ಅಮಾನುಷ ಶೋಷಣೆಯೂ ಪಾಪಪ್ರಜ್ಞೆಯ ಪರದೆಯೂ

 

ಮಾನವೀಯ ಪ್ರಜ್ಞೆ ಇಲ್ಲದ ಸಮಾಜದಲ್ಲಿ  ಪಾಪಪ್ರಜ್ಞೆಯ ನಿವೇದನೆ ನಾಟಕೀಯವಾಗುತ್ತದೆ

ನಾ ದಿವಾಕರ

ಹಾಗಾದರೆ ನಮ್ಮ ಆಳುವ ವರ್ಗಗಳು ಮತ್ತು ವಿಶಾಲ ಸಮಾಜ ತೊಳೆಯಬೇಕಿರುವುದು ಯಾರ ಪಾದಗಳನ್ನು ? ಕಳೆದುಕೊಳ್ಳಬೇಕಿರುವುದು ಯಾವ ಪಾಪಪ್ರಜ್ಞೆಯನ್ನು ? ಪಾಪಪ್ರಜ್ಞೆಯ ನಿವೇದನೆಯಾಗಬೇಕಿರುವುದು ಯಾರ ಮುಂದೆ ? ಹಾಗೆ ನೋಡಿದರೆ ಅಧಿಕಾರ ರಾಜಕಾರಣವನ್ನು ಪ್ರತಿನಿಧಿಸುವವರು ತೊಳೆಯಬೇಕಾದ ಪಾದಗಳು ಕೋಟಿ ಸಂಖ್ಯೆಯಲ್ಲಿವೆ ಅಲ್ಲವೇ ? ದಾಳಿಗೊಳಗಾದ ಒಬ್ಬ ವ್ಯಕ್ತಿಯ ಪಾದ ತೊಳೆಯುವುದರಿಂದ ನಮ್ಮ ಚಾರಿತ್ರಿಕ ಪಾಪಗಳು ತೊಳೆದುಹೋಗುತ್ತವೆಯೇ ? ಒಂದು ಇಡೀ ಸಮುದಾಯ ಅಥವಾ ಸಮಾಜವೂ ಚಲಿಸುತ್ತದೆ ಆದರೆ ಅದರ ಪಾದಗಳು ತೊಳೆಯಲು ಸಿಗುವುದಿಲ್ಲ. ಏಕೆಂದರೆ ಸಮಾಜದ ಮುಂಚಲನೆಯ ಪ್ರತಿಯೊಂದು ಹೆಜ್ಜೆಯ ಹಿಂದೆ ನಾವೇ ರೂಢಿಸಿಕೊಂಡ ಸಂಸ್ಕೃತಿ ಇರುತ್ತದೆ.

ಜನಸಾಮಾನ್ಯರ ನಿತ್ಯ ಬದುಕಿನ ನಡುವೆ ತನ್ನ ಕಣ್ಣೆದುರಿನಲ್ಲೇ ನಡೆಯುವ ಅನ್ಯಾಯಗಳ ಬಗ್ಗೆ ಸ್ಮಶಾನ ಮೌನ ವಹಿಸುವ ಸಮಾಜವೊಂದು ತನ್ನನ್ನು ತಾನು ಅಪರಾಧಿ ಎಂದು ಪರಿಭಾವಿಸಿಕೊಳ್ಳುವ ಒಂದು  ಸನ್ನಿವೇಶವನ್ನು ಊಹಿಸಿಕೊಳ್ಳಲೂ ಸಾಧ್ಯವಾಗದ ಮಟ್ಟಿಗೆ ವಿಶಾಲ ಸಮಾಜದ ಬಹು ದೊಡ್ಡ ವರ್ಗ ತನ್ನ ಜಡತ್ವವನ್ನು ಸಾಬೀತುಪಡಿಸುತ್ತಿದೆ. ಒಂದು ಅಭಿವೃದ್ಧಿಶೀಲ ಅಥವಾ ಅಭಿವೃದ್ಧಿ ಹೊಂದಿದ ದೇಶ ಕೇವಲ ಮಾರುಕಟ್ಟೆ-ಬಂಡವಾಳ ಹಾಗೂ ಸಾರ್ವಜನಿಕ ಬದುಕಿನ ಮೇಲ್ಪದರದ ಸ್ಥಿತ್ಯಂತರಗಳನ್ನಷ್ಟೇ ಗಮನಿಸುತ್ತಾ ತನ್ನ ಬೆನ್ನ ಹಿಂದಿನ ಸಾಮಾಜಿಕ ವೈಪರೀತ್ಯ-ವ್ಯತ್ಯಯಗಳನ್ನು ನಿರ್ಲಕ್ಷಿಸುತ್ತಾ ನಡೆದರೆ ಏನಾಗಬಹುದು ? ಈ ಪ್ರಶ್ನೆಗೆ ಉತ್ತರ ವರ್ತಮಾನದ ಸಮಾಜದಲ್ಲಿ ಕಾಣುತ್ತದೆ. ನಾಗರಿಕತೆಯ ಮುಂದುವರೆದ ಭಾಗ ಆಧುನಿಕತೆ ಎಂದು ಒಪ್ಪಿಕೊಳ್ಳುವಾಗ ಈ ಆಧುನಿಕತೆಯ ವ್ಯಾಪ್ತಿಯಲ್ಲಿ ಯಾವುದನ್ನೆಲ್ಲಾ ಒಳಗೊಳ್ಳಬೇಕು ಎಂಬ ಜಿಜ್ಞಾಸೆ ಪ್ರತಿಯೊಂದು ಸಮಾಜಕ್ಕೂ ಇದ್ದೇ ಇರುತ್ತದೆ. ಇರಬೇಕಾದದ್ದೂ ಹೌದು.

