ಇಂದು ಬಾನಂಗಳದಲಿ ಗುರು-ಶನಿಗಳ ಸಮಾಗಮ

ಹಿಂದಿನ ಸಮಾಗಮ 1623ರಲ್ಲಿ ಮುಂದಿನ ಸಮಾಗಮ-2080ಕ್ಕೆ

ಆಕಾಶ ಪ್ರಿಯರಿಗೆ ಇಂದು ಬೃಹತ್ ಪರಮಾನಂದವನ್ನ ಹೊತ್ತುತರುತ್ತಲಿದೆ. ಅದುವೆ ನಮ್ಮ ಸೌರಮಂಡಲದ ಅತಿದೊಡ್ಡ ಎರೆಡು ಬೃಹತ್ ಅನಿಲ ದೈತ್ಯಗಳಾದ ಗುರು-ಶನಿಗಳ ಸಮಾಗಮ ಈ ಸಮಾಗಮ ಈ ಹಿಂದೆ ಜುಲೈ 16 1623ರಲ್ಲಿ ಸಂಭವಿಸಿತ್ತು, ಇನ್ನು ಮುಂದಿನ ಸಂಗಮ 15 ಮಾರ್ಚ್ 2080ರಂದು ಮಾತ್ರವೇ.

ಡಿಸೆಂಬರ್ 21ರ ರಾತ್ರಿಯಾಕಾಶದಲ್ಲಿ ಈ ಇಬ್ಬರು ಜಗದ ದೈತ್ಯರು ಒಬ್ಬರಮೇಲೋಬ್ಬರು ಬಿದ್ದು ಅಪ್ಪಿಕೊಳ್ಳುವ ವಿಹಂಗಮ ದೃಷ್ಯಾವಳಿಯನ್ನ ಬರಿ ಕಣ್ಣಿನಿಂದಲೇ ಕಣ್ತುಂಬಿಕೊಳ್ಳಬಹುದು. ಅಕ್ಟೋಬರ್ 2ನೇ ತಾರಿಕಿನಂದೇ ಗುರು ಗಾಂಧಿಯ ಜನ್ಮದಿನದಿಂದ ಶನಿಯಬಳಿ ದಾಪುಗಾಲಿಕ್ಕಿ ನುಗ್ಗಿಬರಲಾರಂಬಿಸಿತು. ಅಂದರೆ ಖಗೋಳದ ಭಾಷೆಯಲ್ಲಿ 7 ಡಿಗ್ರಿ 19ನಿಮಿಷ ದೂರದಲ್ಲಿ ಮಾತ್ರವೇ ಸಂಜೆಯಾಕಾಶದಲ್ಲಿ ಗೋಚರಿಸಿತು. ನಿಧಾನವಾಗಿ ಶನಿಯ ಹತ್ತಿರತ್ತಿರ ಸರಿಯುತ್ತಾ ಇದೀಗ 1ಡಿಗ್ರಿಗೆ ಬಂದಿದೆ. ಇದೇತಿಂಗಳ 20, 21 ಮತ್ತು22 ನೇ ತಾರೀಕು 0 ಡಿಗ್ರಿಗೆ ಬರಲಿದೆ(ಚಿತ್ರ ನೋಡಿ) ಅಂದರೆ ಒಬ್ಬರ ಮೇಲೊಬ್ಬರು ಆತುಕೂರಲಿದ್ದಾರೆ ಈ ವಿಹಂಗಮ ನೋಟ ಅತ್ಯಂತ ಅಪರೂದಲ್ಲೊಮ್ಮೆ ಅಪರೂಪ. ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ.

