ಇಂದು ಪೆರಿಯಾರ್ ರಾಮಸ್ವಾಮಿ ಜನ್ಮದಿನ

ಸ್ವಾಭಿಮಾನ ಚಳವಳಿಯ ಮೂಲಕ ದಮನಿತರ ನಡುವೆ ಅರಿವಿನ ಹಣತೆ ಹಚ್ಚಿದ, ಅಸ್ಪೃಶ್ಯತೆ ಮೂಢನಂಬಿಕೆಗಳ ವಿರುದ್ಧ ಹೋರಾಡಿದ ಪೆರಿಯಾರ್ ರಾಮಸ್ವಾಮಿ ಅವರ ಜನ್ಮದಿನ ಇಂದು ಅವರ ಬರಹ ಮತ್ತು ಭಾಷಣಗಳ ಸಂಪುಟಗಳಿಂದ  ಆ ಕುರಿತು ಕಿರು ಪರಿಚಯ ಮಾಡಿದ್ದೆನೆ.

ದೇವರು ಇಲ್ಲ, ದೇವರು ಇಲ್ಲ
ದೇವರು ಇಲ್ಲವೇ ಇಲ್ಲ
ದೇವರನ್ನು ಸೃಷ್ಟಿಸಿದವನು ಮೂರ್ಖ
ದೇವರನ್ನು ಪ್ರಚಾರ ಮಾಡುವವನು ನೀಚ
ದೇವರನ್ನು ಪೂಜಿಸುವವನು ಅನಾಗರಿಕ ಕಾಡುಮೃಗ..

ದಕ್ಷಿಣ ಭಾರತದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಳುವಳಿಯನ್ನು ಕ್ರಾಂತಿಯ ಪ್ರಖರತೆಗೆ ಕೊಂಡೊಯ್ದ, ಜಗತ್ತಿನ ಗಮನವನ್ನು ಸೆಳೆದ ಪೆರಿಯಾರ್‌ ಈ.ವೆಂ. ರಾಮಸ್ವಾಮಿಯವರು ಸೆಪ್ಟೆಂಬರ್ 17, 1879 ರಂದು ಜನಿಸಿದರು. ಪೆರಿಯಾರ್‌ರವರ ಮೂಲ ಅಂದರೆ ಪೆರಿಯಾರ್‌ರವರ ಪೂರ್ವಿಕರು #ಕರ್ನಾಟಕ ಚಿತ್ರದುರ್ಗ ಜಿಲ್ಲೆಯವರು, ರಕ್ಕಸತಂಗಡಿ ಸಂಗ್ರಾಮದ ನಂತರ ಚೆಲ್ಲಾಪಿಲ್ಲಿಯಾಗಿಹೋದ ನಾಯಕರ ಒಂದು ಕುಟುಂಬ ಬಳ್ಳಾರಿಯ ಮೂಲಕ ಕೋಲಾರಕ್ಕೆ ಬಂದು ನೆಲೆಸಿತು, ಕೊನೆಗೆ ರಾಮಸ್ವಾಮಿಯವರ ತಂದೆ ಕೋಲಾರದಿಂದ ತಮಿಳಿನಾಡಿನ ಈರೋಡಿಗೆ ಬಂದು ನೆಲೆಸಿದರು.

ಆಸ್ತಿಕರ ಕುಟುಂಬದ ಹಿನ್ನೆಲೆಯಿಂದ ಬಂದು ಪೆರಿಯಾರ್ ರಾಮಸ್ವಾಮಿಯವರು, ತಮ್ಮ ಬಾಲ್ಯದ ಜೀವನದಿಂದಲೂ ಕೂಡಾ ಈ ಕಟ್ಟುನಿಟ್ಟಿನ ಸಂಪ್ರದಾಯಗಳನ್ನು ಬಹಳ ಸಂದೇಹಾಶ್ಚರ್ಯಗಳಿಂದಲೆ ಗಮನಿಸುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿ ಇದ್ದಾಗಲೆ ಅವರ ಮನೆಗೆ ಬರುತ್ತಿದ್ದ ಸಾಧುಗಳು ಹೇಳುತ್ತಿದ್ದ ಪುರಾಣ ಕತೆಗಳನ್ನು ಬಹಳ ಆಸಕ್ತಿಯಿಂದ ಕೇಳುತ್ತಿದ್ದರು,  ನಂತರದಲ್ಲಿ ಅವರಲ್ಲಿ ಉಂಟಾಗುವ ನೂರೆಂಟು ಪ್ರಶ್ನೆಗಳನ್ನು ಪುರಾಣ ಕತೆ ಹೇಳಿದ ಸಾಧುಗಳಿಗೆ ಕೇಳಿದಾಗ ಇರುಸುಮುರುಸಿಗೊಳಗಾಗುತ್ತಿದ್ದರು ಸಾಧುಗಳು.

