ಇಂಟರ್‌ನೆಟ್ ನಿರ್ಬಂಧ: ಇರಾನ್ ಮೊದಲು, ಭಾರತಕ್ಕೆ 2ನೇ ಸ್ಥಾನ!

2015ರಿಂದ ಏಷ್ಯಾದಲ್ಲಿ ನಡೆದಿರುವ ಅತ್ಯಂತ ಹೆಚ್ಚು ಇಂಟರ್‌ನೆಟ್‌ ನಿರ್ಬಂಧ ಪ್ರಕರಣಗಳಲ್ಲಿ 75% ಪ್ರಕರಣಗಳು ಭಾರತದ್ದಾಗಿದೆ

ಬೆಂಗಳೂರು: ಈ ವರ್ಷದ ಜೂನ್‌ವರೆಗೆ ವಿಶ್ವದಲ್ಲೆ ಅತೀ ಹೆಚ್ಚು ಬಾರಿ ಇಂಟರ್‌ನೆಟ್‌ ನಿರ್ಬಂಧಿಸಿದ ದೇಶಗಳಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ ಎಂದು ಸರ್ಫ್‌ಶಾರ್ಕ್‌ನ ಇಂಟರ್‌ ನೆಟ್ ಶಟ್‌ಡೌನ್ ಟ್ರ್ಯಾಕರ್ ವರದಿ ನೀಡಿದೆ. ಸರ್ಫ್‌ಶಾರ್ಕ್‌ ಇಂತಹ ನಿರ್ಬಂಧಗಳನ್ನು ನಿರಂತರವಾಗಿ ಟ್ರ್ಯಾಕ್ ಮಾಡುತ್ತಿರುತ್ತದೆ. ಇಂಟರ್‌ ನೆಟ್‌ ನಿರ್ಬಂಧಿಸಿದ ದೇಶಗಳಲ್ಲಿ ಇರಾನ್ ಮೊದಲನೇ ಸ್ಥಾನದಲ್ಲಿದೆ.

ಈ ವರ್ಷದ ಜೂನ್‌ ವರೆಗೆ ಭಾರತದಲ್ಲಿ ಇಂಟರ್‌ನೆಟ್‌ ನಿರ್ಬಂಧದ ಒಟ್ಟು 9 ಪ್ರಕರಣಗಳು ದಾಖಲಾಗಿದೆ ಎಂದು ವರದಿ ಉಲ್ಲೇಖಿಸಿದ್ದು, ಇರಾನ್‌ನಲ್ಲಿ ಈ ವರೆಗೆ 14 ಪ್ರಕರಣ ದಾಖಲಾಗಿದೆ. ಭಾರತದಲ್ಲಿ 2015ರಿಂದ ಇಂಟರ್‌ ನೆಟ್‌ ಅಡಚಣೆಗಳ 111 ಪ್ರಕರಣಗಳು ವರದಿಯಾಗಿದೆ ಎಂದು ಸರ್ಫ್‌ಶಾರ್ಕ್‌ ವರದಿ ಹೇಳಿದ್ದು, ಇದು ಏಷ್ಯಾ ಖಂಡದಲ್ಲೆ ಅತೀ ಹೆಚ್ಚು ಎಂದು ಹೇಳಿದೆ.

2015 ರಿಂದ ವಿಶ್ವದಲ್ಲೆ ಅತೀ ಹೆಚ್ಚು ಇಂಟರ್‌ ನೆಟ್ ಸ್ಥಗಿತಗೊಂಡಿದ್ದು ಏಷ್ಯಾ ಖಂಡದಲ್ಲಾಗಿದೆ ಎಂದು ವರದಿ ಹೇಳಿದೆ. 2015ರಿಂದ 10 ಏಷಿಯನ್ನರಲ್ಲಿ 9 ಜನರು ಇಂಟರ್‌ ನೆಟ್‌ ಸ್ಥಗಿತದ ಪರಿಣಾಮ ಅನುಭವಿಸಿದವರು ಎಂದು ವರದಿ ಉಲ್ಲೇಖಿಸಿದೆ. ಅಲ್ಲದೆ ಏಷ್ಯಾದಲ್ಲಿ ನಡೆದಿರುವ ಇಂಟರ್‌ ನೆಟ್‌ ಸ್ಥಗಿತದ 75% ಪ್ರಕರಣಗಳು ಭಾರತದ್ದಾಗಿದ್ದು, ಅದರಲ್ಲೂ ಜಮ್ಮು ಕಾಶ್ಮೀರದ ಇಂಟರ್‌ ನೆಟ್ ಸ್ಥಗಿತ ಪ್ರಕರಣಗಳು ಇದಕ್ಕೆ ಹೆಚ್ಚಿನ ಕೊಡುಗೆ ನೀಡಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಮಣಿಪುರ ಹಿಂಸಾಚಾರ ಭುಗಿಲೆದ್ದ ನಂತರ 10 ರಾಷ್ಟ್ರ, 10 ರಾಜ್ಯಗಳನ್ನು ಸುತ್ತಾಡಿದ್ದ ಪ್ರಧಾನಿ ಮೋದಿ!

