ಬೆಂಗಳೂರು: ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಮಧ್ಯಂತರ ಬಜೆಟ್ ಸುಳ್ಳಿನ ಕಂತೆ ಮತ್ತು ಖಾಸಗೀಕರಣದ ಹತಾಶ ಪ್ರಯತ್ನ ಎಂದು ಸಿಐಟಿಯು ತೀವ್ರವಾಗಿ ಖಂಡಿಸಿದೆ. ಇದು ಜನರ ಸರಾಸರಿ ಆದಾಯವು 50% ರಷ್ಟು ಹೆಚ್ಚಾಗಿದೆ ಮತ್ತು ಹಣದುಬ್ಬರವು ಮಿತವಾಗಿದೆ ಎಂದು ಹೇಳುವ ಮೂಲಕ ಮತ್ತೆ ಅಧಿಕಾರಕ್ಕೆ ಬರುವ ಪ್ರಯತ್ನವಾಗಿದೆ, ಆದರೆ ಇದೊಂದು ಕಟ್ಟುಕತೆ, ವಾಸ್ತವ ಸಂಗತಿ ಸಂಪೂರ್ಣ ಭಿನ್ನವಾಗಿದೆ ಎಂದು ಕಾರ್ಮಿಕ ಸಂಘಟನೆ ಹೇಳಿದೆ.
ಕೇಂದ್ರದ ಮಧ್ಯಂತರ ಬಜೆಟ್ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಿಐಟಿಯು, “ಅಗತ್ಯ ವಸ್ತುಗಳ ಬೆಲೆಗಳಲ್ಲಿ ಮತ್ತು ನಿರುದ್ಯೋಗದ ಹೆಚ್ಚಳ ಇಡೀ ದೇಶವನ್ನು ಆವರಿಸಿದೆ. ಐಎಲ್‍ಒ(ಅಂತರ್ರಾಷ್ಟ್ರೀಯ ಕಾರ್ಮಿಕ ಸಂಘಟನೆ) ವರದಿಯು ಭಾರತ ಸೇರಿದಂತೆ ವಿಶ್ವದಾದ್ಯಂತ ನಿಜವೇತನಗಳು ಕೆಳಗೆ ಬೀಳುತ್ತಿವೆ ಎಂಬುದನ್ನು ಬಿಚ್ಚಿಟ್ಟಿದೆ. ಬಡತನ ಸೂಚ್ಯಂಕ ಶ್ರೇಯಾಂಕ ಕುರಿತ ವಿಶ್ವಸಂಸ್ಥೆಯ ವರದಿಯು ಭಾರತದ ಸ್ಥಿತಿ ಹಿಂದೆಂದಿಗಿಂತಲೂ ಅತ್ಯಂತ ಕೆಟ್ಟದಾಗಿದೆ ಎಂದು ಬಯಲು ಮಾಡಿದೆ. ತಮ್ಮ ಬದುಕಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಹೆಣಗಾಡುತ್ತಿರುವ ಜನರಲ್ಲಿ ಆತ್ಮವಿಶ್ವಾಸ ತುಂಬುವ ಬದಲು ಮಧ್ಯಂತರ ಬಜೆಟ್ ವಾಸ್ತವತೆಯ ಕ್ರೂರ ತಮಾಷೆಗೆ ಇಳಿದಿದೆ ಎಂದು ಸಿಐಟಿಯು ತೀವ್ರ ಖೇದ ವ್ಯಕ್ತಪಡಿಸಿದೆ.
ಇದನ್ನೂ ಓದಿ:
ಹಣಕಾಸು ಮಂತ್ರಿಗಳು ತಮ್ಮ ಅತಿ ಚಿಕ್ಕ ಬಜೆಟ್ ಭಾಷಣದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಸಾಧನೆಗಳನ್ನು ಹಿಂದಿನ ಸರಕಾರಗಳೊಂದಿಗೆ ಹೋಲಿಸುವ ಹತಾಶ ಪ್ರಯತ್ನ ಮಾಡಿದ್ದಾರೆ. ಆದರೆ ನಿಜಸಂಗತಿಯೆಂದರೆ, ಇದು ದೇಶದಲ್ಲೇ ಅತ್ಯಂತ ಹೆಚ್ಚಿನ ಮಟ್ಟದಲ್ಲಿ, ಅಂದರೆ 4.09ಲಕ್ಷ ಕೋಟಿ ರೂ.ಗಳಷ್ಟು ಬೃಹತ್ ಪ್ರಮಾಣದಲ್ಲಿ ಖಾಸಗೀಕರಣವನ್ನು ಮಾಡಿರುವ ಆಳ್ವಿಕೆಯಾಗಿದೆ ಎಂದು ಸಿಐಟಿಯು ಹೇಳಿದೆ.