ರಾಮಸ್ವಾಮಿಯವರು ತಮ್ಮ ಶಾಲಾ ದಿನಗಳಲ್ಲಿ ಅಸ್ಪೃಶ್ಯ ಬಾಲಕರೊಡನೆ ಬೆರೆಯುವುದನ್ನು ನೋಡಿ ಆ ಕುರಿತು ಶಾಲಾ ಶಿಕ್ಷಕರಿಗೆ ಹಾಗೂ ಅವರ ಮನೆಯವರೆಗೂ ದೂರು ಹೋಗುತ್ತಿತ್ತು. ತಮ್ಮ ಸ್ವಾಭಿಮಾನಕ್ಕೆ ಸ್ವಾತಂತ್ರ್ಯಕ್ಕೆ ಅಡ್ಡಿ ಬರುವ ಶಾಲೆಯಲ್ಲಿ‌ ಇನ್ನು ಕಲಿಯುವುದು ಇಷ್ಟವಾಗದೆ ನಾಲ್ಕನೆ ತರಗತಿಗೆ ತಮ್ಮ ವ್ಯಾಸಂಗವನ್ನ ಮುಗಿಸಿ, ವಿಶಾಲ ಪ್ರಪಂಚವೇ ತನ್ನ ಶಾಲೆ, ಸಮಾಜವೇ ತನ್ನ ಪ್ರಯೋಗ ಶಾಲೆ‌ಯೆಂದು ತಮ್ಮ ಜೀವನ ಆರಂಭಿಸಿದರು.

ಮನೆಯವರ ಮೂಢ ಸಂಪ್ರದಾಯಗಳಿಗೆ ಶರಣಾಗದೆ ವಿಶಾಲವಾದ ಜಗತ್ತಿನಲ್ಲಿ ಬದುಕುವುದು ಲೇಸೆಂದು ಯಾರಿಗೂ ಹೇಳದೆ ಮನೆಯಿಂದ ಹೊರ ನಡೆದ ಪೆರಿಯಾರ್‌ರವರು ಎತ್ತಿನಗಾಡಿ, ರೈಲುಬಂಡಿ, ಕಾಲು ನಡಿಗೆ ಮೂಲಕ ಊರೂರು ಸುತ್ತಿ ಕಲ್ಕತ್ತ, ವಾರಣಾಸಿ  ಸಾಧು ಸಂತರೊಡನೆ ಚರ್ಚೆ ತರ್ಕಕ್ಕಿಳಿದು ಅವರೊಡನೆ ನಿಲ್ಲದ ಪ್ರಶ್ನೆಗಳನ್ನು ಹಾಕತೊಡಗಿದರು. ಗಂಗಾನದಿಯ ದಡದ ಮೇಲೆ ಕಂಡ ಹೆಣದ ರಾಶಿ, ಚಿತೆ, ಪಾಪಗಳನ್ನ ತೊಳೆದುಕೊಳ್ಳಲು ಗಂಗೆಯಲ್ಲಿ ಮುಳುಗು ಹಾಕುವ ಜನರನ್ನು ಕಂಡರು, ಸ್ವರ್ಗದ ಹೆಸರೇಳಿ ಹಣ ವಸೂಲಿಗಿಳಿದ ಭಂಡ ಪುರೋಹಿತರ, ವಿಧವೆಯವರ ಕೇಶ ಮುಂಡನದಲ್ಲಿ ನಡೆಯುತ್ತಿದ್ದ ಅನಾಚಾರಗಳನ್ನು ಬಹುವಾಗಿ ಖಂಡಿಸಿ, ಹಿಂದೂ ಧರ್ಮದಲ್ಲಿನ ದೋಷಗಳನ್ನು ಕಂಡು ಪರೀಕ್ಷೆಗೆ, ಪ್ರಯೋಗಕ್ಕೆ, ತರ್ಕಕ್ಕೆ ನಿಲುಕದ್ದೆಲ್ಲ ಅಸತ್ಯವೆಂದು, ವಂಚನೆಯ ಜಾಲವೆಂದು ಇತ್ಯರ್ಥ ಮಾಡಿಕೊಂಡು ಮತ್ತೆ ತಮ್ಮ ತವರಿಗೆ ಹೊಸ ರಾಮಸ್ವಾಮಿಯಾಗಿ ಬಂದಿಳಿದರು.