ಈ ಜಿಜ್ಞಾಸೆಗೆ ಉತ್ತರವನ್ನು ಶೋಧಿಸುತ್ತಲೇ ಸಮಾಜಗಳು ಮತ್ತು ಸಮಾಜದ ಜೀವನ ನೀತಿ ನಿಯಮಗಳನ್ನು, ಸಾಂಸ್ಕೃತಿಕ ಚಿಂತನೆಗಳನ್ನು, ಸಾಮಾಜಿಕ ಭೂಮಿಕೆಗಳನ್ನು ರೂಪಿಸುವ ಅದೇ ಸಮಾಜದ ಬೌದ್ಧಿಕ ವಲಯವು ನಿತ್ಯ ಬದುಕಿನೊಳಗಿನ ವ್ಯತ್ಯಯಗಳನ್ನು ಗುರುತಿಸುತ್ತಾ ಹೆಜ್ಜೆ ಇಡಬೇಕಾಗುತ್ತದೆ. ಈ ಹೆಜ್ಜೆಗಳ ನಡುವೆಯೇ ಎದುರಾಗಬಹುದಾದ ಶೋಷಣೆ, ತಾರತಮ್ಯ, ದೌರ್ಜನ್ಯ, ಅಸಮಾನತೆ, ಅಧೀನತೆ, ಆಧಿಪತ್ಯ ಹಾಗೂ ಸಾಂಸ್ಕೃತಿಕ ಮೇಲರಿಮೆಗಳನ್ನು ಗುರುತಿಸುವುದರ ಮೂಲಕ ವಿಶಾಲ ಸಮಾಜದಲ್ಲಿ ಪ್ರಜ್ಞಾವಂತಿಕೆಯನ್ನು ಮೂಡಿಸಲು ಸಾಧ್ಯವಾಗುತ್ತದೆ. ಈ ಬೌದ್ಧಿಕ ವಲಯದಲ್ಲಿ ಪಾರಮ್ಯ ಸಾಧಿಸುವ ಜ್ಞಾನ ವಾಹಿನಿಗಳು ಕಾಲ ಕಳೆದಂತೆ ಹೆಚ್ಚು ಹೆಚ್ಚು ಬಹಿರ್ಮುಖಿಯಾಗುತ್ತಾ ತನ್ನ ಸುತ್ತಲಿನ ಸಾಂಸ್ಕೃತಿಕ ಒಳಸುಳಿಗಳನ್ನು ಅರ್ಥಮಾಡಿಕೊಳ್ಳುವತ್ತ ಸಾಗಿದರೆ, ಅಂತಹ ಸಮಾಜದ ಸಾರ್ವಜನಿಕ ನಿರೂಪಣೆಗಳು (Nerratives) ಸಮಾಜಮುಖಿಯಾಗಿ ಸಮಾನತೆಯ ಆಶಯಗಳನ್ನು ಪ್ರತಿಪಾದಿಸಲು ಸಾಧ್ಯವಾಗುತ್ತದೆ.

ಸಮಾಜ ಸಂಸ್ಕೃತಿ ಮತ್ತು ಮಾನವತೆ

ನಾಗರಿಕತೆಯನ್ನು ಮೈವೆತ್ತುಕೊಂಡು ಆಧುನಿಕತೆಯತ್ತ ಧಾವಿಸುತ್ತಿರುವ ಭಾರತೀಯ ಸಮಾಜ ತನ್ನ ತಂತ್ರಜ್ಞಾನಾಧಾರಿತ ಸಾಮಾಜಿಕ ಸ್ಥಿತ್ಯಂತರಗಳಲ್ಲಿ ಸಾಕಷ್ಟು ಸುಧಾರಣೆಗಳನ್ನು ಕಂಡಿದ್ದರೂ ತಂತ್ರಜ್ಞಾನಗಳು ಸೃಷ್ಟಿಸಬೇಕಾದ ವೈಜ್ಞಾನಿಕ ಚಿಂತನೆ ಮತ್ತು ಆಧುನಿಕ ವೈಚಾರಿಕ ಮನೋವೃತ್ತಿಯನ್ನು ಜನಸಾಮಾನ್ಯರ ನಡುವೆ ಬೆಳೆಸುವಲ್ಲಿ ವಿಫಲವಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಈ ವೈಫಲ್ಯದ ಕಾರಣವನ್ನು ಅದೇ ಸಮಾಜದಲ್ಲಿ ಅಂತರ್ಮುಖಿಯಾಗಿರುವ ಕಾಣುವ ಜಾತಿ ವ್ಯವಸ್ಥೆಯ ಬೇರುಗಳಲ್ಲಿ ಕಾಣಬಹುದು. ಜಾತಿ-ಮತ-ಧರ್ಮ-ಪಂಥ ಮತ್ತು ಇವುಗಳ ಮೂಲಕ ವಿಧಿಸಲ್ಪಡುವ ಸುತ್ತಲಿನ ಆಚರಣೆಗಳನ್ನು ತನ್ನ ವೈಯುಕ್ತಿಕ ಬದುಕಿನಲ್ಲಿ ಅಳವಡಿಸಿಕೊಂಡು, ಅನುಸರಿಸುವ ಪ್ರತಿಯೊಬ್ಬ ವ್ಯಕ್ತಿಯೂ ಅಂತರ್ಮುಖಿಯಾಗದೆ ಸುತ್ತಲ ಸಮಾಜವನ್ನು ಕಣ್ತೆರೆದು ನೋಡುವಂತಾದರೆ ಆಗ ಸಮಾಜ ಮತ್ತು ಸಂಸ್ಕೃತಿಯೊಳಗಿನ ಅಮಾನವೀಯ ಪದ್ಧತಿಗಳೆಲ್ಲವೂ ಸಾರ್ವಜನಿಕ ನಿರೂಪಣೆಯ (Narrative) ಮೇಲೆ ಪ್ರಭಾವ ಬೀರುತ್ತದೆ. ವ್ಯಕ್ತಿ ಮತ್ತು ಸಮುದಾಯದ ನಡುವಿನ ಸಂಬಂಧಗಳು ಸಾಂಸ್ಥಿಕ ನೆಲೆಯಲ್ಲಿ ರೂಪುಗೊಳ್ಳದೆ ಬಾಹ್ಯ ಸಮಾಜದ ಬಯಲಿನ ಒಂದು ಭಾಗವಾದಾಗ ಸಾಮಾಜಿಕ-ಸಾಂಸ್ಕೃತಿಕ ನಿರೂಪಣೆಗಳು ಸಂವೇದನಾಶೀಲವಾಗುತ್ತವೆ, ಮಾನವೀಯವಾಗಿರುತ್ತದೆ.

