್ತು, ಕೆಎಸ್ ಸಿಎ, ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಸೇರಿಸುವಷ್ಟು ಹಣ ಪೋಷಕರ ಬಳಿಯಿತ್ತು. ಕರುಣ್, ಮಾಯಾಂಕ್ ಮಾಡಿದ ಸಾಧನೆ ಬಗ್ಗೆ ಅಭಿಮಾನವಿದೆ ಆದರೆ ಸಣ್ಣ ಊರಿನ ಮೈದಾನವೊಂದರ ಮೂಲೆಯಲ್ಲಿ ನನ್ನ ಜೊತೆ ಕ್ರಿಕೆಟ್ ಆಡುತ್ತಿದ್ದ ಬಡ ಪ್ರತಿಭೆಗಳು, ನನ್ನ ನೆಚ್ಚಿನ ಗೆಳೆಯರು ನೆನಪಾದಾಗ ಎದೆ ಭಾರವಾಗುತ್ತದೆ.

ಈ ನನ್ನ ಗೆಳೆಯರು ಇಂದಿಗೂ ಐಪಿಎಲ್ ತಪ್ಪದೆ ನೋಡುತ್ತಾರೆ. ಪ್ರತಿಭೆಯಿದ್ದರೂ ನಾನು ಏಕೆ ಇಂತಹ ಒಂದು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿಲ್ಲ, ಕ್ರಿಕೆಟ್ ಮರೆತು ಯಾವುದೊ ಕಾರ್ಖಾನೆಯಲ್ಲಿ ಹನ್ನೆರಡು ಗಂಟೆ ಯಾಕೆ ದುಡಿಯಬೇಕಾಯಿತು ಎಂದು ಅವರು ಪ್ರಶ್ನೆ ಮಾಡಿಕೊಳ್ಳುವುದಿಲ್ಲ. ಸಮಾಜದಲ್ಲಿರುವ ಅಸಮಾನತೆ ಅಸಹಜವಾಗಿ ಕಾಣುವುದಿಲ್ಲ. ಎಲ್ಲರು ಸಂಜೆ ಐಪಿಎಲ್ ನೋಡಿ ಮಲಗುತ್ತಾರೆ. ಕ್ರಿಕೆಟ್ ಭಾರತೀಯರನ್ನು ಇಷ್ಟೆಲ್ಲಾ ಪ್ರಭಾವಿಸಿದರು ಅದು ಕೈಗೆಟುಕುವುದು ಧನಿಕರಿಗೆ ಮಾತ್ರ. It is essentially a game of elites.

ಎಲೈಟ್ ಕ್ರಿಕೆಟ್ ಮತ್ತು ಬಂಡವಾಳಶಾಯಿಗಳ ಗ್ರಾಂಡ್ ಮಿಲನವಾದದ್ದು 1996 ರ ವಿಶ್ವಕಪ್ ಸಮಯದಲ್ಲಿ. ಮೈದಾನದ ಒಳಗೆ ವಿವಿಧ ದೇಶಗಳ ತಂಡಗಳು ಸೆಣೆಸಿದರೆ, ಮೈದಾನದ ಹೊರಗೆ ಕೋಕ್, ಪೆಪ್ಸಿ ಯಂತಹ ಬಹುರಾಷ್ಟ್ರೀಯ ಕಂಪನಿಗಳು ಕಾಳಗಕ್ಕೆ ಇಳಿದಿದ್ದವು. ಕೋಕ್- ಅಫಿಷಿಯಲ್ ಡ್ರಿಂಕ್ ಆಫ್ ದ ವರ್ಲ್ಡ್ ಕಪ್ ಅಂತಾದರೆ, ಪ್ರಾಯೋಜಕತ್ವದ ಅವಕಾಶವಂಚಿತ ಪೆಪ್ಸಿ “ ದೇರ್ ಈಸ್ ನಥಿಂಗ್ ಅಫೀಷಿಯಲ್ ಅಬೌಟ್ ಇಟ್” ಎಂಬ ಅಭಿಯಾನ ಶುರು