ಪ್ರಕಾಶ್ ಕಾರಟ್
ಚುನಾವಣಾ ಪ್ರಣಾಳಿಕೆಗಳಲ್ಲಿ ನೀಡಿದ ಆಶ್ವಾಸನೆಗಳ ಆರ್ಥಿಕ ಪರಿಣಾಮಗಳ ಕುರಿತ ವಿಸ್ತೃತ ಮಾಹಿತಿಯನ್ನು ರಾಜಕೀಯ ಪಕ್ಷಗಳು ತನಗೆ ಸಲ್ಲಿಸಬೇಕೆಂದು ಭಾರತ ಚುನಾವಣಾ ಆಯೋಗ ಹೇಳಿದೆ. ಇಂಥ ಆಶ್ವಾಸನೆಗಳಿಂದ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ಆರ್ಥಿಕ ಸುಸ್ಥಿರತೆ ಮೇಲೆ ಬೀರುವ ಪರಿಣಾಮಗಳ ಬಗ್ಗೆಯೂ ಮಾಹಿತಿ ಕೊಡಬೇಕೆಂಬುದು ಆಯೋಗದ ಸೂಚನೆಯಾಗಿದೆ. ಇದಕ್ಕಾಗಿ, ಮಾದರಿ ನೀತಿ ಸಂಹಿತೆಯನ್ನು ತಿದ್ದುಪಡಿ ಮಾಡುವ ಪ್ರಸ್ತಾಪನೆಯನ್ನು ಅದು ಮಂಡಿಸಿದೆ. ಪಕ್ಷಗಳು ನೀಡುವ ಆಶ್ವಾಸನೆಗಳು ಮತ್ತು ಅದರ ಆರ್ಥಿಕ ಪರಿಣಾಮಗಳ ಕುರಿತು ಎರಡು ಭಾಗಗಳ ಅರ್ಜಿ ನಮೂನೆಗಳನ್ನು ತುಂಬಬೇಕೆನ್ನುವುದೇ ಆ ಪ್ರಸ್ತಾಪನೆಯಾಗಿದೆ.
ಇದು ಆಯೋಗದ ಅಸಾಧಾರಣ ಹಾಗೂ ತೀರಾ ವಿಚಿತ್ರ ಪ್ರಸ್ತಾಪವಾಗಿದೆ. “ಆಶ್ವಾಸನೆಗಳ ಸ್ವರೂಪದ ಬಗ್ಗೆ ಆಯೋಗಕ್ಕೆ ನಂಬಿಕೆಯಿಲ್ಲವಾದರೂ (ಅಗ್ನಾಸ್ಟಿಕ್) ಅಂಥ ಆಶ್ವಾಸನೆಗಳು ಬೀರಬಹುದಾದ ಹಣಕಾಸಿನ ಪರಿಣಾಮಗಳ ಬಗ್ಗೆ ಆರೋಗ್ಯಕರ ಚರ್ಚೆ ಆಗಬೇಕೆಂಬ ಉದ್ದೇಶದಿಂದ ಇಂಥ ಆಶ್ವಾಸನೆಗಳನ್ನು ಬಹಿರಂಗಪಡಿಸಲು ನಿಯಮ ರೂಪಿಸುವುದು ಅಗತ್ಯ. ತಕ್ಷಣದಲ್ಲಿ ಹಾಗೂ ಭವಿಷ್ಯದಲ್ಲಿ ದೀರ್ಘಕಾಲೀನ ಆರ್ಥಿಕ ಸುಸ್ಥಿರತೆ ಮೇಲೆ ಪರಿಣಾಮ ಬೀರುವ ವಿಚಾರದಲ್ಲಿ ಇದು ಅಗತ್ಯವಾಗಿದ್ದು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಇದು ಅನಿವಾರ್ಯ” ಎಂದು ಆಯೋಗ ತನ್ನ ಈ ಹೆಜ್ಜೆಗೆ ಕಾರಣವೇನೆಂದು ಸಮರ್ಥನೆ ನೀಡಿದೆ.