ಹೀಗಾದಾಗ ಮಾತ್ರ ನಮ್ಮ ಸುತ್ತಲೂ ನಡೆಯುತ್ತಿರುವ ನಿತ್ಯ ಅತ್ಯಾಚಾರ, ದೌರ್ಜನ್ಯ, ಹಿಂಸೆ ಮತ್ತು ಬಹುರೂಪಿ ತಾರತಮ್ಯಗಳು ಸಾರ್ವಜನಿಕ ಪ್ರಜ್ಞೆಯನ್ನು ಕೊಂಚಮಟ್ಟಿಗಾದರೂ ಅಲುಗಾಡಿಸಲು ಸಾಧ್ಯ. ಈ ಮಾತುಗಳನ್ನು ಇಂದು ಹೇಳಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಏಕೆಂದರೆ ಢಾಳಾಗಿ ಕಾಣುವ ಕ್ರೌರ್ಯ ಮತ್ತು ದೌರ್ಜನ್ಯಗಳನ್ನೂ ಸಾಪೇಕ್ಷತೆಯ ನೆಲೆಯಲ್ಲಿ ನೋಡುವ ಮನೋಭಾವ ಹೆಚ್ಚಾಗುತ್ತಿರುವುದರೊಂದಿಗೆ ಇಂತಹ ಅನ್ಯಾಯಗಳನ್ನು ಕಂಡೂ ಕಾಣದಂತಿರುವ ಜಾಣಕುರುಡು ಸಹ ಹೆಚ್ಚಾಗುತ್ತಿದೆ. ಸಹ ಮಾನವನ ಮೇಲೆ ನಡೆಯುವ ಯಾವುದೇ ರೀತಿಯ ದೌರ್ಜನ್ಯಗಳಿಗೆ ಸಮಾಜವೊಂದು ಕೂಡಲೇ ಸ್ಪಂದಿಸಬೇಕು ಎನ್ನುವ ಉದಾತ್ತ ಚಿಂತನೆಯನ್ನೇ ಕಳೆದುಕೊಂಡಿರುವ ವಿಶಾಲ ಸಮಾಜ, ತನ್ನ ಮೌನದ ಮೂಲಕ ಶೋಷಕರ ಅಮಾನುಷತೆಯನ್ನು ಪೋಷಿಸುತ್ತಿದೆಯೇನೋ ಎನ್ನುವ ಆತಂಕ ಸಹಜವಾಗಿಯೇ ಮೂಡುತ್ತದೆ. ಇದೇನೂ ಹೊಸ ವಿದ್ಯಮಾನವಲ್ಲ ಎಂದು ಹೇಳಬಹುದಾದರೂ, ನಾವು ನಾಗರಿಕತೆಯ ಉಚ್ಛ್ರಾಯ ಹಂತದಲ್ಲಿದ್ದೇವೆ ಎಂದು ಭಾವಿಸುವುದರಿಂದ, ಈ ಆತಂಕ ನ್ಯಾಯಯುತವಾಗಿಯೂ ಕಾಣುತ್ತದೆ.

ಇದನ್ನೂ ಓದಿ:ಹೋಟೆಲ್‍ನಲ್ಲಿ ನೀರು ಕುಡಿದ ವಿಚಾರ : ಕಾರು ಹತ್ತಿಸಿ ದಲಿತರಿಬ್ಬರನ್ನು ಹತ್ಯೆಗೈದ ದುಷ್ಕರ್ಮಿಗಳು

ಅಮಾನುಷ ಪ್ರವೃತ್ತಿಯ ನೆಲೆಗಳು

ತೀರಾ ಇತ್ತೀಚಿನ ಕೆಲವು ಘಟನೆಗಳನ್ನೇ ಗಮನಿಸಿದಾಗ ಈ ಕಾಳಜಿ ಮತ್ತು ಆತಂಕ ಮತ್ತಷ್ಟು  ಹೆಚ್ಚಾಗುತ್ತದೆ. ಮಧ್ಯಪ್ರದೇಶದಲ್ಲಿ ಪ್ರವೇಶ್‌ ಶುಕ್ಲಾ ಎಂಬ ವ್ಯಕ್ತಿ ಬುಡಕಟ್ಟು ಯುವಕನೊಬ್ಬನ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಪ್ರಕರಣ ಜಾತಿ ಶ್ರೇಷ್ಠತೆಯ ದರ್ಪ ಎಷ್ಟು ಹೀನಮಟ್ಟಕ್ಕೆ ಇಳಿಯಬಹುದು ಎನ್ನುವುದನ್ನು ಸೂಚಿಸುತ್ತದೆ. ಈ ಕೃತ್ಯ ಎಸಗಿದ ಆರೋಪಿ ಬಿಜೆಪಿ ನಾಯಕ ಎನ್ನುವುದು ಅಪ್ರಸ್ತುತ. ಏಕೆಂದರೆ ಮತ್ತೊಂದು ಘಟನೆಯಲ್ಲಿ ಮುಸ್ಲಿಂ ಯುವತಿಯೋರ್ವಳೊಡನೆ ಸಂಪರ್ಕದಲ್ಲಿದ್ದ ಇಬ್ಬರು ದಲಿತ ಯುವಕರನ್ನು ಆಕೆಯ ಸೋದರರು ಥಳಿಸಿರುವುದೇ ಅಲ್ಲದೆ, ಆತನ ಮುಖಕ್ಕೆ ಮಸಿ ಬಳಿದು, ಅರೆನಗ್ನರನ್ನಾಗಿ ಮಾಡಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿರುವುದು ಮತ್ತು ಬಲವಂತವಾಗಿ ಮಲ ತಿನ್ನಿಸಿರುವುದು ಶಿವಪುರಿ ಜಿಲ್ಲೆಯ ವಾರ್ಕಾಡಿ ಗ್ರಾಮದಲ್ಲಿ ವರದಿಯಾಗಿದೆ.  ಇದೇ ರಾಜ್ಯದ ಗ್ವಾಲಿಯರ್‌ನಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಮುಸ್ಲಿಂ ಯುವಕರನ್ನು ಥಳಿಸಿರುವ ದುಷ್ಕರ್ಮಿಗಳು ಬಲಾತ್ಕಾರದಿಂದ ಹಲ್ಲೆಗೊಳಗಾದ ವ್ಯಕ್ತಿಯು ಪಾದ ನೆಕ್ಕುವಂತೆ ಮಾಡುತ್ತಿರುವುದು ವರದಿಯಾಗಿದೆ.