ಆಕಾಶ ನೋಡಲಿಕ್ಕೆ ನಮ್ಮ ಸುಧಾಕರ ಮಂತ್ರಿಯ ಕಫ್ರ್ಯು ಏನು ಅಡ್ಡಿ ಬರಲ್ಲ, ಕೋವಿಡ್ ನಿಯಮವೂ ಕೂಡ ಎಡತಾಕಲ್ಲ, ನಮ್ಮ ನಮ್ಮ ಮನೆಯಂಗಳದಲ್ಲೇ ನಿಂತು ಪಶ್ಚಿಮ ದಿಕ್ಕಿಗೆ ಸುಮಾರು 30-40 ಡಿಗ್ರಿ ಕೋನದಲ್ಲಿ ಸ್ವಲ್ಪ ತಲೆ ಎತ್ತಿ ನೋಡಿದರೆ ಫಳ ಫಳ ಹೊಳೆಯುವ ಎರೆಡು ಕಾಯಗಳ ಜೋಡಿ ನೋಡಬಹುದು. ಅದರಲ್ಲೊಂದು ಹೆಚ್ಚು ಪ್ರಖರವಾಗಿರುತ್ತದೆ ಇನ್ನೊಂದು ಅದರ ಪ್ರಖತೆಯಲ್ಲಿ ಸ್ವಲ್ಪ ಕೆಂಪುಮಸುಕಾಗಿ ಕಾಣಿಸುತ್ತದೆ. ಪ್ರಖರವಾಗಿ ಕಾಣಿಸುವ ಕಾಯ ಗುರು ಗ್ರಹ, ಮಸುಕಾಗಿ ಕಾಣುವ ಕಾಯವೇ ಶನಿಗ್ರಹ. 

ವಾಸ್ತವದಲ್ಲಿ ಈ ಎರೆಡೂ ಗ್ರಹಗಳ ಅಂತರ ನಾವೆಣಿಸಿದ ಹಾಗೆ ಒಬ್ಬರ ಮೇಲೊಬ್ಬರು ಬಿದ್ದಿರುವುದಿಲ್ಲ ಅವರಿಬ್ಬರ ನಡುವಿನ ಅಂತರ 735 ಮಿಲಿಯನ್ನ ಕಿಲೋಮೀಟರ್ ಅಂದರೆ ಸುಮಾರು 73 ಕೋಟಿ ಕಿಲೋಮೀಟರ್ ದೂರ ಇರುತ್ತದೆ. ಭೂಮಿ, ಗುರು ಮತ್ತು ಶನಿಗಳ ದೃಗ್ಗೋಚರ ರೇಖೆ ಒಂದೇ ದೃಷ್ಠಿಯಲ್ಲಿ ಬರುತ್ತದೆ ಹಾಗಾಗಿ ಅದು ಒಂದರ ಮೇಲೊಂದರಂತೆ ಬಿದ್ದ ಹಾಗೆ ಭಾಸವಾಗುತ್ತದೆ.