ಇಂಥ ವಿವರಣೆಗಳಿಗೆ ಯಾವುದೇ ಸಮರ್ಥನೆಯಿರಲಾರದು. ಸರ್ಕಾರಿ ಶಾಲೆಗಳಿಗೆ ಹೋಗುವ ಮಕ್ಕಳಿಗೆ ಉಚಿತ ಶಾಲಾ ಯುನಿಫಾರ್ಮ್ ನೀಡಬೇಕೆಂದು ರಾಜಕೀಯ ಪಕ್ಷವೊಂದು ನಿರ್ಧರಿಸಿದರೆ ಅದು ಎಷ್ಟು ಮೌಲ್ಯಯುತ ಎನ್ನುವುದನ್ನು ಚುನಾವಣೆಗಳಲ್ಲಿ ಮತ ಹಾಕುವ ಜನರು ನಿರ್ಧರಿಸಬೇಕು. ಸಮವಸ್ತ್ರಕ್ಕೆ ಎಷ್ಟು ವೆಚ್ಚವಾಗುತ್ತದೆ ಹಾಗೂ ಹಣಕಾಸನ್ನು ಹೇಗೆ ಹೊಂದಿಸುವುದು ಎನ್ನುವುದನ್ನು ಹೊಸದಾಗಿ ಆಯ್ಕೆಯಾಗುವ ಸರ್ಕಾರ ನಿರ್ಧರಿಸಬೇಕು. ಹಾಗಿದ್ದಲ್ಲಿ ಚುನಾವಣೆ ಆಯೋಗಕ್ಕೆ ಇಲ್ಲೇನು ಕೆಲಸ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಆಯೋಗದ ಪ್ರಕಾರ, ಅರ್ಜಿ ನಮೂನೆಯ ಎರಡನೇ ಭಾಗದಲ್ಲಿ ಕೆಲವು ಆರ್ಥಿಕ ಮಾಹಿತಿಗಳನ್ನು ಆಯಾ ರಾಜ್ಯ/ಕೇಂದ್ರ ಸರ್ಕಾರದ ಈಚಿನ ಬಜೆಟ್ ಅಂದಾಜು/ಪರಿಷ್ಕೃತ ಅಂದಾಜಿನ ಆಧಾರದಲ್ಲಿ ಪೂರ್ವಭರ್ತಿ (ಪ್ರೀಫಿಲ್) ಮಾಡಲಾಗಿರುತ್ತದೆ. ರಾಜಕೀಯ ಪಕ್ಷಗಳು ಅರ್ಜಿ ನಮೂನೆಯ ಬಲಭಾಗವನ್ನು ತುಂಬಿ ಈಚಿನ ಬಜೆಟ್ ಅಥವಾ ಪರಿಷ್ಕೃತ ಬಜೆಟ್ ಅಂದಾಜಿಗೆ ಇರುವ ಅಂತರವನ್ನು ಹೇಗೆ ತುಂಬಿಸಬಹುದು ಎಂದು ತಿಳಿಸಬೇಕು. ಇಂಥದ್ದೊAದು ಕ್ರಮಕ್ಕೆ ಅಧಿಕೃತ ಬಜೆಟ್ ರೂಪಿಸುವ ಆರ್ಥಿಕ ತಜ್ಞರ ತಂಡದ ನೆರವೇ ಬೇಕಾಗುತ್ತದೆ.
ಅದಕ್ಕಿಂತ ಹೆಚ್ಚಾಗಿ, ಭರವಸೆಗಳನ್ನು ಈಡೇರಿಸಲು ಅಗತ್ಯವಾದ ಹೆಚ್ಚುವರಿ ಸಂಪನ್ಮೂಲದ ಪರಿಣಾಮವನ್ನು ಅಂದಾಜು ಮಾಡುವ ಆಯೋಗದ ಬಯಕೆಯು ಅಪಾಯಕಾರಿ ಕ್ಷೇತ್ರದ ಪ್ರವೇಶವಾಗುತ್ತದೆ. ಹಣಕಾಸು ಸಂರಕ್ಷಣೆ ಮತ್ತು ಆರ್ಥಿಕ ಸುಸ್ಥಿರತೆ ಎಂಬ ನವ-ಉದಾರವಾದಿ ನಂಬಿಕೆಗಳನ್ನು