ಕೇಂದ್ರ ಸಂಪುಟದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ: ಶಿವಕುಮಾರ ಮೇಟಿ

ಬೆಂಗಳೂರು: ಇತ್ತೀಚೆಗೆ ರಚನೆಯಾದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ಕೇಂದ್ರ ಸರ್ಕಾರದ ಸಂಪುಟದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದ್ದು, ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರು ಅನ್ಯಾಯ ಸರಿಪಡಿಸಬೇಕು ಎಂದು ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ಅಧ್ಯಕ್ಷ ಶಿವಕುಮಾರ್ ಆರ್. ಮೇಟಿ ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಕೇಂದ್ರ ಸಚಿವ ಸಂಪುಟದಲ್ಲಿ ಕರ್ನಾಟಕದ ಐವರು ಸಂಸದರಿಗೆ ಮಂತ್ರಿ ಸ್ಥಾನ ನೀಡಲಾಗಿದ್ದು ಸಂತಸದ ವಿಷಯವಾದರೂ, ಸದಾ ಬಿಜೆಪಿಯನ್ನು ಬೆಂಬಲಿಸುತ್ತ ಬಂದಿರುವ ಉತ್ತರ ಕರ್ನಾಟಕ ಭಾಗದ ಕೇವಲ ಒಬ್ಬರಿಗೆ ಮಾತ್ರ ಸಂಪುಟ ದರ್ಜೆಯ ಸ್ಥಾನ ನೀಡಲಾಗಿದ್ದು, ದಕ್ಷಿಣ ಕರ್ನಾಟಕದ ಮೂವರಿಗೆ ಸಚಿವ ಸ್ಥಾನ ಹಾಗೂ  ಒಬ್ಬರು ರಾಜ್ಯ ಸಭಾ ಸದಸ್ಯರಿಗೆ ಸಚಿವ ಸ್ಥಾನ ನೀಡಿದ್ದು, ಇದು ಉತ್ತರ ಕರ್ನಾಟಕ ಭಾಗಕ್ಕೆ ಸಾಮಾಜಿಕ ಹಾಗೂ ಪ್ರಾದೇಶಿಕತೆಯ ದೃಷ್ಟಿಯಿಂದ ಅನ್ಯಾಯವಾದಂತಾಗಿದೆ.

ಇದನ್ನೂ ಓದಿ: ಪೋಕ್ಸೋ ಪ್ರಕರಣ: ಯಡಿಯೂರಪ್ಪಗೆ ಸಿಐಡಿ ನೋಟಿಸ್; ಕೇಸ್​ ರದ್ದು ಕೋರಿ ಬಿಎಸ್‌ವೈ ಹೈಕೋರ್ಟ್​ ಮೊರೆ

ಉತ್ತರ ಕರ್ನಾಟಕ ಭಾಗದಲ್ಲಿ ಪ್ರಮುಖವಾಗಿ ಇಬ್ಬರು ಮಾಜಿ ಮುಖ್ಯಮಂತ್ರಿ ಗಳಾದ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಬಸವರಾಜ ಬೊಮ್ಮಾಯಿ ಹಾಗೂ ಜಗದೀಶ ಶೆಟ್ಟರ್ ಅವರಲ್ಲಿ ಒಬ್ಬರಿಗಾದರೂ ಕೇಂದ್ರ ಸಂಪುಟದಲ್ಲಿ ಅವಕಾಶ ನೀಡಬೇಕಿತ್ತು. ಅಲ್ಲದೇ ಬಾಗಲಕೋಟೆಯಿಂದ ಸತತ ನಾಲ್ಕು ಬಾರಿ ಸಂಸದರಾಗಿರುವ ಪಿ.ಸಿ. ಗದ್ದಿಗೌಡರ್, ವಿಜಯಪುರ ಕ್ಷೇತ್ರದಿಂದ ಆಯ್ಕೆಯಾಗಿರುವ ದಲಿತ ಸಮುದಾಯದ ಹಿರಿಯ ಸಂಸದರಾದ ರಮೇಶ್ ಜಿಗಜಿಣಗಿ, ಉತ್ತರ ಕರ್ನಾಟಕ ಭಾಗದವರೇ ಆಗಿರುವ ಚಿತ್ರದುರ್ಗ ಕ್ಷೇತ್ರದ ಸಂಸದ ದಲಿತ ನಾಯಕ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರಲ್ಲಿ ಯಾರಿಗಾದರೂ ಸಂಪುಟದಲ್ಲಿ ಸ್ಥಾನ ನೀಡುತ್ತಾರೆ ಎಂಬ ನಿರೀಕ್ಷೆ ಉತ್ತರ ಕರ್ನಾಟಕ ಜನರದ್ದಾಗಿತ್ತು.

ಆದರೆ, ನೂತನ ಸಂಪುಟದಲ್ಲಿ ಈ ಭಾಗಕ್ಕೆ ಕೇವಲ ಒಬ್ಬರಿಗೆ ಮಾತ್ರ ಸಂಪುಟದಲ್ಲಿ ಅವಕಾಶ ಕಲ್ಪಿಸಿ, ಉತ್ತರ ಕರ್ನಾಟಕ ಭಾಗಕ್ಕೆ ತಾರತಮ್ಯ ತೋರಿದಂತಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಉತ್ತರ ಕರ್ನಾಟಕ ಭಾಗಕ್ಕೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಕೇಂದ್ರದ ಬಿಜೆಪಿ ನಾಯಕರ ಗಮನಕ್ಕೆ ತರುವಂತೆ ಆಗ್ರಹಿಸುವುದಾಗಿ ತಿಳಿಸಿದ್ದಾರೆ.

ಇದನ್ನೂ ನೋಡಿ: ಕದವ ತಟ್ಟಿದರು ಕವಿ – ಸು.ರಂ. ಎಕ್ಕುಂಡಿ, ವಾಚನ Janashakthi Media

Donate Janashakthi Media

Leave a Reply

Your email address will not be published. Required fields are marked *