2024ರ ಹಣಕಾಸು ವರ್ಷರಲ್ಲಿ ರೂ.30000 ಕೋಟಿಗಳ ಗುರಿಗೆ ಎದುರಾಗಿ 2025ರ ಹಣಕಾಸು ವರ್ಷದಲ್ಲಿ ರೂ.50000 ಕೋಟಿ ಮೌಲ್ಯದ ಸಾರ್ವಜನಿಕ ವಲಯದ ಷೇರುಗಳನ್ನು ಹಿಂತೆಗೆದುಕೊಳ್ಳುವ ಗುರಿಯನ್ನು ಸರ್ಕಾರ ಹೊಂದಿದೆ. ಮಧ್ಯಂತರ ಬಜೆಟ್ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಖಾಸಗಿಯವರಿಗೆ ಮತ್ತಷ್ಟು ತೆರೆದು ಕೊಟ್ಟಿದೆ ಮತ್ತು ಅದಕ್ಕೆ ಅನುವು ಮಾಡಿಕೊಡಲು ರೂ. 1 ಲಕ್ಷ ಕೋಟಿಗಳ ನಿಧಿಯನ್ನು ಸ್ಥಾಪಿಸಲಾಗಿದೆ ಎಂದು ಸಿಐಟಿಯು ಹೇಳಿದ್ದು, ಹೊಸತನದ ಸೋಗಿನಲ್ಲಿ ಅದನ್ನು ಸಾಧಿಸಲು ಖಾಸಗಿ ವಲಯಕ್ಕೆ 50 ವರ್ಷಗಳ ಬಡ್ಡಿ ರಹಿತ ಸಾಲಗಳನ್ನು ಒದಗಿಸಲಾಗುತ್ತದೆ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ:
ಕಾರ್ಪೊರೇಟ್-ಪರ, ಶ್ರೀಮಂತ ಪರವಾದ ‘ವಿಕಸಿತ್ ಭಾರತ್’ನ ನೀಲನಕ್ಷೆ
ಬಜೆಟ್ ಸಲ್ಲಿಸುವಾಗ ದೊಡ್ಡ-ದೊಡ್ಡ ಮಾತುಗಳನ್ನಾಡುತ್ತಾ ವಿವಿಧ ಕಲ್ಯಾಣ ಕ್ರಮಗಳಿಗೆ ನೀಡಿದರೂ, 2019-20 ರಿಂದ 2022-23 ರ ನಡುವೆ ಕೃಷಿಗೆ, ರೈತರ ಕಲ್ಯಾಣಕ್ಕೆ ಎಂದು ಮೀಸಲಿಟ್ಟ 1 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡದೆ ಹಿಂದಕ್ಕೆ ಕೊಟ್ಟಿರುವುದು ಬಿಜೆಪಿ ಸರ್ಕಾರದ ಡಂಗುರಗಳ ವಂಚಕ ಸ್ವರೂಪವನ್ನು ಮತ್ತು ಅದು ಜನರಿಗೆ ಮಾಡುವ ಮೋಸವನ್ನು ಬಯಲಿಗೆ ತಂದಿದೆ ಎಂದು ಸಿಐಟಿಯು ಹೇಳಿದೆ.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ ಒಕ್ಕೂಟದ ಪರಿಕಲ್ಪನೆಯನ್ನೇ ಕಳಚಿ ಹಾಕಲು ಸರ್ವಪ್ರಯತ್ನ ಮಾಡುತ್ತಿರುವಾಗ, ರಾಜ್ಯಗಳೊಂದಿಗೆ ಸಮಾಲೋಚಿಸಿ ಮುಂದಿನ ಪೀಳಿಗೆಯ ಸುಧಾರಣೆಗಳಿಗೆ ನೀಲನಕ್ಷೆಯನ್ನು ರೂಪಿಸುವುದಾಗಿ ಬಜೆಟ್‌ನಲ್ಲಿ ಹೇಳಿರುವುದು ಒಂದು ಅಣಕವೇ ಸರಿ ಎಂದು ಕಾರ್ಮಿಕ ಸಂಘಟನೆ ಹೇಳಿದೆ.