ವಿಧವೆಯೊಬ್ಬಳನ್ನು ಮದುವೆಯಾಗು ಪುನರ್ ವಿವಾಹ ಆಗಿ ಸಮಾಜದ ಗೊಡ್ಡು ಬೆದರಿಕೆಗಳಿಗೆ ಹೆದರದೆ ಮುನ್ನಡೆಯುವುದೇ ತನ್ನ ಗುರಿ ಎಂದು ತಮ್ಮ ಸಾಮಾಜಿಕ ಚಳುವಳಿಯನ್ನು ತೀವ್ರ ವೇಗದೊಂದಿಗೆ ಆರಂಭಿಸಿದರು. ತಮಿಳುನಾಡಿನಾದ್ಯಂತ ಸಂಚರಿಸಿದರು. ಮೂಲಭೂತವಾದವನ್ನು ಈ ದೇಶದಿಂದ ಬೇರು ಸಹಿತ ಕಿತ್ತೆಸೆಯಲು, ಮಹಿಳೆಯರು, ಮಕ್ಕಳ, ದಲಿತರ ಹಿಂದುಳಿದವರ, ನಿರ್ಗತಿಕರ ಪರವಾಗಿ ಸಂಘರ್ಷದ ಹೋರಾಟ ಮಾಡಿ “ಸ್ವಾಭಿಮಾನಿ ಚಳುವಳಿ”ಯನ್ನು ಕಟ್ಟಿ ಬೆಳೆಸಿದ್ದಾರೆ.