ಮಾಡಿಕೊಂಡಿತ್ತು. ಬಹುರಾಷ್ಟ್ರೀಯ ಕಂಪನಿಗಳು ಪ್ರಯೋಜಕರಾದ ಮೇಲಂತೂ ಕ್ರೀಡೆ ಕ್ರೀಡೆಯಾಗಿ ಉಳಿಯಲಿಲ್ಲ. ಕ್ರೀಡಾಂಗಣಗಳು ರಣರಂಗವಾದವು. ಕಂಪನಿಗಳು ಭಾರತಿಯರಲ್ಲಿ ಅತಿಯಾದ ರಾಷ್ಟ್ರ ಪ್ರೇಮ ಬಿತ್ತಿದರೆ, ಅದೇ ಕಂಪನಿಗಳು ಪಾಕಿಸ್ತಾನದಲ್ಲೂ ಅದೇ ಕೆಲಸದಲ್ಲಿ ನಿರತವಾಗಿದ್ದವು. ಕ್ರಿಕೆಟ್ ಕ್ರೀಡೆಯ ವ್ಯಾಪಾರೀಕರಣ, ಶಿವ ಸೇನೆ ಕ್ರಿಕೆಟ್ ಪಿಚ್ ನಾಶಮಾಡಿದ್ದು, ಅತಿಯಾದ ರಾಷ್ಟ್ರೀಯತೆಯ ಹುಟ್ಟು, ರಥಯಾತ್ರೆಗಳು, ಮಂದಿರ ಮಸೀದಿ ಕಲಹ, ಕೋಮುಗಲಭೆಗಳೆಲ್ಲವೂ ಜಾಗತೀಕರಣ ಮತ್ತು ಉದಾರೀಕರಣದ ಶಿಶುಗಳು ಎಂಬುದನ್ನ ಮರೆಯಬಾರದು. ಬೆಂಗಳೂರಿನಲ್ಲಿ ನೆಡೆದ ಭಾರತ ಪಾಕಿಸ್ತಾನ ನಡುವಣ ನೆಡೆದ 1996 ವಿಶ್ವಕಪ್ ಕ್ವಾಟರ್ ಫೈನಲ್ ಪಂದ್ಯ, ಮತ್ತು ಈಡನ್ ಗಾರ್ಡನ್ ನಲ್ಲಿ ನೆಡೆದ ಶ್ರೀಲಂಕಾ – ಭಾರತದ ನಡುವಣ ಪಂದ್ಯವನೊಮ್ಮೆ ನೋಡಿಬಿಡಿ.

ಭಾರತದ ಎಲೈಟ್ ಗಳು ಮತ್ತು ಕಂಪನಿಗಳು ಹೈಪರ್ ರಾಷ್ಟ್ರವಾದವನ್ನ ಜನರ ಮನದಲ್ಲಿ ಸ್ಥಾಪಿಸಲು ಕ್ರಿಕೆಟನ್ನ ಸಮರ್ಥವಾಗಿ ಬಳಸಿಕೊಂಡರು. ಎಂಬತ್ತರ ದಶಕದಲ್ಲಿ ಕ್ರೀಡಾಂಗಣದಲ್ಲಿ ನಡೆಯುವ ರೋಚಕ ಪಂದ್ಯಗಳನ್ನ ನೋಡುತ್ತಾ ಚಪ್ಪಾಳೆ ತಟ್ಟುತ್ತಿದ್ದ ಪ್ರೇಕ್ಷಕರ ಕೈಯಲ್ಲಿ ತೊಂಬತ್ತರ ದಶಕದಲ್ಲಿ ದೊಡ್ಡ ದೊಡ್ಡ ಭಾವುಟಗಳು, ಮೈ ಮುಖಕೆಲ್ಲಾ ಮೂರು ಬಣ್ಣ ಬಳಿದುಕೊಳ್ಳುವುದು ಕಾಣಸಿಕೊಳ್ಳಲು ಶುರುವಾಗಿದ್ದು ಹೈಪರ್ ರಾಷ್ಟ್ರವಾದದ ನಿರ್ದರ್ಶನಗಳಲ್ಲವೇ? ಮುಂದುವರೆದು ಇಂಡಿಯಾ ಪಾಕಿಸ್ತಾನದ ನಡುವೆ ಯಾವುದೇ ಘರ್ಷಣೆಯಾದರು ಮೊದಲು ಕಳಚಿ ಬೀಳುತ್ತಿದ್ದ ಕೊಂಡಿಯೇ ಕ್ರಿಕೆಟ್ ಕ್ರೀಡೆಯದು. Snapping cricketing ties was THE Solution.

