ಕಲಬುರಗಿ: ‘ರಾಜ್ಯ ಸರ್ಕಾರ ಒಳಮೀಸಲಾತಿ ಹಂಚಿಕೆಯಲ್ಲಿ ರಾಜಕೀಯ ಒತ್ತಡದಿಂದ ಬಂಜಾರ, ಭೋವಿ, ಕೊರಚ-ಕೊರಮ ಸಮುದಾಯಗಳಿಗೆ ಅನ್ಯಾಯ ಮಾಡಿದೆ. ಈ ಅನ್ಯಾಯ ಖಂಡಿಸಿ ಸೆಪ್ಟೆಂಬರ್ 8ರಂದು ಬಂಜಾರ, ಭೋವಿ, ಕೊರಚ, ಕೊರಮ ಸಮಾಜ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಟನೆ ನಡೆಸಲಾಗುವುದು’ ಎಂದು ಮಾಜಿ ಸಚಿವ ಬಾಬುರಾವ್ ಚವ್ಹಾಣ ಹೇಳಿದರು.
‘ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರ ಈ ನಾಲ್ಕೂ ಸಮುದಾಯಗಳಿಗೆ ಶೇ 4.5ರಷ್ಟು ಮೀಸಲಾತಿ ಕೊಟ್ಟಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಈ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ನಿರೀಕ್ಷೆಯಿತ್ತು. ನಾಲ್ಕು ಸಮುದಾಯಗಳೊಂದಿಗೆ ಇನ್ನೂ 59 ಸಮುದಾಯಗಳನ್ನು ಸೇರಿಸಿ ಬರೀ ಶೇ 5ರಷ್ಟು ಮೀಸಲಾತಿ ಕೊಟ್ಟು ಅನ್ಯಾಯ ಮಾಡಿದೆ’ ಎಂದು ಸೆಪ್ಟೆಂಬರ್ 4ರಂದು ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಇದನ್ನೂ ಓದಿ: ಹೊಸದಿಲ್ಲಿ |ಬಿಹಾರ ವಿಧಾನಸಭೆಯ ಚುನಾವಣೆ ನವೆಂಬರ್ ನಲ್ಲಿ ನಡೆಯುವ ಸಾಧ್ಯತೆ
‘ಇದನ್ನು ಖಂಡಿಸಿ ಅಂದು ಬೆಳಿಗ್ಗೆ 11 ಗಂಟೆಗೆ ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಬಳಿಕ ಸೆಪ್ಟೆಂಬರ್.10ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ವಿವರಿಸಿದರು.
ಮಾಜಿ ಸಂಸದ ಡಾ. ಉಮೇಶ ಜಾಧವ ಮಾತನಾಡಿ, ‘ನಮ್ಮ ಸಮಾಜ ಐತಿಹಾಸಿಕವಾಗಿ ತುಳಿತಕ್ಕೊಳಗಾಗಿದೆ. ಹಿಂದಿನ ಜನಗಣತಿಯಲ್ಲಿ 19 ಲಕ್ಷದಷ್ಟಿದ್ದ ಬಂಜಾರ ಸಮುದಾಯವನ್ನು ನ್ಯಾ.ನಾಗಮೋಹನದಾಸ್ ವರದಿಯಲ್ಲಿ 14.50 ಲಕ್ಷದಷ್ಟು ತೋರಿಸಲಾಗಿದೆ. ಇದು ನಮ್ಮ ಸಮಾಜದ ಮೇಲಿನ ಈ ಯುಗದ ಘೋರ ಅನ್ಯಾಯವಾಗಿದೆ. ನಮ್ಮ ಸಮುದಾಯದ ಶೇ 25ರಿಂದ 40ರಷ್ಟು ಜನರು ಗುಳೆ ಹೋಗಿರುತ್ತಾರೆ. ಹೀಗಾಗಿ ಮತ್ತೊಮ್ಮೆ ನೈಜ ಸಮೀಕ್ಷೆ ನಡೆಸಿ, ಜನಸಂಖ್ಯೆ ಆಧಾರಿತ ಒಳಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಮುದಾಯಗಳ ಶಾಮರಾವ ಪವಾರ, ಖೇಮಸಿಂಗ್ ರಾಠೋಡ, ರಾಮಚಂದ್ರ ಜಾಧವ, ಚಂದು ಜಾಧವ, ಅನೀಲ ಜಾಧವ, ಈರಣ್ಣ ರಾವೂರಕರ, ಸಿದ್ರಾಮ ದಂಡಗುಲ್ಕರ್, ರಾಮಯ್ಯ ಪೂಜಾರಿ ಇದ್ದರು.
ಇದನ್ನೂ ನೋಡಿ: ಏನ್ ಸರ್ (SIR) ಇದು! ಮತದಾನದ ಹಕ್ಕಿಗೆ ಯಾಕೆ ಕೊಕ್ಕೆ? ವಿಶ್ಲೇಷಣೆ – ಗುರುರಾಜ ದೇಸಾಯಿ Janashakthi Media