ಮತ್ತೊಬ್ಬ ಸಹಮಾನವನ ಮೇಲೆ ಮೂತ್ರ ವಿಸರ್ಜನೆ ಮಾಡುವುದು, ಮತ್ತೊಬ್ಬರಿಗೆ ಮಲ ತಿನ್ನಿಸುವುದು, ಕಾನೂನು ಕೈಗೆತ್ತಿಕೊಂಡು ದಾಳಿಗೊಳಗಾದ ವ್ಯಕ್ತಿಗಳ ನಗ್ನ ಮೆರವಣಿಗೆ ಮಾಡುವುದು, ಪಾದ ನೆಕ್ಕುವಂತೆ ಮಾಡುವುದು ಇವೆಲ್ಲವೂ ಏನನ್ನು ಸೂಚಿಸುತ್ತದೆ ? ಈ ಮೂರು ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇಲ್ಲಿ ಜಾತಿ-ಮತಧರ್ಮ ಮತ್ತು ಸಮುದಾಯಗಳ ಅಸ್ಮಿತೆಗಳನ್ನು ಮೀರಿದ ಒಂದು ಸಾಮಾಜಿಕ ಕ್ರೌರ್ಯ ಗೋಚರಿಸಲೇಬೇಕಲ್ಲವೇ ? ಬುಡಕಟ್ಟು ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಮಧ್ಯಪ್ರದೇಶ ಸರ್ಕಾರ ಆರೋಪಿಯನ್ನು ಬಂಧಿಸಿರುವುದೇ ಅಲ್ಲದೆ ಆತನನ್ನು ಹೆತ್ತ ತಪ್ಪಿಗೆ ಪೋಷಕರಿಗೂ ಶಿಕ್ಷೆ ನೀಡಿ ಅವರ ಮನೆಯನ್ನೂ ಬುಲ್ಡೋಜ್‌ ಮಾಡಿದೆ. ಮತ್ತೊಂದು ಪ್ರಕರಣದಲ್ಲೂ ಆರೋಪಿಗಳ ಮನೆಯನ್ನು ಮತ್ತಾವುದೋ ಕಾರಣಕ್ಕೆ ಬುಲ್ಡೋಜ್‌ ಮಾಡಲಾಗಿದೆ. ಈ ಅರಣ್ಯ ನ್ಯಾಯದ ನಡುವೆಯೇ ದಾಳಿ/ಹಲ್ಲೆ/ಅಪಮಾನ/ಶೋಷಣೆಗೊಳಗಾದ ವ್ಯಕ್ತಿಗಳ ಕಡೆ ಅಥವಾ ಆ ವ್ಯಕ್ತಿಗಳು ಪ್ರತಿನಿಧಿಸುವ ಒಂದು ಸಮಾಜದ ಕಡೆ ನೋಡುವ ವ್ಯವಧಾನ ವಿಶಾಲ ಸಮಾಜದಲ್ಲಿರಬೇಕಲ್ಲವೇ ?

ಕಳೆದ ಡಿಸೆಂಬರ್‌ನಲ್ಲಿ ತಮಿಳುನಾಡಿನ ಪುದುಕ್ಕೋಟ್ಟೈ ಜಿಲ್ಲೆಯ ವಂಗೈವಯಲ್‌ ಗ್ರಾಮದಲ್ಲಿ ಪರಿಶಿಷ್ಟ ಸಮುದಾಯದವರು ವಾಸಿಸುವ ಕಾಲೋನಿಯ ನೀರಿನ ಟ್ಯಾಂಕ್‌ನಲ್ಲಿ ಮಲ ಸುರಿದ ಘಟನೆ ನಡೆದಿತ್ತು. ದಲಿತರು ದೇವಸ್ಥಾನ ಪ್ರವೇಶಿಸಿದ ಕಾರಣಕ್ಕಾಗಿ ವಿಧಿಸಲಾದ ಈ ಶಿಕ್ಷೆಗೆ ಬಲಿಯಾದವರು ಆ ನೀರು ಸೇವಿಸಿದ ಅಮಾಯಕ ಮಕ್ಕಳು ಮತ್ತು ಯಾವುದೇ ಸಂಜ್ಞೇಯ ಅಪರಾಧ ಎಸಗದ ಸಾಮಾನ್ಯ ಶ್ರಮಜೀವಿಗಳು. ಮಲ ತಿನ್ನಿಸುವ, ಮೈಮೇಲೆ ಮಲ ಸುರಿಯುವ ಇಂತಹ ಪ್ರಕರಣಗಳು ನಮ್ಮ ಸಮಾಜದಲ್ಲಿ ಇತ್ತೀಚಿನ ವಿದ್ಯಮಾನವೇನಲ್ಲ. ಮೈಮೇಲೆ ಮೂತ್ರ ವಿಸರ್ಜನೆ ಮಾಡುವುದು ಒಂದು ಹೊಸ ವಿಧಾನವಷ್ಟೇ. ಈ ಎಲ್ಲ ಅಪರಾಧಗಳನ್ನು ನಮ್ಮ ಸಮಾಜ ಮತ್ತು ಸರ್ಕಾರಗಳು ಹೇಗೆ ನೋಡುತ್ತಿವೆ ಎಂಬ ಜಟಿಲ ಪ್ರಶ್ನೆ ಯಾವುದೇ ನಾಗರಿಕ ಜಗತ್ತನ್ನು ಕಾಡಬೇಕಿದೆ.

ಆಳ್ವಿಕೆ ಮತ್ತು ಸಮಾಜ

ಸರ್ಕಾರಗಳ ದೃಷ್ಟಿಯಲ್ಲಿ ಇವೆಲ್ಲವೂ ಸಹ ಕಾನೂನು ಸುವ್ಯವಸ್ಥೆಯ ಸಮಸ್ಯೆಗಳಾಗಿ ಮಾತ್ರ ಕಾಣುತ್ತವೆ. ಆರೋಪಿಗಳ ಬಂಧನ, ವಿಚಾರಣೆ, ವಿಳಂಬ ನ್ಯಾಯ, ಶಿಕ್ಷೆ ಅಥವಾ ಬಿಡುಗಡೆ ಹೀಗೆ ನ್ಯಾಯವ್ಯವಸ್ಥೆಯ ಸುದೀರ್ಘ ಪ್ರಕ್ರಿಯೆಯ ನಂತರ ಇಡೀ ಘಟನೆಯೇ ವಿಸ್ಮೃತಿಗೆ ಜಾರಿಬಿಡುತ್ತದೆ. ಇತ್ತೀಚೆಗೆ ಆಳುವ ವರ್ಗಗಳು ಆರೋಪಿಗಳ ಮನೆಗಳನ್ನು ಬುಲ್ಡೋಜ್‌ಮಾಡಿ ಧ್ವಂಸ ಮಾಡುವ ಒಂದು ಹೊಸ ಆಡಳಿತ ಸಂಸ್ಕೃತಿಯನ್ನೂ ರೂಢಿಸಿಕೊಂಡಿವೆ. ನ್ಯಾಯಶಾಸ್ತ್ರದ ಸಂಹಿತೆಗಳ ಅನುಸಾರ ಅಪರಾಧಿಗಳು ಶಿಕ್ಷೆಗೊಳಗಾಗಬೇಕು, ಅಪರಾಧ ಸಾಬೀತಾಗುವವರೆಗೂ ಆರೋಪಿಯನ್ನು ನಿರಪರಾಧಿ ಎಂದೇ ಭಾವಿಸಬೇಕು. ಆದರೆ ಬುಲ್ಡೋಜರ್‌ ನ್ಯಾಯದಲ್ಲಿ ಆರೋಪಿಯೇ ಶಿಕ್ಷೆಗೊಳಗಾಗುತ್ತಾನೆ. ಜೊತೆಗೆ ಆತನ ಪೋಷಕರು, ಕುಟುಂಬದವರೂ ಸಹ ಮನೆ ಕಳೆದುಕೊಂಡು ನಿರ್ಗತಿಕರಾಗುವ ಘೋರ ಶಿಕ್ಷೆ ಅನುಭವಿಸುತ್ತಾರೆ. ಒಂದು ಸಮಾಜ ತನ್ನ ಮನುಜ ಸೂಕ್ಷ್ಮತೆಯನ್ನು ಕಳೆದುಕೊಂಡಾಗ, ಆ ಸಮಾಜವನ್ನು ಆಳುವ ರಾಜಕೀಯ ಪಕ್ಷಗಳು ಸಹ ಸಂಯಮ ಮತ್ತು ಸಂವೇದನೆಯನ್ನು ಕಳೆದುಕೊಂಡು ಈ ರೀತಿಯ ಕ್ರೌರ್ಯ ಪ್ರದರ್ಶನ ಮಾಡುತ್ತವೆ.

ಈ ಎಲ್ಲಾ ಪ್ರಕರಣಗಳ ಬಗ್ಗೆ ಸರ್ಕಾರಗಳು ಸೂಕ್ತ ಕ್ರಮ ಜರುಗಿಸುವುದು ಆಳ್ವಿಕೆಯ ಕರ್ತವ್ಯ. ಆದರೆ ನಾಗರಿಕರು ಎಂದು ಬೆನ್ನುತಟ್ಟಿಕೊಳ್ಳುವ ಸಮಾಜದ ಕರ್ತವ್ಯವೇನು ? ಇತ್ತೀಚಿನ ಕೆಲವು ವಿದ್ಯಮಾನಗಳನ್ನು ಗಮನಿಸಿದಾಗ ಸಮಾಜದ ಪ್ರತಿಕ್ರಿಯೆಯಲ್ಲಿ ಕೆಲವು ವೈಪರೀತ್ಯಗಳನ್ನು ಗುರುತಿಸಬಹುದು. ಹಲ್ಲೆ/ದಾಳಿ/ಅತ್ಯಾಚಾರಕ್ಕೊಳಗಾದ ಸಂತ್ರಸ್ತ/ಸ್ತೆಯ ಜಾತೀಯ, ಧಾರ್ಮಿಕ ಅಸ್ಮಿತೆಗಳಿಗನುಸಾರವಾಗಿ ಅಮಾನುಷ ಘಟನೆಗಳ ವಿರುದ್ಧ ಪ್ರತಿಭಟನೆಗಳು ನಡೆಯುತ್ತವೆ. ಸಂತ್ರಸ್ತರನ್ನು ಮತ್ತು ಆರೋಪಿಗಳನ್ನು ಈ ಅಸ್ಮಿತೆಗಳ ನೆಲೆಯಲ್ಲೇ ಇಟ್ಟು ನೋಡುವುದರಿಂದ ಒಂದು ಇಡೀ ಸಮಾಜವನ್ನು ಬಲಿಪಶುವಾಗಿ ಅಥವಾ ದೋಷಿಯಾಗಿ ಕಾಣಲಾಗುತ್ತದೆ. ವ್ಯಕ್ತಿ ಜೀವನದ ಸಾಮುದಾಯಿಕ ಅಸ್ಮಿತೆಗಳೇ  ಇಡೀ ಸಮಾಜದ ಪ್ರತಿಕ್ರಿಯೆ ಅಥವಾ ಪ್ರತಿರೋಧದ ಮೂಲ ಧಾತುವಿನಂತೆ ಕಾಣುತ್ತದೆ. ಸಮಾಜದೊಳಗಿನ ನೋವು-ವೇದನೆ-ಯಾತನೆ ಮತ್ತು ಹಿಂಸೆಗೆ ಪ್ರತಿಕ್ರಯಿಸುವಾಗ ಸಮಷ್ಟಿ ಚಿಂತನೆಯನ್ನು ಕಳೆದುಕೊಂಡಿರುವ ಅಸ್ಮಿತೆಗಳ ಗುಂಗಿನಲ್ಲೇ ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತದೆ. ಒಂದು ಸಮಾಜಇಲ್ಲಿ ಕಳೆದುಹೋಗುವುದೇನು ? ಮಾನವ ಪ್ರಜ್ಞೆ ಅಲ್ಲವೇ ?