ಕ್ರಿಕೆಟ್ ಬಳಸಿ ಹೈಪರ್ ರಾಷ್ಟ್ರವಾದ ಹುಟ್ಟಿ ಹಾಕುವ ಕಾರ್ಯ ಯಶಸ್ವಿಯಾಗಿದೆ. ಹೈಪರ್ ರಾಷ್ಟ್ರವಾದಿಗಳು ಆಲೋಚಿಸದ ಹಾಗೆ ಮಾಡಲು ಮತ್ತದೇ ಕ್ರಿಕೆಟಿನ ಪ್ರಯೋಗ ಜಾರಿಯಲ್ಲಿದೆ. ಸದ್ಯಕ್ಕೆ ಏನನ್ನೂ ಪ್ರಶ್ನಿಸದ ಬಹುಸಂಖ್ಯಾತ ಜಡ ಜನ ಸಮುದಾಯದ ಸೃಷ್ಟಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಪ್ರಕ್ರಿಯೆಗೆ ಐಪಿಎಲ್ ಕೊಡುಗೆ ಅಪಾರ. ಸರ್ಕಾರಿ ಸಂಸ್ಥೆಗಳು ಯಾವ ಖಾಸಗಿ ಕಂಪನಿಗೆ ಬಿಕರಿಯಾಯಿತು ಎಂಬ ಮಾಹಿತಿ ಸಾಮಾನ್ಯ ಜನರಿಗಿಲ್ಲದಿದ್ದರೂ ಯಾವ ತಂಡಕ್ಕೆ ಯಾವ ಆಟಗಾರ ಎಷ್ಟು ಕೋಟಿಗೆ ಬಿಕರಿಯಾದ ಎಂಬ ಸ್ಪಷ್ಟ ಮಾಹಿತಿಯಿರುತ್ತದೆ. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾದರೆ ಬೇಸರವಿಲ್ಲ ಆದರೆ ಆರ್ ಸಿಬಿ ಕಪ್ ಗೆಲ್ಲುತ್ತಿಲ್ಲದಕ್ಕೆ ಅತಿಯಾದ ಬೇಸರವಿದೆ ಎನ್ನುವಂತಹ ಜನಸಂಖ್ಯೆ ಸೃಷ್ಟಿಯಾಗಿದೆ! ಇಷ್ಟೆಲ್ಲಾ ರಾಜಕೀಯಗಳ ನಡುವೆ ಬಡ ಯುವಕರನ್ನಇನ್ನಷ್ಟು ಬಡತನಕ್ಕೆ ತಳ್ಳುವ ಡ್ರೀಮ್ ಇಲೆವೆನ್ ನಂತಹ ಜೂಜು ಆಡುವ ಅಪ್ಲಿಕೇಶನ್ಗಳ ಉದಯವಾದ ದಿನವೇ ನಾನು ಕ್ರಿಕೆಟ್ ನೋಡುವುದನ್ನ ನಿಲ್ಲಿಸಿದೆ… ಐಪಿಎಲ್ ಒಂದೊಂದೇ ಸೀಸನ್ ಮುಗಿಯುತ್ತಿದ್ದಂತೆ ಸಮಾಜದ ಜಡತ್ವವೂ ಏರುತ್ತಿದ್ದೆ. ಮುಂದಿನ ದಿನಗಲ್ಲಿ ಎಲೈಟ್ಗಳ ಕ್ರೀಡೆ ಕ್ರಿಕೆಟಿನ ಗುರಿಯೇನು ಕಾದು ನೋಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *