ಮಡಿಕೇರಿ: ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ವರದಿ ನೀಡಲು ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗ ರಚನೆ ಮಾಡಿದ್ದೂ, ಆಯೋಗದ ಶಿಫಾರಸಿನ ಅನ್ವಯ ಒಳಮೀಸಲಾತಿ ಕಲ್ಪಿಸುವ ಸಂಬಂಧ ಸಮೀಕ್ಷೆಯನ್ನು ನಡೆಸಲು ಸರ್ಕಾರ ತೀರ್ಮಾನ ಮಾಡಿದೆ.
ಈ ಸಮೀಕ್ಷೆ ಮೇ 5ರಿಂದ ಆರಂಭವಾಗಲಿದೆ.
ಕೊಡಗು ಜಿಲ್ಲಾ ಪಂಚಾಯಿತಿ ಸಿಇಒ ಆನಂದ್ ಪ್ರಕಾಶ್ ಮೀನಾ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಡಿಕೇರಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ಸಂಬಂಧ ಮಾಸ್ಟರ್ ತರಬೇತಿದಾರರಿಗೆ ಕಾರ್ಯಾಗಾರದಲ್ಲಿ ಮಾತನಾಡಿದರು.
“ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ವರ್ಗೀಕರಣ ಕುರಿತು ಮೇ 5 ರಿಂದ ನಡೆಯುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಸಂಬಂಧ ಯಾವುದೇ ಗೊಂದಲಕ್ಕೆ ಅವಕಾಶ ಮಾಡದೆ ಸುಗಮ ಹಾಗೂ ಸುಲಲಿತವಾಗಿ ಸಮೀಕ್ಷೆ ಕೈಗೊಳ್ಳಬೇಕು” ಎಂದು ನಿರ್ದೇಶನ ನೀಡಿದರು.
ಇದನ್ನೂ ಓದಿ: ಡಾ.ಎಂ.ಎ.ಸಲೀಂ ನೂತನ ಡಿಜಿಪಿಯಾಗಿ ನೇಮಕವಾಗುವ ಸಾಧ್ಯತೆ
ಹೇಗೆ ನಡೆಯಲಿದೆ ಸಮೀಕ್ಷೆ?
ಸಿಇಒ ಆನಂದ್ ಪ್ರಕಾಶ್ ಮೀನಾ ಮಾತನಾಡಿ, “ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತು ನ್ಯಾಯಮೂರ್ತಿ ಡಾ. ಎಚ್. ಎನ್. ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗವು ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು ನಡೆಸುತ್ತಿದ್ದು, ಈ ಸಂಬಂಧ ಮಾಸ್ಟರ್ ಟ್ರೈನರ್‌ಗಳು ಪರಿಶಿಷ್ಟ ಜಾತಿಯ ಕುಟುಂಬಗಳು ಹೇಳುವ ಮಾಹಿತಿ ಮೊಬೈಲ್ ಆಪ್ ಮೂಲಕ ಭರ್ತಿ ಮಾಡಬೇಕು. ಈ ಸಂಬಂಧ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿ ಕಾರ್ಯನಿರ್ವಹಿಸಲಿದೆ” ಎಂದು ಹೇಳಿದರು.
“ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯು ಸರ್ಕಾರದ ಅತಿ ಮುಖ್ಯ ಕಾರ್ಯದಲ್ಲಿ ಒಂದಾಗಿದೆ. ಆ ನಿಟ್ಟಿನಲ್ಲಿ ಪರಿಶಿಷ್ಟ ಜಾತಿಯಲ್ಲಿನ ಯಾವುದೇ ಕುಟುಂಬಗಳು ಬಿಟ್ಟು ಹೋಗದಂತೆ ಸಮೀಕ್ಷೆ ಮಾಡುವುದು ಮುಖ್ಯವಾಗಿದೆ” ಎಂದರು.
“ಆ ನಿಟ್ಟಿನಲ್ಲಿ ಸಮೀಕ್ಷೆಗೆ ನಿಯೋಜಿಸಿರುವ ಸಿಬ್ಬಂದಿಗಳು ವೈಜ್ಞಾನಿಕ ಮತ್ತು ವಸ್ತುನಿಷ್ಠವಾಗಿ ಸಮೀಕ್ಷೆ ಮಾಡಬೇಕು. ಸಂಶಯಗಳಿದ್ದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು. ಸರ್ಕಾರದ ಮಾರ್ಗಸೂಚಿಯಂತೆ ಸಮೀಕ್ಷೆ ನಡೆಸಬೇಕು” ಎಂದು ಸಲಹೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಮಾತನಾಡಿ, “ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ವರ್ಗೀಕರಣ ಸಂಬಂಧ ಸಮೀಕ್ಷೆ ಕೈಗೊಳ್ಳಲಾಗಿದ್ದು, ಮೊಬೈಲ್ ಆಯಪ್ ಮೂಲಕ ಮನೆ ಮನೆ ಸಮೀಕ್ಷೆ ಮಾಡಬೇಕಿದೆ. ಸಮಗ್ರ ಸಮೀಕ್ಷೆಯು ಸರ್ಕಾರದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಯಾವುದೇ ರೀತಿಯ ಸಂಶಯ ಇಲ್ಲದಂತೆ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ಕೈಗೊಳ್ಳುವಂತೆ” ಸಲಹೆ ಮಾಡಿದರು.