1942 ರಲ್ಲಿ ಕೇರಳ ರಾಜ್ಯದ ವೈಕಂ ಎಂಬ ಚಿಕ್ಕ ಪಟ್ಟಣದಲ್ಲಿರುವ ದೇವಸ್ಥಾನಕ್ಕೆ ಅಲ್ಲಿನ ಅಸ್ಪೃಶ್ಯರು, ಹಿಂದುಳಿದವರ ಪ್ರವೇಶಕ್ಕೆ ಅನುಮತಿ ಇರಲಿಲ್ಲ. ನಾರಾಯಣ ಗುರುಗಳ ಶಿಷ್ಯರು ದೇವಸ್ಥಾನ ಪ್ರವೇಶಕ್ಕೆ ಚಳುವಳಿ ಆರಂಭಿಸಿದರು ಈ ಚಳುವಳಿಯ ನೇತೃತ್ವವನ್ನು ಪೆರಿಯಾರ್ ರಾಮಸ್ವಾಮಿ ವಹಿಸಿಕೊಳ್ಳುವಂತೆ ವಿನಂತಿಸಿದರು. ಪೆರಿಯಾರ್‌ರವರು ಶೂದ್ರ ಅತಿಶೂದ್ರರಿಗೆ ಆತ್ಮವಿಶ್ವಾಸ ತುಂಬಿ ಧೃಢಗೊಳಿಸಿದರು. ಆ ಪ್ರದೇಶದಲ್ಲಿ ಸುತ್ತಿ ಜನರನ್ನು ಸಂಘಟಿಸಿದರು. ಇದನ್ನು ಕಂಡಿ ಅಲ್ಲಿಯ ಸರ್ಕಾರ ಪೆರಿಯಾರ್‌ರವರನ್ನು ಬಂಧಿಸಿ ಒಂದು ತಿಂಗಳ ಸೆರೆವಾಸ ವಿಧಿಸಿತು. ಆದರೆ ಸತ್ಯಾಗ್ರಹ ನಿಲ್ಲದೆ ಪೆರಿಯಾರ್ ಪತ್ನಿ ಹಾಗೂ ಅವರ ಸಹೋದರಿ ಮುನ್ನಡೆಸಿದ್ದು ಇದೆ‌. ಹಲವು ಪ್ರತಿಭಟನೆ, ಜೈಲುವಾಸದ ನಂತರದಲ್ಲಿ ಅಲ್ಲಿನ ಅಸ್ಪೃಶ್ಯರಿಗೂ, ಶೂದ್ರರಿಗೂ ದೇವಾಲಯ ಪ್ರವೇಶ ನೀಡುವಲ್ಲಿ ರಾಮಸ್ವಾಮಿಯವರು ಯಶಸ್ವಿಯಾದರು.ಈ ಸಾಮಾಜಿಕ ಕ್ರಾಂತಿ, ಚಳುವಳಿಯಿಂದಾಗಿ ಪೆರಿಯಾರ್‌ರವರನ್ನ ವೈಕಂಹಿರೋ ಎಂದೆ  ಕರೆಯಲಾಗುತ್ತದೆ.

ಕಮ್ಯೂನಿಸ್ಂ

“ಅಸ್ಪೃಶ್ಯತೆಯನ್ನು ಹೋಗಲಾಡಿಸುವ ನಮ್ಮ ಪ್ರಯತ್ನಕ್ಕೆ ಬುನಾದಿಯಾಗಿರುವ ತತ್ವಶಾಸ್ತ್ರವೇ ಬಡತನದ ವಿನಾಶದ ಪ್ರಯತ್ನಗಳಿಗೂ ತಳಹದಿಯಾಗಿದೆ. ಅಸ್ಪೃಶ್ಯತೆಯನ್ನು ಕೊನೆಗೊಳಿಸಲು ಮೇಲ್ಜಾತಿ, ಕೀಳುಜಾತಿ ಎಂಬ ತಾರತಮ್ಯ ನೀತಿಯನ್ನು ಕೊನೆಗಾಣಿಸಬೇಕು. ಇದೇ ರೀತಿ ಬಡತನ ದಾರಿದ್ರ್ಯತೆಯನ್ನು ಹೋಗಲಾಡಿಸಲು ಬಂಡವಾಳಶಾಹಿ ಮತ್ತು ದುಡಿಯುವ ವರ್ಗಗಳೆಂಬ ತಾರತಮ್ಯ ನೀತಿಯನ್ನು ಕೊನೆಗಾಣಿಸಬೇಕು. ಈ ಪರಿಕಲ್ಪನೆಗಳನ್ನು, ವ್ಯವಸ್ಥೆಯನ್ನು ಕೊನೆಗಾಣಿಸುವುದೇ ಸಮಾಜವಾದ ಮತ್ತು ಕಮ್ಯುನಿಸಂನ ಧ್ಯೇಯವಾಗಿದೆ.”

ಹಿಂದಿಭಾಷೆಯ ಕುರಿತು ಪೆರಿಯಾರ್‌ರವರ ಮಾತು.