ಆಯೋಗ ಅಂಗೀಕರಿಸಿದಂತೆ ಕಾಣುತ್ತದೆ. ಹಣಕಾಸು ಹೊಣೆಗಾರಿಕೆ ಮತ್ತು ಬಜೆಟ್ ಮ್ಯಾನೇಜ್‌ಮೆಂಟ್ ಕಾನೂನನ್ನು ಸಿಪಿಐ(ಎಂ) ದೃಢವಾಗಿ ವಿರೋಧಿಸಿದೆ. ಆ ಕಾನೂನು ಆರ್ಥಿಕ ಕೊರತೆ ಮಿತಿಯನ್ನು ಜಿಡಿಪಿಯ ಶೇಕಡ 3ಕ್ಕೆ ನಿಗದಿಪಡಿಸಿದೆ. ಆರ್ಥಿಕ ಸ್ಥಿರತೆ ಎಂದರೇನೆಂಬುದನ್ನು ತಿಳಿಸಲು ಚುನಾವಣೆ ಆಯೋಗ ತೀರ್ಪುಗಾರ (ಆರ್ಬಿಟರ್) ಆಗಿ ಕಾರ್ಯ ನಿರ್ವಹಿಸುತ್ತದೆಯೇ? ಚುನಾವಣೆ ಆಯೋಗದ ಪ್ರಸ್ತುತ ಕ್ರಮ ತೀರಾ ಆಶ್ಚರ್ಯಕರವಾಗಿದೆ. ಯಾಕೆಂದರೆ ಇದೇ ಚುನಾವಣೆ ಆಯೋಗ ಕೆಲವೇ ತಿಂಗಳ ಹಿಂದೆ; ಅಂದರೆ ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಹೀಗೆ ಹೇಳಿತ್ತು: `ಚುನಾವಣೆ ವೇಳೆ ಅಥವಾ ನಂತರ ಯಾವುದೇ ಉಚಿತ ಉಡುಗೊರೆ ನೀಡುವ/ವಿತರಿಸುವ ಆಶ್ವಾಸನೆಯು ಆಯಾ ಪಕ್ಷದ ನೀತಿ ನಿರ್ಧಾರಕ್ಕೆ ಸಂಬಂಧಿಸಿದ್ದಾಗಿರುತ್ತದೆ ಎಂದು ಹೇಳಲಾಗಿದೆ. ಇಂಥ ನೀತಿಗಳು ಆರ್ಥಿಕವಾಗಿ ಕಾರ್ಯಸಾಧುವಾದರೆ ಅಥವಾ ರಾಜ್ಯದ ಹಣಕಾಸು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಿದ್ದರೆ ರಾಜ್ಯದ ಮತದಾರರು ಅದನ್ನು ಪರಿಶೀಲಿಸಬಹುದು ಮತ್ತು ನಿರ್ಧಾರ ಕೈಗೊಳ್ಳಬಹುದು’.
ರಾಜ್ಯದ ನೀತಿಗಳು ಮತ್ತು ಗೆದ್ದ ಪಕ್ಷ ಸರಕಾರ ರಚಿಸಿದ ನಂತರ ಕೈಗೊಳ್ಳುವ ನಿರ್ಧಾರಗಳನ್ನು ಚುನಾವಣೆ ಆಯೋಗ ನಿಯಂತ್ರಿಸಲಾಗದು ಎಂದೂ ಆಯೋಗ ಸುಪ್ರೀಂ ಕೋರ್ಟ್ಗೆ ಹೇಳಿತ್ತು. ಸಂಬಂಧಪಟ್ಟಂತೆ ಯಾವುದೇ ಕಾನೂನು ಇಲ್ಲದೆ ಹಾಗೆ ಮಾಡುವುದು ಅಧಿಕಾರವನ್ನು ಮೀರಿ ವರ್ತಿಸಿದಂತಾಗುತ್ತದೆ ಎಂದು ಆಯೋಗ ಅಭಿಪ್ರಾಯ ಪಟ್ಟಿತ್ತು.