ನಿಮ್ಮಲ್ಲಿ ಟೆಲೆಸ್ಕೋಪ್ ಏನಾದರು ಇದ್ದರೆ ಶನಿಯ ಬಳೆಯನ್ನೂ ಕೂಡ ನೋಡಬಹುದು ಹಾಗೆಯೆ ಗುರು ಗ್ರಹದ ಗೆಲಿಲಿಯನ್ 4 ಉಪಗ್ರಹಗಳು ಸಾಲುಗಟ್ಟಿರುವುದನ್ನು ನೋಡಬಹುದು. ಟೆಲೆಸ್ಕೋಪ್ ಯಾರಬಳಿ ಇರುತ್ತದೆ? ಚಿಂತೆ ಇಲ್ಲ ನಿಮ್ಮಲ್ಲಿ ಕಂಪ್ಯೂಟರ್, ಲ್ಯಾಪ್‍ಟಾಪ್ ಅಥವ ಸ್ಮಾರ್ಟ್‍ಮೊಬೈಲ್ ಇದ್ದರೆ ಅವುಗಳಲ್ಲಿ ಟೆಲೆಸ್ಕೋಪಿಗಿಂತಲೂ ಸೊಗಸಾಗಿ ನೋಡಬಹುದು. ಅದು ಹೇಗೆ ಅಂದಿರ? ಗೂಗಲ್ ಸರ್ಚ್‍ನಲ್ಲಿ ಸ್ಟೆಲ್ಲಾರಿಯಂ ವೆಬ್ ಎಂದು ಟೈಪಿಸಿ ಇಡಿ ಆಕಾಶವೇ ನಿಮ್ಮ ಪರದೆಯಮೇಲೆ ಮೂಡಿಬಿಡುತ್ತದೆ. ಅಲ್ಲೊಂದು ಸ್ಥಳದ ಪೆಟ್ಟಿಗೆಯೂ ಇರುತ್ತದೆ  ನಿಮ್ಮೂರಿನ ಹೆಸರು ಬರೆದು ಲೊಕೇಶನ್ ಮ್ಯಾಪ್ ಒತ್ತಿದರೆ ಇಡಿ ನಿಮ್ಮೂರಿನ ಆಗಸ ನಿಮ್ಮ ಕಣ್ಣಮುಂದೆ! ಅದು ಉತ್ತರ ದಿಕ್ಕನ್ನು ತೋರಿಸುತ್ತಾ ಪ್ರತ್ಯಕ್ಷ ಆಗುತ್ತದೆ. ಮೌಸ್/ಬೆರಳಿನಲ್ಲೆ ಎಡಕ್ಕೆ ಎಳೆದರೆ ಪೂರ್ವ ದಿಕ್ಕು ಬಂದು ನಿಲ್ಲುತ್ತದೆ. ಅಲ್ಲಿ ಪೂರ್ವದಲ್ಲಿ ಮಿರ ಮಿರ ಮರುಗುವ ಜುಪೀಟರ್ ಎಂದು ಇಂಗ್ಲೀಷಿನಲ್ಲಿ ಗುರುಗ್ರಹದ ಹೆಸರು ಗೋಚರಿಸುತ್ತದೆ ಅದರ ಮೇಲೆ ಮೌಸ್ ಒತ್ತಿ ಎನ್‍ಲಾರ್ಜ್(ಮೊಬೈಲ್ ಆದರೆ ಬೆರೆಳೆ ಸಾಕು) ಮಾಡುತ್ತಾ ಹೋದರೆ ಗುರುವಿನ ಉಪಗ್ರಹಗಳು ಗೋಚರಿಸುತ್ತವೆ ಜೊತೆಗೆ ಗುರುವಿನೊಳಗೆ ಆತು ಕುಳಿತ ಶನಿ ಹೊರಬರುತ್ತದೆ ಮತ್ತೂ ಹಿಗ್ಗಿಸಿದರೆ ಶನಿಯ ಬಳೆ ಹಾಗೂ ಉಪಗ್ರಹಗಳು ಒಂದೊಂದಾಗಿ ಗೋಚರಿಸುತ್ತವೆ. ಈ ಆಪರೇಷನ್ ಸುಲಭ. ಅಂದು ನಿಮ್ಮೂರಿನ ಆಗಸದಲ್ಲಿ ಮೋಡಗಳಿದ್ದರೆ ಈ ವಿಹಂಗಮ ಕಷ್ಠ. ಆದರೆ ಇದರ ಸುಖಾನಂದವನ್ನ ಈ ಸ್ಟೆಲ್ಲಾರಿಯಂ ವೆಬ್ ತುಂಬಿಕೊಡುವುದು. 

ಸಧ್ಯ ಈ ಸತ್ಯ ನಮ್ಮ ಅಂಡಾಂಡ ಬ್ರಹ್ಮಾಂಡ ಸ್ವಾಮಿಗಳಿಗೆ ಗೊತ್ತಾಗಿಲ್ಲ, ಅವರ ದಿವ್ಯ ದೃಷ್ಠಿಗೆ ಇದೇಕೋ ಹೊಳೆಯಲಿಲ್ಲ ಕಾಣೆ.. ಈ ಟಿವಿಗಳು ಸರ್ಕಾರ ಬೀಳಿಸುವ ಏಳಿಸುವ ಕೆಲಸದಲ್ಲಿ ಮಗ್ನವಾಗಿರುವುದರಿಂದ ಅವುಗಳ ವಕ್ರದೃಷ್ಠೀಗೂ ಬಿದ್ದಿಲ್ಲ ಇಲ್ಲದಿದ್ದರೆ ಇಷ್ಟೊತ್ತಿಗೆ ರಾದ್ಧಾಂತವಾಗಿಬಿಡುತ್ತಿತ್ತು. ಮಕರ ರಾಶಿಯವರು ಸ್ವಲ್ಪ ಧನುರಾಶಿಯವರನ್ನು ಅಟ್ಟಾಡಿಸಿ ಬಿಡುತ್ತಿದ್ದರೇನೋ. ಅಂದರೆ ಈ ಶನಿ ಮತ್ತು ಗುರು ಇರುವುದು ಈಗ ಮಕರ ರಾಶಿಯ ಮೊದಲನೆಯ ಪಾದದಲ್ಲಿ.