ಮಧ್ಯಪ್ರದೇಶದಲ್ಲಿ ನಡೆದಿರುವ ಮೂರೂ ಪ್ರಕರಣಗಳಲ್ಲಿ ಆರೋಪಿ/ಅಪರಾಧಿ ಮತ್ತು ಸಂತ್ರಸ್ತ ಎಂಬ ವಿಂಗಡನೆ ಮಾಡಿದರೆ ಅಲ್ಲಿ ನಮಗೆ ಮನುಷ್ಯರು ಮಾತ್ರ ಕಾಣುತ್ತಾರೆ. ಈ ಮನುಷ್ಯರು Vulnerable ಎನ್ನುವುದು ಸ್ಪಷ್ಟವಾಗಿ ಕಾಣುತ್ತದೆ. ಅಂದರೆ ಸಾಮಾಜಿಕವಾಗಿ ಕೆಳಸ್ತರದವರು, ಆರ್ಥಿಕವಾಗಿ ದುರ್ಬಲರು, ಸಾಂಸ್ಕೃತಿಕವಾಗಿ ನಿಕೃಷ್ಟವಾಗಿ ಕಾಣಲ್ಪಡುವವರು ಮತ್ತು ಒಟ್ಟಾರೆಯಾಗಿ ಶೋಷಣೆಗೆ ಗುರಿಯಾಗುವವರು. ಸಾಮುದಾಯಿಕ ನೆಲೆಯಲ್ಲಿ ನಿಂತು ನೋಡುವಾಗ ಇದು ಅದಲುಬದಲಾಗಿ ಕಾಣುವುದನ್ನೂ  ಗಮನಿಸಲೇಬೇಕಿದೆ. ಇದನ್ನೇ ನಾವು ಸಾಮಾಜಿಕ ವೈಪರೀತ್ಯ ಎನ್ನಬಹುದಲ್ಲವೇ ? ವಿವಿಧ ಸಮುದಾಯಗಳು ಸಾರ್ವಜನಿಕ ವಲಯದಲ್ಲಿ ರೂಪಿಸುವ ನಿರೂಪಣೆಗಳು (Narratives) ಈ ವ್ಯತ್ಯಯಗಳನ್ನು, ವೈಪರೀತ್ಯಗಳನ್ನು ಗುರುತಿಸಲು ವಿಫಲವಾಗುತ್ತವೆ. ಏಕೆಂದರೆ ಅಲ್ಲಿ ಸಾಮಾಜಿಕ ಸ್ಥಾನಮಾನ, ಅಂತಸ್ತು, ರಾಜಕೀಯ ಪ್ರಭಾವ ಮತ್ತು ಪಾರಮ್ಯ ಹಾಗೂ ಸಾಂಸ್ಕೃತಿಕ ಔನ್ನತ್ಯ ಮುನ್ನೆಲೆಗೆ ಬರುತ್ತದೆ.

ನಾಗರಿಕರು ಎಂದು ಬೆನ್ನುತಟ್ಟಿಕೊಳ್ಳುವ ನಮ್ಮ ಸಮಾಜ ಈ ವರ್ತುಲದಿಂದ ಹೊರಬರಬೇಕಿದೆ. ಇದು ಸರ್ಕಾರಗಳಿಂದ ಅಥವಾ ರಾಜಕೀಯ ಪಕ್ಷಗಳಿಂದ ಆಗುವಂತಹುದಲ್ಲ. ಏಕೆ ಎನ್ನುವುದನ್ನು ಮೂತ್ರ ವಿಸರ್ಜನೆಗೆ ಒಳಗಾದ ಬುಡಕಟ್ಟು ವ್ಯಕ್ತಿಯ ಪಾದಪೂಜೆ ಮಾಡುವ ಮೂಲಕ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್ ನಿರೂಪಿಸಿದ್ದಾರೆ. ಆಳ್ವಿಕರ ದೃಷ್ಟಿಯಲ್ಲಿ ಇಂತಹ ಅಮಾನುಷ ಕೃತ್ಯಗಳು ಪಾಪಕೃತ್ಯಗಳಾಗಿ ಮಾತ್ರ ಕಾಣುವುದರಿಂದ ಇಡೀ ಪಾಪವನ್ನು ತಮ್ಮ ತಲೆಯ ಮೇಲೆ ಹೊತ್ತು ಪರಿಭಾವಿತ ಪಾಪಪ್ರಜ್ಞೆಯನ್ನು ಕಳೆದುಕೊಳ್ಳುವುದು ಒಂದು ಮಾನವೀಯ ಪ್ರಕ್ರಿಯೆಯಾಗಿ ಕಾಣುತ್ತದೆ. ಅಥವಾ ರಾಜಕೀಯವಾಗಿ ಲಾಭದಾಯಕ ಕ್ರಿಯೆಯಾಗಿ ಪರಿಣಮಿಸುತ್ತದೆ. ಇದಕ್ಕಿಂತಲೂ ಹೆಚ್ಚಿನದನ್ನು ಯೋಚಿಸುವ ವ್ಯವಧಾನವಾಗಲೀ, ಸಂಯಮವಾಗಲೀ ನಮ್ಮ ರಾಜಕೀಯ ನಾಯಕರಲ್ಲಿ ಉಳಿದಿಲ್ಲ. ಮೂತ್ರ ವಿಸರ್ಜನೆ ಅಥವಾ ಮಲ ತಿನ್ನಿಸುವ ಪ್ರಕರಣದಲ್ಲಿ ಕಾಣಬೇಕಿರುವುದು ನಮ್ಮ ಸಮಾಜದ ಗರ್ಭದೊಳಗೇ ಜೀವಂತಿಕೆಯಿಂದಿರುವ ಕ್ರೌರ್ಯ, ಅಮಾನುಷತೆ ಮತ್ತು ಸಾಂಸ್ಕೃತಿಕ ಮೇಲರಿಮೆ. ಶ್ರೇಣೀಕೃತ ಸಮಾಜದ ಸಹಜ ಪ್ರವೃತ್ತಿಯಾದ ಈ ಮೇಲರಿಮೆಯೇ ದೇಶಾದ್ಯಂತ ನಡೆಯುತ್ತಿರುವ ಅಸ್ಪೃಶ್ಯತೆಯ ಪ್ರಕರಣಗಳಿಗೂ ಕಾರಣವಾಗಿದೆ. ಇದರೊಟ್ಟಿಗೆ ಪುರುಷಾಧಿಪತ್ಯವೂ ಮೇಳೈಸಿದಾಗ ಅಮಾಯಕ ಮಹಿಳೆಯರು ಅಮಾನುಷತೆಗೆ ಬಲಿಯಾಗುತ್ತಾರೆ.