ತಾಲ್ಲೂಕು ಸಂಪನ್ಮೂಲ ತರಬೇತಿ ಅಧಿಕಾರಿಗಳು ಸಮೀಕ್ಷೆ ಮಾಡುವವರಿಗೆ ಸರಿಯಾದ ಮಾಹಿತಿ ನೀಡುವಂತಾಗಬೇಕು. ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ಸಮಗ್ರ ಸಮೀಕ್ಷೆ ಕೈಗೊಂಡು ದತ್ತಾಂಶ ಸಂಗ್ರಹಿಸಲಾಗುತ್ತದೆ. ಮೇ 5 ರಿಂದ 17 ರವರೆಗೆ ಸಮೀಕ್ಷೆದಾರರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ಹಾಗೆಯೇ ಮೇ 19 ರಿಂದ 21ರ ತನಕ ಸಮೀಕ್ಷೆ ಬ್ಲಾಕ್‍ಗಳಲ್ಲಿ ವಿಶೇಷ ಶಿಬಿರ ಕೈಗೊಂಡು ಮನೆ ಮನೆ ಭೇಟಿಯಲ್ಲಿ ಬಿಟ್ಟು ಹೋದ ಪರಿಶಿಷ್ಟ ಜಾತಿಗಳ ಕುಟುಂಬಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಪರಿಶಿಷ್ಟ ಜಾತಿ ಮುಖಂಡರ ಜೊತೆ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಏಪ್ರಿಲ್ 29ರಂದು ಸಭೆ ನಡೆಯಲಿದ್ದು, ಪರಿಶಿಷ್ಟ ಜಾತಿಗಳ ಸಮಾಜದವರು ಸ್ವಯಂ ಪ್ರೇರಣೆಯಿಂದ ಸಭೆಯಲ್ಲಿ ಪಾಲ್ಗೊಂಡು ಮಾಹಿತಿ ಪಡೆಯಬಹುದಾಗಿದೆ.
ಮೇ 2ರಂದು ಗಣತಿದಾರರ ಹಂತದಲ್ಲಿ ತರಬೇತಿ ನಡೆಯಲಿದೆ. ತರಬೇತಿಗೆ ನಿಯೋಜನೆಗೆ ಆಗಿರುವ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಪರಿಶಿಷ್ಟ ಜಾತಿಯಲ್ಲಿನ ಮೂಲ ಜಾತಿಯನ್ನು ಸಮೀಕ್ಷೆ ಮಾಡುವುದು ಅತಿ ಮುಖ್ಯವಾಗಿದೆ.
ಮೊಬೈಲ್ ಅಪ್ಲಿಕೇಶನ್‍ನಲ್ಲಿ ಮಾಹಿತಿ ತುಂಬುವ ವಿಧಾನ, ಜಾತಿ, ಮೂಲ ಜಾತಿ/ ಉಪ ಜಾತಿ, ಪರಿಶಿಷ್ಟ ಜಾತಿ ಪ್ರಮಾಣ ಪತ್ರ, ಕುಟುಂಬದ ಪಡಿತರ ಚೀಟಿ ಸಂಖ್ಯೆ, ಕುಟುಂಬದ ಮುಖ್ಯಸ್ಥರ ಮತ್ತು ಸದಸ್ಯರ ಹೆಸರು, ಲಿಂಗ, ವಯಸ್ಸು, ಆಧಾರ್ ಕಾರ್ಡ್ ಸಂಖ್ಯೆ, ಶಿಕ್ಷಣ/ ವಿದ್ಯಾಭ್ಯಾಸ, ವೃತ್ತಿ, ಕುಟುಂಬದ ಕುಲಕಸುಬು, ಆಸ್ತಿವಿವರ, ಕೃಷಿ, ಕುಟುಂಬದ ಆದಾಯ, ಉದ್ಯೋಗ, ಹೀಗೆ ಹಲವು ಮಾಹಿತಿಯನ್ನು ಮೊಬೈಲ್ ಅಪ್ಲಿಕೇಶನ್‍ನಲ್ಲಿ ತುಂಬಬೇಕಿದೆ.