“ಭಾರತದಲ್ಲಿ 2020 ಮತ್ತು 2022 ರ ನಡುವೆ ವರದಿಯಾದ 127 ಇಂಟರ್‌ ನೆಟ್ ಸ್ಥಗಿತಗಳಲ್ಲಿ ಕನಿಷ್ಠ 54 ಪ್ರಕರಣಗಳು ಪ್ರತಿಭಟನೆಗಳಿಗೆ ಪ್ರತಿಕ್ರಿಯೆಯಾಗಿ ಮಾಡಿದ್ದಾಗಿದೆ” ಎಂದು ಕಳೆದ ತಿಂಗಳು ಹ್ಯೂಮನ್ ರೈಟ್ಸ್ ವಾಚ್ ಮತ್ತು ಇಂಟರ್‌ ನೆಟ್ ಫ್ರೀಡಂ ಫೌಂಡೇಶನ್‌ನ ವರದಿ ಸೂಚಿಸಿತ್ತು. ಡಿಜಿಟಲ್ ಹಕ್ಕುಗಳ ಗುಂಪಾದ “ಆಕ್ಸೆಸ್ ನೌ” ಭಾರತ ಸತತವಾಗಿ ನಾಲ್ಕ ವರ್ಷದಿಂದ ಜಗತ್ತಿನಾದ್ಯಂತ ಅತಿ ಹೆಚ್ಚುಇಂಟರ್‌ ನೆಟ್ ಸ್ಥಗಿತಗೊಳಿಸುವಿಕೆಯನ್ನು ಕಂಡಿದೆ ಎಂದು ಕಳೆದ ವರ್ಷ ಹೇಳಿಕೊಂಡಿತ್ತು.

ಸರ್ಫ್‌ಶಾರ್ಕ್ ವಕ್ತಾರರಾದ ಗೇಬ್ರಿಯೆಲ್ ರಾಕೈಟೈಟ್-ಕ್ರಾಸೌಸ್ಕೆ, “ಭಾರತದಲ್ಲಿ ಇಂಟರ್‌ ನೆಟ್ ನಿರ್ಬಂಧಗಳ ಆತಂಕಕಾರಿ ಉಲ್ಬಣಕ್ಕೆ ಸಾಕ್ಷಿಯಾಗುವುದು ತುಂಬಾ ಕಳವಳಕಾರಿಯಾಗಿದೆ. ಅದರಲ್ಲೂ ವಿಶೇಷವಾಗಿ ಪ್ರತಿಭಟನೆಗಳ ಮಧ್ಯೆ ಇಂಟರ್‌ ನೆಟ್‌ ನಿರ್ಬಂಧಿಸಲಾಗಿದೆ. ಈ ನಿರ್ಬಂಧಗಳು ಪ್ರಪಂಚದ ಇತರ ಭಾಗಗಳಿಗೆ ಮಾಹಿತಿಯನ್ನು ಹರಡಲು, ಹೆಚ್ಚಿನ ಪ್ರತಿಭಟನೆಗಳನ್ನು ಸಂಘಟಿಸಲು ಮತ್ತು ಸ್ನೇಹಿತರು ಮತ್ತು ಪ್ರೀತಿಪಾತ್ರರನ್ನು ಸಂಪರ್ಕಿಸುವ ಜನರ ಸಾಮರ್ಥ್ಯವನ್ನು ತೀವ್ರವಾಗಿ ಮಿತಿಗೊಳಿಸುತ್ತವೆ” ಎಂದು ಹೇಳಿದ್ದಾರೆ.

ಮೇ 3 ರಿಂದ ಮಣಿಪುರದಲ್ಲಿ ಮುಂದುವರಿದ ಇಂಟರ್‌ ನೆಟ್ ನಿರ್ಬಂಧಗಳ ಮಧ್ಯೆ ಈ ವರದಿ ಬಂದಿದೆ. ಮಣಿಪುರದಲ್ಲಿ ಸೀಮಿತ ಶೈಲಿಯ ಇಂಟರ್‌ ನೆಟ್ ಸೇವೆಗಳನ್ನು ಮರುಸ್ಥಾಪಿಸಲು ಬಿರೇನ್ ಸಿಂಗ್ ಸರ್ಕಾರಕ್ಕೆ ಅನುಮತಿಸಿದ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಈ ವಾರ ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.

ವಿಡಿಯೊ ನೋಡಿ: ಗುಜರಾತ್‌ನಲ್ಲಿ ಭಾರಿ ಮಳೆ | ಮುಚ್ಚಲ್ಪಟ್ಟ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು 

Donate Janashakthi Media

Leave a Reply

Your email address will not be published. Required fields are marked *