ಸಾಮಾಜಿಕ ನೈತಿಕತೆ ಮತ್ತು ಜವಾಬ್ದಾರಿ

ಹಾಗಾದರೆ ನಮ್ಮ ಆಳುವ ವರ್ಗಗಳು ಮತ್ತು ವಿಶಾಲ ಸಮಾಜ ತೊಳೆಯಬೇಕಿರುವುದು ಯಾರ ಪಾದಗಳನ್ನು ? ಕಳೆದುಕೊಳ್ಳಬೇಕಿರುವುದು ಯಾವ ಪಾಪಪ್ರಜ್ಞೆಯನ್ನು ? ಪಾಪಪ್ರಜ್ಞೆಯ ನಿವೇದನೆಯಾಗಬೇಕಿರುವುದು ಯಾರ ಮುಂದೆ ? ಹಾಗೆ ನೋಡಿದರೆ ಅಧಿಕಾರ ರಾಜಕಾರಣವನ್ನು ಪ್ರತಿನಿಧಿಸುವವರು ತೊಳೆಯಬೇಕಾದ ಪಾದಗಳು ಕೋಟಿ ಸಂಖ್ಯೆಯಲ್ಲಿವೆ ಅಲ್ಲವೇ ? ದಾಳಿಗೊಳಗಾದ ಒಬ್ಬ ವ್ಯಕ್ತಿಯ ಪಾದ ತೊಳೆಯುವುದರಿಂದ ನಮ್ಮ ಚಾರಿತ್ರಿಕ ಪಾಪಗಳು ತೊಳೆದುಹೋಗುತ್ತವೆಯೇ ? ಒಂದು ಇಡೀ ಸಮುದಾಯ ಅಥವಾ ಸಮಾಜವೂ ಚಲಿಸುತ್ತದೆ ಆದರೆ ಅದರ ಪಾದಗಳು ತೊಳೆಯಲು ಸಿಗುವುದಿಲ್ಲ. ಏಕೆಂದರೆ ಸಮಾಜದ ಮುಂಚಲನೆಯ ಪ್ರತಿಯೊಂದು ಹೆಜ್ಜೆಯ ಹಿಂದೆ ನಾವೇ ರೂಢಿಸಿಕೊಂಡ ಸಂಸ್ಕೃತಿ ಇರುತ್ತದೆ. ಈ ಸಂಸ್ಕೃತಿಯನ್ನು ಮರುವಿಮರ್ಶೆಗೊಳಪಡಿಸುವುದು ಅವಶ್ಯವಲ್ಲವೇ ? ಇತಿಹಾಸ ಕಾಲದಿಂದಲೂ ನಡೆಯುತ್ತಿರುವ ಶೋಷಣೆ ಮತ್ತು ಕ್ರೌರ್ಯಗಳೇ ಇಂದಿಗೂ ಮರುಕಳಿಸುತ್ತಿರುವಾಗ ಪಾಪಪ್ರಜ್ಞೆ ಮೂಡಬೇಕಿರುವುದು ಆಳ್ವಿಕೆಯಲ್ಲೋ ಅಥವಾ ನಾಗರಿಕ ಎಂದು ಗುರುತಿಸಿಕೊಳ್ಳುವ ವಿಶಾಲ ಸಮಾಜದಲ್ಲೋ ? ಅರಿತೋ ಅರಿಯದೆಯೋ ಮಾಡಿದ ಪಾಪಗಳನ್ನೇನೂ ನಾವು ಕಾಣುತ್ತಿಲ್ಲ. ಎಲ್ಲವೂ ಸಹ ಪ್ರಜ್ಞಾಪೂರ್ವಕವಾಗಿಯೇ ಕಾಣುತ್ತವೆ. ಏಕೆಂದರೆ ಯಾವುದೋ ಒಂದು ಪ್ರಾಚೀನ ಸಂಹಿತೆ ನಮ್ಮೊಳಗಿನ ಅಮಾನುಷ ಕೃತ್ಯಗಳಿಗೆ ಅಧಿಕೃತತೆ ನೀಡುತ್ತದೆ. ಈ ಸಂಹಿತೆಗಳೇ ಸಾಮೂಹಿಕ ಹತ್ಯಾಕಾಂಡದಂತಹ ಕ್ರೌರ್ಯಗಳಿಗೂ ಮಾನ್ಯತೆ ನೀಡುತ್ತವೆ.

ಒಂದು ಪ್ರಜ್ಞಾವಂತ ಸಮಾಜದಲ್ಲಿ ಪಾಪಪ್ರಜ್ಞೆ ಮೂಡುವುದೇ ಆದರೆ ಇಂತಹ ಕ್ರೂರ ಸಂಹಿತೆಗಳ ವಿರುದ್ಧ ಮೂಡಬೇಕಾಗುತ್ತದೆ. ಜಾತಿ ಶ್ರೇಷ್ಠತೆ ಮತ್ತು ಮತಶ್ರೇಷ್ಠತೆಯ ನಂಬಿಕೆಗಳು ಎರಡೂ ನೆಲೆಗಳಲ್ಲಿ ಅಂಧಾನುಸರಣೆಯ ಪರಿಕರಗಳಾದಾಗ ಮೇಲರಿಮೆ ಮತ್ತು ಅಹಮಿಕೆಯ ಮನೋಭಾವ ಸಹಜಾಭಿವ್ಯಕ್ತಿಯಾಗಿಬಿಡುತ್ತದೆ. ಇಲ್ಲಿ ಸಮಾಜವೇ ಸೃಷ್ಟಿಸುವಂತಹ ಭಿನ್ನತೆಯ ಪರದೆಗಳು ಸಾಮಾಜಿಕ ಪ್ರಾಬಲ್ಯ ಮತ್ತು ಆರ್ಥಿಕ ಪಾರಮ್ಯದ ಪರಿಣಾಮವಾಗಿ ಶಾಶ್ವತ ಗೋಡೆಗಳಾಗಿ ಪರಿಣಮಿಸುತ್ತವೆ. ಇಲ್ಲಿ ಶೋಷಿತರೊಳಗಿನ ಶೋಷಕ ವರ್ಗವೊಂದು ಉದಯಿಸುವುದು ಚಾರಿತ್ರಿಕ ವಾಸ್ತವವೂ ಆಗಿದೆ. ನಮ್ಮ ಸುತ್ತಲೂ ದಿನನಿತ್ಯ ನಡೆಯುತ್ತಿರುವ ಕೊಲೆ, ಹತ್ಯೆ, ದೈಹಿಕ ಹಲ್ಲೆ, ಮಹಿಳಾ ದೌರ್ಜನ್ಯ ಮತ್ತು ಅತ್ಯಾಚಾರ, ಅಸ್ಪೃಶ್ಯತೆ, ಗುಂಪು ಥಳಿತ ಮುಂತಾದ ಅಮಾನುಷ ಕೃತ್ಯಗಳಿಗೆ ಈ ಗೋಡೆಗಳೇ ರಕ್ಷಾ ಕವಚಗಳಾಗುತ್ತವೆ.