ಹಾಗಿರುವಾಗ ಕೆಲವೇ ತಿಂಗಳ ಅಂತರದಲ್ಲಿ ಆಯೋಗ ಈ ಪರಿಯಾಗಿ ಮನಸ್ಸು ಬದಲಿಸಿದ್ದು ಯಾಕೆ? ಪ್ರಧಾನಿ ಮೋದಿ ಜುಲೈ ಭಾಷಣವೊಂದರಲ್ಲಿ `ರೇವ್ಡಿ’ ಸಂಸ್ಕೃತಿಯನ್ನು ಟೀಕಿಸಿದ್ದು ಹಾಗೂ ಅದಕ್ಕೆ ಪ್ರತಿಪಕ್ಷಗಳನ್ನು ಹೊಣೆಯಾಗಿ ಮಾಡಿದ್ದು ಚುನಾವಣೆ ಆಯೋಗ ತನ್ನ ಹಿಂದಿನ ನಿಲುವನ್ನು ಬದಲಾಯಿಸಲು ಕಾರಣವಾಯಿತೇ? `ಉಚಿತ ಕೊಡುಗೆಗಳು’ (ಫ್ರೀಬೀ) ಬಗ್ಗೆ ಹುಟ್ಟು ಹಾಕಿದ ಚರ್ಚೆಯು ಆಹಾರ, ರಸಗೊಬ್ಬರ ಮತ್ತು ವಿದ್ಯುಚ್ಛಕ್ತಿಗೆ ನಿಡುವ ಸಬ್ಸಿಡಿ ಮತ್ತಿತರ ಸಬ್ಸಿಡಿಗಳು ಸಾರ್ವಜನಿಕ ಸಂಪನ್ಮೂಲದ ಅಪವ್ಯಯ ಹಾಗೂ ಅವು ಫ್ರೀಬೀಗಳು ಎಂಬ ನವ-ಉದಾರವಾದಿ ಆಕ್ಷೇಪಗಳನ್ನೇ ಧ್ವನಿಸುತ್ತದೆ. ದುಡಿಯುವ ವರ್ಗಕ್ಕೆ ವರ್ಗಾಯಿಸುವುದನ್ನು ಬೆಳವಣಿಗೆಗಾಗಿ ದೊಡ್ಡ ಬಂಡವಾಳಶಾಹಿಗಳಿಗೆ ವರ್ಗಾಯಿಸಬೇಕೆನ್ನುವುದು ಈಗಿನ ನವ-ಉದಾರವಾದಿ ವಿವೇಕವಾಗಿದೆ!
ಆ ಕಾರಣಕ್ಕಾಗಿಯೇ `ಫ್ರೀಬೀಗಳ’ ವಿರುದ್ಧದ ಬಿಜೆಪಿ ನಾಯಕರೊಬ್ಬರ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಾಗ, ರಾಜಕೀಯ ಪಕ್ಷಗಳು ಕೊಡುವ ಭರವಸೆಗಳು ಫ್ರೀಬೀಗಳೇ ಅಲ್ಲವೇ ಎಂಬುದು ಸುಪ್ರೀಂ ಕೋರ್ಟ್ ಪರಿಶೀಲಿಸಬೇಕಾದ ಹಾಗೂ ನಿರ್ಧರಿಸಬೇಕಾದ ವಿಚಾರವಲ್ಲ ಎಂದು ಸಿಪಿಐ(ಎಂ) ಸ್ಪಷ್ಟವಾಗಿ ಅಭಿಪ್ರಾಯಪಟ್ಟಿತ್ತು. ಪಕ್ಷದ ಅಭಿಪ್ರಾಯ ಹೀಗಿತ್ತು: ಈ ವಿಚಾರವು ಸಂಪೂರ್ಣವಾಗಿ ರಾಜಕೀಯ ಪಕ್ಷಗಳಿಗೆ ಸೇರಿದ್ದಾಗಿದೆ. ಪ್ರಜಾಪ್ರಭುತ್ವದಲ್ಲಿ, ಚುನಾವಣಾ ಪ್ರಣಾಳಿಕೆಯಲ್ಲಿ ತಮ್ಮ ವೇದಿಕೆಯನ್ನು ನಿಗದಿಪಡಿಸಲು ಹಾಗೂ ಆಶ್ವಾಸನೆ ನೀಡಲು ರಾಜಕೀಯ ಪಕ್ಷಗಳು ಸ್ವತಂತ್ರವಾಗಿರುತ್ತವೆ. ಅವುಗಳನ್ನು ಪರಿಶೀಲಿಸಿ ಅಂಗೀಕರಿಸುವುದು ಅಥವಾ ತಿರಸ್ಕರಿಸುವುದು ಜನರಿಗೆ ಬಿಟ್ಟಿದ್ದು. ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ತಾನು ನೀಡಿದ್ದ ಆಶ್ವಾಸನೆಗಳನ್ನು ಅನುಷ್ಠಾನಗೊಳಿಸುವುದು ಚುನಾವಣೆಯಲ್ಲಿ ಜಯಿಸಿದ ರಾಜಕೀಯ ಪಕ್ಷದ ಅಧಿಕಾರವಾಗಿದೆ.
