ಬೆಂಗಳೂರು: ಅಮೆರಿಕದ ಡಲ್ಲಾಸ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ‘ತಾಯಿ ಕಸ್ತೂರ್ ಗಾಂಧಿ’ ಚಿತ್ರದ ಸಂಕಲನಕ್ಕಾಗಿ ಸುರೇಶ್ ಅರಸ್ ಅವರಿಗೆ ಅತ್ಯುತ್ತಮ ʻಸಂಕಲನಕಾರ ಪ್ರಶಸ್ತಿʼ ಲಭಿಸಿದೆ.
ಚಿತ್ರದ ಕಸ್ತೂರಬಾ ಪಾತ್ರದಲ್ಲಿ ಹರಿಪ್ರಿಯಾ ಹಾಗೂ ಗಾಂಧಿ ಪಾತ್ರದಲ್ಲಿ ದುನಿಯಾ ಕಿಶೋರ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ‘ತಾಯಿ ಕಸ್ತೂರ್ ಗಾಂಧಿ’ ಚಿತ್ರ ಅಮೆರಿಕಾದಲ್ಲಿ ನಡೆದ ಡಲ್ಲಾಸ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಎಲ್ಲೆರ ಮೆಚ್ಚುಗೆಯನ್ನು ಗಳಿಸಿಕೊಂಡಿದೆ.
ರಾಜ್ಯ, ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಅರಸ್ ಅವರು ಈಗ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಇದಕ್ಕಾಗಿ ಇಡೀ ಚಿತ್ರತಂಡವು ಅವರನ್ನು ಅಭಿನಂದಿಸುತ್ತದೆ’ ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ
ಗಾಂಧೀಜಿ ಬದುಕಿನಲ್ಲಿ ಮಾತ್ರವಲ್ಲ, ಸ್ವಾತಂತ್ರ್ಯ ಚಳುವಳಿಯಲ್ಲೂ ಕಸ್ತೂರ್ ಬಾ ವಹಿಸಿದ ಪಾತ್ರ ಬಹಳ ಮಹತ್ವದ್ದು. ಕಸ್ತೂರ್ ಬಾ ಗಾಂಧಿಯವರ ಜೀವನದ ಮುಖ್ಯ ಘಟನೆಗಳನ್ನು ಆಧರಿಸಿ ಮತ್ತು ಅವರ ಬದುಕಿನ ನೆಲೆಯಲ್ಲಿ ಗಾಂಧೀಜಿಯವರನ್ನು ಕಾಣುವ ವಿಶಿಷ್ಟ ದೃಷ್ಟಿಕೋನದಲ್ಲಿ ಇಬ್ಬರ ವ್ಯಕ್ತಿತ್ವಗಳನ್ನು ಆಧರಿಸಿ ಚಿತ್ರ ಮೂಡಿಬಂದಿದೆ.
ಶ್ರೀನಾಥ್, ಸುಂದರ್ ರಾಜ್, ಪ್ರಮೀಳಾ ಜೋಷಾಯ್, ರೇಖಾ, ವತ್ಸಲಾ ಮೋಹನ್ ಚಿತ್ರದಲ್ಲಿ ನಟಿಸಿದ್ದಾರೆ. ಬಿ ಜಿ ಗೀತಾ ಚಿತ್ರದ ನಿರ್ಮಾಪಕರಾಗಿದ್ದು, ಶಮಿತಾ ಮಲ್ನಾಡ್ ಸಂಗೀತ ನೀಡಿದ್ದಾರೆ. ನಾಗರಾಜ ಅದವಾನಿ ಚಿತ್ರದ ಕ್ಯಾಮರಾಮೆನ್.