ಇದನ್ನೂ ಓದಿ: ಬಡ ಕುಟುಂಬಕ್ಕೆ ಸಬ್ಸಿಡಿ ದರದಲ್ಲಿ ಸಕ್ಕರೆ | ಯೋಜನೆ ಮತ್ತೆ 2 ವರ್ಷ ವಿಸ್ತರಣೆ
ಈ ಸರ್ಕಾರದ ಕಳೆದ 10 ವರ್ಷಗಳ ಆಳ್ವಿಕೆಯ ದಾಖಲೆಯು ಅದರ ಕಾರ್ಮಿಕ ವಿರೋಧಿ, ರೈತ ವಿರೋಧಿ, ಜನವಿರೋಧಿ ಮತ್ತು ರಾಷ್ಟ್ರವಿರೋಧಿ ಸ್ವರೂಪವನ್ನು ಸ್ಪಷ್ಟವಾಗಿ ಪ್ರದರ್ಶಿಸಿರುವಾಗ, ಅದಕ್ಕನುಗುಣವಾಗಿಯೇ, ಈ ಮಧ್ಯಂತರ ಬಜೆಟ್ ಕಾರ್ಮಿಕರು, ರೈತರು ಮತ್ತು ಜನರಿಗೆ ಯಾವುದೇ ಸಕಾರಾತ್ಮಕ ಹೆಜ್ಜೆಗಳ ಬಗ್ಗೆ ಏನೂ ಹೇಳಿಲ್ಲ. ಬದಲಾಗಿ ಜೂನ್ 2024ರಲ್ಲಿ ಮತ್ತೆ ಅಧಿಕಾರಕ್ಕೆ ಬಂದು ತನ್ನ ‘ವಿಕಸಿತ್ ಭಾರತ್’ ನ ನೀಲನಕ್ಷೆಯನ್ನು ಕೊಟ್ಟಿರುವುದಾಗಿ ಹೇಳಿಕೊಂಡಿದೆ. ಅದರ ನವ ಉದಾರವಾದಿ ನೀತಿಗಳಿಗೆ ಅನುಗುಣವಾಗಿ ಅದು 2047 ರ ವೇಳೆಗೆ ನಿರ್ಮಿಸ ಬಯಸುತ್ತಿರುವುದು ಕಾರ್ಪೊರೇಟ್-ಪರ ಮತ್ತು ಶ್ರೀಮಂತ ಪರವಾದ ‘ವಿಕಸಿತ್ ಭಾರತ’ವನ್ನೇ ಆಗಿದೆ ಎಂದು ಸಿಐಟಿಯು ಹೇಳಿದೆ.
ಸರ್ಕಾರದ ಈ ನೀತಿಗಳ ವಿರುದ್ಧ ಸಿಐಟಿಯು ಮತ್ತು ಅದಕ್ಕೆ ಸಂಯೋಜಿತವಾದ ಸಂಘಟನೆಗಳು ಮತ್ತು ಅದರ ಸದಸ್ಯರು ಫೆಬ್ರವರಿ 16ರ ದೇಶವ್ಯಾಪಿ ಕೈಗಾರಿಕಾ ಹಾಗೂ ವಲಯವಾರು ಮುಷ್ಕರ ಮತ್ತು ಗ್ರಾಮೀಣ ಬಂದ್ ಸೇರಿದಂತೆ ಜನಸಮೂಹಗಳನ್ನು ವ್ಯಾಪಕವಾಗಿ ಅಣಿನೆರೆಸಬೇಕು ಎಂಬ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕೇಂದ್ರೀಯ ಕಾರ್ಮಿಕ ಸಂಘಗಳ ಜಂಟಿ ವೇದಿಕೆಯ ಕರೆಯನ್ನು ಯಶಸ್ವಿಗೊಳಿಸಲು ಸಂಘಟನೆಯು ಕರೆ ನೀಡಿದೆ.
ವಿಡಿಯೊ ನೋಡಿ: ಏನಿದು ಮಧ್ಯಂತರ ಬಜೆಟ್ ? ಚುನಾವಣಾ ರಾಮನ ಮುಂದೆ ಸಪ್ಪೆಯಾದ ಬಜೆಟ್ Janashakthi Media