ಹಾರುವರೂ, ಹಿಂದಿ ಭಾಷೆಯೂ

ಹಾರುವರ ಧರ್ಮ, ವೇದ ಪುರಾಣ, ಇತಿಹಾಸ ನಮಗೆ ಬೇಕಿಲ್ಲ. ಅವನ್ನೆಲ್ಲ ತ್ಯಜಿಸಬೇಕು ಇಲ್ಲವೇ ನಿರ್ನಾಮ ಮಾಡಬೇಕು ಎಂದು ನಿರ್ಧರಿಸಿಕೊಂಡು, ಆ ದಿಶೆಯಲ್ಲಿ ಕಾರ್ಯಪ್ರವೃತ್ತರಾಗಿರುವ ಸಂದರ್ಭದಲ್ಲಿ ಹಾರುವವರ ಧರ್ಮ, ಶಾಸ್ತ್ರ, ದೇವರುಗಳನ್ನೆ ಬೋಧಿಸುವ ಹಿಂದಿ ಭಾಷೆಯು ನಮಗೆ ಬೇಕೇನು? ನಾವು ಅದನ್ನು ಒಪ್ಪಿಕೊಳ್ಳುವುದಕ್ಕಾಗುತ್ತದೆಯೇ? ಎಂದು ಪ್ರಶ್ನಿಸಿದರು.

ವರ್ಣಧರ್ಮ ಸಿದ್ಧಾಂತದ ಕುರಿತು ಪೆರಿಯಾರ್ ಮಾತು.

ವರ್ಣಾಶ್ರನ ಧರ್ಮದ ಮೂಲಕ ನಮ್ಮ ದೇಶದಲ್ಲಿ ಅಸ್ಪೃಶ್ಯತಾ ಧರ್ಮವನ್ನು ಕಾರ್ಯಕ್ರಮಕ್ಕೆ ತರುತ್ತಿದ್ದಾರೆ. ವರ್ಣಧರ್ಮ ಪದ್ಧತಿ ಇಲ್ಲವಾದರೆ ಅಸ್ಪೃಶ್ಯತೆಯನ್ನು ಪ್ರಸಾರ ಮಾಡುವ ಮಾರ್ಗ ಇಲ್ಲವಾಗಿಬಿಡುತ್ತದೆ. ವರ್ಣಧರ್ಮವೆಂಬ ಶರೀರಕ್ಕೆ ಅಸ್ಪೃಶ್ಯತೆಯೆಂಬ ಜೀವನ ಇಲ್ಲವಾದರೆ ಅದು ಕೇವಲ ಜಡವಾಗಿಬಿಡುತ್ತದೆ.

1971 ರಂದು ಮೇಟ್ಟುಪಾಳ್ಯಂ ಚಿಂತಕರ ಚಾವಡಿ ಪ್ರಾರಂಭದ ದಿನದಂದು ಪೆರಿಯಾರ್ ದೇವರ ಸ್ವಭಾವದ ಕುರಿತಾಗಿ ಭಾಷಣವೊಂದನ್ನು ಮಾಡಿದರು.

