ಬೆಂಗಳೂರು: ಹಸಿ ಹಾಗೂ ಒಣ ತ್ಯಾಜ್ಯ ಸಂಗ್ರಹಕ್ಕಾಗಿ ಪ್ರತ್ಯೇಕ ಬಿನ್‌ಗಳನ್ನು ನಗರದಲ್ಲಿ ಮೂರು ಮಹಡಿಗಳಿಗಿಂತ ಹೆಚ್ಚು ಇರುವ ಕಟ್ಟಡಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮಾರ್ಚ್ 3ರಂದು ಸೂಚನೆ ನೀಡಿದೆ.
ಪೂರ್ವ ವಲಯದಲ್ಲಿ ನಡೆದ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಮಾತನಾಡಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರದಲ್ಲಿ ಮೂರು ಮಹಡಿಗಳಿಗಿಂತ ಹೆಚ್ಚು ಇರುವ ಕಟ್ಟಡಗಳಲ್ಲಿ ಹಸಿ ಹಾಗೂ ಒಣ ತ್ಯಾಜ್ಯ ಸಂಗ್ರಹಕ್ಕಾಗಿ ಪ್ರತ್ಯೇಕ ಬಿನ್‌ಗಳ ಸ್ಥಾಪನೆಯನ್ನು ಕಡ್ಡಾಯ ಮಾಡಲಾಗಿದ್ದು, ತ್ಯಾಜ್ಯ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಬೋರ್‌ವೆಲ್ ರಸ್ತೆಯ ಅಗಲೀಕರಣದ ವಿಷಯಕ್ಕೆ ಪ್ರತಿಕ್ರಿಯಿಸಿ, ರಸ್ತೆ ವಿಸ್ತರಣೆಗಾಗಿ ಕಾಯ್ದಿರಿಸಿದ ಆಸ್ತಿಗಳನ್ನು ಬಿಇಸಿಸಿ ಸ್ವಾಧೀನಪಡಿಸಿಕೊಳ್ಳಬೇಕು. ರಸ್ತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: ಇರಾನ್ ವಿರುದ್ದದ ಅಮೆರಿಕ-ಇಸ್ರೇಲ್ ನಡೆಸಿದ ಕ್ಷಿಪಣಿ ದಾಳಿಗೆ 165 ಶಾಲಾ ಬಾಲಕಿಯರು ಮೃತ
ಕೆಆರ್ ಪುರಂ ವಿಧಾನಸಭಾ ಕ್ಷೇತ್ರದೊಳಗಿನ ಪ್ರಮುಖ ರಸ್ತೆಗಳನ್ನು ಪರಿಶೀಲಿಸಲು ಮತ್ತು ಪಾದಚಾರಿ ಮಾರ್ಗಗಳಿಗೆ ದುರಸ್ತಿ ಮತ್ತು ಹೊಸ ಪಾದಚಾರಿ ಮಾರ್ಗಗಳನ್ನು ನಿರ್ಮಿಸಬೇಕಾದ ಪ್ರದೇಶಗಳನ್ನು ಗುರುತಿಸುವ ಪಟ್ಟಿಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಎಇಸಿಎಸ್ ಲೇಔಟ್‌ನಲ್ಲಿ ಪಾದಚಾರಿ ಮಾರ್ಗಗಳ ಮೇಲಿನ ಅತಿಕ್ರಮಣಗಳನ್ನು ತೆಗೆದುಹಾಕುವಂತೆಯೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರಸ್ತೆ ಬದಿಗಳಲ್ಲಿ, ಖಾಲಿ ಸ್ಥಳಗಳಲ್ಲಿ ತ್ಯಾಜ್ಯವನ್ನು ಸುರಿಯಲಾಗುತ್ತಿದೆ ಮತ್ತು ಮನೆ-ಮನೆಗೆ ತ್ಯಾಜ್ಯ ಸಂಗ್ರಹಣೆಯಲ್ಲಿನ ಅಕ್ರಮಗಳ ಬಗ್ಗೆ ನಾಗರಿಕರ ದೂರುಗಳಿಗೆ ಪ್ರತಿಕ್ರಿಯಿಸಿ, ಸಮಸ್ಯೆಯಿರುವ ಪ್ರದೇಶಗಳನ್ನು ಗುರುತಿಸಿ ತ್ಯಾಜ್ಯ ನಿರ್ವಹಣಾ ಸಮಸ್ಯೆಗಳನ್ನು ವ್ಯವಸ್ಥಿತವಾಗಿ ಪರಿಹರಿಸಲು ಸೂಕ್ಷ್ಮ ಯೋಜನೆಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಒಟ್ಟು 150 ಅಹವಾಲುಗಳು ಸ್ವೀಕರಿಸಲ್ಪಟ್ಟಿದ್ದು, ಸಂಬಂಧಿತ ಅಧಿಕಾರಿಗಳಿಗೆ ತಕ್ಷಣ ಸ್ಪಂದಿಸುವಂತೆ ಸೂಚನೆ ನೀಡಿದರು.
ಇದನ್ನೂ ನೋಡಿ: ಗಾಂಧಿ, ನೆಹರೂ ವಿಚಾರಗಳ ಮೇಲೆ ದಾಳಿ: ಉಗ್ರಪ್ಪ ಆರೋಪJanashakthi Media