ಗುರು ಗ್ರಹ ಭೂಮಿಯಿಂದ  ಸುಮಾರು 80 ಕೋಟಿ ಕಿಲೋಮೀಟರ್‍ನಷು ದೂರವಿದೆ, ಗುರುವಿನಂಗಳದೊಳಗೆ ಸುಮಾರು 1300 ಭೂಮಿಯನ್ನ ತುಂಬಬಹುದು ಮತ್ತೊಮ್ಮೆ ಯಾವಗಲಾದರೂ ಗುರು-ಶನಿಗಳ ವೃತ್ತಾಂತ ಬರೆಯುವೆ. ಶನಿಯ ಬಳಿ ಹೋಗಲು ಗುರುವನ್ನು ದಾಟಿ ಇನ್ನೂ 80ಕೋಟಿ ಕಿಲೋಮೀಟರ್ ದೂರಕ್ಕೆ ಹೋಗಬೇಕು. ಅಂದರೆ ಅದು ಭೂಮಿಯಿಂದ 161 ಕೋಟಿ ಕಿಲೋಮೀಟರ್ ದೂರವಿದೆ. ಭೂಮಿಗಿಂತ ಸುಮಾರು 9ಪಟ್ಟು ದೊಡ್ಡದಾಗಿದ್ದು ಅದರಂಗಳದೊಳಗೆ ಸುಮಾರು 700 ಭೂಮಿಗಳನ್ನ ತುಂಬಬಹುದು! ಸೌರಮಂಡಲದ ಈ ಎರೆಡು ಬೃಹತ್ ಕಾಯಗಳು ನಮಗೆ ಕೇವಲ ಚುಕ್ಕಿಯಂತೆ ಕಾಣಲು ಕಾರಣ ವಿಶ್ವ ಬಹಳ ವಿಶಾಲವಾಗಿದೆ ಅದು ಅಗಣಿತ ಪ್ರಮಾಣದಲಿಲ್ಲ!.. ವಿಶಾಲ ವಿಶ್ವದಲ್ಲಿ ಎಲ್ಲವೂ ಚುಕ್ಕಿಗಳೆ ಭೂಮಿಯಂತು ಧೂಳ ಕಣಕ್ಕಿಂತಲೂ ಸೂಕ್ಮ!. ಇವೆರೆಡು ಎಷ್ಟೇ ಬೃಹತ್ತಾಗಿದ್ದು ದೈತ್ಯವಾಗಿದ್ದರೂ ಶೀತಲ ಗ್ರಹಗಳು ಸೂರ್ಯನ ಬೆಳಕೇ ತಾಕದು, ತಣ್ಣಗೆ ತನ್ನ ಪಾಡಿಗೆ ತಾನು ಸುತ್ತಕೊಂಡಿರುವ ಅನಿಲದೈತ್ಯಗಳಷ್ಟೆ. ಇಂತಹ ಗ್ರಹಗಳು ಕ್ಷುಲ್ಲಕ ಮಾನವನಿಗೆ ತೊಂದರೆ ಕೊಡುವಷ್ಠು ಯಕಶ್ಚಿತ್ತವೆ??? ಎಲ್ಲಾ ಬುರುಡೆ,.