ಸಾಮಾಜಿಕ-ಸಾಂಸ್ಕೃತಿಕ ಸಾಮರಸ್ಯ, ಸೌಹಾರ್ದತೆ ಮತ್ತು ಸಮಾನತೆಯನ್ನು ಕಾಪಾಡುವುದು ತಮ್ಮ ಸಾಂವಿಧಾನಿಕ ಆದ್ಯತೆ ಮತ್ತು ಕರ್ತವ್ಯ ಎಂದು ಭಾವಿಸಿ ಆಳ್ವಿಕೆ ನಡೆಸಬೇಕಾದ ಅಧಿಕಾರ ರಾಜಕಾರಣಕ್ಕೆ ಇವುಗಳನ್ನು ಕದಡುವ ಯಾವುದೇ ಒಂದು ಪ್ರವೃತ್ತಿ ಅಥವಾ ಚಟುವಟಿಕೆ ಕೇವಲ ಕಾನೂನು ಸುವ್ಯವಸ್ಥೆಯ ವಿಷಯವಾಗಿ ಕಂಡಾಗ, ಮಧ್ಯಪ್ರದೇಶದಲ್ಲಿ ನಡೆದಂತಹ ಪಾದಪೂಜೆಯ ಪ್ರಹಸನಗಳು ನಡೆಯುತ್ತವೆ. ಅಥವಾ ಧಾರ್ಮಿಕ ನಾಯಕರಿಂದ ದಲಿತ ಕೇರಿಯ ಪಾದಯಾತ್ರೆ, ದಲಿತರ ಮನೆಯ ಭೋಜನ ಮುಂತಾದ ಪ್ರಸಂಗಗಳು ಸಂಭವಿಸುತ್ತವೆ. ಇಲ್ಲಿ ಪಾಪಪ್ರಜ್ಞೆಯೂ ಸಹ ವ್ಯಕ್ತಿನಿಷ್ಠವಾಗಿ ಕಾಣುವುದೇ ಹೊರತು ವಸ್ತುನಿಷ್ಠ ನೆಲೆಯಲ್ಲಿ ವ್ಯಕ್ತವಾಗುವುದಿಲ್ಲ. ಈ ಸಾಂಸ್ಥಿಕ ವೈಪರೀತ್ಯಗಳ ಹೊರತಾಗಿಯೂ ನಮ್ಮ ನಡುವೆ ಒಂದು ಸಂವೇದನಾಶೀಲ ಸಮಾಜ ಉಸಿರಾಡುತ್ತಿರುತ್ತದೆ. ಆದರೆ ಈ ಉಸಿರಾಡುತ್ತಿರುವ ಸಮಾಜದ ಬಹುಸಂಖ್ಯೆಯು ಸುತ್ತಲಿನ ಅಮಾನುಷತೆಗೆ ಮೌನ ಪ್ರತಿಕ್ರಿಯೆ ನೀಡುವ ಮೂಲಕ ತನ್ನ ನಿರ್ಲಿಪ್ತತೆಯನ್ನು ಪ್ರದರ್ಶಿಸುತ್ತಿರುತ್ತದೆ. ಈ ನಿರ್ಲಿಪ್ತತೆ/ಬೌದ್ಧಿಕ ನಿಷ್ಕ್ರಿಯತೆಗೆ ಕಾರಣಗಳೇನೇ ಇದ್ದರೂ ಇದು ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಬೇಜವಾಬ್ದಾರಿತನವಾಗಿ ಕಾಣುತ್ತದೆ. ಈ ಸಮಾಜದಲ್ಲಿ ಸೂಕ್ಷ್ಮ ಸಂವೇದನೆಯನ್ನು ಮೂಡಿಸುವ ಮೂಲಕ ಮನುಜ-ಲಿಂಗ ಸೂಕ್ಷ್ಮತೆಯನ್ನು ಉದ್ಧೀಪನಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ನಾವು ಕಳೆದುಕೊಳ್ಳಬೇಕಿರುವುದು ಪಾಪಪ್ರಜ್ಞೆಯನ್ನಲ್ಲ ಬದಲಾಗಿ ಸಮಾಜದ ನರನಾಡಿಗಳಲ್ಲೂ ಪ್ರವಹಿಸುತ್ತಿರುವ ಪಾತಕ ಪ್ರಜ್ಞೆಯನ್ನು, ತೊಡೆದುಹಾಕಬೇಕಿರುವುದು ಬೇರುಬಿಟ್ಟಿರುವ ಮೇಲರಿಮೆಯ ಪ್ರಜ್ಞೆಯನ್ನು. ತನ್ಮೂಲಕ ಒಂದು ಸಂವೇದನಾಶೀಲ ಸಮಾಜವನ್ನು ಕಟ್ಟಲು ಮುಂದಾಗಬೇಕಿದೆ.

ತೊಳೆಯಲ್ಪಡುವ ಪಾದಗಳು ಎಂದೂ ಮಲಿನವಾಗಿರುವುದಿಲ್ಲ. ತೊಳೆಯುವ ಮನಸ್ಸುಗಳೊಳಗಿನ ಮಾಲಿನ್ಯವನ್ನು ಹೋಗಲಾಡಿಸುವುದು ಸಮಾಜದ ಆದ್ಯತೆಯಾದರೆ ನಾವು ಹಚ್ಚಿಕೊಂಡಿರುವ ʼನಾಗರಿಕತೆʼಯ ಲೇಬಲ್‌ ಸಾರ್ಥಕವಾದೀತು.

Donate Janashakthi Media

Leave a Reply

Your email address will not be published. Required fields are marked *