ದೇವರ ಸ್ವಭಾವ

ದೇವರನ್ನು ಸೃಷ್ಡಿಸಿದ ವಂಚಕ ಏನೆಂದು ಹೇಳಿದ? ದೇವರಿದ್ದಾನೆಂದ ಎಲ್ಲಿದ್ದಾನೆಂದರೆ ನಿನ್ನ ಕಣ್ಣುಗಳಿಗೆ ಕಾಣಿಸುವುದಿಲ್ಲವೆಂದ, ದೇವರು ಇದ್ದಾನೆಂದು ನೀನು ಮಾತ್ರ ಹೇಗೆ ಹೇಳುತ್ತಿ? ಎಂದು ಕೇಳಿದರೆ, ರೂಪವೇ ಇಲ್ಲದ ದೇವರು ನಿನ್ನ ಕೈಗೆ ಸಿಗಲಾರನೆನ್ನುತ್ತಾರೆ. ಏನೆಂದು ಹೇಳುವುದು. ಇಂತಹವನನ್ನು ನೀವು ಬುದ್ದಿಜೀವಿ ಎನ್ನುವಿರೋ ಅಥವಾ ಮೂರ್ಖನೆನ್ನುವಿರೋ? ಬೇರೆ ಆಧಾರವೇನು ಎಂದು ಕೇಳಿನೋಡಿ? ಬೇರೆ ಬೇರೆ ದೇವರಿದ್ದಾನೆ ಎಂದು ಹೇಳುತ್ತಾರೆ. ಅವನು ಸರ್ವವ್ಯಾಪಿ, ಸರ್ವ ಶಕ್ತಿಯುಳ್ಳವನು, ಅವನಿಲ್ಲದೇ ಒಂದು ಕೂದಲು ಅಲುಗಾಡದೆನ್ನುತ್ತಾರೆ, ಅವನಿಗೇನು ಬೇಕಾಗಿಲ್ಲ, ಅವನು ಪರಿಶುದ್ಧನೂ, ಕರುಣೆಯುಳ್ಳವನು ಪ್ರೀತಿಯುಳ್ಳವನೂ ಎನುತ್ತಾರೆ. ಇದಕ್ಕೆಲ್ಲ ಆಧಾರವೇನೆಂದು ಕೇಳಿದರೆ ಆಧಾರ ಕೇಳಬೇಡ ನಂಬು, ಎನ್ನುತ್ತಾರೆ. ದೇವರು ಎಲ್ಲವನ್ನೂ ನಿಯಂತ್ರಿಸುವನಾಗಿದ್ದರೆ ನನ್ನ ಬುದ್ದಿಯನ್ನು ನಿಯಂತ್ರಿಸಿ  ಅವನನ್ನು ನಂಬುವಂತೆ ಮಾಡಲಿ. ಪ್ರಪಂಚದಲ್ಲಿ ದೇವರ ಮೇಲೆ ನಂಬಿಕೆಯಿಲ್ಲದವರು ಅರ್ಧಕ್ಕಿಂತ ಹೆಚ್ಚು ಮಂದಿ. ನಾವು ಮಾತ್ರವಲ್ಲ ಪ್ರಪಂಚದಲ್ಲೇ ದೇವರಿಲ್ಲ ಎನ್ನುವವರು 450 ಕೋಟಿಯಲ್ಲಿ 200 ಕೋಟಿಗಿಂತ ಅಧೀಕ. ಇವರಲ್ಲಿ ಒಬ್ಬನನ್ನಾದರೂ ಪರಿವರ್ತಿಸಲು ದೇವರಿಗೆ ಸಾಧ್ಯವಾಗಿಲ್ಲವಲ್ಲ.

ವಿಶ್ವಮಾನ್ಯತೆ ಪಡೆದಿರುವ ವಿಶ್ವಸಂಸ್ಥೆಯ ಅಂಗಸಂಸ್ಥೆ UNESCO (ಅಂತರಾಷ್ಟ್ರೀಯ ವಿಜ್ಞಾನ ಶೈಕ್ಷಣಿಕ ಸಾಂಸ್ಕೃತಿಕ ಸಂಸ್ಥೆ) ತಂದೆ ಪೆರಿಯಾರರಿಗೆ 1970ರಲ್ಲಿ  ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಿತು. ಯುನೆಸ್ಕೋ ಹೇಳಿರುವಂತೆ “ಪೆರಿಯಾರ್ ಎಂದರೆ ನವಯುಗದ ಪ್ರವರ್ತಕ, ಆಗ್ನೇಯ ಏಷ್ಯಾದ ಸಾಕ್ರಟೀಸ್, ಸಾಮಾಜಿಕ ಸುಧಾರಣಾ ಚಳುವಳಿಗಳ ತಂದೆ, ಅಜ್ಞಾನ ಮೌಢ್ಯ, ಕಂದಾಚಾರ ಮತ್ತು ಹುಟ್ಟುಗುಣಗಳ ಪರಮ ಶತ್ರು” ಎಂಬುದಾಗಿ ಯುನೆಸ್ಕೋ ದಾಖಲಿಸಿದೆ.

ಪೆರಿಯಾರ್‌ರವರು ತಮ್ಮ 94 ವರ್ಷದ ತುಂಬು ಜೀವನದಲ್ಲಿ ಸಂಚರಿಸಿದ ದೇಶಗಳು 302, 10700 ಸಮಾರಂಭಗಳಲ್ಲಿ ಭಾಗವಹಿಸಿದ್ದರು.

– ಸುಭಾಸ ಮಾದರ

Donate Janashakthi Media

Leave a Reply

Your email address will not be published. Required fields are marked *