20ನೇ ಶತಮಾನದ ನಾವೆಷ್ಟು ಭಾಗ್ಯಶಾಲಿಗಳು. ಕಳೆದ ಡಿಸೆಂಬರ್‍ನಲ್ಲಿ ಕಂಕಣಗ್ರಹಣ ನೋಡಿದೆವು, ತಾಮ್ರ ಪೂರ್ಣ ಚಂದ್ರಗ್ರಹಣ ನೋಡಿದೆವು, 2012ರಲ್ಲಿ ಧೂಮಕೇತು ನೋಡಿದೆವು ಇದೀಗ ಗುರು-ಶನಿಗಳ ಜುಗಲ್‍ಬಂಧಿ. ಡಿಸೆಂಬರ್ ನಿಂದ ಮಾರ್ಚ್‍ವರೆಗೆ ಆಗಸ ಶುಭ್ರವಾಗಿದ್ದು ತಾರಾದರ್ಶನ ಮಾಡಿಸುತ್ತದೆ ನಭದ ತುಂಬ ಮುದಿತಾರೆಗಳು, ನಡುತಾರೆಗಳು, ನವತಾರೆಗಳು  ಕೆಂಪು, ಹಳದಿ, ನೀಲಿಯಾಗಿ ಕಂಗೊಳಿಸುತ್ತವೆ, ಆಗಾಗ ಉಲ್ಕೆಗಳ ಪತನವಾಗುತ್ತಾ ಸಿಡಿಗೊಳ್ಳುತ್ತದೆ, ನಮ್ಮೆಸರಿನೊಂದಿಗೆ ಅಂಟಿಕೊಂಡು ಜೋತಿಷಿಗಳ ಭಯೋತ್ಪಾತಕ್ಕೆ ಎಡೆಯೊಡ್ಡುವ ಮೀನಾ-ಮೇಷ ದ್ವಾದಶರಾಶಿಗಳು, ಅದರೊಳಗೆ ಆಶ್ವಿನಿಯಿಂದ ರೇವತಿಯವರೆಗೆ ಇಪ್ಪತ್ತೇಳು ಜನ್ಮ ನಕ್ಷತ್ರಗಳು(ಇವು ಮಳೆಯ ನಕ್ಷತ್ರಗಳೂ ಹೌದು) ಸೂರ್ಯ-ಚಂದ್ರರಿಗಂಟಿಕೊಂಡು ಚಿತ್ತಾರ ಬರೆಯುತಿರುತ್ತವೆ ಇವೆಲ್ಲವುಗಳನ್ನ ನೋಡಿ ಆನಂದಿಸಿ… ವಿಜ್ಞಾನದ ಸರಕೊತ್ತ ಹೇಸರಗತ್ತೆಗಳಾಗದೆ ಮೂಢನಂಬಿಕೆ ತೊಲಗಿಸಿ ವಿಜ್ಞಾನದಂಗಳಕ್ಕೆ ಬನ್ನಿ ಬದುಕು ಹಸನಾಗುತ್ತದೆ.

ಕಡೆಯದಾಗಿ ಪೂರ್ವದಿಗಂತದಿಂದ ಸಂಜೆ 6.30ಕ್ಕೆ ಧನುರ್ರಾಶಿ, ಅಲ್ಲಿಂದ ಮೂವತ್ತು ಡಿಗ್ರಿಕೋನಕ್ಕೆ ಗುರು-ಶನಿ ಮಕರದೊಳಗೆ, ನಂತರ ನೆತ್ತಿಯ ಮೇಲೆ ಮೀನ ಅದರ ಸುತ್ತಮುತ್ತಲೆಲ್ಲಾ ಕುಂತಿ, ನಕುಲ, ಅರ್ಜುನ, ಸೈಂಧವ, ತ್ರಿಶಂಕು, ಯುದಿಷ್ಠಿರಗಳ ಗಿರಕಿಯಾನಂದ, ಮೀನದಿಂದ ಪಶ್ಚಿಮದತ್ತ ನೆತ್ತಿಯಲ್ಲೇ ಮೇಷರಾಶಿ ಮಂಗಳನ ಜೊತೆ, ಅದರ ಪಕ್ಕ ಪಶ್ಚಿಮಕ್ಕೊರಳುತ್ತಾ ವೃಷಭ ರಾಶಿ, ಮೂಡಣ ದಿಗಂಚಿನಂಚಿನಿಂದ ಮಿಥುನರಾಶಿಗಳು ನಿಮ್ಮನ್ನು ಸಾಲುಹಿಡಿದು ಸ್ವಾಗತಿಸುತ್ತವೆ ನಿಮ್ಮ ನಿಮ್ಮ ರಾಶಿಯನ್ನು ನೋಡಿಕೊಳ್ಳುತ್ತಾ ಮಂಗಳನನ್ನು ಮೂಸಿ ಗುರುಶನಿಗಳ ಸಮಾಗಮಕ್ಕೆ ಸಾಕ್ಷ್ಷಿಯಾಗಿ. ಆತ್ಮನಿರ್ಭರ ಭಾರತಕ್ಕೆ ವಿಜ್ಞಾನದ ಜ್ಯೋತಿ ಹಚ್ಚಿ.

ಅಹಮದ್ ಹಗರೆ, ಬಿಜಿವಿಎಸ್, ಹಾಸನ

Donate Janashakthi Media

Leave a Reply

Your email address will not be published. Required fields are marked *