ಸುಬ್ರಮಣಿಯಂ ಬಾಲಾಜಿ ಕೇಸ್ ಸಂಬಂಧ 2013ರಲ್ಲಿ ಎರಡು ಸದಸ್ಯರ ನ್ಯಾಯ ಪೀಠ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಅಂದಿನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್.ವಿ. ರಮಣ ನೇತೃತ್ವದ ಪೀಠವೊಂದು ಆಲಿಸಿತ್ತು. 2022 ಆಗಸ್ಟ್ 26 ರಂದು ತಮ್ಮ ಅಧಿಕಾರಾವಧಿಯ ಕೊನೆ ದಿನದಂದು ಸಿಜೆಐ ರಮಣ, ಮೂವರು ಸದಸ್ಯರು ವಿಚಾರಣೆ ನಡೆಸುತ್ತಿರುವ ಪ್ರಕರಣದ ಬಗ್ಗೆ ನೂತನ ಸಿಜೆಐ ನಿರ್ಧರಿಸಬೇಕೆಂದು ನಿರ್ದೇಶಿಸಿದ್ದರು. ಹಾಗಾಗಿ, `ಫ್ರೀಬೀಗಳ’ ಚುನಾವಣಾ ಆಶ್ವಾಸನೆಯ ವಿಚಾರ ಇನ್ನೂ ಸುಪ್ರೀಂ ಕೋರ್ಟ್ ಮುಂದೆ ಬಾಕಿಯಿದೆ.
ಆದ್ದರಿಂದ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆಯಲ್ಲಿ ತರಾತುರಿಯಿಂದ ಹೊಸ ಮಾರ್ಗಸೂಚಿಗಳನ್ನು ಸೇರಿಸುವುದು ಒಂದು ಒಳಸಂಚಿನಂತೆ ಕಾಣುತ್ತದೆ. ಅದು ವಿವಿಧ ರಾಜ್ಯ ಸರಕಾರಗಳ ಕಲ್ಯಾಣ ಯೋಜನೆಗಳು ಮತ್ತು ನೇರ ನಗದು ವರ್ಗಾವಣೆ ವಿರುದ್ಧ ಟಾರ್ಗೆಟ್ ಮಾಡಿದೆಯೇ? ಕೇಂದ್ರ ಸರಕಾರದ ಎಲ್ಲ ಕಲ್ಯಾಣ ಯೋಜನೆಗಳು ನ್ಯಾಯಸಮ್ಮತ ಎನ್ನುವುದು ಪ್ರಧಾನಿಯ ಅಭಿಪ್ರಾಯವಾಗಿದೆ. ಆದರೆ, ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳ ಅದೇ ಬಗೆಯ ಕಲ್ಯಾಣ ಯೋಜನೆಗಳನ್ನು `ಫ್ರೀಬೀ’ ಎಂದವರು ಬ್ರಾಂಡ್ ಮಾಡುತ್ತಾರೆ. ಚುನಾವಣಾ ಆಯೋಗದ ಇತ್ತೀಚಿನ ಕ್ರಮವು ಪ್ರಧಾನ ಮಂತ್ರಿಯ ಅಭಿಪ್ರಾಯದ ಅನುಮೋದನೆಯಂತಿದೆ.
ರಾಜಕೀಯ ಪಕ್ಷಗಳ ಚುನಾವಣಾ ಆಶ್ವಾಸನೆಗಳ ಹಣಕಾಸು ಪರಿಣಾಮಗಳ ಬಗ್ಗೆ ಚುನಾವಣೆ ಆಯೋಗದ ಮಧ್ಯಪ್ರವೇಶವು ಜನರ ಪ್ರಮುಖ ಸಮಸ್ಯೆಗಳನ್ನು ಎದುರಿಸಿ ಅವುಗಳಿಗೆ ಪ್ರಜಾಸತ್ತಾತ್ಮಕವಾಗಿ ಪ್ರತಿಸ್ಪಂದಿಸುವುದಕ್ಕೆ ಸಂಬಂಧಿಸಿ ರಾಜಕೀಯ ಪಕ್ಷಗಳ ಹಕ್ಕಿನ ಗಂಭೀರ ಉಲ್ಲಂಘನೆಯಾಗಿದೆ. ಚುನಾವಣೆ ಆಯೋಗದ ಈ ಕ್ರಮವನ್ನು ಎಲ್ಲ ರಾಜಕೀಯ ಪಕ್ಷಗಳು ಒಂದಾಗಿ ವಿರೋಧಿಸಬೇಕು.
ಅನು: ವಿಶ್ವ