ಏಕಾಗಿ ನಡೆಯಲಿದೆ ಸಮೀಕ್ಷೆ?: ಸರ್ವೋಚ್ಚ ನ್ಯಾಯಾಲಯವು ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ತೀರ್ಪು ನೀಡಿದೆ. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಇರುವ ಜಾತಿಗಳನ್ನು ಉಪ ವರ್ಗೀಕರಣ ಮಾಡಿ ಒಳ ಮೀಸಲಾತಿಯನ್ನು ನೀಡಬಹುದು ಎಂದು 2024ರ ಆಗಸ್ಟ್, 01 ರಂದು ತೀರ್ಪು ನೀಡಿದೆ.
ಕರ್ನಾಟಕ ಸರ್ಕಾರವು ಒಳಮೀಸಲಾತಿ ಜಾರಿ ಮಾಡಲು ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗವನ್ನು ನೇಮಿಸಿ ಒಳ ಮೀಸಲಾತಿ ವರ್ಗೀಕರಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಉಪ ವರ್ಗೀಕರಣ ಕೈಗೊಳ್ಳಲು ಅವಶ್ಯವಿರುವ ದತ್ತಾಂಶ ಸಂಗ್ರಹಿಸಲು ಸಮೀಕ್ಷೆ ಕೈಗೊಳ್ಳಲು ಉದ್ದೇಶಿಸಿದೆ.
ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿರುವ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕ ಪ್ರಾತಿನಿಧ್ಯತೆ ಮತ್ತಿತರ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ಮಾಡುವುದು ಆಯೋಗದ ಉದ್ದೇಶವಾಗಿದೆ. ಪರಿಶಿಷ್ಟ ಜಾತಿಗಳ ಸ್ಥಿತಿಗತಿಗಳ ಬಗ್ಗೆ ವೈಜ್ಞಾನಿಕವಾಗಿ ಮತ್ತು ವಾಸ್ತವಿಕ ಮಾಹಿತಿ ಪಡೆದುಕೊಂಡು ಒಳ ಮೀಸಲಾತಿ ವರ್ಗೀಕರಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು ಆಯೋಗದ ಉದ್ದೇಶವಾಗಿದೆ.
ಪರಿಶಿಷ್ಟ ಜಾತಿಗಳ ನಿರ್ದಿಷ್ಟ ಸಂಖ್ಯೆ ಯಾವುದೇ ಸಮೀಕ್ಷೆ ದಾಖಲೆಗಳಿಂದ ಜಾತಿಗಳ ಜಾತಿವಾರು ಜನಸಂಖ್ಯೆಯ ಅಂಕಿ ಅಂಶಗಳು ಖಚಿತವಾಗಿ ದೊರೆಯುತ್ತಿಲ್ಲ. ಜಾತಿವಾರು ಸಮೀಕ್ಷೆ ಅಂಕಿ-ಅಂಶಗಳು ಲಭ್ಯವಿಲ್ಲದೇ ಇರುವುದರಿಂದ ಒಳ ಮೀಸಲಾತಿ ಉಪವರ್ಗೀಕರಣ ಮಾಡಲು ಸಾಧ್ಯವಾಗದೇ ಇರುವುದರಿಂದ ಈಗಿರುವ ಸ್ಥಿತಿಗಳಿಗೆ ಸಂಬಂಧಿಸಿದಂತೆ ವೈಜ್ಞಾನಿಕವಾದ ವಿಶ್ಲೇಷಣೆ ಕೈಗೊಂಡು ವರ್ಗೀಕರಣ ಮಾಡುವುದು ಸಮೀಕ್ಷೆಯ ಉದ್ದೇಶವಾಗಿದೆ.
ಸಮೀಕ್ಷೆಯಿಂದ ಹೊರಹೊಮ್ಮಿದ ಅಂಶಗಳ ಆಧಾರದಲ್ಲಿ ಅಂತಹ ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಾನಮಾನ ಅಧ್ಯಯನ ಮಾಡಿ ಒಳ ಮೀಸಲಾತಿ ವರ್ಗೀಕರಣ ಮಾಡುವುದಕ್ಕಾಗಿ ರಾಜ್ಯಾದ್ಯಂತ ಎಲ್ಲಾ ಪರಿಶಿಷ್ಟ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಕುರಿತು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳಲು ಉದ್ದೇಶಿಸಲಾಗಿದೆ.
ಇದನ್ನೂ ನೋಡಿ: ನಿಶಿಕಾಂತ್ ದುಬೆ, ಧನ್ಕರ್ ಅವರ ಸುಪ್ರೀಂಕೋರ್ಟ್ ವಿರುದ್ಧ ಮಾತುಗಳು ನ್ಯಾಯಾಂಗ ನಿಂದನೆಯಲ್ಲವೇ? Janashakthi Media